ಕೃಷಿಯಲ್ಲಿ ಸಸ್ಯ ಪ್ರಚೋದಕಗಳು ಭಾಗ 2
ಕೃಷಿಯಲ್ಲಿ ನಿಖರತೆ
ಮತ್ತು ಸುಸ್ಥಿರತೆ ಪ್ರಚಲಿತವಾಗುತ್ತಿರುವ ಇಂದಿನ ದಿನಮಾನದಲ್ಲಿ ಸಸ್ಯ ಪ್ರಚೋದಕಗಳ ಬಳಕೆ ಮುನ್ನೆಲೆಗೆ
ಬರುತ್ತಿದೆ. ಹವಾಮಾನ ಬದಲಾವಣೆಯ ಒತ್ತಡದ ನಡುವೆ ಇಳುವರಿಯನ್ನು ಸುಧಾರಿಸುವಲ್ಲಿ, ಕೀಟನಾಶಕಗಳು, ಕಳೆನಾಶಕಗಳು,
ರಸಗೊಬ್ಬರಗಳ ಅವಲಂಬನೆಯನ್ನು ಕಡಿತಗೊಳಿಸುವ ಸಂಭಾವ್ಯತೆಯಿಂದ ಸಸ್ಯ ಹಾರ್ಮೋನುಗಳ ಬಳಕೆ ಬಗ್ಗೆ ಜಾಗೃತಿಯಾಗುತ್ತಿದೆ.
ಕಳೆದ ಸಂಚಿಕೆಯಲ್ಲಿ ಸಸ್ಯಪ್ರಚೋದಕಗಳ ಪರಿಚಯದ ಜೊತೆಗೆ ಆಕ್ಸಿನ್, ಸೈಟೋಕೈನಿನ್ ಬಗ್ಗೆ ವಿವರವಾಗಿ
ಹೇಳಲಾಗಿತ್ತು; ಮುಂದುವರೆದ ಭಾಗವಾಗಿ ಜಿಬ್ಬರೆಲಿನ್, ಅಬ್ಸಿಸ್ಸಿಕ್ ಆ್ಯಸಿಡ್, ಎಥೆಲಿನ್ ಗಳ ಬಗ್ಗೆ
ತಿಳಿಯೋಣ.
ಜಿಬ್ಬರೆಲಿನ್: ಸಸ್ಯದ ಬೆಳವಣಿಗೆಯ ವಿವಿಧ ಹಂತದಲ್ಲಿ
ಪರಿಣಾಮ ಬೀರುವ ಇನ್ನೊಂದು ಪ್ರಚೋದಕ ಜಿಬ್ಬರೆಲಿನ್. 1900ರ ಸಮಯ, ಏಷಿಯಾದ ಭತ್ತದ ಬೆಳೆ ವಿಚಿತ್ರ
ರೋಗವೊಂದಕ್ಕೆ ತುತ್ತಾಗಿತ್ತು. ಗಿಡ ಪೇಲವವಾಗಿ ಬಳ್ಳೆ ಬಳ್ಳೆಯಾಗಿ ಹುಚ್ಚುಚ್ಚಾಗಿ ಬೆಳೆಯುವ ಲಕ್ಷಣ
ತೋರುವ ಈ ರೋಗಕ್ಕೆ ‘ಜಿಬ್ಬರೆಲ್ಲಾ ಫ್ಯುಜಿಕೋರೈ’ ಎಂಬ ಶಿಲೀಂಧ್ರ ಕಾರಣ ಎನ್ನುವುದನ್ನು ಕಂಡುಹಿಡಿಯಲಾಯಿತು.
ನಂತರ ಜಿಬ್ಬರೆಲ್ಲಾ ಶಿಲೀಂಧ್ರದಿಂದ ಈ ಲಕ್ಷಣಗಳಿಗೆ ಕಾರಣವಾದ ಪ್ರಚೋದಕ ಅಂಶವನ್ನು ಪ್ರತ್ಯೇಕಿಸಿ
‘ಜಿಬ್ಬರೆಲಿನ್’ ಎಂದು ನಾಮಕರಣ ಮಾಡಲಾಯಿತು.
ಸಸ್ಯಗಳಲ್ಲಿ ಜಿಬ್ಬರೆಲಿನ್ ತಯಾರಾಗುವುದೆಲ್ಲಿ?:
ಜಿಬ್ಬರೆಲಿನ್ ಗಳು ಮುಖ್ಯವಾಗಿ ತಯಾರಾಗುವುದು ಎಳೆಯ ಎಲೆ, ಚಿಗುರು ಮತ್ತು ಎಳೆಯ ಕಾಂಡದಲ್ಲಿ; ಬೀಜ,
ಬೇರಿನಲ್ಲೂ ಉತ್ಪಾದನೆಯಾಗುತ್ತದೆ.
ಜಿಬ್ಬರೆಲಿನ್ ತಯಾರಾಗುವುದು ಹೇಗೆ?: ‘ಜೆರನೈಲ್
ಡೈ ಫಾಸ್ಫೇಟ್’ ಎಂಬ ಮೂಲ ವಸ್ತುವಿನಿಂದ ಸರಣಿ ರಾಸಾಯನಿಕ ಕ್ರಿಯೆಗಳ ಮೂಲಕ ಜಿಬ್ಬರೆಲಿನ್ ತಯಾರಾಗುತ್ತದೆ;
ಅಗತ್ಯವಾದಾಗ ಜಿಬ್ಬರೆಲಿಕ್ ಆ್ಯಸಿಡ್ ಎಂಬ ಸಕ್ರಿಯ ರಾಸಾಯನಿಕವಾಗಿ ಪರಿವರ್ತನೆಗೊಳ್ಳುತ್ತವೆ. ಸಸ್ಯಗಳಲ್ಲಿ
ನೈಸರ್ಗಿಕವಾಗಿ 130ಕ್ಕೂ ಹೆಚ್ಚು ತರಹದ ಜಿಬ್ಬರೆಲಿನ್ ಗಳಿವೆ. ಇವುಗಳಲ್ಲಿ ಜಿಬ್ಬರೆಲಿಕ್ ಆ್ಯಸಿಡ್
ಅಥವಾ ಸಂಕ್ಷಿಪ್ತವಾಗಿ ಜಿಎ1, ಜಿಎ3, ಜಿಎ4 ಮತ್ತು ಜಿಎ7 ಪ್ರಮುಖವಾದವು.
ಸಸ್ಯಗಳ ದೇಹದಲ್ಲಿ ಜಿಬ್ಬರೆಲಿನ್ ನ ಕೆಲಸವೇನು?:
1.
ಕಾಂಡದ
ಬೆಳವಣಿಗೆಯಲ್ಲಿ: ಕೋಶ ವಿಭಜನೆ ಮತ್ತು ವಿಸ್ತರಣೆ ಪ್ರಚೋದಿಸುವ ಜಿಬ್ಬರೆಲಿನ್ ಗಳು ಕಾಂಡ ಎತ್ತರವಾಗಿ
ಬೆಳೆಯುವಂತೆ ಪ್ರೇರೇಪಿಸುತ್ತದೆ; ಕುಬ್ಜವಾಗಿರುವ ಸಸ್ಯವನ್ನು ಉದ್ದವಾಗುವಂತೆ ಜಿಬ್ಬರೆಲಿನ್ ಉತ್ತೇಜಿಸುತ್ತದೆ.
ಆದರೆ ಈ ಪರಿಣಾಮ ಎಲ್ಲ ಸಸ್ಯಗಳಲ್ಲಿಯೂ ಅಲ್ಲ.
2.
ಹೂವಿನ
ಉತ್ಪಾದನೆಯಲ್ಲಿ: ಲೆಟ್ಟ್ಯುಸ್, ಪಾಲಕ್, ಸ್ಟ್ರಾಬೆರಿ, ಸೇಬು, ಸೇವಂತಿಗೆ ಮುಂತಾದ ಕೆಲ ಸಸ್ಯಗಳಲ್ಲಿ
ಹೂಬಿಡಲು ಬೆಳಕು ಮತ್ತು ಶೀತದ ಪ್ರಚೋದನೆ ಬೇಕಾಗುತ್ತದೆ. ಇಂತಹ ಸಸ್ಯಗಳಲ್ಲಿ ಬೆಳಕು ಶೀತದ ಪ್ರಚೋದನೆ
ಇಲ್ಲದೆ ಹೂಬಿಡುವಂತೆ ಜಿಬ್ಬರೆಲಿನ್ ಪ್ರೇರೇಪಿಸುತ್ತದೆ.
3.
ಹಣ್ಣುಗಳ
ಬೆಳವಣಿಗೆಯಲ್ಲಿ: ಹಣ್ಣಿನ ಗಾತ್ರವನ್ನು ಹೆಚ್ಚಿಸುವಲ್ಲಿ, ಆಕಾರವನ್ನು ಸುಂದರವಾಗಿಸುವಲ್ಲಿ ಜಿಬ್ಬರೆಲಿನ್
ಪಾತ್ರವಿದೆ. ಜಿಬ್ಬರೆಲಿನ್ ಅಕಾಲಿಕವಾಗಿ ಹಣ್ಣು ಉದುರುವುದನ್ನು ಕೂಡ ತಡೆಯಬಲ್ಲದು.
4.
ಪಾರ್ಥೆನೋಕಾರ್ಪಿ:
ಸಸ್ಯಗಳಲ್ಲಿ ಪರಾಗಸ್ಪರ್ಷ ಕ್ರಿಯೆಯಿಂದ ಹಣ್ಣು-ಬೀಜ ರೂಪವಾಗುವುದು ನಮಗೆಲ್ಲಾ ತಿಳಿದಿದೆ. ವಿಶೇಷ ಸಂದರ್ಭದಲ್ಲಿ ಬಾಳೆಯಂತ ಕೆಲ ಸಸ್ಯಗಳಲ್ಲಿ ಪರಾಗಸ್ಪರ್ಷ
ಕ್ರಿಯೆಯಿಲ್ಲದೆ ಹಣ್ಣುಗಳು ರೂಪಗೊಳ್ಳುತ್ತವೆ. ಇಂತಹ ಹಣ್ಣುಗಳು ಬೀಜರಹಿತವಾಗಿರುವುದನ್ನು ಗಮನಿಸಬಹುದು.
ಈ ಕ್ರಿಯೆಗೆ ಪಾರ್ಥೆನೋಕಾರ್ಪಿ ಎನ್ನಲಾಗುತ್ತದೆ. ಜಿಬ್ಬರೆಲಿನ್ ಗಳು ಪಾರ್ಥೆನೋಕಾರ್ಪಿ ಕ್ರಿಯೆಯನ್ನು
ಪ್ರಚೋದಿಸುತ್ತವೆ.
5. ಬೀಜ ಮೊಳಕೆಯೊಡೆಯುವಿಕೆಯಲ್ಲಿ: ಬೀಜಗಳ
ಸುಪ್ತಾವಸ್ಥೆ ಮುರಿದು, ಮೊಳಕೆಯೊಡೆಯಲು ಬೇಕಾಗುವ ಶಕ್ತಿ, ಶರ್ಕರ, ಕಿಣ್ವ ಇತ್ಯಾದಿ ವಸ್ತುಗಳನ್ನು
ಪೂರೈಸಲು ಜಿಬ್ಬರೆಲಿನ್ ನೆರವಾಗುತ್ತದೆ.
ಜಿಬ್ಬರೆಲಿನ್ ನ ಕೃತಕ ರೂಪಿಗಳು: ಜಿಬ್ಬರೆಲಿಕ್
ಆ್ಯಸಿಡ್ ಹೆಸರಿನಲ್ಲಿ ಲಭ್ಯವಿರುವ ಜಿಎ3 ಅತ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವ ಕೃತಕ ರೂಪಿ. ಉಳಿದಂತೆ
ಜಿಎ4 ಮತ್ತು ಜಿಎ7 ಜಿಬ್ಬರೆಲಿನ್ ಗಳೂ ಬಳಕೆಯಲ್ಲಿವೆ.
ಕೃಷಿ ತೋಟಗಾರಿಕೆಯಲ್ಲಿ ಜಿಬ್ಬರೆಲಿನ್ ನ ಬಳಕೆ:
1.
ಕಾಂಡದ
ಬೆಳವಣಿಗೆಯಲ್ಲಿ: ಕಾಂಡದ ಉದ್ದ ಹೆಚ್ಚಿಸುವುದರಿಂದ ಕಬ್ಬಿನಲ್ಲಿ, ಆಳವಾದ ನೀರಿನಲ್ಲಿ ಬೆಳೆಯುವ ಭತ್ತದಲ್ಲಿ
ಜಿಬ್ಬರೆಲಿನ್ ಬಳಕೆ ಮಾಡಲಾಗುತ್ತದೆ. ಜಿಬ್ಬರೆಲಿನ್ ಸಿಂಪಡಣೆ ಕಬ್ಬಿನ ಜಲ್ಲೆಯ ಉದ್ದ ಹೆಚ್ಚಿಸಿ ಪರೋಕ್ಷವಾಗಿ
ಹೆಚ್ಚಿನ ಇಳುವರಿಗೆ ಕಾರಣವಾಗುತ್ತದೆ.
2.
ಬೀಜೋಪಚಾರದಲ್ಲಿ:
ಬಟಾಟೆ, ಲಿಲ್ಲಿ, ಅಮರೆಲ್ಲಿಸ್, ಮುಂತಾದ ಗಡ್ಡೆಗಳಲ್ಲಿ ಕಣ್ಣುಗಳ ಮೊಳಕೆ ಉತ್ತೇಜಿಸಲು, ಧಾನ್ಯದ ಬೀಜಗಳ
ಸುಪ್ತಾವಸ್ಥೆ ಮುರಿದು ಮೊಳಕೆಯೊಡೆಯಲು ಬೀಜಗಳನ್ನು ಜಿಬ್ಬರೆಲಿನ್ ಉಪಚಾರ ಮಾಡಲಾಗುತ್ತದೆ.
3.
ಹೂ
ಬಿಡಲು: ಗಜ್ಜರಿ, ಲೆಟ್ಟ್ಯುಸ್, ಪಾಲಕ್, ಹೂಕೋಸು, ಎಲೆಕೋಸು ಮುಂತಾದ ತರಕಾರಿಗಳ ಬೆಳೆಗಳಲ್ಲಿ ಬೀಜ
ಉತ್ಪಾದನೆ ಮಾಡುವಾಗ ಹೂಬಿಡುವ ಪ್ರಕ್ರಿಯೆ ಮುಖ್ಯವಾದದ್ದು. ಇವುಗಳಿಗೆ ಹೂ ಬಿಡಲು ಶೀತಲ ಅವಧಿಯ ಅಗತ್ಯವಿದೆ.
ಎರಡು ವರ್ಷ ತಗಲುವ ಈ ಕ್ರಿಯೆಯನ್ನು ವೇಗಗಗೊಳಿಸಲು, ತಂಪು ಅವಧಿ ಅವಶ್ಯಕತೆಯಿಲ್ಲದೆ ಹೂ ಉತ್ಪಾದಿಸುವಂತೆ
ಪ್ರಚೋದಿಸಲು ಜಿಬ್ಬರೆಲಿನ್ ಸಿಂಪಡಿಸಲಾಗುತ್ತದೆ.
4.
ಹೂಬಿಡುವಿಕೆಯ
ನಿಯಂತ್ರಣಕ್ಕೆ: ಸೇವಂತಿಗೆ, ಆಸ್ಟರ್, ಮುಂತಾದ ಪುಷ್ಪ ಬೆಳೆಗಳಲ್ಲಿ ಹೂ ಬಿಡುವಿಕೆಯನ್ನು ನಿಯಂತ್ರಿಸಲು
ಜಿಬ್ಬರೆಲಿನ್ ಬಳಸಲಾಗುತ್ತದೆ.
5.
ಬೀಜರಹಿತ
ಬೆಳೆ ಉತ್ಪಾದನೆಯಲ್ಲಿ: ನೈಸರ್ಗಿಕವಾಗಿ ಪಾರ್ಥೆನೋಕಾರ್ಪಿ ಕ್ರಿಯೆಯನ್ನು ಪ್ರಚೋದಿಸುವುದರಿಂದ ಬೀಜರಹಿತ
ಹಣ್ಣುಗಳನ್ನು ಉತ್ಪಾದನೆ ಮಾಡಲು ದ್ರಾಕ್ಷಿ, ಟೊಮ್ಯಾಟೋ, ಬದನೆ, ಪೇರಲಗಳಲ್ಲಿ ಜಿಬ್ಬರೆಲಿನ್ ಸಿಂಪಡಿಸಲಾಗುತ್ತದೆ.
6.
ದ್ರಾಕ್ಷಿಯಲ್ಲಿ:
ಎಲ್ಲ ಬೆಳೆಗಳಿಗಿಂತಲೂ ದ್ರಾಕ್ಷಿ ಬೆಳೆಯಲ್ಲಿ ಜಿಬ್ಬರೆಲಿನ್ ಬಳಕೆ ವ್ಯಾಪಕವಾಗಿದೆ. ದ್ರಾಕ್ಷಿ ಗೊಂಚಲಿನ
ದಂಟಿನ ಉದ್ದವನ್ನು ಹೆಚ್ಚಿಸಲು, ಆ ಮೂಲಕ ಹಣ್ಣುಗಳ ಬೆಳವಣಿಗೆಗೆ ಜಾಗ ಮಾಡಿಕೊಟ್ಟು ಅವುಗಳ ಗಾತ್ರ
ಹೆಚ್ಚಿಸಲು, ಬೀಜರಹಿತ ಹಣ್ಣುಗಳಿಗಾಗಿ ದ್ರಾಕ್ಷಿ
ಗೊಂಚಲನ್ನು ಜಿಬ್ಬರೆಲಿನ್ ದ್ರಾವಣದಲ್ಲಿ ಅದ್ದಲಾಗುತ್ತದೆ.
ಜಿಬ್ಬರೆಲಿನ್ ನ ಪ್ರತಿರೋಧಕಗಳು: ಕಾಂಡದ ಎತ್ತರವಾಗುವುದು
ಎಲ್ಲಾ ಬೆಳೆಗಳಲ್ಲಿಯೂ ಅಪೇಕ್ಷಿತವಲ್ಲ. ಧಾನ್ಯದ ಬೆಳೆಗಳಲ್ಲಿ ಕಾಂಡ ತೀರಾ ಎತ್ತರ ಬೆಳೆದರೆ ಗಾಳಿ
ಹೊಡೆತಕ್ಕೆ ಮುರಿದು ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಕಾಂಡದ ಬೆಳವಣಿಗೆ ತಡೆದು ಗಿಡವನ್ನು ಕುಬ್ಜವಾಗಿಸಲು
ಸೈಕೋಸಿಲ್(CCC ಅಥವಾ ಕ್ಲೋರಮ್ ಕ್ವಾಟ್), AMO1618, ಫಾಸ್ಫಾನ್ ಡಿ ಮುಂತಾದ ಜಿಬ್ಬರೆಲಿನ್ ಪ್ರತಿರೋಧಕಗಳನ್ನು
ಬಳಸಲಾಗುತ್ತದೆ. ಕಾಂಡದ ಬೆಳವಣಿಗೆ ಪ್ರೇರೇಪಿಸುವ ಜಿಬ್ಬರೆಲಿನ್ ಕೆಲ ಸಸ್ಯಗಳಲ್ಲಿ ಹೂಬಿಡುವಿಕೆಯನ್ನು
ಮುಂದೂಡುತ್ತದೆ. ಹಾಗಾಗಿ ಹೂಬಿಡುವಿಕೆ ಪ್ರಚೋದಿಸಲು ಜಿಬ್ಬರೆಲಿನ್ ಪ್ರಮಾಣ ಕುಂಠಿತಗೊಳಿಸಲು ಪ್ರತಿರೋಧಕಗಳನ್ನು
ಬಳಸಲಾಗುತ್ತದೆ. ಹಣ್ಣಿನ ಬೆಳೆಗಳಲ್ಲಿ ಮುಖ್ಯವಾಗಿ ಮಾವಿನ ಬೆಳೆಯಲ್ಲಿ ಪ್ರತಿ ವರ್ಷ ಹೂಬಿಡಲು ಬಳಸುವ ಪ್ಯಾಕ್ಲೋಬ್ಯುಟ್ರಜಾಲ್ ದ್ರಾವಣ
ಜಿಬ್ಬರೆಲಿನ್ ಪ್ರತಿರೋಧಕ. ಜಿಬ್ಬರೆಲಿನ್ ಗಳ ಕಾರ್ಯಪ್ರವೃತ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಆಬ್ಸಿಸಿಕ್
ಆ್ಯಸಿಡ್ ನೈಸರ್ಗಿಕವಾದ ಪ್ರತಿರೋಧಕ.
ಎಥೆಲಿನ್: ಸಸ್ಯಗಳ ಬೆಳವಣಿಗೆಯಲ್ಲಿ ಮುಖ್ಯ
ಪಾತ್ರ ವಹಿಸುವ ಇನ್ನೊಂದು ಪ್ರಚೋದಕ ಎಥೆಲಿನ್. ಎಲ್ಲರಂತಲ್ಲದೇ
ಅನಿಲ ರೂಪಿಯಾಗಿರುವುದೇ ಇದರ ವಿಶೇಷತೆ. 19ನೇ ಶತಮಾನದ ಶುರುವಾತು, ಕಲ್ಲಿದ್ದಲು ಬಳಸಿ ಬೀದಿ ದೀಪವನ್ನು
ಉರಿಸುವ ರೂಢಿಯಿತ್ತು. ಬೀದಿ ದೀಪದ ಬಳಿಯಿರುವ ಮರಗಳು ಅಸಹಜವಾಗಿ ಎಲೆ ಹಣ್ಣಾಗಿಸಿ ಉದುರಿಸುವುದನ್ನು
ಗಮನಿಸಲಾಗಿತ್ತು. ಕಲ್ಲಿದ್ದಲ ಅನಿಲದ ಯಾವುದೋ ಅಂಶ ಸಸ್ಯದ ಬೆಳವಣಿಗೆ ಮೇಲೆ ಪರಿಣಾಮ ಬೀರುವುದನ್ನು
ಗುರುತಿಸಲಾಯಿತು. ಮುಂದೆ ಈ ಅಂಶ ಸಸ್ಯಗಳೇ ನೈಸರ್ಗಿಕವಾಗಿ ಹೊರಸೂಸುವ ಎಥೆಲಿನ್ ಎಂಬ ಅನಿಲವೆಂದು ಸಿದ್ಧವಾಯಿತು.
ಎಥೆಲಿನ್ ತಯಾರಾಗುವುದೆಲ್ಲಿ?: ಎಥೆಲಿನ್ ಸಸ್ಯದ
ವಿವಿಧ ಭಾಗದಲ್ಲಿ ತಯಾರಾಗುತ್ತಾದರೂ ವೃದ್ದಾಪ್ಯಕ್ಕೆ ಸನಿಹವಿರುವ ಮಾಗಿದ ಹಣ್ಣು, ಮುದಿ ಎಲೆ ಹೂವು,
ಗಾಯಗೊಂಡ ಅಂಗಾಂಶಗಳಲ್ಲಿ ಹೆಚ್ಚು.
ಎಥೆಲಿನ್ ತಯಾರಾಗುವುದು ಹೇಗೆ? : ಎಥೆಲಿನ್ ತಯಾರಾಗುವುದು
‘ಮಿಥಿಯೋನಿನ್’ ಎಂಬ ಅಮೈನೋ ಆಮ್ಲದಿಂದ.
ಸಸ್ಯಗಳ ದೇಹದಲ್ಲಿ ಎಥೆಲಿನ್ ನ ಕೆಲಸವೇನು?
1.
ಕಾಯಿ
ಮಾಗುವಿಕೆ: ವಿವಿಧ ಹಣ್ಣಿನ ಬೆಳೆಗಳಲ್ಲಿ ಕಾಯಿ ಹಣ್ಣಾಗುವಿಕೆಯನ್ನು ಎಥೆಲಿನ್ ಪ್ರಚೋದಿಸುತ್ತದೆ.
ಕಾಯಿಯ ಉಸಿರಾಟ ಕ್ರಿಯೆಯ ವೇಗವನ್ನು ಹೆಚ್ಚಿಸಿ ಅಂಗಾಂಶಗಳನ್ನು
ಮೃದುಗೊಳಿಸುವ ಮೂಲಕ ಎಥೆಲಿನ್ ತನ್ನ ಕಾರ್ಯ ನಿರ್ವಹಿಸುತ್ತದೆ.
2.
ಎಲೆ
ಹಣ್ಣು ಉದುರುವಿಕೆ: ಸಸ್ಯಗಳಲ್ಲಿ ವೃದ್ಧಾಪ್ಯ ಕ್ರಿಯೆಯನ್ನು
ಪ್ರಚೋದಿಸುವ ಎಥೆಲಿನ್ ಎಲೆ ಹಣ್ಣು ಹೂವುಗಳ ಉದುರುವಿಕೆಗೆ ಕಾರಣವಾಗಿದೆ.
3.
ಒತ್ತಡಕ್ಕೆ
ಪ್ರತಿಕ್ರಿಯೆ ನೀಡುವಲ್ಲಿ: ಬರ, ಪ್ರವಾಹ, ರೋಗಕೀಟ ದಾಳಿ ಮತ್ತು ಸಸ್ಯ ದೈಹಿಕ ಹಾನಿಗೆ ಒಳಗಾಗಿದ್ದಲ್ಲಿ
ಪ್ರತಿಕ್ರಿಯೆಯಾಗಿ ಎಥೆಲಿನ್ ಉತ್ಪಾದನೆಯಾಗುತ್ತದೆ, ಇದರಿಂದ ಸಸ್ಯಗಳು ಪ್ರತಿಕೂಲ ಪರಿಸ್ಥಿತಿಗಳಿಗೆ
ಹೊಂದಿಕೊಳ್ಳಲು ಸಹಾಯವಾಗುತ್ತದೆ.
4.
ಹೂ
ಅರಳುವಿಕೆಯಲ್ಲಿ: ಮೊಗ್ಗು ಹೂವಾಗಿ ಅರಳುವುದು ಮತ್ತು ಬಾಡುವ ಕ್ರಿಯೆಯನ್ನು ಎಥೆಲಿನ್ ನಿಯಂತ್ರಿಸುತ್ತದೆ
ಎಥೆಲಿನ್ ನ ಕೃತಕ ರೂಪಿಗಳು: ಎಥೆಲಿನ್ ಬಿಡುಗಡೆ
ಮಾಡುವ ಸಂಯುಕ್ತ ‘ಎಥೆಫೋನ್’ ಮತ್ತು ‘CEPA’ (2-ಕ್ಲೋರೋ ಇಥೈಲ್ ಫಾಸ್ಫೋನಿಕ್ ಆ್ಯಸಿಡ್) ಕೃಷಿ ತೋಟಗಾರಿಕೆಯಲ್ಲಿ
ವ್ಯಾಪಕವಾಗಿ ಬಳಕೆಯಲ್ಲಿರುವ ರಾಸಾಯನಿಕಗಳು. ಮುಚ್ಚಿದ ಕೋಣೆಯಲ್ಲಿ ಕಾಯಿ ಮಾಗಿಸುವಾಗ ಎಥೆಲಿನ್ ಅನಿಲವನ್ನೂ
ಬಳಸಲಾಗುತ್ತದೆ. ಅಷ್ಟಕ್ಕೂ ಹಣ್ಣು ಮಾಗಿಸಲು ಚೆನ್ನಾಗಿ ಕಳಿತ ಬಾಳೆ ಹಣ್ಣಿನಿಂದ ಹೊರಸೂಸುವ ಎಥೆಲಿನ್ನೇ
ಬೇಕಾದಷ್ಟಾಗುತ್ತದೆ.
ಕೃಷಿ ತೋಟಗಾರಿಕೆಯಲ್ಲಿ ಎಥೆಲಿನ್ ನ ಬಳಕೆ:
1.
ಕಾಯಿ
ಮಾಗುವಿಕೆ: ಹಣ್ಣು ಬೆಳೆಗಳ ಕೊಯ್ಲಾದ ನಂತರ ಶೇಖರಣೆ ಸಮಯದಲ್ಲಿ ಏಕರೂಪಿಯಾಗಿ ಪಕ್ವವಾಗಿಸಲು ಎಥೆಲಿನ್
ಬಳಸಲಾಗುತ್ತದೆ. ಬಾಳೆ ಹಣ್ಣಿನ ಗೊನೆಯ ತುದಿಯಲ್ಲಿ ಹಚ್ಚುವ ಗುಲಾಬಿ ದ್ರವ ಎಥೆಲಿನ್ ಆಗಿರುತ್ತದೆ.
2.
ಹೂವಾಗುವಿಕೆ
ಪ್ರಚೋದಿಸಲು: ಹಣ್ಣಿನ ಬೆಳೆಗಳಲ್ಲಿ ಹೂ ಬಿಡಲು ಎಥೆಲಿನ್ ಸಿಂಪಡಿಸಲಾಗುತ್ತದೆ. ಪೈನಾಪಲ್ ಬೆಳೆಯಲ್ಲಿ
ಇದು ವ್ಯಾಪಕ.
3.
ಹಣ್ಣಿನ
ಕೊಯ್ಲಿಗಾಗಿ: ಹಣ್ಣಿನ ಬೆಳೆಗಳ ಕೊಯ್ಲಿನ ಸಂದರ್ಭದಲ್ಲಿ ಕಾಯಿಗಳು ಏಕರೂಪಿಯಾಗಿ ಮಾಗುವಂತೆ ಮಾಡಿ ಸ್ವತಃ
ಉದುರುವಂತೆ ಉತ್ತೇಜಿಸಲು ಎಥೆಲಿನ್ ಸಿಂಪಡಣೆ ಮಾಡಲಾಗುತ್ತದೆ. ಅಕ್ರೂಟ್, ಪಿಸ್ತಾ, ಬಾದಾಮ್, ಸೇಬು
ಹೀಗೆ ಶೀತ ವಲಯದ ಬೆಳೆಗಳಲ್ಲಿ ಈ ಅಭ್ಯಾಸ ಚಾಲ್ತಿಯಲ್ಲಿದೆ.
4.
ಸಸ್ಯಗಳನ್ನು
ಒತ್ತಡಕ್ಕೆ ಸಿಲುಕಿಸಲು: ಪೇರಲೆ, ಕಿತ್ತಲೆ ಮುಂತಾದ ಕೆಲವು ಬೆಳೆಗಳು ಒತ್ತಡಕ್ಕೆ ಒಳಗಾದಲ್ಲಿ ಮಾತ್ರ
ಹಣ್ಣುಗಳನ್ನು ಬಿಡುತ್ತವೆ. ಎಥೆಲಿನ್ ಸಿಂಪಡಣೆಯಿಂದ ಎಲೆಗಳನ್ನು ಉದುರಿಸಿ ಗಿಡವನ್ನು ಬೋಳಾಗಿಸಿ ಒತ್ತಡ
ಸೃಷ್ಟಿಸುವ ಮೂಲಕ ಸಸ್ಯ ಹೂ ಬಿಡುವಂತೆ ಪ್ರಚೋದಿಸಲು ಸಾಧ್ಯ.
ಎಥೆಲಿನ್ ನ ಪ್ರತಿರೋಧಕಗಳು: ಸೇಬು, ಬಾಳೆ ಇತರೇ
ಹಣ್ಣುಗಳ ತಾಳಿಕೆ ಬಾಳಿಕೆಯನ್ನು ಹೆಚ್ಚಿಸಲು, ಮತ್ತು ಹೂದಾನಿಯಲ್ಲಿರಿಸಿದ ಅಲಂಕಾರಿಕ ಹೂವುಗಳ ಜೀವನಾವಧಿಯನ್ನು
ವಿಸ್ತರಿಸಲು ಎಥೆಲಿನ್ ನ ಪ್ರತಿರೋಧಕಗಳನ್ನು ಬಳಸಲಾಗುತ್ತದೆ; ಉದಾಹರಣೆಗೆ 1-MCP (ಮಿಥೈಲ್ ಸೈಕ್ಲೋ
ಪ್ರೊಪೈನ್), STS (ಸಿಲ್ವರ್ ಥಯೋ ಸಲ್ಫೇಟ್), ಸಿಲ್ವರ್ ನೈಟ್ರೇಟ್, AOA (ಅಮೈನೋ ಆಕ್ಸಿ ಎಸಿಟಿಕ್
ಆ್ಯಸಿಡ್).
ಅಬ್ಸಿಸಿಕ್ ಆ್ಯಸಿಡ್:
ಆಕ್ಸಿನ್, ಸೈಟೋಕೈನಿನ್
ಮತ್ತು ಜಿಬ್ಬರೆಲಿನ್ ಗಳ ವಿರುದ್ಧ ಕೆಲಸ ಮಾಡುವ ವಿಶೇಷ ಹಾರ್ಮೋನ್ ಅಬ್ಸಿಸಿಕ್ ಆ್ಯಸಿಡ್ ಎಥೆಲಿನ್
ಗೆ ಪೂರಕವಾಗಿಯೂ ಕಾರ್ಯ ನಿರ್ವಹಿಸುತ್ತದೆ. ‘ಅಬ್ಸಿಶನ್’ (abscission) ಎಂದರೆ ಉದುರುವಿಕೆ ಎಂದರ್ಥ.
ಎಲೆ, ಹೂವು, ಹಣ್ಣುಗಳ ಉದುರುವಿಕೆ ಪ್ರಚೋದಿಸುವ ಕಾರಣ ಈ ಪ್ರಚೋದಕಕ್ಕೆ ಅಬ್ಸಿಸಿಕ್ ಆ್ಯಸಿಡ್
(ABA-ಎಬಿಎ) ಎಂದು ಕರೆಯಲಾಗಿದೆ.
ಸಸ್ಯಗಳಲ್ಲಿ ಎಬಿಎ ತಯಾರಾಗುವುದೆಲ್ಲಿ: ಮುಪ್ಪಾಗುತ್ತಿರುವ
ಅಂಗಾಂಶದಲ್ಲಿ ಮುಖ್ಯವಾಗಿ ತಯಾರಾಗುವ ಎಬಿಎ ಒತ್ತಡದ ಸಂದರ್ಭದಲ್ಲಿ ಎಲೆ, ಬೇರು, ಬೀಜ, ಹೂವು ಕಾಯಿ
ಹಣ್ಣುಗಳಲ್ಲೂ ಉತ್ಪಾದನೆಯಾಗಬಹುದು.
ಎಬಿಎ ತಯಾರಾಗುವುದು ಹೇಗೆ? : ಸಸ್ಯಗಳ ಜೀವಕೋಶದಲ್ಲಿ
‘ಕೆರೋಟಿನೈಡ್’ ಎಂಬ ಸಂಯುಕ್ತಗಳಿಂದ ಎಬಿಎ ತಯಾರಾಗುತ್ತದೆ.
ಸಸ್ಯಗಳ ದೇಹದಲ್ಲಿ ಎಬಿಎ ಕೆಲಸವೇನು?
1.
ಒತ್ತಡಗಳಿಗೆ
ಪ್ರತಿಕ್ರಿಯೆಗಾಗಿ: ಬರ, ಪ್ರವಾಹ, ಶೀತ, ಹಿಮಪಾತ, ಅಧಿಕ ತಾಪಮಾನ, ಮಣ್ಣಿನ ಲವಣಾಂಶ ಮುಂತಾದ ಪರಿಸರದ
ಒತ್ತಡಗಳಿಗೆ ಪ್ರತಿಕ್ರಿಯೆಯಾಗಿ ತಯಾರಾಗುವ ಎಬಿಎ ಅನ್ನು stress hormone ಎಂದೇ ಕರೆಯಲಾಗುತ್ತದೆ.
ಎಬಿಎ ಸಸ್ಯಗಳಲ್ಲಿ ವಿವಿಧ ಶಾರರೀಕ ಕ್ರಿಯೆಗಳನ್ನು ನಿಯಂತ್ರಿಸುವ ಮೂಲಕ ಒತ್ತಡಗಳ ವಿರುದ್ಧ ಸೆಣೆಸಲು
ಸಜ್ಜುಮಾಡುತ್ತದೆ.
2.
ಪತ್ರರಂಧ್ರಗಳ
ಮುಚ್ಚುವಿಕೆಯಲ್ಲಿ: ಎಲೆ ಕಾಂಡದಲ್ಲಿ ಪತ್ರರಂಧ್ರಗಳನ್ನು ಮುಚ್ಚುವ ಮೂಲಕ ಎಬಿಎ ಬರ ಪರಿಸ್ಥಿತಿಗಳಲ್ಲಿ
ನೀರಿನ ನಷ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.
3.
ಬೀಜಗಳನ್ನು
ಸುಪ್ತಾವಸ್ಥೆಗೆ ದೂಡುವಲ್ಲಿ: ಎಬಿಎ ಬೀಜದ ಸುಪ್ತತೆಯನ್ನು
ಪ್ರೇರೇಪಿಸುತ್ತದೆ, ಬೀಜಗಳು ಅನುಕೂಲಕರ ಪರಿಸ್ಥಿತಿಗಳಲ್ಲಿ ಮಾತ್ರ ಮೊಳಕೆಯೊಡೆಯುವುದನ್ನು ಖಚಿತಪಡಿಸುತ್ತದೆ.
4.
ಮೊಗ್ಗುಗಳ
ಸುಪ್ತಾವಸ್ಥೆಯಲ್ಲಿ: ಎಬಿಎ ಕೆಲವು ಜಾತಿಗಳಲ್ಲಿ, ವಿಶೇಷವಾಗಿ ಶೀತ ವಲಯದ ಎಲೆ ಉದುರಿಸುವ ಬೆಳೆಗಳಲ್ಲಿ
ಮೊಗ್ಗಿನ ಸುಪ್ತತೆಯನ್ನು ನಿಯಂತ್ರಿಸುತ್ತದೆ, ಸಸ್ಯಗಳು ಪ್ರತಿಕೂಲವಾದ ಋತುಗಳಲ್ಲಿ ಬದುಕಲು ಅನುವು
ಮಾಡಿಕೊಡುತ್ತದೆ.
5.
ಬೆಳವಣಿಗೆ
ಪ್ರತಿಬಂಧಿಸುವಲ್ಲಿ: ಎಬಿಎ
ಬೆಳವಣಿಗೆಯನ್ನು ಉತ್ತೇಜಿಸುವ ಜಿಬ್ಬರೆಲಿನ್ ಹಾರ್ಮೋನುಗಳಿಗೆ ವಿರುದ್ಧವಾಗಿ
ಕಾರ್ಯನಿರ್ವಹಿಸುತ್ತದೆ ತನ್ಮೂಲಕ ಒತ್ತಡದ ಪರಿಸ್ಥಿತಿಗಳಲ್ಲಿ ಬೆಳವಣಿಗೆಯನ್ನು ತಡೆದು
ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸುತ್ತದೆ.
6.
ವೃದ್ಧಾಪ್ಯ
ನಿರ್ವಹಣೆಯಲ್ಲಿ: ಹಳೆಯ
ಹಣ್ಣಾದ ಎಲೆ ಅಥವಾ ಅಂಗಾಂಶಗಳಲ್ಲಿ ಎಬಿಎ ವೃದ್ಧಾಪ್ಯವನ್ನು ಉತ್ತೇಜಿಸುತ್ತದೆ ಮತ್ತು ಸಸ್ಯದೊಳಗೆ
ಪೋಷಕಾಂಶಗಳ ಮರುಹಂಚಿಕೆಯನ್ನು ಪ್ರೇರೇಪಿಸುತ್ತದೆ. ಒತ್ತಡದ ಸಮಯದಲ್ಲಿಯೂ ಎಬಿಎ ಇದೇ ಕಾರ್ಯ ನಿರ್ವಹಿಸುವುದನ್ನು
ದಾಖಲಿಸಲಾಗಿದೆ.
7.
ಹಣ್ಣು
ಮಾಗುವಿಕೆಯಲ್ಲಿ: ಎಬಿಎ ಕೆಲವು ಜಾತಿಯ ಹಣ್ಣುಗಳನ್ನು ಪಕ್ವಗೊಳಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಎಬಿಎ ಕೃತಕ ರೂಪಿಗಳು ಮತ್ತು ಕೃಷಿ ತೋಟಗಾರಿಕೆಯಲ್ಲಿ
ಅವುಗಳ ಬಳಕೆ: ಉಳಿದ ಪ್ರಚೋದಕಗಳಿಗೆ ಹೋಲಿಸಿದರೆ ಎಬಿಎ ಗಳ ಸಿಂಥೆಟಿಕ್ ರೂಪಗಳು ಸಿಮೀತ, ಮತ್ತು ಅಷ್ಟಾಗಿ
ಬಳಕೆಯಲ್ಲಿಲ್ಲ. ಕಾರಣವೆಂದರೆ ಒತ್ತಡದ ಪ್ರತಿಕ್ರಿಯೆಗಳಲ್ಲಿ ಎಬಿಎ ಹೆಚ್ಚು ನಿರ್ದಿಷ್ಟವಾದ ಪಾತ್ರವನ್ನು
ಹೊಂದಿದೆ, ಇದು ದಿನನಿತ್ಯದ ಕೃಷಿ ಪದ್ಧತಿಗಳಲ್ಲಿ ಸುಲಭವಾಗಿ ನಿಭಾಯಿಸಲು ಕಷ್ಟವಾದ ಸಂಕೀರ್ಣ ವಿಷಯ.
ರಾಸಾಯನಿಕವಾಗಿಯೂ ಸಂಕೀರ್ಣ ರಚನೆ ಹೊಂದಿರುವ ಎಬಿಎ ಕೃತಕವಾಗಿ ತಯಾರಿಸಲೂ ಕಷ್ಟವೇ. ಸದ್ಯಕ್ಕೆ
ProTone® (S-ABA) ಎಂಬ ಅರೆ-ಸಂಶ್ಲೇಷಿತ ಎಬಿಎ ಲಭ್ಯವಿದ್ದು ಹಣ್ಣು ಮಾಗುವಿಕೆ, ಎಲೆ ಉದುರಿಸುವಿಕೆ,
ಸುಪ್ತಾವಸ್ಥೆ ಮತ್ತು ಒತ್ತಡ ನಿರ್ವಹಣೆಗೆ ಬಳಸಲಾಗುತ್ತಿದೆ.
ಇತರೇ ಸಸ್ಯ ಪ್ರಚೋದಕಗಳು:
ಬ್ರಾಸಿನೊಸ್ಟಿರಾಯ್ಡ್: ಸಾಸಿವೆ ಜಾತಿಯ ‘ಬ್ರಾಸ್ಸಿಕಾ’
ಸಸ್ಯಗಳಲ್ಲಿ ಮೊದಲು ಕಂಡುಹಿಡಿದ ಬ್ರಾಸಿನೊಸ್ಟಿರಾಯ್ಡ್ ಗಳು ಬೆಳವಣಿಗೆ ಹೊಂದುತ್ತಿರುವ ಎಳೆಯ ಅಂಗಾಂಶಗಳಲ್ಲಿ
ಉತ್ಪತ್ತಿಯಾಗುತ್ತವೆ. ಜೀವಕೋಶಗಳ ವಿಭಜನೆ ವಿಸ್ತರಣೆ, ನಾಳೀಯ ಅಂಗಾಂಶಗಳ ಅಭಿವೃದ್ಧಿ, ಬೀಜ ಮೊಳಕೆಯೊಡೆಯುವಿಕೆ,
ಪರಿಸರದ ಒತ್ತಡ ಸಹಿಷ್ಣುತೆಗೆ ಬ್ರಾಸಿನೊಸ್ಟಿರಾಯ್ಡ್ ನೆರವಾಗುತ್ತದೆ. ಭತ್ತದಲ್ಲಿ
24-epibrassinolide ಎಂಬ ಕೃತಕ ರೂಪಿಗಳ ಬಳಕೆಯು ಧಾನ್ಯದ ಇಳುವರಿಯನ್ನು ಹೆಚ್ಚಿಸುವುದು ಮತ್ತು
ಬರ ನಿರೋಧಕತೆಯನ್ನು ಸುಧಾರಿಸುವುದನ್ನು ದಾಖಲಿಸಲಾಗಿದೆ.
ಸ್ಯಾಲಿಸಿಲಿಕ್ ಆ್ಯಸಿಡ್ : ಕೀಟರೋಗ ದಾಳಿಯ ಜೈವಿಕ
ಒತ್ತಡವನ್ನು ಸಹಿಸಲು ಸಸ್ಯ ರಕ್ಷಣಾ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರಧಾರಿಯಾದ ಸ್ಯಾಲಿಸಿಲಿಕ್ ಆಮ್ಲ
ಹೂಬಿಡುವಿಕೆ, ಅಜೈವಿಕ ಒತ್ತಡಗಳ ವಿರುದ್ಧವೂ ಕೆಲಸ ನಿರ್ವಹಿಸುತ್ತದೆ. ಟೊಮ್ಯಾಟೋಗಳಲ್ಲಿ ಮಿಥೈಲ್
ಸಲಿಸಲೇಟ್ ಎಂಬ ಕೃತಕ ರೂಪಿಗಳ ಬಳಕೆ ಬೊಟ್ರೈಟಿಸ್ ಎಂಬ ಶಿಲೀಂಧ್ರಕ್ಕೆ ಪ್ರತಿರೋಧ ಒಡ್ಡುವುದನ್ನು
ದಾಖಲಿಸಲಾಗಿದೆ. ಹಾಗಾಗಿ ಸ್ಯಾಲಿಸಿಲಿಕ್ ಆಮ್ಲವನ್ನು
ಸಸ್ಯಗಳ ರೋಗ ನಿರೋಧಕ ಶಕ್ತಿ ವರ್ಧಕ ಅಥವಾ ಇಮ್ಯುನಿಟಿ ಬೂಸ್ಟರ್ ಆಗಿ ಬಳಸಲಾಗುತ್ತದೆ.
ಜಾಸ್ಮೋನೇಟ್ಸ್: ಸಸ್ಯಾಹಾರಿಗಳು ಕೀಟರೋಗಕಾರಕಗಳ
(ಎಲೆ ತಿನ್ನುವ ಕಂಬಳಿಹುಳು, ರಸಹೀರುವ ಕೀಟಗಳು) ರಕ್ಷಣೆ ನೀಡುವಲ್ಲಿ ಜಾಸ್ಮೋನೇಟ್ಸ್ ಮುಖ್ಯವಾಗಿವೆ.
ಪರಭಕ್ಷಕ ಕೀಟಗಳ ದಾಳಿಯ ವೇಳೆ ಸಸ್ಯದ ವಿವಿಧ ಭಾಗಗಳಿಗೆ ಸಂಕೇತ ಕಳುಹಿಸಿ ರಕ್ಷಣಾ ವ್ಯವಸ್ಥೆಯನ್ನು
ಜಾಗೃತಗೊಳಿಸುವ ಅಣುಗಳಾಗಿ ಇವು ಕಾರ್ಯ ನಿರ್ವಹಿಸುತ್ತವೆ. ಉದಾಹರಣೆ ದ್ರಾಕ್ಷಿಯಲ್ಲಿ ಜಾಸ್ಮೋನೇಟ್ಸ್
ಸಿಂಪಡಣೆಯಿಂದ ‘ಫಿನೋಲಿಕ್ ಆಮ್ಲ’ ಉತ್ಪತ್ತಿ ಹೆಚ್ಚಾಗುವುದು, ಪರಿಣಾಮ ದ್ರಾಕ್ಷಿ ಎಲೆಯನ್ನು ಭಕ್ಷಿಸುವ
ಪತಂಗಗಳಿಗೆ ಪ್ರತಿರೋಧ ಹೆಚ್ಚಾಗುವುದನ್ನು ದಾಖಲಿಸಲಾಗಿದೆ. ಮಿಥೈಲ್ ಜಾಸ್ಮೋನೇಟ್, ಜಾಸ್ಮೋನಿಕ್ ಆ್ಯಸಿಡ್
ಮುಂತಾದ ಕೃತಕ ರೂಪಿಗಳು ವಾಣಿಜ್ಯಿಕವಾಗಿ ಬಳಕೆಯಲ್ಲಿದ್ದು ಆಲ್ಕಲಾಯ್ಡ್‌ಗಳಂತಹ ರಕ್ಷಣಾತ್ಮಕ ಸಂಯುಕ್ತಗಳನ್ನು
ಉತ್ಪಾದಿಸುವ ಜೀನ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಸಸ್ಯಾಹಾರಿ ಕೀಟಗಳ ವಿರುದ್ಧ ರಕ್ಷಣೆಯನ್ನು ಹೆಚ್ಚಿಸಲು
ಇವುಗಳನ್ನು ಅನ್ವಯಿಸಲಾಗುತ್ತದೆ.
ಸ್ಟ್ರೈಗೊಲಾಕ್ಟನ್ಸ್: ಪರಾವಲಂಬಿ ಸಸ್ಯ ‘ಸ್ಟ್ರೈಗಾ’ದಲ್ಲಿ
(ಗ್ರಾಮ್ಯವಾಗಿ ಉರಿಮಲ್ಲಿಗೆ ಕಳೆ ಎಂದು ಕರೆಯಲಾಗುತ್ತದೆ) ಮೊದಲ ಬಾರಿಗೆ ಕಂಡುಹಿಡಿಯಲಾದ ಈ ಪ್ರಚೋದಕ
ಸಸ್ಯದ ಆಕಾರ ನಿರ್ವಹಣೆಯಲ್ಲಿ (ಮುಖ್ಯವಾಗಿ ಕವಲೊಡೆಯುವಲ್ಲಿ) ಮತ್ತು ಪೋಷಕಾಂಶಗಳ ದಕ್ಷ ಬಳಕೆಯಲ್ಲಿ
ಪಾತ್ರ ವಹಿಸುವುದನ್ನು ಕಂಡುಹಿಡಿಯಲಾಗಿದೆ. ಗೋಧಿಯಲ್ಲಿ ಸಂಶ್ಲೇಷಿತ ಸ್ಟ್ರೈಗೊಲಾಕ್ಟನ್ (GR24) ಆಳವಾದ
ಬೇರಿನ ಬೆಳವಣಿಗೆಯನ್ನು ಉತ್ತೇಜಿಸುವುದನ್ನು, ಕಡಿಮೆ ರಂಜಕದ ಮಣ್ಣಿನ ಪರಿಸ್ಥಿತಿಗಳಲ್ಲಿ ಪೋಷಕಾಂಶಗಳ
ಹೀರಿಕೊಳ್ಳುವಿಕೆಯನ್ನು ಉತ್ತಮಗೊಳಿಸುವುದನ್ನು ದಾಖಲಿಸಲಾಗಿದೆ.
ಪಾಲಿಅಮೈನ್ಸ್: ತೀರಾ ಇತ್ತೀಚೆಗೆ ಸಸ್ಯ ಪ್ರಚೋದಕಗಳೆಂದು
ಗುರುತಿಸಲಾದ ಪಾಲಿಅಮೈನ್ಸ್ ಅಜೈವಿಕ ಒತ್ತಡಗಳನ್ನು ನಿರ್ವಹಿಸುವಲ್ಲಿ ಉಪಯುಕ್ತವಾಗಿವೆ. ಸಂಶ್ಲೇಷಿತ
ಪಾಲಿಅಮೈನ್‌ಗಳಾದ ಪುಟ್ರೆಸಿನ್, ಸ್ಪೆರ್ಮಿಡಿನ್ ಮತ್ತು ಸ್ಪರ್ಮೈನ್‌ಗಳನ್ನು ಭತ್ತ ಗೋಧಿಗಳಲ್ಲಿ ಒತ್ತಡ
ಸಹಿಷ್ಣುತೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಸೌತೆಕಾಯಿಗಳಲ್ಲಿ ಸ್ಪೆರ್ಮಿಡಿನ್ ನ ಬಳಕೆಯು ತೀವ್ರ
ಉಷ್ಣಾಂಶದ ಪರಿಸ್ಥಿತಿಗಳಲ್ಲಿ ಕಾಯಿ ಕಚ್ಚುವಿಕೆ ಮತ್ತು ಗುಣಮಟ್ಟವನ್ನು ಸುಧಾರಿಸುವುದನ್ನು ದಾಖಲಿಸಲಾಗಿದೆ.
ನೈಟ್ರಿಕ್ ಆಕ್ಸೈಡ್: ಬೀಜ
ಮೊಳಕೆಯೊಡೆಯುವುದನ್ನು ಸುಧಾರಿಸಲು, ಬೇರಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಒತ್ತಡ
ಸಹಿಷ್ಣುತೆಯನ್ನು ಹೆಚ್ಚಿಸಲು ನೈಟ್ರಿಕ್ ಆಕ್ಸೈಡ್ ಅನ್ನು ಬಳಸಲಾಗುತ್ತದೆ. ಉದಾಹರಣೆಗೆ ಸೋಯಾ
ಬೀನ್ ಬೆಳೆಯಲ್ಲಿ ಸೋಡಿಯಂ ನೈಟ್ರೊಪ್ರಸ್ಸೈಡ್ ಬಳಕೆ ನೀರಿನ ಕೊರತೆಯ ಸಂದರ್ಭದಲ್ಲಿಯೂ ಮೊಳಕೆಯೊಡೆಯುವಿಕೆಯನ್ನು
ಉತ್ತೇಜಿಸುವುದನ್ನು ದಾಖಲಿಸಲಾಗಿದೆ.
ಪ್ರಚೋದಕಗಳ ನಿಯಂತ್ರಕರು:
ಸಸ್ಯದ ವಿವಿಧ
ಬೆಳವಣಿಗೆ ಹಂತಗಳನ್ನು ಶಾರಿರೀಕ ಪ್ರಕ್ರಿಯೆಗಳನ್ನು ನಿಯಂತ್ರಿಸುವ ವಿವಿಧ ಪ್ರಚೋದಕಗಳ ಬಗ್ಗೆ ತಿಳಿದಾಯ್ತು.
ಈ ಪ್ರಚೋದಕಗಳನ್ನೂ ನಿಯಂತ್ರಿಸುವ ಇನ್ನೊಂದು ಜಾಣ ವ್ಯವಸ್ಥೆ ಸಸ್ಯಗಳಲ್ಲಿದೆ. ಇದರಲ್ಲಿ ಮುಖ್ಯವಾದದ್ದು
ಅನುವಂಶಿಕ ಧಾತುಗಳು (ಜೀನ್ಸ್) ಮತ್ತು ಬಾಹ್ಯ ಪ್ರಚೋದನೆಗಳು (ಬೆಳಕು, ತಾಪಮಾನ, ಆರ್ದ್ರತೆ, ಪೋಷಕಾಂಶ
ಲಭ್ಯತೆ, ಜೈವಿಕ ಒತ್ತಡ ಇತ್ಯಾದಿ). ಸಸ್ಯ ಜೀವಕೋಶದಲ್ಲಿರುವ ಅನುವಂಶಿಕ ವಸ್ತುಗಳು ಸಸ್ಯದ ಬೆಳವಣಿಗೆ
ಹಂತ ಮತ್ತು ಪರಿಸರದ ಪರಿಸ್ಥಿತಿಗಳಿಗೆ ಅನುಗುಣವಾಗಿ ಆನ್-ಆಫ್ ಆಗುತ್ತವೆ. ಹೀಗೆ ಅಗತ್ಯ ಸಂದರ್ಭದಲ್ಲಿ,
ಅಗತ್ಯ ಪ್ರಮಾಣದಲ್ಲಿ, ಅಗತ್ಯ ಪ್ರಚೋದಕ ಉತ್ಪತ್ತಿಯಾಗುವುದನ್ನು ಸಸ್ಯ ಖಚಿತಪಡಿಸಿಕೊಳ್ಳುತ್ತದೆ.
ಕೆಲವು ಸಲ ಪ್ರಚೋದಕಗಳ ಪ್ರಮಾಣ ಒಂದು ನಿರ್ದಿಷ್ಟ ಮಿತಿ ತಲುಪಿದಾಗ ತಾನಾಗಿಯೇ ಉತ್ಪಾದನೆ ನಿಲ್ಲುತ್ತದೆ.
ಪ್ರಚೋದಕಗಳ ಬಳಕೆಯ
ಬಗೆಯಿರುವ ತಪ್ಪು ಗ್ರಹಿಕೆಗಳು:
1920ರ ದಶಕದ ಆರಂಭದಲ್ಲಿ ‘ಇನ್ಸುಲಿನ್’ ಅನ್ನು ಮೊದಲು
ಕಂಡುಹಿಡಿದಾಗ, ಅದರ ಬಳಕೆಯ ಬಗ್ಗೆ ಸಾಕಷ್ಟು ಅನುಮಾನಗಳು ಮತ್ತು ಹಿಂಜರಿಕೆಗಳು ಇದ್ದವು. ಪ್ರಾಣಿಗಳಿಂದ
ಹೊರತೆಗೆಯಲಾದ ಹಾರ್ಮೋನ್ ಅನ್ನು ಮನುಷ್ಯರಿಗೆ ಪರಿಚಯಿಸುವ ಬಗ್ಗೆ ಜನರು ಸಂದೇಹ ವ್ಯಕ್ತಪಡಿಸಿದರು.
ಇಂದು ಇನ್ಸುಲಿನ್ ಮಧುಮೇಹಕ್ಕೆ ವರದಾನವಾಗಿದೆ. ಇನ್ಸುಲಿನ್ ಬಳಕೆಗೆ ಮೊದಮೊದಲು ಎದುರಾದ ವಿರೋಧದಂತೆ
ಕೃಷಿಯಲ್ಲಿ ಸಸ್ಯ ಪ್ರಚೋದಕಗಳ ಬಳಕೆ ಬಗ್ಗೆ ಜನಸಾಮಾನ್ಯರು ಮತ್ತು ರೈತರಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆ.
ಹಬ್ಬದ ಸೀಸನ್ ಬಂದಾಗ ಹಣ್ಣು ಕಾಯಿ ಮಾಗಿಸುವುದರ ಬಗ್ಗೆ ಪತ್ರಿಕೆಗಳಲ್ಲಿ ಬರುವ ವರದಿಗಳು ಜನರನ್ನು
ಇನ್ನಷ್ಟು ದಿಕ್ಕು ತಪ್ಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಚೋದಕಗಳ ಬಗ್ಗೆ ಈವರೆಗೆ ನೀಡಿರುವ ತಿಳುವಳಿಕೆ
ಸರಿ ತಪ್ಪು ನಿರ್ಧರಿಸುವಲ್ಲಿ ಉಪಯುಕ್ತವಾಗಬಹುದು. ಸಸ್ಯಪ್ರಚೋದಕಗಳ ಬಗ್ಗೆ ಗೊಂದಲ ಪರಿಹರಿಸುವ ಕೆಲ
ವಿಷಯಗಳು ಈ ಕೆಳಗಿನಂತಿವೆ.
·
ಸಸ್ಯ
ಹಾರ್ಮೋನುಗಳು ಅಸ್ವಾಭಾವಿಕ ಮತ್ತು ಕೃತಕ: ಬಹುತೇಕ ಜನ ಹಾರ್ಮೋನುಗಳೆಂದರೆ ಕೈಗಾರಿಕೆಗಳಲ್ಲಿ ಕೃತಕವಾಗಿ
ಉತ್ಪಾದಿಸುವ ಅಪಾಯಕಾರಿ ರಾಸಾಯನಿಕಗಳೆಂದೇ ತಿಳಿದಿದ್ದಾರೆ. ಆದರೆ ನಿಜಕ್ಕೂ ಹಾರ್ಮೋನುಗಳು ಸಸ್ಯಗಳಲ್ಲಿ
ನೈಸರ್ಗಿಕವಾಗಿ ಉತ್ಪತ್ತಿಯಾಗುವ ವಸ್ತುಗಳಾಗಿವೆ. ಇವುಗಳ ಸಂಶ್ಲೇಷಿತ ರೂಪಗಳು ಅಸ್ತಿತ್ವದಲ್ಲಿವೆ
ಮತ್ತು ಕೃಷಿಯಲ್ಲಿ ಬಳಕೆಯಲ್ಲಿವೆ, ಆದರೆ ಅವು ಸಸ್ಯಗಳಲ್ಲಿ ನೈಸರ್ಗಿಕವಾಗಿ ಸಂಭವಿಸುವ ವಸ್ತುಗಳನ್ನು
ಅನುಕರಿಸುವ ಕಾರಣ ಅಪಾಯಕಾರಿಯಲ್ಲ.
·
ಸಸ್ಯ
ಹಾರ್ಮೋನುಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕ: ನೈಸರ್ಗಿಕವಾಗಿರಲಿ ಸಂಶ್ಲೇಷಿತವಾಗಿರಲಿ ಸಸ್ಯ ಹಾರ್ಮೋನುಗಳು
ನಮ್ಮ ಆರೋಗ್ಯಕ್ಕೆ ಹಾನಿಕಾರಕವಲ್ಲ. ಪ್ರಾಣಿಗಳಲ್ಲಿರುವ ಹಾರ್ಮೋನುಗಳಿಗೂ ಸಸ್ಯ ಹಾರ್ಮೋನುಗಳಿಗೂ ರಚನೆ,
ಕಾರ್ಯವೈಖರಿಯಲ್ಲಿ ಅಜಗಜಾಂತರ ವ್ಯತ್ಯಾಸ. ಹಾಗಾಗಿ ಹಾರ್ಮೋನ್ ಬಳಸಿ ಮಾಗಿದ ಹಣ್ಣುಗಳನ್ನು ಸೇವಿಸುವುದರಿಂದ
ಮನುಷ್ಯರ ಹಾರ್ಮೋನ್ ಅಸಮತೋಲನವಾಗಲು ಸಾಧ್ಯವೇಇಲ್ಲ.
·
ಮಾರುಕಟ್ಟೆಯಲ್ಲಿ
ಲಭ್ಯವಿರುವ ದೊಡ್ಡ ಗಾತ್ರದ ಹಣ್ಣು ತರಕಾರಿಗಳನ್ನು ಹಾರ್ಮೋನ್ ಸಿಂಪಡಿಸಿ ಪಡೆಯಲಾಗುತ್ತದೆ: ಮಾರುಕಟ್ಟೆಯಲ್ಲಿ
ಸಹಜ ಗಾತ್ರಕ್ಕಿಂತ ದೊಡ್ಡದಾದ ಹಣ್ಣು ಕಂಡರೆ ಇದು ‘ಹಾರ್ಮೋನ್ ಟ್ರೀಟೆಡ್’ ಎಂಬ ಭ್ರಮೆ ಉಂಟಾಗುವುದು
ಸಹಜ. ಆದರೆ ಇದು ನಿಜವಲ್ಲ. ಹಣ್ಣುಗಳ ಗಾತ್ರ ಅವುಗಳ ತಳಿ ಅವಲಂಬಿತ. ಹಾರ್ಮೋನ್ ಬಳಕೆಯಿಂದ ಕಾಯಿಯ
ಬೆಳವಣಿಗೆಯನ್ನು ಸುಧಾರಿಸಬಹುದೇ ಹೊರತು ಅಸಹಜವಾಗಿ ಗಾತ್ರ ಹಿಗ್ಗಿಸಲು ಸಾಧ್ಯವಿಲ್ಲ. ಮನುಷ್ಯರಲ್ಲಿ
ಬೆಳವಣಿಗೆಗೆ ಪೂರಕವಾಗಿ ತಿಂದು ಬಾಡಿ ಬಿಲ್ಡಿಂಗ್ ಮಾಡಿದಂತೆ ನಿಮ್ಮ ಊಹೆಯಾದರೆ ಅದು ಸಸ್ಯಗಳಿಗೆ ಅನ್ವಯವಾಗುವುದಿಲ್ಲ.
·
ಹಾರ್ಮೋನ್
ಗಳು ನಮ್ಮ ಊಟದ ತಟ್ಟೆಯನ್ನು ವಿಷಮಯವಾಗಿಸುತ್ತವೆ: ಬಾಳೆ, ಮಾವು ಇತರೇ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು
ಹಣ್ಣಿನ ಮಂಡಿಗಳಲ್ಲಿ ಗುಲಾಬಿ ಬಣ್ಣದ ಎಥೆಲಿನ್ ದ್ರಾವಣವನ್ನು ಬಳಸಲಾಗುತ್ತದೆ. ಇದು ತಪ್ಪು ಎಂಬ ಕಲ್ಪನೆಯು
ಹಲವರಲ್ಲಿದೆ. ಆದರೆ ಸಮರ್ಪಕ ಬಳಕೆಯಾದಲ್ಲಿ ನಿಜಕ್ಕೂ ಇದೊಂದು ಸುರಕ್ಷಿತ ವಿಧಾನವಾಗಿದೆ. ಕಾಯಿಗಳಲ್ಲಿ
ನೈಸರ್ಗಿಕವಾಗಿ ಮಾಗುವ ಪ್ರಕ್ರಿಯೆಯನ್ನು ವೇಗಗೊಳಿಸುವ ಈ ವಿಧಾನ ನಮ್ಮ ಆಹಾರವನ್ನು ಹಾಳು ಮಾಡುವುದಿಲ್ಲ.
ಅಷ್ಟಕ್ಕೂ ಎಥೆಲಿನ್ ಅನಿಲರೂಪಿಯಾಗಿದ್ದು ಆವಿಯಾಗಿ ಹೋಗುವ ಕಾರಣ ಅದು ಹಣ್ಣುಗಳಲ್ಲಿ ಶೇಷವಾಗಿರಲು
ಸಾಧ್ಯವಿಲ್ಲ.
·
ಸಸ್ಯ
ಹಾರ್ಮೋನುಗಳು ಪರಿಸರಕ್ಕೆ ಹಾನಿಕಾರಕ: ಈ ಕಲ್ಪನೆಯು ಬಹುಶಃ ಸಂಶ್ಲೇಷಿತ ಕೃತಕ ರೂಪಿಗಳಿಗೆ ಸಂಬಂಧಿಸಿದ
ಭಯವಾಗಿದೆ. ವಾಸ್ತವದಲ್ಲಿ ಈ ರಾಸಾಯನಿಕ ಸಂಯುಕ್ತಗಳು ಪರಿಸರದಲ್ಲಿ ಕ್ಷಿಪ್ರವಾಗಿ ವಿಘಟನೆ ಹೊಂದುವ
ಕಾರಣ ಇಂತಹ ಭಯ ಸಲ್ಲ. ಅತಿಯಾಗಿ ಮಿತಿಮೀರಿ ದುರುಪಯೋಗಿಸಿದರೆ ಅಮೃತವೂ ವಿಷವಾಗುವಂತೆ ಅಡ್ಡ ಪರಿಣಾಮಗಳನ್ನು
ಕಾಣಬಹುದು. ಹಾಗಾಗಿ ಸಮಯೋಚಿತ, ಸೂಕ್ತ ಪ್ರಮಾಣದ ಬಳಕೆ ಕಡ್ಡಾಯ.
·
ಹಾರ್ಮೋನುಗಳಿಗೆ
ಸಾವಯವ ಕೃಷಿಯಲ್ಲಿ ಮಾನ್ಯತೆಯಿಲ್ಲ: ಸಸ್ಯ ಹಾರ್ಮೋನುಗಳನ್ನು ರಾಸಾಯನಿಕ ಕೃಷಿ ವ್ಯವಸ್ಥೆಗಳಲ್ಲಿ ಮಾತ್ರ
ಬಳಸಲಾಗುತ್ತದೆ ಎಂಬುದು ತಪ್ಪು ಕಲ್ಪನೆ. ಸಾವಯವ ಕೃಷಿ ವ್ಯವಸ್ಥೆಗಳು ಸಹ ಸಸ್ಯ ಹಾರ್ಮೋನುಗಳನ್ನು
ಬಳಸುತ್ತವೆ, ಇವು ಹೆಚ್ಚಿನ ಬಾರಿ ಸೂಕ್ಷ್ಮಾಣುಜೀವಿ ಅಥವಾ ಸಸ್ಯ ಜನ್ಯವಾಗಿರುತ್ತವೆ.
·
ಹಾರ್ಮೋನ್
ಬಳಕೆ ಕ್ಯಾನ್ಸರ್ ಉಂಟುಮಾಡುತ್ತದೆ: ಯಾವುದೇ ಸಸ್ಯಪ್ರಚೋದಕವೂ ಕ್ಯಾನ್ಸರ್ ಕಾರಕ ಗುಣಗಳನ್ನು ಹೊಂದಿಲ್ಲ.
ಕೃಷಿಯಲ್ಲಿ ಬಳಸುವ ಸಂಶ್ಲೇಷಿತ ಸಸ್ಯ ಹಾರ್ಮೋನುಗಳು ಮಾನವ ಬಳಕೆಗೆ ಸುರಕ್ಷಿತವೆಂಬುದು ವೈಜ್ಞಾನಿಕವಾಗಿ
ಖಚಿತ.
·
ಕೃಷಿ
ಬೆಳೆಗಳಲ್ಲಿ ಹಾರ್ಮೋನ್ ಸಿಂಪಡಿಸಿದರೆ ಹೆಚ್ಚಿನ ಇಳುವರಿ ಲಾಭ ಗ್ಯಾರಂಟಿ: ಹಾರ್ಮೋನುಗಳೇನು ‘ಮ್ಯಾಜಿಕ್’
ದ್ರಾವಣಗಳಲ್ಲ. ಸೂಕ್ತವಾದ ಪರಿಸ್ಥಿತಿಗಳಲ್ಲಿ ಬೆಳೆಗಳ ಬೆಳವಣಿಗೆ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದಾದರೂ,
ಹಾರ್ಮೋನುಗಳಿಂದ ಮಹಾಜಾದೂ ಜರುಗುವ ಖಾತ್ರಿಯಿಲ್ಲ.
·
ಹಾರ್ಮೋನುಗಳು
ಎಲ್ಲಾ ಸಸ್ಯಗಳಲ್ಲಿ ಒಂದೇ ರೀತಿ ಕಾರ್ಯನಿರ್ವಹಿಸುತ್ತವೆ: ಹಾರ್ಮೋನುಗಳ ಸಿಂಪಡಣೆ ಎಲ್ಲಾ ಬೆಳೆಗಳ
ಮೇಲೆ ಒಂದೇ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಆದರೆ ಹಾರ್ಮೋನ್ ಪ್ರಭಾವವು
ಸಸ್ಯ ಜಾತಿಯಿಂದ ಜಾತಿಗೆ ಭಿನ್ನವಾಗಿದೆ; ತಮ್ಮ ಆನುವಂಶಿಕ ರಚನೆ ಮತ್ತು ಪರಿಸರದ ಪರಿಸ್ಥಿತಿಗಳ ಆಧಾರದ
ಮೇಲೆ ಅವು ಅನನ್ಯವಾಗಿ ಪ್ರತಿಕ್ರಿಯಿಸುತ್ತವೆ. ಉದಾಹರಣೆಗೆ, ಜಿಬ್ಬರೆಲಿನ್‌ಗಳು ಒಂದು ಜಾತಿಯಲ್ಲಿ
ಕಾಂಡದ ಉದ್ದವನ್ನು ಉತ್ತೇಜಿಸಬಹುದು ಆದರೆ ಇನ್ನೊಂದರ ಮೇಲೆ ಯಾವುದೇ ಪರಿಣಾಮ ಬೀರದೇ ಇರಬಹುದು.
·
ಕೃಷಿಯಲ್ಲಿ
ಹಾರ್ಮೋನುಗಳ ಬಳಕೆ ಇತ್ತೀಚಿನ ಆವಿಷ್ಕಾರವಾಗಿದೆ: ಸಸ್ಯ ಹಾರ್ಮೋನುಗಳ ಬಳಕೆಯು ಆಧುನಿಕ ಕೃಷಿ ಪದ್ಧತಿಯಾಗಿದೆ
ಎಂಬ ನಂಬಿಕೆಯಾಗಿದೆ. ಆದಾಗ್ಯೂ, ಸಸ್ಯ ಹಾರ್ಮೋನುಗಳ ಆವಿಷ್ಕಾರ ಮತ್ತು ಅನ್ವಯವು ಒಂದು ಶತಮಾನದಷ್ಟು
ಹಿಂದಿನದು. ಹಾರ್ಮೋನುಗಳು ದಶಕಗಳಿಂದ ಕೃಷಿ ವಿಜ್ಞಾನದ ಭಾಗವಾಗಿದೆ.
Comments
Post a Comment