ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು
ನಮ್ಮ
ಮನೆ, ತೋಟವಿರುವುದು ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯಲ್ಲಿ. ಮಲೆನಾಡಿನ ಬಹುತೇಕ ಹಳ್ಳಿಗಳಂತೆ ನಮ್ಮೂರಲ್ಲಿ
ನಮ್ಮದು ಬಿಟ್ಟರೆ ಇರುವುದು ಇನ್ನೆರಡೇ ಮನೆ; ತೋಟದ ಗಡಿಯಾಚೆ ಕಾಡು. ನಮ್ಮ ತೋಟಕ್ಕೆ ಭೇಟಿಮಾಡುವ ಎಲ್ಲರೂ
ಕೇಳುವ ಮೊದಲ ಪ್ರಶ್ನೆ ಇಲ್ಲಿ ಪ್ರಾಣಿಗಳ ಕಾಟವಿಲ್ಲವೇ? ಯಾಕಿಲ್ಲ; ಮಂಗ, ಮಿಕ, ನವಿಲು, ಹಂದಿ, ಕೆಂಪಳಿಲು,
ಮುಳ್ಳಂದಿ ಮತ್ತೂ ಬೇಕೇ… “ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ!” ಎನ್ನುವುದು
ನಮ್ಮ ಉತ್ತರ. ಮಳೆಗಾಲಕ್ಕೆ ನೆಂಟರ ಮನೆಗೆ ಹೋದರೆ ಸಾಕು, ಸುದ್ದಿ ಶುರುವಾಗುವುದೇ “ಭಾವಾ, ನಿಮ್ಮಲ್ಲಿ
ಕೊಳೆ ಹೆಂಗಿದ್ದೋ” ಅನ್ನುವಲ್ಲಿ. ಮಲೆನಾಡ ಮಳೆ ಕೊಳೆಗೆ ಅಂಜಿ ತೋಟ ಮಾಡುವುದು ಬಿಟ್ಟೀರೇ ಆದೀತೆ!
ತೋಟದಲ್ಲಿ ಲುಕ್ಸಾನಾದಾಗೆಲ್ಲಾ “ಅಂಥಾ ನೀರಿಲ್ಲದ ಮರುಭೂಮಿಯಲ್ಲಿ, ಮುಗಿಲು ತೂತಾದಂತೆ ಮಳೆ ಸುರಿವ
ಈಶಾನ್ಯ ಭಾರತದಲ್ಲಿ, ಕೊರೆವ ತಂಪಿನ ಹಿಮಾಲಯದ ತಪ್ಪಲಲ್ಲಿ ಬೆಳೆ ಬೆಳೆಯುವರಂತೆ, ನಮ್ಮದೆಂತ” ಎಂದು
ಎಷ್ಟೋ ಬಾರಿ ನಮಗೆ ನಾವೇ ಸಮಧಾನ ಹೇಳಿಕೊಂಡಿದ್ದಿದೆ. ವಾತಾವರಣದ ಗಂಭೀರ ಪರಿಸ್ಥಿತಿಯಲ್ಲೂ ಬೆಳೆ ಬೆಳೆವ
ಕೆಲವು ಪ್ರದೇಶದ ಜನರ ಕೃಷಿ ನೋಡುವಂತದ್ದು, ಕನಿಷ್ಟ ಓದಿ ತಿಳಿವಂತದ್ದು. ನವಯುಗದ ರೈತರು ತಾಂತ್ರಿಕವಾಗಿಯೂ,
ಮಾನಸಿಕವಾಗಿಯೂ ಇದರಿಂದ ಕಲಿಯುವುದೂ ಬಹಳಷ್ಟಿದೆ. ಪ್ರಾಕೃತಿಕ ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ
ಕೈಗೊಳ್ಳುತ್ತಿರುವ ಅಂತಹ ಕೆಲವು ಕೃಷಿ ಪ್ರಯೋಗಗಳ ಬಗೆಗೊಂದು ಮಾಹಿತಿಭರಿತ ಆಸಕ್ತಿಕರ ಲೇಖನ ಈ ಸಂಚಿಕೆಯಲ್ಲಿ...
ನಿಮ್ಮ
ಪ್ರಕಾರ ರೈತರ ದೊಡ್ಡ ಆಸ್ತಿ ಯಾವುದು? ಜಮೀನು, ನೆಲ, ಜಲ, ಆಳು? ನನ್ನ ಪ್ರಕಾರ ಇದೆಲ್ಲದಕ್ಕಿಂತ ಹೆಚ್ಚಾಗಿ
ʼಅಸಾಧ್ಯವೆನ್ನುವುದು ಯಾವುದೂ ಇಲ್ಲʼ ಎಂಬ ಮನೋಬಲ. ಗುಡ್ಡ ಬೆಟ್ಟ ಕಣಿವೆ ಜವುಗು ಎಂತಹ ಜಾಗದಲ್ಲಿಯೂ
ಕೃಷಿ ಮಾಡಿರುವ ನಮ್ಮ ನಿಮ್ಮೆಲ್ಲರ ನಡುವೆ ಇರುವ ಸಾಧಕರೇ ಇದಕ್ಕೆ ಸಾಕ್ಷಿ. ಅನಿವಾರ್ಯತೆ ಉಂಟಾದಾಗ
ಚಮತ್ಕಾರಗಳೇ ಜರುಗಬಲ್ಲವಂತೆ. ಹೀಗೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಮಾನವ ರೂಪಿಸಿದ
ಕೆಲ ವಿಶೇಷ ಕೃಷಿ ಪ್ರಕರಣಗಳು ಇಲ್ಲಿವೆ… ನವೀನ ಕಲ್ಪನೆಗಳೊಂದಿಗೆ ಕಾರ್ಯತತ್ಪರರಾದಾಗ ಎಂತಹ ಸವಾಲನ್ನೂ
ಎದುರಿಸಬಹುದೆಂಬ ಪ್ರೇರಣೆ ಇಲ್ಲಿದೆ…
ನೆಮೋʼಸ್
ಗಾರ್ಡನ್ ಇಟಲಿಯ ಕಡಲೊಡಲ ಕೃಷಿ
ಪಿಜ್ಜಾ,
ಪಾಸ್ತಾ, ರೋಮನ್ ಕೊಲೋಸಿಯಮ್ ಇತಿಹಾಸ ಪ್ರಸಿದ್ಧ ಇಟಲಿ ಬಗ್ಗೆ ಗೊತ್ತಿರದವರು ಯಾರು. ಸೀಮಿತ
ಕೃಷಿಯೋಗ್ಯ ಭೂಮಿ, ನೀರಿನ
ಕೊರತೆ ಮತ್ತು ಅನಿರೀಕ್ಷಿತ ಹವಾಮಾನವನ್ನು ಹೊಂದಿರುವ ಇಟಲಿಯಲ್ಲಿ ಸಾಂಪ್ರದಾಯಿಕ ಕೃಷಿಯೊಂದು
ದೊಡ್ಡ ಸವಾಲು. ಅದಕ್ಕಾಗಿ 2012ರಿಂದಲೇ ಓಶಿಯನ್ ರೀಫ್ ಎಂಬ ಸಂಸ್ಥೆ ಇಟಲಿಯ ಲಿಗ್ಹ್ಯುರಿಯನ್ ಕಡಲ ಒಡಲೊಳಗೆ
ಕೃಷಿಗೆ ಮುಂದಾಗಿದೆ. ಸಾಗರದ ಮೇಲ್ಮೈಯಿಂದ ಇಪ್ಪತ್ತು ಅಡಿ ಕೆಳಗೆ ಲಂಗರು ಹಾಕಿ ಜೀವಗೋಳಗಳನ್ನು
(ಬಯೋಸ್ಪಿಯರ್) ಸ್ಥಾಪಿಸಲಾಗಿದ್ದು, ಗಾಳಿ ತುಂಬಿದ ಈ ಪಾರದರ್ಶಕ ಗುಮ್ಮಟಗಳ ಒಳಗೆ ಅತ್ಯಾಧುನಿಕ
ಹೈಡ್ರೋಪೋನಿಕ್ ವ್ಯವಸ್ಥೆಯಡಿಯಲ್ಲಿ ಸ್ಪಿನಾಚ್, ಲೆಟ್ಯುಸ್,
ಸೊಪ್ಪು ತರಕಾರಿ, ಸ್ಟ್ರಾಬೆರಿ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ನೆಮೋಸ್ ಗಾರ್ಡನ್‌ನಲ್ಲಿರುವ ಜೀವಗೋಳಗಳನ್ನು ಗಾಜು ಮತ್ತು ಪ್ಲಾಸ್ಟಿಕ್
ಮಿಶ್ರಿತ ಪಾರದರ್ಶಕ ವಸ್ತುವಿನಿಂದ ನಿರ್ಮಿಸಲಾಗಿದೆ. ಪ್ರತಿಯೊಂದು ಗುಮ್ಮಟಗಳು ಗಾಳಿಯಿಂದ ತುಂಬಿದ
ಪಾತ್ರೆಗಳಂತೆ ಕಾರ್ಯನಿರ್ವಹಿಸುತ್ತವೆ. ಒಳಗೆ ಗಾಳಿಯ ಒತ್ತಡವು ಹೆಚ್ಚಾಗಿರುವುದರಿಂದ ನೀರು ಒಳಗೆ
ಪ್ರವೇಶಿಸುವುದಿಲ್ಲವಾಗಿ ಇದರಿಂದ ಸಮುದ್ರದ ವಾತಾವರಣದಿಂದ ಪ್ರತ್ಯೇಕವಾದ ಒಂದು ಸೂಕ್ಷ್ಮ ಪರಿಸರ ಸೃಷ್ಟಿಯಾಗಿರುತ್ತದೆ.
ಹಗಲಿನಲ್ಲಿ ನೀರನ್ನು ಭೇದಿಸಿ ಒಳಗೆ ತಲುಪುವ ಸೂರ್ಯನ ಬೆಳಕು ಗುಮ್ಮಟವನ್ನು ಬೆಚ್ಚಗಾಗಿಸುತ್ತದೆ.
ಈ ಶಾಖಕ್ಕೆ ಭಾಷ್ಪೀಕರಣವಾದ ನೀರು ಸಸ್ಯಗಳಿಗೆ ನೀರಿನ ಮೂಲವಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಸಮುದ್ರದ
ತಾಪಮಾನವು ಹಗಲಿನ ತಾಪಮಾನಕ್ಕಿಂತ ಸ್ಥಿರವಾಗಿರುವುದರಿಂದ, ಗುಮ್ಮಟದ ಒಳಗೆ ತಾಪಮಾನದಲ್ಲಿ ದೊಡ್ಡ ವ್ಯತ್ಯಾಸವೇನೂ
ಆಗದು. ಹೀಗೆ ಸಸ್ಯಗಳಿಗೆ ನಿರಂತರವಾಗಿ ಬೆಳೆಯಲು ಸೂಕ್ತವಾದ ವಾತಾವರಣ ಲಭ್ಯ. ಸಂಪೂರ್ಣ ವ್ಯವಸ್ಥೆಯು
ಸಮುದ್ರ ತಳದಲ್ಲಿರುವುದರಿಂದ, ಭೂಮಿಯ ಮೇಲೆ ರೋಗಕೀಟಗಳ ಸಮಸ್ಯೆ ಇಲ್ಲಿಲ್ಲ. ಸದ್ಯಕ್ಕೆ ಒಂಭತ್ತರ ಸಂಖ್ಯೆಯಲ್ಲಿರುವ
ಸೈನ್ಸ್ ಫಿಕ್ಷನ್ ಸಿನಿಮಾಗಳ ಸೀನ್‌ನಂತೆ ಕಾಣುವ ಈ ಬಯೋಸ್ಪಿಯರ್‌ಗಳು ಮುಂದೆ ಕರಾವಳಿಗಳಲ್ಲಿ ಸಹಜ
ದೃಶ್ಯಗಳಾಗಬಹುದೇನೋ!
ಸ್ಕೈ
ಗ್ರೀನ್ಸ್ ಸಿಂಗಾಪೂರದ ವರ್ಟಿಕಲ್ ಕೃಷಿ
ಮಾದರೀ ನಗರಗಳು, ವಿಶ್ವ ದರ್ಜೆಯ ನಾಗರಿಕ ಸೌಕರ್ಯಗಳು, ಶಿಸ್ತು ಸ್ವಚ್ಛತೆಗೆ
ಹೆಸರಾದ ಸಿಂಗಾಪೂರ್ ನಗರ ಪ್ರದೇಶಗಳಲ್ಲಿ ಹಸಿರನ್ನು ಜೋಡಿಸುವ ಪ್ರಯತ್ನಗಳಲ್ಲಿ
ಸದಾ ನಿರಂತರ. ಎಲ್ಲೆಲ್ಲೂ ಸಮುದ್ರವೇ ಕಾಣುವ ದೇಶದಲ್ಲೀಗ 40% ಭೂಭಾಗ ಹಸಿರಿನಿಂದ
ಆವೃತ್ತವಾಗಿದ್ದೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿಗೆ ಸ್ಥಳಾವಕಾಶವೇ ಇಲ್ಲದೆ ಸೀಫುಡ್ಸ್‌ಗಳ
ಮೇಲೆ ನಿರ್ಭರವಾಗಿದ್ದ ದೇಶ ಈಗ ತರಕಾರಿ ಕೃಷಿಯಲ್ಲೂ ಸಾಧನೆಗೈಯ್ಯುತ್ತಿರುವ ಹಿಂದಿರುವ ಕಾರಣ ಸ್ಕೈ ಗ್ರೀನ್ಸ್‌ನ ಲಂಬ ಕೃಷಿಯ ಸಾಹಸ.
ಸ್ಕೈ ಗ್ರೀನ್ಸ್‌ನ ವರ್ಟಿಕಲ್ ಫಾರ್ಮಿಂಗ್ ವಿನ್ಯಾಸವು ʼA-ಫ್ರೇಮ್ʼ
ಆಕಾರದಲ್ಲಿರುವ ಅಲ್ಯೂಮಿನಿಯಂ ಗೋಪುರವಾಗಿದ್ದು,
ಬಹು-ಅಂತಸ್ತಿನ
ಈ ಗೋಪುರದಲ್ಲಿ ಟ್ರೇಗಳನ್ನಿರಿಸಿ ಬೆಳೆಗಳನ್ನು ಬೆಳೆಯಲಾಗುತ್ತದೆ. ನಿಧಾನವಾಗಿ ತಿರುಗುಬಲ್ಲ ಈ ಗೋಪುರ
ಟ್ರೇಗಳಲ್ಲಿರುವ ಎಲ್ಲಾ ಸಸ್ಯಗಳಿಗೂ ಸೂರ್ಯನ ಬೆಳಕು, ನೀರು ಮತ್ತು ಪೋಷಕಾಂಶಗಳು ಸಮನಾಗಿ ದೊರೆಯುವಂತೆ
ಅನುಕೂಲ ಮಾಡುತ್ತದೆ. ಹೈಡ್ರಾಲಿಕ್ ವ್ಯವಸ್ಥೆಯಡಿ ದಿನದ 8 ಗಂಟೆಗಳ ಕಾಲ ಗೋಪುರವನ್ನು ತಿರುಗಿಸಲು
ಕೇವಲ ಅರ್ಧ ಲೀಟರ್ ನೀರು ಸಾಕು ಎನ್ನುವುದು ಕಂಪನಿಯ ಭರವಸೆ. ಸಾಂಪ್ರದಾಯಿಕ ಕೃಷಿಗೆ ಹೋಲಿಸಿದರೆ ವರ್ಟಿಕಲ್
ಕೃಷಿ ವಿಧಾನದಿಂದ, ಪ್ರತಿ ಚದರ ಮೀಟರ್‌ಗೆ ಹೆಚ್ಚು ಪಟ್ಟು ಬೆಳೆಗಳನ್ನು ಉತ್ಪಾದಿಸಬಹುದು ಎನ್ನುವುದು
ತಿಳಿದಿದ್ದೇ. ಮುಂದೆಲ್ಲಾ ಸಣ್ಣ ಹಿಡುವಳಿದಾರರಲ್ಲಿ, ನಗರವಾಸಿಗಳಲ್ಲಿ ಈ ವಿಧಾನ ಹೆಚ್ಚು ಪ್ರಚಲಿತವಾಗಬಹುದೇನೋ.
ರಾಟರ್‌ಡ್ಯಾಮ್‌ನ ತೇಲುವ ಕೊಟ್ಟಿಗೆ
ಹಾಲಿನ ಉತ್ಪಾದನೆಯಲ್ಲಿ
ಮುಂಚೂಣಿಯಲ್ಲಿರುವ, ರುಚಿಕರ ಚೀಸ್ ತಯಾರಿಸುವ ಡಚ್ಚರ ನೆಲ ನೆದರಲ್ಯಾಂಡ್ಸ್‌ನ ರಾಟರ್‌ಡ್ಯಾಮ್‌ನಲ್ಲಿರುವ
ಫ್ಲೋಟಿಂಗ್ ಫಾರ್ಮ್ ನಿಸ್ಸಂಶಯವಾಗಿ ಜಗತ್ತಿನ ಕೃಷಿಯಲ್ಲಿನ ಅತ್ಯಂತ ಅದ್ಭುತ ಮತ್ತು ನವೀನ ಯೋಜನೆಗಳಲ್ಲಿ
ಒಂದು. 2012ರಲ್ಲಿ ಅಮೇರಿಕಾದಲ್ಲಿ ಸಂಭವಿಸಿದ ಸ್ಯಾಂಡಿ ಚಂಡಮಾರುತದ ದುರಂತದಲ್ಲಿ ಆಹಾರ ಸರಬರಾಜು
ಸರಪಳಿ ಏರುಪೇರಾಗಿದ್ದನ್ನು ಕಂಡ ವಾಸ್ತುಶಿಲ್ಪಿ ಪೀಟರ್ ವ್ಯಾನ್ ವಿಂಗರ್ಡೆನ್ ಅವರು ಈ ತೇಲುವ ಫಾರ್ಮ್‌ನ
ಕಲ್ಪನೆಯನ್ನು ಹುಟ್ಟುಹಾಕಿದರಂತೆ. ಪ್ರಪಂಚದಲ್ಲೇ
ಸಮುದ್ರ ಮಟ್ಟಕ್ಕಿಂತ ಕೆಳಗಿರುವ ದೇಶ ನೆದರ್ಲ್ಯಾಂಡ್ಸ್ ಹವಾಮಾನ ಬದಲಾವಣೆ ಮತ್ತು ಸಮುದ್ರ ಮಟ್ಟ ಏರಿಕೆಯ
ಕಾರಣದಿಂದ ಕೃಷಿ ಭೂಮಿ ಕಡಿತವಾಗುತ್ತಿರುವ ಸವಾಲನ್ನು ಎದುರಿಸುತ್ತಿದೆ. ನಗರದಲ್ಲಿ ಪ್ರವಾಹ ಉಂಟಾದರೂ
ಸಹ ಆಹಾರ ಉತ್ಪಾದನೆಗೆ ಅಡ್ಡಿಯಾಗಬಾರದು ಎಂಬ ಗುರಿ ಈ ಫಾರ್ಮ್‌ನದ್ದು.
ರಾಟರ್‌ಡ್ಯಾಮ್‌ನ ಬಂದರಿನಲ್ಲಿ ನೆಲೆಯಾಗಿರುವ ತೇಲುವ ಡೈರಿ ಮೂರು ಅಂತಸ್ತಿನ
ರಚನೆಯಾಗಿದ್ದು, ನೌಕಾದಳದ ಹಳೆಯ ಬಾರ್ಜ್‌ನ ಮೇಲೆ ನಿರ್ಮಿತವಾಗಿದೆ. ಸಮುದ್ರ ಮಟ್ಟಕ್ಕಿಂತ ಕೆಳಗಿರುವ
ಮೊದಲ ಅಂತಸ್ತಿನಲ್ಲಿ ಹಾಲಿನ ಸಂಸ್ಕರಣೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆ ಮಾಡಲಾಗುತ್ತದೆ. ಈ ಭಾಗವು
ವೀಕ್ಷಕರಿಗೂ ತೆರೆದಿರುವುದರಿಂದ, ಗ್ರಾಹಕರು ಹಾಲಿನ ಸಂಸ್ಕರಣೆ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಬಹುದು.
ಸಮುದ್ರದ ಮಟ್ಟದ ಮೇಲಿರುವ ಎರಡನೇ ಅಂದರೇ ಮಧ್ಯದ ಅಂತಸ್ತಿನಲ್ಲಿ 40 ಹಸುಗಳ ಕೊಟ್ಟಿಗೆಯಿದೆ. ಇಡೀ
ಪ್ರದೇಶವನ್ನು ಹಸಿರು ಮತ್ತು ಪ್ರಶಾಂತವಾಗಿ ವಿನ್ಯಾಸಗೊಳಿಸಲಾಗಿದೆ. ಮೂರನೇ ಅಂತಸ್ತು ಅಂದರೆ ಛಾವಣಿಯಲ್ಲಿ
ಫಾರ್ಮ್‌ಗೆ ಬೇಕಾದ ವಿದ್ಯುತ್ ಅನ್ನು ಉತ್ಪಾದಿಸುವ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಮಳೆ ನೀರನ್ನು
ಸಂಗ್ರಹಿಸಿ, ಶುದ್ಧೀಕರಿಸಿ ಹಸುಗಳಿಗೆ ಕುಡಿಯಲು ಮತ್ತು ಫಾರ್ಮ್‌ನ ಇತರ ಉಪಯೋಗಗಳಿಗೆ ಬಳಸುವ ವ್ಯವಸ್ಥೆಯೂ
ಇದೆ.
ಫಾರ್ಮ್‌ನಲ್ಲಿರುವ ಹಸುಗಳಿಗೆ ಸುತ್ತಲ ಗಾಲ್ಫ್ ಮೈದಾನದಿಂದ ಸಂಗ್ರಹಿಸಿದ
ಹುಲ್ಲು, ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸಿದ ಆಹಾರ ತ್ಯಾಜ್ಯವೇ ಮೇವು. ಫಾರ್ಮ್‌ನಲ್ಲಿ ಉತ್ಪಾದನೆಯಾಗುವ
ಹಾಲು ಮತ್ತು ಮೊಸರನ್ನು ನೇರವಾಗಿ ಸ್ಥಳೀಯ ಮಾರುಕಟ್ಟೆಗಳಿಗೆ ವಿತರಿಸಲಾಗುತ್ತದೆ. ಹಸುಗಳ ಸಗಣಿಯನ್ನು
ಸ್ವಯಂಚಾಲಿತ ಯಂತ್ರಗಳ ಮೂಲಕ ಸಂಗ್ರಹಿಸಿ, ಸಂಸ್ಕರಿಸಿ ನಗರದ ಉದ್ಯಾನವನಗಳಿಗೆ ಗೊಬ್ಬರವಾಗಿ ನೀಡಲಾಗುತ್ತದೆ.
ಸಂಪೂರ್ಣವಾಗಿ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವ ಈ ಫಾರ್ಮ್‌ಅನ್ನು ಸುಸ್ಥಿರ ಯೋಜನೆಯೆಂದೂ ಪರಿಗಣಿಸಲಾಗಿದೆ.
ಸಹರಾ ಮರುಭೂಮಿಯ ಹೈಡ್ರೋಪೋನಿಕ್ ಮೇವಿನ ಘಟಕಗಳು
ಟಿಂಡೂಫ್,
ಅಲ್ಜೀರಿಯಾ ಸಹಾರಾ ಮರುಭೂಮಿಯ ಹೃದಯಭಾಗ; ಜಗತ್ತಿನ ಅತ್ಯಂತ ಕಠಿಣ, ಶುಷ್ಕ ಪರಿಸರಗಳಲ್ಲಿ ಒಂದಾದ ಈ
ಪ್ರದೇಶದಲ್ಲಿ ಸಹ್ರಾವಿ ನಿರಾಶ್ರಿತರ ಶಿಬಿರಗಳು ನೆಲೆಯಾಗಿವೆ. ಮೂಲತಃ ಅಲೆಮಾರಿಗಳಾಗಿರುವ ಸಹ್ರಾವಿಗಳಿಗೆ
ಒಂಟೆ, ಮೇಕೆ ಮತ್ತು ಕುರಿಗಳಂತಹ ಜಾನುವಾರುಗಳ ಮಾಂಸವೇ ಪ್ರಧಾನ ಆಹಾರ. ಜಾನುವಾರುಗಳ ಆಹಾರಕ್ಕಾಗಿ ಯಾವುದೇ ಹಸಿರು ಹುಲ್ಲು ಅಥವಾ
ಮೇವು ಲಭ್ಯವಿಲ್ಲದ ಕಾರಣ ಅವುಗಳನ್ನು ಸಾಕಲು ಹೆಣಗಾಡುತ್ತಿರುವ ಈ ನಿರಾಶ್ರಿತರಿಗೆ ಸದ್ಯ ವಿಶ್ವ ಆಹಾರ
ಸಂಸ್ಥೆಯಂತ ಜಾಗತಿಕ ಒಕ್ಕೂಟಗಳು ಒದಗಿಸುತ್ತಿರವ ದಿನಸಿಯೇ ಹೊಟ್ಟೆ ತುಂಬುತ್ತಿದೆ. ತುಂಬಾ ಯೋಚಿಸಿ
ಸಮಸ್ಯೆಯ ಬುಡಕ್ಕೇ ಕೈಹಾಕಿರುವ ಸಂಸ್ಥೆಗಳು ಈಗ ಹೈಡ್ರೋಪೋನಿಕ್ ತಂತ್ರಜ್ಞಾನವನ್ನು ಬಳಸಿ ಜಾನುವಾರುಗಳಿಗೆ
ಸ್ಥಳೀಯವಾಗಿ ತಾಜಾ ಮೇವನ್ನು ಉತ್ಪಾದಿಸುವ ಯೋಜನೆಗೆ ಇಳಿದಿದ್ದು ಮರುಭೂಮಿಯ ಮಧ್ಯದಲ್ಲಿ ಹಸಿರು ಕ್ರಾಂತಿಯನ್ನು
ಸೃಷ್ಟಿಸಿದೆ.
ಇಲ್ಲಿನ
ಮೇವಿನ ಘಟಕದ ಟೆಂಟ್‌ಗಳ ಒಳಗೆ ಬಹು-ಪದರದ ಟ್ರೇಗಳನ್ನು ಹೊಂದಿರುವ ಸ್ಟೀಲ್ ರಾಕ್‌ಗಳನ್ನು ಜೋಡಿಸಲಾಗಿದೆ.
ಈ ಟ್ರೇಗಳಲ್ಲಿ ಬಾರ್ಲಿ ಬೀಜಗಳನ್ನು ಹರಡಲಾಗುತ್ತದೆ. ನಳಿಕೆಗಳ ಮೂಲಕ ಪೋಷಕಾಂಶಯುಕ್ತ ನೀರನ್ನು ನಿರಂತರವಾಗಿ
ಬೀಜಗಳ ಮೇಲೆ ಸಿಂಪಡಿಸಲಾಗುತ್ತದೆ. ಈ ನೀರು ವ್ಯರ್ಥವಾಗದೆ ಕೆಳಗಿನ ಟ್ರೇಗಳಿಗೆ ಹರಿದು ಹೋಗುತ್ತದೆ
ಮತ್ತು ನಂತರ ಸಂಗ್ರಹಗೊಂಡು ಮತ್ತೆ ಬಳಸಲ್ಪಡುತ್ತದೆ. ಕೇವಲ 7 ರಿಂದ 8 ದಿನಗಳಲ್ಲಿ ಹಸಿರು ಮೇವಾಗಿ
ಬೆಳೆವ ಬಾರ್ಲಿ ಜಾನುವಾರುಗಳಿಗೆ ತಾಜಾ ಆಹಾರವಾಗುವ ಪರಿಣಾಮ ಸಹ್ರಾವಿಗಳ ಎದುರು ಹೊಸ ಭರವಸೆಯೊಂದು
ಹುಟ್ಟಿದೆ. ನಮ್ಮಲ್ಲೂ ಕೆಲ ವರ್ಷಗಳ ಹಿಂದೆ ಈ ತರಹದ ಹೈಡ್ರೋಪೋನಿಕ್ ಮೇವಿನ ಘಟಕಗಳು ಪರಿಚಯಗೊಂಡು
ಅಂತಹ ಅನಿವಾರ್ಯವೇನೂ ಅಲ್ಲವೆಂದು ಮಾಯವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಕ್ಯಾನರಿ ದ್ವೀಪದ
ಬೂದಿಯ ಕೃಷಿ
ʼಲಾನ್ಜಾರೋಟ್ʼ - ಸ್ಪೇನ್‌ನ ಕ್ಯಾನ್ನರಿ ದ್ವೀಪಗಳ ಒಂದು ಭಾಗ. 18ನೇ ಶತಮಾನದಲ್ಲಿ
ಇಲ್ಲಿನ ʼಟಿಮಾನ್‌ಫಯಾʼ ಜ್ವಾಲಾಮುಖಿ ಸ್ಫೋಟಗೊಂಡಾಗ, ದ್ವೀಪದ ಬಹುಪಾಲು ಪ್ರದೇಶವು ದಪ್ಪವಾದ, ಕರೀ
ಜ್ವಾಲಾಮುಖಿ ಬೂದಿಯಿಂದ ಮುಚ್ಚಲ್ಪಟ್ಟಿತು. ಬಿರುಗಾಳಿ ಬೀಸುವ, ಕೃಷಿ ಮಾಡುವುದು
ಅಸಾಧ್ಯವೆಂದು ಭಾವಿಸಲಾಗಿದ್ದ ಬಂಜರು ಬೂದಿಯ ಈ ಭೂಮಿಯಲ್ಲಿ ಸ್ಥಳೀಯರ ಕೈಚಳಕದಿಂದ ಇಂದು ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ; ವೈನ್ ತಯಾರಿಸಲಾಗುತ್ತದೆ.
ಪ್ರಕೃತಿಯ ನೈಸರ್ಗಿಕ ಗುಣಗಳನ್ನು ಬಳಸಿಕೊಂಡು ಬೆಳೆದ ದ್ರಾಕ್ಷಿಯ ವೈನ್‌ಗೆ ಅಂತರರಾಷ್ಟ್ರೀಯ
ಮಟ್ಟದಲ್ಲಿ ಹುಚ್ಚು ಬೇಡಿಕೆ.
ಸೂಕ್ಷ್ಮವಾಗಿ ಗಮನಿಸಿದರೆ ಜ್ವಾಲಾಮುಖಿ ಬೂದಿ ಒಂದು ನೈಸರ್ಗಿಕ ಹನಿ ನೀರಾವರಿ
ವ್ಯವಸ್ಥೆ ಇದ್ದಂತೆ. ರಾತ್ರಿ ಹೊತ್ತಿನಲ್ಲಿ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಂಡು, ಅದನ್ನು
ಹಗಲಿನಲ್ಲಿ ನಿಧಾನವಾಗಿ ಬಳ್ಳಿಗಳಿಗೆ ಬಿಡುಗಡೆ ಮಾಡುವ ಸಾಮರ್ಥ್ಯ ಈ ಬೂದಿ ಗುಪ್ಪೆಗಿದೆ. ಜೊತೆಗೆ
ಬೂದಿಯ ಕಪ್ಪು ಛಾಯೆಗೆ ಹಗಲಿನಲ್ಲಿ ಸೂರ್ಯನ ಶಾಖವನ್ನು ಹೀರಿಕೊಂಡು ರಾತ್ರಿ ಹೊತ್ತಿನಲ್ಲಿ ಬಳ್ಳಿಯ
ಬೇರುಗಳಿಗೆ ಬಿಡುಗಡೆ ಮಾಡುವ ಗುಣವಿದೆ. ಇದರಿಂದ ಬಳ್ಳಿಯ ಬುಡದಲ್ಲಿ ತಾಪಮಾನ ಏರುಪೇರಾಗದೆ ಸಮತೋಲನದಲ್ಲಿರುತ್ತದೆ.
ಇದನ್ನರಿತ ಸ್ಥಳೀಯರು ಬೂದಿಯಲ್ಲಿ
ಆಳವಾದ, ಶಂಕುವಿನಾಕಾರದ ಹೊಂಡಗಳನ್ನು ಅಗೆದು ಪ್ರತಿ ಹೊಂಡದಲ್ಲಿ ಒಂದು ದ್ರಾಕ್ಷಿ ಬಳ್ಳಿಯನ್ನು ನೆಟ್ಟರು. ಬಳ್ಳಿಗಳನ್ನು ಗಾಳಿಯಿಂದ
ರಕ್ಷಿಸಲು ಹೊಂಡದ ಸುತ್ತಲೂ ಅರ್ಧ ಚಂದ್ರಾಕೃತಿಯಲ್ಲಿ ಸಣ್ಣ ಕಲ್ಲಿನ ಗೋಡೆಯನ್ನು ನಿರ್ಮಿಸಿದರು. ದ್ರಾಕ್ಷಿ ಬೆಳೆಯಲು ಸಫಲರಾದರು.
ಅಂಟಾರ್ಟಿಕಾದ
EDEN ISS ಹಸಿರುಮನೆಗಳು
ವರ್ಷಪೂರ್ತಿ ಶೂನ್ಯಕ್ಕಿಂತ ಕಡಿಮೆ
ತಾಪಮಾನ, ಪರ್ಮಾಫ್ರಾಸ್ಟ್(ಶಾಶ್ವತವಾದ
ಮಂಜುಗಡ್ಡೆ) ಹೊಂದಿರುವ, ತಿಂಗಳುಗಳ ಕಾಲ ಸೂರ್ಯನ ಬೆಳಕೇ ಕಾಣದ, ಮಣ್ಣೆ ಇಲ್ಲದ ಅಂಟಾರ್ಟಿಕಾದಲ್ಲೂ
ಉಷ್ಣವಲಯದ ತರಕಾರಿಗಳಾದ ಟೊಮ್ಯಟೋ, ಮೆಣಸು, ಸೌತೆಕಾಯಿ ಬೆಳೆದು ಸಾಧ್ಯವೆಂದರೆ ಆಶ್ಚರ್ಯವೆನಿಸುತ್ತದೆ. ಬಾಹ್ಯಾಕಾಶದಲ್ಲಿ ಆಹಾರ ಬೆಳೆಗಳನ್ನು ಬೆಳೆಯುವ
ಸಂಭವನೀಯತೆಯನ್ನು ಪರೀಕ್ಷಿಸಲು ನಿರ್ಮಿಸಲಾದ ಕಂಟೇನರ್ ಗಾತ್ರದ ಈ ಚಲಿಸುವ ಆಶ್ರಯಗಳನ್ನು ಭವಿಷ್ಯದ
ಹಸಿರುಮನೆಗಳೆಂದೇ ಬಿಂಬಿಸಲಾಗಿದೆ. ಹೈಡ್ರೋಪೋನಿಕ್ಸ್ ಜೊತೆಗೆ ಕೃತಕ ಬೆಳಕಿನ, ನೀರಿನ ಮರುಬಳಕೆ ಮಾಡಬಲ್ಲ
ಕ್ಲೋಸ್ಡ್-ಲೂಪ್ ವ್ಯವಸ್ಥೆ ಮುಂದೊಂದು ದಿನ ಕ್ರಾಂತಿಯನ್ನೇ ಹುಟ್ಟುಹಾಕಬಲ್ಲದು.
ಅಂಟಾರ್ಟಿಕಾದಷ್ಟೇ ಸವಾಲಾದ ನಾರ್ವೆ,
ಫಿನ್‌ಲ್ಯಾಂಡ್‌ನಂತಹ ದೇಶಗಳು ಭೂಶಾಖದ ಶಕ್ತಿ (ಜಿಯೋಥರ್ಮಲ್ ಎನರ್ಜಿ) ಮತ್ತು ಕೃತಕ ಬೆಳಕನ್ನು
ಬಳಸಿಕೊಂಡು ಹಸಿರುಮನೆಗಳಲ್ಲಿ ಬೆಳೆಗಳನ್ನು ಬೆಳೆಯುತ್ತವೆ.
ಪ್ರವಾಸೀ ಪ್ರಪಂಚಕ್ಕೆ ಹತ್ತಿರವಾದ ಭಾರತದ ಅತಿ ಎತ್ತರದ ಮತ್ತು ಅತ್ಯಂತ ಶೀತ ಪ್ರದೇಶಗಳಲ್ಲಿ
ಒಂದಾದ ಲೇಹ್ ಲಡಾಕ್‌ನಲ್ಲೂ ಇಂತಹ ಮುಂದುವರಿದ ದೇಶಗಳ ಸಹಯೋಗದಲ್ಲಿ ಸೌರಚಾಲಿತ ಹಸಿರುಮನೆಗಳನ್ನು
ಸ್ಥಾಪಿಸಲಾಗಿದೆ. ಚಳಿಗಾಲದ ತಾಪಮಾನ
-30°C ಗಿಂತ
ಕಡಿಮೆಗೂ ಜಾರುವ, ವರ್ಷದ ಆರು ತಿಂಗಳು ಹಿಮದಲ್ಲೇ ಉಳ್ಳಾಡುವ ಈ ಪ್ರದೇಶಗಳಲ್ಲಿ ಕೃಷಿ ದೊಡ್ಡ
ಸವಾಲಾಗಿದ್ದು ಇಲ್ಲಿನ ಗಡಿ ರಕ್ಷಣಾಪಡೆಗಳಿಗೆ ತಾಜಾ ಆಹಾರವೆಂದರೆ ಕನಸೇ ಸೈ. ಇಂತಹ ಸವಾಲುಗಳನ್ನು
ಎದುರಿಸಿ ಸಣ್ಣ ಪ್ರಮಾಣದಲ್ಲಾದರೂ ಸರಿ ತಾಜಾ ತರಕಾರಿಗಳನ್ನು ಬೆಳೆಯಲು
ಶಕ್ಯವಾಗಿಸಲು ʼಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆʼ (DRDO) ಸ್ಥಳೀಯ ಹವಾಮಾನಕ್ಕೆ
ಹೊಂದಿಕೆಯಾಗುವ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ.
Picture:
https://www.drdo.gov.in/drdo/sites/default/files/inline-files/SolarHeatedShelters.pdf
ಮುಂದುವರೆಯುವುದು..
Comments
Post a Comment