ಪ್ರತಿವರ್ಷ ಮಾವು ಡಿಸೆಂಬರ್ ನಲ್ಲೇ ಹೂ ಬಿಡುವುದೇಕೆ - ಸಸ್ಯ ಅಂಗರಚನಾ ಶಾಸ್ತ್ರ ಶರೀರ ಶಾಸ್ತ್ರ ಭಾಗ 5

 

ಕಳೆದ ಸಂಚಿಕೆಗಳಲ್ಲಿ ಸಸ್ಯಗಳ ಅಂಗರಚನೆ, ವಾತಾವರಣದ ಒತ್ತಡಗಳಿಗೆ ತಕ್ಕಂತೆ ಅಂಗಾಂಗಗಳ ಮಾರ್ಪಾಡು, ಒಟ್ಟಾರೆ ಸಸ್ಯ ಅಂಗರಚನಾಶಾಸ್ತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಮುಂದುವರೆದ ಭಾಗವಾಗಿ ಇಂದಿನ ಸಂಚಿಕೆಯಲ್ಲಿ ಅಂಗಾಂಗಗಳು ಕೆಲಸ ನಿರ್ವಹಿಸುವ ಬಗ್ಗೆ ಶರೀರಶಾಸ್ತ್ರದಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ.

ಮನುಷ್ಯರಿಗೆ ಒಂದು ದಿನವೆಂದರೆ ಇಪ್ಪತ್ನಾಲ್ಕು ಗಂಟೆಯ ಹಗಲು-ರಾತ್ರಿಯ ಚಕ್ರ. ಬೆಳಿಗ್ಗೆ ಏಳು, ತಿಂಡಿ ತಿನ್ನು, ರಾತ್ರಿ ಮಲಗು, ಯಾವ ಸಮಯಕ್ಕೆ ಏನಾಗಬೇಕೋ ಅದು ನಡೆಯುತ್ತಲೇ ಇರುತ್ತದೆ. ರಾತ್ರಿಯೂ ಕೂಡಾ ನಮ್ಮ ದೇಹ ಸುಮ್ಮನಿರದೆ ಕೆಲಸವನ್ನು ಮುಂದುವರೆಸಿರುತ್ತದೆ. ಇದನ್ನು ನಿರ್ವಹಿಸುವುದು ನಮ್ಮ ದೇಹದೊಳಗಿನ ಜೈವಿಕ ಗಡಿಯಾರ - ‘ಬಯಾಲಜಿಕಲ್ ಕ್ಲಾಕ್’. ಸಸ್ಯಗಳಲ್ಲೂ ಬೆಳಕಿದ್ದಾಗ ಯಾವ ಕೆಲಸವಾಗಬೇಕು, ಕತ್ತಲೆಯಾದಾಗ ಏನು, ಮಳೆ ಬಂದರೇನು, ಯಾವ ಸಮಯಕ್ಕೆ ಏನಾಗಬೇಕೆಂಬುದನ್ನು ಅವುಗಳ ಶರೀರದೊಳಗಿನ ಜೈವಿಕ ಗಡಿಯಾರ ನಿರ್ವಹಿಸುತ್ತದೆ. ಈ ಗಡಿಯಾರ ಮುನಷ್ಯರಂತೆಯೇ ಇಪ್ಪತ್ನಾಲ್ಕು ಗಂಟೆಗೆ ಹೊಂದಿಕೆಯಾಗಿರುತ್ತದೆ. ಈ ಅವಧಿಯಲ್ಲಿ ಸಸ್ಯದ ಕಾರ್ಯಗಳೇನು! ಕಾರ್ಯವಿಧಾನವೇನು ಎನ್ನುವದನ್ನು ಹೇಳುವುದೇ ಶರೀರಶಾಸ್ತ್ರ ಅಥವಾ ಪ್ಲಾಂಟ್ ಫಿಸಿಯಾಲಜಿ.

ಸಸ್ಯಗಳ ಒಂದು ದಿನ

ಸಸ್ಯಗಳು ಸೂರ್ಯೋದಯದೊಂದಿಗೆ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಪ್ರಾರಂಭಿಸುತ್ತವೆ. ದ್ಯುತಿಸಂಶ್ಲೇಷಣೆ ಜೊತೆ ಜೊತೆಗೆ ನಡೆವ ಇನ್ನೊಂದು ಕ್ರಿಯೆ ಭಾಷ್ಪವಿಸರ್ಜನೆ. ಹೆಚ್ಚಿನ ಬೆಳಕು ಲಭ್ಯವಿರುವಾಗ ಮಧ್ಯಾಹ್ನದ ಹೊತ್ತಿಗೆ ದ್ಯುತಿಸಂಶ್ಲೇಷಣೆ ಉತ್ತುಂಗಕ್ಕೇರುತ್ತದೆ. ಹೀಗೆ ಹಗಲಲ್ಲಿ ಸಸ್ಯಗಳ ಬೆಳವಣಿಗೆ ಅತ್ಯಧಿಕವಾಗಿರುತ್ತದೆ. ಜೊತೆಗೆ ಪೋಷಕಾಂಶಗಳನ್ನು ಹೀರುವ ಚಟುವಟಿಕೆಯೂ ಬೆಳಿಗ್ಗೆಯೇ ಪ್ರಾರಂಭವಾಗಿರುತ್ತದೆ. ವಾತಾವರಣದಲ್ಲಿ ಸಂಜೆ ಸಮೀಪಿಸುತ್ತಿದ್ದಂತೆ ಬೆಳಕು ಕೊರತೆಯಾಗುತ್ತಿದ್ದಂತೆ ದ್ಯುತಿಸಂಶ್ಲೇಷಣೆ ನಿಲ್ಲುತ್ತದೆ. ಸಂಜೆ ಹೊತ್ತು ಈಗಾಗಲೇ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ತಯಾರಿಯಾದ ಆಹಾರ ಶರೀರದ ಬೇರೆ ಬೇರೆ ಭಾಗಕ್ಕೆ ಸರಬರಾಜು, ಶೇಖರಣೆಯಾಗುತ್ತದೆ. ಹಗಲಲ್ಲೂ ನಡೆಯುತ್ತಿದ್ದ ಉಸಿರಾಟ ಕ್ರಿಯೆ ರಾತ್ರಿಯೂ ಚಾಲ್ತಿಯಲ್ಲಿರುತ್ತದೆ. ಹಗಲಿಡಿ ದುಡಿದ ಸಸ್ಯಗಳು ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ವಿರಮಿಸುತ್ತವೆ. ಈ ಸಮಯ ದೇಹಕ್ಕಾದ ನೋವನ್ನು ಮರೆಯುವ, ಮರುದಿನಕ್ಕೆ ದೇಹವನ್ನು ಸಿದ್ಧಪಡಿಸುವ ಅವಧಿಯಾಗಿರುತ್ತದೆ.

ನಮ್ಮ ಹಗಲು-ರಾತ್ರಿ ಚಕ್ರಕ್ಕೇ ಸಸ್ಯಗಳು ಹೊಂದಿಕೆಯಾಗಿರುವುದು ನಮ್ಮ ಪುಣ್ಯವೇ ಸರಿ. ಒಂದು ವೇಳೆ ಸಸ್ಯಗಳು ರಾತ್ರಿ ಎಚ್ಚರವಿದ್ದಿದ್ದರೆ ನೀರು, ಗೊಬ್ಬರ, ತೋಟದ ಕೆಲಸವನ್ನು ರಾತ್ರಿ ಮಾಡಬೇಕಿತ್ತೇನೋ!?. ಆದರೂ ನಿಶಾಚರಿ ಪ್ರಾಣಿಗಳಂತೆ ರಾತ್ರಿ ಹೂಬಿಡುವ, ರಾತ್ರಿ ಸಮಯದಲ್ಲಿ ಪೋಷಕಾಂಶಗಳನ್ನು ಹೀರುವ, ರಾತ್ರಿ ಸಮಯದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ನಿರ್ವಹಿಸುವ, ರಾತ್ರಿ ಹೆಚ್ಚು ಚಟುವಟಿಕೆಯಿಂದ ಕೂಡಿರುವ ಸಸ್ಯಗಳೂ ಇವೆ, ಉದಾಹರಣೆಗೆ ಕಳ್ಳಿ ಜಾತಿಯ ಸಸ್ಯಗಳು. ಇದು ವಿಕಸನದ ಜಾದೂ.

ದ್ಯುತಿಸಂಶ್ಲೇಷಣೆ ಮತ್ತು ಇತರೇ ಜೀವಕ್ರಿಯೆ

ಮನುಷ್ಯನಾದಿಯಾಗಿ ಸಮಸ್ತ ಜೀವಕೋಟಿಗೆ ಆಹಾರದ ಮೂಲವೆಂದರೆ ಸಸ್ಯಗಳು. ಮಾಂಸಾಹಾರಿಗಳೂ ಸಸ್ಯವನ್ನು ತಿಂದು ಬದುಕುವ ಸಸ್ಯಹಾರಿಗಳನ್ನು ಅವಲಂಬಿಸಿರುವುದರಿಂದ ಸಸ್ಯಗಳೇ ಆಹಾರ ಸರಪಳಿಯ ಮೂಲವೆಂದರೆ ತಪ್ಪಲ್ಲ. ಹಾಗಾದರೆ ಸಸ್ಯಗಳು ಹೇಗೆ ಆಹಾರವನ್ನು ಪಡೆಯುತ್ತವೆ ಎಂಬ ಉತ್ತರವಿರುವುದು ದ್ಯುತಿಸಂಶ್ಲೇಷಣೆ ಅಥವಾ ಫೋಟೋಸಿಂಥೆಸಿಸ್ ಎಂಬ ಜೈವಿಕ ಕ್ರಿಯೆಯಲ್ಲಿ. ಪ್ರಾಥಮಿಕ ಶಾಲೆಯಲ್ಲೇ ಪರಿಚಯವಾದ ಈ ಶಬ್ಧವನ್ನು ಇನ್ನೂ ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿಜ್ಷಾನಿಗಳಿಗೂ ಅಷ್ಟೇ, ಇದೊಂದು ಬಗೆಹರಿಯದ ಅದ್ಭುತ!

ದ್ಯುತಿ ಎಂದರೆ ಬೆಳಕು. ಸರಳ ಸಾಮಗ್ರಿಗಳನ್ನು ಬಳಸಿ ಹೊಸದೊಂದು ಸಂಯುಕ್ತವನ್ನು ರಚಿಸುವ ಪ್ರಕ್ರಿಯೆಗೆ ರಸಾಯನ ಶಾಸ್ತ್ರದಲ್ಲಿ ಸಂಶ್ಲೇಷಣೆ ಎಂಬ ಪದವಿದೆ. ಹೀಗೆ ಬೆಳಕಿನ ಹಾಜರಿಯಲ್ಲಿ ಸರಳ ಸಾಮಗ್ರಿಗಳನ್ನು (ಮುಖ್ಯವಾಗಿ ವಾತಾವರಣದ ಇಂಗಾಲದ ಡೈ ಆಕ್ಸೈಡ್) ಬಳಸಿ ಹೊಸ ಸಂಯುಕ್ತವನ್ನು ರಚಿಸುವ ಕ್ರಿಯೆ ದ್ಯುತಿಸಂಶ್ಲೇಷಣೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಹಗಲಲ್ಲಿ ಇಂಗು ತೆಂಗು ಬಳಸಿ ಅಡಿಗೆ ಮಾಡಿದಂತೆ.  ಬೆಳಕಲ್ಲಿರುವ ಶಾಖಶಕ್ತಿ ಸಸ್ಯಗಳ ದೇಹದಲ್ಲಿ ರಾಸಾಯನಿಕ ಶಕ್ತಿಯಾಗಿ ಬದಲಾಗುವ ಈ ವಿಶಿಷ್ಟ ಕ್ರಿಯೆಗೆ ಸಾಟಿಯೇ ಇಲ್ಲ. ರಾಸಾಯನಿಕಗಳು ಒಳಗೊಂಡಿರುವುದಕ್ಕೋ ಏನೋ, ದ್ಯುತಿಸಂಶ್ಲೇಷಣೆ ಇನ್ನೂ ನಮ್ಮ ದೈನಂದಿನ ಜೀವನದ ಭಾಗವಾಗದೆ ಪುಸ್ತಕದ ಪುಟಗಳಲ್ಲಿರುವ ವಿಜ್ಞಾನವಾಗೇ ಉಳಿದಿರುವುದು ವಿಪರ್ಯಾಸ.

ನಾವೇಕೆ ಸಸ್ಯಗಳಂತೆ ಸ್ವತಃ ಆಹಾರ ತಯಾರಿಸುವುದು ಸಾಧ್ಯವಿಲ್ಲ ಎನ್ನುವ ಪ್ರಶ್ನೆಯಿಂದ ದ್ಯುತಿಸಂಶ್ಲೇಷಣೆ ಶುರುವಾಗುತ್ತದೆ. ಸಸ್ಯಗಳ ಜೀವಕೋಶದಲ್ಲಿ ಪತ್ರಹರಿತ್ತು ಎಂಬ ವಸ್ತುವಿರುವುದು ಎಲ್ಲರಿಗೂ ಗೊತ್ತು. ದ್ಯುತಿಸಂಶ್ಲೇಷಣೆ ಆರಂಭವಾಗುವುದು ಇಲ್ಲಿಯೇ. ಬೆಳಕು ಎಲೆಗಳನ್ನು ಹೋಗಿ ಬಡಿದದ್ದೇ ಪತ್ರಹರಿತ್ತು ಎಚ್ಚರವಾಗುತ್ತದೆ. ಬೆಳಕಿನ ಶಾಖದ ಶಕ್ತಿ ಸಸ್ಯದ ಜೀವಕೋಶದಲ್ಲಿರುವ ನೀರಿನ (H2O) ಕಣಗಳನ್ನು ಜಲಜನಕದ ಪ್ರೋಟಾನ್ (H+), ಆಮ್ಲಜನಕದ (O2) ಪರಮಾಣುಗಳಾಗಿ ವಿಭಜಿಸುತ್ತದೆ (ಹೀಗೆ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಉದ್ಭವವಾದ ಆಮ್ಲಜನಕವನ್ನೇ ನಾವು ಹೊಗಳುವುದು). ಮುಂದಿನದು  ಸಾಲು ಸಾಲು ರಾಸಾಯನಿಕ ಪ್ರಕ್ರಿಯೆ. ಸಸ್ಯ ವಾತಾವರಣದಿಂದ ಹೀರಿದ ಇಂಗಾಲದ ಡೈ ಆಕ್ಸೈಡ್ (CO2) ನಲ್ಲಿರುವ ಕಾರ್ಬನ್ ಅಣುಗಳನ್ನು ಒಂದೊಂದಾಗಿ ಸೇರಿಸಿ ಕೊನೆಯಲ್ಲಿ ಗ್ಲುಕೋಸ್ (C6H12O6 ಎಂಬ ಆರು ಕಾರ್ಬನ್ ಕಣದ ಸಂಯುಕ್ತ) ತಯಾರಾಗುತ್ತದೆ. ಸಸ್ಯದ ಅಡುಗೆ ಅರ್ಥಾತ್ ನಮ್ಮ ಆಹಾರ ರೆಡಿ!. ಗ್ಲುಕೋಸ್ ತಯಾರಾಗಿದ್ದೇ ಸಸ್ಯಗಳು ಮುಂದಿನ ಜೀವಕ್ರಿಯೆಗಳಲ್ಲಿ ತೊಡಗುತ್ತವೆ. ಗ್ಲುಕೋಸ್ ನ ಕಾರ್ಬನ್ ಅಣುಗಳನ್ನು ಬಳಸಿ ಸ್ಟಾರ್ಚ್, ಸೆಲ್ಯುಲೋಸ್, ಪ್ರೋಟಿನ್, ಲಿಪಿಡ್ ತಯಾರಿಕೆ ಶುರುವಾಗುತ್ತದೆ. ಇವು ಶಕ್ತಿ ರೂಪದಲ್ಲಿ ಸಂಗ್ರಹಣೆಯಾಗುತ್ತವೆ. ಹಾಗಾಗಿ ಜೀವರಾಶಿಯನ್ನು (ಬಯೋಮಾಸ್) ಉತ್ಪಾದಿಸುವ ದ್ಯುತಿಸಂಶ್ಲೇಷಣೆ ಕೃಷಿಯ ಜೀವಾಳ. ದ್ಯುತಿಸಂಶ್ಲೇಷಣೆ ಸಸ್ಯದ ಸಧೃಡ ಬೆಳವಣಿಗೆ, ಇಳುವರಿಯನ್ನು ನಿರ್ಧರಿಸುತ್ತದೆ. ಇದು ಆಹಾರ ಉತ್ಪಾದನೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ದ್ಯುತಿಸಂಶ್ಲೇಷಣೆಯಲ್ಲಿ ತಯಾರಾದ ಗ್ಲುಕೋಸ್ ಯಾವಾಗಲೂ ಸಂಗ್ರಹವಾಗೇ ಇರುವುದಿಲ್ಲ. ಸಸ್ಯದ ಬೆಳವಣಿಗೆಗೆ ಬೇಕಾದಾಗ ವಿಭಜನೆಯಾಗುತ್ತದೆ. ಈ ಕ್ರಿಯೆ ನಡೆಯುವುದು ರಾತ್ರಿ - ದ್ಯುತಿಸಂಶ್ಲೇಷಣೆ ನಡೆಸಿ ಆಹಾರ ತಯಾರಿಸಲು ಸಾಧ್ಯವಿಲ್ಲದಿದ್ದಾಗ. ಸಾಲು ಸಾಲು ರಾಸಾಯನಿಕ ಪ್ರಕ್ರಿಯೆಯಲ್ಲಿ ಗ್ಲುಕೋಸ್ ವಿಭಜನೆಯಾಗಿ ಕೊನೆಯಲ್ಲಿ ಮತ್ತೆ ಇಂಗಾಲದ ಡೈ ಆಕ್ಸೈಡ್ ಗೆ ಪರಿವರ್ತನೆಯಾಗಿ ವಾತಾವರಣ ಸೇರುತ್ತದೆ. ಇದನ್ನೇ ಉಸಿರಾಟ ಎನ್ನುವುದು. ಸಸ್ಯ ಇಂಗಾಲವನ್ನು ಹೀರಿಕೊಂಡು ಆಮ್ಲಜನಕ ಹೊರಹಾಕುತ್ತವೆಂದರೆ ಅವುಗಳಿಗೆ ಆಮ್ಲಜನಕ ಬೇಕೆಂದಲ್ಲ, ಎಲ್ಲಾ ಜೀವಿಗಳಂತೆ ಉಸಿರಾಟ ನಡೆಸುವಾಗ ಇವುಗಳಿಗೂ ಆಮ್ಲಜನಕ ಬೇಕೇ ಬೇಕು. ಆಮ್ಲಜನಕ ತೆಗೆದುಕೊಂಡು ಇಂಗಾಲದ ಡೈ ಆಕ್ಸೈಡ್ ಅನ್ನೇ ಹೊರಹಾಕುವುದು. ಉಸಿರಾಟ ನಡೆಯುವಾಗ ಸಾಕಷ್ಟು ಶಕ್ತಿ ಉತ್ಪಾದನೆಯಾಗಿರುತ್ತದೆ. ಇದೆಲ್ಲ ಶಕ್ತಿ ರಾತ್ರಿ ಕೆಲಸಗಳಿಗೆ ಬಳಕೆಯಾಗುತ್ತದೆ. ಉಸಿರಾಟ ದಿನವಿಡೀ ನಡೆಯುವ ಕ್ರಿಯೆ, ಆದರೆ ದ್ಯುತಿಸಂಶ್ಲೇಷಣೆ ನಡೆಯದ ಕಾರಣ ರಾತ್ರಿ ಇದರ ಮಹತ್ವ ಹೆಚ್ಚು. ಹಾಗಾಗಿ ಸಸ್ಯದ ಬೆಳವಣಿಗೆಗೆ, ಪರೋಕ್ಷವಾಗಿ ಕೃಷಿಗೆ ದ್ಯುತಿಸಂಶ್ಲೇಷಣೆಯಷ್ಟೇ ಪ್ರಾಮುಖ್ಯತೆ ಉಸಿರಾಟದ್ದು.

{Box: ಪರಿಸರದ ಆರೋಗ್ಯ ಕಾಪಾಡುವಲ್ಲಿ ದ್ಯುತಿಸಂಶ್ಲೇಷಣೆಯೊಂದು ಮಹತ್ವದ ಕ್ರಿಯೆ. ದ್ಯುತಿಸಂಶ್ಲೇಷಣೆಯಿಂದ ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಸಸ್ಯಗಳ ದೇಹ ಸೇರಿ ನಂತರ ಮಣ್ಣಾಗಿ ಸಾವಯವ ವಸ್ತುವಾಗಿ ಬದಲಾಗುತ್ತದೆ (ಕಾರ್ಬನ್ ಸಿಕ್ವೆಸ್ಟರೇಶನ್); ಆಮ್ಲಜನಕವೆಂಬ ಉಪಉತ್ಪನ್ನ ವಾತಾವರಣ ಸೇರುತ್ತದೆ. ಹೆಚ್ಚು ಸಾಂದ್ರವಾದ ಹಸಿರು ಹರವಿನ ಕಾಡುಗಳನ್ನು ಇದಕ್ಕಾಗಿಯೇ ಶ್ವಾಸಕೋಶಗಳೆಂದು ಕರೆದಿದ್ದು. ಹಾಗಾಗಿ ಇಂದಿನ ಪರಿಸರ ಸೂಕ್ಷ್ಮ ಕಾಲಕ್ಕೆ ಕೃಷಿ-ಅರಣ್ಯ ಸಂಯೋಜನೆ ಒಳ್ಳೆಯದು. ಗಿಡ ಮರಗಳಷ್ಟೇ ಅಲ್ಲ, ಪತ್ರಹರಿತ್ತು ಉಳ್ಳ ಸಮುದ್ರಸಸ್ಯಗಳು (ಪ್ಲಾಂಕ್ಟನ್ಸ್), ಬ್ಯಾಕ್ಟೀರಿಯಾ, ಪಾಚಿಗಳೂ ದ್ಯುತಿಸಂಶ್ಲೇಷಣೆ ನಡೆಸುತ್ತವೆ. ವಾಸ್ತವವಾಗಿ ನಾವು ಉಸಿರಾಡುವ ಅರ್ಧ ಭಾಗದಷ್ಟು ಆಮ್ಲಜನಕ ಜನನವಾಗುವುದು ಸಮುದ್ರದಲ್ಲಿ.}

ಭಾಷ್ಪವಿಸರ್ಜನೆ

ಸಸ್ಯ ಇಂಗಾಲದ ಡೈ ಆಕ್ಸೈಡ್ ಮತ್ತು ಆಮ್ಲಜನಕವನ್ನು ವಾತಾವರಣದಿಂದ ಹೀರಿಕೊಳ್ಳುವಾಗ ಎಲೆಗಳಲ್ಲಿರುವ ಪತ್ರರಂಧ್ರವನ್ನು ತೆರೆಯುವುದರ ಬಗ್ಗೆ ಗೊತ್ತೇ ಇದೆ. ಹೀಗೆ ಪತ್ರರಂಧ್ರ ತೆರೆದಾಗ ನೀರು ಅಥವಾ ತೇವಾಂಶವೂ ಆವಿಯಾಗಿ ಹೊರಹೋಗುತ್ತದೆ. ಸಸ್ಯ ಬೆವರಿದಂತೆ ಅನಿಸುವ ಈ ಕ್ರಿಯೆಯನ್ನು ಭಾಷ್ಪವಿಸರ್ಜನೆ ಎನ್ನಲಾಗುತ್ತದೆ. ಭಾಷ್ಪ ಎಂದರೆ ನೀರಿನ ಆವಿ, ವಿಸರ್ಜನೆ ಎಂದರೆ ದೇಹದಿಂದ ಹೊರಹಾಕುವುದು. ದ್ಯುತಿಸಂಶ್ಲೇಷಣೆಯ ಮಟ್ಟ ಹೆಚ್ಚಿರುವ, ಪತ್ರರಂಧ್ರ ಚಟುವಟಿಕೆಯಿಂದಿರುವ ಹಗಲಲ್ಲಿ ಭಾಷ್ಪವಿಸರ್ಜನೆಯೂ ಗರಿಷ್ಟ. ಬೆವರಿದಾಗ ನಮ್ಮ ದೇಹ ತಂಪಾಗುವಂತೆ ಭಾಷ್ಪವಿಸರ್ಜನೆ ಸಸ್ಯದ ದೇಹವನ್ನು ತಂಪಾಗಿಸುತ್ತದೆ, ಬಿಸಿಲಿನ ಉರಿಯ ಶಮನವಾಗುತ್ತದೆ. ಭಾಷ್ಪವಿಸರ್ಜನೆಯಿಂದ ತೇವಾಂಶ ಹೊರಹೋಗುತ್ತಿದ್ದಂತೆ ಬೇರಿನಲ್ಲಿ ನೀರನ್ನು ಹೀರಲು ಒತ್ತಡವುಂಟಾಗುತ್ತದೆ. ಈ ಒತ್ತಡ ಹೆಚ್ಚು ನೀರನ್ನು ಪಂಪ್ ಮಾಡಲು ಪ್ರೇರೇಪಿಸುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಸಾಗಣೆಯೂ ಉತ್ತಮವಾಗುತ್ತದೆ. ಭಾಷ್ಪವಿಸರ್ಜನೆ ಕ್ರಿಯೆ ಕೃಷಿಯಲ್ಲಿ ನೀರಿನ ನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ.

{Box : ಸಸ್ಯಗಳು ಭಾಷ್ಪವಿಸರ್ಜನೆ ಮೂಲಕ ಹೊರಹಾಕುವ ನೀರಿನ ಪ್ರಮಾಣವೆಷ್ಟು? ಅಧ್ಯಯನಗಳ ಪ್ರಕಾರ ವಯಸ್ಕ ಮಾವಿನ ಮರವೊಂದು ದಿನಕ್ಕೆ 500 ಲೀಟರ್ ವರೆಗೂ, ವಸಂತದ ಚುರುಕು ಚಟುವಟಿಕೆಯ ಕಾಲದಲ್ಲಿ 3000 ಲೀಟರ್ ವರೆಗೂ ನೀರನ್ನು ಹೊರಹಾಕುತ್ತದಂತೆ!. ಹುಲುಸಾಗಿ ಬೆಳೆದ ಮೆಕ್ಕೆ ಜೋಳದ ಗಿಡ ವಾರಕ್ಕೆ 15 ಲೀಟರ್ ನಂತೆ ಒಂದು ಎಕರೆಗೆ ಎಷ್ಟು ನೀರನ್ನು ಹೊರಹಾಕಬಹುದೆಂದು ನೀವೇ ಲೆಕ್ಕ ಹಾಕಿ. ಇಷ್ಟು ದೊಡ್ಡ ಸಂಖ್ಯೆ ನೋಡಿದರೆ ನೀರು ಪೋಲಾಗುತ್ತಿರುವಂತೆ ಭಾಸವಾಗುತ್ತದೆ. ಆದರೆ ಸಸ್ಯದ ಆರೋಗ್ಯ ಮತ್ತು ಪರಿಸರದ ಸಮತೋಲನಕ್ಕೆ ಭಾಷ್ಪವಿಸರ್ಜನೆ ಅಗತ್ಯ ಕ್ರಿಯೆ. ನೀರಾವರಿ, ಪೋಷಕಾಂಶ ನಿರ್ವಹಣೆಯಲ್ಲಿ ಸಮರ್ಥವಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಬೆಳೆಗಳಲ್ಲಿ ನೀರು ನಷ್ಟವಾಗುವ ಪ್ರಮಾಣವನ್ನು ಕಡಿಮೆಗೊಳಿಸಿ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಬೆಂಬಲಿಸಬಹುದು}

ನೀರು ಪೋಷಕಾಂಶ ಸಾಗಣೆ

ಈ ಕ್ರಿಯೆಯ ಬಗ್ಗೆ ಮುಂಚಿನ ಲೇಖನಗಳಲ್ಲಿ ಸಾಕಷ್ಟು ವಿವರವಾಗಿ ಹೇಳಿಯಾಗಿದೆ. ನೀರು, ನೀರಲ್ಲಿ ಬೆರೆತಿರುವ ಪೋಷಕಾಂಶಗಳು ಕ್ಸೈಲಮ್ ನಾಳಗಳ ಮೂಲಕ ಬೇರಿನಿಂದ ಮೇಲ್ಭಾಗಕ್ಕೆ ಸರಬರಾಜಾಗುತ್ತದೆ. ದ್ಯುತಿಸಂಶ್ಲೇಷಣೆಯಲ್ಲಿ ತಯಾರಾದ ಶರ್ಕರ ದ್ರವ ರೂಪದಲ್ಲಿ ಫ್ಲೋಯಮ್ ನಾಳಗಳ ಮೂಲಕ ಇತರೇ ಭಾಗಗಳಿಗೆ ಸರಬರಾಜಾಗುತ್ತದೆ. ಎರಡನ್ನೂ ಸೇರಿಸಿ ನಾಳಕೂಚ (ವ್ಯಾಸ್ಕ್ಯುಲಾರ್ ಬಂಡಲ್) ವ್ಯವಸ್ಥೆ ಎಂದು ಕರೆಯಲಾಗುತ್ತದೆ. ನಾಳಕೂಚದ ವಿವಿಧ ಅಂಗಾಂಶಗಳನ್ನು ಬಳಸಿ ಸಾಗುತ್ತಾ ದ್ರವ ರೂಪದಲ್ಲಿ ನೀರು ಪೋಷಕಾಂಶದ ಸರಬರಾಜಾಗುತ್ತದೆ. ಇಲ್ಲಿ ಸಸ್ಯದಷ್ಟೇ ವಿಶಿಷ್ಟ ಅಂಶವೆಂದರೆ ನೀರಿನ ಗುಣಧರ್ಮ. ಒಂದಕ್ಕೊಂದು ಅಂಟಿಕೊಳ್ಳಬಲ್ಲ ಮತ್ತು ಕ್ಸೈಲಮ್ ಕೊಳವೆಯ ಗೋಡೆಗೂ ಅಂಟಿಕೊಳ್ಳಬಲ್ಲ, ಕಿರಿದಾದ ಸ್ಥಳಗಳಲ್ಲಿಯೂ ಅಡೆತಡೆಯಿಲ್ಲದ ಸಾಗಬಲ್ಲ ಸಾಮರ್ಥ್ಯ ನೀರಿನ ಕಣಗಳ ಸಾಮರ್ಥ್ಯ ಇದನ್ನು ಜೀವದ್ರವವಾಗಿಸಿವೆ.

ಸಸ್ಯಗಳಲ್ಲಿ ಬೆಳವಣಿಗೆ, ಅಭಿವೃದ್ಧಿ

ಸಸ್ಯದ ಜೀವನವನ್ನು ಫಿಸಿಯಾಲಾಜಿಕಲಿ ಎರಡು ರೀತಿಯಾಗಿ ವಿಭಾಗಿಸಬಹುದು, ಒಂದು ಅದರ ಬೆಳವಣಿಗೆ (ಗ್ರೋಥ್), ಮತ್ತೊಂದು ಅಭಿವೃದ್ಧಿ (ಡೆವಲಪಮೆಂಟ್). ನಾವು ಮಾತನಾಡುವಾಗ ಎರಡನ್ನೂ ಅದಲು ಬದಲಿಯಾಗಿ ಪ್ರಯೋಗಿಸುತ್ತೇವೆ. ಆದರೆ ಎರಡು ಶಬ್ಧಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಬೆಳವಣಿಗೆ ಎಂದರೆ ಜೀವಕೋಶ ವಿಭಜನೆಯಿಂದ ಸಸ್ಯದ ಗಾತ್ರದಲ್ಲಾಗುವ ಏರಿಕೆ. ಅಭಿವೃದ್ಧಿ ಎಂದರೆ ವಂಶವಾಹಿ ಜೀವನದ ಹಂತಗಳ ಪ್ರಗತಿ. ಮೆರಿಸ್ಟಮೆಟಿಕ್ ಅಂಗಾಂಶಗಳು ಪ್ರಬುದ್ಧವಾಗುವುದು (ಇದರ ಬಗ್ಗೆ ಮೊದಲ ಸಂಚಿಕೆಯಲ್ಲಿ ಹೇಳಿಯಾಗಿದೆ), ಹೂ ಬಿಡುವುದು, ಪರಾಗಸ್ಪರ್ಷ, ಹೂವಿನಿಂದ ಕಾಯಿಯಾಗುವಿಕೆ, ಕಾಯಿ ಹಣ್ಣಾಗುವಿಕೆ, ಬೀಜ ರೂಪುಗೊಳ್ಳುವಿಕೆ, ಬೀಜ ಪ್ರಸರಣ, ಬೀಜ ಮೊಳಕೆಯೊಡೆದು ಸಸಿಯಾಗುವಿಕೆ, ಸಸಿಯಲ್ಲಿ ಇವೆಲ್ಲವೂ ಸಸ್ಯ ಜೀವನದ ಅಭಿವೃದ್ಧಿಯ ಹಂತಗಳು.

ಸಸ್ಯದ ಜೀವನವೊಂದು ಪ್ರಾರಂಭವಾಗುವುದು ಬೀಜದಿಂದ, ಮುಗಿಯುವುದೂ ಬೀಜದಲ್ಲೇ. ಬೀಜ ತೇವಾಂಶವನ್ನು ಹೀರಿ, ಹಿಗ್ಗಿ, ಹೊರಗಿನ ಬೀಜಪೊರೆಯನ್ನು ಒಡೆದು ಮೊಳಕೆಯೊಡೆಯುತ್ತದೆ. ನಂತರ ಬೇರು, ಕಾಂಡ, ಎಲೆ ಹೊಂದಿ ಪುಟ್ಟ ಸಸ್ಯವಾಗುತ್ತದೆ. ನಂತರ ಕೆಲ ಸಮಯ ಕಾಲ ಪೋಷಕಾಂಶ, ಸಂಪನ್ಮೂಲ, ದ್ಯುತಿಸಂಶ್ಲೇಷಣೆಯ ಉತ್ಪನ್ನಗಳಷ್ಟೂ ಬೇರು ಕಾಂಡ ಎಲೆಯನ್ನು ಸಧೃಡಗೊಳಿಸುವತ್ತ ವ್ಯಯವಾಗುತ್ತದೆ (ವೆಜಿಟೇಟಿವ್ ಫೇಸ್). ನಂತರ ವಾತಾವರಣ ಮತ್ತು ಹಾರ್ಮೋನ್ ನ ಪ್ರಚೋದನೆಗೆ ಒಳಗಾಗಿ ಸಸ್ಯ ಹೂಬಿಡಲು ಪ್ರಾರಂಭಿಸುತ್ತದೆ (ರಿಪ್ರೊಡಕ್ಟಿವ್ ಫೇಸ್). ಪರಾಗಸ್ಪರ್ಷದ ಫಲೀಕರಣದ ನಂತರ ಕಾಯಿ ಕಚ್ಚುತ್ತದೆ. ಕಾಯಿ ಹಣ್ಣಾಗಿ ಮಾಗಿ ಪ್ರಬುದ್ಧ ಬೀಜದ ಪ್ರಸರಣೆಯಾಗುತ್ತದೆ.

ಹೂ ಬಿಡುವುದು: ಬೆಳೆ ಸಸ್ಯಗಳಲ್ಲಿ ಹೂಬಿಡುವಿಕೆಯು ಇಳುವರಿ ಮತ್ತು ಉತ್ಪಾದಕತೆಯ ಮೇಲೆ ನೇರವಾಗಿ ಪರಿಣಾಮ ಬೀರುವ ನಿರ್ಣಾಯಕ ಹಂತವಾಗಿದೆ. ಹೂ ಬಿಡುವ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು, ತಕ್ಕಂತೆ ಕೃಷಿ ಪದ್ಧತಿಗಳನ್ನು ಸುಧಾರಣೆ ಮಾಡಿಕೊಳ್ಳುವುದು ಉತ್ತಮ ಬೆಳೆ ಹೊಂದಲು ಸಹಕಾರಿ. ವಂಶವಾಹಿಗಳು, ಸಸ್ಯಪ್ರಚೋದಕಗಳು ಮತ್ತು ವಾತಾವರಣ ಹೂಬಿಡುವಿಕೆಯನ್ನು ನಿರ್ಧರಿಸುತ್ತವೆ.

ಹೂಬಿಡುವಿಕೆಯನ್ನು ನಿರ್ಧರಿಸುವ ವಾತಾವರಣದ ಅಂಶಗಳು :

·         ಹಗಲು ರಾತ್ರಿಯ ಅವಧಿ (ಫೋಟೋಪಿರಿಯಡ್) – ಅನೇಕ ಬೆಳೆಗಳಿಗೆ ಹೂಬಿಡಲು ಹಗಲು ಮತ್ತು ರಾತ್ರಿಯ ನಿರ್ದಿಷ್ಟ ಅವಧಿಯ ಅಗತ್ಯವಿರುತ್ತದೆ. ಉದಾಹರಣೆ ಸೋಯಾಬೀನ್, ಭತ್ತಕ್ಕೆ ಹೂಬಿಡಲು ಸುದೀರ್ಘ ರಾತ್ರಿ, ಕಡಿಮೆ ಅವಧಿಯ ಬೆಳಕು ಬೇಕಾಗುತ್ತದೆ (ಶಾರ್ಟ್ ಡೇ ಸಸ್ಯಗಳು); ಗೋಧಿ, ಓಟ್ಸ್ ಬಾರ್ಲಿಗಳಿಗೆ ಹನ್ನೆರಡು ತಾಸಿಗಿಂತ ಹೆಚ್ಚು ಬೆಳಕಿನ ಅವಧಿ ಬೇಕಾಗುತ್ತದೆ (ಲಾಂಗ್ ಡೇ ಸಸ್ಯಗಳು); ಟೊಮೆಟೋ, ಸೌತೆ, ಬಾಳೆ, ಕೆಲ ಸಸ್ಯಗಳಿಗೆ ಬೆಳಕಿನ ಅವಧಿಯ ಸಂಬಂಧವಿಲ್ಲ (ಡೇ-ನ್ಯುಟ್ರಲ್ ಸಸ್ಯಗಳು)

·         ತಾಪಮಾನ – ಸೇಬು, ಪೀಚ್, ಪ್ಲಮ್, ಅಪ್ರಿಕೋಟ್ ಮುಂತಾದ (ಶೀತ ವಲಯದ) ಬೆಳೆಗಳಿಗೆ ಹೂ ಬಿಡಲು ಸುದೀರ್ಘ ಸಮಯದ ಶೀತಲ ವಾತಾವರಣದ (ಚಿಲ್ಲಿಂಗ್ ಅವಧಿ) ಅವಶ್ಯಕತೆಯಿರುತ್ತದೆ. ಉದಾಹರಣೆ ತಳಿಯನ್ನಾಧರಿಸಿ ಸೇಬುಗಳಲ್ಲಿ 0-7°C ತಾಪಮಾನದ 400 ರಿಂದ 1800 ತಾಸಿನ  ಚಿಲ್ಲಿಂಗ್ ಅವಧಿ ಬೇಕಾಗಬಹುದು. ದ್ರಾಕ್ಷಿಯಂತ ಕೆಲ ಬೆಳೆಗಳಲ್ಲಿ ಇಂತಿಷ್ಟು ಎಂಬ ತಾಪಮಾನದ ದಿನಗಳ ಅವಶ್ಯಕತೆಯಿರುತ್ತದೆ (ಡಿಗ್ರಿ ಡೇ’ಸ್). ಮೊಗ್ಗು ಬಿರಿಯುವುದು, ಹೂ ಬಿಡುವುದು ಮುಂತಾದ ಹಂತಗಳ ಮೇಲೆ ಡಿಗ್ರಿ ಡೇ’ಸ್ ಪ್ರಭಾವ ಬೀರುತ್ತದೆ. ಹೂವಿನ ಲಿಂಗವನ್ನೂ ಕೂಡಾ ತಾಪಮಾನ ನಿರ್ಧರಿಸುತ್ತದೆ. ಉದಾಹರಣೆಗೆ ಸೌತೆಯಲ್ಲಿ ಹೆಚ್ಚಿನ ತಾಪಮಾನ ಗಂಡು ಹೂಗಳನ್ನು, ಕಡಿಮೆ ತಾಪಮಾನ ಹೆಣ್ಣು ಹೂಗಳನ್ನು ಉತ್ಪಾದಿಸುವುದನ್ನು ದಾಖಲಿಸಲಾಗಿದೆ.

·         ಬೆಳಕಿನ ಗುಣಮಟ್ಟ – ಸೂರ್ಯನಿಂದ ಭೂಮಿ ಸ್ಪರ್ಷಿಸುವ ಬೆಳಕಲ್ಲಿ ನಮಗೆ ಗೋಚರವಾಗದ ಅತಿನೇರಳೆ, ಅವಗೆಂಪು ಕಿರಣಗಳೂ ಇರುತ್ತವೆ. ವಂಶವಾಹಿನಿಗೆ ಹಾನಿ ಮಾಡುವ ಇವು ಸಸ್ಯಕ್ಕೂ ಅಪಾಯಕಾರಿ. ನಮ್ಮ ಕಣ್ಣಿಗೆ ಗೋಚರವಾಗುವ ಬೆಳಕಲ್ಲೂ ನೇರಳೆಯಿಂದ ಕೆಂಪಿನ ವರೆಗೆ (ಕಾಮನಬಿಲ್ಲಿನ ಬಣ್ಣಗಳು) ಬೇರೆ ಬೇರೆ ತರಂಗಾಂತರದ ಕಿರಣಗಳಿರುತ್ತವೆ. ಕೆಂಪು ತರಂಗ ಸಸ್ಯಗಳ ಬೆಳವಣಿಗೆಗೆ ಒಳ್ಳೆಯದು. ಹಾಗಾಗಿ ಬೆಳಕಿನ ಗುಣಮಟ್ಟವೂ ಹೂಬಿಡುವಿಕೆಯನ್ನು ನಿಯಂತ್ರಿಸುತ್ತದೆ.

ಹೂವಿನಿಂದ ಕಾಯಿಯಾಗುವಿಕೆ: ಹೂವಿನ ಶಲಾಕೆಯ ಮೇಲೆ ಪರಾಗರೇಣು ಸ್ಪರ್ಷವಾಗಿ ಫಲೀಕರಣವಾದ ಮೇಲೆ ಅಂಡಾಣು ಕಾಯಾಗಿ ಅಂಡಾಶಯ ಹಣ್ಣಾಗಿ ಅಭಿವೃದ್ಧಿ ಹೊಂದುತ್ತದೆ. ಪರಾಗಸ್ಪರ್ಷ ಕ್ರಿಯೆ ಹೂವಿನ ಆಕಾರ, ಆರೋಗ್ಯ, ಸುಗಂಧ, ಬಣ್ಣ; ಪರಾಗರೇಣುವಿನ ಪ್ರಮಾಣ ಗುಣಮಟ್ಟ; ನೀರು, ಗಾಳಿ, ಪರಾಗಸ್ಪರ್ಷಕಗಳ ಲಭ್ಯತೆಯನ್ನು ಅವಲಂಬಿಸುತ್ತದೆ. ವಾತಾವರಣದ ತೇವಾಂಶ, ತಾಪಮಾನ ಪರಾಗರೇಣುವಿನ ಗುಣಮಟ್ಟ ಮತ್ತು ಪರಾಗಸ್ಪರ್ಶಕಗಳ ಚಟುವಟಿಕೆಯ ಮೇಲೆ ತೀವ್ರ ಪ್ರಭಾವ ಬೀರಬಲ್ಲವು. ತಾಪಮಾನ ಸಹಜಕ್ಕಿಂತ ಹೆಚ್ಚಾದಲ್ಲಿ ಪರಾಗರೇಣುಗಳು ತಮ್ಮ ಕಾರ್ಯಸಾಧ್ಯತೆಯನ್ನು (ವಯಾಬಿಲಿಟಿ) ಕಳೆದುಕೊಳ್ಳಬಹುದು, ತಾಪಮಾನ ಕಡಿಮೆಯಾದಲ್ಲಿ ಪರಾಗರೇಣುವಿನ ರೂಪುಗೊಳ್ಳುವಿಕೆ ಮತ್ತು ಪ್ರಸರಣ ನಿಧಾನವಾಗಬಹುದು. ಆರ್ದ್ರತೆ ಸಹಜಕ್ಕಿಂತ ಹೆಚ್ಚಾದಲ್ಲಿ ಪರಾಗರೇಣು ತೇವಾಂಶ ಹೀರಿಕೊಂಡು ಮುದ್ದೆಯಾಗಿ ಪ್ರಸರಣಕ್ಕೆ ಅಡ್ಡಿಯಾಗಬಹುದು,  ಆರ್ದ್ರತೆ ಸಹಜಕ್ಕಿಂತ ಕಡಿಮೆಯಾದಲ್ಲಿ ಪರಾಗರೇಣು ತೇವಾಂಶ ಕಳೆದುಕೊಂಡು ಒಣಗಬಹುದು. ಕೆಲ ಸಸ್ಯಗಳಲ್ಲಿ ಹೂವು ಅರಳುವ ಮೊದಲೇ ಪರಾಗರೇಣುವಿನ ಪ್ರಸರಣವಾಗಿರುತ್ತದೆ (ಪ್ರೊಟೋಗೈನಿ), ಉದಾಹರಣೆಗೆ ಬೆಣ್ಣೆಹಣ್ಣು, ಸೀತಾಫಲ, ಹಲಸು ಇತ್ಯಾದಿ. ಕೆಲ ಸಸ್ಯಗಳಲ್ಲಿ ಪರಾಗರೇಣುವಿನ ಪ್ರಸರಣವಾಗುವ ಮೊದಲೇ ಹೂವು ಅರಳಿರುತ್ತದೆ (ಪ್ರೊಟೋಆಂಡ್ರಿ), ಉದಾಹರಣೆಗೆ ಜೋಳ, ಕಾಫಿ ಇತ್ಯಾದಿ.  ಕೆಲ ಸಸ್ಯಗಳಲ್ಲಿ ಹೂಗಳೇ ಅರಳುವುದಿಲ್ಲ, ಉದಾಹರಣೆಗೆ ಶೇಂಗಾ. ಸ್ವಕೀಯ ಮತ್ತು ಪರಕೀಯ ಪರಾಗಸ್ಪರ್ಷಕ್ಕೆ  ಈ ತರಹದ ಹಲವಾರು ತಂತ್ರಗಳನ್ನು ಸಸ್ಯಗಳು ಅಳವಡಿಸಿಕೊಂಡಿವೆ. ಅನುವಂಶಿಕ ಧಾತುಗಳೂ ಹೂವಿನಿಂದ ಕಾಯಿಯಾಗುವಿಕೆಯನ್ನು ನಿಯಂತ್ರಿಸುತ್ತವೆ; ಉದಾಹರಣೆಗೆ ಸೇಬು, ಪಿಯರ್ ಮುಂತಾದ ಬೆಳೆಗಳಲ್ಲಿ ಪರಾಗರೇಣು ಮತ್ತು ಹೂವಿನ ನಡುವೆ ಅನುವಂಶಿಕತೆ ಧಾತುಗಳು ಹೋಲಿಕೆಯಿದ್ದಲ್ಲಿ ಪರಾಗಸ್ಪರ್ಷ ಕ್ರಿಯೆಯೆ ನಿರ್ಬಂಧಿತವಾಗುತ್ತದೆ. ಹೀಗೆ ಹಲವಾರು ಹಂತಗಳನ್ನು ದಾಟಿ ಹೂವು ಕಾಯಿ ಕಚ್ಚಬಹುದು, ಅಥವಾ ಕಾಯಾಗದೇ ಉದುರಿಹೋಗಬಹುದು. ಇಂತಹ ನಡವಳಿಕೆ ಪ್ರತಿ ಬೆಳೆಗೂ ಭಿನ್ನ.

ಕಾಯಿ ಹಣ್ಣಾಗುವಿಕೆ, ಬೀಜ ರೂಪುಗೊಳ್ಳುವಿಕೆ : ಪರಾಗಸ್ಪರ್ಷ ಯಶಸ್ವಿಯಾದ ನಂತರದಲ್ಲಿ ಕಾಯಿ ಮೂಡುತ್ತದೆ. ಕಾಯಿ ಬಲಿತ ನಂತರ ಪತ್ರಹರಿತ್ತು ಮಾಯವಾಗಿ ಕೆರೋಟಿನೈಡ್, ಅಂತೋಸಯನಿನ್ ನಂತಹ ವರ್ಣಕಗಳು ಮೂಡುತ್ತವೆ; ಪೆಕ್ಟಿನ್ ಸೆಲ್ಯುಲೋಸ್ ಪಿಷ್ಟದಂತಹ ಗಡಸು ಕಾರ್ಬೋಹೈಡ್ರೇಟ್ ಗಳು ವಿಘಟನೆಯಾಗಿ ಫ್ರುಕ್ಟೋಸ್, ಸುಕ್ರೋಸನಂತಹ ಸಿಹಿ ಶರ್ಕರಗಳ ಉತ್ಪತ್ತಿಯಾಗುತ್ತವೆ;  ಕಾಯಿ ನಿಧಾನಕ್ಕೆ ಹಣ್ಣಾಗಿ ಮಾಗುತ್ತದೆ. ಜೊತೆಜೊತೆಗೆ ಬೀಜವೂ ಅಭಿವೃದ್ಧಿಯಾಗುತ್ತದೆ. ಭ್ರೂಣದ ಸುತ್ತಲೂ ಪೋಷಕ ಪದರ, ಪಿಷ್ಟ, ಪ್ರೋಟಿನ್, ಲಿಪಿಡ್ ಗಳ ಶೇಖರಣೆಯಾಗುತ್ತದೆ. ಹಣ್ಣು ಬಲಿತ ಕೆಲ ಸಮಯದ ನಂತರ ಉಸಿರಾಟದ ದರದಲ್ಲಿ ಗಮನಾರ್ಹ ಹೆಚ್ಚಳವಾಗುತ್ತದೆ; ಹಣ್ಣು ಮುದಿಯಾಗುತ್ತದೆ, ಬಿರಿದು ಒಳಗಿನ ಬೀಜ ಪ್ರಸರಣವಾಗುತ್ತದೆ. ಕೆಲ ಸಸ್ಯಗಳಲ್ಲಿ ಬೀಜಗಳು ಅಭಿವೃದ್ಧಿಯಾಗದೇ ಇರಬಹುದು.

{Box ಬೀಜ ಇಲ್ಲದ್ದಿದ್ರೆ ಒಳ್ಳೆಯದಾಗಿತ್ತು - ಬಾಳೆಹಣ್ಣು ತಿನ್ನುವಾಗ ಬಾರದ ಈ ಯೋಚನೆ ಕಲ್ಲಂಗಡಿ ಸವಿಯುವಾಗ ಪಕ್ಕನೆ ಬರುತ್ತದೆ. ಕೆಲ ಬೆಳೆಗಳಲ್ಲಿ ನೈಸರ್ಗಿಕವಾಗಿ ಬೀಜವಿಲ್ಲದಿರುವುದನ್ನು ಗಮನಿಸಿರುತ್ತೀರಾ. ಬಾಳೆಯಲ್ಲಿ ಪರಾಗಸ್ಪರ್ಷದ ಅವಶ್ಯಕತೆಯಿಲ್ಲದೆ ಹಣ್ಣು ಬೆಳೆದರೆ (ಇದನ್ನು ಪಾರ್ಥೆನೋಕಾರ್ಪಿ), ದ್ರಾಕ್ಷಿಯಲ್ಲಿ ಗರ್ಭಪಾತವಾಗಿ ಪ್ರೌಢಬೀಜಗಳು ಜಾರಿಹೋಗುತ್ತವೆ. ಹಾಗೆಂದು ಇವುಗಳಲ್ಲಿ ಬೀಜಗಳೇ ಇಲ್ಲವೆಂದಲ್ಲ, ಬದಲಿಗೆ ಬೀಜಗಳು ಅಪೂರ್ಣವಾಗಿರುತ್ತವೆ – ಬಾಳೆ ಹಣ್ಣಿನಲ್ಲಿರುವ ಕರಿ ಚುಕ್ಕೆಯಂತೆ. (ಬೆಂಗಳೂರು ಬ್ಲೂನಂತ) ಹಲವು ದ್ರಾಕ್ಷಿಯ ತಳಿಗಳಲ್ಲಿಯೂ ಬೀಜವಿರುತ್ತದೆ, ಆದರೆ ಜಿಬ್ಬರಲಿನ್ ಎನ್ನುವ ಸಸ್ಯಪ್ರಚೋದಕ ಬಳಸಿ ಬೀಜ ಅಭಿವೃದ್ಧಿಯನ್ನು ತಡೆಯಲಾಗುತ್ತದೆ. ಕಲ್ಲಂಗಡಿ, ಪೇರಲ, ಕಿತ್ತಲೆ, ಲಿಂಬು, ಬದನೆ, ಟೊಮ್ಯಾಟೋ, ಮೆಣಸು ಮುಂತಾದ ಬೆಳೆಗಳಲ್ಲಿ ಕೃತಕವಾಗಿ ಸೀಡ್ ಲೆಸ್ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ}

ಸಸ್ಯಗಳಲ್ಲಿ ಒತ್ತಡ ನಿರ್ವಹಣೆ ಮತ್ತು ರಕ್ಷಣಾ ವ್ಯವಸ್ಥೆ

ವಾತಾವರಣದ ವಿವಿಧ ಒತ್ತಡಗಳು, ನಿರ್ವಹಿಸಲು ಬೇಕಾದ ಅಂಗಾಂಗಳ ಮಾರ್ಪಾಡಿನ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ವಿವರವಾಗಿ ಹೇಳಲಾಗಿತ್ತು. ಒತ್ತಡವನ್ನು ನಿರ್ವಹಿಸಲು ಸಸ್ಯಗಳು ಶಾರೀರಿಕ ಪ್ರಕ್ರಿಯೆಯಲ್ಲೂ ಮಾರ್ಪಾಡು ಮಾಡಿಕೊಳ್ಳುತ್ತವೆ. ತೀವ್ರ ತಾಪಮಾನ ನೀರಿನ ಕೊರತೆಯಾದಾಗ ಜೀವಕೋಶಗಳಲ್ಲಿ ಹೆಚ್ಚು ಶರ್ಕರ, ಪ್ರೋಟಿನ್ ನಂತಹ ದ್ರಾವಣಗಳನ್ನು ಶೇಖರಿಸಿಕೊಳ್ಳುತ್ತವೆ, ಆ ಮೂಲಕ ನಿರ್ಜಲೀಕರಣಕ್ಕೆ ಒಳಗಾಗದಂತೆ ತಮ್ಮ ದೇಹವನ್ನು ಅವು ಕಾಪಾಡಿಕೊಳ್ಳುತ್ತವೆ (ನಾವು ಓ.ಆರ್.ಎಸ್ ಕುಡಿದಂತೆ). ಪತ್ರರಂಧ್ರಗಳನ್ನು ಮುಚ್ಚಿ ತೇವಾಂಶ ಕಳೆದುಹೋಗುದಂತೆ ನೋಡಿಕೊಳ್ಳುತ್ತವೆ. ಆರೋಗ್ಯಕರವಾಗಿರಲು ಆಂಟಿಆಕ್ಸಿಡಂಡ್ ನಂತಹ ಸಂಯುಕ್ತಗಳನ್ನು ತಯಾರಿಸುತ್ತವೆ. ದೇಹದೊಳಗಿನ ಪ್ರೋಟಿನ್ ಕೆಡದಂತೆ ಹೀಟ್ ಶಾಕ್ ಪ್ರೋಟಿನ್ ಗಳೆಂಬ ವಿಶೇಷ ವಸ್ತುಗಳನ್ನು ಉತ್ಪಾದಿಸುತ್ತವೆ. ಒತ್ತಡದ ಸಮಯದಲ್ಲಿ, ಜೀವ ಹಿಡಿದಿಟ್ಟುಕೊಳ್ಳುವುದು ಮುಖ್ಯವಾದಾಗ ಜೀವಕ್ರಿಯೆಯ ಮಾರ್ಗವನ್ನು ಬದಲಾಯಿಸಿಕೊಳ್ಳುತ್ತವೆ. ಕೀಟ, ರೋಗ, ಜೈವಿಕ ಒತ್ತಡಗಳಿಂದ ರಕ್ಷಣೆಗಾಗಿ ಅಂಗಾಂಗ ಮಾರ್ಪಾಡಿನ ಜೊತೆಗೆ ಸೆಕಂಡರಿ ಮೆಟಬಯೈಟ್ಸ್ ಎಂಬ ರಾಸಾಯನಿಕ ಸಂಯುಕ್ತಗಳ ಉತ್ಪಾದನೆಯಾಗುತ್ತದೆ.

{Box : ಸಸ್ಯಗಳು ಮನುಷ್ಯರಂತೆ ತಮಗೆ ಹಿಂದೆ ಬಂದಂತಹ ರೋಗಗಳನ್ನು, ಹಿಂದೆ ಕಾಡಿದಂತ ಕೀಟಗಳನ್ನು ನೆನಪಿಟ್ಟುಕೊಂಡು ಪ್ರತಿರೋಧ ಒಡ್ಡಬಲ್ಲವೇ? ಹೌದು ಎನ್ನುತ್ತವೆ ಸಂಶೋಧನೆಗಳು. ಮನುಷ್ಯರಂತೆ ಪ್ರತಿಕಾಯ (ಆಂಟಿಬಾಡಿ) ಗಳನ್ನು ಹೊಂದಿಲ್ಲವಾದರೂ ರೋಗಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅತ್ಯಾಧುನಿಕ ಮಾರ್ಗಗಳನ್ನು ಸಸ್ಯಗಳು ಹೊಂದಿವೆ. ರೋಗದಾಳಿ ಪರಿಣಾಮವಾಗಿ ಜೀವರಾಸಾಯನಿಕಗಳ ಉತ್ಪಾದನೆಯಲ್ಲಿ ತೊಡಗುವುದನ್ನು ಗಮನಿಸಲಾಗಿದೆ. ವೈರಸ್ ದೇಹ ಹೊಕ್ಕುತ್ತಿದ್ದಂತೆ ಅನ್ಯಜೀವಿಯೆಂದು ಗುರುತಿಸಿ ತಕ್ಷಣ ಕೊಚ್ಚಿಹಾಕುವ RNAi ಎಂಬ ಆಕರ್ಷಕ ವ್ಯವಸ್ಥೆಯಿದೆ. ತಮ್ಮನ್ನು ಭಾದಿಸುವ ರೋಗಕಾರಕಗಳನ್ನು (ವಿಶೇಷವಾಗಿ ವೈರಾಣುಗಳು) ಪತ್ತೆಹಚ್ಚಿ ಸೂಕ್ತ ತಡೆಯನ್ನು ನಿರ್ಮಿಸುವುದರಲ್ಲಿ ಸಸ್ಯಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಅಥವಾ ಇಮ್ಯುನಿಟಿ ಬಗ್ಗೆ ಹೆಚ್ಚೆಚ್ಚು ಕುತೂಹಲಕಾರಿ ಅಧ್ಯಯನವಾಗುತ್ತಿದೆ.}

ಸಸ್ಯಪ್ರಚೋದಕಗಳ ಬಿಗಿ ಹಿಡಿತ:

ಸಸ್ಯದ ಬೆಳವಣಿಗೆ ಅಭಿವೃದ್ಧಿಯನ್ನು ತೀವ್ರವಾಗಿ ಪ್ರಭಾವಿಸುವ ಅಂಶ ಸಸ್ಯಪ್ರಚೋದಕಗಳು ಅಥವಾ ಹಾರ್ಮೋನ್. ಈ ಮೇಲೆ ಹೇಳಿದ ಎಲ್ಲಾ ಶಾರಿರೀಕ ಕ್ರಿಯೆಗಳ ಮೇಲೂ ಹಾರ್ಮೋನ್ ಗಳ ಬಲವಾದ ಹಿಡಿತವಿದೆ. ಕೃಷಿಯಲ್ಲಿ ಸಸ್ಯಪ್ರಚೋದಕಗಳ ಬಳಕೆಯ ಬಗ್ಗೆ ಪತ್ರಿಕೆಯಲ್ಲಿ ಹಲವಾರು ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಆಕ್ಸಿನ್ ಜೀವಕೋಶದ ವಿಸ್ತರಣೆ, ಜೀವಕೋಶಗಳು ಪ್ರಬುದ್ಧವಾಗುವಿಕೆ, ಬೇರಿನ ಬೆಳವಣಿಗೆ, ಮುಖ್ಯ ಕಾಂಡದ ಬೆಳವಣಿಗೆ, ಕಾಯಿ ಕಚ್ಚುವಿಕೆಯನ್ನು ನಿಯಂತ್ರಿಸುತ್ತದೆ; ಸೈಟೋಕೈನಿನ್ ಜೀವಕೋಶದ ವಿಭಜನೆ, ಚಿಗುರು ಎಲೆಗಳ ಅಭಿವೃದ್ಧಿ ನಿಯಂತ್ರಿಸುವುದರ ಜೊತೆ ವೃದ್ಧಾಪ್ಯವನ್ನು ಮುಂದೂಡುತ್ತವೆ; ಜಿಬ್ಬರಲಿನ್ ಹೂ ಅರಳುವುದು, ಬೀಜ ಮೊಳಕೆಯೊಡೆಯುವಿಕೆಯನ್ನು ನಿಯಂತ್ರಿಸುತ್ತದೆ; ಕಾಯಿ ಹಣ್ಣಾಗುವಿಕೆಯಲ್ಲಿ ಎಥೆಲಿನ್ ಪ್ರಮುಖ ಪಾತ್ರ ವಹಿಸುತ್ತದೆ; ಬೀಜಗಳ ಸುಪ್ತಾವಸ್ಥೆ, ಎಲೆ ಹೂವು ಕಾಯಿಗಳ ಉದುರುವಿಕೆ, ವಾತಾವರಣದ ಒತ್ತಡಗಳನ್ನು ಸಹಿಸಿಕೊಳ್ಳಲು ಅಬ್ಸಿಸ್ಸಿಕ್ ಆಸಿಡ್ ಸಹಕರಿಸುತ್ತದೆ. ಸಸ್ಯಗಳ ರಕ್ಷಣಾ ವ್ಯವಸ್ಥೆ ಜಾಸ್ಮೋನಿಕ್ ಆಸಿಡ್ ಎಂಬ ಪ್ರಚೋದಕದ ಹತೋಟಿಯಲ್ಲಿದೆ. ಹೀಗೆ ಸಸ್ಯಾಭಿವೃದ್ಧಿಯ ಶಾರಿರೀಕ ಕ್ರಿಯೆಯ ಪ್ರತಿ ಹಂತವೂ ಹಾರ್ಮೋನ್ ಗಳ ನಿಗಾದಲ್ಲೇ ನಡೆಯುತ್ತದೆ.

ಶಾರಿರೀಕ ಕ್ರಿಯೆಗಳ ನಿಯಂತ್ರಣ:

ಸಸ್ಯಗಳಲ್ಲಿ ನಡೆಯುವ ಶಾರಿರೀಕ ಕ್ರಿಯೆಗಳ ಬಗ್ಗೆ ತಿಳಿಯಿತು. ಕೃಷಿಯಲ್ಲಿ ಇವುಗಳನ್ನು ನಿಯಂತ್ರಿಸಿ ಬೆಳೆಗಳ ಇಳುವರಿ ಉತ್ಪಾದನೆ ಹೆಚ್ಚಿಸುವುದು ಸಾಧ್ಯವೇ? ಖಂಡಿತ ಸಾಧ್ಯ. ನೀರಿನ ನಿರ್ವಹಣೆ, ಪೋಷಕಾಂಶ ನಿರ್ವಹಣೆ, ಕೀಟ ರೋಗದ ನಿರ್ವಹಣೆ, ತಾಪಮಾನ ಆರ್ದ್ರತೆ ನಿರ್ವಹಣೆ ಮೂಲಕ ಶಾರಿರೀಕ ಕ್ರಿಯೆಗಳನ್ನು ನಿಯಂತ್ರಿಸಬಹುದು. ಸಸ್ಯ ಪ್ರಚೋದಕಗಳ ಬಳಕೆಯಿಂದ ಬೆಳವಣಿಗೆ ಅಭಿವೃದ್ಧಿಯನ್ನು ನಿಯಂತ್ರಿಸಬಹುದು. ಗಿಡಿಗಳ ನಡುವಿನ ಅಂತರ ಕಾಯ್ದುಕೊಳ್ಳುವುದು, ಕತ್ತರಿಸುವಿಕೆ, ಸವರುವಿಕೆ, ಚಾಟನಿಯಂತಹ ತಂತ್ರಗಳಿಂದ ಹೂಬಿಡುವಿಕೆಯನ್ನು ನಿಯಂತ್ರಿಸಬಹುದು. ದ್ಯುತಿಸಂಶ್ಲೇಷಣೆಯನ್ನು ನೇರವಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದರೂ ವಾತಾವರಣದ ಅಂಶಗಳನ್ನು ನಿಯಂತ್ರಿಸುವುದರ ಮೂಲಕ ತಕ್ಕಮಟ್ಟಿಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಇದಕ್ಕೆ ಸೂಕ್ತ ಉದಾಹರಣೆ ಪಾಲಿಹೌಸ್ ನಂತ ಸಂರಕ್ಷಿತ ಕೃಷಿ.

ಮನುಷ್ಯನ(ಕಿಂತ)ಷ್ಟೇ ಹುಶಾರಿ!?

ಚರ್ಮದ ಹೊದಿಕೆ, ಚಲನೆಗೆ ಮಾಂಸಖಂಡ, ಆಧಾರಕ್ಕೆ ಮೂಳೆಗಳು, ಯೋಚನೆಗೆ ನರವ್ಯೂಹ, ಆಹಾರ ಜೀರ್ಣವಾಗಿಸಲು ಪಚನ ಕ್ರಿಯೆ, ಜೀರ್ಣಿಸಿದ್ದನ್ನು ಹೊರಹಾಕಲು ವಿಸರ್ಜನೆ, ಆಮ್ಲಜನಕ ಸಾಗಣೆಗೆ ರಕ್ತ ಪರಿಚಲನೆ, ರಕ್ತ ಶುದ್ಧೀಕರಣಕ್ಕೆ ಸೋಸುವಿಕೆ, ಒಂಭತ್ತು ತಿಂಗಳ ಗರ್ಭಧಾರಣೆ ಪೋಷಣೆ, ಪ್ರತಿ ಕೆಲಸಕ್ಕೂ ಬೇರೆ ಅಂಗ, ಮನುಷ್ಯ ದೇಹದ ರಚನೆ ಕಾರ್ಯ ಎಷ್ಟೊಂದು ಸುವ್ಯವಸ್ಥಿತ. ಎಪಿಡರ್ಮಿಸ್ ನ ಹಸಿರು ಹೊದಿಕೆ, ಬೇರು-ಎಲೆಗಳ ಸೀಮಿತ ಚಲನೆ, ಕೋಶದಲ್ಲಿನ ನೀರಿನಂಶವೇ ಆಧಾರ, ಪ್ರಚೋಧನೆಗೆ ತಕ್ಕ ಪ್ರತಿಕ್ರಿಯೆ, ನರವ್ಯೂಹವಿಲ್ಲದಿದ್ದರೂ ನಾಲಗಳ ಸಂಪರ್ಕ, ತ್ಯಾಜ್ಯಕ್ಕಾಗಿ ಭಾಷ್ಪವಿಸರ್ಜನೆ,  ಹೂವು ಕಾಯಿ ಬೀಜಗಳ ಸಂತಾನೋತ್ಪತ್ತಿ ಮಾನವನಷ್ಟು ಸೌಕರ್ಯವಿಲ್ಲದಿದ್ದರೂ ಸಸ್ಯಗಳು ಶಾರಿರೀಕ ಕ್ರಿಯೆಗಳನ್ನು ನಿರ್ವಹಿಸಬಲ್ಲವು ಎಂದರೆ ಆಶ್ಚರ್ಯವೆನಿಸುತ್ತದೆ. ಪ್ರಜ್ಞೆ, ಚಲನಶೀಲತೆಯಿಂದ ಕೂಡಿದ ಮಾನವನಿಗಿಂತಲೂ ದಕ್ಷ ದ್ಯುತಿಸಂಶ್ಲೇಷಣೆ ವ್ಯವಸ್ಥೆ ಹೊಂದಿರುವ ಸಸ್ಯಗಳು ವಿಶೇಷವೆನಿಸುತ್ತವೆ. ಹೀಗೆ ಸಸ್ಯಲೋಕದ ಅದ್ಭುತವನ್ನು ತೆರೆದಿಡುತ್ತಾ ಸಸ್ಯ ಅಂಗರಚನಾಶಾಸ್ತ್ರ, ಶರೀರ ಶಾಸ್ತ್ರದ ಸರಣಿ ಲೇಖನಗಳಿಗೆ ವಿರಾಮ ಕೊಡೋಣ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ