ಹುಟ್ಟದ ಬೀಜದ ಬೆನ್ನು ಹತ್ತಿ ಭಾಗ 1
ಹುಟ್ಟದ ಬೀಜದ ಬೆನ್ನು ಹತ್ತಿ
ಆಗಷ್ಟೇ ಪಿ.ಯು.ಸಿ ಮುಗಿಸಿ ತೋಟಗಾರಿಕೆ
ಪದವಿಗೆ ಪ್ರವೇಶ ಪಡೆದಿದ್ದೆ. ಮದುವೆ ಮುಂಜಿಗೆ ಹೋದಾಗ “ಎಂತಾ ಕಲಿತ್ಯೇ ತಂಗಿ?” ಎಂದು ಕೇಳಿದ ನೆಂಟರಿಷ್ಟರಿಗೆ
ಹೆಮ್ಮೆಯಿಂದ ʼತೋಟಗಾರಿಕೆʼ ಎನ್ನುತ್ತಿದ್ದೆ. ಬರೀ ಇಂಜಿನಿಯರಿಂಗು ಡಾಕ್ಟರು ಕಲಿಯುವುದರ ಬಗ್ಗೆ ಕೇಳಿದ
ಎಲ್ಲರಿಗೂ ʼತೋಟಗಾರಿಕೆʼ ಹೊಸ ಶಬ್ಧವಾಗಿ ಕೇಳ್ತಿತ್ತು ಅಂತಾ ಕಾಣ್ತದೆ, “ಅದ್ರಲ್ ಎಂತಾ ಕಲಸ್ತ್ವೇ?”
ಎನ್ನುವುದು ಮುಂದಿನ ಪ್ರಶ್ನೆ. ನನಗೂ ಅಷ್ಟಾಗಿ ಪರಿಚಯವಾಗಿರದ ಕೋರ್ಸ್‌ನ ಬಗ್ಗೆ ಹಣ್ಣು ಹೂವು ತರಕಾರಿ
ಬ್ಬೆ ಬ್ಬೆ ಬ್ಬೆ ಎನ್ನುತ್ತಿದ್ದೆ. ಆಗವರು ಏನೋ ತಿಳಿದವರಂತೆ “ಓಹ್, ಬೀಜದಿಂದ ಗಿಡ ಮಾಡುದು, ಕಸಿ
ಕಟ್ಟುದು ಕಲಸ್ತ್ವನ ಅಲ್ದಾ, ಎಷ್ಟ್ ಸಲ ಹಾಕಿದ್ರೂ ಬೀಜ ಹುಟ್ಟತೇ ಇಲ್ಯೇ, ನಮ್ಮನೆ ದಾಸವಾಳ ಹೂ ಬಿಡತೇ
ಇಲ್ಯೇ, ಎಂತಾ ಮಾಡವನ” ಎಂದು ಕೊಂಯ್ಯ್ ಕೊಂಯ್ಯ್ ಗುಡುತ್ತಿದ್ದರು. ಈಗೂ ಅಷ್ಟೇ, ಎಲ್ಲೇ ಹೋದರೂ
ಹೆಂಗಸರು ನನ್ನ ಕೇಳುವ ಮೊದಲ ಪ್ರಶ್ನೆ ಬೀಜ, ಹೂಗಿಡದ ಬಗ್ಗೆಯೇ. ಆಸಕ್ತಿಯಿಂದ ಬೀಜ ಬಿತ್ತಿ ಮೊಳಕೆ ಒಡೆಯುತ್ತವೆ ಎಂದು ತಿಂಗಳು ಪೂರ್ತಿ ಕಾದು ಕಾದು
ಬೇಸರಗೊಂಡ ಅನುಭವ ನಮ್ಮೆಲ್ಲರದೂ ಆಗಿದೆ. ಇದೇ ವಿಷಯವನ್ನು ಗಮನದಲ್ಲಿರಿಸಿ
ನಮ್ಮೂರ ಹೆಂಗಸರಾದಿಯಾಗಿ ಎಲ್ಲ ಕೈತೋಟ ಪ್ರಿಯರಿಗಾಗಿ ಈ ಲೇಖನ.
ಹುಟ್ಟದ ಬೀಜದ ಹಿಂದಿನ ಕಾರಣಗಳು:
ಸಮೃದ್ಧ ಕೈತೋಟವೊಂದರ ಯಶಸ್ಸು ಅಡಗಿರುವುದು
ಬೀಜದಲ್ಲಿ. ನೀರು ಹಾಕಿ, ಗೊಬ್ಬರ ಕೊಟ್ಟು, ಎಷ್ಟೇ ಆರೈಕೆ ಮಾಡಿದರೂ ಬೀಜ ಕೈಕೊಟ್ಟರೆ ಕೈತೋಟ ಸೋಲುತ್ತದೆ.
ಬೀಜ ಕೆಡುವುದರ ಹಿಂದಿನ ಕಾರಣ ಹಲವಾರು. ಅವುಗಳನ್ನು ಒಂದೊಂದಾಗಿ ವಿವರವಾಗಿ ನೋಡೋಣ.
ಬೀಜದ ಮೂಲ: ಕೈತೋಟಕ್ಕೆಂದು
ಬೀಜ ತಯಾರು ಮಾಡಿಕೊಳ್ಳುವಾಗ ಅದು ಜೊಳ್ಳೋ ಗಟ್ಟಿಯೋ, ನೋಡಲು ಚನ್ನಾಗಿದೆಯೋ ಎನ್ನುವುದನ್ನು ನಾವು
ಗಮನದಲ್ಲಿರಿಸುತ್ತೇವೆ. ಅದು ನಾವೇ ಉಳಿತಾಯ ಮಾಡಿದ ಬೀಜವೋ, ಸ್ನೇಹಿತರಿಂದ ಸಂಗ್ರಹಿಸಿದ್ದೋ, ಖರೀದಿಸಿದ್ದೋ,
ಎಲ್ಲಿಂದ ಖರೀದಿಸಿದ್ದು ಎನ್ನುವುದನ್ನು ನಿರ್ಲಕ್ಷಿಸುತ್ತೇವೆ. ಆದರೆ ಬೀಜದ ಮೊಳಕೆಯನ್ನು ನಿರ್ಧರಿಸುವ
ಪ್ರಮುಖ ಅಂಶ ಅದರ ಮೂಲ.
·
ಕೆಲವು ಜನ ಸಂತೆಯಿಂದ ಖರೀದಿಸಿ ತಂದ ಹಣ್ಣು ತರಕಾರಿಗಳಿಂದ
ಬೀಜಗಳನ್ನು ಸಂಗ್ರಹಿಸಿ ಕೈತೋಟಕ್ಕೆ ಬಳಸುವುದನ್ನು ನೋಡಿದ್ದೇನೆ. ಹೀಗೆ ಮಾಡುವುದೇನು ತಪ್ಪಲ್ಲ. ಆದರೆ
ಆ ಬೀಜಗಳು ಹುಟ್ಟಬೇಕೆಂದು ನಿರೀಕ್ಷಿಸುವುದು ತಪ್ಪು. ಮಾರುಕಟ್ಟೆಯಲ್ಲಿ ಸಿಗುವ ಹಣ್ಣು ತರಕಾರಿಗಳು
ಬಲಿತಿರುವುದಿಲ್ಲ. ಅವುಗಳನ್ನು ಇನ್ನು ಎಳಸಿರುವಾಗ ಅಥವಾ ಅರ್ಧ ಬಲಿತಾಗ ಕೊಯ್ದು ಮಾರುಕಟ್ಟೆಗೆ ಸಾಗಿಸಲಾಗಿರುತ್ತದೆ.
ಇನ್ನೂ ಪೂರ್ತಿಯಾಗಿ ಬೆಳವಣಿಗೆ ಹೊಂದದ ಬೀಜಗಳು ಮೊಳಕೆಯೊಡೆಯಲಾರವು, ಮೊಳಕೆಯೊಡೆದರೂ ಗಿಡವಾಗಿ ಬೆಳೆಯುವಷ್ಟು
ತಾಕತ್ತು ಅವುಗಳಿಗಿರುವುದಿಲ್ಲ.
·
ಕೆಲವು ಜನ ದಿನಸಿಯಲ್ಲಿ ತಂದಂತ ಕಾಳು ಧಾನ್ಯಗಳನ್ನು
ಬೀಜವಾಗಿ ಬಳಸುವುದಿದೆ. ಇವುಗಳೂ ಅಷ್ಟೇ ಹುಟ್ಟುವುದಿಲ್ಲವೆಂದಲ್ಲ, ಆದರೆ ಹುಟ್ಟೇಬಿಡುತ್ತವೆಂಬ ಖಾತ್ರಿಯಿಲ್ಲ.
ಸಾಮಾನ್ಯವಾಗಿ ಈ ಕಾಳುಗಳನ್ನು ಪಾಲಿಷ್ ಮಾಡುವುದು, ಹುರಿಯುವುದು, ಒಣಗಿಸುವುದು ಮುಂತಾಗಿ ಪ್ರಾಥಮಿಕ
ಸಂಸ್ಕರಣೆ ಮಾಡಲಾಗಿರುತ್ತದೆ. ಸಂಸ್ಕರಣೆ ಮಾಡುವಾಗ ಒಳಗಿನ ಭ್ರೂಣಕ್ಕೆ ಹಾನಿಯಾಗಿ ಸತ್ತಿರುವ ಸಂಭವ
ಹೆಚ್ಚು, ಹಾಗಾಗಿ ಇವು ಲೆಕ್ಕದಂತೆ ನಿರ್ಜೀವಿಗಳು.
·
ಕೆಲವು ಜನ ತಮ್ಮದೇ ಕೈತೋಟದ ತರಕಾರಿಗಳನ್ನು ಪೂರ್ತಿ
ಬಲಿತಾಗ ಸಂಗ್ರಹಿಸಿ, ಬೀಜ ಒಣಗಿಸಿ ಬಳಸುತ್ತಾರೆ. ಹೀಗೆ ಉಳಿತಾಯ ಮಾಡಿದ ಬೀಜಗಳು ಹುಟ್ಟುತ್ತವಾದರೂ
ನೂರಕ್ಕೆ ನೂರು ಹುಟ್ಟುತ್ತವೆಂಬ ಖಾತ್ರಿಯಿಲ್ಲ. ಸರಿಯಾದ ಪದ್ಧತಿಯಲ್ಲಿ ಸಂಗ್ರಹಿಸಿ ಒಣಗಿಸಿದ ಬೀಜಗಳು
ತಕ್ಕ ಮಟ್ಟಿಗೆ ಮೊಳಕೆಯೊಡೆಯಬಲ್ಲವು.
·
ಕೆಲವು ಜನ ಸಂತೆಯಲ್ಲಿ, ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿರುವ
ಹತ್ತು ರೂಪಾಯಿಯ ಬೇನಾಮಿ ಪ್ಯಾಕೆಟ್‌ಗಳಲ್ಲಿರುವ ಬೀಜವನ್ನು ಬಳಸುವುದುಂಟು. ತೀರಾ ಹಳೆಯದಾದ ಕಳಪೆ
ಗುಣಮಟ್ಟದ ಈ ಬೀಜಗಳು ಹುಟ್ಟುವುದಿಲ್ಲವೆಂದು ಗೊತ್ತಿದ್ದರೂ ಇದೊಂದು ಬಾರಿ ಕೊನೆಯ ಪ್ರಯತ್ನ ಎಂಬಂತೆ
ಖರೀದಿಸಿ ಒಯ್ಯುವವರನ್ನು ನೋಡಿದರೆ ಬೇಸರವೆನಿಸುತ್ತೆ. ಇವು ತಾಜಾ ಇದ್ದರೆ ಹುಟ್ಟಲೂಬಹುದೇನೋ, ಆದರೆ
ನಂಬಲರ್ಹವಲ್ಲ.
·
ಕೆಲವು ಜನ ನರ್ಸರಿ, ಕೃಷಿ ಸೂಪರ್‌ಮಾರ್ಕೆಟ್, ಗಾರ್ಡನ್
ಶಾಪ್‌ಗಳಿಂದ ಬೀಜದ ಪ್ಯಾಕೆಟ್ ಖರೀದಿಸಿ ಬಳಸುವುದಿದೆ. ಇವುಗಳನ್ನು ಸ್ವಲ್ಪ ಮಟ್ಟಿಗೆ ನಂಬಬಹುದಾದರೂ
ಹಳೆಯದಾದರೆ ಹುಟ್ಟದೇ ಹೋಗಬಹುದು. ಪ್ಯಾಕೇಟ್ ಮೇಲೆ ಯಾವುದೋ ಕಂಪನಿಯ ಹೆಸರಿದ್ದ ಮಾತ್ರಕ್ಕೆ ಇವುಗಳನ್ನು
ನಂಬಲು ಸಾಧ್ಯವಿಲ್ಲ. ಪ್ಯಾಕೇಟ್‌ನ ಹಿಂದೆ ಮಾಹಿತಿಯನ್ನೂ ಓದಿ ಖರೀದಿಸಿದರೆ ಒಳ್ಳೆಯದು.
·
ಕೆಲವರು ಬೀಜದಂಗಡಿಯಿಂದ ಒಳ್ಳೆಯ ಹೆಸರಿರುವ ಖಾಸಗಿ ಕಂಪನಿಯ
ʼಬ್ರಾಂಡೆಡ್ʼ ಬೀಜಗಳನ್ನು ಖರೀದಿಸುವುದಿದೆ. ಇವುಗಳ ಗುಣಮಟ್ಟ ಒಳ್ಳೆಯದೆಂದು ನಂಬಬಹುದಾದರೂ ಇವು
ಕೈತೋಟಕ್ಕೆ ಬೇಕಾದ ಸ್ವಲ್ಪ ಪ್ರಮಾಣದಲ್ಲಿ ಲಭ್ಯವಿರುವುದಿಲ್ಲ. ಲಾಭದಾಯಕವಲ್ಲವೆಂಬ ಕಾರಣಕ್ಕೆ ಇವುಗಳ
ಚಿಕ್ಕ ಪ್ಯಾಕೇಟ್‌ಗಳನ್ನು ಕಂಪನಿಗಳು ಮಾರುವುದಿಲ್ಲ, ದೊಡ್ಡ ಪ್ರಮಾಣದಲ್ಲಿ ನಾವದನ್ನು ಕೊಳ್ಳಲು ಸಾಧ್ಯವಿಲ್ಲ.
ಹಾಗಾಗಿ ಇವುಗಳ ಬಳಕೆ ಅಪರೂಪ.
·
ಕೆಲವು ಜನ ಸಾಮಾಜಿಕ ಜಾಲತಾಣ, ಅಂತರ್ಜಾಲ ಮಾಧ್ಯಮದಿಂದ
ಬೀಜಗಳನ್ನು ಖರೀದಿಸುತ್ತಾರೆ. ಇವುಗಳ ಬಗ್ಗೆ ನಂಬಿಕೆ ಬಳಸಿ ನೋಡಿದ ಗ್ರಾಹಕರಿಗೇ ಬಿಟ್ಟಿದ್ದು.
·
ಕೆಲವು ಜನ ಸಂಶೋಧನಾ ಕೇಂದ್ರಗಳಿಂದ, ಸಾರ್ವಜನಿಕ ಸಂಸ್ಥೆಗಳಿಂದ
ಬೀಜಗಳನ್ನು ಕೊಳ್ಳುವುದಿದೆ. ಆದರೆ ಇದರ ಬಗ್ಗೆ ತುಂಬಾ ಕಡಿಮೆ ಜನರಿಗೆ ಜಾಗೃತಿಯಿದೆ. ಭಾರತೀಯ ತೋಟಗಾರಿಕಾ
ಸಂಶೋಧನಾ ಸಂಸ್ಥೆ (ಐ.ಐ.ಎಚ್.ಆರ್) ತನ್ನದೇ ಆನ್ಲೈನ್ ಸೀಡ್ ಪೋರ್ಟಲ್‌ನಲ್ಲಿ ಕೈತೋಟಕ್ಕೆಂದೇ ವಿಶೇಷವಾಗಿ
ಬೀಜ ಕಿಟ್ ಮಾರಾಟಮಾಡುತ್ತಿದೆ ಎಂಬ ಮಾಹಿತಿ ಎಷ್ಟು ಜನರಿಗಿದೆ!?
ಹಾಗಾದರೆ ಒಳ್ಳೆಯ ಗುಣಮಟ್ಟದ ನಂಬಲು
ಅರ್ಹ ಬೀಜದ ಮೂಲ ಯಾವುದು? ಇದನ್ನು ನಿರ್ಧರಿಸಬೇಕಾದರೆ ಬೀಜೋತ್ಪಾದನೆ, ಬೀಜದ ಪ್ರಮಾಣೀಕರಣದ ಪ್ರಕ್ರಿಯೆಯನ್ನು
ಸ್ವಲ್ಪವಾದರೂ ತಿಳಿಯಬೇಕಾಗುತ್ತದೆ. ನಮ್ಮ ದೇಶದಲ್ಲಿ ಬೀಜ ಉತ್ಪಾದನೆ ಮತ್ತು ಪ್ರಮಾಣೀಕರಣ ತುಂಬಾ
ನಿಯಮಬದ್ಧವಾಗಿ ನಡೆಯುವ ಕ್ರಿಯೆ. ಹೀಗೆ ನಿಯಮಬದ್ಧವಾಗಿ ಉತ್ಪಾದನೆಯಾಗುವ ಬೀಜದಲ್ಲಿ ನಾಲ್ಕು ವಿಧ;
·
ಹೊಸ ತಳಿ ಅಭಿವೃದ್ಧಿ ಪಡಿಸಿದ ಬ್ರೀಡರ್‌ನ ಬಳಿಯಿರುವ
ʼನ್ಯೂಕ್ಲಿಯಸ್ ಸೀಡ್ʼ; ಇದು ತಳಿ ಅಭಿವೃದ್ಧಿ ಪಡಿಸಿದ ವಿಜ್ಞಾನಿ, ಸಂಸ್ಥೆಗಷ್ಟೇ ಸೀಮಿತ;
·
ನ್ಯೂಕ್ಲಿಯಸ್ ಸೀಡ್‌ನ ಮುಂದಿನ ಪೀಳಿಗೆಯಾದ ʼಬ್ರೀಡರ್
ಸೀಡ್ʼ; ಮೂಲ ಬೀಜದ ನಕಲುಗಳಾದ ಈ ಬೀಜಗಳೂ ಕೂಡಾ ವಿಜ್ಞಾನಿ, ಸಂಸ್ಥೆಗೆ ಸೀಮಿತ. ಸಂಸ್ಥೆ ಸರ್ಕಾರಿಯೂ
ಇರಬಹುದು, ಖಾಸಗಿಯೂ ಇರಬಹುದು.
·
ಬ್ರೀಡರ್ ಸೀಡ್‌ನ ಮುಂದಿನ ಪೀಳಿಗೆಯಾದ ʼಫೌಂಡೇಶನ್ ಸೀಡ್ʼ;
ಬೀಜ ನಿಗಮಗಳು, ಬೀಜ ಕಂಪನಿಗಳು ಇದನ್ನು ಉತ್ಪಾದಿಸುತ್ತವೆ, ಆದರೆ ರೈತರಿಗೆ ಲಭ್ಯವಿಲ್ಲ.
·
ಫೌಂಡೇಶನ್ ಸೀಡ್‌ನ ಮುಂದಿನ ಪೀಳಿಗೆಯಾದ ʼಸರ್ಟಿಫೈಡ್
ಸೀಡ್ʼ; ಬೀಜ ಕಂಪನಿಗಳು ಉತ್ಪಾದಿಸುವ ಈ ಬೀಜಗಳು ಸರ್ಕಾರದಿಂದ ಪ್ರಮಾಣೀಕೃತ, ರೈತರಿಗೂ ಲಭ್ಯ.
ಆದರೆ
ಈ ಯಾವ ವಿಧದ ಬೀಜಗಳು ನಿಜಕ್ಕೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಬೀಜದ ಅಂಗಡಿಯಲ್ಲಿ ಸಿಗುವ, ಕೈತೋಟಕ್ಕೆ
ಮತ್ತು ಕೃಷಿ ಬಿತ್ತನೆಗೆ ಬಳಸುವ ಬೀಜಗಳು ಸಾಮಾನ್ಯವಾಗಿ ‘ಟ್ರೂಥ್‌ಫುಲಿ ಲೇಬಲ್ಡ್ ಸೀಡ್ಸ್'
(Truthfuly labeled seeds) ಆಗಿರುತ್ತವೆ. ಇವುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸರ್ಕಾರದ ಪ್ರಮಾಣೀಕರಣ
ಬೇಕೆಂದಿಲ್ಲ. ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಯೇ ಖಾಸಗಿಯಾಗಿ ಗುಣಮಟ್ಟದ ಪ್ರಮಾಣೀಕರಣ ಮಾಡಿರುತ್ತಾರೆ.
ಅಂದರೆ ಒಂದು ರೀತಿಯಲ್ಲಿ ʼಟೆಸ್ಟೆಡ್ ಓಕೆʼ. ಹೀಗೆ ಲೇಬಲ್ ಇರುವ ಪ್ರಮಾಣೀಕೃತ ಬೀಜಗಳನ್ನು ಕೊಳ್ಳುವುದು
ಒಳ್ಳೆಯದು. ಪ್ಯಾಕೆಟ್ ಕೊಳ್ಳುವಾಗ ಹಿಂದಿರುವ ಮಾಹಿತಿಯನ್ನು ಓದುವುದನ್ನು ಮರೆಯಬೇಡಿ.
'ಟ್ರೂಥ್ ಫುಲಿ ಲೇಬಲ್ಡ್ ಸೀಡ್ಸ್' ಬೀಜದ ಪ್ಯಾಕೆಟ್‌ನಲ್ಲಿ
ಈ ಕೆಳಗಿನ ಮಾಹಿತಿಗಳನ್ನು ಗಮನಿಸಬಹುದು.
·
ತಿಳಿ
ಹಸಿರು ಅಥವಾ ಹಸಿರು ಬಣ್ಣದ ಟ್ರೂಥ್ ಫುಲ್ ಎಂಬ ಲೇಬಲ್
·
ಬೆಳೆಯ
ಹೆಸರು (ಕೈಂಡ್)
·
ತಳಿಯ
ಹೆಸರು (ವೆರೈಟಿ)
·
ಪ್ರಯೋಗಾಲಯಗಳಿಂದ
ಬೀಜದ ಗುಣಮಟ್ಟ ಪ್ರಮಾಣೀಕರಣದ ದಿನಾಂಕ (ಡೇಟ್ ಆಫ್ ಟೆಸ್ಟ್)
· ಬೀಜವನ್ನು ಪ್ಯಾಕ್ ಮಾಡಿದ ದಿನಾಂಕ (ಡೇಟ್
ಆಫ್ ಪ್ಯಾಕಿಂಗ್)
·
ಎಕ್ಸ್
ಪೈರಿ ದಿನಾಂಕ (ವ್ಯಾಲಿಡಿಟಿ)
·
ತೂಕ
(ನೆಟ್ ವೇಟ್)
·
ಬೆಲೆ
(ಎಂ.ಆರ್.ಪಿ)
·
ಕನಿಷ್ಠ
ಮೊಳಕೆ ಪ್ರಮಾಣ (ಮಿನಿಮಮ್ ಜರ್ಮಿನೇಶನ್)
·
ಕನಿಷ್ಠ
ಅನುವಂಶಿಕ ಶುದ್ಧತೆ (ಮಿನಿಮಮ್ ಜೆನೆಟಿಕ್ ಪ್ಯೂರಿಟಿ)
·
ಗರಿಷ್ಠ
ಕಸ ಕಡ್ಡಿಯಂತ ಕಲ್ಮಶಗಳ ಪ್ರಮಾಣ (ಮ್ಯಾಕ್ಸಿಮಮ್ ಇನರ್ಟ್ ಮ್ಯಾಟರ್)
·
ಗರಿಷ್ಠ
ತೇವಾಂಶ (ಮ್ಯಾಕ್ಸಿಮಮ್ ಮಾಯಿಶ್ಚರ್)
·
ಕಡೆಯದಾಗಿ
ರಾಸಾಯನಿಕದಿಂದ (ಬೀಜ ಕೆಡದಂತೆ ಶಿಲೀಂಧ್ರನಾಶಕ, ಕೀಟನಾಶಕಗಳಿಂದ) ಉಪಚರಿಸಲಾಗಿದೆ ಎಂಬ ಎಚ್ಚರಿಕೆ.
ಈ
ಮೇಲಿನ ಮಾಹಿತಿಯಲ್ಲಿ ಬೀಜದ ಕನಿಷ್ಟ ಮೊಳಕೆ ಪ್ರಮಾಣ, ಎಕ್ಸ್‌ಪೈರಿ ದಿನಾಂಕ, ಗರಿಷ್ಟ ತೇವಾಂಶದ ಪ್ರಮಾಣ, ಭೌತಿಕ ಹಾಗೂ ಅನುವಂಶಿಕ
ಶುದ್ಧತೆ,
ಹೀಗೆ ಬೀಜದ ಗುಣಮಟ್ಟವನ್ನು ಅಳೆಯುವ ಹಲವಾರು ಅಂಶಗಳನ್ನು
ಗಮನಿಸಬಹುದು.
ಅನುವಂಶಿಕ
ಶುದ್ಧತೆ ಎಂದರೆ ಪೀಳಿಗೆಯೊಂದು ಎಷ್ಟರ ಮಟ್ಟಿಗೆ ನಿಗದಿತ ಗುಣಲಕ್ಷಣಗಳಿಗೆ ಬದ್ಧವಾಗಿದೆ ಎಂಬುದರ ಮಾಹಿತಿ.
ಅಂದರೆ ನೀವು ಹಸಿರು ಬಣ್ಣದ ಉದ್ದ ತಳಿಯ ಬದನೆಯ ಬೀಜದ ಪ್ಯಾಕೆಟ್ ಖರೀದಿಸಿದ್ದರೆ, ಈ ಬೀಜದಿಂದ ಹುಟ್ಟುವ
ಸಸ್ಯವು ಎಷ್ಟರ ಮಟ್ಟಿಗೆ ಹಸಿರು ಉದ್ದನೆಯ ಬದನೆಯನ್ನು ಹೋಲುತ್ತವೆಂಬ ಪ್ರಮಾಣ. ಈ ಪ್ರಮಾಣ ಕನಿಷ್ಟ
98% ಇರುವುದು ಕಡ್ಡಾಯ (ಕೆಲವೊಂದು ಬೆಳೆಗಳನ್ನು ಹೊರತುಪಡಿಸಿ). ಇನ್ನು ಭೌತಿಕ ಶುದ್ಧತ ಎಂದರೆ ಇತರೇ
ಬೆಳೆಯ ಬೀಜ, ಕಳೆ ಬೀಜ, ಕಸ ಕಡ್ಡಿಯಂತ ಕಲ್ಮಶಗಳ ಪ್ರಮಾಣ ಎಷ್ಟಿದೆ ಎಂಬುದರ ಮಾಹಿತಿ. ಎಲ್ಲಾ ಬೀಜಗಳಲ್ಲಿಯೂ,
ಜಾತಿ ತಳಿಯ ಸಂಬಂಧವಿಲ್ಲದೆ ಈ ಶುದ್ಧತೆಯ ಪ್ರಮಾಣ ಗರಿಷ್ಠ 2% ಕಡ್ಡಾಯ. ಅಂದರೆ 100 ಗ್ರಾಮ್ ಬೀಜದಲ್ಲಿ
ಕಲ್ಲು-ಧೂಳು-ಮಣ್ಣಿನಂತ ಕಸಗಳ ಪ್ರಮಾಣ 2 ಗ್ರಾಮ್ ಮೀರುವ ಹಾಗಿಲ್ಲ.
ಬೀಜದ
ಮೊಳಕೆ ಪ್ರಮಾಣ: ನಂಬಲು ಅರ್ಹ ಮೂಲಗಳಿಂದ ಬೀಜವನ್ನು ಕೊಂಡಿದ್ದಾಯ್ತು.
ಹಾಗಾದರೆ ಇಂತಹ ಬೀಜಗಳು ನೂರಕ್ಕೆ ನೂರು ಹುಟ್ಟುತ್ತವೆ ಎಂದೆಣಿಸಿದರೆ ನಿಮ್ಮ ಕಲ್ಪನೆ ತಪ್ಪು. ಪ್ರಮಾಣೀಕೃತ
ಬೀಜಕ್ಕೂ ಕನಿಷ್ಟ ಮೊಳಕೆ ಪ್ರಮಾಣವನ್ನು ನಮೂದಿಸಿರುವುದನ್ನು ನೀವು ಲೇಬಲ್‌ನಲ್ಲಿ ನೋಡಬಹುದು. ಪ್ರತಿ
ನೂರು ಬೀಜಗಳಲ್ಲಿ ಕನಿಷ್ಟ ಎಷ್ಟು ಬೀಜಗಳು ಮೊಳಕೆಯೊಡೆಯುತ್ತದೆ ಎಂಬುದನ್ನು ಇಲ್ಲಿ ಕೊಡಲಾಗಿರುತ್ತದೆ.
ಉದಾಹರಣೆಗೆ 100 ಬೀಜಗಳನ್ನು ಪರೀಕ್ಷಿಸಿದಾಗ 90 ಬೀಜ ಮೊಳಕೆಯೊಡೆದರೆ 90% ಎಂದು ನಮೂದಿಸಲಾಗುತ್ತದೆ.
ಸಾಮಾನ್ಯವಾಗಿ ತರಕಾರಿ ಮತ್ತು ಹೂ ಬೀಜಗಳಲ್ಲಿ ಮೊಳಕೆ ಪ್ರಮಾಣ 65% ಇಂದ ೭೫% ಇದ್ದರೆ ಭತ್ತ ಗೋಧಿ
ಜೋಳಗಳಲ್ಲಿ 90% ವರೆಗೂ ಇರುವುದಿದೆ.
ಪ್ರಮಾಣೀಕೃತ
ಬೀಜಗಳು ಈ ಕೆಳಗಿನ ಕನಿಷ್ಟ ಮೊಳಕೆ ಪ್ರಮಾಣವನ್ನು ಹೊಂದಿರುತ್ತವೆ. (ಆಕರ:ಸೀಡ್ ನೆಟ್ ಇಂಡಿಯಾ ಪೋರ್ಟಲ್)
|
ಬೆಳೆ |
ಕನಿಷ್ಟ
ಮೊಳಕೆ ಪ್ರಮಾಣ (%) |
|
ಜೋಳ |
90 |
|
ಭತ್ತ |
80 |
|
ಉದ್ದು,
ಹುರುಳಿ, ತೊಗರಿ, ಹೆಸರು, ಅಲಸಂದೆ, ವಟಾಣಿ, ಬೀನ್ಸ್, ಸೋಯಾಬೀನ್ |
75 |
|
ಶೇಂಗಾ |
70 |
|
ಹತ್ತಿ |
65 |
|
ಸೌತೆ,
ಹಾಗಲ, ಸೋರೆ, ಹೀರೆ, ಕಲ್ಲಂಗಡಿ, ಪಡುವ̧ಲ, ಕುಂಬಳ |
60 |
|
ಬೀಟ್ರೂಟ್,
ಗಜ್ಜರಿ, ಮೆಣಸು, ಡೊಳ್ಳುಮೆಣಸು |
60 |
|
ಎಲೆಕೋಸು,
ಹೂಕೋಸು, ನವಿಲುಕೋಸು, ಮೂಲಂಗಿ |
70 |
|
ಹರಿವೆ,
ಮೆಂತೆ, ಕೊತ್ತಂಬರಿ, ಪಾಲಕ್, ಸೊಪ್ಪು ತರಕಾರಿ |
70 |
|
ಬದನೆ,
ಟೊಮ್ಯಾಟೋ |
70 |
|
ಬೆಂಡೆ |
65 |
ಬೀಜದ
ವಯಾಬಿಲಿಟಿ ಮತ್ತು ಎಕ್ಸ್‌ಪೈರಿ: ಒಂದು ಬೀಜ ಎಷ್ಟು ಕಾಲ ಜೀವಂತವಿರಲು ಸಾಧ್ಯ
ಎನ್ನುವದನ್ನು ವಯಾಬಿಲಿಟಿ ಸೂಚಿಸುತ್ತದೆ. ಬೀಜದ ವಯಾಬಿಲಿಟಿ ಮುಗಿದು ಸಾಯುವ ಸಮೀಪದಲ್ಲಿದೆ ಎನ್ನುವುದನ್ನು
ಎಕ್ಸ್‌ಪೈರಿ ದಿನಾಂಕ ಸೂಚಿಸುತ್ತದೆ. ಬೀಜಗಳನ್ನು
ಬಹಳ ಕಾಲ ಸಂಗ್ರಹಿಸಿಟ್ಟು ಬಿತ್ತನೆಗೆ ಬಳಸಲು ಸಾಧ್ಯವಿಲ್ಲ. ಎಕ್ಸ್‌ಪೈರಿ ದಿನ ಮುಗಿದ ಮೇಲೆ ಬೀಜದ
ಗುಣಮಟ್ಟ ಹಾಳಾಗುತ್ತದೆ. ಮೊಳಕೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ.
ಅನುವಂಶಿಕವಾಗಿ ಕೆಲ ಬೀಜಗಳ ವಯಸ್ಸು ಕೆಲವೇ
ತಿಂಗಳಾದರೆ, ಕೆಲವರದು ವರ್ಷ, ಕೆಲವರದು ಹತ್ತಾರು ವರ್ಷ. ಕೆಲ ಬೀಜಗಳು ಶತಮಾನಗಳಷ್ಟು ಕಾಲ ಬದುಕಬಲ್ಲವು.
ಇಸ್ರೇಲ್‌ನ ಜೂಡಿಯಾದಲ್ಲಿ ರಾಜ ಹೆರೋಡ್‌ನ ಅರಮನೆಯ ಉತ್ಖನನದ ವೇಳೆ ಸಿಕ್ಕ ಎರಡು ಸಾವಿರ ವರ್ಷ ಹಳೆಯ
ಖರ್ಜೂರದ ಬೀಜ 2005ರಲ್ಲಿ ಮೊಳಕೆಯೊಡೆದಿತ್ತಂತೆ. 1995 ರಲ್ಲಿ ಈಶಾನ್ಯ ಚೈನಾದ ಒಣಗಿದ ಸರೋವರವೊಂದರ
ತಡಿಯಲ್ಲಿ ಸಿಕ್ಕ 1200 ವರ್ಷ ಹಳೆಯ ಕಮಲದ ಬೀಜ ಇಂದಿಗೂ ಜೀವಂತವಾಗಿದೆಯಂತೆ.
ನಿಮ್ಮ ಸಂಗ್ರಹದಲ್ಲಿರುವ ಬೀಜಗಳು ಹಳೆಯದಾಗಿದ್ದರೆ
ಬಿತ್ತನೆಗೂ ಮುಂಚೆ ಮೊಳಕೆಯೊಡೆಯುತ್ತವೆ ಎನ್ನುವುದನ್ನು ಪರೀಕ್ಷಿಸುವುದು ಉತ್ತಮ. ಇದನ್ನು ಸುಲಭವಾಗಿ
ಮನೆಯಲ್ಲೇ ಪರೀಕ್ಷಿಸಬಹುದು. ಸಣ್ಣ ಬೀಜಗಳಾದರೆ ಒಂದು ಸಣ್ಣ ಟ್ರೇಯಲ್ಲಿ ಮರಳು ಅಥವಾ ಕೋಕೋಪೀಟ್ ಹರಡಿ
ಬೀಜವನ್ನು ಹಾಕಿ ಹುಟ್ಟುವುದೋ ಇಲ್ಲವೋ ಎಂಬುದನ್ನು ಗಮನಿಸಬಹುದು. ಬೀನ್ಸ್, ಜೋಳದಂತ ದೊಡ್ಡ ಗಾತ್ರದ
ಬೀಜಗಳಾದರೆ ಹಸಿಯಾದ ಪೇಪರ್ ಮೇಲೆ ಹರಡಿಟ್ಟು ಗಮನಿಸಬಹುದು. ಜೋಳ, ಬೀನ್ಸ್, ಬಟಾಣಿ, ಮೂಲಂಗಿ, ಸಾಸಿವೆ, ಮೆಂತೆ, ಸೊಪ್ಪು
ತರಕಾರಿಗಳ ಬೀಜಗಳು ಮೂರರಿಂದ ನಾಲ್ಕು ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಹೀರೆ, ಸೋರೆ, ಕುಂಬಳ, ಸೌತೆ
ಜಾತಿಯ ತರಕಾರಿಗಳು ಎಂಟರಿಂದ ಹತ್ತು ದಿನಗಳಲ್ಲಿ ಮೊಳಕೆಯೊಡೆದಿರುತ್ತವೆ. ಮೆಣಸು, ಟೋಮ್ಯಾಟೋ ಬೀಜಗಳು
ಹುಟ್ಟುವುದಕ್ಕೆ ಹತ್ತರಿಂದ ಹದಿನೈದು ದಿನ ಬೇಕಾಗಬಹುದು.
ಬೀಜಗಳ ರಚನೆ, ಬೀಜಗಳಲ್ಲಿರುವ ತೇವಾಂಶ, ಬೀಜಗಳನ್ನು
ಶೇಖರಿಸಿದ ರೀತಿ, ಕೀಟ-ರೋಗಗಳ ಹಾವಳಿ ಇವೆಲ್ಲವೂ ಬೀಜದ ಮೊಳಕೆಪ್ರಮಾಣವನ್ನು, ಜೀವಿತಾವಧಿಯನ್ನು ನಿರ್ಧರಿಸುತ್ತವೆ,
ಅವುಗಳನ್ನು ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.
(ಬೀಜ ಪ್ರಮಾಣೀಕರಣ ಎನ್ನುವುದು ಬಹಳ ವಿಸ್ತಾರವಾದ
ವಿಷಯ. ಇಲ್ಲಿ ಕೊಟ್ಟಿರುವ ಅಂಕಿ ಅಂಶಗಳು ನಿಖರವಲ್ಲ,
ಸಾಮಾನ್ಯ ಓದುಗರಿಗೆ ಕಲ್ಪನೆ ಮೂಡಲೆಂಬ ಕಾರಣಕ್ಕೆ ಬರೆದಿರುವಂತದ್ದು)
Comments
Post a Comment