ಲಜ್ಜಾವತಿ

Here is an article about touch me not plant, one of the wonders of plant kingdom☺




ಲಜ್ಜಾವತಿ
ಕರಿಯ ನೆಲದ ಮೇಲೆ ಮೆತ್ತನೆಯ ಹಸಿರೆಲೆ ಹೊದಿಕೆ ಕಂಡು ಮುಟ್ಟಲು ಹೋದ ಪುಟ್ಟಿ, 'ಅಮ್ಮಾ! ಮುಳ್ಳು ಚುಚ್ಚಿತು!' ಎಂದು ಬೊಬ್ಬಿಟ್ಟಾಗ ಸುಂದರ ಗುಲಾಬಿ ಬಣ್ಣದ ಹೂಗಳ ಆ ಮುಗ್ಧ ಹಸಿರೆಲೆಗಳ ಹಿಂದಿನ ಮುಳ್ಳಿನ ಕ್ರೂರ ಚಹರೆ ಅನಾವರಣಗೊಂಡಿದ್ದು. ಪುಟ್ಟಿಯ ನೋವಿನ ಕಣ್ಣೀರ ನಡುವೆಯೂ ಅಮ್ಮಂಗೆ, ಬರಿಯ ಸ್ಪರ್ಶಕ್ಕೆ ನಾಚಿ ನೀರಾಗಿ ಮುದುಡುವ ಎಲೆಗಳ "ಮ್ಯಾಜಿಕ್"ಗೆ ಮಾರು ಹೋಗಿದ್ದ ಬಾಲ್ಯದ ನೆನಪಾಗಿತ್ತು.
ಆಶ್ಚರ್ಯವೆಂದ್ರೆ ಆ "ಮಂತ್ರವಾದಿ" ಗಿಡ ಈಗಲೂ ಸಸ್ಯ ಶಾಸ್ತ್ರಜ್ಞರ ನೆಚ್ಚಿನದ್ದು. ಮುಟ್ಟಿದರೆ ಮುನಿ, ನಾಚಿಕೆ ಮುಳ್ಳು ಎಂದು ಕರೆಸಿಕೊಳ್ಳುವ ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು "ಮಿಮೊಸಾ ಪುಡಿಕಾ" (Mimosa pudica). ಸಂಸ್ಕೃತದಲ್ಲಿ ಅದರ ಲಜ್ಜೆಯ ಸ್ವಭಾವಕ್ಕೆ ತಕ್ಕಂತೆ 'ಲಾಜ್ವಂತಿ' ಎಂಬ ನಾಮಧೇಯ. ಬಟಾಣಿಯ ಕುಟುಂಬವಾದ 'ಫ್ಯಾಬೆಸೆ'(fabaceae)ಗೆ ಸೇರಿರುವ ಈ ಸಸ್ಯವನ್ನು ಮೊದಲ ಬಾರಿಗೆ ಬ್ರೆಝಿಲ್ ನಲ್ಲಿ ಗುರುತಿಸಲಾಯಿತಾದರೂ ಈಗ ಇದೊಂದು ಉಷ್ಣವಲಯದ ಕಳೆ ಸಸ್ಯ!
ಸಸ್ಯಶಾಸ್ತ್ರದ ವಿಸ್ಮಯ:
ಇರುಳಿನ ಸಮಯದಲ್ಲಿ ಮುದುಡುವ ಮಿಮೊಸಾ ಎಲೆ, ಹಗಲಿನ ಸಮಯದಲ್ಲಿ ತೆರೆದುಕೊಳ್ಳುವಿಕೆಯನ್ನು ಗಮನಿಸಿದ ಫ್ರೆಂಚ್ ನ ಖಗೋಳ ವಿಜ್ಞಾನಿ ಡಿ. ಮೈರನ್ 1729ರಲ್ಲಿ ಜೈವಿಕ ಗಡಿಯಾರದ(biological clock) ಪರಿಕಲ್ಪನೆಗೆ ಮುನ್ನುಡಿ ಬರೆದ. 1880ರಲ್ಲಿ ಜೀವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ ರ "power of movement in plants” ಪುಸ್ತಕ ಸಸ್ಯಗಳ ಚಲನಾಶಕ್ತಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡಿತು.ಅಚರವಾದ ಸಸ್ಯಗಳು ಎಲೆ ಹೂ ಹಣ್ಣು ಬಿಡುವುದು ಮುಂತಾದ ಬೆಳವಣಿಗೆಯ ಮೂಲಕ ಚಲಿಸುತ್ತವೆ ಎಂಬುದು ಡಾರ್ವಿನ್ನರ ವಾದ.  ಅಂತಹ ಚಲನಾ ಶಕ್ತಿಯ ಸ್ಪಷ್ಟ ದೃಷ್ಟಾಂತ, ಪ್ರಚೋದನೆಗೆ ತಕ್ಷಣ ಪ್ರತಿಕ್ರಿಯಿಸುವ ಸಸ್ಯ 'ಮಿಮೊಸಾ'. ಸಸ್ಯಶಾಸ್ತ್ರದ ಎರಡು ಅತ್ಯಂತ ಕೌತುಕ ವಿದ್ಯಮಾನಕ್ಕೆ ಮಿಮೊಸಾ ಸಾಕ್ಷಿ. ಒಂದೆಡೆ ಹಗಲು-ರಾತ್ರಿಯ ಏರಿಳಿತಕ್ಕೆ (nyctinasty) ಉದಾಹರಣೆಯಾದರೆ ಇನ್ನೊಂದೆಡೆ ಸ್ಪರ್ಶಕ್ಕೆ ಪ್ರತಿಕ್ರಿಯಿಸುವ(siesmonasty) ಬಗೆಗೆ ಅದ್ಭುತ ನಿದರ್ಶನ.
ಏಕೀ ನಾಚಿಕೆ!
ಎಲೆಗಳ ಮುದುಡುವಿಕೆಯಿಂದ ದ್ಯುತಿಸಂಶ್ಲೇಷಣಾ ಕ್ರಿಯೆ ಕುಂಠಿತವಾಗುವುದರ ಜೊತೆಗೆ ಮುದುಡುವಿಕೆಗೆ ಬೇಕಾದ ಶಕ್ತಿಯ ವ್ಯಯವೂ ಆಗುವುದು ತನಗೆ ನಷ್ಟವಾದರೂ ನಾಚುವುದನ್ನು ಬಿಡದು ಈ ಸಸ್ಯ. ಎಲೆಯನ್ನು ಮುದುಡಿಸಿ ಒಣಗಿದ ಸಸ್ಯದಂತೆ ಕಾಣಿಸಿಕೊಳ್ಳುವ ಮೂಲಕ ತನ್ನನ್ನು ತಾನು ಸಸ್ಯಾಹಾರಿಗಳಿಂದ ಬಚಾವ್ ಮಾಡಿಕೊಂಡು ತನ್ನ ಮುಳ್ಳಿನ ಮೈ ನ ತಂಟೆಗೆ ಬಾರದಂತೆ ನೀಡುವ ಅಪಾಯದ ಮುನ್ಸೂಚನೆ ಈ ನಾಚಿಕೆ! ಪರಭಕ್ಷಕರಿಂದ ಸ್ವಯಂ ರಕ್ಷಣೆಗೆ ತೆತ್ತ ಶಕ್ತಿ, ಯುಕ್ತಿಯ  ವೆಚ್ಚ ತನ್ನ ಪ್ರಾಣ ಉಳಿಸಬಲ್ಲದು ಎಂಬ ತಂತ್ರಗಾರಿಕೆ ಈ ಸಸ್ಯದ್ದು.
ಎಲೆಗಳ ಮುದುಡಿವಿಕೆ ಒಂದು ಸಂಕೀರ್ಣ ರಾಸಾಯನಿಕ ಕ್ರಿಯೆ. ಜೀವಕೊಶದಲ್ಲಿನ ಕೋಶರಸ ಕೋಶ ಭಿತ್ತಿಯ ಮೇಲೆ ಹೇರುವ ಒತ್ತಡವು ಜೀವವಕೊಶದ  ಸ್ಥಿರ ರಚನೆಗೆ ಕಾರಣ. ಬಾಹಿಕ ಪ್ರೇರಣೆಯಿಂದಾಗಿ ಉಂಟಾದ ಒತ್ತಡದ (turgor pressure) ಏರುಪೇರಿನಿಂದಾಗಿ ಜೀವಕೋಶಗಳು ತಮ್ಮ ಸಹಜತೆ ಕಳೆದುಕೊಂಡು ಇಳಿಬೀಳುತ್ತವೆ. ಈ ಪ್ರತಿಕ್ರಿಯೆ ಇಡೀ ಎಲೆಯನ್ನು ಆವರಿಸಿ ಎಲೆಯ ಮುದುಡುವಿಕೆಗೆ ಕಾರಣವಾಗುತ್ತದೆ.
ಕೊನೆ ಮಾತು:
ಭಾರತೀಯರಾದ ವಿಜ್ಞಾನಿ 'ಜಗದೀಶ್ ಚಂದ್ರ ಬೋಸ್'ರ ಪ್ರಕಾರ ಸಸ್ಯಗಳಿಗೂ ಪ್ರಾಣಿಗಳಂತೆ ಭಾವನೆಗಳಿವೆ. ಯೂನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾದ ಸಂಶೋಧಕಿ ಡಾ. ಮೋನಿಕಾ ಗಾಗ್ಲಿಯಾನೋ ಅವರ ಪ್ರಯೋಗಗಳ ಪ್ರಕಾರ ಸಸ್ಯಗಳಿಗೆ ಗ್ರಹಿಸುವ, ಕಲಿಯುವ, ಕಲಿತದ್ದನ್ನು ನೆನಪಿಡುವ, ಸಮಸ್ಯೆ ಬಗೆಹರಿಸುವ, ನಿರ್ಧಾರ ಕೈಗೊಳ್ಳುವ, ಸಂವಹಿಸುವ ಎಲ್ಲ ಸಾಮರ್ಥ್ಯಗಳಿವೆ. ಆಕೆ ಪ್ರಯೋಗಕ್ಕಾಗಿ ಬಳಸಿದ ಸಸ್ಯ ಇದೇ 'ಮಿಮೊಸಾ'. ಆಕೆ ಮಾಡಿದ್ದಿಷ್ಟೆ. ಅಮ್ಯೂಸ್ಮೆಂಟ್ ಪಾರ್ಕನಲ್ಲಿನ ಥ್ರಿಲ್ ರೈಡ್ ನ ರೀತಿಯಲ್ಲಿ ಸತತವಾಗಿ ಈ ಸಸ್ಯವನ್ನು ಭೂಮಿಯಿಂದ ಎತ್ತರದಲ್ಲಿ ಬೀಳಿಸಿ ಅದರ ಪ್ರತಿಕ್ರಿಯೆಯನ್ನು ಗಮನಿಸುವುದು. ಮೊದ ಮೊದಲು ಎಲೆ ಮುದುರಿದ್ದೆ ಆದರೂ ಪ್ರಯೋಗವನ್ನು ಪದೇ ಪದೇ ಪುನರಾವರ್ತಿಸಿದಾಗ ಕಂಡಿದ್ದೆಂದರೆ ಸಸ್ಯ ಬೀಳುವಿಕೆಗೆ ಪ್ರತಿಕ್ರಿಯಿಸದೆ ತೆರೆದ ಎಲೆಗಳನ್ನೆ ಹೊಂದಿದ್ದು! ಕೆಲವು ದಿನಗಳ ನಂತರವೂ ಬೀಳಿಸುವ ಪ್ರಯೋಗಕ್ಕೆ ಪ್ರತಿಕ್ರಿಯಸದೆ ತನಗೇನೂ ಆಗಿಲ್ಲ ಎನ್ನುವಂತೆ ಇದ್ದ ಸಸ್ಯವನ್ನು ಕಂಡ ಮೋನಿಕಾ ಬಂದಿದ್ದು ಈ ನಿರ್ಣಯಕ್ಕೆ "ಸಸ್ಯಗಳಿಗೆ ಮೆದುಳು ನರಗಳು ಇಲ್ಲದೆ ಇದ್ದರೂ ಜ್ಞಾಪಕ ಶಕ್ತಿಯಂತು ಇದ್ದೆ ಇದೆ!"
ಹಾಗಾದರೆ ಬರ ಕ್ಷಾಮ ಮುಂತಾದ ಒತ್ತಡದ ಪರಿಸ್ಥಿತಿಯನ್ನು ಎದುರಿಸಲು ಸಸ್ಯಗಳಿಗೆ 'ತರಬೇತಿ' ನೀಡಬಹುದಲ್ಲವೆ! ವಿಜ್ಞಾನಿಗಳೇ ಉತ್ತರಿಸಬೇಕು.
-ಸೀಮಾ ಹೆಗಡೆ
(ಮಾಹಿತಿ ಸೆಲೆ- ವಿಕಿಪೀಡಿಯಾ)

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ