ಬೀಜಾಸುರರು! ಕಾಡಿನ ಉಸಿರು ಕಸಿಯುವ ಕಳೆ ಖೂಳರು

 

ವಯನಾಡಿನ ಸಂಪದ್ಭರಿತ ತೋಳ್ಪೆಟ್ಟಿ ಕಾಡಿನ ಮಧ್ಯಭಾಗ; ಸೂರ್ಯನ ಬೆಳಕು ನೆಲಕ್ಕೂ ಮುಟ್ಟದಷ್ಟು ಮರಗಳ ದಟ್ಟತೆ; ಹಸಿರಿನ ರಾಶಿ ಕೊಳೆತು ಬಂಗಾರವಾದ ಮಣ್ಣು; ಸದ್ದಿಲ್ಲದೇ ಸೊಂಪು ಹಾಸಿನ ಮೇಲೆ ಆನೆಯ ಲದ್ದಿಯಲ್ಲಿ ಹತ್ತಾರು ಬೀಜಮೊಳಕೆ ಒಡೆಯುತ್ತಿದೆ. ಅನ್ಯಲೋಕದ ಈ ಬೀಜಗಳು ಮುಂದೊಂದು ದಿನ ಆಕ್ರಮಣಕಾರಿಯಾಗಿ ತಮ್ಮ ಬೇರಿನ ಜಾಲ ಬೀಸಿ, ಬೆಳಕಿದ್ದಲ್ಲೆಲ್ಲಾ ಹರವನ್ನು ಚಾಚಿ, ಪಾಪದ ಕಾಡು ಸಸಿಗಳನ್ನು ಉಸಿರುಗಟ್ಟಿ ಸಾಯಿಸಿ, ಜೀಡಾಗಿ ಬೆಳೆದು ವನ್ಯ ಜೀವಿಗಳ ಬದುಕನ್ನೇ ದುಸ್ತರ ಮಾಡಬಲ್ಲ ಯಾವ ಮುನ್ಸೂಚನೆಯೂ ಇಲ್ಲ. ಸಾಮಾಜಿಕ ಅರಣ್ಯಣ್ಯಾಭಿವೃದ್ಧಿಗೆಂದು ಕೇರಳದ ಅರಣ್ಯ ಇಲಾಖೆ 1986ರಲ್ಲಿ ತೋಳ್ಪೆಟ್ಟಿ ಕಾಡುಗಳ ಅಂಚಿನಲ್ಲಿ ನೆಟ್ಟ ಅಮೇರಿಕಾ ಮೂಲದ ‘ಸೆನ್ನಾ ಸ್ಪೆಕ್ಟಾಬಿಲಿಸ್’ ಎಂಬ ಈ ಸಸ್ಯದ ಕುಕೃತ್ಯಗಳನ್ನು ಅರಿತುಕೊಳ್ಳುವ ಹೊತ್ತಿಗೆ ಮಧುಮಲೈ ಸತ್ಯಮಂಗಲ ಬಂಡೀಪುರ ನಾಗರಹೊಳೆ ಬಿ.ಆರ್ ಹಿಲ್ಸ್ ಹೀಗೆ ಕೇರಳ ತಮಿಳುನಾಡು ಕರ್ನಾಟಕದ ಅರಣ್ಯಶ್ರೇಣಿಗಳು ಅರ್ಧದಷ್ಟು ಹಸಿರು ಮರುಭೂಮಿಯಾಗಿ ಪರಿವರ್ತನೆ ಆಗಿಹೋಗಿದ್ದವು!

ಈಗ ಇದೇ ಸೆನ್ನಾ ಸ್ಪೆಕ್ಟಾಬಿಲಿಸ್ ಮತ್ತೆ ಸುದ್ದಿಯಲ್ಲಿದೆ. ಇತ್ತೀಚಿನ ಕೆಲ ಸಂಶೋಧನೆಗಳು ಆತಂಕಕಾರಿ ಮಾಹಿತಿಗಳನ್ನು ಹೊರಹಾಕಿವೆ. ಕಾಡಿನ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ತರುವಂತಹ ಇಂತಹ ಕಳೆಗಳನ್ನು ನಿರ್ವಹಣೆ ಮಾಡುವತ್ತ ಅರಣ್ಯ ಇಲಾಖೆ ಪ್ರಾಶಸ್ತ್ಯ ಕೊಡಬೇಕೆಂದು ಕರ್ನಾಟಕದ ಪರಿಸರ ಸಚಿವಾಲಯವೂ ಆಗಾಗ ಒತ್ತಿ ಹೇಳುತ್ತಿದೆ.

ಸ್ವದೇಶದಲ್ಲಿ ಕಳೆಗಳಾದ ವಿದೇಶಿ ಸಸ್ಯಗಳು

ಟೊಮ್ಯಾಟೋ ಮೆಣಸು ಪಪ್ಪಳೆ ಪೈನಾಪಲ್ ನಾವು ಸೇವಿಸುವ, ಬೆಳೆಸುವ, ದಿನನಿತ್ಯ ಬಳಸುವ ಎರಡು ಸಾವಿರಕ್ಕೂ ಹೆಚ್ಚು ಸಸ್ಯಗಳು ಸ್ಳಳೀಯವಲ್ಲ; ಬೇರೆ ದೇಶದಿಂದ ಬಂದಂತವು. ಹೆಚ್ಚಿನವನ್ನು ಬೇಕಂತಲೇ ತರಲಾಯಿತು. ಬ್ರಿಟಿಷರ ಕಾಲದಲ್ಲಿ ಅಂದಚಂದಕ್ಕೆಂದು ಭಾರತಕ್ಕೆ ಬಂದ, ತೇಜಸ್ವಿಯವರ ಕೃತಿಗಳಲ್ಲಿ ಆಗಾಗ ಇಣುಕುವ ಲ್ಯಾಟಿನ್ ಅಮೇರಿಕಾ ಮೂಲದ ಲಂಟನಾ (ಚದರಂಗಿ), ಗೋಧಿಯೊಡನೆ ಗೊತ್ತಿಲ್ಲದೇ ನುಸುಳಿದ ಪಾರ್ಥೇನಿಯಂ (ಕಾಂಗ್ರೆಸ್ ಗಿಡ) ಮತ್ತು ಅಷ್ಟೇ ದುರಂತಮಯವಾದ ಸೆನ್ನಾ ಸ್ಪೆಕ್ಟಾಬಿಲಿಸ್, ಸೆನ್ನಾ ತೋರಾ (ತಗಟೆಸೊಪ್ಪು), ಪ್ರೊಸೊಪಿಸ್ ಜ್ಯುಲಿಫ್ಲೋರಾ (ಬಳ್ಳಾರಿ ಜಾಲಿ), ವಾಟರ್ ಹಯಾಸಿಂತ್ ಇವು ಕೂಡಾ ನಮಗೆಲ್ಲಾ ತೀರಾ ಪರಿಚಿತ. ಆದರೆ ಆಕ್ರಮಣಕಾರೀ ಕಳೆಗಳಾಗಿ! ರಸ್ತೆ ಬದಿ, ಖಾಲಿ ಸೈಟ್, ಕೃಷಿ ತೋಟ, ಹುಲ್ಲುಗಾವಲು, ದಟ್ಟಕಾಡು, ಕೆರೆದಂಡೆ ದೇಶಾದ್ಯಂತ ಇವು ಕಾಣದ ಜಾಗವಿಲ್ಲ. ಇಂತಹ ಸಾಮ್ರಾಜ್ಯಶಾಹೀ ದಾಳಿಕೋರರನ್ನು ‘ಇನ್ವೇಸಿವ್ ಪ್ಲಾಂಟ್ಸ್’ ಎಂದು ಕರೆಯಲಾಗುತ್ತದೆ.

ಕಳೆಗಳ ಕಿರಿಕ್ಕು

ರಕ್ತಬೀಜಾಸುರನಂತೆ ಕಡಿದಷ್ಟೂ ಚಿಗುರುವ, ಪ್ರಾಣಿಗಳ ಬೆನ್ನ ಮೇಲೆ ಸವಾರಿ ಮಾಡುತ್ತಾ ನಾಡ ತುಂಬಾ ಹಬ್ಬುವ, ಸುಟ್ಟರೂ ಸುಪ್ತ ಬೀಜಗಳಿಂದ ಮತ್ತೆ ಹುಟ್ಟುವ, ಉರಿ ಬಿಸಿಲಿಗೆ ಇಡೀ ಕಾಡು ಸೋತರೂ ಮುಂಜಾನೆ ತೊಟ್ಟಿಕ್ಕುವ ಮಂಜಿನ ಹನಿಯಿಂದಲೇ ಬಾಯಾರಿಕೆ ತಣಿಸಿಕೊಳ್ಳಬಲ್ಲ ಕ್ಷುದ್ರ ಜಾತಿಗಳಿವು. ಬಂಗಾರದ ಹೂವಿನ ಬೆಡಗಿನ ಸೆನ್ನಾ ಸ್ಪೆಕ್ಟಾಬಿಲಿಸ್ ನ ಒಳಹುಳುಕು ಸಾಮಾನ್ಯದ್ದಲ್ಲ. ಒಂದು ವಯಸ್ಕ ಮರ ಬೇಸಿಗೆಯಲ್ಲಿ ಹೂಬಿಟ್ಟಾಗ ಸಾವಿರ ಕಾಯಿ ಕಚ್ಚಬಲ್ಲದು, ಪ್ರತಿ ಕಾಯಿಯಲ್ಲಿ ಐವತ್ತರ ಸಂಖ್ಯೆಯಲ್ಲಿ ಬೀಜವಿದೆಯೆಂದರೂ ಒಂದು ವರ್ಷದಲ್ಲಿ ಹೆಚ್ಚುಕಮ್ಮಿ ಐವತ್ತು ಸಾವಿರ ಮರಿಗಳ ಸೈನ್ಯವೇ ಸಜ್ಜಾಯಿತು! ಜೊತೆಗೆ ಸೆನ್ನಾ ಗಿಡದ ಎಲೆ, ಕಾಂಡ, ಬೇರಿನಲ್ಲಿ ಕಂಡುಬರುವ ರಾಸಾಯನಿಕಗಳು ಸುತ್ತಲಿನ ಸಸ್ಯಗಳ ಬೆಳವಣಿಗೆ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುವುದನದ್ನು ಗುರುತಿಸಲಾಗಿದೆ (ಅಲೆಲೋಪತಿ). ತಿನ್ನಲು ರುಚಿಯಿರದ, ಕೆಲವೊಮ್ಮೆ ವಿಷಕಾರಿಯಾದ ಸೆನ್ನಾ ಸಸ್ಯಗಳನ್ನು ಮೇಯುವ ಸಸ್ಯಾಹಾರಿಗಳೂ ಇಲ್ಲ. ಬದಲಿಗೆ ಆನೆಯಂತ ಪ್ರಾಣಿಗಳಿಗೆ ಸೆನ್ನಾ ಬೀಜವನ್ನು ತಿಂದು ಕಕ್ಕುವ ಅಭ್ಯಾಸವಾಗಿದೆ. ಒಂದು ಆನೆ ಲದ್ದಿಯಲ್ಲಂತೂ ಎರಡು ಸಾವಿರ ಸೆನ್ನಾ ಬೀಜಗಳಿದ್ದಿದ್ದನ್ನು ಎಣಿಸಿದ್ದಾರೆ ‘ಏಟ್ರೀ’ (ಅಶೋಕಾ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್, ಬೆಂಗಳೂರು) ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಅನೂಪ್.  

ಆಕ್ರಮಣಕಾರಿ ಸಸ್ಯಗಳು ಸ್ಳಳ, ಬೆಳಕು, ತೇವಾಂಶ, ಪೋಷಕಾಂಶ ಮತ್ತು ಪರಾಗಸ್ಪರ್ಷದ ಲಾಭಕ್ಕಾಗಿ ಸ್ಳಳೀಯ ಸಸ್ಯಗಳೊಡನೆ ತೀವ್ರ ಪೈಪೋಟಿ ನಡೆಸುತ್ತವೆ; ವೇಗವಾಗಿ ಬೆಳೆಯುತ್ತಾ ಮಟ್ಟಿಯಾಗುವ ಇಂತಹ ಸಸ್ಯಗಳು ಕಾಡಿನ ಚಹರೆಯನ್ನೇ ಬದಲಾಯಿಸಬಲ್ಲವು; ಮೇವಿನ ಕೊರತೆಯಿಂದ ಕಾಡು ಬಿಡುವ ಆನೆಯಂತ ಪ್ರಾಣಿಗಳು ನಾಡು ಸೇರಬಲ್ಲವು; ಆನೆಗಳೇ ಸಾಗದ  ಕಾಡಿನಲ್ಲಿ ಮಾನವರು ಹೋಗುವುದುಂಟೇ? ಅಣಬೆ ಕಂದಮೂಲ ಕಿರು ಅರಣ್ಯ ಉತ್ಪನ್ನಗಳನ್ನು ಅವಲಂಬಿತ ಸೋಲಿಗರಂತ ವನವಾಸಿಗಳ ಬದುಕು ದುಸ್ವಪ್ನವೇ; ಅವರ ಜೀವನಾಧಾರವಾದ ಬಿದಿರು, ನೆಲ್ಲಿಗಳನ್ನು ಲಂಟನಾಗಳು ಕಸಿದುಕೊಂಡಿವೆ; ಹೀಗೆ ಮುಂದುವರೆದರೆ ಕಾಡುಗಳೇ ಕಣ್ಮರೆಯಾಗುವ ಭೀತಿಯಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ‘ಏಟ್ರೀ’ಯ ಸಂಶೋಧಕಿ ಅಂಕಿಲಾ ಹಿರೇಮಠ.

ನಿರ್ವಹಣೆಯ ದುಬಾರಿ ಹೊಣೆ

ಸ್ವಂತ ಶ್ರಮದಿಂದಲೋ, ಕಿಸೆಯಿಂದ ಖರ್ಚು ಮಾಡಿಯೋ ನಿಮ್ಮ ಮನೆಯ ಸುತ್ತಲ  ಕಳೆಯನ್ನೇ ಕಡಿದು ಮುಗಿಸುವಲ್ಲಿ ಸಾಕಪ್ಪಾ ಅನಿಸುವಾಗ ಕಾಡ ತುಂಬವಿರುವ ಈ ಕಳೆಗಳ ನಿರ್ವಹಣೆಯೆಂದರೆ ಸುಲಭದ ಮಾತೇ! ಇಡೀ ದೇಶದ ಆಕ್ರಮಣಕಾರಿ ಕಳೆಗಳ ಒಂದು ಸುತ್ತಿನ ನಿರ್ವಹಣೆಗೆ ಒಂದು ಲಕ್ಷ ಕೋಟಿ ಹಣ ವೆಚ್ಚವಾಗುವುದನ್ನು ಅಂದಾಜಿಸಲಾಗಿದೆ.

ಸಮಸ್ಯೆಯೆಂದರೆ ಸಸ್ಯವೊಂದು ಆಕ್ರಮಣಕಾರಿ ಪ್ರವೃತ್ತಿ ಹೊಂದುತ್ತಿದೆ ಎಂದು ಕಂಡುಕೊಳ್ಳುವ ವರೆಗೆ ಸಮಯ ಮೀರಿರುತ್ತದೆ. 1805ರಲ್ಲಿ ಅಲಂಕಾರಿಕ ಉದ್ದೇಶದಿಂದ ಪರಿಚಿತವಾದ ಲಂಟನಾ ಮುಂದಿನ ಶತಮಾನದಲ್ಲಿ ವಿಕೃತವಾಗುವ ಬಗ್ಗೆ ಸುಳಿವೇ ಇರಲಿಲ್ಲ. ಬಿಳಿಗಿರಿ ರಂಗಸ್ವಾಮಿ ಬೆಟ್ಟದಲ್ಲಿ 1997ರಲ್ಲಿ ಏಟ್ರೀ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಲಂಟನಾ 5% ವ್ಯಾಪ್ತಿಯಲ್ಲಿರುವುದನ್ನು ದಾಖಲಿಸಿತ್ತು, ಈಗ 50% ಏರಿಕೆಯಾಗಿರುವುದನ್ನು ಅಂಕಿಲಾ ತಿಳಿಸುತ್ತಾರೆ. ಹಾಗಾಗಿ ವಿದೇಶೀ, ವಿಶೇಷವಾಗಿ ಅಲಂಕಾರಿಕ ಸಸ್ಯಗಳನ್ನು ಬೇರೊಂದು ಪ್ರದೇಶದಿಂದ ತರುವಾಗ ಎಚ್ಚರ ವಹಿಸಬೇಕಾದದ್ದು ಇವುಗಳ ನಿರ್ವಹಣೆಯಲ್ಲಿ ಮೊದಲ ಹಜ್ಜೆ. ಎರಡನೆಯದು, ದೈಹಿಕವಾಗಿ ಕಳೆಗಳ ನಿರ್ಮೂಲನೆ; ಸವರುವುದು, ಚಕ್ಕೆ ಕೆತ್ತಿ ಸಾಯಿಸುವುದು, ಸುಡುವುದು, ಬುಡಮೇಲು ಕೀಳುವುದು, ಈ ಕಸರತ್ತನ್ನು ಒಂದು ಬಾರಿಯಲ್ಲ, ಪದೇ ಪದೇ ಮಾಡಬೇಕಾಗಿದೆ.

ಕಳೆ ಭಾದಿತ ಪ್ರದೇಶಗಳ ಸ್ಥಳೀಯರು ಇವುಗಳಿಗೆ ಈಗಾಗಲೇ ಹೊಂದಿಕೊಂಡಿರುವಂತಿದೆ.  ಜೀವನೋಪಾಯಕ್ಕೆ ಇವು ತಂದೊಡ್ಡಿದ ಸಮಸ್ಯೆ ಪರಿಹರಿಸಿಕೊಳ್ಳಲು ತಮ್ಮದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಉದಾಹರಣೆಗೆ ಪಂಜಾಬ್, ರಾಜಸ್ಥಾನದ ಹುಲ್ಲುಗಾವಲುಗಳನ್ನು ಆವರಿಸಿರುವ ಬಳ್ಳಾರಿ ಜಾಲಿಯನ್ನು ಇದ್ದಿಲಾಗಿ ಪರಿವರ್ತಿಸುವ ಉಪಾಯವನ್ನು ಸ್ಳಳೀಯರು ಕಂಡುಕೊಂಡಿದ್ದಾರೆ. ಪರಿಸರ ಸಂಶೋಧನೆಯಲ್ಲಿ ತೊಡಗಿರುವ ಬೆಂಗಳೂರಿನ ಏಟ್ರೀ ಸಂಸ್ಥೆ ಲಂಟನಾಗಳ ನಿರ್ವಹಣೆಯಲ್ಲಿ ಕಳೆದೆರಡು ದಶಕದಿಂದ ಕೆಲಸ ಮಾಡುತ್ತಿದೆ. ಮಲೆಮಹದೇಶ್ವರ ಬೆಟ್ಟದ ಸೋಲಿಗರ ಜೀವನ ಬೆತ್ತ ಬಿದಿರನ್ನು ಅವಲಂಬಿಸಿರುವುದನ್ನು ಗಮನಿಸಿದ ಏಟ್ರೀ ಕರಕುಶಲ ವಸ್ತುಗಳ ತಯಾರಿಕೆಗೆ ಬದಲಿಯಾಗಿ ಲಂಟನಾವನ್ನು ಬಳಸುವಂತೆ ತರಬೇತಿ ನೀಡುತ್ತಿದೆ. ಸಂಸ್ಥೆಯ ಸಂಶೋಧಕರಾದ ಸಿದ್ದಪ್ಪ ಶೆಟ್ಟಿ, ಹರೀಶ್ ಆರ್.ಪಿ ಇದರೆಡೆ ವಿಶೇಷ ಆಸ್ಥೆ ವಹಿಸಿದ್ದಾರೆ. ಲಂಟನಾಗಳಿಂದ ಆಕರ್ಷಕ ಪೀಠೋಪಕರಣಗಳನ್ನು ತಯಾರಿಸಿ ಬುಡಕಟ್ಟು ಜನರ ಆದಾಯ ವೃದ್ಧಿಸುವ ಯೋಜನೆ ಜಾರಿಯಲ್ಲಿದೆ.

ಕಾಡಷ್ಟೇ ಸಂತ್ರಸ್ತವಲ್ಲ

ಇನ್ವೇಸಿವ್ ಪ್ರಭೇದಗಳಿಂದ ಕಾಡೊಂದೇ ಅಲ್ಲ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಕ್ಷೇತ್ರಗಳೂ ತೊಂದರೆ ಅನುಭವಿಸುತ್ತಿವೆ. ಕ್ಷೇತ್ರ ಬೆಳೆಗಳಿಗೆ ಮುಗಿಬೀಳುವ ಅಮೇರಿಕಾ ಮೂಲದ ಸೈನಿಕ ಹುಳುಗಳು (ಫಾಲ್ ಆರ್ಮಿವರ್ಮ್), 1952ರಲ್ಲಿ ಮೀನುಗಾರಿಕೆಯ ಅಭಿವೃದ್ಧಿಗಾಗಿ ಸರ್ಕಾರವೇ ಪರಿಚಯಿಸಿದ ಆಫ್ರಿಕಾ ಮಧ್ಯಪ್ರಾಚ್ಯ ಮೂಲದ ತಿಲಾಪಿಯಾ ಮೀನುಗಳು, ಈ ಪಟ್ಟಿ ಮುಗಿಯದ್ದು. ಇಂತಹ ಆಕ್ರಮಣಕಾರಿ ಜೀವಿಗಳಿಂದ ಭಾರತದ ಆರ್ಥಿಕತೆಗೆ ವಾರ್ಷಿಕ ಎಂಟು ಲಕ್ಷ ಕೋಟಿ ರೂಪಾಯಿ (ಉತ್ತರ ಪ್ರದೇಶದಂತ ಬೃಹತ್ ರಾಜ್ಯಗಳ ವಾರ್ಷಿಕ ಬಜೆಟ್) ಗಿಂತಲೂ ಹೆಚ್ಚು ಹಣ ನಷ್ಟವಾಗುತ್ತಿದೆ. ಪಟ್ಟಣದಲ್ಲಿ ಪಾರಿವಾಳಗಳು, ರಾತ್ರಿ ಬೆಳಕಿಗೆ ಆಕರ್ಷಿತವಾಗುವ ಹಾತೆಗಳು, ಮುಂಗಿಲಿಗಳು, ನಿಮ್ಮ ಅಕ್ವೇರಿಯಮ್ ನಲ್ಲಿರುವ ಲಯನ್ ಫಿಶ್, ಗೋಲ್ಡ್ ಫಿಶ್, ಕ್ಯಾಟ್ ಫಿಶ್, ಕೋಯ್ ಇವೆಲ್ಲವೂ ಆಕ್ರಮಣಕಾರಿ ಪ್ರಭೇದಗಳೆಂದೇ ಪರಿಗಣಿತ!

ಮಾಹಿತಿ: ಏಟ್ರೀ, ಮೊಂಗಾಬೇ ಇಂಡಿಯಾ, ನೇಚರ್ ಇನ್ ಫೋಕಸ್

 

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ