ಸ್ಪೇಸ್ ಫಾರ್ಮಿಂಗ್, ಬಾಹ್ಯಕಾಶದಲ್ಲಿ ಕೃಷಿ ಪ್ರಯೋಗ

ಬಾಹ್ಯಾಕಾಶವೆಂದರೆ ಯಾರಿಗೆ ಕುತೂಹಲವಿಲ್ಲ! ನಮ್ಮ ಕಣ್ಣಿಗೆ ಕಾಣದ, ಕೈಗೆ ಸಿಗದ ಈ ಲೋಕವೇ ರೋಚಕ. ಶುಭಾಂಶು ಶುಕ್ಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಪ್ರತಿನಿಧಿಯಾಗಿ ಗಗನಯಾತ್ರೆ ಗೈದು ವಾಪಾಸಾದ ಮೇಲಂತೂ ಈ ಶಬ್ಧ ಕೇಳಿದರೇ ರೋಮಾಂಚನವೆನಿಸುತ್ತದೆ. ಶುಭಾಂಶು ಅವರ ಗಗನಯಾತ್ರೆಯಷ್ಟೇ ಹೆಮ್ಮೆ ಎನಿಸಿದ್ದು ನಮ್ಮ ಧಾರವಾಡ ಕೃಷಿ ವಿ.ವಿ.ಯ ಮೆಂತೆ ಮತ್ತು ಹೆಸರುಕಾಳು ಬೀಜಗಳು ಬಾಹ್ಯಾಕಾಶ ಮುಟ್ಟಿ ಮೊಳಕೆಯೊಡೆದು ಬಂದದ್ದು. ʼಬಾಹ್ಯಾಕಾಶ ಕೃಷಿʼ ಅಥವಾ ʼಸ್ಪೇಸ್‌ ಫಾರ್ಮಿಂಗ್‌ʼನ ಕಲ್ಪನೆ ಹೊಸತಲ್ಲ. ಮೊದಲೇ ಸೈನ್ಸ್‌ ಫಿಕ್ಷನ್‌ಗಳು (ವಿಜ್ಞಾನದ ಕಪೋಲಕಲ್ಪಿತ ಕತೆಗಳು) ನಿಜವಾಗುವ ಕಾಲಘಟ್ಟವಿದು. ನಾವು ನೀವು ಸ್ಪೇಸಿಗೆ ಹೋಗದೇ ಇದ್ದರೂ ಸೈ, ಕೃಷಿಗೆ ಮಹತ್ತರವಾದ ಕೊಡುಗೆ ನೀಡುವ ಸಂಶೋಧನೆಗಳ ಬಗ್ಗೆ ಇಲ್ಲಿಯೇ ಕುಳಿತು ತಿಳಿಯುವುದರಲ್ಲಿ ತಪ್ಪೇನಿದೆ! ಈ ಹಿನ್ನೆಲೆಯಲ್ಲೊಂದು ಮಾಹಿತಿ ಭರಿತ ರಂಜನೀಯ ಲೇಖನ.

 

ಬರವಣಿಗೆಯ ಜೊತೆಗೆ ಆಗಾಗ ಸಿನೆಮಾಗಳನ್ನು ನೋಡುವುದು ನನ್ನ ಹವ್ಯಾಸಗಳಲ್ಲೊಂದು. ಇತ್ತೀಚೆಗೆ ʼಮಾರ್ಶಿಯನ್‌ʼ ಎನ್ನುವ ಸಿನೆಮಾ ನೋಡುತ್ತಿರುವಾಗ ಕೃಷಿ ಹಿನ್ನೆಲೆಯಲ್ಲಿ ಇದರ ಕಥಾವಸ್ತು ತುಂಬಾ ಗಮನ ಸೆಳೆಯಿತು. ಗಗನಯಾತ್ರಿಗಳ ತಂಡವೊಂದು ಮಂಗಳ ಗ್ರಹದ ಅಧ್ಯಯನಕ್ಕೆಂದು ಯಾತ್ರೆ ಕೈಗೊಳ್ಳುತ್ತದೆ. ಅಲ್ಲಿ ತಂಗಿ ಅರ್ಧ ಸಮಯವಾಗಿರಬಹುದು, ʼಮಾರ್ಕ್‌ ವ್ಯಾಟ್ನಿʼ ಎಂಬ ಸಸ್ಯಶಾಸ್ತ್ರಜ್ಞ ಬಿರುಗಾಳಿಗೆ ಸಿಕ್ಕು ತಂಡದಿಂದ ದೂರವಾಗುತ್ತಾನೆ.  ಅವನಿನ್ನು ಬದುಕಿರಲು ಸಾಧ್ಯವೇ ಇಲ್ಲವೆಂದು ಜ್ಞಾನಿಸಿದ ಉಳಿದ ಯಾತ್ರಿಗಳೆಲ್ಲಾ ಭೂಮಿಗೆ ವಾಪಸ್ಸಾಗುತ್ತಾರೆ. ಇತ್ತ ಮಂಗಳ ಗ್ರಹದಲ್ಲಿ ಒಂಟಿಯಾಗಿ ಬದುಕುಳಿದ ವ್ಯಾಟ್ನಿ ಹೇಗ್ಹೇಗೋ ಬಂದು ನಿಲ್ದಾಣ ಸೇರುತ್ತಾನೆ. ಇನ್ನು ಮೂವತ್ತೇ ದಿನ ದೂಡುವಷ್ಟು ಆಹಾರದ ದಾಸ್ತಾನು ಕಂಡು ಚಿಂತೆಗೀಡಾಗುತ್ತಾನೆ. ತಕ್ಷಣವೇ ಕಾರ್ಯಪ್ರವೃತ್ತನಾಗಿ ಅಲ್ಲಿರುವ ಬಟಾಟೆಯಿಂದ ಕೃಷಿ ಮಾಡುವ ಕೆಲಸಕ್ಕಿಳಿಯುತ್ತಾನೆ. ಸಣ್ಣದೊಂದು ಪ್ಲಾಸ್ಟಿಕ್‌ ಮನೆ ನಿರ್ಮಿಸಿ ರಾಕೆಟ್‌ ಇಂಧನದಿಂದಲೇ ನೀರನ್ನು ತಯಾರಿಸಿಕೊಂಡು ಬಂಜರಾದ ಮಂಗಳದ ಮಣ್ಣಿಗೆ ತನ್ನ ಮಲವನ್ನೇ ಸೇರಿಸಿ ಫಲವತ್ತವಾಗಿಸಿ ಅಂತೂ ಬಟಾಟೆ ಬೆಳೆದು ಯಶಸ್ವಿಯಾಗುತ್ತಾನೆ. ನಡುವೆ ಅವನ ಗಾರ್ಡನ್‌ ಸ್ಫೋಟವಾಗುತ್ತದೆ, ಇಂಧನ ಖಾಲಿಯಾಗುತ್ತದೆ ಹೀಗೆ ಸಾಕಷ್ಟು ತಿರುವುಗಳೊಂದಿಗೆ ಕಥೆ ಸಾಗುತ್ತದೆ.

ಇದಾದ ಮೇಲೆ ನಾನು ನೋಡಿರುವ ಎಲ್ಲಾ ಬಾಹ್ಯಾಕಾಶ ಕೇಂದ್ರಿತ ಚಲನಚಿತ್ರಗಳಲ್ಲೂ ಕೃಷಿ ಮಾಡಿ ಆಹಾರ ಬೆಳೆದುಕೊಳ್ಳುವತ್ತಲೂ ಪ್ರಾಮುಖ್ಯತೆ ಕೊಟ್ಟಿರುವುದನ್ನು ಗಮನಿಸಿದೆ. ಭೂಮಿ ಮೇಲಿನ ಕೊನೆಯ ಬೆಳೆಯಾದ ಜೋಳವನ್ನು ಬ್ಲೈಟ್‌ ಎಂಬ ಮಹಾಮಾರಿ ತಿಂದುಹಾಕಿದಾಗ ಬೇರೊಂದು ಕೃಷಿ ಯೋಗ್ಯ, ವಾಸ ಯೋಗ್ಯ ಭೂಮಿಗಾಗಿ ಹುಡುಕಾಟ ನಡೆಸುವುದರೊಂದಿಗೆ ಶುರುವಾಗುವ ಅದ್ಭುತ ಚಲನಚಿತ್ರ ʼಇಂಟರ್‌ಸ್ಟೆಲ್ಲಾರ್‌ʼನ ಹೀರೋ ಕೂಡಾ ಕೃಷಿಕನಾಗಿರುತ್ತಾನೆ. ʼಡ್ಯೂನ್‌ʼ ಎಂಬ ಸೂಪರ್‌ ಹಿಟ್‌ ಚಲನಚಿತ್ರದಲ್ಲಿ ಕೃಷಿ ಮಾಡುವ ಕಾಲನಿಗಳೇ ಇಡೀ ಅಂತರಿಕ್ಷವನ್ನು ಆಳುವವರಾಗಿರುತ್ತಾರೆ. ಹೀಗೆ ಹತ್ತಾರು ಚಲನಚಿತ್ರ, ಪುಸ್ತಕಗಳಲ್ಲಿ ʼಸ್ಪೇಸ್‌ ಫಾರ್ಮಿಂಗ್‌ʼ ನಡೆಯಬಹುದಾದ ಊಹಾಪೋಹಗಳೋಂದಿಗೆ ಈಗಾಗಲೇ ವಾಸ್ತವದಲ್ಲಿ ಅದು ನಡೆಯುತ್ತಿರುವ ಬಗ್ಗೆ ನಾಸಾದ ಬ್ಲಾಗ್‌ಗಳಲ್ಲಿ ಓದಿ ಆಶ್ಚರ್ಯ ಪಟ್ಟೆ.

ಏನಿದು ಸ್ಪೇಸ್‌ ಫಾರ್ಮಿಂಗ್‌

ಆಹಾರ ಮತ್ತು ಇತರ ವಸ್ತುಗಳಿಗಾಗಿ ಬಾಹ್ಯಾಕಾಶದಲ್ಲಿ (ಸದ್ಯಕ್ಕೆ ಇಂಟರ್‌ನ್ಯಾಶನಲ್‌ ಸ್ಪೇಸ್‌ ಸ್ಟೇಶನ್‌ ಅಥವಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಅಥವಾ ISS) ಅಥವಾ ಚಂದ್ರ ಮಂಗಳದಂತಹ ಆಕಾಶ ಕಾಯಗಳ ಮೇಲೆ ಬೆಳೆಗಳನ್ನು ಬೆಳೆಯುವ ಅಭ್ಯಾಸಕ್ಕೆ ಬಾಹ್ಯಾಕಾಶ ಕೃಷಿ ಅಥವಾ ಸ್ಪೇಸ್‌ ಫಾರ್ಮಿಂಗ್‌ ಎನ್ನಬಹುದು. 1975ರಲ್ಲಿ ಸ್ಯಾಲ್ಯುಟ್ 4 ಬಾಹ್ಯಾಕಾಶ ನಿಲ್ದಾಣದಲ್ಲಿ (ಈಗಿದು ಅಸ್ಥಿತ್ವದಲ್ಲಿ ಇಲ್ಲ)  ಸೋವಿಯತ್‌ನ ಗಗನಯಾತ್ರಿಗಳು ಸೇವಿಸಿದ ಸ್ಪ್ರಿಂಗ್‌ ಓನಿಯನ್‌ ಅನ್ನು ಬಾಹ್ಯಾಕಾಶದಲ್ಲಿ ಬೆಳೆದು ಸೇವಿಸಿದ ಮೊದಲ ಆಹಾರ ಬೆಳೆ ಎಂದು ಪರಿಗಣಿಸಲಾಗಿದೆ. ನಂತರ 1982ರಲ್ಲಿ ಸ್ಯಾಲ್ಯುಟ್ 7 ಬಾಹ್ಯಾಕಾಶ ನಿಲ್ದಾಣದಲ್ಲಿ(ಇದೂ ಕೂಡಾ ಅಸ್ಥಿತ್ವದಲ್ಲಿ ಇಲ್ಲ) ಇದೇ ರಷ್ಯಾದ ಗಗನಯಾತ್ರಿಗಳು ಅರಬಿಡೋಪ್ಸಿಸ್ ಥಾಲಿಯಾನಾ ಎಂಬ ಸಸ್ಯವನ್ನು ಬೀಜದಿಂದ ಬೀಜಕ್ಕೆ ಜೀವನ ಚಕ್ರವನ್ನು ಪೂರ್ಣಗೊಳಿಸುವಂತೆ ಬೆಳೆಸಲು ಯಶಸ್ವಿಯಾಗಿದ್ದರು. ನಂತರದಲ್ಲಿ ಅಸ್ಥಿತ್ವಕ್ಕೆ ಬಂದ ʼಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣʼದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಗೆ ಸಸ್ಯಗಳು ಹೇಗೆ ಸ್ಪಂದಿಸುತ್ತವೆ ಎಂದು ಅರ್ಥಮಾಡಿಕೊಳ್ಳಲು ಲೆಟ್ಯುಸ್, ಪಾಕ್‌ಚಾಯ್‌, ಕೇಲ್‌, ಜಿನ್ನಿಯಾ, ಸೂರ್ಯಕಾಂತಿ, ಸಾಸಿವೆ, ಮೂಲಂಗಿ, ಭತ್ತ ಗೋಧಿ ಹೀಗೆ ಹಲವಾರು ಸಸ್ಯಗಳನ್ನು ಸಂಶೋಧನೆಗಾಗಿ ಬೆಳೆಯಲಾಗಿದೆ. ನಾಸಾದ ಗಗನಯಾತ್ರಿಗಳು ತಮ್ಮ ಆಹಾರಕ್ರಮಕ್ಕೆ ಪೂರಕವಾಗುವಂತೆ ಮೆಣಸಿನಕಾಯಿ ಟೊಮ್ಯಾಟೋಗಳನ್ನೂ ಬೆಳೆದು ಸೇವಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏಕೆ ಬೇಕು ಈ ಸಂಶೋಧನೆ?

ಸದ್ಯಕ್ಕೆ ಬಾಹ್ಯಾಕಾಶ ವಾಸ ಕೈಗೊಂಡವರು ವಾರ, ತಿಂಗಳೊಪ್ಪತ್ತಿನಲ್ಲಿ ಹಿಂದಿರುಗುತ್ತಾರೆ. ಅವಧಿ ಮೀರಿ ಉಳಿದ ಪರಿಣಾಮ ಸುನೀತಾ ವಿಲಿಯಮ್ಸ್‌ ಅವರಿಗೆ ಏನಾಯ್ತೆಂದು ಎಲ್ಲರಿಗೂ ಗೊತ್ತು. ಭವಿಷ್ಯತ್ತಿನಲ್ಲಿ ಚಂದ್ರ ಮಂಗಳ ಗ್ರಹಗಳಿಗೆ ದೀರ್ಘಾವಧಿಯ ಕಾರ್ಯಾಚರಣೆಗಳಿಗೆ ಉಳಿಯುವ ಸಂದರ್ಭ ಬಂದಾಗ ಬದುಕಲು ಮುಖ್ಯವಾಗಿ ಆಹಾರ ಬೇಕಾಗುತ್ತದೆ. ಪ್ಯಾಕ್ ಮಾಡಿದ ಆಹಾರವನ್ನು ಎಷ್ಟೆಂದು ಕೊಂಡೊಯ್ಯಲು ಸಾಧ್ಯ, ಅದಕ್ಕೂ ಮಿತಿಯಿದ, ಹೆಚ್ಚಿನದಾಗಿ ಪ್ಯಾಕ್ಡ್‌ ಆಹಾರವು ಕಾಲಕ್ರಮೇಣ ಹಾಳಾಗುತ್ತದೆ, ಪೋಷಕಾಂಶ ಸತ್ವಗಳನ್ನು ಕಳೆದುಕೊಳ್ಳುತ್ತದೆ. ತಾಜಾ ಆಹಾರಕ್ಕಾಗಿ ಗಗನಯಾತ್ರಿಗಳೇ ಬೆಳೆ ಬೆಳೆದುಕೊಳ್ಳುವುದು ಸೂಕ್ತ. ಆಹಾರದಲ್ಲಿ ಸ್ವಾವಲಂಬತೆ ಸಾಧಿಸುವ ಜೊತೆಗೆ ಭೂಮಿಯಿಂದಲೇ ಎಲ್ಲವನ್ನೂ ಕೊಂಡೊಯ್ಯುವ ದುಬಾರಿ ವ್ಯವಹಾರವೂ ದೂರವಾಗುತ್ತದೆ.

ಗಗನಯಾತ್ರಿಗಳು  ಉಸಿರಿನ ಜೊತೆಗೆ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತಾರೆ. ಬಾಹ್ಯಾಕಾಶ ನಿಲ್ದಾಣದಂತ ಕಟ್ಟಿದ ಕೋಣೆಯಲ್ಲಿ ಇದರ ಪ್ರಮಾಣ ಮೀರದಂತೆ ಹತೋಟಿ ಮಾಡುವುದು ಅತ್ಯಗತ್ಯ. ದ್ಯುತಿಸಂಶ್ಲೇಷಣೆಯ ಕ್ರಿಯೆ ನಡೆಸುವ ಸಸ್ಯಗಳು ಇದನ್ನು ಬಳಸಿಕೊಳ್ಳಬಲ್ಲವು, ಆಮ್ಲಜನಕವನ್ನು ಉತ್ಪಾದಿಸಬಲ್ಲವು. ಮತ್ತು ಕೆಲ ಸಸ್ಯಗಳು ಗಾಳಿಯಲ್ಲಿ ಸಂಗ್ರಹವಾಗುವ ಬೆಂಜಿನ್‌, ಟಾಳಿನ್‌ಗಳಂತ ಇತರೇ ಹಾನಿಕಾರಕ ರಾಸಾಯನಿಕಗಳನ್ನೂ ತೆಗೆದುಹಾಕಬಲ್ಲವು. ಭಾಷ್ಪೀಕರಣ ಕ್ರಿಯೆ ನಡೆಸಿ ನೀರನ್ನು ಶುದ್ಧಿಸುವ ಸಸ್ಯಗಳು ನೈಸರ್ಗಿಕ ಫಿಲ್ಟರ್‌ಗಳಂತೆಯೇ ಕೆಲಸ ಮಾಡಬಲ್ಲವು. ಆವಿಯಾದ ಈ ನೀರನ್ನು ಸಂಗ್ರಹಿಸಿದರೆ ಮಾನವ ಸೇವನೆಗೂ ಸಾಧ್ಯ. ಮಲತ್ಯಾಜ್ಯವನ್ನು ಗೊಬ್ಬರವಾಗಿಸಿ ಸಸ್ಯಗಳಿಗೆ ಅನ್ವಯಿಸಬಹುದು. ಹೀಗೆ ಬಾಹ್ಯಾಕಾಶದಲ್ಲಿ ಗಿಡಗಳನ್ನು ಹೊಂದುವುದರಿಂದ ಸಂಪನ್ಮೂಲಗಳ ಮರುಬಳಕೆ ಸಾಧ್ಯವಾಗಿಸುವ ಸುಸ್ಥಿರವಾದ ʼಕ್ಲೋಸಡ್‌ ಲೂಪ್‌ʼ ವ್ಯವಸ್ಥೆ ನಿರ್ಮಿಸಲು ಸಾಧ್ಯ.

ಇನ್ನು ಕೃಷಿ ತೋಟಗಾರಿಕೆ ಮಾನಸಿಕ ಆರೋಗ್ಯಕ್ಕೆ ಚೇತೋಹಾರಿ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹಸಿರನ್ನು ಕಂಡರೆ ಮನಸ್ಸು ಕುಣಿದಾಡುವುದು ಸಹಜ. ನಾಲ್ಕು ಮೂಲೆಯ ಬಂಧೀ ಕೋಣೆಯಲ್ಲಿ ಸೀಮಿತ ಜಾಗದಲ್ಲಿ ಜೀವನ ಸವೆಸುವ ಬಾಹ್ಯಾಕಾಶ ಯಾತ್ರಿಗಳ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಕೃಷಿ ಉಪಯುಕ್ತ. ತಮ್ಮ ಉಚಿತ ಸಮಯದಲ್ಲಿ ಸ್ವಯಂ ಆಸಕ್ತಿಯಿಂದ ಸಸ್ಯಗಳನ್ನು ಬೆಳೆಸುವುದು ಖುಷಿ ಕೊಡುವ ಬಗ್ಗೆ; ತಾಜಾ ಹಸಿರು ಬೆಳೆದರೆ ಏನೋ ಅಪೂರ್ವವಾದ ಸಾಧನೆಯ ಅನುಭವ ಆಗುವ ಬಗ್ಗೆ ಬಹಳಷ್ಟು ಗಗನಯಾತ್ರಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಾಹ್ಯಾಕಾಶದಲ್ಲಿ ಬೆಳೆ ಬೆಳೆಯುವುದು ಭೂಮಿಯಷ್ಟು ಸುಲಭವಲ್ಲ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳೆಲ್ಲಾ ಯಾವಾಗಲೂ ಹಾರಾಡುತ್ತಿರುವುದನ್ನು ನೀವೆಲ್ಲಾ ಚಿತ್ರಗಳಲ್ಲಿ ವಿಡೀಯೋಗಳಲ್ಲಿ ನೋಡಿರಬಹುದು. ಇದಕ್ಕೆ ಕಾರಣ ಗುರುತ್ವಾಕರ್ಷಣಾ ಶಕ್ತಿಯ ಕೊರತೆ. ಭೂಮಿ ಮೇಲೆ ಧೃಡವಾಗಿ ನಿಲ್ಲಲು ಸಹಕರಿಸುವ ಬಲವಾದ ಗುರುತ್ವಾಕರ್ಷಣಾ ಶಕ್ತಿ ಅಲ್ಲಿಲ್ಲ. ಇದೇ ಬಾಹ್ಯಾಕಾಶದ ಬಹುದೊಡ್ಡ ಸವಾಲು.

ಸಸ್ಯಗಳಲ್ಲಿ ಬೇರು ಕಾಂಡ ಕೆಳಮುಖವಾಗಿ ಬೆಳೆಯಬೇಕೋ ಮೇಲ್ಮುಖವೋ ಎನ್ನುವುದನ್ನು ಪ್ರಾಥಮಿಕವಾಗಿ ನಿರ್ಧರಿಸುವುದೇ ಗುರುತ್ವಾಕರ್ಷಣೆ. ಬಲವಾದ ಗುರುತ್ವಾಕರ್ಷಣೆಯಿಲ್ಲದೆ ಬೇರು ಕಾಂಡಗಳಿಗೆ ತಲೆ ಕೆಟ್ಟು ಹೇಗೇಗೋ ಬೆಳೆಯುವದಂತೂ ಪಕ್ಕಾ. ಇದಕ್ಕಿಂತ ಹೆಚ್ಚಾಗಿ ಗಿಡದ ಬುಡಕ್ಕೆ ಹಾಕಿದ ನೀರು ಭೂಮಿಯಂತೆ ಇಲ್ಲಿ ಇಂಗಿ ಹೋಗುವುದಿಲ್ಲ, ಹನಿಹನಿಯಾಗಿ ಮೇಲೇರಿ ತೇಲುತ್ತಿರುತ್ತದೆ. ಸಸ್ಯಗಳ ಕಾಂಡಕೊಳವೆಯಲ್ಲೂ ನೀರು ಮೇಲೇರಿ ಒಂದೆಡೆ ಒತ್ತಟವಾಗಿಬಿಡುತ್ತದೆ. ಸಸ್ಯಗಳಿಗೆ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸಲು ಸೂರ್ಯನ ಬೆಳಕು ಬೇಕೇ ಬೇಕು. ಆದರೆ ಬಾಹ್ಯಾಕಾಶದಲ್ಲಿ ನೈಸರ್ಗಿಕ ಸೂರ್ಯನ ಬೆಳಕಿನ ಕೊರತೆಯಿದೆ. ಮಣ್ಣಿಲ್ಲದ ಬಾಹ್ಯಾಕಾಶದಲ್ಲಿ ಗಿಡಗಳನ್ನು ಬೆಳೆಸುವುದಾದರೂ ಎಲ್ಲಿ? ಬಾಹ್ಯಾಕಾಶ ನೌಕೆಗಳಲ್ಲಿ ಲಭ್ಯವಿರುವ ಜಾಗ, ಒಯ್ಯಬಹುದಾದ ವಸ್ತುಗಳ ತೂಕದ ಬಗ್ಗೆ ಕಟ್ಟುನಿಟ್ಟಾದ ಮಿತಿಯಿದೆ. ಭೂಮಿಯಿಂದ ಮಣಗಟ್ಟಲೇ ಮಣ್ಣು ಕೃಷಿಗೆ ಬೇಕಾದ ಪರಿಕರಗಳು ಸಂಪನ್ಮೂಲಗಳು ಒಯ್ಯುವುದಂತೂ ತರ್ಕಹೀನ. ಭೂಮಿಯಂತೆ ಬಾಹ್ಯಾಕಾಶವನ್ನು ವಿಕಿರಣಗಳಿಂದ ರಕ್ಷಿಸಲು ಒಝೋನ್‌ನಂತ ಕವಚವಿಲ್ಲ. ಬಾಹ್ಯಾಕಾಶದಲ್ಲಿ ವಿಕಿರಣಗಳ ತೀವ್ರ ದಾಳಿಯಿಂದ ಸಸ್ಯಗಳ ಡಿ.ಎನ್‌.ಎ ಮೇಲೆ ಹಾನಿ ಉಂಟಾಗಿ ಬೆಳವಣಿಗೆಯ ಮೇಲೆ ಒತ್ತಡ ಉಂಟಾಗುತ್ತದೆ. ಸದ್ಯಕ್ಕೆ ಬಾಹ್ಯಾಕಾಶದಲ್ಲಿ ಕೃಷಿ ದೂರ, ಸಸ್ಯವೊಂದನ್ನು ಬೆಳೆಸಲೇ ಬಹಳಷ್ಟು ಕಷ್ಟಪಡಬೇಕಾಗಿದೆ.

ಇವೆಲ್ಲ ಸಮಸ್ಯೆಗೂ ಒಂದೊಂದಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಗುರುತ್ವಾಕರ್ಷಣೆಯ ಬಲವಾದ ಸೆಳೆತವಿಲ್ಲದೆ ಸ್ವಲ್ಪ ಹುಚ್ಚುಹುಚ್ಚಾಗಿ ವರ್ತಿಸಿದರೂ ಸಸ್ಯಗಳನ್ನು ಬೆಳೆದು ಜಯಗಳಿಸಲಾಗಿದೆ. ಸದ್ಯಕ್ಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಮೇರಿಕಾ, ರಷ್ಯಾ, ಭಾರತ, ಜಪಾನ್‌ ಹೀಗೆ ಬೇರೆ ಬೇರೆ ದೇಶಗಳ ಸಂಶೋಧನಾ ಕೊಠಡಿಗಳಿವೆ, ಅಲ್ಲಿ ಆಯಾ ದೇಶಗಳೂ ತಮ್ಮಿಷ್ಟದ ಸಂಶೋಧನೆಗೆ ಅವಕಾಶ ಕಲ್ಪಿಸಿಕೊಂಡಿವೆ. ನಾಸಾದ ʼವೆಜ್ಜಿʼ ಎಂಬ ಆರು ಸಸ್ಯಗಳನ್ನು ಬೆಳೆಸಬಲ್ಲ ಕ್ಯಾರಿಬ್ಯಾಗ್‌ನಷ್ಟೇ ಚಿಕ್ಕದಾದ ಕೋಣೆಯಲ್ಲಿ ಈಗಿನ ವರೆಗೆ ಮೇಲೆ ಹೇಳಿದಂತೆ ಹಲವಾರು ಸೊಪ್ಪು ತರಕಾರಿಗಳನ್ನು ಬೆಳೆಸಿ ಸೇವಿಸಲಾಗಿದೆ. ಚೀನಾದಂತೂ ʼತಿಯಾಂಗಾಂಗ್ʼ ಎಂಬ ಬೇರೆಯದೇ  ನಿಲ್ದಾಣವಿದೆ! ಅಲ್ಲಿ ಭತ್ತದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಬಾಹ್ಯಾಕಾಶ ನಿಲ್ದಾಣದ ಹೊರಗಿನ ನಿರ್ವಾತದಲ್ಲೂ ಬೀಜಗಳನ್ನು ಮೊಳಕೆಯೊಡೆಸುವ  ಪ್ರಯೋಗಗಳು ಸಾಗಿವೆ.

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ತನ್ನ ʼಕ್ರಾಪ್ಸ್‌ʼ (CROPS) ಎಂಬ ಚಿಕ್ಕ ಹಸಿರುಮನೆ ಮಾಡ್ಯೂಲ್‌ನಲ್ಲಿ 2024ರಲ್ಲಿ  ಅಲಸಂದೆ ಬೀಜಗಳನ್ನು ಮೊಳಕೆಯೊಡೆಯೊಡೆಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಶುಭಾಂಶು ಶುಕ್ಲಾ ಮೊಳಕೆಯೊಡೆಸಿ ಶೇಖರಿಸಿ ತಂದ ಬೀಜಗಳ ಮೊಳಕೆ ಸಾಮರ್ಥ್ಯದ ಬಗ್ಗೆ, ಪೌಷ್ಟಿಕಾಂಶದ ಪ್ರಮಾಣದ ಬಗ್ಗೆ, ಸೂಕ್ಷ್ಮಗುರುತ್ವದಡಿ ಸಸ್ಯಪ್ರಚೋದಕಗಳ ಏರಿಳಿತದ ಬಗ್ಗೆ, ಸಸ್ಯಗಳು ಹೊಸ ಜಾಗಕ್ಕೆ ಹೊಂದಿಕೊಂಡ ಪ್ರತಿಕ್ರಿಯೆಯಾಗಿ ಉತ್ಪಾದಿಸುವ ವಂಶವಾಹಿಗಳ ಚಿತ್ರಣ ನೀಡುವ ಟ್ರಾನ್ಸ್ರ್‌ಕ್ರಿಪ್ಟೋಮ್‌ ಬಗ್ಗೆ, ಸೂಕ್ಷ್ಮ ಜೀವಿಗಳ ಸಂವಹನದ ಬಗ್ಗೆ ಮುಂದಿನ ಪ್ರಯೋಗ ಭೂಮಿಯ ಮೇಲೆ ನಡೆಯಲಿದೆ.

ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಯಲು ಬೇರೆಯದೇ ವ್ಯವಸ್ಥೇ ರೂಪಿಸಿಕೊಳ್ಳಲಾಗಿದೆ. ತಾಪಮಾನ, ಆರ್ದ್ರತೆ, ಇಂಗಾಲದ-ಡೈ-ಆಕ್ಸೈಡ್‌ ಪ್ರಮಾಣವನ್ನು ಬೇಕಾದ ರೀತಿಯಲ್ಲಿ ನಿಯಂತ್ರಿಸಲು ಗ್ರೋತ್‌ ಚೆಂಬರ್‌ ಅಥವಾ ಬೆಳವಣಿಗೆಗೆ ಸೂಕ್ತವಾದ ತೋಟಗಾರಿಕೆ ಕೋಣೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಸೂರ್ಯನ ಬೆಳಕಿನ ತರಂಗಾಂತರವನ್ನು (ವೇವ್‌ಲೆಂತ್)‌ ಗಮನದಲ್ಲಿರಿಸಿ ಕೃತಕ ಬೆಳಕನ್ನು ಪೂರೈಸಲಾಗುತ್ತಿದೆ. ʼಪ್ಲಾಂಟ್‌ ಪಿಲ್ಲೋʼ ಎನ್ನುವ ಪೊಟ್ಟಣದಲ್ಲಿ ಬೀಜ ಬಿತ್ತಿ ನಾಟಿ ಮಾಡಲಾಗುತ್ತಿದೆ. ಸಿರಿಂಜಿನ ಮೂಲಕ ನೀರನ್ನು, ಪೋಷಕಾಂಶವನ್ನು ಇದೇ ಪಿಲ್ಲೋದಲ್ಲಿ ಚುಚ್ಚಲಾಗುತ್ತದೆ. ಮಣ್ಣಿನ ಬದಲಾಗಿ ಮಣ್ಣುರಹಿತ ಹೈಡ್ರೋಫೋನಿಕ್ಸ್‌, ಏರೋಫೋನಿಕ್ಸ್‌ ವಿಧಾನಗಳನ್ನು ಅನುಸರಿಸಲಾಗುತ್ತದೆ. ಬಾಹ್ಯಾಕಾಶಕ್ಕಾಗಿಯೇ ವಿಶೇಷವಾದ ತಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಬಾಹ್ಯಾಕಾಶವನ್ನೇ ಅನುಸರಿಸುವ ವಾತಾವರಣವನ್ನು ಭೂಮಿಯಲ್ಲಿ ಕೃತಕವಾಗಿ ನಿರ್ಮಿಸಿ ಸಂಶೋಧನೆಯನ್ನೂ ಕೈಗೊಳ್ಳಲಾಗುತ್ತಿದೆ. ವಿಶೇಷವೆಂದರೆ ಈ ಎಲ್ಲಾ ವ್ಯವಸ್ಥೆಗಳೂ ನಮ್ಮ ಕೃಷಿಗೂ ಪರೋಕ್ಷವಾಗಿ ಮಹತ್ತರ ಕೊಡುಗೆ ನೀಡುತ್ತಿವೆ.

ಈ ಸಂಶೋಧನೆಯಿಂದ ಭೂವಾಸಿಗಳಿಗೆ, ಕೃಷಿಕರಿಗೇನು ಲಾಭ?

ಬಾಹ್ಯಾಕಾಶಕ್ಕೆ ಯಾತ್ರಿಗಳನ್ನು ಆಯ್ಕೆ ಮಾಡುವಾಗ ಎಂತಹ ಪರಿಸ್ಥಿತಿಯನ್ನೂ ಎದುರಿಸಬಲ್ಲ ಮಾನಸಿಕವಾಗಿ ದೈಹಿಕವಾಗಿ ಸಧೃಡರಾದವರನ್ನು ಆಯ್ಕೆ ಮಾಡಲಾಗುತ್ತದೆ. ಬಾಹ್ಯಾಕಾಶದಿಂದ ಹಿಂದಿರುಗಿದ ಮೇಲಂತೂ ಅವರು ಇನ್ನಷ್ಟು ಗಟ್ಟಿಯಾಗುತ್ತಾರೆ. ಕೃಷಿಯಲ್ಲೂ ಅಷ್ಟೇ. ನಮಗೆ ತಿಳಿದಿರುವ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ಆಹಾರವನ್ನು ಬೆಳೆಯುವ ಸಮಸ್ಯೆಯನ್ನು ಪರಿಹರಿಸುವಲ್ಲಿ ನಾವು ಸಫಲರಾದರೆ ಬಹುಶಃ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗುತ್ತಿರುವ ಭೂವಾಸಿಗಳಿಗೆ  ಆಹಾರವನ್ನು ಉತ್ಪಾದಿಸುವಲ್ಲೂ ನಾವು ಹೊಸ ಪಾಠವನ್ನು ಕಲಿತಂತೆ.

ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸಲು ತಾಪಮಾನ, ಆರ್ದ್ರತೆ, ಬೆಳಕು, ನೀರು ಪೋಷಕಾಂಶ ವಿತರಣೆ ಮತ್ತು ಇಂಗಾಲದ ಡೈಆಕ್ಸೈಡ್ ಮತ್ತು ಎಥಿಲೀನ್ ಪ್ರಮಾಣಗಳನ್ನು ನಿಯಂತ್ರಿಸುವ ನಾಸಾದ ʼಅಡ್ವಾನ್ಸಡ್‌ ಆಸ್ಟ್ರೋಕಲ್ಚರ್‌ʼ ಎಂಬ ವ್ಯವಸ್ಥೆಯ ಸಾಮರ್ಥ್ಯವನ್ನು ಗುರುತಿಸಿದ ವಿಜ್ಞಾನಿಗಳು ಭೂಮಿಯ ಮೇಲೆ ಹವಾನಿಯಂತ್ರಕಗಳಲ್ಲಿ ವಾಯು ಶುದ್ಧೀಕರಣ ಗೊಳಿಸುವಲ್ಲಿ ಅಳವಡಿಸಿಕೊಂಡಿದ್ದಾರೆ. ಆರಂಭದಲ್ಲಿ ದಿನಸಿ ಅಂಗಡಿಯಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಜೀವಿತಾವಧಿಯನ್ನು ಹೆಚ್ಚಿಸಲು ಬಳಸಲಾಗುತ್ತಿದ್ದ ಈ ತಂತ್ರಜ್ಞಾನವು ವೈನ್ ತಯಾರಕರ ಗಮನ ಸೆಳೆದ ಪರಿಣಾಮ ಶೇಖರಣಾ ಕೊಠಡಿಗಳಲ್ಲಿ ಬಳಕೆಯಾಗುತ್ತಿದೆ. ಸಂಶೋಧನೆ ಬಾಹ್ಯಾಕಾಶದಲ್ಲಾದರೂ ನೇರ ಲಾಭ ನಮಗೆಯೇ ಎನ್ನಲು ಇದೊಂದು ಉದಾಹರಣೆಯಷ್ಟೇ!

ವಾತಾವರಣ ನಿಯಂತ್ರಿಸುವ ಪರಿಣಾಮಕಾರಿಯಾದ ವ್ಯವಸ್ಥೆ; ಕನಿಷ್ಠ ನೀರು ಮತ್ತು ಪೋಷಕಾಂಶಗಳೊಂದಿಗೆ ಬೆಳೆ ಬೆಳೆಯುವ ನಿಖರ ಕೃಷಿ; ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ನೀರುಹಾಕುವುದು, ಪೋಷಕಾಂಶಗಳ ವಿತರಣೆ ಮತ್ತು ಕೊಯ್ಲು ಮಾಡಲು ಸ್ವಯಂಚಾಲಿತ ಸ್ಮಾರ್ಟ್‌ ವ್ಯವಸ್ಥೆಗಳು; ಬೆಳೆಯ ಮೇಲ್ವಿಚಾರಣೆಗಾಗಿ ಸುಧಾರಿತ ಸಂವೇದಕಗಳು; ಸೀಮಿತ ಜಾಗದಲ್ಲಿ ಸೀಮಿತ ಸಂಪನ್ಮೂಲಗಳನ್ನು ಬಳಸಿ ಮಣ್ಣುರಹಿತ ಹೈಡ್ರೋಪೋನಿಕ್ಸ್, ಏರೋಪೋನಿಕ್ಸ್, ಲಂಬ ಕೃಷಿಯಂತ ಮುಂದುವರಿದ ವಿಧಾನಗಳು; ವಿಕಿರಣ-ಸಹಿಷ್ಣು ಪ್ರಕೃತಿ ವಿಕೋಪಗಳನ್ನು ಮೆಟ್ಟಿ ನಿಲ್ಲುವ ತಳಿಗಳು; ಬಾಹ್ಯಾಕಾಶದಲ್ಲಿ ನಡೆಯುತ್ತಿರುವ ಈ ಎಲ್ಲಾ ಸಂಶೋಧನೆಗಳೂ ಭೂಮಿಯ ಮೇಲಿನ ಕೃಷಿಯನ್ನು ಸುಧಾರಿಸುವಲ್ಲಿ ಸಂಶಯವೇ ಇಲ್ಲ.

“ಬಲ್ಲವರು ಹೇಳುತ್ತಾರೆ ಹೊಸದೊಂದು ಜಾಗದಲ್ಲಿ ನಾವು ಕೃಷಿ ಮಾಡಿದೆವೆಂದರೆ ಆ ಜಾಗ ನಮ್ಮ ತೆಕ್ಕೆಗೆ ಬಿದ್ದಂತೆ; ನಾನು ಮಂಗಳದಲ್ಲಿ ಕೃಷಿ ಮಾಡಿದ್ದೇನೆ; ಮಂಗಳ ಇನ್ನು ಮನುಷ್ಯರದ್ದು” ಇದು ಮಾರ್ಶಿಯನ್‌ ವ್ಯಾಟ್ನಿ ಹೇಳುವ ಕೊನೆಯ ಮಾತುಗಳು.

reference

https://www.nasa.gov/missions/station/so-you-want-to-be-a-space-farmer/#:~:text=NASA%20has%20successfully%20grown%20plants,Advanced%20Plant%20Habitat%20(APH).

https://www.nasa.gov/humans-in-space/mission-commander-thrives-as-space-gardener/

for picture of plant pillow : https://www.nasa.gov/missions/station/microgravity-works-wonders-with-plant-transplants/

watering : https://www.nasa.gov/missions/station/the-shape-of-watering-plants-in-space/

 


Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ