ಭಾರತದ ಸ್ವಂತದ ಕ್ರಿಸ್ಪರ್ ಭತ್ತ
ಅಂತೂ
ಈ ದಿನ ಬಂತು! ನಿಮಗೆಲ್ಲಾ ನೆನಪಿದೆಯೋ ಇಲ್ಲವೋ, ಶ್ರಮಜೀವಿಯ ಇದೇ ವೇದಿಕೆಯಲ್ಲಿ ಕುಲಾಂತರಿಯ ಚರ್ಚೆ
ಮುನ್ನೆಲೆಗೆ ಬಂದಾಗ ʼಕುಲಾಂತರಿ ಹಳೆಯದು; ಬಂದಿದೆ ಅದರಪ್ಪ
ಕ್ರಿಸ್ಪರ್ʼ ಎಂಬ ಲೇಖನವೊಂದನ್ನು
ನಾನು ಬರೆದಿದ್ದೆ. ಶ್ರಮಜೀವಿ ಸಂಪಾದಕರು ನನ್ನ ಅಂಕಣಕ್ಕೆ ʼಸೀಮಾತೀತʼ ಎಂದು ಹೆಸರಿಟ್ಟು ʼಸಾಮಾನ್ಯ
ಕೃಷಿಕರಿಗಲ್ಲಾʼ ಎಂಬ ಟ್ಯಾಗ್‌ಲೈನ್ ಕೊಟ್ಟಿಬಿಟ್ಟಿದ್ದಾರೆ. ಆದರೂ ನವೆಂಬರ್ 2024ರ ಸಂಚಿಕೆಯಲ್ಲಿ
ಪ್ರಕಟವಾದ ಈ ಲೇಖನವನ್ನು ನೀವೇನಾದರೂ ಓದಿ (ಕಷ್ಟಪಟ್ಟು!?) ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದರೆ
ಈಗ ಅದನ್ನು ʼಸೆಲಬ್ರೇಟ್ʼ ಮಾಡುವ ದಿನ. ಕ್ರಿಸ್ಪರ್ ಬಂದಾಗಿದೆ! ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಣ್ಣ
ಹೆಡ್ಡಣ್ಣರೆಲ್ಲಾ ಮೈ ಮುಟ್ಟಿ ನೋಡಿಕೊಳ್ಳುವಂತ ಸಾಧನೆಯನ್ನು ಭಾರತ ಮಾಡಿ ತೋರಿಸಿದೆ. ಈ ಸಲ ಎಂದಿನಂತೆ
ಬಾಹ್ಯಾಕಾಶ, ವೈದ್ಯಕೀಯ, ರಕ್ಷಣಾ ಕ್ಷೇತ್ರದಲ್ಲಲ್ಲ, “ಕೃಷಿ ಕ್ಷೇತ್ರದಲ್ಲಿ”̤ ಅದೂ
ಸದ್ದು ಗದ್ದಲವಿಲ್ಲದೆ ಆಡಂಬರದ ವೈಭವೀಕರಣವಿಲ್ಲದೆ.
ಮೇ
ನಾಲ್ಕರಂದು ನವದೆಹಲಿಯ ʼನ್ಯಾಶನಲ್ ಅಗ್ರಿಕಲ್ಚರಲ್ ಸೈನ್ಸ್ ಕಾಂಪ್ಲೆಕ್ಸ್ʼನ ʼಭಾರತರತ್ನ
ಸಿ.ಸುಬ್ರಹ್ಮಣ್ಯಂ ಸಭಾಂಗಣʼದಲ್ಲಿ, ರೈತರು-ಯುವವಿದ್ಯಾರ್ಥಿಗಳು-ವಿಜ್ಞಾನಿಗಳ ಸಮ್ಮುಖದಲ್ಲಿ
ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ʼಡಿ.ಆರ್.ಆರ್ ರೈಸ್ 100ʼ ಅಥವಾ ʼಕಮಲಾʼ (DRR Rice 100/Kamla)
ಮತ್ತು ʼಪೂಸಾ ಡಿ.ಎಸ್.ಟಿ ರೈಸ್ 1ʼ (Pusa DST Rice 1) ಎಂಬ ಎರಡು ಹೊಸ
ಭತ್ತದ ತಳಿಗಳನ್ನು ಬಿಡುಗಡೆಗೊಳಿಸಿದರು. “ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐ.ಸಿ.ಎ.ಆರ್)
ಅಭಿವೃದ್ಧಿ ಪಡಿಸಿದ ಈ ತಳಿಗಳಲ್ಲಿ ವಿಶೇಷವೇನಿದೆ. ಈಗಾಗಲೇ ಬಿಡುಗಡೆಗೊಳಿಸಿದ ಮೂರು ಸಾವಿರ ತಳಿಗಳಲ್ಲಿ ಇದೂ ಒಂದು. ಈ
ಸರ್ಕಾರಿ ತಳಿಗಳು ಒಂದೂ ಉಪಯೋಗಕ್ಕೆ ಬಾರದ್ದು. ರೈತರ ಹೊಲ ಸೇರಿ ದರ್ಬಾರು ನಡೆಸುವುದು ಏನಿದ್ದರೂ
ಖಾಸಗಿ ಕಂಪನಿಗಳ ತಳಿಗಳೇ” ಎಂದು ಮೂಗು ಮುರಿದರೆ ಈ ಬಾರಿ ನಿಮ್ಮ ಊಹೆ ತಪ್ಪು. ಅಂದು ಲೋಕಾರ್ಪಣೆಗೊಂಡದ್ದು
ʼಕ್ರಿಸ್ಪರ್ʼ ಎಂಬ ಹೊಸ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಿದ ಅಪಾರ ಮಹತ್ವವುಳ್ಳ ʼಜೀನೋಮ್
ಎಡಿಟೆಡ್ʼ ತಳಿಗಳು.
ಜೀನೋಮ್
ಎಡಿಟಿಂಗ್ ಮತ್ತು ಕ್ರಿಸ್ಪರ್ ತಂತ್ರಜ್ಞಾನ
ಎಲ್ಲರಿಗೂ
ತಿಳಿದಿರುವಂತೆ ನಮ್ಮ ಗುಣ-ಅವಗುಣಗಳೆಲ್ಲಾ ನಮ್ಮ ಜೀವಕೋಶಗಳಲ್ಲಿರುವ ವಂಶವಾಹಿಗಳಲ್ಲಿ (ಅಥವಾ ಜೀನ್,
ಡಿ.ಎನ್.ಎ.ಗಳಲ್ಲಿ) ಬರೆದಿರಲಾಗಿರುತ್ತದೆ. ನಮ್ಮ ತಂದೆ ತಾಯಿಯಿಂದ ಪಡೆದಂತ ಈ ವಂಶವಾಹಿಗಳನ್ನು ನಮ್ಮ
ಮಕ್ಕಳಲ್ಲಿ ಧಾರೆ ಎರೆಯುವ ಮೂಲಕ ನಮ್ಮ ಗುಣ ಅವಗುಣಗಳೂ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿರುತ್ತದೆ.
ಗುಣಗಳೇನೋ ಸರಿ; ಅವಗುಣಗಳು ಯಾರಿಗೂ ಬೇಡದಂತವು. ವಂಶವಾಹಿಗಳಲ್ಲಿ ಸೂಕ್ಷ್ಮವಾಗಿ ಉಂಟುಮಾಡುವ ಬದಲಾವಣೆಯಿಂದ
ಅವಗುಣಗಳನ್ನೂ ಸದ್ಗುಣವಾಗಿ ಪರಿವರ್ತಿಸಲು ಸಾಧ್ಯ. ಪ್ರಕೃತಿ ಸಹಜವಾಗಿ ಇಂತಹ ಪರಿವರ್ತನೆ ಆಗುತ್ತಲೇ
ಇರುತ್ತದೆ. ಇದನ್ನೇ ಉತ್ಪರಿವರ್ತನೆ ಅಥವಾ ಮ್ಯುಟೇಶನ್ ಎನ್ನುವುದು. ನೈಸರ್ಗಿಕವಾಗಿ ಹೀಗೆ ಉತ್ಪಾದನೆಯಾಗುವ
ಪರಿವರ್ತನೆಯ ಸಂಖ್ಯೆ ತೀರಾ ಕಡಿಮೆ. ಹಸಿರು ಕ್ರಾಂತಿಗೆ ಕಾರಣವಾದ ಕುಬ್ಜ ತಳಿಯ ಗೋಧಿಯಲ್ಲಿ ಇದೇ ರೀತಿ
ನೈಸರ್ಗಿಕವಾಗಿ ಉತ್ಪತ್ತಿಯಾದ ವಂಶವಾಹಿಯನ್ನು (ರೆಡ್ಯುಸಡ್ ಹೈಟ್ ಅಥವಾ Rh ಜೀನ್) ಬಳಸಲಾಗಿತ್ತು.
ಆದರೆ ಇಂತದ್ದೇ ಅವಗುಣದ ಪರಿವರ್ತನೆಯಾಗಬೇಕು ಎಂದು ನಮ್ಮ ಇಚ್ಛೆಗೆ ಅನುಸಾರವಾಗಿ ರೂಪಾಂತರಿಯನ್ನು
ಪಡೆಯುವುದು ಕಷ್ಟಸಾಧ್ಯ. ನಮಗೆ ಬೇಕಾದ ವಂಶವಾಹಿಯ ತುಣುಕನ್ನೇ ತಿದ್ದುಪಡಿ ಮಾಡಿ ಬೇಕಾದ ಮಾರ್ಪಾಡನ್ನೇ
ಉಂಟು ಮಾಡಲು ಸಾಧ್ಯವೇ ಎನ್ನುವುದಕ್ಕೆ ಉತ್ತರವೇ ಜಿನೋಮ್ ಎಡಿಟಿಂಗ್ ತಂತ್ರಜ್ಞಾನಗಳು, ಮುಖ್ಯವಾಗಿ
ಕ್ರಿಸ್ಪರ್ ಎಂಬ ನಿಖರ, ನವೀನ, ಲೋಕಪ್ರಿಯ ತಂತ್ರಜ್ಞಾನ.
ಜೀನೋಮ್
ಎಡಿಟಿಂಗ್ ಎನ್ನುವುದು ಜೀವಿಗಳ ಡಿಎನ್‌ಎಗೆ ಉದ್ದೇಶಿತ ಬದಲಾವಣೆಗಳನ್ನು ಮಾಡುವ ವಿಧಾನವಾಗಿದೆ. ಇಪ್ಪತ್ತರ
ದಶಕದ ಕೊನೆಯಲ್ಲಿ ವಿಶ್ವಾದ್ಯಂತ ಇಂತಹ ವಿವಿಧ ತಂತ್ರಜ್ಞಾನಗಳ ಸಂಶೋಧನೆಯಾಯಿತು. ಸಸ್ಯಗಳ ವಂಶವಾಹಿಗೆ
ಬೇರೊಂದು ಕುಲದ ಜೀವಿಯ (ಬ್ಯಾಕ್ಟೀರಿಯಾ, ವೈರಾಣು, ಇತರೇ ಸಸ್ಯ ಜಾತಿಯ) ವಂಶವಾಹಿಯ ತುಣುಕನ್ನು ಸೇರಿಸಿದ ಕುಲಾಂತರಿಗಳು ಹುಟ್ಟಿದ್ದೂ
ಆಗಲೇ. ಬೇರೊಂದು
ಜೀವಿಯ ವಂಶವಾಹಿ ಅಳವಡಿಸಿದ್ದಕ್ಕಾಗಿ ಕುಲಾಂತರಿಗಳು ಸಾರ್ವಜನಿಕವಾಗಿ ತೀವ್ರ ವಿರೋಧ ಉಂಟಾಯಿತು. ಹಾಗಾಗಿ
ಪ್ರಯೋಗಾಲಯದಲ್ಲಿ ಯಶಸ್ವಿ ಕಂಡರೂ ಇವು ಕ್ಷೇತ್ರಕ್ಕಿಳಿಯುವುದು ಅಪರೂಪವೇ
ಆಯಿತು. ಆಧುನಿಕತೆ ಬೇಡ, ಹಳೆಯ ಸಾಂಪ್ರದಾಯಿಕ ತಳಿ ಅಭಿವೃದ್ಧಿ ಪದ್ಧತಿಯನ್ನೇ
ಅನುಸರಿಸೋಣವೆಂದರೆ ಅದು ಆಮೆಗಿಂತಲೂ ನಿಧಾನ. ಕೆಲಸ ಚುರುಕಾಗಬೇಕು, ಆದರೆ ವಿರೋಧವೂ ಇರಬಾರದು ಎನ್ನುವ
ಸವಾಲಿಗೆ ಇಂದಿನ ಜವಾಬು CRISPR (ಕ್ಲಸ್ಟರ್ಡ್ ರೆಗ್ಯುಲರ್ ಇಂಟರ್ ಸ್ಪೇಸ್ಡ್ ಪ್ಯಾಲಿಂಡ್ರೋಮಿಕ್
ಸೀಕ್ವೆನ್ಸ್). ‘ಕ್ರಿಸ್ಪರ್’ ಎಂಬ ಮುದ್ದಾದ ಹೆಸರಿನಿಂದ ಕರೆಯಲ್ಪಡುವ ಈ ತಂತ್ರಜ್ಞಾನ ತನ್ನ ಸರಳತೆ,
ನಿಖರತೆ, ಕೈಗೆಟಕುವ ಬೆಲೆಯ ಕಾರಣ ವಿಜ್ಞಾನಿಗಳ ಮೆಚ್ಚಿನ ಸಾಧನವಾಗಿದೆ.
ಕ್ರಿಸ್ಪರ್ ಏಕಕೋಶಿ
ಜೀವಿಗಳಾದ ಬ್ಯಾಕ್ಟೀರಿಯಾಗಳಲ್ಲಿ ನಡೆಯುವ ಒಂದು ನೈಸರ್ಗಿಕ ಕ್ರಿಯೆ. ತಮ್ಮನ್ನು ಕಾಡುವ ವೈರಾಣುಗಳಿಂದ
ಬಚಾವಾಗಲು ಬ್ಯಾಕ್ಟೀರಿಯಾಗಳು ಕಂಡುಕೊಂಡ ರಕ್ಷಣಾ ವ್ಯವಸ್ಥೆಯಿದು. ಬ್ಯಾಕ್ಟೀರಿಯಾ ಮೇಲೆ ವೈರಾಣುವೊಂದು
ದಾಳಿ ಮಾಡಿದೆ ಎಂದುಕೊಳ್ಳಿ. ವೈರಾಣುವಿನ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾ ಅದರ ವಂಶವಾಹಿಯ ಸಣ್ಣ
ತುಂಡನ್ನು ದಾಳಿಯ ನೆನಪಿಗಾಗಿ ತನ್ನ ವಂಶವಾಹಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ – ನೈಸರ್ಗಿಕವಾಗಿ.
ಈ ತುಂಡನ್ನೇ ವಿಜ್ಞಾನದ ಭಾಷೆಯಲ್ಲಿ ಕ್ರಿಸ್ಪರ್ ಎನ್ನಲಾಗುತ್ತದೆ. ಮುಂದೊಂದು ದಿನ ಇದೇ ವೈರಾಣು ಆಕ್ರಮಣ
ಮಾಡಿದರೆ ಈ ಸಣ್ಣ ತುಂಡಿನ ಮಾರ್ಗದರ್ಶನದಲ್ಲಿ ಅದನ್ನು ರೋಗಾಣುವೆಂದು ಬ್ಯಾಕ್ಟೀರಿಯಾ ನೆನಪಿಸಿಕೊಳ್ಳುತ್ತದೆ; ಮುಂಚಿಗಿಂತಲೂ
ಶೀಘ್ರವಾದ ಪ್ರತಿರೋಧ ಉಂಟಾಗುತ್ತದೆ. ಈಗ ಬ್ಯಾಕ್ಟೀರಿಯಾ ಕ್ರಿಸ್ಪರ್ ತುಂಡಿನ ನಕಲಿನ ಜೊತೆ Cas ಎಂಬ
ಪ್ರೋಟಿನ್ ಅನ್ನು ಛೂ ಬಿಟ್ಟು ವೈರಾಣುವಿನ ವಂಶವಾಹಿಯನ್ನಷ್ಟೇ ಗುರುತಿಸಿ ಕತ್ತರಿಸಿ ಅದನ್ನು ಸಾಯಿಸುತ್ತದೆ.
ತನಗೆ ಕೇಡು ಬಗೆದ ವೈರಾಣುವನ್ನು ಗುರುತಿಟ್ಟುಕೊಂಡು ಅದು ಹಿಂದಿರುಗಿದಾಗ ರಪ್ಪನೆ ಪ್ರತಿಕ್ರಿಯಿಸುವ
ಬ್ಯಾಕ್ಟೀರಿಯಾದ ಇರಾದೆ ಇಲ್ಲಿಗೆ ಸಂಪೂರ್ಣ! ಹೀಗೆ ಕ್ರಿಸ್ಪರ್-ಕ್ಯಾಸ್ ಎನ್ನುವುದು ಕತ್ತರಿಯಂತೆ.
ತೀರಾ ನಿಖರವಾದ, ನಿರ್ದಿಷ್ವಾದ ನೈಸರ್ಗಿಕ ವ್ಯವಸ್ಥೆ.
ಬಹಳ ವರ್ಷಗಳಿಂದ
ಬ್ಯಾಕ್ಟೀರಿಯಾಗಳ ದೇಹದ ಕ್ರಿಸ್ಪರ್ ರಕ್ಷಣಾ ವ್ಯವಸ್ಥೆಯ ಬಗ್ಗೆ ವಿಜ್ಞಾನ ಬಳಗದಲ್ಲಿ ಅರಿವಿತ್ತು.
ಸಾಕಷ್ಟು ಅಧ್ಯಯನವೂ ಆಗಿತ್ತು. ಆದರೆ ಇದರ ಮಹತ್ವ ತಿಳಿದಿದ್ದು 2012ರಲ್ಲಿ; ಜೆನ್ನಿಫರ್ ಡೋಡ್ನಾ
ಮತ್ತು ಇಮ್ಯಾನುಯಲ್ ಶಾರ್ಪೆಂಟಿಯರ್ ಎಂಬ ಮಹಿಳಾ ವಿಜ್ಞಾನಿಗಳ ಅತ್ಯದ್ಭುತ ಆವಿಷ್ಕಾರದಿಂದ. ಬ್ಯಾಕ್ಟೀರಿಯಾಗಳು
ಕ್ರಿಸ್ಪರ್ ಮಾರ್ಗದರ್ಶನದಲ್ಲಿ ವೈರಾಣುವಿನ ವಂಶವಾಹಿಯಲ್ಲಿ ನಿರ್ದಿಷ್ಟ ಜಾಗವನ್ನು ಗುರಿಯಾಗಿಸಿ ಕತ್ತರಿಸಲು
ಸಾಧ್ಯವೆಂದರೆ ಇದೇ ವ್ಯವಸ್ಥೆಯನ್ನು ಸಸ್ಯಗಳಲ್ಲಿ ಅನ್ವಯಿಸಬಹುದೇ!? ಅಂದರೆ ಸಸ್ಯದ ವಂಶವಾಹಿಯಲ್ಲಿ
ನಮಗೆ ಬೇಕಾದ ಜಾಗದಲ್ಲಿ ಕತ್ತರಿ ಪ್ರಯೋಗಿಸಿ – ವಂಶವಾಹಿಯ ತುಂಡನ್ನು ಅಳಿಸಿ ಜೋಡಿಸಬಹುದೇ! ಈ ಸಾಧ್ಯಾಸಾಧ್ಯತೆಗಳಿಂದ
ಹೊಸದೊಂದು ಜೀನ್ ಎಡಿಟಿಂಗ್ ತಂತ್ರ ಉದ್ಭವಿಸಿತ್ತು. ವಿಶ್ವಾದ್ಯಂತ ಹಲವಾರು ಸುಸಜ್ಜಿತ ಪ್ರಯೋಗಾಲಯಗಳಲ್ಲಿ
ಅಧ್ಯಯನ ಶುರುವಾಯಿತು. ಕೃಷಿ ಸಂಶೋಧನೆ ದಿಕ್ಕು ದೆಶೆ ಬದಲಿಸಿದ, ಊಹೆಗೂ
ನಿಲುಕದ ಈ ಸಂಶೋಧನೆಗೆ 2020 ರಲ್ಲಿ ನೊಬೆಲ್ ಪ್ರಶಸ್ತಿ ಈ
ಇಬ್ಬರ ಮುಡಿಗೇರಿತು.
ಡಿ.ಆರ್.ಆರ್
ರೈಸ್ 100 (ಕಮಲಾ)ʼ ಮತ್ತು ʼಪೂಸಾ ಡಿ.ಎಸ್.ಟಿ ರೈಸ್ 1ʼ
ಭಾರತದಲ್ಲಿ
ಹಲವಾರು ತಳಿಯ ಭತ್ತಗಳ ನಡುವೆ ಸಾಂಬಾ ಮಸೂರಿ (BPT5204) ಮತ್ತು ಕಾಟನ್ ದೋರಾ ಸಣ್ಣಾಲು (MTU1010) ತಳಿಗಳನ್ನು
ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದೆ.
ಧಾನ್ಯದ ಉತ್ತಮ ಗುಣಮಟ್ಟ ಮತ್ತು ಮಾರುಕಟ್ಟೆ ದರದಿಂದಾಗಿ ಇವೆರಡೂ ಜನಪ್ರಿಯ. ಆದರೆ ಇವುಗಳಲ್ಲಿ ಜೈವಿಕ
(ರೋಗ-ಕೀಟ) ಮತ್ತು ಅಜೈವಿಕ (ವಾತಾವರಣದ) ಒತ್ತಡಗಳ ವಿರೋಧ ಸಹನಶೀಲತೆಯಿಲ್ಲ. ಪರಿಣಾಮ ಇವುಗಳ ಉತ್ಪಾದನೆಯಲ್ಲಿ
ಕುಸಿತ ಕಾಣಲಾಗುತ್ತಿದೆ. ಐಸಿಎರ್‌ನ ವಿಜ್ಞಾನಿಗಳು ಇದೇ ಗುಣಗಳ ಅಭಿವೃದ್ಧಿಗಾಗಿ ಶ್ರಮಿಸಿ ಕ್ರಿಸ್ಪರ್
ತಂತ್ರಜ್ಞಾನದ ಮೂಲಕ ಹೊಸ ತಳಿಗಳನ್ನು ಹೊಂದಲು ಯಶಸ್ವಿಯಾಗಿದ್ದಾರೆ.
ಭಾರತೀಯ
ಭತ್ತ ಸಂಶೋಧನಾ ಸಂಸ್ಥೆ ಹೈದರಾಬಾದ್‌ನ ವಿಜ್ಞಾನಿಗಳು ಸಾಂಬಾ ಮಸೂರಿಯಲ್ಲಿ ಅಧಿಕ ಕಾಳುಗಳಿಗೆ ಕಾರಣವಾಗುವ
ಜಿ.ಎನ್.ಒನ್.ಎ (ಗ್ರೇನ್ ನಂಬರ್ ಜೀನ್) ಮಾರ್ಪಾಡು ಮಾಡಿ ಡಿ.ಆರ್.ಆರ್
ರೈಸ್ 100 (ಕಮಲಾ) ಸುಧಾರಿತ
ತಳಿಯನ್ನು ಪಡೆಯಲು ಯಶಸ್ವಿಯಾಗಿದ್ದಾರೆ. ಸಾಂಬಾ ಮಸೂರಿಯ ಒಂದು ತೆನೆಯಲ್ಲಿ ಮುನ್ನೂರರಿಂದ ಮುನ್ನೂರೈವತ್ತು
ಕಾಳುಗಳಿದ್ದರೆ ಕಮಲಾ ತಳಿಯಲ್ಲಿ ನಾಲ್ಕುನೂರೈವತ್ತರಿಂದ ಐದುನೂರು ಕಾಳುಗಳಿರುತ್ತವೆ. ಹೀಗೆ ಸಾಂಬಾ
ಮಸೂರಿಗಿಂತಲೂ ಕಮಲಾದ ಇಳುವರಿಯೂ 25-30% ಅಧಿಕ. ಕಮಲಾ ಸಾಂಬಾ ಮಸೂರಿಗಿಂತಲೂ ಒಂದು ತಿಂಗಳಷ್ಟು ಮುಂಚಿತವಾಗಿ
ಕೊಯ್ಲಿಗೆ ತಯಾರಾಗುವ ಕಾರಣ ನೀರು ರಸಗೊಬ್ಬರದ ಉಳಿತಾಯವಾಗುತ್ತದೆ. ಮಿಥೇನ್ ಅನಿಲದ ಹೊರಸೂಸುವಿಕೆಯೂ
ಕಡಿಮೆ. ಕಮಲಾದ ಕಾಂಡವೂ ಬಲವಾಗಿರುವ ಕಾರಣ ಮಳೆ ಗಾಳಿಗೆ ಸೋತು ಮಲಗುವ ಸಂದರ್ಭವೂ ಕಡಿಮೆ. ಸಾಂಬಾ
ಮಸೂರಿಗೂ ಕಮಲಾಕ್ಕೂ ಅಕ್ಕಿಯ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿರದೆ ಮಾರುಕಟ್ಟೆಯ ಮೌಲ್ಯ
ಎರಡಕ್ಕೂ ಒಂದೇ ಆಗಿದೆ. ಎರಡು ವರ್ಷಗಳ ಕಾಲ 20ಕ್ಕೂ ವಿವಿಧ ಸ್ಥಳಗಳಲ್ಲಿ ಕ್ಷೇತ್ರಪ್ರಯೋಗದಲ್ಲಿ
ಕಮಲಾದ ಉತ್ತಮ ಗುಣಗಳ ಪ್ರಮಾಣೀಕರಣವಾಗಿದೆ.
ಭಾರತೀಯ
ಕೃಷಿ ಸಂಶೋಧನಾ ಸಂಸ್ಥೆ (ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಐ.ಎ.ಆರ್.ಐ )
ದೆಹಲಿಯ ವಿಜ್ಞಾನಿಗಳು ಕಾಟನ್ ದೋರಾ ಸಣ್ಣಾಲು (MTU1010) ತಳಿಯಲ್ಲಿ
ಬರ ನಿರೋಧಕತೆಗೆ ಕಾರಣವಾಗುವ ಡಿ.ಎಸ್.ಟಿ (ಡ್ರಾಟ್ ಎಂಡ್ ಸಲಿನಿಟಿ ಟಾಲರೆನ್ಸ್ ಜೀನ್) ವಂಶವಾಹಿಯನ್ನು
ಮಾರ್ಪಾಡು ಮಾಡಿ ʼಪೂಸಾ ಡಿ.ಎಸ್.ಟಿ ರೈಸ್ 1ʼ ಸುಧಾರಿತ ತಳಿಯನ್ನು ಪಡೆಯಲು ಯಶಸ್ವಿಯಾಗಿದ್ದಾರೆ. ನೀರಾವರಿ ಅತಿಯಾದ
ಪ್ರದೇಶಗಳಲ್ಲಿ ಉಂಟಾಗುವ ಮಣ್ಣಿನ ಲವಣಾಂಶದ ಸಮಸ್ಯೆಗೆ ಇದು ಹೊಂದಿಕೊಳ್ಳಬಲ್ಲದು. ಈ ಹೊಸ ತಳಿ ಅಧಿಕ
ಲವಣಾಂಶದ ಸಂದರ್ಭದಲ್ಲೂ 40-45% ವರೆಗೂ ಹೆಚ್ಚಿನ ಇಳುವರಿಯನ್ನು ನೀಡಬಲ್ಲದು.
ಇಂದಿನ
ಕೃಷಿಯಲ್ಲಿ ಕ್ರಿಸ್ಪರ್‌ನ ಅಗತ್ಯತೆ
ಸಸ್ಯಗಳ ವಂಶವಾಹಿಯಲ್ಲೇನು
ಬರೆದಿದೆ, ಯಾವ ತುಂಡು ಯಾವ ಕ್ರಿಯೆಯನ್ನು ನಿರ್ದೇಶಿಸುತ್ತದೆ, ಯಾವ ತುಂಡನ್ನು ಬದಲಾಯಿಸಿದರೆ ಏನಾಗುತ್ತದೆ
ಎಂಬೆಲ್ಲಾ ಮಾಹಿತಿಗಳು ಇಂದು ಲಭ್ಯ. ಈ ಮಾಹಿತಿಯನ್ನು ಆಧರಿಸಿ ಸಸ್ಯಗಳ ವಂಶವಾಹಿಯಲ್ಲೇ ಆಚೀಚೆ ಮಾಡಿ
ಬದಲಾವಣೆ ತಂದರೆ ಕೀಟ ರೋಗ ಪ್ರತಿರೋಧಕತೆ, ಪರಿಸರದ ಒತ್ತಡಗಳಿಗೆ ಸಹಿಷ್ಣುತೆ, ನೈಸರ್ಗಿಕ ಸಂಪನ್ಮೂಲಗಳ
ಸಮರ್ಥ ಬಳಕೆ, ಕೊಯ್ಲೋತ್ತರ ತಾಳಿಕೆ-ಬಾಳಿಕೆ ಸುಧಾರಣೆ, ಪೌಷ್ಟಿಕಾಂಶ ಸಂವರ್ಧನ, ಹೆಚ್ಚಿನ ಉತ್ಪಾದಕತೆ,
ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಎಲ್ಲವೂ ಸಾಧ್ಯ. ಏನೇನೋ ಹೇರಾಫೇರಿ ಮಾಡಿ ಪ್ರಕೃತಿಯ
ವಿರೋಧವನ್ನೂ ಕಟ್ಟಿಕೊಂಡಂತಾಗಲಿಲ್ಲ. ಬದಲಿಗೆ ಕೀಟನಾಶಕಗಳ ರಾಸಾಯನಿಕಗಳ ಬಳಕೆಯನ್ನೂ ತಗ್ಗಿಸಬಹುದು.
ವಿಶೇಷವಾಗಿ ಪ್ರಸ್ತುತ ಸಮಸ್ಯೆಯಾದ ಹವಾಮಾನ ಬದಲಾವಣೆಗೆ ಇದೊಂದು ಶಕ್ತಿಶಾಲಿ ತಾಂತ್ರಿಕತೆಯಾಗಬಲ್ಲದು.
ಹವಾಮಾನ
ಬದಲಾವಣೆ ಎನ್ನುವುದು ಇಂದಿನ ನವಯುಗದಲ್ಲಿ ಉದ್ಭವವಾದ ಗಂಭೀರ ಸಮಸ್ಯೆ. ಇಂದು ಇದರ ಅರಿವು ನಮಗಿಲ್ಲದಿದ್ದರೂ
ಮುದೊಂದು ದಿನ ತೀವ್ರವಾಗಿ ಕಾಡುವ ಸಂಭವವಿದೆ ಎನ್ನುವುದು ವಿಜ್ಞಾನೀ ಬಳಗದ ಅಭಿಪ್ರಾಯ. ಹಾಗಾಗಿ ಎಷ್ಟು
ಸಾಧ್ಯವೋ ಅಷ್ಟು ಹೇಗೆ ಸಾಧ್ಯವೋ ಹಾಗೆ ತುರ್ತಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ
ಮುಖ್ಯ ಆಹಾರ ಬೆಳೆಗಳಲ್ಲಿ ಬರ, ಪ್ರವಾಹ, ಹವಾಮಾನ ಬದಲಾವಣೆಗೆ ಸಹಿಷ್ಣೂವಾಗಿರುವ ತಳಿಗಳನ್ನು ಅಭಿವೃದ್ಧಿ
ಪಡಿಸುವುದು ಇಂದಿನ ಅಗತ್ಯತೆ.
ಕ್ರಿಸ್ಪರ್‌ಗೆ
ಕಾನೂನಿನ ಸಮ್ಮತಿ
ಕ್ರಿಸ್ಪರ್ ಮೂಲಕ
ಜೀನ್ ಎಡಿಟಿಂಗ್ ವಿಧಾನದಲ್ಲಿ ಮೂರು ಮಾರ್ಗಗಳಿವೆ. ಮೊದಲನೆಯ ಮಾರ್ಗದಲ್ಲಿ ಡಿ.ಎನ್.ಎ.ಯ ಸಣ್ಣ ತುಣುಕನ್ನು
ಕತ್ತರಿಸಲಾಗುತ್ತ̧̧ದೆ, ನಂತರ ಅದನ್ನು ತಾನಾಗಿಯೇ ಮರುಜೋಡಣೆ ಹೊಂದಲು ಅನುವು ಮಾಡಿಕೊಡಲಾಗುತ್ತದೆ.
ಒಂದು ಪ್ಯಾರಾಗ್ರಾಫ್‌ನಲ್ಲಿ ತಪ್ಪಾದ ಶಬ್ಧವೊಂದನ್ನು ಅಳಿಸಿಹಾಕಿದ ಹಾಗೆ (ಇದಕ್ಕೆ ಸೈಟ್ ಡೈರೆಕ್ಟೆಡ್
ನ್ಯೂಕ್ಲಿಯೇಸ್ 1 ಅಥವಾ SDN 1 ಎನ್ನಲಾಗುತ್ತದೆ) ಎರಡನೆ ಮಾರ್ಗ ಡಿ.ಎನ್.ಎ.ಯ ನಿಶ್ಚಿತ ಭಾಗದಲ್ಲಿ
ಕತ್ತರಿಸಿ ನಾವೇ ಜೋಡಿಸುವುದು. ಒಂದು ಪ್ಯಾರಾಗ್ರಾಫ್‌ನಲ್ಲಿ ತಪ್ಪಾದ ಶಬ್ಧವೊಂದನ್ನು ಸರಿ ಮಾಡಿ ಬರೆದ
ಹಾಗೆ (ಇದು SDN 2). ಮೂರನೆಯ ಮಾರ್ಗದಲ್ಲಿ ಬೇರೊಂದು ಜೀವಿಯ ಡಿ.ಎನ್ಎ.ಯ ತುಣುಕನ್ನು ಕತ್ತರಿಸಿ ಅಂಟಿಸಲಾಗುತ್ತದೆ.
ಒಂದು ಪ್ಯಾರಾಗ್ರಾಫ್‌ನಲ್ಲಿ ಬೇರೊಂದು ಪುಸ್ತಕದ ಸಾಲನ್ನು ಸೇರಿಸಿದಂತೆ (ಇದು SDN 3). ಚರ್ಚೆ
ವಿಚರ್ಚೆಗಳ ನಂತರ SDN 1 ಮತ್ತು 2 ಮಾರ್ಗವನ್ನು ಸುರಕ್ಷಿತವೆಂದು,
ಹಾಗೆ ಪಡೆದ ತಳಿಗಳು ಕುಲಾಂತರಿಗಳಲ್ಲವೆಂದು ನಿರ್ಧರಿಸಿ ಹಲವಾರು ರಾಷ್ಟ್ರಗಳು ಒಪ್ಪಿಕೊಂಡಿವೆ. ಭಾರತವೂ
ಮಾರ್ಚ್ 2022ರಲ್ಲಿ ಇವೆರಡು ಮಾರ್ಗಗಳು ತಳಿ ಸಂವರ್ಧನೆಯ ಸಾಂಪ್ರದಾಯಿಕ ವಿಧಾನಗಳಂತೆ ಹಾನಿಯಿಲ್ಲವೆಂದು
ಒಪ್ಪಿಕೊಂಡಿತು.
ಭಾರತ
ಅಗ್ರಗಣ್ಯ
ಕೃಷಿಯಲ್ಲಿ ಕ್ರಿಸ್ಪರ್
ತಂತ್ರಜ್ಞಾನದ ಸಾಮರ್ಥ್ಯವನ್ನು
ಈಗಾಗಲೇ ವಿವಿಧ ದೇಶಗಳಲ್ಲಿ ವಿವಿಧ ಬೆಳೆಗಳಲ್ಲಿ ಅರಿತುಕೊಳ್ಳಲಾಗುತ್ತಿದೆ. ರೈತರಿಗೆ ಮತ್ತು ಗ್ರಾಹಕರಿಗೆ ಇವುಗಳ ಪ್ರಯೋಜನವೂ ಅರಿಕೆಯಾಗುತ್ತಿದೆ.
ಹಲವಾರು ದೇಶಗಳು ಕ್ರಿಸ್ಪರ್ ಎಡಿಟೆಡ್ ಬೆಳೆಗಳನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಯುತ್ತಿವೆ. ಕ್ರಿಸ್ಪರ್
ಎಡಿಟಿಂಗ್ ಮೂಲಕ ಅಭಿವೃದ್ಧಿ ಪಡಿಸಿದ ಬ್ರೌನಿಂಗ್ (ಕೊಯ್ಲಿನ ನಂತರ ಕಂದಾಗುವಿಕೆ) ಕ್ರಿಯೆ ತಡೆಯಬಲ್ಲ
ಅಣಬೆಗಳನ್ನು, ಕಡಿಮೆ ಟ್ರಾನ್ಸ್ ಫ್ಯಾಟ್ ಹೊಂದಿರುವ ಸೋಯಾವನ್ನು ಅಮೇರಿಕಾ (ಯು.ಎಸ್.ಎ.) ಬೆಳೆಯುತ್ತಿದೆ.
ಪೌಷ್ಟಿಕಾಂಶ ವರ್ಧಿತ, ರಕ್ತದೊತ್ತಡ ನಿಯಂತ್ರಿಸಬಲ್ಲ
ಗುಣಗಳುಳ್ಳ ಕ್ರಿಸ್ಪರ್ ಎಡಿಟೆಡ್ ಟ್ಯೋಮ್ಯಾಟೋಗಳನ್ನು ಜಪಾನ್ ಬೆಳೆಯುತ್ತಿದೆ. ಇನ್ನುಳಿದಂತೆ ಅರ್ಜೆಂಟೀನಾ,
ಬ್ರೆಜಿಲ್, ಕೆನಡಾ, ಆಸ್ಟ್ರೇಲಿಯಾ, ಇಸ್ರೇಲ್ ಮುಂತಾದ ದೇಶಗಳು ಜೋಳ, ಗೋಧಿ, ಬಾರ್ಲಿ, ಬಟಾಟೆ, ಕಬ್ಬು
ಮುಂತಾದ ಬೆಳೆಗಳ ಸಂಶೋಧನೆಯಲ್ಲಿ ತೊಡಗಿವೆ. ಕುಲಾಂತರಿಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದ ಯುರೋಪ್
ಕ್ರಿಸ್ಪರ್ ಎಡಿಟಿಂಗ್ ಬಗ್ಗೆ ಮೃದು ಧೋರಣೆ ತೋರಿದೆ.
ಅಮೇರಿಕಾ ಜಪಾನ್‌ನ
ನಂತರ ಕ್ರಿಸ್ಪರ್ ತಳಿಗಳನ್ನು ಅಪ್ಪಿದ ಮೂರನೇ ರಾಷ್ಟ್ರ ಭಾರತ! ಅದರಲ್ಲೂ ಆಹಾರ ಬೆಳೆಯಾದ ಭತ್ತದಲ್ಲಿ
ಈ ಹಾದಿ ತುಳಿದ ಪ್ರಥಮ ದೇಶ ನಮ್ಮದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ ಈ ಸಂಶೋಧನೆ
ಸರ್ಕಾರಿ ಸಂಸ್ಥೆಗಳದ್ದು. ಪರಿಣಾಮ ಖಾಸಗಿ ಕಂಪನಿಗಳು ರೈತರನ್ನು ದೋಚಬಹುದೆಂಬ ಭಯವಿಲ್ಲಿಲ್ಲ. ಮುಂದೆರಡು
ದಶಕದಲ್ಲಿ ಭಾರತದ ಈ ದಿಟ್ಟ ಹೆಜ್ಜೆ ಕೃಷಿ ಸಂಶೋಧನೆಗೊಂದು ಹೊಸ ದಿಕ್ಕನ್ನು ನೀಡಬಲ್ಲದು.
ಕೇಂದ್ರ ಸರ್ಕಾರವೂ ಐನೂರು ಕೋಟಿಗಳ ಬಜೆಟ್ ಮೀಸಲಿರಿಸಿ ಕ್ರಿಸ್ಪರ್ ಸಂಶೋಧನೆಗೆ ಮತ್ತಷ್ಟು
ಉತ್ತೇಜನ ನೀಡಿದೆ. ಹಸಿರು ಕ್ರಾಂತಿ 2.0 ಗೆ
ಈ ಸಂಶೋಧನೆ ನಾದಿ ಹಾಡಲಿದೆಯೆಂದರೆ ತಪ್ಪಿಲ್ಲ.
ಇಸ್ರೋ
ಜೊತೆ ನಮ್ಮತ್ತಲೂ ಗಮನ ಹರಿಸ್ರೋ
ಇಸ್ರೋ
ಒಂದು ರಾಕೆಟ್ ಉಡಾವಣೆ ಮಾಡಿತೆಂದರೆ ಮಾಧ್ಯಮದ ತುಂಬಾ ಅದೇ ಸುದ್ದಿ. ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿಅಜ್ಜಂದಿರ
ವರೆಗೆ ಎಲ್ಲರೂ ಬಾಯ್ ಮೇಲೆ ಬೆರಳಿಟ್ಟು ಇಡೀ ಲೈವ್ ಕಾರ್ಯಕ್ರಮವನ್ನು ವೀಕ್ಷಿಸಿ ಚಪ್ಪಾಳೆ ಹೊಡೆದು
ಸಂಭ್ರಮ ಪಡುತ್ತಾರೆ. ಭಾರತೀಯರಾಗಿದ್ದಕ್ಕೂ ಸಾರ್ಥಕ ಎಂದು ಹೆಮ್ಮೆ ಪಡುತ್ತಾರೆ. ಆದರೆ ಅಂತಹುದೇ ಸಾಧನೆಗಳ
ಸಾಲಿಗೇ ಸೇರುವ ಈ ಘಳಿಗೆಯನ್ನು ಯಾವುದೇ ಮಾಧ್ಯಮವೂ ಬಿತ್ತರಿಸಿರಲಿಕ್ಕಿಲ್ಲ. ಅಷ್ಟಕ್ಕೂ ಇದೇನು ʼಟಿ.ಆರ್.ಪಿʼ ಯೋಗ್ಯವಲ್ಲ
ಬಿಡಿ. ಅದೂ ಇಂಡೋ-ಪಾಕ್‌ನ ಟೆನ್ಶನ್ ನಡುವೆ ಇದಕ್ಕೆ ಕಿಮ್ಮತ್ತೂ ಇಲ್ಲ.
ಆದರೆ
ಐ.ಸಿ.ಎ.ಆರ್‌ನ ಈ ಸಾಧನೆ ಕೃಷಿ ಇತಿಹಾಸದಲ್ಲಿ ಹೊಸ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದು.
ಕ್ರಿಸ್ಪರ್‌ನಂತ ನೂತನ ತಂತ್ರಜ್ಞಾನವನ್ನು ಕಲಿಯಬೇಕೆಂದರೆ ವಿದೇಶಕ್ಕೆ ಹೋಗಬೇಕು, ಕಲಿತು ಇಲ್ಲಿ ಬಂದು
ಪ್ರಯೋಗ ಮಾಡಬೇಕೆಂದರೆ ಅಂತಹುದೇ ಆಧುನಿಕ ವ್ಯವಸ್ಥೆ ಬೇಕು, ಪ್ರಯೋಗಕ್ಕೆ ಬೇಕಾದ ಒಳಸುರಿಗಳಿಗೆ ಲಕ್ಷ
ಲಕ್ಷ ಹಣ ತೆತ್ತಬೇಕು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರವನ್ನು, ಅದರಲ್ಲೂ ಕೃಷಿ ಕ್ಷೇತ್ರವನ್ನು ತುಸು
ಕೆಳದರ್ಜೆಯಲ್ಲಿ ನೋಡುವ ಭಾರತದಂತ ದೇಶಕ್ಕೆ ಇದು ಕನಸೇ ಸರಿ. ಎಷ್ಟೋ ಕಷ್ಟಗಳನ್ನು ದಾಟಿ ಕನಸು ಸಾಕಾರವಾಗಿದೆ.
ಇದೇನು ಸಣ್ಣ ಗೆಲುವಲ್ಲ.
ಈ
ಗೆಲವು ಸದ್ದು ಮಾಡುತ್ತದೆ. ಸ್ವಲ್ಪ ಕಾಯಬೇಕು. ಈಗಾಗಲೇ ವಿರೋಧ ಪಕ್ಷದವರಾದ ಪರಿಸರವಾದಿಗಳು, ಹೋರಾಟಗಾರರು ಹಸಿರುಶಾಲು ಕೊಡವಿಯಾಗಿದೆ.
ಇವರೇ ಈ ಸುದ್ದಿಯನ್ನು ಮುನ್ನೆಲೆಗೆ ತರುವವರಿದ್ದಾರೆ. ಎಂದಿನಂತೆ ಕೆಲವು ಸಂಘಟನೆಗಳಿಂದ ಸಾರ್ವಜನಿಕ
ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಕಾದು ನೋಡಬೇಕಷ್ಟೇ.
Comments
Post a Comment