ಬೀಜಾಸುರರು! ಕಾಡಿನ ಉಸಿರು ಕಸಿಯುವ ಕಳೆ ಖೂಳರು
ವಯನಾಡಿನ ಸಂಪದ್ಭರಿತ ತೋಳ್ಪೆಟ್ಟಿ ಕಾಡಿನ ಮಧ್ಯಭಾಗ; ಸೂರ್ಯನ ಬೆಳಕು ನೆಲಕ್ಕೂ ಮುಟ್ಟದಷ್ಟು ಮರಗಳ ದಟ್ಟತೆ; ಹಸಿರಿನ ರಾಶಿ ಕೊಳೆತು ಬಂಗಾರವಾದ ಮಣ್ಣು; ಸದ್ದಿಲ್ಲದೇ ಸೊಂಪು ಹಾಸಿನ ಮೇಲೆ ಆನೆಯ ಲದ್ದಿಯಲ್ಲಿ ಹತ್ತಾರು ಬೀಜಮೊಳಕೆ ಒಡೆಯುತ್ತಿದೆ. ಅನ್ಯಲೋಕದ ಈ ಬೀಜಗಳು ಮುಂದೊಂದು ದಿನ ಆಕ್ರಮಣಕಾರಿಯಾಗಿ ತಮ್ಮ ಬೇರಿನ ಜಾಲ ಬೀಸಿ, ಬೆಳಕಿದ್ದಲ್ಲೆಲ್ಲಾ ಹರವನ್ನು ಚಾಚಿ, ಪಾಪದ ಕಾಡು ಸಸಿಗಳನ್ನು ಉಸಿರುಗಟ್ಟಿ ಸಾಯಿಸಿ, ಜೀಡಾಗಿ ಬೆಳೆದು ವನ್ಯ ಜೀವಿಗಳ ಬದುಕನ್ನೇ ದುಸ್ತರ ಮಾಡಬಲ್ಲ ಯಾವ ಮುನ್ಸೂಚನೆಯೂ ಇಲ್ಲ. ಸಾಮಾಜಿಕ ಅರಣ್ಯಣ್ಯಾಭಿವೃದ್ಧಿಗೆಂದು ಕೇರಳದ ಅರಣ್ಯ ಇಲಾಖೆ 1986ರಲ್ಲಿ ತೋಳ್ಪೆಟ್ಟಿ ಕಾಡುಗಳ ಅಂಚಿನಲ್ಲಿ ನೆಟ್ಟ ಅಮೇರಿಕಾ ಮೂಲದ ‘ ಸೆನ್ನಾ ಸ್ಪೆಕ್ಟಾಬಿಲಿಸ್’ ಎಂಬ ಈ ಸಸ್ಯದ ಕುಕೃತ್ಯಗಳನ್ನು ಅರಿತುಕೊಳ್ಳುವ ಹೊತ್ತಿಗೆ ಮಧುಮಲೈ ಸತ್ಯಮಂಗಲ ಬಂಡೀಪುರ ನಾಗರಹೊಳೆ ಬಿ.ಆರ್ ಹಿಲ್ಸ್ ಹೀಗೆ ಕೇರಳ ತಮಿಳುನಾಡು ಕರ್ನಾಟಕದ ಅರಣ್ಯಶ್ರೇಣಿಗಳು ಅರ್ಧದಷ್ಟು ಹಸಿರು ಮರುಭೂಮಿಯಾಗಿ ಪರಿವರ್ತನೆ ಆಗಿಹೋಗಿದ್ದವು! ಈಗ ಇದೇ ಸೆನ್ನಾ ಸ್ಪೆಕ್ಟಾಬಿಲಿಸ್ ಮತ್ತೆ ಸುದ್ದಿಯಲ್ಲಿದೆ. ಇತ್ತೀಚಿನ ಕೆಲ ಸಂಶೋಧನೆಗಳು ಆತಂಕಕಾರಿ ಮಾಹಿತಿಗಳನ್ನು ಹೊರಹಾಕಿವೆ. ಕಾಡಿನ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ತರುವಂತಹ ಇಂತಹ ಕಳೆಗಳನ್ನು ನಿರ್ವಹಣೆ ಮಾಡುವತ್ತ ಅರಣ್ಯ ಇಲಾಖೆ ಪ್ರಾಶಸ್ತ್ಯ ಕೊಡಬೇಕೆಂದು ಕರ್ನಾಟಕದ ಪರಿಸರ ಸಚಿವಾಲಯವೂ ಆಗಾಗ ಒತ್ತಿ ಹೇಳುತ್ತಿದೆ. ...