‘ಸೂರ್ಯ’ಕಾಂತಿ
Why does sunflower face the sun? Find out the reason ‘ಸೂರ್ಯ’ಕಾಂತಿ ಮೂಡಣದಲ್ಲಿ ರವಿ ಮೂಡುವುದನ್ನು ಕಾಯುತ್ತ ಪಡುವಣದೆಡೆಗಿನ ಅವನ ಪಥವನ್ನು ಒಡನೆಯೇ ಅನುಸರಿಸುವ ಈ ಹಳದಿ ವರ್ಣದ ಹೂವನ್ನು ಕಂಡೇ ಇರುತ್ತೀರ. ಸೂರ್ಯನ ತೀಕ್ಷ್ಣ ಕಿರಣದ ಹೊಡೆತಕ್ಕೆ ಪಾಪ 'ಸನ್ ಸ್ಟ್ರೋಕ್' ಆಗಬಹುದೇನೊ ಎಂಬ ಕಾಳಜಿಯೂ ಒಮ್ಮೆ ಮನದಲ್ಲಿ ಮೂಡಿರಬಹುದು. ಬಿರು ಬಿಸಿಲಲ್ಲೂ 'ಟ್ಯಾನ್' ಆಗುವ ಚಿಂತೆ ಇಲ್ಲದೆ ಸೂರ್ಯ ದೇವನನ್ನು ಭಕ್ತಿಯಿಂದ ಪೂಜಿಸುವ ಈ ಹೂವುಗಳ ಶ್ರದ್ಧೆಯನ್ನು ವಿಜ್ಞಾನದ ಭಾಷೆಯಲ್ಲಿ ತಿಳಿಯುವ ಪ್ರಯತ್ನವನ್ನು ಮಾಡಿಯಾಗಿದೆ. ಒಂದು ವಿಚಾರ, ಬೆಳೆದು ಅರಳಿ ನಿಂತ ಹೂಗಳು ಸೂರ್ಯನ ಹಿಂಬಾಲಕರಲ್ಲ! ಅವು ದಿನವಿಡೀ ಪೂರ್ವಕ್ಕೆ ಮುಖ ಮಾಡಿ ನಿಲ್ಲುತ್ತವೆ. ಹಿಂಬಾಲವೇನಿದ್ದರೂ ಇನ್ನೂ ಬೆಳೆಯದ ಎಳೆಯ ಹೂವಲ್ಲಿ ಮಾತ್ರ ಕಾಣಲು ಸಾಧ್ಯ. ಮೊಗ್ಗುಗಳಲ್ಲಿ ಕಂಡುಬರುವ ಈ ನಡವಳಿಕೆಗೆ ಹೆಲಿಯೋಟ್ರಾಫಿಸ್ಮ್ ( Heliotropism -ಸೂರ್ಯಾಭಿವರ್ತನ ಕ್ರಿಯೆ) ಎಂಬುದಾಗಿ ಕರೆಯಲಾಗುತ್ತದೆ. ಬೆಳಕಿನೂಡನೆ ಚಲಿಸುವ ಈ ಕ್ರಿಯೆಗೆ ಕಾರಣ ಗಿಡದೊಳಗಿನ ಜೈವಿಕ ಗಡಿಯಾರ . ಅಲಾರಾಂನಂತೆ 24 ಘಂಟೆಯ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಈ ಜೈವಿಕ ಗಡಿಯಾರ ಸಸ್ಯದ ದೈನಂದಿನ ಕೆಲಸಗಳು ಶಿಸ್ತಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಎಳೆಯ ಹೂವು ಬೆಳ್ಳಂ ಬೆಳಗ್ಗೆ ಪೂರ್ವದ ಸೂರ್ಯನನ್ನು ಸ್ವಾಗತಿಸಿ ಅವನೊಂದಿಗೆ ಪಶ್ಚಿಮಕ್ಕೆ ಚಲಿಸುತ್ತ ರಾತ್...