ಕಳ್ಳಿ ಹೂ ಅರಳಿದಾಗ

 

ಅಲಂಕಾರಿಕ ಗಿಡಗಳ ಹುಚ್ಚು ಹತ್ತಿದ ಪ್ರಾರಂಭದ ದಿನಗಳಲ್ಲಿ ನಾನು ಲೆಕ್ಕವಿಲ್ಲದಷ್ಟು ಸಸ್ಯಗಳನ್ನು ಖರೀದಿಸಿ ಮನೆಗೆ ತರುತ್ತಿದ್ದೆ. ಅವುಗಳಲ್ಲಿ ಹೆಚ್ಚಿನವು, ಕ್ಯಾಕ್ಟೈ ಮತ್ತು ಸಕ್ಯುಲೆಂಟ್‌ಗಳಾಗಿರುತ್ತಿದ್ದವು. ನಾಲ್ಕಾರು ವರ್ಷದ ನಂತರ, ಈಗ, ಹೂಕುಂಡ ಮೀರಿ ಬೆಳೆದ ಎಲ್ಲಾ ಸಸ್ಯಗಳನ್ನೂ ತಾಯಿಯಿಂದ ಬೇರ್ಪಡಿಸಿ ಮರಿಗಳನ್ನು ಬೆಳೆಸುತ್ತಾ ಪುಟ್ಟದೊಂದು ನರ್ಸರಿಯೇ ನಿರ್ಮಾಣವಾಗಿದೆ. ಇವೆಲ್ಲವನ್ನೂ ನಮ್ಮ ಮನೆಗೆ ಬಂದ ನೆಂಟರಿಗೂ ಅತಿಥಿಗಳಿಗೂ ಹಂಚುತ್ತಾ ಇರುತ್ತೇನೆ. ಹೀಗೆ ಕೊಟ್ಟಾಗೆಲ್ಲಾ ಅವರು ನನ್ನ ಎದುರಿಡುವ ಮೊದಲ ಪ್ರಶ್ನೆ ʼಇದು ಹೂ ಬಿಡುತ್ತಾ?ʼ.

ನಾನು ಗಮನಿಸಿದಂತೆ ಕಳ್ಳಿಗಿಡಗಳೆಂದರೆ ಸ್ಥಳೀಯರಿಗೆ ತಾತ್ಸಾರ. ಮುಳ್ಳು ಮೈಯ ಸಸ್ಯಗಳನ್ನು ಮನೆಯಲ್ಲಿಟ್ಟುಕೊಂಡರೆ ಜಗಳವಾಗುತ್ತದೆಂಬ ಭ್ರಮೆ. ಡೇರೆ, ಸೇವಂತಿಗೆ, ಗುಲಾಬಿ, ಎಲ್ಲರಿಗೂ ಹೂ ಬಿಡುವ ಸಸ್ಯಗಳೆಂದರೇ ಪ್ರೀತಿ. ಕಮಲದ ಹೂ ಪಕ್ಕಕ್ಕಿಡಿ, ಇವರ ಮಟ್ಟಿಗೆ ದಾಸವಾಳವೇ ನ್ಯಾಶನಲ್‌ ಫ್ಲವರ್‌. ಆದರೂ ಇವರೆಲ್ಲರೂ ಬ್ರಹ್ಮಕಮಲ ಎಂದು ತಪ್ಪಾಗಿ ಕರೆಸಿಕೊಳ್ಳುವ ʼಎಪಿಫಿಲ್ಲಮ್ ಆಕ್ಸಿಪೆಟಲಮ್ʼ ಹೂವಾದಾಗ ಮಾತ್ರ ಫೋಟೋ ತೆಗೆಯುವುದೇನು, ಸಾಮಾಜಿಕ ಜಾಲತಾಣದಲ್ಲಿ ಸ್ಟೋರಿ ಹಾಕುವುದೇನು! ಇದೂ ಕೂಡಾ ಕ್ಯಾಕ್ಟೈ ಎಂದು ಗೊತ್ತಿರದೆ!!


ಹೌದು. ಕ್ಯಾಕ್ಟೈಗಳು ಹೂಬಿಡಬಲ್ಲವು. ಹೂಗಳ ಹೊಸಲೋಕವನ್ನೇ ತೆರೆದಿಡಬಲ್ಲವು. ಅಷ್ಟೇ ಏಕೆ, ಪ್ರಪಂಚದ ಕೆಲವೆಡೆ ಕ್ಯಾಕ್ಟೈನ ಹೂವು ಮೊಗ್ಗುಗಳನ್ನು ಹುರಿದು ತರಕಾರಿಯಾಗಿ ಸೇವಿಸುವುದೂ ಇದೆ; ಸಲಾಡ್‌ಗಳಲ್ಲಿ, ಚಹಾಗಳಲ್ಲಿ ಮತ್ತು ಸೂಪ್‌ಗಳಲ್ಲಿ ಬಳಸುವುದೂ ಇದೆ.

ಜಗತ್ತಿನಲ್ಲಿರುವ ಕ್ಯಾಕ್ಟೈ ಜಾತಿಗಳಲ್ಲಿ ತೊಂಭತ್ತೊಂಭತ್ತರಷ್ಟು ಜಾತಿಯವು ಅಮೇರಿಕಾ ಮೂಲದವು. ಅಲ್ಲಿಯ ತಮ್ಮ ನೈಜ ಆವಾಸಸ್ಥಾನಗಳಲ್ಲಿ ಪರಾಗಸ್ಪರ್ಷಕ ಜೀವಿಗಳನ್ನು ಅವಲಂಬಿಸಿ ಹಗಲು ರಾತ್ರಿಯೆಂದು ತಮ್ಮ ಹೂಬಿಡುವ ಸಮಯಗಳನ್ನು ಹೊಂದಿಸಿಕೊಂಡಿವೆ. ಬಾವಲಿಗಳಿಂದ ಪರಾಗಸ್ಪರ್ಷ ಹೊಂದುವ ಹಂಬಲದಿಂದ ರಾತ್ರಿ ಸಮಯದಲ್ಲಿ ಹೂಬಿಡುವ ಹೆಚ್ಚಿನ ಕ್ಯಾಕ್ಟೈಗಳು ಹಮ್ಮಿಂಗ್‌ ಬರ್ಡ್‌ನಂತ ಹಕ್ಕಿಗಳನ್ನು ಆಕರ್ಷಿಸುತ್ತಾ ಹಗಲಲ್ಲೂ ಅರಳಬಲ್ಲವು. ʼಎಪಿಫಿಲ್ಲಮ್‌ʼನಂತೆ ಒಂದೇ ದಿನದಲ್ಲಿ ಬಾಡಿ ಹೋಗಬಲ್ಲವು, ಅಥವಾ ʼಜಿಮ್ನೋʼಗಳಂತೆ ಒಂದು ವಾರದ ವರೆಗೂ ತಾಜಾ ಇರಬಲ್ಲವು. ಈಸ್ಟರ್‌ ಲಿಲಿ, ಮಂಕಿ ಟೇಲ್‌, ಕ್ರಿಸ್‌ಮಸ್‌, ಓಲ್ಡ್‌ ಲೇಡಿ, ಹೆಡ್ಜ್‌ಹಾಗ್‌, ಕ್ರೌನ್‌ ಕ್ಯಾಕ್ಟೈನಂತ ಹತ್ತು ಹಲವು ತರದವು ಕೆಂಪು, ಗುಲಾಬಿ, ಕೇಸರಿ, ಹಳದಿ, ಬಿಳಿ ಬಣ್ಣದ ಹೂಬಿಟ್ಟು ನಿಂತಾಗ ಅವುಗಳ ನೋಟದ ಮಾಟವೇ ಬೇರೆ. ಇವುಗಳನ್ನು ನಾವೇ ಕಾಳಜಿ ವಹಿಸಿ ಪರಾಗಸ್ಪರ್ಷ ಮಾಡಿದರೆ ಬೀಜಗಳನ್ನು ಪಡೆದು ಮತ್ತಷ್ಟು ಗಿಡಗಳನ್ನೂ ತಯಾರಿಸಬಹುದು.

ನಾನೂ ಎಲ್ಲರಂತೆ ಮೊದಮೊದಲು ಕ್ಯಾಕ್ಟೈಗಳನ್ನು ಬಂಜರು ಭೂಮಿಯ ಬಡಪಾಯಿಗಳು ಎಂದುಕೊಂಡಿದ್ದೆ. ಆದರೆ ನನ್ನಲ್ಲಿರುವ ಒಂದೊಂದೇ ಕ್ಯಾಕ್ಟೈ ಹದಿವಯಸ್ಸಿಗೆ ಹೂಬಿಟ್ಟು ನಳನಳಿಸಿದಾಗ ಮುಖ ಅರಿಳಿಸಿದ್ದಿದೆ. ಹೆರಿಗೆಗೆಂದು ತವರು ಮನೆ ಸೇರಿ ಆರೇಳು ತಿಂಗಳ ಮೇಲೆ ವಾಪಸ್ಸು ಮನೆ ಸೇರಿದಾಗ ಕನಿಷ್ಟ ಕಾಳಜಿಯಲ್ಲೂ ಅವು ಜೀವ ಹಿಡಿದಿಟ್ಟುಕೊಂಡ ಪರಿ ನೋಡಿ ಆಶ್ಚರ್ಯ ಪಟ್ಟಿದ್ದಿದ್ದೆ. ವಿರಳವಾಗಿ ಹೂಬಿಟ್ಟರೇನು, ವಿಶೇಷವಾದ ಈ ಸಸ್ಯ ಕುಲವನ್ನು ಇವುಗಳನ್ನು ನೀವೂ ಬೆಳೆಸಿ ನೋಡಿ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ