ಹೋಯಾ - ಸಸ್ಯ ಪ್ರೇಮಿಗಳ ಹೊಸ ಆಯ್ಕೆ
ಇದೇ ಪ್ಯಾಟರ್ನ್ ನಲ್ಲಿ ಬೇರೆ ಕಲರ್ ಇದೆಯಾ? ಹೋಗ್ಲಿ, ಇದೇ ಕಲರಲ್ಲಿ ಬೇರೆ ಪ್ಯಾಟರ್ನ್!, ಬಟ್ಟೆ ಅಂಗಡಿಯಲ್ಲಿ ಹೆಂಗಸರ ಕಲರ್-ಪ್ಯಾಟರ್ನ್ ಜಂಜಾಟದ ಬಗ್ಗೆ ಗೊತ್ತಿದ್ದದ್ದೆ. ಇದಕ್ಕೆ ಗಾರ್ಡನ್ನಿಗರೂ ಹೊರತಲ್ಲ. ಬೇರೆ ಪ್ಯಾಟರ್ನ್ ಎನ್ನುತ್ತಾ ಗಂಟೆ-ಜುಮುಕಿ-ಒಂದು, ಎರಡು, ನಾಲ್ಕಾರು ಸುತ್ತಿನ ಪಕಳೆ; ಬೇರೆ ಕಲರ್ ಎನ್ನುತ್ತಾ ಬಣ್ಣಬಣ್ಣದ ಎಸಳಿನ ದಾಸವಾಳಗಳನ್ನು ಸಂಗ್ರಹಿಸುವ ಸಸ್ಯಪ್ರೇಮಿಗಳನ್ನು ನೋಡಿರುತ್ತೀರಾ. ದಾಸವಾಳದಂತೆ ಎಷ್ಟು ಸಂಗ್ರಹಿಸಿದರೂ ಮುಗಿಯದ ವೈವಿಧ್ಯಮಯ ಕಲರ್-ಪ್ಯಾಟರ್ನ್ ಹೊಂದಿರುವ ಇನ್ನೊಂದು ಸಸ್ಯಕುಲ ‘ಹೋಯಾ’.
ಈಗೊಂದು ದಶಕದ ಹಿಂದೆ ಹೆಸರೇ ಕೇಳಿರದ ಹೋಯಾ ಇತ್ತೀಚೆಗೆ ಗದ್ದಲ ಮಾಡುತ್ತಿರುವ ಅಲಂಕಾರಿಕ ಸಸ್ಯ. ಚಿಕ್ಕ ಚಿಕ್ಕ ನಕ್ಷತ್ರದಂತ ಹೂವುಗಳು ಸೇರಿ ಕ್ರಿಕೆಟ್ ಚೆಂಡಿನ ಗಾತ್ರದ ಗೊಂಚಲಾಗಿ ಅರಳುವ ಹೋಯಾದ ಅಭಿಮಾನಿಗಳು ಹಲವಾರು. ಮೇಣದ ಹೊಳಪನ್ನು ಹೊದ್ದಿರುವ ಹೋಯಾಗಳನ್ನು ‘ವ್ಯಾಕ್ಸ್ ಪ್ಲಾಂಟ್’ ಎಂದೂ ಕರೆಯುವುದಿದೆ. ಆಸ್ಟ್ರೇಲಿಯಾ, ಆಗ್ನೇಯ ಏಷಿಯಾದಲ್ಲಿ ಹುಟ್ಟಿದ ಹೋಯಾಗಳು ಇಂದು ಪ್ರಪಂಚದಲ್ಲೆಡೆ ಪಸರಿಸಿವೆ. ಭಾರತಕ್ಕೂ ಸ್ಥಳೀಯವಾದ ಹಲವಾರು ವನ್ಯ ಪ್ರಭೇದಗಳಿವೆ; ಇನ್ನೂ ಅನ್ವೇಷಣೆಯಾಗುತ್ತಿವೆ. ವನ್ಯಪ್ರದೇಶದಲ್ಲಿ ಮರಕ್ಕೆ ಅಪ್ಪಿ ಬೆಳೆಯುವ ಹೋಯಾಗಳನ್ನು ಆರ್ಕಿಡ್ ಗಳೆಂದು ತಪ್ಪಾಗಿ ಗುರುತಿಸುವ ಸಂಭವವೂ ಇದೆ.
ಆಸ್ಟ್ರೇಲಿಯಾದ ಪ್ರವಾಸದಲ್ಲಿದ್ದಾಗ ಹೋಯಾಗಳನ್ನು ಗುರುತಿಸಿ ವರ್ಗೀಕರಣ ಮಾಡಿದ್ದು 18ನೇ ಶತಮಾನದ ಪ್ರಸಿದ್ಧ ವಿಜ್ಞಾನಿ ‘ರಾಬರ್ಟ್ ಬ್ರೌನ್’. ಸಸ್ಯಶಾಸ್ತ್ರಜ್ಞನೂ ತೋಟಿಗನೂ ಆಗಿದ್ದ ತನ್ನ ಗೆಳೆಯ ‘ಥಾಮಸ್ ಹೋಯ್‘ನ ಸ್ಮರಣಾರ್ಥ ‘ಬ್ರೌನ್’ ತಾನು ಅನ್ವೇಷಿಸಿದ ಹೊಸ ಸಸ್ಯಕುಲಕ್ಕೆ ‘ಹೋಯಾ’ಗಳೆಂದು ನಾಮಕರಣ ಮಾಡಿದ್ದ. ಆ ಮೂಲಕ ‘ಹೋಯ್’ನ ಜ್ಞಾನ ಪರಿಣತಿ ಅಮರವಾಯಿತು.
ಪ್ರಕಾಶಮಾನವಾದ ಆದರೆ ಪರೋಕ್ಷ ಸೂರ್ಯನ ಬೆಳಕು ಇವುಗಳ ಆಯ್ಕೆ. ಹಾಗಾಗಿ ಹೊರಾಂಗಣದಲ್ಲಿ ಮರದಡಿಯ ನೆರಳು ಅಥವಾ ಒಳಾಂಗಣದಲ್ಲಿ ಕಿಟಕಿ ಪಕ್ಕದಲ್ಲಿ ಇಣುಕುವ ಬೆಳಕು ಇವುಗಳಿಗೆ ಸೂಕ್ತ. ಆದರೆ ಹೂ ಬಿಡಲು ಮಾತ್ರ ಪ್ರತಿದಿನ ಕನಿಷ್ಟ ಏಳೆಂಟು ಘಂಟೆಯ ಪ್ರಕಾಶಮಾನವಾದ ಬೆಳಕು ಬೇಕೇ ಬೇಕು. ಸದಾ ತೇವವಾಗಿರುವ ಆದರೆ ನೀರು ಬಸಿಯುವ ಪೌಷ್ಟಿಕ ಮಣ್ಣು ಇವುಗಳ ಅಗತ್ಯತೆ. ಹೆಚ್ಚಿನ ಆರ್ದ್ರತೆಯ ವಾತಾವರಣಕ್ಕೆ ಇವು ಒಗ್ಗಿಕೊಂಡಿರುತ್ತವೆಯಾದರೂ ರಸಭರಿತ ಎಲೆಗಳನ್ನು ಹೊಂದಿರುವ ಕಾರಣ ಸಕ್ಯುಲೆಂಟ್ ಗಳಂತೆ ಶುಷ್ಕ ವಾತಾವರಣವನ್ನೂ ಸಹಿಸಿಕೊಳ್ಳಬಲ್ಲವು. ನಿಧಾನವಾಗಿ ಬೆಳವಣಿಗೆ ಹೊಂದುವ ಬಳ್ಳಿ ನಿತ್ಯ ಹಸುರಿನ ಎಲೆಗಳನ್ನು ಹೊಂದಿ ಒಂದೆರಡು ವರ್ಷದಲ್ಲಿ ದಟ್ಟವಾಗಿ ಬೆಳೆದು ಅಲ್ಲಲ್ಲಿ ಹೂ ಬಿಟ್ಟಾಗ ನೋಡೋವುದೇ ಚಂದ!
ಬಣ್ಣ ಬಣ್ಣದ ಹೂಗಳ ಹೋಯಾ ಕಾರ್ನೋಸಾ, ತಿರುಚುಮುರುಚಾದ ಎಲೆಯ ಹಿಂದೂ ರೋಪ್ , ಹಾರ್ಟ್ ಆಕಾರದ ಎಲೆಗಳ ಹೋಯಾ ಹಾರ್ಟ್, ಹೀಗೆ ಹತ್ತಾರು ಬಗೆಯ ಹೋಯಾಗಳು ಅಂತರ್ಜಾಲದ ಮಾರುಕಟ್ಟೆಯಲ್ಲಿ, ಸಸ್ಯ ನರ್ಸರಿಗಳಲ್ಲಿ ಲಭ್ಯ. ಹುಸಿ ಬೇರುಗಳ ಮೂಲಕ ಬೆಳೆಯುವ ಕಾರಣ ಇವುಗಳನ್ನು ಆಧಾರ ಕೊಟ್ಟು ಬಳ್ಳಿಯಂತೆ ಹಬ್ಬಿಸಬಹುದು; ಅಥವಾ ತೂಗುಕುಂಡಗಳಲ್ಲಿ ಜೋಲಿ ಬೀಳಿಸಿ ಖುಷಿಪಡಬಹುದು. ಆದರೆ ಆಕಾರ ನೀಡಲೆಂದು ಆಗಾಗ ಉದ್ದವಾದ ಎಳೆಗಳನ್ನು ಕತ್ತರಿಸುವುದು ಸಲ್ಲ; ಏಕೆಂದರೆ ಹೊಸ ಹೂವುಗಳು ರೂಪುಗೊಳ್ಳುವುದೇ ಈ ತುದಿಯಲ್ಲಿ.
Comments
Post a Comment