ಜೇಡ್ ಪ್ಲಾಂಟ್
ಒಳಾಂಗಣ ಸಸ್ಯ ಪಾಲಕರೆಲ್ಲರಿಗೂ ಪರಿಚಿತ
ಸಸ್ಯಗಳೆಂದರೆ 'ಸಕ್ಯುಲೆಂಟ್ಸ್'ಗಳು. ನೋಡಲೇನೋ ಅಂದವಾದ ಈ ಸಸ್ಯ ವರ್ಗ ಕೆಲವು ಸಲ ಕಾಳಜಿ ಮಾಡಲು ಕಷ್ಟವೆನಿಸಬಹುದು.
ನೀರುಣಿಸುವುದು, ಮಣ್ಣಿನ ಮಿಶ್ರಣ ಸಲ್ಪ ಯಡವಟ್ಟಾದರೂ 'ಇಚಿವೇರಿಯಾ'ದಂತಹ ಸಸ್ಯಗಳು ಕೊಳೆತು ಹೋಗುವುದು
ಸಾಮಾನ್ಯ. ಇದರಿಂದ ಬೇಸರಗೊಂಡು ಸಕ್ಯುಲೆಂಟ್ಸ್ ಗಳು ಕಷ್ಟವೆಂದು ಎಷ್ಟೋ ಸಲ ನಿರ್ಲಕ್ಷ ಮಾಡುತ್ತೇವೆ.
ಆದರೆ ಸಕ್ಯುಲೆಂಟ್ಸ್ ಗಳದ್ದು ತುಂಬಾ
ದೊಡ್ಡ ಗುಂಪು. ಅವುಗಳಲ್ಲೂ ಮಣ್ಣು-ನೀರಿನ ಸಮಸ್ಯೆಯನ್ನು ಬಲವಾಗಿ ಎದುರಿಸುವ ಗಟ್ಟಿ ಜಾತಿಗಳಿವೆ.
'ಜೇಡ್ ಪ್ಲಾಂಟ್' ಅಂತಹ ಗಟ್ಟಿ ಜಾತಿಯ ಒಳಾಂಗಣ ಸಕ್ಯುಲೆಂಟ್ ಸಸ್ಯಗಳಿಗೆ ಅತ್ಯುತ್ತಮ ಉದಾಹರಣೆ.
'ಜೇಡ್ ಪ್ಲಾಂಟ್' ಅಥವಾ 'ಕ್ರಾಸುಲಾ
ಓವೆಟಾ' ಸುಲಭವಾಗಿ ಬೆಳೆವ ಅಲಂಕಾರಿಕ ಒಳಾಂಗಣ ಸಸ್ಯ. ಒಂದೆರಡು ಇಂಚಿನ ಚಿಕ್ಕ ಸಸ್ಯವಾಗಲಿ, ಒಂದೆರಡು
ಅಡಿ ದೊಡ್ಡದಾಗಿ ಬೆಳೆಯಲಿ, ಜೇಡ್ ನ ಅಂದವನ್ನು ಬೇರೆ ಯಾವುದೇ ಸಸ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ.
ಚಿಕ್ಕದಾಗಿದ್ದಾಗ ಕಡು ಹಸಿರು ನಾಣ್ಯದಂತಹ ಎಲೆಗಳು; ದೊಡ್ಡದಾದಾಗ ಮರಗಳ ದೊರಗು ಕಾಂಡದಂತೆ ಕಾಣುವ
ದಂಟುಗಳು ಜೇಡ್ ಸಸ್ಯದ ಗಮನ ಸೆಳೆವ ವಿಶೇಷ ಲಕ್ಷಣಗಳು.
ಮೂಲತಃ ದಕ್ಷಿಣ ಆಫ್ರಿಕಾದ ಈ ಸಸ್ಯಗಳು
1768ರಲ್ಲಿ ಇಂಗ್ಲೆಂಡ್ ನಲ್ಲಿ ಒಳಾಂಗಣದಲ್ಲಿ ಬಳಕೆಗೆ ಬಂದವು. ಕಾಲ ಕ್ರಮೇಣ ಎಲ್ಲೆಡೆ ಹಬ್ಬಿ ಇಂದು
ಶತಮಾನದ ಒಳಾಂಗಣ ಜೀವನವನ್ನು ಪೂರೈಸಿವೆ. ಎಲೆಗಳ ಘಾಡ ಹಸಿರು ಬಣ್ಣ 'ಜೇಡ್' ಎಂಬ ಹಸಿರು ವಜ್ರವನ್ನು
ಹೋಲುವ ಕಾರಣ ಅದೇ ಹೆಸರು ಚಾಲ್ತಿಗೆ ಬಂತು. ಎಲೆಗಳು ರಸಭರಿತವಾಗಿ ದಪ್ಪವಾಗಿಯೂ (ಕ್ರಾಸುಲಾ ಎಂದರೆ
ದಪ್ಪ) ಅಂಡಾಕಾರವಾಗಿಯೂ (ಒವಾಟಾ ಎಂದರೆ ಮೊಟ್ಟೆಯಾಕಾರ) ಇರುವುದರಿಂದ 'ಕ್ರಾಸುಲಾ ಒವಾಟಾ' ಎಂದು ನಾಮಕರಣ
ಮಾಡಲಾಯಿತು.
ಸುಲಭವಾಗಿ ಬೆಳೆಯಬಲ್ಲ ತಾಳ್ಮೆ, ಕಾಳಜಿ
ಬೇಡದ ಸಸ್ಯ ಜೇಡ್. ನಿಧಾನವಾಗಿ ಬೆಳೆದರೂ ಹತ್ತಾರು ಚಿಗುರು ಕೊಂಬೆಗಳನ್ನು ಬಿಟ್ಟು ಪೊದೆಯಾಗಿ ಕಾಣುವ
ಗಿಡವಿದು. ಸಾಮಾನ್ಯವಾಗಿ ಹೂಬಿಡದ ಜೇಡ್ ಅಪರೂಪಕ್ಕೆ ನಕ್ಷತ್ರದಂತ ಬಿಳಿ ಪುಟ್ಟ ಹೂಗಳಿಂದ ಕಂಗೊಳಿಸುತ್ತವೆ.
ಪ್ರೀತಿಯಿಂದ ಬೆಳೆಸಿದಲ್ಲಿ ನೂರು ವರ್ಷಗಳಷ್ಟು ಧೀರ್ಘ ಕಾಲ ಇವು ಬದುಕಬಲ್ಲವು. ವಯಸ್ಸಾದಂತೆ ಚಿಕ್ಕ
ಮರದ ನೋಟವನ್ನು ಹೊಂದುವ ಕಾರಣ ಇವು 'ಬೋನ್ಸಾಯ್'ಗೆ ಅತ್ಯಂತ ಸೂಕ್ತ. ಎಳೆಯವಿದ್ದಾಗ ಮೆದುವಾದ ಬಾಗುವ
ಕೊಂಬೆಗಳಿರುವ ಕಾರಣ ಯಾವುದೇ ಆಕಾರವನ್ನೂ ಇವುಗಳಿಗೆ ಕೊಡಬಹುದು. ನವಿಲು, ಗೋಪುರ, ಕಮಾನು ಇತರೆ ಆಕಾರಗಳನ್ನು
ಕೊಟ್ಟು 'ಟೋಪಿಯರಿ' ಯಾಗಿ ಬದಲಿಸಬಹುದು.
ತಿರುಚು ಎಲೆಯ 'ರಿಪ್ಪಲ್', ಮಿಶ್ರ ಬಣ್ಣದ
ಎಲೆಯ 'ವೇರಿಗೆಟಾ', ಕೆಂಪು ತುದಿಯ 'ಕ್ಯಾಲಿಫೋರ್ನಿಯಾ ರೆಡ್ ಟಿಪ್', ಕೊಳವೆ ಎಲೆಯ 'ಹೊಬ್ಬಿಟ್',
ಹೀಗೆ ಹಲವಾರು ವೈವಿಧ್ಯಮಯ ತಳಿಗಳು ಜೇಡ್ ನಲ್ಲಿವೆ.
ಜೇಡ್ ಗಳನ್ನು ಹೊರಾಂಗಣದಲ್ಲೂ ಬೆಳೆಸಬಹುದು. ಒಳಾಂಗಣದಲ್ಲಿ
ಬೆಳೆಸುವುದಾದಲ್ಲಿ ದಿನದ ಆರೆಂಟು ತಾಸು ಬೆಳಕು ಸಿಗುವಂತಿರಬೇಕು. ನೀರು ಕಮ್ಮಿಯಾದರೂ ತೊಂದರೆಯಿಲ್ಲ,
ಹೆಚ್ಚಾದಲ್ಲಿ ಕಷ್ಟ. ನೀರು ಬಸಿಯುವ ಪೌಷ್ಟಿಕ ಮಣ್ಣಿನ ಮಿಶ್ರಣ ಒಳ್ಳೆಯದು. ನೀರು
ಕಮ್ಮಿಯಾದಲ್ಲಿ ಎಲೆ ಒಣಗುವುದು, ಸುಕ್ಕಾಗುವುದನ್ನು ಗಮನಿಸಬಹುದು. ತಕ್ಷಣವೇ ನೀರುಣಿಸಿದಲ್ಲಿ ಮತ್ತೆ
ಹುರುಪಿನಿಂದ ಬೆಳೆಯಬಲ್ಲವು.ಆಗಾಗ ಚಾಟನಿ (ಪ್ರೂನಿಂಗ್), ಪ್ರತಿ ಎರಡು ವರ್ಷಕ್ಕೊಮ್ಮೆ ರಿಪಾಟಿಂಗ್
ಅಗತ್ಯ. ಜೇಡ್ ಸಸ್ಯದ ತಲೆ/ಚೆಂಡಿನ ಭಾಗ ಭಾರವಾಗುತ್ತಾ ಸಾಗುವುದರಿಂದ ಮಣ್ಣಿನ/ ಸಿರಾಮಿಕ್/ ಸಿಮೆಂಟಿನ
ಪಾಟ್ ಸೂಕ್ತ.
ಜೇಡ್ ಪ್ಲಾಂಟ್ ಗಳ ಸಸ್ಯಾಭಿವೃದ್ಧಿ
ಅತ್ಯಂತ ಸುಲಭ. ಆರೋಗ್ಯಕರ ಗಿಡವೊಂದ
ರಿಂದ ಕಟಿಂಗ್ಸ್ ಬೇರ್ಪಡಿಸಿ ಹತ್ತಾರು ಮರಿ ಸಸ್ಯಗಳನ್ನು
ಪಡೆಯಬಹುದು. ವಿಶೇಷ ಸಂದರ್ಭದಲ್ಲಿ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ಸಂಭ್ರಮಿಸಬಹುದು.
Comments
Post a Comment