ಎಲ್ಲೆಲ್ಲೂ ಸಲ್ಲುವಳು; ಬೇಸಾಯಕ್ಕೂ ನಿಲ್ಲುವಳು. ಕೃಷಿಯಲ್ಲಿ ಮಹಿಳೆ

 

ನಮ್ಮೂರಲ್ಲಿ ಇತ್ತೀಚೆಗೊಂದು ಕೃಷಿ ಕಾರ್ಯಾಗಾರ ನಡೆದಿತ್ತು. ಕೃಷಿ ಪದವೀಧರರಾಗಿ ಕೃಷಿಯಲ್ಲಿನ ಆಸಕ್ತಿಯಿಂದಾಗಿ ನಾನು ಮತ್ತು ನನ್ನ ಯಜಮಾನರು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಸುಮಾರು ಇನ್ನೂರು ಜನರ ಸಭೆ;  ಹಾಜರಿದ್ದವರೆಲ್ಲಾ ಘಟಾನುಘಟಿ ಕೃಷಿ ಪಂಡಿತರು. ಚೆನ್ನಾಗಿಯೇ ನಡೆದಿದ್ದ ಕಾರ್ಯಾಗಾರ ಇದ್ದಕ್ಕಿದ್ದಂತೆ ವಿಷಯಾಂತರವಾಗಿ ಕೃಷಿಯಲ್ಲಿ ಮಹಿಳೆಯರ ಪಾತ್ರದತ್ತ ತಿರುಗಿತು. “ನಮ್ಮನೆ ಹೆಂಗಸರು ಕೆಲಸಕ್ಕೆ ಬಂದ ಆಳುಗಳಿಗೆ ಚಾ ತಿಂಡಿ ಚಾಕರಿ ಮಾಡುವುದನ್ನು ಬಿಟ್ಟರೆ ಬೇರೇನಿಲ್ಲ” ಎಂದು ಐವತ್ತರ ಆಸುಪಾಸಿನ ‘ಪ್ರಗತಿಪರ’ ಕೃಷಿಕರೊಬ್ಬರ ಮಾತು ಕೇಳಿ ಇಡೀ ಸಭೆ ಗೊಳ್ಳೆಂದು ನಕ್ಕಿತು! ಅಷ್ಟಕ್ಕೇ ಮುಗಿಯಲಿಲ್ಲ, ಅದರಲ್ಲೊಬ್ಬರು ನನ್ನನ್ನು ಹೆಕ್ಕಿ “ತಂಗಿ, ಇದರ ಬಗ್ಗೆ ನಿನ್ನ ಅಭಿಪ್ರಾಯವೇನು?” ಎಂದು ವ್ಯಂಗ್ಯದ ನಗೆ ನಕ್ಕಾಗ ನಾನೊಮ್ಮೆ ಹಿಂಜರಿದೆ. ಇಡೀ ಸಭೆಯತ್ತ ಕಣ್ಣಾಡಿಸಿದೆ. ನನ್ನ ಬಿಟ್ಟು ಮತ್ಯಾವ ಹೆಂಗಸರೂ ಅಲ್ಲಿ ಕಾಣಲಿಲ್ಲ. ಅವರಿಗೆ ಆಸಕ್ತಿಯಿಲ್ಲವೋ, ಹೀಗೊಂದು ಕಾರ್ಯಾಗಾರದ ಮಾಹಿತಿ ತಲುಪಿಲ್ಲವೋ, ಅಥವಾ ಬೇರೆನೋ ಕೆಲಸದ ಒತ್ತಡವೋ ಗೊತ್ತಿಲ್ಲ! (ಆ ಸಭೆಯಲ್ಲಿ ಯುವಕರೂ ಇಲ್ಲದಿರುವದನ್ನೂ ಗಮನಿಸಿದ್ದು ಬೇರೆ ವಿಚಾರ).

ಹಿರಿಯರಿಂದ ಇದ್ದಕ್ಕಿದ್ದಂತೆ ಮುಖಕ್ಕೆರಗಿದ ಈ ಪ್ರಶ್ನೆ ಒಂದು ಕ್ಷಣ ನನ್ನನ್ನು ದಿಗ್ಭ್ರಮೆಗೊಳಿಸಿತು. ಇಡೀ ಸಭೆ ತುಂಬಿದ್ದ ಕುಹಕದ ನಗೆಯಿಂದ ಇರಿಸುಮುರಿಸಾಯಿತು. ಏನೋ ಹೇಳಲು ಹೊರಟೆ, ಸಾಧ್ಯವಾಗಲಿಲ್ಲ. ಹಿರಿಯರೆಂಬ ವಿಚಾರಕ್ಕೆ ನಾನಾಗ ಎದುರು ಮಾತಾಡಲಿಲ್ಲವೋ ಅಥವಾ ನಿಜಕ್ಕೂ ಕೃಷಿಯಲ್ಲಿ ಮಹಿಳೆಯರ ಪಾತ್ರ ಅಂತದ್ದೇನು ವಿಶೇಷವಿಲ್ಲ ಎಂದು ಸುಮ್ಮನಿದ್ದೇನೊ! ಎಂದಿನಂತೆ ಸಂಜೆ ಅಮ್ಮನೊಡನೆ ಪೋನ್ ನಲ್ಲಿ ಹರಟುವಾಗ, ಅಪ್ಪ ಕೆಲಸದ ಮೇಲೆ ಹೊರಹೋಗಿದ್ದರೂ ಐದೆಕರೆ ಅಡಿಕೆ ತೋಟದ ಕೊನೆ ಕೊಯ್ಲು, ಹತ್ತು ಜನ ಆಳುಗಳನ್ನು ಬೆಳಿಗ್ಗೆ ಎಂಟರಿಂದ ಸಂಜೆ ಆರರ ವರೆಗೆ ಮನೆ ಕೆಲಸದ ಜೊತೆ ಸಂಭಾಳಿಸಿದ ವೃತ್ತಾಂತವನ್ನು ಹೇಳಿದ ಮೇಲೆ ಅವತ್ತಿನ ರಾತ್ರಿ ನಿದ್ರೆಯಿಲ್ಲದೇ ನನ್ನ ತಲೆಯಲ್ಲಿ ವಿಚಾರಲಹರಿ ಸಾಗಿತ್ತು.

ಮನೆಗೆಲಸದಲ್ಲಿ ಮಹಿಳೆಯರ ಪಾತ್ರವನ್ನು ಅದು ಕೆಲಸವೇ ಅಲ್ಲ, ಕರ್ತವ್ಯ ಎಂಬರ್ಥದಲ್ಲಿ ಮೊದಲಿನಿಂದಲೂ ಲಘುವಾಗಿ ತೆಗೆದುಕೊಳ್ಳಲಾಗಿದೆ. ಎಷ್ಟೋ ಹೆಂಗಸರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಹಣೆಬರಹವೇ ಇಷ್ಟೆಂದು ಒಪ್ಪಿಕೊಂಡು ಮುಂದೆ ಸಾಗುತ್ತಿದ್ದಾರೆ. ಮನೆಗೆಲಸದಂತೆ ಗೃಹಿಣಿಯರು ‘ಟೇಕನ್ ಫಾರ್ ಗ್ರಾಂಟಡ್’ ಆಗುವ ಮತ್ತೊಂದು ಕ್ಷೇತ್ರ ಕೃಷಿ. ಗ್ರಾಮೀಣ ಪ್ರದೇಶದಲ್ಲಂತೂ ಮಹಿಳೆಯರ ಕೊಡುಗೆಗಳನ್ನು ಮುಂಚಿನಿಂದಲೂ ನಿರ್ಲಕ್ಷಿಸಲಾಗುತ್ತಿದೆ.  ಅವರ ಪ್ರಯತ್ನ ಮತ್ತು ಪರಿಣಿತಿಯನ್ನು ಕಡೆಗಣಿಸಲಾಗುತ್ತಿದೆ.

ಕೃಷಿ ಕುಟುಂಬದ ಗೃಹಿಣಿಯರ ಬಹುಪಾತ್ರಾಭಿನಯ

ಮಾನವನ ವಿಕಸನದ ಹಾದಿಯಲ್ಲಿ ವಿಶೇಷವಾದ ಮೈಲಿಗಲ್ಲು ಕೃಷಿ ಚಟುವಟಿಕೆಯ ಆರಂಭ. ಹತ್ತು ಸಾವಿರ ವರ್ಷದ ಹಿಂದೆ ಬೇಟೆಗಾರ ಜೀವನಶೈಲಿಯಿಂದ ಕೃಷಿಯೆಡೆಗೆ ಮುಖಮಾಡಿದ ಮಂಗಮಾನವ ಸಮುದಾಯದ ಈ ರೂಪಾಂತರಕ್ಕೆ ಗಂಡಸು-ಹೆಂಗಸರ ಕೊಡುಗೆ ಸಮಾನ. ಗಂಡಸರು ಕಾಡು ಕಡಿದು ಭೂಮಿ ಉಳುಮೆ ಮಾಡಿದರೆ ಹೆಂಗಸರು ಧಾನ್ಯ ಸಂಗ್ರಹ, ಬೀಜ ಬಿತ್ತುವುದು, ಕಳೆ ಕೀಳುವುದು, ಬೆಳೆಯ ಒಟ್ಟಾರೆ ಬೆಳವಣಿಗೆಯ ಮೇಲ್ವಿಚಾರಣೆ, ಬೆಳೆಯ ಸಂಸ್ಕರಣೆಯ ಉಸ್ತುವಾರಿ ವಹಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಪುರಾತತ್ವ ಅವಶೇಷಗಳು, ಕಲ್ಲಿನ ಶಾಸನಗಳು, ತಾಳೆಗರಿ ಕಡತಗಳು ಈ ವಿಷಯವನ್ನು ಇನ್ನಷ್ಟು ಸ್ಪಷ್ಟ ಪಡಿಸುತ್ತವೆ.

ಅಷ್ಟೇ ಅಲ್ಲ. ಆಗಿನ ಮಹಿಳೆಯರ ಮೂಳೆಗಳ ವಿಶ್ಲೇಷಣೆಯ ಪ್ರಕಾರ ಅವರು ಕೇವಲ ಕೌಟುಂಬಿಕ ಕೆಲಸಗಳಲ್ಲಿ ತೊಡಗಿರದೆ ನೆಲ ಅಗೆಯುವುದು, ಕುಂಟೆ ಎಳೆಯುವುದು, ಭಾರ ಹೊರುವುದು, ಧಾನ್ಯ ರುಬ್ಬುವುದು, ಶಕ್ತಿ ವ್ಯಯಿಸುವ ದೈಹಿಕ ಶ್ರಮದಲ್ಲೂ ಪಾಲುದಾರರಾಗಿದ್ದನ್ನು ಪಳೆಯುಳಿಕೆಗಳು ಹೇಳುತ್ತವೆ. ಈ ಪಾಲನ್ನು ಇಂದಿನ ಪಿತೃ ಪ್ರಧಾನ ಸಮಾಜದಲ್ಲಿ ತೇಲಿಸಿ ಬಿಡಲಾಗಿದೆ ಎಂಬುದು ಹಲವು ವಿಜ್ಞಾನಿಗಳ ಅಭಿಪ್ರಾಯ. ವರ್ತಮಾನವೆಂದರೆ ಭೂತಕಾಲದ ಪ್ರತಿಫಲನ. ಅಂದಿನಂತೆ ಕೃಷಿ ಕಾರ್ಯದಲ್ಲಿ ತೊಡಗಿದ್ದ ಹೆಣ್ಣುಮಕ್ಕಳು ಇಂದೂ ತೆರೆಮರೆಯ ಹೀರೋಗಳಂತೆ ಕಾರ್ಯಕಲಾಪವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸಮಾಜ ನಿಂತಿರುವುದು ಕುಟುಂಬದ ಮೇಲೆ. ಸಿರಿವಂತ-ಬಡವ, ಜಮೀನ್ದಾರ-ಕೂಲಿಯಾಳು, ಜೀವನಶೈಲಿಯಲ್ಲಿ ವ್ಯತ್ಯಾಸವಿದ್ದರೂ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾಲೇನೂ ಕಮ್ಮಿಯಿಲ್ಲ.

·       ಆಹಾರ ಭದ್ರತೆಯಲ್ಲಿ

ಹೆಂಗಸರು ಮೂರೂ ಹೊತ್ತು ರುಚಿ ರುಚಿ ಪೌಷ್ಟಿಕ ಅಡುಗೆ ಮಾಡಿ ಮಕ್ಕಳ, ಮನೆ ಹಿರಿಯರ ಪೋಷಣೆಯ ಜವಾಬ್ದಾರಿಯನ್ನು ಗಂಡಸರಿಗಿಂತ ಸ್ವಲ್ಪ ಹೆಚ್ಚೇ ಹೊತ್ತಿರುವುದಂತೂ ಸತ್ಯ. ನಮ್ಮಮ್ಮ ಕೂಡಾ ಎಷ್ಟೋ ವರ್ಷದಿಂದ ಬೇಸರವಿಲ್ಲದೆ ಈ ಕಾರ್ಯ ಮಾಡುತ್ತಿದ್ದಾರೆ, ಅವರಮ್ಮ ಕೂಡಾ ಮಾಡಿದ್ದರು, ನಾನೂ ಮಾಡುತ್ತಿದ್ದೇನೆ. ಆದರೆ ಈ ಕೆಲಸ ಕಾಟಾಚಾರದ್ದಲ್ಲ. ಮನೆಯಲ್ಲಿರುವ ದಿನಸಿ, ತರಕಾರಿ ದಾಸ್ತಾನು ಆಧರಿಸಿ ಪೌಷ್ಟಿಕಾಂಶ ಭರಿತ ಆಹಾರ ತಯಾರಿಸುವ ಯೋಜನೆ ಹಿಂದಿನ ದಿನವೇ ತಯಾರಾಗಿರುತ್ತದೆ. ಹೆಂಗಸರ ಹಿತ್ತಲ ತೋಟದಲ್ಲಿ ಕಂಡು ಬರುವ ತರಕಾರಿ ಅಂಗಡಿಯಲ್ಲೂ ಸಿಕ್ಕೊಲ್ಲ. ಕಳೆಯೆಂದು ದೂರುವ ಸಸ್ಯಗಳಲ್ಲೂ ಪೌಷ್ಟಿಕತೆ ಹುಡುಕುವ ವಿಜ್ಞಾನಿಗಳಿವರು. ಕೃಷಿ ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಆಹಾರ ಭದ್ರತೆಯ ಸಮಸ್ಯೆಯೂ ಒಂದು. ಏರುತ್ತಿರುವ ಜನಸಂಖ್ಯೆ, ಕುಗ್ಗುತ್ತಿರುವ ಕೃಷಿ ಭೂಮಿ ಇದಕ್ಕೆ ಇನ್ನಷ್ಟು ಸೊಪ್ಪು ಹಾಕಿದೆ. ಆಹಾರ ಭದ್ರತಾ ದೃಷ್ಟಿಯಿಂದ ಸ್ಥಳೀಯ ಸಂಸ್ಕೃತಿ, ಪ್ರಾದೇಶಿಕ ವೈವಿಧ್ಯತೆ ಮುಖ್ಯವಾದದ್ದು. ಹೆಣ್ಣು ಮಕ್ಕಳ ಪ್ರಾದೇಶಿಕ, ಸಾಂಪ್ರದಾಯಿಕ ಪಾಕಜ್ಞಾನ ಇದಕ್ಕೆ ಉತ್ತರವಾಗಬಲ್ಲದು ಅಲ್ಲವೇ?

·       ಹವಾಮಾನ ಬದಲಾವಣೆಗೆ ಜಗ್ಗದೇ

ಹೆಂಗಸರ ಬೊಕ್ಕಸದಲ್ಲಿರುವ ಪಾಕವೈವಿಧ್ಯತೆಯಿಂದ ಎಂತಹ ಬರಗಾಲದಲ್ಲೂ ಮನೆಯ ಎಲ್ಲರಿಗೂ ರುಚಿಕರ ಊಟ ಸಿಗಬಲ್ಲದು. ಬರೀ ಅಕ್ಕಿಯಿದ್ದರೆ ಗಂಜಿ, ಬೇಳೆಯಿದ್ದರೆ ಅನ್ನ ಸಾರು; ಆಹಾರ ಲಭ್ಯತೆಯನುಸಾರವಾಗಿ ಪೌಷ್ಟಿಕತೆಯನ್ನು ಭದ್ರ ಪಡಿಸುವ ಅಮ್ಮನ ಟ್ಯಾಲೆಂಟ್ ಅಪ್ಪನಿಗಿಲ್ಲ. ಕಾಲಕ್ಕೆ ತಕ್ಕ ತರಕಾರಿ ಬೆಳೆದು, ಅದರದೇ ಅಡುಗೆ ಮಾಡಿ ಉಣಬಡಿಸುವ ಜಾದೂ ಹೆಂಗಸರ  ಕೈಲಿದೆ. ಕೃಷಿ ಇಂದು ಎದುರಿಸುತ್ತಿರುವ ದುರ್ದೈವ ಹವಾಮಾನ ವೈಪರೀತ್ಯ. ಈಗಾಗಲೇ ಪ್ರಕೃತಿ ಮುನಿಸಿಕೊಂಡು ನಮ್ಮ ಕೈ ಮೀರಿದೆ. ಬಹುಶಃ ಈ ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಜಾಣ್ಮೆಯೊಂದೇ ನಮಗಿರುವ ದಾರಿ. ಇದಕ್ಕೆ ಮಹಿಳೆಯರು ಮಾರ್ಗದರ್ಶಕವಾಗಬಲ್ಲರು ಅಲ್ಲವೇ!

·       ಜೀವ ವೈವಿಧ್ಯತೆ ರಕ್ಷಿಸುತ್ತಾ

ಗಂಡಸರು ಹೆಚ್ಚಾಗಿ ವಾಣಿಜ್ಯ ಬೆಳೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಮೌಲ್ಯವಿದೆಯೆಂದು ಲೆಕ್ಕಾಚಾರ ಮಾಡಿ ಲಾಭದಾಯಕ ಬೆಳೆಗಳನ್ನು ಬೆಳೆಯಲು ಹೆಚ್ಚು ಇಷ್ಟಪಡುತ್ತಾರೆ. ಹೆಂಗಸರು ಹಾಗಲ್ಲ. ಪೌಷ್ಟಿಕತೆಗೆ ಮಹತ್ವ ಕೊಟ್ಟು, ತಮ್ಮ ಪಾಕಶಾಲೆಗೆ ಬೇಕಾದ ಬೆಳೆಗಳನ್ನು ಬೆಳೆಯುವುದೆಂದರೆ ಹೆಚ್ಚು ಒಲವು. ಅದಕ್ಕೆ ಕೈತೋಟ, ಹಿತ್ತಲು, ಔಷಧೀಯ ಸಸ್ಯಗಳ ಸಂಗ್ರಹ ಇತ್ಯಾದಿ ಚಟ. ಅಷ್ಟೆಲ್ಲಾ ಸವಲತ್ತಿಲ್ಲದ ಕೂಲಿಯವರ ಮನೆಯಾದರೂ ನೋಡಿ, ಬೇಲಿಗೊಂದು ಕುಂಬಳ ಬಳ್ಳಿ, ಮೂಲೆಯಲ್ಲೊಂದು ಕೋಳಿಗೂಡು ಇದ್ದೇ ಇರುತ್ತದೆ. ಕೃಷಿ ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ವಾಣಿಜ್ಯ ದೃಷ್ಟಿಯಿಂದ ಪಾಲಿಸುವ ಏಕಬೆಳೆ ಪದ್ಧತಿಯೂ ಒಂದು. ಕಬ್ಬಿಗೆ ಒಳ್ಳೆ ಬೆಲೆಯಿದೆಯೆಂದು ಇದ್ದಬದ್ದ ಜಾಗದ ತುಂಬೆಲ್ಲಾ ಬರೀ ಕಬ್ಬೆ ಬೆಳೆದರೆ ಬೆಲ್ಲ ತಿನ್ನುತ್ತಾ ಏಥೆನಾಲ್ ಕುಡಿಯುತ್ತಾ ಇರುವುದು ಸಾಧ್ಯವಾ!. ವಾಣಿಜ್ಯ ಬೆಳೆಗಳೊಂದಿಗೆ ಮಿಶ್ರಬೆಳೆ, ಕೃಷಿ ಉಪಕಸುಬುಗಳು, ಮನೆ ಬಳಕೆಗೆ ಬೇಕಾಗುವ ಆಹಾರ ಬೆಳೆಗಳನ್ನೂ ಬೆಳೆದುಕೊಳ್ಳುವುದು ಇಂದು ಎಲ್ಲ ಕೃಷಿಕರೂ ಪಾಲಿಸಲೇಬೇಕಾದ ಪದ್ಧತಿ. ಇದನ್ನು ಮಹಿಳೆಯರೇ ಉಪದೇಶಿಸಬೇಕೇನೋ!

·       ಹೈನು-ಜೇನು

ನಮ್ಮೂರ ಕಡೆ ಪ್ರತಿ ಮನೆಯಲ್ಲೂ ಪುಟ್ಟ ಕೊಟ್ಟಿಗೆಯಿರುತ್ತದೆ. ಬೆಳಿಗ್ಗೆ ಎದ್ದಕೂಡಲೇ ಹೆಂಗಸರು ಓಡುವುದು ಅಲ್ಲಿಗೇ. ಸಗಣಿ ಬಳಿದು, ಕೊಟ್ಟಿಗೆಯೆಲ್ಲಾ ಸ್ವಚ್ಛ ಮಾಡಿ, ಹಾಲು ಕರೆದು, ಅವುಗಳ ಮೈ ತೊಳೆದು, ಹುಲ್ಲು ಮೇವು ಕೊಟ್ಟು ನಂತರವೇ ಮನೆ ಮಂದಿಗೆ ತಿಂಡಿ. ಇಡೀ ದಿನ ಆ ಮೂಕ ಪ್ರಾಣಿಗಳ ಸೌಖ್ಯ ಕ್ಷೇಮದಲ್ಲೇ ಅವರ ದಿನ ಕಳೆಯುತ್ತದೆ. ಹಾಲು ಕೊಡದ ಬರಡು ದನವನ್ನೂ ಅವರು ಮಾರುವುದಿಲ್ಲ. ದನ ಕರು, ನಾಯಿ, ಬೆಕ್ಕು, ಕೋಳಿ, ಕುರಿ, ಜೇನು, ದೊಡ್ಡ ಪ್ರಮಾಣದಲ್ಲಿ ಇಲ್ಲವಾದರೂ ಮನೆಬಳಕೆಗಂತೂ ಮೋಸವಿಲ್ಲ.  ನಿಮ್ಮ ಸುತ್ತಮುತ್ತ ಗಮನಿಸಿದರೆ ಕಾಣುತ್ತದೆ, ಹೈನುಗಾರಿಕೆಯಂತೂ ಮಹಿಳೆಯರ ಉದ್ಯಮವೇ ಆಗಿಬಿಟ್ಟಿದೆ. ಹಾಲು ಉತ್ಪಾದನೆ ಉದ್ದಿಮೆಯಲ್ಲಿ ಯಶಸ್ಸು ಪಡೆದ ಮಹಿಳಾ ಕೃಷಿಕರು ಬೇಕಷ್ಟಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆ, ಪ್ರಾಣಿ ಸಾಕಣೆ, ಜೇನು, ಮೀನು ಕೃಷಿ ಒಳಗೊಂಡ ಸಮಗ್ರ ಕೃಷಿಗೆ ಈಗ ಎಲ್ಲಿಲ್ಲದ ಪ್ರಚಾರವಿದೆ. ಇದಕ್ಕೆ ಮಹಿಳೆಯರು ಮಾದರಿಯಾಗುವ ದಿನ ಬಂದಿದೆ!

·       ತಳಿ ಅಭಿವೃದ್ಧಿಯಲ್ಲಿ-ಬೀಜ ಸಂರಕ್ಷಣೆಯಲ್ಲಿ

ನಮ್ಮ ಕಡೆ ಹೆಂಗಸರು ನೆಂಟರ ಮನೆ, ಪ್ರವಾಸಕ್ಕೆಂದು ಎಲ್ಲೇ ಹೋದರೂ ಗಮನವೆಲ್ಲಾ ಅಲ್ಲಿನ ಹೂವು-ತರಕಾರಿಗಳ ಮೇಲೆಯೇ ಇರುತ್ತದೆ! ಹೊಸದೊಂದು ಗಿಡ ಕಂಡಿದ್ದೇ ಅದರ ‘ಕಟಿಂಗ್ಸ್’ಗಳಿಗಾಗಿ ಮುಚ್ಚು ಮರೆಯಿಲ್ಲದೆ ಕೇಳಿಯೇ ಬಿಡುತ್ತಾರೆ. ತಮ್ಮಲ್ಲಿರುವ ತರಕಾರಿ ಬೀಜವನ್ನು ಬೇರೊಂದು ಹೊಸ ತಳಿಯ ಬೀಜದ ಜೊತೆ ಬದಲಾಯಿಸಿಕೊಳ್ಳುತ್ತಾರೆ. ಅವರ ಬಳಿ ನಾಟಿ ಬೀಜಗಳ ದೊಡ್ಡ ದಾಸ್ತಾನೇ ಶೇಖರವಾಗಿರುತ್ತದೆ. ಎಲ್ಲವನ್ನೂ ಹೊತ್ತು ತಂದು ಮನೆಯ ಹಿತ್ತಲಲ್ಲಿ ಬೆಳೆದ ಮೇಲೆ ಇತರರಿಗೂ ಅದನ್ನು ಹಂಚುತ್ತಾರೆ. ವಿದೇಶದಲ್ಲಿರುವ ಸಂಬಂಧಿಕರಿಂದ ಬೀಜವನ್ನು ತರಿಸಿಕೊಳ್ಳುತ್ತಾರೆ, ತಮ್ಮದೇ ತಳಿಯೊಂದನ್ನು ಅಭಿವೃದ್ಧಿಪಡಿಸುತ್ತಾರೆ. ಕೃಷಿ ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಸ್ಥಳೀಯ ಸಸ್ಯಗಳ ವೈವಿಧ್ಯತೆಯ ನಷ್ಟವೂ ಒಂದು. ವಾಣಿಜ್ಯ ಕೃಷಿ ಸುಧಾರಿಸುತ್ತಾ ಹೆಚ್ಚೆಚ್ಚು ಇಳುವರಿ ಕೊಡುವ ಸುಧಾರಿತ ಸಂಕರಣ ತಳಿಗಳು ಲಭ್ಯವಿವಾಗುತ್ತಿದಂತೆ ದೇಶೀ ಖಜಾನೆ ಬರಿದಾಗುತ್ತಿದೆ. ಮಹಿಳೆಯರಿಗೆ ತಾವೇ ಉಳಿಸಿದ ಬೆಳೆಸಿದ ನಾಟಿ ಬೆಳೆಗಳೇ ಹೆಚ್ಚು ಆಪ್ತ. ಅಳಿವಿನಂಚಲ್ಲಿರುವ ದೇಶೀ ತಳಿಗಳನ್ನು ಉಳಿಸುವಲ್ಲಿ, ವಿದೇಶೀ ತಳಿಗಳನ್ನೂ ಸ್ವದೇಶಿಯಾಗಿಸುವಲ್ಲಿ ಅವರದ್ದು ವಿಶೇಷ ಕಾಳಜಿ. ಬೀಜ ಸಂಗ್ರಹಣೆಯಲ್ಲೂ ಎತ್ತಿದ ಕೈ. ಹಾಗಾದರೆ ತಮ್ಮ ಸಂಸಾರದ ಜೊತೆ ಸಸ್ಯ ಸಂಸಾರವನ್ನೂ ವೃದ್ಧಿಸುತ್ತಾ ಉಳಿಸಿ ಬೆಳೆಸುವ ಪರಂಪರೆಗೆ ಹೆಣ್ಣು ಮುನ್ನುಡಿಯಲ್ಲವೇ!

·       ಆಹಾರ ಮೌಲ್ಯವರ್ಧನೆಯತ್ತ

ಬೇಸಿಗೆಯ ಬಿಸಿಲಲ್ಲಿ ಹಪ್ಪಳ ಸಂಡಿಗೆ ಮಾಡಿ ಮಳೆಗಾಲದ ಕುರುಕುಲಿಗಾಗಿ ಶೇಖರಿಸಿಡುವುದು, ಮಾವಿನ ಮಿಡಿಯನ್ನು ಉಪ್ಪಲ್ಲಿ ಹಾಕಿಡುವುದು, ಅನಾನಸ್ ಹಣ್ಣು ಹೆಚ್ಚಾದಾಗ ಜ್ಯಾಮ್ ಮಾಡಿಡುವುದು, ಇವೆಲ್ಲಾ ಹೆಂಗಸರ ಸಾಮಾನ್ಯ ಚಟುವಟಿಕೆ. ಇದೇ ತತ್ವದ ಮೇಲೆ ಅಮ್ಮ ಮಾಡಿದ ತುಪ್ಪ, ಅಜ್ಜಿ ಮಾಡಿದ ಉಪ್ಪಿನಕಾಯಿ ಎಂದು ಆಹಾರ ಉತ್ಪನ್ನಗಳನ್ನು ಮಾರುವ ಎಷ್ಟು ಕಂಪನಿಗಳಿಲ್ಲ. ಹಾಗಾದರೆ ಹೆಂಗಸರ ಪ್ರತಿಯೊಂದು ರೆಸಿಪಿಯೂ ಸಂಭಾವ್ಯ ಉದ್ದಿಮೆಯಾಗುವ ಸಾಕಷ್ಟು ಅವಕಾಶವಿದೆ ಅಲ್ಲವೇ! ಕೃಷಿ ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಆಹಾರ ಬೆಳೆಯ ನಷ್ಟವೂ ಒಂದು. ಅದರಲ್ಲೂ ಬೇಗ ಹಳಸಿ ಹಾಳಾಗುವ ತೋಟಗಾರಿಕಾ ಬೆಳೆಗಳಲ್ಲಿ ಈ ಸಮಸ್ಯೆ ಅತಿ ಹೆಚ್ಚು. ಹಣ್ಣು ತರಕಾರಿಗಳ ಹೂವುಗಳ ಸಂಸ್ಕರಣೆ ಮಾಡಿ ಅವುಗಳ ಮಾರುಕಟ್ಟೆಯ ಮೌಲ್ಯವನ್ನು ಹೆಚ್ಚಿಸುವ ವಿದ್ಯೆಯಲ್ಲಿ ಮಹಿಳೆಯರು ಪಾರಂಗತರು. ಹಲವು ಮಹಿಳೆಯರು ಆಹಾರ ಉದ್ದಿಮೆ ಕ್ಷೇತ್ರದಲ್ಲಿ, ವೀಶೇಷವಾಗಿ ಗೃಹ ಉತ್ಪನ್ನಗಳ ತಯಾರಿಕೆಯಲ್ಲಿ ದಾಪುಗಾಲಿಡುತ್ತಿರುವುದು ನೆಮ್ಮದಿಯ ಸಂಗತಿ.

·       ಸಂಪನ್ಮೂಲಗಳ ಸದ್ಬಳಕೆಯತ್ತ

ವಾಣಿಜ್ಯ ಕೃಷಿ ಹೆಚ್ಚಾಗುತ್ತಿದ್ದಂತೆ ಮಣ್ಣು-ನೀರು-ಕಾಡು ಇತರೆ ನೈಸರ್ಗಿಕ ಸಂಪನ್ಮೂಲಗಳ ಅಸಮರ್ಪಕ ಬಳಕೆ ಹೆಚ್ಚುತ್ತಿದೆ. ರಾಸಾಯನಿಕಗಳ ಬಳಕೆ ಎಲ್ಲೆ ಮೀರುತ್ತಿದೆ. ಆದರೂ ಹೆಂಗಸರ ಕೈತೋಟದಲ್ಲಿ ಇನ್ನೂ ಗೋಮೂತ್ರ ಸಿಂಪಡಿಸಿ ಕೀಟಗಳನ್ನು ಓಡಿಸುವುದು, ತರಕಾರಿ ಹೋತೋಟದ ಮಣ್ಣಿಗೆ ಎರೆಹುಳು ಮಿಶ್ರಿತ ಗೊಬ್ಬರ ಸೇರಿಸುವುದು ನಡೆಯುತ್ತಲೇ ಇದೆ. ಸಾವಯವ ಪದ್ಧತಿ ಜೀವಂತವಾಗಿದೆ. ಬುಡಕಟ್ಟು ಮಹಿಳೆಯರು ಕಾಡು ಪ್ರಾಣಿ, ಕಾಡು ಸಸ್ಯಗಳಿಗೆ ತೋರುವ ಪ್ರೀತಿ, ಕಾಡನ್ನು ಪೂಜಿಸುವ ಭಾವನೆ ಎಲ್ಲರಿಗೂ ಆದರ್ಶಪ್ರಾಯ. ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿ ಸುಸ್ಥಿರವಾಗಿ ಕೃಷಿ ನಿರ್ವಹಿಸುವ ಮಹಿಳೆ ಆಧುನಿಕ ಕೃಷಿಗೊಂದು ಪಾಠವಲ್ಲವೇ.

·       ವ್ಯವಹಾರ ಹಣಕಾಸು ನಿರ್ವಹಣೆ

ಸ್ವಲ್ಪ ದೊಡ್ಡ ತೋಟವೆಂದರೆ ದಿನವೂ ನಾಲ್ಕಾರು ಆಳು ಕೆಲಸಕ್ಕೆ ಬಂದೇ ಬರುತ್ತಾರೆ. ಅವರ ಮೇಲ್ವಿಚಾರಣೆಯೆಂದರೆ ಮತ್ತೊಂದು ಆಳಿನ ಕೆಲಸವೇ. ಅವರ ಕಷ್ಟ ಸುಖಗಳನ್ನು ಆಲಿಸುತ್ತಾ, ಬೆಣ್ಣೆ ಹಚ್ಚಿ ತೋಟದ ಕೆಲಸವನ್ನೂ ಬೇಗ ಬೇಗ ಮಾಡಿಸುವ ಜಾಣ್ಮೆ ಹೆಂಗಸರಿಗಿರುತ್ತದೆ. ಆಳಿನ ಲೆಕ್ಕ, ಅವರ ಪಗಾರು, ಅವರ ಆರೋಗ್ಯದ ಬಗ್ಗೆಯೂ ಒಡತಿ ಗಮನ ಹರಿಸುತ್ತಾಳೆ. ‘ಫಾರ್ಮ್ ಮ್ಯಾನೇಜ್ಮೇಂಟ್’ ಎಂಬ ಅರ್ಥಶಾಸ್ತ್ರದ ದೊಡ್ಡ ಪದಗಳಿಗೆ ಸರಳ ವ್ಯಾಖ್ಯಾನ ಕೃಷಿ ಕುಟುಂಬದ ಗೃಹಿಣಿಯರು. ಜೊತೆಗೆ ಮನೆಯ ಆಯ-ವ್ಯಯವನ್ನು ತೂಗಿಸುವವರು ಹೆಂಗಸರು. ಯಾವುದೇ ದುಶ್ಟಟಗಳ ದಾಸರಾಗದೇ ಆದಾಯವನ್ನು ಅಗತ್ಯ ಕಾರಣಗಳಿಗೆ, ಆರೋಗ್ಯ ವಿದ್ಯಾಭ್ಯಾಸಕ್ಕೆ ಬಳಸಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವವರು ಇವರೇ.

·       ಜ್ಞಾನದ ಕೊಂಡಿಯಾಗಿ

ಮನೆ ಪಾಠಶಾಲೆಯಾದರೆ ತಾಯಿ ಮೊದಲ ಗುರು. ಚಿಕ್ಕ ವಯಸ್ಸಿನಲ್ಲಿ ಪಡೆದ ಜ್ಞಾನ ಎಂದಿಗೂ ನೆನಪಿರುವಂತದ್ದು. ಹೆಂಗಸರು ತಮಗಿರುವ ಕೃಷಿಯ ಜ್ಞಾನವನ್ನು ಮುಂದಿನ ಪೀಳಿಗೆಗೆ ಧಾರೆಯೆರುವ ಮಹತ್ತರ ಕಾರ್ಯ ಹೊತ್ತಿದ್ದಾರೆ. ಒಳ್ಳೆಯ ಸಂಸ್ಕಾರದೊಡನೆ ಕೃಷಿ ಜ್ಞಾನ ಸಿಕ್ಕರೆ ಬಹುಶಃ ಮುಂದೆಂದು ಒಂದು ಮಗು ಆಹಾರಕ್ಕೆ, ರೈತರಿಗೆ, ಕೃಷಿ ಕ್ಷೇತ್ರಕ್ಕೆ ಅಗೌರವ ತೋರಲು ಸಾಧ್ಯವೇ ಇಲ್ಲ.

·       ಯಜಮಾನನಿಗೊಂದು ನೈತಿಕ ಬೆಂಬಲವಾಗಿ

ಕೃಷಿಯಿಂದರೆ ಸುಖದ ಸುಪ್ಪತಿಗೆಯಲ್ಲ, ತಿಂಗಳು ತಿಂಗಳು ಪಗಾರು ಎಣಿಸುವ 9 ರಿಂದ 5 ಗಂಟೆಯ ನೌಕರಿಯಲ್ಲ. ವರ್ಷವಿಡೀ ದುಡಿದರೆ ಕೊನೆಯಲ್ಲೊಂದಿಷ್ಟು ಪೈಸೆ ಉಳಿಯಬಹುದು, ಉಳಿಯದೇ ಇರಬಹುದು. ಒಮ್ಮೆ ಹೆಚ್ಚು ಒಮ್ಮೆ ಕಡಿಮೆ, ಬೆಳೆ ಹಾನಿ, ಅತಿವೃಷ್ಟಿ, ಸಾಲ ಶೂಲ, ಎಲ್ಲವುದೂ ರೈತ ಸಮುದಾಯದಲ್ಲಿ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮಾನಸಿಕ ನೆಮ್ಮದಿ ಮುಖ್ಯ. ಮನೆಯಲ್ಲಿ ಹೆಂಗಸರು ಸಮಾಧಾನದಿಂದ ಹೊಂದಾಣಿಕೆ ಇಲ್ಲದಿದ್ದರೆ ಸಾಧ್ಯವೇ! ಕೃಷಿ ಕುಟುಂಬದಲ್ಲಿನ ಅನಿರೀಕ್ಷಿತ ಹಿನ್ನಡೆಗಳಲ್ಲಿ, ಸವಾಲಿನ ಸಂದರ್ಭದಲ್ಲಿ ಯಜಮಾನನಿಗೆ ಭಾವನಾತ್ಮಕ ಬೆಂಬಲ ಕೊಡುವವಳು ಗೃಹಿಣಿ.

·       ಕೂಲಿ-ನಾಲಿ

ಎಲ್ಲಾ ಗೃಹಿಣಿಯರಿಗೂ ಮನೆವಾರ್ತೆ ಜೊತೆ ಹವ್ಯಾಸಕ್ಕಾಗಿ ತೋಟ ಸುತ್ತುವ ಸೌಭಾಗ್ಯವಿಲ್ಲ. ಎಷ್ಟೋ ಗೃಹಿಣಿಯರಿಗೆ ಕೃಷಿ ಕೂಲಿ ಅನಿವಾರ್ಯ. ಗಂಡಸರಷ್ಟು ಸಂಬಳ ಸಿಕ್ಕದಿದರೂ ಅಷ್ಟೇ ಪರಿಶ್ರಮದಿಂದ ದಿನಗೂಲಿ ಮಾಡುವ ಮಹಿಳಾ ಕೃಷಿ ಕಾರ್ಮಿಕರಾಗಿದ್ದಾರೆ. ಇವತ್ತಿಗೂ ಬೀಜ ಬಿತ್ತುವುದು, ಗಿಡ ನೆಡುವುದು, ನೀರೆತ್ತುವುದು, ನೀರು ಹೊಯ್ಯುವುದು, ಕೊಯ್ಲಾದ ಬೆಳೆಯ ಪ್ರಾಥಮಿಕ ಸಂಸ್ಕರಣೆಗೆ ಗಂಡಾಳಿಗಿಂತ ಹೆಣ್ಣಾಳೇ ಚೊಲೋ ಎನ್ನುವವರಿದ್ದಾರೆ. ಹೆಂಗಸರ ನಾಜೂಕು ಕೆಲಸವೇ ಇದಕ್ಕೆ ಕಾರಣ.

·       ಕೃಷಿ ಮಾರುಕಟ್ಟೆಯಲ್ಲಿ ಮಿಂಚುವ ಮಹಿಳೆಯರು

ಕವಳ ಮೆಲ್ಲುತ್ತಾ ಟೊಮಾಟೊ ಕೆಜಿಗೆ ಹತ್ತು, ಬೀನ್ಸ್ ಕೆಜಿಗಿಪ್ಪತ್ತು ಎಂದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ನಿಲ್ಲುವ ಧಾಡಸಿ ಮಹಿಳೆಯರು ಎಷ್ಟಿಲ್ಲ. ಮೀನು ಮಾರುಕಟ್ಟೆಯಂತೂ ಮಹಿಳೆಯರದೇ ಸಾಮ್ರಾಜ್ಯ. ಮನೆ ಕೆಲಸ ಮುಗಿಸಿ ಸಂತೆಗೆ ಓಡುವ ಇವರ ಜೀವನಕ್ಕೆ ಯಾರಾದರೂ ಶರಣಾಗುತ್ತಾರೆ. ಮಹಿಳೆಯರು ಲೆಕ್ಕಾಚಾರದಲ್ಲಿ ಹಿಂದೆ, ಹಣಕಾಸು ವ್ಯವಹಾರ ಅವರಿಗಲ್ಲ ಎಂದು ಆಡಿಕೊಂಡು ನಗುವವರು ಇಂತವರನ್ನು ನೋಡಿ ತಲೆಬಾಗಬೇಕು.

ನಿರೀಕ್ಷಿಸುವುದು ಪಗಾರಲ್ಲ, ಪ್ರೀತಿ ಆದರವಷ್ಟೇ

ಮೇಲೆ ಹೇಳಿದಂತ ಗೃಹಿಣಿಯರ ಬಹುಮುಖೀ ವ್ಯಕ್ತಿತ್ವಕ್ಕೆ ನೂರಾರು ಉದಾಹರಣೆಯಿದೆ. ನಮ್ಮ ಸುತ್ತಲ ಗೃಹಿಣಿಯರ ಕೊಡುಗೆ ಅಗೋಚರವಾಗಿರಬಹುದು, ಆದರೆ ಈ ಎಲ್ಲರನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಮಹಿಳಾ ಮಣಿಗಳ ಬಳಗವಿದೆ. ಆದರೆ ಕೃಷಿ ಪ್ರಶಸ್ತಿ ಸಮಾರಂಭಗಳಲ್ಲಿ ಹತ್ತು ಜನ ಪುರುಷ ಕೃಷಿಕರ ನಡುವೆ ಎದ್ದು ಕಾಣುವ ಆ ಒಬ್ಬ ಕೃಷಿ ಮಹಿಳೆ ಇರುವುದೆಷ್ಟು ಸತ್ಯವೋ ಒಂದು ಹಳ್ಳಿಯ ಮೂಲೆಯಲ್ಲಿ ಕೂಲಿ ಮಾಡಿ ಕುಡುಕ ಗಂಡದಿಂದ ದಿನವೂ ಪೆಟ್ಟು ತಿನ್ನುವ ಬಡ ಹೆಣ್ಣು, ಅಡುಗೆ ಮನೆಯಾಚೆ ಪ್ರಪಂಚ ನೋಡದ ಸಿರಿವಂತ ಮನೆಯ ಹೆಣ್ಣು ಇದ್ದೇ ಇದ್ದಾಳೆ!

ಬಹಳಷ್ಟು ಹೆಂಗಳೆಯರಿಗೆ ಮನೆ ಕೆಲಸದ ಒತ್ತಡದ ನಡುವೆ ಬೇರೆ ಯಾವುದೇ ಚಟುವಟಿಕೆಯಲ್ಲಿ ತೊಡಗಲು ಸಮಯವೇ ಆಗುವುದಿಲ್ಲ. ಈ ಹೆಚ್ಚುವರಿ ಕೆಲಸದ ಹೊರೆಯು ಅವರ ಸಾಮರ್ಥ್ಯವನ್ನು ಕುಂಠಿಸುತ್ತದೆ. ಬಡವರ ಪಾಡಂತೂ ದೇವರೇ ಬಲ್ಲ. ಈ ಎಲ್ಲಾ ಸಂದರ್ಭಗಳು ಪರೋಕ್ಷವಾಗಿ ಆದಾಯ, ಶಿಕ್ಷಣ, ಸವಲತ್ತುಗಳನ್ನು ಮಿತಿಗೊಳಿಸುತ್ತದೆ. ಹಾಗೇ ಕೃಷಿ ಸಂಬಂಧಿತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಾಹಿತಿ ತಂತ್ರಜ್ಞಾನದ ಯುಗ ಅವರನ್ನು ಹಿಂದಿಕ್ಕಿ ಮುಂದೆ ಓಡುತ್ತಿರುತ್ತದೆ.

ಈ ಲೇಖನ ಕೇವಲ ಸದ್ದಿಲ್ಲದೆ ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಗೃಹಿಣಿಯರನ್ನು ಹೊಗಳುವುದಷ್ಟೇ ಅಲ್ಲ; ಬದಲಿಗೆ ಅಂತಹ ಮಹಿಳೆಯರಿಗೆ ಸಿಗಬೇಕಾದ ಗೌರವವನ್ನು ಪುನಃ ದೊರಕಿಸಿಕೊಡುವಲ್ಲಿ ಸಫಲವಾಗುವುದು; ಅಂದು ಸಭೆಯಲ್ಲಿ ಕುಚೋದ್ಯ ಮಾಡಿದ ಎಲ್ಲಾ ಗಣ್ಯರ ಕೃಷಿ ಸಾಧನೆ ಹಿಂದಿರುವ ಮಹಿಳೆಯರನ್ನು ಪರಿಚಯಿಸುವುದು; ಅಂದು ಆಡಲಾಗದ ಮಾತನ್ನು ಮುಂದೆ ಸಾರಿ ಸಾರಿ ಹೇಳುವ ಆತ್ಮವಿಶ್ವಾಸವನ್ನು ಭರಿಸಿಕೊಳ್ಳುವುದು. ಇಂದು ಯಾವುದೇ ನೆಂಟರ ಮನೆ, ಕುಟುಂಬ ಕಾರ್ಯಕ್ರಮದಲ್ಲಿ ಭಾಗಿಯಾದಾಗ ನೀನೇನು ‘ಜಾಬ್’ ಮಾಡ್ತಿದ್ದೀಯಾ ಎಂದು ಕೇಳಿದರೆ ನಾನು ‘ಕೃಷಿ’ ಎನ್ನುತ್ತೇನೆ ಮತ್ತು ಅವರೆಲ್ಲಾ ಆಶ್ಚರ್ಯದಲ್ಲೋ, ಗೊಂದಲದಲ್ಲೋ ಹುಬ್ಬೇರಿಸುತ್ತಾರೆ!.   

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ