ಸರಳ ಅಲಂಕಾರಕ್ಕೆ ಸಿಂಗೋನಿಯಮ್‌

“ಈ ಅಡಿಕೆ ಸಸಿ ನೀ ಹುಟ್ಟಿದ ವರ್ಷವೇ ನೆಟ್ಟದ್ದು, ಈ ತೋಟಕ್ಕೆ ನಿನ್ನಷ್ಟೇ ವರ್ಷವಾಯಿತು”, “ನೀ ಹುಟ್ಟಿದಾಗ ಹಾಲು ಕೊಟ್ಟಿತ್ತಲ್ಲ ಗೌರಿ ಆಕಳು, ನಿನ್ನ ಹೆರಿಗೆಗೆ ಅದರ ಕರು ಹಾಲು ಕೊಡುತ್ತೆ ನೋಡ್ತಿರು” ನನ್ನಮ್ಮ ಪದೇ ಪದೇ ನೆನಪಿಸಿಕೊಳ್ಳುವ ಸಂಗತಿಗಳಿವು. ನಾ ಹುಟ್ಟಿದಾಗ ನನ್ನ ಹೆತ್ತವಳು ಅಮ್ಮನಾಗುವ, ನನಗೆ ಮಗುವಾದಾಗ ಆಕೆ ಅಜ್ಜಿಯಾಗುವ ಮನುಷ್ಯ ಸಂಬಂಧಗಳೇನೋ ನಮ್ಮೊಡನೆಯೆ ಬೆಳೆಯುತ್ತವೆ. ಯೌವನ, ವೃದ್ಧಾಪ್ಯಗಳು ನಮ್ಮ ಶರೀರ, ಚಹರೆಯಲ್ಲಿಯೂ ಕಾಣುವುದು ಸಹಜ. ಆದರೆ ಪಶುಪಕ್ಷಿ ಮರಗಿಡಗಳ ಜೊತೆಗಿನ ಮನುಷ್ಯೇತರ ಸಂಬಂಧಗಳೂ ಬೆಳೆಯುವುದು, ಅವುಗಳ ಯೌವನ, ವೃದ್ಧಾಪ್ಯಗಳೂ ನಮ್ಮ ಜೀವನದ ಭಾಗವಾಗುವುದು ವಿಶೇಷ.

ಮತ್ತಷ್ಟು ಹರವು ಹೊಂದುವುದು, ಹಿಳ್ಳುಮರಿ ಹೊರಬರುವುದು, ಹೂ ಬಿಡುವುದು, ಅಲಂಕಾರಿಕ ಸಸ್ಯಗಳೆಲ್ಲಾ ವಯಸ್ಸಾಗುವುದೆಂದರೆ ಹೀಗೆ. ಇದಕ್ಕೂ ಮೀರಿ ತನ್ನ ಒಡೆಯನ ಜೊತೆಜೊತೆಗೆ ವಯಸ್ಸಾಗುವ ಲಕ್ಷಣಗಳನ್ನು ಚಹರೆಯಲ್ಲಿ ತೋರ್ಪಡಿಸುವ ಅಲಂಕಾರಿಕ ಸಸ್ಯವೊಂದಿದ್ದರೆ ಅದು ಸಿಂಗೋನಿಯಮ್. ಮೊದಮೊದಲು ಸರಳವಾಗಿರುವ ಎಲೆಗಳು ವಯಸ್ಸಾಗುತ್ತಿದ್ದಂತೆ ಮೂರು, ಐದು ಮತ್ತಷ್ಟು ಹಾಲೆಗಳಾಗಿ ಸೀಳುವ ಸಿಂಗೋನಿಯಮ್ ಸಸ್ಯದ ಪರಿವರ್ತನೆಯ ಪಯಣವೇ ಮ್ಯಾಜಿಕಲ್.

ಸಿಂಗೋನಿಯಮ್ ನಮ್ಮ ಸುತ್ತ ತೀರಾ ಸಾಮಾನ್ಯವಾಗಿ ಕಂಡುಬರುವ ಅಲಂಕಾರಿಕ ಸಸ್ಯ. ಕಚೇರಿಯ ಒಳಾಂಗಣದ ಬೆಡ್ಡಿಂಗ್ ನಲ್ಲಿ ತೆವಳುತ್ತಾ ಅಥವಾ ಪಾರ್ಕುಗಳಲ್ಲಿ ಯಾವುದೋ ಮರಕ್ಕೆ ಹಬ್ಬಿ ಹೋಗುತ್ತಿರುವ ಸಿಂಗೋನಿಯಮ್ ಅನ್ನು ಕಂಡೇ ಕಂಡಿರುತ್ತೇವೆ. ಇದರ ಗಟ್ಟಿತನವೇಇದರ ಜನಪ್ರಿಯತೆಗೆ ಕಾರಣ. ಎಳೆ ವಯಸ್ಸಿನ ಎಲೆಗಳು ಬಾಣದ ತುದಿಯನ್ನು ಹೋಲುವ ಕಾರಣ ಈ ಗಿಡಕ್ಕೆ ‘ಆ್ಯರೋ ಹೆಡ್’ ಎಂದೂ, ವಯಸ್ಸಾದ ಎಲೆಗಳು ಬಾತುಕೋಳಿಗಳ ಪಾದದ ಆಕಾರವನ್ನು ಹೋಲುವ ಕಾರಣ ‘ಗೂಸ್ ಫೂಟ್’ ಎಂದು ಕರೆಯಲಾಗುತ್ತದೆ. ಇವುಗಳ ತವರು ಲ್ಯಾಟಿನ್ ಅಮೇರಿಕಾದ ವನ್ಯಪ್ರದೇಶ.

ಸಿಂಗೋನಿಯಮ್ ಗಳ ಆರೈಕೆ ಕಾಳಜಿ ಬಹಳ ಸುಲಭ. ಒಳಾಂಗಣದಲ್ಲಿ ಇವುಗಳ ಬೆಳವಣಿಗೆಗೆ ಪ್ರಕಾಶಮಾನವಾದ ಬೆಳಕೇ ಬೇಕೆಂದಿಲ್ಲ; ಕೋಣೆ ಮೂಲೆಯ ಮಬ್ಬು ಬೆಳಕಾದರೂ ಸರಿ. ಹೊರಾಂಗಣದಲ್ಲಾದರೆ ಮರದ ನೆರಳು ಸೂಕ್ತ. ತೇವವಾಗಿರುವ ಮಣ್ಣನ್ನು ಬಯಸುವುದರಿಂದ ಆಗಾಗ ನೀರು; ಅದಕ್ಕಿಂತ ಮುಖ್ಯವಾಗಿ ತೇವಾಂಶ ಕಾಪಾಡಲು ನೀರು ಸಿಂಪಡಣೆ ಮಾಡುವುದರಿಂದ ಎಲೆಗಳು ತಾಜಾತವನ್ನು ಹೊಂದಿ ನಳನಳಿಸುತ್ತವೆ; ಹೀಗೆ ಮಾಡುವುದರಿಂದ ಎಲೆಯ ತುದಿ ಸುಟ್ಟು ಹಳದಿಯಾಗುವ ಸಂಭವವೂ ಕಡಿಮೆ.

ಸಿಂಗೋನಿಯಮ್ ಗಳು ವೇಗವಾಗಿ ಬೆಳೆವಣಿಗೆ ಹೊಂದುತ್ತವೆ. ಆಗಾಗ ಟ್ರಿಮ್ ಮಾಡುತ್ತಾ ರಿಪಾಟಿಂಗ್ ಮಾಡುತ್ತಾ ಕುಂಡದಲ್ಲಿ ಪೊದೆಯಾಗಿ ಬೆಳೆಸಬಹುದು; ಆಧಾರ ಕೊಟ್ಟು ಬಳ್ಳಿಯಂತೆ ಹಬ್ಬಿಸಬಹುದು; ಅಥವಾ ತೂಗುಕುಂಡಗಳಲ್ಲಿ ತೂಗು ಹಾಕಲೂ ಬಹುದು. ದಟ್ಟ ಹಸಿರು, ತಿಳಿ ಹಸಿರು, ನಿಯಾನ್ ಪಿಂಕ್, ಚಾಕೋಲೇಟ್, ಬೆಳ್ಳಿ-ಬಂಗಾರ ಬಣ್ಣದ ಎಲೆಯ ವೈವಿಧ್ಯಮಯ ವಿನ್ಯಾಸದ ಸಿಂಗೋನಿಯಮ್ ಗಳಿವೆ. ವೈಟ್ ಬಟರ್ ಫ್ಲೈ, ಪಿಕ್ಸಿ, ಸ್ಟ್ರಾಬೆರಿ ಕ್ರೀಮ್, ವೆಂಡಲಾಂಡಿ, ಪಿಂಕ್ ಸ್ಪ್ಲಾಷ್, ಕಾನ್ಫೆಟ್ಟಿ, ಹೀಗೆ ಅವುಗಳ ವಿನ್ಯಾಸವನ್ನಾಧರಿಸಿ ನಾಮಕರಣವನ್ನೂ ಮಾಡಲಾಗಿದೆ.

ಅಲಂಕಾರಿಕ ಒಳಾಂಗಣ ಸಸ್ಯ ಲೋಕಕ್ಕೆ ನಿಮ್ಮದು ಹೊಸ ಎಂಟ್ರಿಯಾದಲ್ಲಿ ನೀವು ಕೊಳ್ಳುವ ಮೊದಲ ಸಸ್ಯ ಸಿಂಗೋನಿಯಮ್ ಆಗಿರಲಿ. ಈಗಾಗಲೇ ನೀವು ಸಿಂಗೋನಿಯಮ್ ಹೊಂದಿದ್ದರೆ ಟ್ರಿಮ್ ಮಾಡಿ ತಿರಸ್ಕರಿಸುವ ಸಮಯದಲ್ಲಿ  ಸಸ್ಯದ ಭಾಗಗಳನ್ನು ಸರಿಯಾಗಿ ವಿಲೇವಾರಿ ಮಾಡಿ. ಕೆಲ ದೇಶಗಳಲ್ಲಿ ಈಗಾಗಲೇ ಆಕ್ರಮಣಕಾರಿಯಾಗಿ ಬೆಳೆಯುತ್ತಿರುವ ಕಾರಣ ನಿಸರ್ಗಕ್ಕೆ ಹಬ್ಬದಂತೆ ಲಕ್ಷ್ಯ ವಹಿಸಿ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ