ಸರಳ ಅಲಂಕಾರಕ್ಕೆ ಸಿಂಗೋನಿಯಮ್
“ಈ ಅಡಿಕೆ ಸಸಿ ನೀ ಹುಟ್ಟಿದ ವರ್ಷವೇ ನೆಟ್ಟದ್ದು, ಈ ತೋಟಕ್ಕೆ ನಿನ್ನಷ್ಟೇ ವರ್ಷವಾಯಿತು”, “ನೀ ಹುಟ್ಟಿದಾಗ ಹಾಲು ಕೊಟ್ಟಿತ್ತಲ್ಲ ಗೌರಿ ಆಕಳು, ನಿನ್ನ ಹೆರಿಗೆಗೆ ಅದರ ಕರು ಹಾಲು ಕೊಡುತ್ತೆ ನೋಡ್ತಿರು” ನನ್ನಮ್ಮ ಪದೇ ಪದೇ ನೆನಪಿಸಿಕೊಳ್ಳುವ ಸಂಗತಿಗಳಿವು. ನಾ ಹುಟ್ಟಿದಾಗ ನನ್ನ ಹೆತ್ತವಳು ಅಮ್ಮನಾಗುವ, ನನಗೆ ಮಗುವಾದಾಗ ಆಕೆ ಅಜ್ಜಿಯಾಗುವ ಮನುಷ್ಯ ಸಂಬಂಧಗಳೇನೋ ನಮ್ಮೊಡನೆಯೆ ಬೆಳೆಯುತ್ತವೆ. ಯೌವನ, ವೃದ್ಧಾಪ್ಯಗಳು ನಮ್ಮ ಶರೀರ, ಚಹರೆಯಲ್ಲಿಯೂ ಕಾಣುವುದು ಸಹಜ. ಆದರೆ ಪಶುಪಕ್ಷಿ ಮರಗಿಡಗಳ ಜೊತೆಗಿನ ಮನುಷ್ಯೇತರ ಸಂಬಂಧಗಳೂ ಬೆಳೆಯುವುದು, ಅವುಗಳ ಯೌವನ, ವೃದ್ಧಾಪ್ಯಗಳೂ ನಮ್ಮ ಜೀವನದ ಭಾಗವಾಗುವುದು ವಿಶೇಷ. ಮತ್ತಷ್ಟು ಹರವು ಹೊಂದುವುದು, ಹಿಳ್ಳುಮರಿ ಹೊರಬರುವುದು, ಹೂ ಬಿಡುವುದು, ಅಲಂಕಾರಿಕ ಸಸ್ಯಗಳೆಲ್ಲಾ ವಯಸ್ಸಾಗುವುದೆಂದರೆ ಹೀಗೆ. ಇದಕ್ಕೂ ಮೀರಿ ತನ್ನ ಒಡೆಯನ ಜೊತೆಜೊತೆಗೆ ವಯಸ್ಸಾಗುವ ಲಕ್ಷಣಗಳನ್ನು ಚಹರೆಯಲ್ಲಿ ತೋರ್ಪಡಿಸುವ ಅಲಂಕಾರಿಕ ಸಸ್ಯವೊಂದಿದ್ದರೆ ಅದು ಸಿಂಗೋನಿಯಮ್. ಮೊದಮೊದಲು ಸರಳವಾಗಿರುವ ಎಲೆಗಳು ವಯಸ್ಸಾಗುತ್ತಿದ್ದಂತೆ ಮೂರು, ಐದು ಮತ್ತಷ್ಟು ಹಾಲೆಗಳಾಗಿ ಸೀಳುವ ಸಿಂಗೋನಿಯಮ್ ಸಸ್ಯದ ಪರಿವರ್ತನೆಯ ಪಯಣವೇ ಮ್ಯಾಜಿಕಲ್. ಸಿಂಗೋನಿಯಮ್ ನಮ್ಮ ಸುತ್ತ ತೀರಾ ಸಾಮಾನ್ಯವಾಗಿ ಕಂಡುಬರುವ ಅಲಂಕಾರಿಕ ಸಸ್ಯ. ಕಚೇರಿಯ ಒಳಾಂಗಣದ ಬೆಡ್ಡಿಂಗ್ ನಲ್ಲಿ ತೆವಳುತ್ತಾ ಅಥವಾ ಪಾರ್ಕುಗಳಲ್ಲಿ ಯಾವುದೋ ಮರಕ್ಕೆ ಹಬ್ಬಿ ಹೋಗುತ್ತಿ...