‘ಸೂರ್ಯ’ಕಾಂತಿ

Why does sunflower face the sun? Find out the reason




‘ಸೂರ್ಯ’ಕಾಂತಿ
ಮೂಡಣದಲ್ಲಿ ರವಿ ಮೂಡುವುದನ್ನು ಕಾಯುತ್ತ ಪಡುವಣದೆಡೆಗಿನ ಅವನ ಪಥವನ್ನು ಒಡನೆಯೇ ಅನುಸರಿಸುವ ಈ ಹಳದಿ ವರ್ಣದ ಹೂವನ್ನು ಕಂಡೇ ಇರುತ್ತೀರ. ಸೂರ್ಯನ ತೀಕ್ಷ್ಣ ಕಿರಣದ ಹೊಡೆತಕ್ಕೆ ಪಾಪ 'ಸನ್ ಸ್ಟ್ರೋಕ್' ಆಗಬಹುದೇನೊ ಎಂಬ ಕಾಳಜಿಯೂ ಒಮ್ಮೆ ಮನದಲ್ಲಿ ಮೂಡಿರಬಹುದು. ಬಿರು ಬಿಸಿಲಲ್ಲೂ 'ಟ್ಯಾನ್' ಆಗುವ ಚಿಂತೆ ಇಲ್ಲದೆ ಸೂರ್ಯ ದೇವನನ್ನು ಭಕ್ತಿಯಿಂದ ಪೂಜಿಸುವ ಈ ಹೂವುಗಳ ಶ್ರದ್ಧೆಯನ್ನು ವಿಜ್ಞಾನದ ಭಾಷೆಯಲ್ಲಿ ತಿಳಿಯುವ ಪ್ರಯತ್ನವನ್ನು ಮಾಡಿಯಾಗಿದೆ.
ಒಂದು ವಿಚಾರ, ಬೆಳೆದು ಅರಳಿ ನಿಂತ ಹೂಗಳು ಸೂರ್ಯನ ಹಿಂಬಾಲಕರಲ್ಲ! ಅವು ದಿನವಿಡೀ ಪೂರ್ವಕ್ಕೆ ಮುಖ ಮಾಡಿ ನಿಲ್ಲುತ್ತವೆ. ಹಿಂಬಾಲವೇನಿದ್ದರೂ ಇನ್ನೂ ಬೆಳೆಯದ ಎಳೆಯ ಹೂವಲ್ಲಿ ಮಾತ್ರ ಕಾಣಲು ಸಾಧ್ಯ. ಮೊಗ್ಗುಗಳಲ್ಲಿ ಕಂಡುಬರುವ ಈ ನಡವಳಿಕೆಗೆ ಹೆಲಿಯೋಟ್ರಾಫಿಸ್ಮ್ (Heliotropism-ಸೂರ್ಯಾಭಿವರ್ತನ ಕ್ರಿಯೆ) ಎಂಬುದಾಗಿ ಕರೆಯಲಾಗುತ್ತದೆ.
ಬೆಳಕಿನೂಡನೆ ಚಲಿಸುವ ಈ ಕ್ರಿಯೆಗೆ ಕಾರಣ ಗಿಡದೊಳಗಿನ ಜೈವಿಕ ಗಡಿಯಾರ. ಅಲಾರಾಂನಂತೆ 24 ಘಂಟೆಯ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಈ ಜೈವಿಕ ಗಡಿಯಾರ ಸಸ್ಯದ ದೈನಂದಿನ ಕೆಲಸಗಳು ಶಿಸ್ತಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಎಳೆಯ ಹೂವು ಬೆಳ್ಳಂ ಬೆಳಗ್ಗೆ ಪೂರ್ವದ ಸೂರ್ಯನನ್ನು ಸ್ವಾಗತಿಸಿ ಅವನೊಂದಿಗೆ ಪಶ್ಚಿಮಕ್ಕೆ ಚಲಿಸುತ್ತ ರಾತ್ರಿಯ ಸಮಯದಲ್ಲಿ ಮರುದಿನದ ಕೆಲಸಕ್ಕೆ ಸಜ್ಜಾಗಲು ಪುನಃ ಪೂರ್ವಕ್ಕೆ ತಿರುಗುತ್ತದೆ.
ಸೂರ್ಯಕಾಂತಿ ಸಸ್ಯದಲ್ಲಿ 'ಆಕ್ಸಿನ್' (auxins) ಎಂಬ ಸಸ್ಯ ಪ್ರಚೋದಕಗಳಿರುತ್ತವೆ. ಈ ಆಕ್ಸಿನ್ ಗಳು ಬೆಳಕಿಗೆ ಬಲು ಸೂಕ್ಷ್ಮವಾಗಿದ್ದು ಬೆಳಕಿನಿಂದ ತಪ್ಪಿಸಿಕೊಳ್ಳಲು ಹಾತೊರೆಯುತ್ತವೆ. ಪೂರ್ವ ದಿಕ್ಕಿನಿಂದ ಬೆಳಕು ಬಿದ್ದಾಗ ಪೂರ್ವದ ವಿರುದ್ಧ ದಿಕ್ಕಿನ ಹೂವಿನ ದಂಟಿನ ನೆರಳಿನ ಜಾಗದಲ್ಲಿ ಸಂಗ್ರಹವಾಗುತ್ತದೆ. ಸಂಗ್ರಹವಾದ ದಂಟಿನ ಜಾಗದಲ್ಲಿನ  ಜೀವಕೋಶ ಉದ್ದವಾಗುತ್ತದೆ. ಈ ಅಸಮವಾದ ದಂಟಿನ ಬೆಳವಣಿಗೆಯ ಕಾರಣ ಪೂರ್ವ ದಿಕ್ಕಿಗೆ ಹೂವು ಬಾಗುತ್ತದೆ. ಸೂರ್ಯ ಚಲಿಸುತ್ತಿದ್ದಂತೆ 'ಆಕ್ಸಿನ್' ಕೂಡ ಸೂರ್ಯನ ವಿರುದ್ಧ ದ ನೆರಳಿನ ಜಾಗಕ್ಕೆ ಚಲಿಸುತ್ತದೆ. ಸೂರ್ಯನ ವಿರುದ್ಧ ದಿಕ್ಕಿನಲ್ಲಿ ದಂಟು ಉದ್ದವಾದಂತೆ ಹೂವು ಸೂರ್ಯನೆಡೆಗೆ ಬಾಗುತ್ತದೆ. ಒಟ್ಟಿನಲ್ಲಿ ಜೈವಿಕ ಗಡಿಯಾರ ಮತ್ತು ಆಕ್ಸಿನ್ ನ ಅಸಮ ವಿತರಣೆ ಇಂದ ಸೂರ್ಯಕಾಂತಿ ಬಾಗುತ್ತದೆ.
ಹೀಗೆ ಮಾಡುವುದರಿಂದ ಸೂರ್ಯಕಾಂತಿಗೇನು ಲಾಭ!?
ಎಳೆಯ ಸೂರ್ಯಕಾಂತಿ ಹೂವನ್ನು ಗಮನಿಸಿದರೆ ಎಲೆಯ ರೀತಿಯ ರಚನೆಗಳು(bracts) ಕಾಣುತ್ತವೆ. ಈ ಹಸಿರು ರಚನೆಗಳು ಎಲೆಯಂತೆಯೆ ದ್ಯುತಿಸಂಶ್ಲೇಷಣೆ ಕೈಗೊಳ್ಳುತ್ತವೆ. ದ್ಯುತಿಸಂಶ್ಲೇಷಣೆ ಕ್ರಿಯೆಗೆ ಬೆಳಕು ಅತ್ಯವಶ್ಯ. ಹೀಗೆ ಸೂರ್ಯನೆಡೆಗೆ ಮುಖ ಮಾಡುವ ಮೂಲಕ ಹೂವು ಹೆಚ್ಚಿನ ಸೂರ್ಯ ಶಕ್ತಿಯ ಕೊಯ್ಲು ಮಾಡುತ್ತವೆ. ದ್ಯುತಿಸಂಶ್ಲೇಷಣೆ ಹೆಚ್ಚಿದಂತೆ ಸಸ್ಯದ ಆಹಾರ ತಯಾರಿಕೆಯು ಹೆಚ್ಚುತ್ತದೆ. ಆಹಾರ ಉತ್ಪಾದನೆ ಹೆಚ್ಚಿದಂತೆ ಗಿಡದ ಬೆಳೆವಣಿಗೆ ಚೆನ್ನಾಗಿರುತ್ತದೆ ಅಂತೆಯೇ ವಾಣಿಜ್ಯ ಬೆಳೆಯ ಪ್ರಮಾಣ (ಸೂರ್ಯಕಾಂತಿಯಲ್ಲಿ ಎಣ್ಣೆಯ ಇಳುವರಿ) ಕೂಡ ಹೆಚ್ಚುತ್ತದೆ.
ಸೂರ್ಯಕಾಂತಿ ಬೀಜದಿಂದ ಪ್ರಸಾರವಾಗುವ ಸಸ್ಯ. ಬೀಜ ನಿಲ್ಲಲು ಪರಾಗಸ್ಪರ್ಶ ಅವಶ್ಯಕ. ಸೂರ್ಯನನ್ನೆ ಮುಖ ಮಾಡುವುದರಿಂದ ಹೂವುಗಳು ಬೆಚ್ಚಗಿರುತ್ತವೆ ಆದ್ದರಿಂದ ಪರಾಗಸ್ಪರ್ಶ ಮಾಡುವ ಕೀಟಗಳು(pollinators)  ಹೂವಿನೆಡೆಗೆ ಹೆಚ್ಚು ಆಕರ್ಷಿತವಾಗುತ್ತವೆ. ಹೇಗಿದೆ ಸೂರ್ಯಕಾಂತಿಯ ಸಂತಾನಾಭಿವ್ರಧ್ಧಿಯ ಉಪಾಯ!

-ಸೀಮಾ ಹೆಗಡೆ
(ಮಾಹಿತಿ ಸೆಲೆ- ಸೈನ್ಸ್ ನಿಯತಕಾಲಿಕೆ)


Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ