ಕಲಾಭೂಮಿಯ ಅಡಿಕೆ ಕಲಾಕೃತಿಗಳು
ಓಡಿಶಾ ಪ್ರವಾಸದ ಸಮಯ. ಭುವನೇಶ್ವರದ ಸುತ್ತಮುತ್ತ ನಾವಂದುಕೊಂಡ ಪ್ರವಾಸಿ ತಾಣಗಳನ್ನೆಲ್ಲಾ ನೋಡಿಯಾಗಿತ್ತು. ಮಾಡಹಾಗಲದ ಹೊಸ ತಳಿಗಳನ್ನು ಕಾಣಬೇಕೆಂದು ಚೆಸ್ (ಸೆಂಟ್ರಲ್ ಹಾರ್ಟಿಕಲ್ಚರ್ & ಎಕ್ಸ್‌ಪರಿಮೆಂಟ್ ಸ್ಟೇಶನ್) ಭುವನೇಶ್ವರಕ್ಕೆ ಭೇಟಿ ಕೊಟ್ಟು ಮುಂದೆ ‘ಪುರಿ’ಗೆ ಹೊರಡುವುದಿತ್ತು. ಅಲ್ಲೊಬ್ಬರು ಕರ್ನಾಟಕದವರೇ ನಮ್ಮ ಪ್ಲಾನ್ ಎಲ್ಲಾ ಕೇಳಿತಿಳಿದು “ಮ್ಯುಸಿಯಮ್‌ಗೆ ಹೋಗಿದ್ರಾ!?” ಎಂದರು. ʼಸಮಯವಿದ್ದರೆ ಹೋಗೋಣʼ ಎಂದುಕೊಂಡಿದ್ದ ವಸ್ತುಸಂಗ್ರಹಾಲಯಗಳನ್ನು ಅವರು ನೋಡಲೇಬೇಕೆಂದು ಒತ್ತಾಯಿಸಿದಾಗ ಅದಾಗಲೇ ಮಧ್ಯಾಹ್ನವಾಗಿತ್ತು. ಪುರಿಗೆ ರಾತ್ರಿ ಪಯಣಿಸಿದರಾಯಿತೆಂದು ಊಟ ಮಾಡಿ ʼಸ್ಟೇಟ್ ಟ್ರೈಬಲ್ ಮ್ಯೂಸಿಯಮ್ʼ ಹೊಕ್ಕಿದೆವು.
ನಮ್ಮ ದೇಶದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ, ಒಟ್ಟು ಅರವತ್ತು ನಾಲ್ಕು ಬುಡಕಟ್ಟು ಜನಾಂಗವನ್ನು ಹೊಂದಿರುವ ರಾಜ್ಯ ಓಡಿಶಾದ ಟ್ರೈಬಲ್ ಮ್ಯೂಸಿಯಮ್‌ನಲ್ಲಿ ನಾನು ಸ್ತಬ್ಧನಾಗಿ ನಿಂತಿದ್ದೆ. ಬೈಗಾ, ಕೊಂಡಾ, ಮುಂಡಾ, ಸೌರಾ, ಅದೆಷ್ಟು ಜನಾಂಗ; ಅವರದೇ ಆದ ಪೋಷಾಕು, ಆಭರಣ ಧರಿಸಿದ ಸ್ತಬ್ಧ ಚಿತ್ರ; ಅವರ ಕಲೆ, ಗೃಹೋಪಯೋಗಿ ವಸ್ತುಗಳು, ಸಂಗೀತ ವಾದ್ಯಗಳು ಇತ್ಯಾದಿಗಳ ಸಂಗ್ರಹ; ಸ್ಥಳದಲ್ಲೇ ನಡೆಯುತ್ತಿದ್ದ ಢೋಕ್ರಾ ಪಟಚಿತ್ರ, ಭೊತ್ತದ ಮುಂತಾದ ಕಲೆಗಳ ಪ್ರಾತ್ಯಕ್ಷಿಕೆ ನೋಡುತ್ತಾ ಮೂರು ತಾಸು ಕಳೆದುಹೋಗಿದ್ದೇ ತಿಳಿಯಲಿಲ್ಲ. ಮುಂದೆ ʼಕಲಾಭೂಮಿ ಕ್ರಾಫ್ಟ್ ಮ್ಯುಸಿಯಮ್ʼಗೆ ಹೊಕ್ಕಾಗ ನಾಲ್ಕು ಗಂಟೆ ಆಗಿ ಹೋಗಿತ್ತು. ಅಲ್ಲಿಯ ಸಿಬ್ಬಂದಿ ಬಾಗಿಲು ಮುಚ್ಚು ತರಾತುರಿಯಲ್ಲಿದ್ದರು. ಪಟಪಟನೇ ಎಲ್ಲಾ ಗ್ಯಾಲರಿಗಳನ್ನು ಹೊಕ್ಕಿ ನೋಡಿದರೂ ಅದೇಕೋ ತೃಪ್ತಿಯಾಗಲಿಲ್ಲ. ಪುರಿ ಹೋಗಿ ಬಂದು ವಿಮಾನ ಹತ್ತುವ ಪೂರ್ವದಲ್ಲಿ ಸಮಯವಿದ್ದರೆ ಪ್ರತಿ ಗ್ಯಾಲರಿಯನ್ನು ವಿವರವಾಗಿ ನೋಡಲೇ ಬೇಕೆಂಬ ಬಯಕೆಯಾಯಿತು. ಜಗನ್ನಾಥನ ಕೃಪೆಯೇನೋ, ಆಡಿಯೋ ಗೈಡ್ ಸೌಲಭ್ಯದೊಂದಿಗೆ ಇಡೀ ಕಲಾಭೂಮಿ ಮ್ಯುಸಿಯಮ್ ಅನ್ನು ಸವಿಯುವ ಮೂರ್ನಾಲ್ಕು ತಾಸಿನ ಧಾರಾಳ ಸಮಯ ಸಿಕ್ಕಿತು.
ಟೆರ್ರಾಕೊಟ್ಟಾ, ಸಾಂಪ್ರದಾಯಿಕ ಚಿತ್ರಕಲೆ, ಕಲ್ಲು ಲೋಹ ಮರದ ಕೆತ್ತನೆ, ಕೈಮಗ್ಗ ಹೀಗೆ ಹಲವಾರು ಗ್ಯಾಲರಿಗಳ ಮಧ್ಯದಲ್ಲಿದ್ದ ʼನೈಸರ್ಗಿಕ ವಸ್ತುಗಳ ಕರಕುಶಲ ಗ್ಯಾಲರಿʼಯಲ್ಲಿ ನಾನಿದ್ದೆ. ಕೈಕೆಲಸದಿಂದಲೇ ನಿರ್ಮಿತವಾದ ಒಂದಕ್ಕಿಂತ ಒಂದು ಚಂದದ ಕಲಾಕೃತಿಗಳೆಲ್ಲಾ ಗಾಜಿನ ಪೆಟ್ಟಿಗೆಯ ಹಿಂದೆ ಭದ್ರವಾಗಿದ್ದವು. ಎಲ್ಲಿ ನೋಡಿದರೂ ಜಗನ್ನಾಥ-ಬಲಭದ್ರ-ಸುಭದ್ರೆಯರು. ಅಲ್ಲೊಂದು ಮೂಲೆಯಲ್ಲಿ ಚಿನ್ಮುದ್ರೆಯ ಪದ್ಮಾಸನೀ ಬುದ್ಧ ನನ್ನ ಗಮನ ಸೆಳೆದಿದ್ದ. ಒಂದಡಿ ಎತ್ತರದ ಅಲ್ಲಲ್ಲಿ ಬಿರುಕು ಬಿಟ್ಟಿದ್ದ ಕಲಾಕೃತಿ ಕಟ್ಟಿಗೆಯದೆಂದು ಭಾವಿಸಿದೆ. ಪಕ್ಕಕ್ಕೆ ಎರಡಿಂಚಿನ ಮತ್ತಷ್ಟು ಸಣ್ಣ ಸಣ್ಣ ಕಲಾಕೃತಿಗಳಿದ್ದವು. ಅವು ಕವಳಕ್ಕೆಂದು ಕತ್ತರಿಸಿದ ಪಟ್ಟೆಯ ಪಟ್ಟೆಯ ಚೂರು ಅಡಿಕೆಯಂತೆ ಗೋಚರವಾದವು. ಆಡಿಯೋ ಗೈಡ್ ಆನ್ ಮಾಡಿದೆ. ಹೌದಲ್ಲಾ, ಅದು ಅಡಿಕೆಯೇ. ಅಡಿಕೆಯದೇ ಜಗನ್ನಾಥ-ಬಲಭದ್ರ-ಸುಭದ್ರ, ಶಿವಲಿಂಗ, ನವಿಲು, ಪುಟ್ಟ ಕಲಶ, ಹೂಬಿಟ್ಟ ಮರ. ಕಂಡಿದ್ದೇ ಆಶ್ಚರ್ಯ ತಡೆಯಲಾರದೆ ಮನೆಯವರನ್ನು ಕೂಗಿ ಕರೆದೆ!
ಅಡಿಕೆಯ ಚೂರುಗಳನ್ನು ಸೇರಿಸಿ ನಿರ್ಮಿಸಿದ ಬುದ್ಧ, ಕಲಾಭೂಮಿ ಕ್ರಾಫ್ಟ್ಸ್ ಮ್ಯೂಸಿಯಮ್,ಭುಬನೇಶ್ವರ,
ಚಿತ್ರ ಕೃಪೆ: ಅಮೇರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್
ಅಲ್ಲಿ ಹೆಚ್ಚಿನದೇನೂ ಮಾಹಿತಿಯಿರಲಿಲ್ಲ. ʼಓಡಿಯಾ ಭಾಷೆಯಲ್ಲಿ ಗುಆ ಎಂದು ಕರೆಯಲ್ಪಡುವ ಅಡಿಕೆಯು ತನ್ನ ನಯವಾದ ವಿನ್ಯಾಸದ ಕಾರಣ ಕಲಾ ವಸ್ತುಗಳ ಕೆತ್ತನೆಗೆ ಒಳ್ಳೆಯ ಮಾಧ್ಯಮವೆನಿಸಿದೆ. ಅಡಿಕೆಯನ್ನು ಸೂಕ್ಷ್ಮವಾಗಿ ಹೆರೆಸುತ್ತಾ ವಿವರವಾದ ವಿನ್ಯಾಸಗಳನ್ನು ಕೆತ್ತಿ ಅಲಂಕಾರಿಕ ವಸ್ತುಗಳನ್ನು ನಿರೂಪಿಸುವುದು ಇಲ್ಲಿಯ ಸ್ಥಳೀಯ ಕಲಾಕಾರರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಇಂತಹ ನಿರೂಪಣೆಗಳಲ್ಲಿ ದೇವರು, ದೇವಾಲಯ ಹೀಗೆ ಧಾರ್ಮಿಕತೆಯ ಅಂಶವನ್ನು ಬಲವಾಗಿ ಕಾಣಬಹುದಾಗಿದೆ. ಪುಟ್ಟ ಗಾತ್ರದ ದೇವರ ಮೂರ್ತಿಗಳ ಜೊತೆಗೆ ಪ್ರಾಣಿ ಪಕ್ಷಿಗಳು, ಇತ್ತೀಚೆಗೆ ಮಣಿಗಳು, ಉಂಗುರಗಳು, ಆಭರಣಗಳಂತಹ ಕರಕುಶಲ ವಸ್ತುಗಳಲ್ಲೂ ಅಡಿಕೆಯ ಬಳಕೆ ಪ್ರಚಲಿತವಾಗುತ್ತಿದೆʼ ಎಂದು ಆಡಿಯೋ ಮಾಹಿತಿ ಹೇಳಿತ್ತಷ್ಟೇ. ಅಲ್ಲಿರುವ ಸಿಬ್ಬಂದಿಗೆ ಇದರ ಬಗ್ಗೆ ಹೆಚ್ಚಿನ ವಿಷಯಗಳೇನೂ ತಿಳಿದಿರಲಿಲ್ಲ. ನಾನೂ ಕೂಡಾ ಅಡಿಕೆಯ ಕಲಾಕೃತಿಗಳ ಫೋಟೋ ಕ್ಲಿಕ್ಕಿಸಿಕೊಂಡು ಕಲಾಭೂಮಿಗೆ ಬರದೇ ಇದ್ದಿದ್ದರೆ ಎಂಥಾ ಸ್ಥಳ ಮಿಸ್ ಮಾಡ್ತಿದ್ದೆ ಎಂದುಕೊಳ್ಳುತ್ತಾ ವಾಪಾಸ್ಸು ವಿಮಾನ ಹತ್ತಿದ್ದೆ.
ಅಂತರ್ಜಾಲದಲ್ಲೂ ಇದರ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ʼಅಮೇರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ʼನ ಜಾಲತಾಣದಲ್ಲಿ ಈ ಕಲಾಕೃತಿಗಳ ಛಾಯಾಚಿತ್ರಗಳಿದ್ದವು. ವಿವರಣೆಯಲ್ಲಿ 1900-1999 ಇಸ್ವಿಯಲ್ಲಿ ಸಂಗ್ರಹಿಸಿದ್ದು ಎಂದಿದೆ. ಮಧ್ಯಪ್ರದೇಶದ ರೇವಾ, ರಾಜಸ್ಥಾನದ ಜೈಪುರ, ಹೀಗೆ ದೇಶದ ವಿವಿಧ ಭಾಗಗಳಲ್ಲಿ ಸಿಮೀತ ಪ್ರದೇಶಗಳಲ್ಲಿ ಅಡಿಕೆಯ ಕಲಾಕೃತಿಗಳನ್ನು ನಿರ್ಮಿಸುವವರಿದ್ದೂ ಅಂತವರ ಸಂಖ್ಯೆ ದಿನೇ ದಿನೇ ಸೋಲುತ್ತಿದೆ ಎಂದು ಕೆಲವು ಬ್ಲಾಗ್‌ಗಳು ಉಲ್ಲೇಖಿಸಿವೆ. ಹಳೆಯ ಈ ಮಾಹಿತಿಗಳನ್ನು ನೋಡಿದರೆ ಇತದ್ದೊಂದು ಕಲೆ ನಶಿಸಿಹೋಗುತ್ತಿರುವುದೇ ಸೈ. ನಮ್ಮನಿಮ್ಮಲ್ಲಿಯೂ ಈ ತರಹದ ಕಲಾಕೃತಿಗಳನ್ನು ನಿರ್ಮಿಸುವ ಹವ್ಯಾಸಿಗರು ಇರಬಹುದು; ಕೌಶಲ್ಯವೊಂದು ಅವರೊಡನೆಯೇ ಹುಟ್ಟಿ ಅವರೊಡನೆಯೇ ಸಾಯುತ್ತಲೂ ಇರಬಹುದು.
ನನ್ನ ಚಿತ್ರಗಳು
Comments
Post a Comment