ಪ್ಲಾಸ್ಟಿಕ್ ಗುಮ್ಮ
Here is an article for this year's world environment day (June 5,2018), hosted by India, with the theme- 'Beat the plastic pollution'
ಪ್ಲಾಸ್ಟಿಕ್ ಗುಮ್ಮ
ಬಾಗಿಸಿ, ಬಗ್ಗಿಸಿ, ಜಗ್ಗಿರಿ, ಎಳೆಯಿರಿ, ಬೇಕಾದ
ಆಕಾರಕ್ಕೆ, ಬೇಕಾದ ಗಾತ್ರಕ್ಕೆ, ಬೇಕಾದ ಬಣ್ಣಕ್ಕೆ! ಯಾವುದಕ್ಕೂ ಮಣಿಯದೆ ಎಲ್ಲದಕ್ಕೂ ಸೈ ಎನ್ನುವ
ಬಹುಮುಖಿ ಪ್ಲಾಸ್ಟಿಕ್ ಇಂದು ಅಡುಗೆ ಮನೆ ಇಂದ ಅಂತರಿಕ್ಷ ಯಾನದವರೆಗೂ ತನ್ನ ಪಾರುಪತ್ಯ ಸಾಧಿಸಿದೆ.
ಗ್ರೀಕ್ ಮೂಲದ ‘ಪ್ಲಾಸ್ಟಿಕ್’ ಶಬ್ಧಕ್ಕೆ, ‘ಯಾವುದೇ
ಆಕಾರಕ್ಕೆ ಅಚ್ಚು ಹಾಕಬಹುದಾದ ಮೆದುವಾದ ವಸ್ತು’ ಎಂಬ ಅರ್ಥವಿದೆ. ರಾಸಾಯನಿಕವಾಗಿ ಪ್ಲಾಸ್ಟಿಕ್ ಒಂದು
"ಪಾಲಿಮರ್" - ಏಕಧಾತುಗಳಾದ ಇಂಗಾಲ-ಜಲಜನಕದ
(hydro carbon) ಪುನರಾವರ್ತಿತ ಸರಪಳಿ. ಆಮ್ಲಜನಕ, ಕೆಲವೊಮ್ಮೆ
ಸಸಾರಜನಕ, ಗಂಧಕಗಳೂ ಕೂಡ ಈ ಸಂಕೀರ್ಣ ಸರಪಳಿಯ ಭಾಗವಾಗಿರುತ್ತವೆ. ನೋಡಲು ಒಂದೇ ತರಹದ ಮುತ್ತನ್ನು
ಜೋಡಿಸಿ ಮಾಡಿದ ಹಾರದಂತೆ ಈ ಪಾಲಿಮರ್ ಗಳು ಬಹಳಷ್ಟು ಸಲ ಪುನರಾವರ್ತಿತವಾದ ಸಣ್ಣ ಕಾರ್ಬನ್-ಹೈಡ್ರೋಜನ್
ನ ಮಾನೋಮೆರ್ ಗಳ ದೊಡ್ಡ ಸಂಯುಕ್ತ ವಸ್ತು. ಪ್ಲಾಸ್ಟಿಕ್ ಅನ್ನುವುದು ಇತ್ತೀಚಿಗಷ್ಟೇ ತುಂಬಾ ಪ್ರಸಿದ್ಧವಾದ
ಇದೇ ಪಾಲಿಮರ್ ಗುಂಪಿಗೆ ಸೇರಿದ ಸದಸ್ಯ. ಈ ಉದ್ದ ಸರಪಳಿಯ ರಚನೆಯೇ ಪ್ಲಾಸ್ಟಿಕ್ ನ ಬಾಗಿ ಬಳುಕುವ ಲಘುತೂಕದ
ಸ್ವಭಾವಕ್ಕೆ ಕಾರಣ.
ಹಾಗೆ ನೋಡಿದರೆ ಮಾನವನಿಗೆ ಪಾಲಿಮರ್ ಹೊಸದೇನಲ್ಲ.
ಕೂದಲು, ರೇಷ್ಮೆ, ಉಣ್ಣೆ, ವಂಶವಾಹಿ ಡಿ.ಎನ್.ಎ., ಸಸ್ಯ ಜೀವಕೋಶದ ಶರ್ಕರ ಪಿಷ್ಟ, ಎಲ್ಲವೂ ಪಾಲಿಮರ್
ಗಳೇ. ಕಳೆದರ್ದ ಶತಮಾನದಲ್ಲಿ ಈ ಎಲ್ಲ ನೈಸರ್ಗಿಕ ವಸ್ತುಗಳನ್ನು ಕೃತಕವಾಗಿ ತಯಾರಿಸಿದ ಮನುಷ್ಯ ಅವುಗಳನ್ನು
ಪ್ಲಾಸ್ಟಿಕ್ ಎಂಬುದಾಗಿ ಕರೆದ. ಪ್ಲಾಸ್ಟಿಕ್ ತಯಾರಿಕೆಯ ಮೂಲ ವಸ್ತು ಪಳೆಯುಳಿಕೆ ಇಂಧನಗಳು ಮತ್ತು
ಖನಿಜ ತೈಲಗಳು.
1907ರಲ್ಲಿ ಬೇಕೆಲ್ಯಾಂಡ್ ಎಂಬ ವ್ಯಕ್ತಿ 'ಬೆಕಲಯ್ಟ್' (bakelite) ಎಂಬ ಕೃತಕ ವಸ್ತುವೊಂದನ್ನು ಕಂಡುಹಿಡಿದ. ನಿಸರ್ಗದಲ್ಲಿ
ಎಲ್ಲೂ ಸಿಗದ ವಿದ್ಯುತ್ ನಿರೋಧಕವಾದ (insulator) ಈ ವಸ್ತು ಅತ್ಯಂತ ಜನಪ್ರಿಯವಾಯಿತು. ‘ಸಾವಿರ
ಬಳಕೆಗೆ ಒಂದೇ ವಸ್ತು’ ಎಂಬ ಸಾಧ್ಯತೆಗಳಿಂದ ಶುರುವಾದ ಈ ಕ್ರಾಂತಿ ಎಲ್ಲೆಡೆ ಪಸರಿಸಿತು. ದಿನ ಕಳೆದಂತೆ
ನೈಸರ್ಗಿಕ ಸಂಪನ್ಮೂಲಗಳ ಪರ್ಯಾಯವಾಗಿ ಇಂತಹ ಇನ್ನಷ್ಟು ಅನೈಸರ್ಗಿಕ ವಸ್ತುಗಳ ಪರಿಚಯವಾಯಿತು. ಸ್ಟೀಲ್,
ಗಾಜು, ಕಬ್ಬಿಣ, ಕಟ್ಟಿಗೆ, ಕಾಗದ ಎಲ್ಲವನ್ನು ಪ್ಲಾಸ್ಟಿಕ್ ತನ್ನ ಅಗ್ಗದ ಬೆಲೆ ಹಾಗು ಬಹುಉಪಯೋಗದ
ಕಾರಣ ಬದಲಿಸಿತ್ತು. ವಿಶ್ವ ಯುದ್ದದ ಸಮಯದಲ್ಲಂತೂ ಪ್ಲಾಸ್ಟಿಕ್ ಒಂದು ವರದಾನವೆ ಆಗಿತ್ತು.
ಜೀವನದ ಹಾಸು ಹೊಕ್ಕಾಗಿ ನೆಲೆ ಊರಿದ ಈ ವಸ್ತುವಿಗೆ
ಆತಂಕದ ಸ್ಥಿತಿ ನಿರ್ಮಾಣವಾಗಿದ್ದು 1970ರಲ್ಲಿ. ಕಾರಣ - ಪರಿಸರದಲ್ಲಿ ಕೊಳೆಯದೆ ಬಳಸಿ
ಬಿಸಾಡಿದಾಗ ವರ್ಷ ಕಾಲ ಉಳಿಯುವ ಅಸಮರ್ಥತೆ. ಜೈವಿಕವಾಗಿ ವಿಘಟನೆ ಆಗದ, ಕೊಳೆಯದ ಈ ಪ್ಲಾಸ್ಟಿಕ್ ಇಂದು
ಪರಿಸರದಲ್ಲಿ ತ್ಯಾಜ್ಯ ಮಟ್ಟದಲ್ಲಿ ಸಂಗ್ರಹವಾಗುತ್ತಿದೆ. ಮುಗ್ಧ ಪ್ರಾಣಿಗಳ ಹೊಟ್ಟೆ ಸೇರಿ ಜೀರ್ಣವಾಗದೆ
ಅವುಗಳ ಸಾವಿಗೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದ
ಶಕ್ತಿ ವ್ಯಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಷ್ಟವಾಗುತ್ತಿದೆ.
8
ಮಿಲಿಯ ಟನ್ ಪ್ಲಾಸ್ಟಿಕ್ ಪ್ರತಿ ವರ್ಷ ಭೂಮಿಯಿಂದ ಸಮುದ್ರ ಸೇರುತ್ತಿದೆ. ಕ್ಯಾಲಿಫೋರ್ನಿಯಾ ಮತ್ತು
ಹವಾಯಿ ದೇಶದ ನಡುವಣ ಪೆಸಿಫಿಕ್ ಸಮುದ್ರದಲ್ಲಿ ಈಗಾಗಲೇ
79 ಸಾವಿರ ಟನ್ ತೂಕದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದ್ದು
ಸಮುದ್ರ ಜೀವಿಗಳ ಜೀವನ ದುಸ್ತರವಾಗಿದೆ.
ಹಾಗಾದರೆ ಈ ಸಮಸ್ಯೆಗೆ ಪರಿಹಾರವಿಲ್ಲವೆ!? ಖಂಡಿತ
ಇದೆ. ಒಂದು, ಜೈವಿಕ ಪಾಲಿಮೆರ್ ಗಳ ಬಳಕೆ. ಸೆಲ್ಯೂಲೊಸ್, ಸಸ್ಯ ಜನ್ಯ ನಾರು ಪದಾರ್ಥಗಳನ್ನು ಬಳಸಿ
ಕೊಳೆಯುವ ಸಾಮರ್ಥ್ಯ ಇರುವ ಪ್ಲಾಸ್ಟಿಕ್ ನ ಉತ್ಪಾದನೆ. ಇನ್ನೊಂದು ಬಳಸಿ ಬಿಸಾಡದೆ ಪ್ಲಾಸ್ಟಿಕ್ ನ
ಮರು ಬಳಕೆ. ಆದರೆ ಎಲ್ಲ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ.
ಮರುಬಳಕೆಯ ಆಧಾರದ ಮೇಲೆ ಪ್ಲಾಸ್ಟಿಕ್ ನ ವರ್ಗೀಕರಣ
ಮಾಡಲಾಗಿದ್ದು 7 ರೀತಿಯ ಪ್ಲಾಸ್ಟಿಕ್ ಅನ್ನು ಗುರುತಿಸಲಾಗಿದೆ. ಸಾಮಾನ್ಯವಾಗಿ ನೀರು ಬಾಟಲ್ ನಲ್ಲಿ
ಕಂಡುಬರುವ PET (Poly
Ethylene Terephthalate), ಶ್ಯಾಂಪೂ
ಬಾಟಲ್, ಆಟದ ಸಾಮಾನುಗಳಲ್ಲಿ ಕಂಡುಬರುವ HDPE (High Density Polyethylene) ಪ್ಲಾಸ್ಟಿಕ್ ಗಳು ಮರುಬಳಕೆಗೆ ಯೋಗ್ಯ. ಇನ್ನುಳಿದ
ಚಾಕೊಲೇಟ್ ರಾಪರ್, ಬ್ಯಾಗ್ , ಬಕೆಟ್, ಗಳಲ್ಲಿ ಕಂಡುಬರುವ PVC (Poly Vinyl Chloride) , LDPE (Low Density
Polyethylene) ಗಳು ಅತ್ಯಂತ
ಅಪಾಯಕಾರಿ ವಿಷಕಾರಿ ಮತ್ತು ಮರುಬಳಕೆಗೆ ಸಾಧ್ಯವಿಲ್ಲದ ಪ್ಲಾಸ್ಸ್ಟಿಕ್ ಗಳು. ಇವುಗಳ ಬಳಕೆಯನ್ನು ತಪ್ಪಿಸಬೇಕು,
ಅಥವಾ ಕಡಿತಗೊಳಿಸುವುದು ಸೂಕ್ತ.
ಈ ಸಲದ ಜೂನ್ 5 ರ ವಿಶ್ವ ಪರಿಸರ ದಿನದ ಆತಿಥೇಯ
ದೇಶ ಭಾರತ. Beat the
Plastic Pollution- ಪ್ಲಾಸ್ಟಿಕ್
ಎಂಬ ಗುಮ್ಮನನ್ನು ಹೊಡೆದೋಡಿಸಿ ಎಂಬ ಧ್ಯೇಯದೊಂದಿಗೆ ಜಾಗೃತಿ ಹಬ್ಬಿಸಲು ವಿಶ್ವಸಂಸ್ಥೆಯ ಜೊತೆ ಭಾರತ
ಸಜ್ಜಾಗಿದೆ. "ಮರುಬಳಕೆ ಸಾಧ್ಯವಿಲ್ಲವಾದರೆ ನಿರಾಕರಿಸಿ" ಎಂಬ ಘೋಷಣೆಯೊಂದಿಗೆ ಈ ಸಲದ
ಪರಿಸರ ದಿನದ ಆಚರಣೆ ನಡೆಯಲಿದೆ.
ಬಹುಶಃ ಪ್ಲಾಸ್ಟಿಕ್ ಒಂದು ಸಮಸ್ಯೆಯೇ ಅಲ್ಲ.
ಸಮಸ್ಯೆ ನಾವು ಅದನ್ನು ಬಳಸುತ್ತಿರುವ ಪರಿ. ಪ್ಲಾಸ್ಟಿಕ್ ಎಷ್ಟೇ ಅಪನಂಬಿಕೆಗೆ ಕಾರಣವಾದರೂ ಅತ್ಯವಶ್ಯ
ಅದರಲ್ಲೂ ವೈದ್ಯಕೀಯ ವಿಭಾಗದಲ್ಲಿ ಪ್ಲಾಸ್ಟಿಕ್ ನ ಜಾಗ ಕದಲಿಸುವುದು ಸುಲಭದ ಮಾತಲ್ಲ. ಪ್ರಕೃತಿಗೆ
ಇಂದು ಆಗುತ್ತಿರುವ ಹಾನಿ ಒಂದೇ ಬಾರಿ ಬಳಸಿ ಒಗೆಯುವ (disposable/single use ) ಪ್ಲಾಸ್ಟಿಕ್ ಗಳದ್ದು. ಹೆಚ್ಚಿನ ಪಾಲು ಬ್ಯಾಗ್ ಮತ್ತು ಬಾಟಲ್
ಗಳದ್ದು. ಪ್ರತಿ ವರ್ಷ ಪ್ರಪಂಚದಲ್ಲಿ 400ಮಿಲಿಯ ಟನ್
ಪ್ಲಾಸ್ಟಿಕ್ ತಯಾರಾಗುತ್ತವೆ. ಅದರಲ್ಲಿ 40 ಭಾಗ ಬಳಸಿ ಬಿಸಾಡುವ ಪ್ಲಾಸ್ಟಿಕ್. ಇವೆ ಪರಿಸರ ಮಾಲಿನ್ಯದ
ರೂವಾರಿಗಳು. ಇವುಗಳ ಬಳಕೆ ಕಡಿಮೆ ಆದರೆ ಮಾತ್ರ ಮುಂದಿನ ಮಾನವ ಪೀಳಿಗೆಯ ಉಳಿಗಾಲ, ಇಲ್ಲವೇ ವಿನಾಶ!,
ಯೋಚಿಸಿ.
-ಸೀಮಾ ಹೆಗಡೆ
(ಮಾಹಿತಿ
ಸೆಲೆ-ವಿಕೀಪಿಡಿಯಾ)

Comments
Post a Comment