ಪಾಲಿಹೌಸ್ ಪುರಾಣ ಭಾಗ 2
ʼನಾವೂ
ಒಂದು ಪಾಲಿಮನೆ ಹೊಂದಬೇಕುʼ ಎಂಬ ಹಲವು ಜನರ ಹಂಬಲವನ್ನು ಉದ್ದೇಶಿಸಿ ಬರೆಯುತ್ತಿರುವ ಲೇಖನದ ಮೊದಲ
ಭಾಗದಲ್ಲಿ ಪಾಲಿಮನೆಯೆಂದರೇನು, ಪಾಲಿಮನೆಯೆಂಬ ಕಲ್ಪನೆ ಶುರುವಾಗಿದ್ದು ಹೇಗೆ-ಎಲ್ಲಿ, ಭಾರತ ಸೇರಿ
ವಿಶ್ವಾದ್ಯಂತ ಪಾಲಿಮನೆ ಕೃಷಿಯ ಪ್ರಸ್ತುತ ಚಿತ್ರಣವೇನು, ಪಾಲಿಮನೆಯ ವಿವಿಧ ಮಾದರಿಗಳು ಯಾವವು, ಪಾಲಿಮನೆ
ಕೃಷಿಯ ಪ್ರಯೋಜನಗಳೇನು ಎಂದು ಸರಳವಾಗಿ ಚರ್ಚಿಸಲಾಗಿತ್ತು. ಮುಂದುವರೆದ ಭಾಗವಾಗಿ ಪಾಲಿಮನೆ ನಿರ್ಮಾಣಕ್ಕೆ
ತಗಲುವ ವೆಚ್ಚ, ಪಾಲಿಮನೆಗಳಲ್ಲಿ ಲಾಭದಾಯಕವಾಗಿ ಕೈಗೊಳ್ಳಬಹುದಾದ ಚಟುವಟಿಕೆಗಳು, ಪಾಲಿಮನೆ ಕೃಷಿಯ
ಸವಾಲುಗಳು, ಸ್ಥಳೀಯ ಕೃಷಿಯಲ್ಲಿ ಪಾಲಿಮನೆಯ ಅವಶ್ಯಕತೆ, ಲಾಭದಾಯಕತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸೋಣ.
ತೆರೆದ
ಮೈದಾನಕ್ಕಿಂತ ದುಪ್ಪಟ್ಟು ಇಳುವರಿ, ಹವಾಮಾನ ನಿಯಂತ್ರಣೆ, ಕೀಟ ರೋಗಗಳಿಂದ ಮುಕ್ತಿ, ನಿಖರ ಕೃಷಿಗೆ
ಅವಕಾಶ, ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಸಾಧ್ಯತೆ ಹೀಗೆ ಲೇಖನದ ಮೊದಲ ಭಾಗ ಓದುತ್ತಾ ಪಾಲಿಮನೆಯಿಂದ
ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಕಂಡುಕೊಂಡಿದ್ದೇವೆ. ಅಷ್ಟು ಮಾತ್ರಕ್ಕೆ ಬೆಳೆ ಬೆಳೆಯುವ ಎಲ್ಲಾ
ತೊಡಕಿಗೂ ಪಾಲಿಮನೆ ಪರಿಹಾರವೆಂದುಕೊಂಡರೆ ತಪ್ಪಾದೀತು. ಸಂರಕ್ಷಿತ ಬೇಸಾಯವೆಂದರೆ ಪ್ರಯೋಜನಗಳೆಷ್ಟೋ
ಸವಾಲುಗಳೂ ಅಷ್ಟೇ!. ಅವುಗಳಲ್ಲಿ ನಿರ್ಣಾಯಕವಾದದ್ದು ಪಾಲಿಮನೆ ನಿರ್ಮಾಣಕ್ಕೆ ತಗಲುವ ವೆಚ್ಚ.
ಪಾಲಿಮನೆ
ದುಬಾರಿ ಎಂಬ ಕಹಿಸತ್ಯ
ಅಷ್ಟದಿಕ್ಕಿಗಳಿಗೂ ಒಂದೊಂದು ಕಂಬ, ಆಧಾರಕ್ಕಾಗಿ ಕಮಾನು, ಸುತ್ತಲೂ ಪ್ಲಾಸ್ಟಿಕ್
ಹೊದಿಕೆ, ಒಳಹೊಕ್ಕಲೊಂದು ಬಾಗಿಲು, ಆಯ್ತಲ್ಲಾ ಪಾಲಿಮನೆ, ಇದಕ್ಕೆಷ್ಟು ಖರ್ಚು ಎಂದು ನೀವೆಲ್ಲಾ ಅಂದುಕೊಳ್ಳಬಹುದು.
ಹಿಂದಿನ ಭಾಗದಲ್ಲಿ ಹೇಳಿದಂತೆ ಪಾಲಿಮನೆ ಸರಿಯಾಗಿ ಕೆಲಸ ಕೊಡಬೇಕೆಂದರೆ ಅದರದ್ದೇ ಆದ ರಚನೆಯ ಮಾನದಂಡಗಳಿವೆ.
ತರಕಾರಿ ಹೇಗೂ ಮೂರಡಿಗಿಂತ ಹೆಚ್ಚು ಎತ್ತರ ಬೆಳೆಯುವುದಿಲ್ಲವಲ್ಲ ಎಂದು ಆರೇ ಅಡಿ ಎತ್ತರದ ರಕ್ಷಣಾಮನೆ
ಮಾಡಿದರೆ ಅದರಲ್ಲಿ ತರಕಾರಿ ಹೋಗಲಿ, ಕಳೆ ಬೆಳೆಯುವುದೂ ಕಷ್ಟ.
“ಪಾಲಿಮನೆ ನಿರ್ಮಾಣಕ್ಕೆ ಆಯ್ಕೆ
ಮಾಡಿಕೊಂಡ ಸ್ಥಳ, ಪಾಲಿಮನೆಯ ಗಾತ್ರ,
ಪ್ರಕಾರ, ಯಾಂತ್ರೀಕೃತೆಯ ಮಟ್ಟ, ಕೈಗೊಳ್ಳಬಯಸುವ ಚಟುವಟಿಕೆ ಮುಂತಾದ
ವಿಷಯಗಳನ್ನು ಆಧರಿಸಿ ಪಾಲಿಮನೆಯ ದರ ನಿರ್ಧಾರವಾಗುತ್ತದೆ. ಖರ್ಚು ವೆಚ್ಚ ತಾಳಿಕೆ ಬಾಳಿಕೆಯನ್ನು ಗಮನದಲ್ಲಿರಿಸಿ
ಜಿ.ಐ ಆಧಾರದ ಮೇಲೆ ಪಾಲಿಥೀನ್ ಛಾವಣಿ ಬದಿಯಲ್ಲಿ ಕೀಟ ನಿರೋಧಕ ಪರದೆ ಹೊದೆಸಿದ ಪಾಲಿಮನೆ ಗ್ರಾಹಕರ
ಆಯ್ಕೆಯಾಗಿದೆ. ಕೇವಲ ಮೂಲಸೌಕರ್ಯಗಳೊಂದಿಗೆ ವ್ಯವಸ್ಥಿತವಾಗಿ ನಿರ್ಮಿಸಬಹುದಾದ ಇಂತಹ ಸಾದಾ ಸೀದಾ ರಚನೆಗಳಿಗೆ
900ರಿಂದ1600ರೂ ಚದರ ಮೀಟರ್‌ನಂತೆ ಹತ್ತು ಗುಂಟೆಗೆ ಕನಿಷ್ಟ ಹನ್ನೆರಡು ಲಕ್ಷದಂತೆ ಖರ್ಚಾಗಬಹುದು. ಇದಕ್ಕೂ
ಕಡಿಮೆ ಖರ್ಚಲ್ಲಿ ನಿರ್ಮಿಸಿದರೆ ಗುಣಮಟ್ಟದ ಜೊತೆ ರಾಜಿ ಮಾಡಿಕೊಳ್ಳಬೇಕಾಗಬಹುದು. ಪಾಲಿಮನೆ
ದೊಡ್ಡದಾದಂತೆ ಪ್ರತಿ ಚದರ ಮೀಟರ್‌ನ ಬೆಲೆ ಕಡಿಮೆಯಾಗುತ್ತಾ ಹೋಗುತ್ತದೆ. ರಸಾವರಿ ಹನಿ ನೀರಾವರಿ ವ್ಯವಸ್ಥೆ,
ಹೀಟಿಂಗ್ ಕೂಲಿಂಗ್ ವ್ಯವಸ್ಥೆ, ಮಿಸ್ಟ್ ಫಾಗರ್ ವ್ಯವಸ್ಥೆ, ಯಾಂತ್ರೀಕೃತೆ ವಿಶೇಷ ಉಪಕರಣ ಸಾಮಗ್ರಿಗಳು
ಬೇಕಾದಲ್ಲಿ ಬೆಲೆ ಏರುತ್ತಾ ಹೋಗುತ್ತದೆ. 6-6.5ಮೀ ಎತ್ತರ, 16ಮೀ ಅಗಲ, 20ಮೀ ಉದ್ದದ ಪಾಲಿಮನೆ ಫ್ಯಾಬ್ರೀಕೇಟರ್‌ರ ಕನಿಷ್ಟ ಅಳತೆ. ಸಂರಕ್ಷಿತ ಬೇಸಾಯಕ್ಕಾದರೆ ಕನಿಷ್ಟ ಅರ್ಧ ಎಕರೆ,
ನರ್ಸರಿಗಾದರೆ ಕನಿಷ್ಟ ಐದು ಗುಂಟೆ ವ್ಯಾಪ್ತಿಯ ಪಾಲಿಮನೆಯಾದರೂ ಬೇಕು. ಇಂತದ್ದೊಂದು ಪಾಲಿಮನೆ ನಿರ್ಮಿಸಿಕೊಂಡು
ಗಂಭೀರವಾಗಿ ಚಟುವಟಿಕೆ ಕೈಗೊಂಡರೆ ಮೂರರಿಂದ ಐದು ವರ್ಷದಲ್ಲಿ ಬಂಡವಾಳ ವಸೂಲಿ ಮಾಡಬಹುದು” ಎನ್ನುವುದು
ಫ್ಯಾಬ್ರೀಕೇಟರ್‌ಗಳ ಅಭಿಪ್ರಾಯ.
ಕಬ್ಬಿಣ – ಕೂಲಿ ಎಲ್ಲವೂ ದುಬಾರಿಯಾದ ಇಂದಿನ ದಿನಮಾನದಲ್ಲಿ ಪಾಲಿಮನೆ ನಿರ್ಮಾಣ,
ನಿರ್ವಹಣೆಯೆಂದರೆ ದೊಡ್ಡ ಖರ್ಚಿನ ಕೆಲಸವೇ. ಅದರಲ್ಲೂ ಸಣ್ಣ ರೈತರು ಇಷ್ಟೊಂದು
ದೊಡ್ಡ ಮೊತ್ತದ ಆರಂಭಿಕ ಹೂಡಿಕೆ ಭರಿಸುವುದು ಕಷ್ಟಕರ. ರೈತರ ಮೇಲಿನ ಈ ಆರ್ಥಿಕ ಹೊರೆಯನ್ನು
ತಗ್ಗಿಸಬೇಕು, ಹೆಚ್ಚೆಚ್ಚು ಸಂರಕ್ಷಿತ ಬೇಸಾಯದಲ್ಲಿ ಪಾಲ್ಗೊಂಡು ಲಾಭ ಪಡೆಯಬೇಕೆಂಬ ಕಾರಣಕ್ಕೆ ಸರ್ಕಾರವು
ದಶಕದ ಹಿಂದೆ ಪಾಲಿಮನೆ ನಿರ್ಮಾಣಕ್ಕೆ ಭರಪೂರ ಸಹಾಯಧನ,
ಶೇಕಡಾ 90%ವರೆಗೂ ನೀಡಿದ್ದಿದೆ. ಸರಿಯಾದ ಮಾರ್ಗದರ್ಶನವಿಲ್ಲದೆಯೋ, ನಿರ್ವಹಣೆ
ಕಷ್ಟಕರವೆನಿಸಿಯೋ, ನಷ್ಟವೇ ಅಧಿಕ ಎನಿಸಿಯೋ ಅಂದು ಸಬ್ಸಿಡಿಗಾಗಿ ಮಾಡಿಸಿಕೊಂಡ ಪಾಲಿಮನೆಗಳಲ್ಲಿ ಇಂದು
ಬಹುತೇಕ ಮೂಲೆಗುಂಪಾಗಿದ್ದೂ, ಕೆಲವರಂತು ಕಿತ್ತು ಮಾರಿಕೊಂಡಿಯಾಗಿದೆ ಎನ್ನುವುದು ದುರದೃಷ್ಟಕರ. ಇಂದು ಸಂರಕ್ಷಿತ
ಬೇಸಾಯಕ್ಕೆ ಸರ್ಕಾರದ ಉತ್ತೇಜನವೂ
ಸೀಮಿತವಾಗಿದೆ. ಕರೋನಾ ನಂತರದಲ್ಲಿ ಸಂರಕ್ಷಿತ ಬೇಸಾಯ ಲಾಭಕರವಲ್ಲದೆ ಬೇರೆ ಚಟುವಟಿಕೆಗಳ ಮೊರೆಹೋದದ್ದೂ
ಇದೆ. ದೊಡ್ಡ ಮೊತ್ತದ ಹೂಡಿಕೆಯ ಕಾರಣವೇ ಬಹುಶಃ ರೈತರಿಗಿಂತ ಹೆಚ್ಚು ಉದ್ದಿಮೆದಾರೇ ಪಾಲಿಮನೆ ಕೃಷಿಯಲ್ಲಿ
ಆಸಕ್ತರಾಗಿರುವುದನ್ನು ಗಮನಿಸಬಹುದು.
ಪಾಲಿಮನೆಯಲ್ಲಿ
ಕೈಗೊಳ್ಳಬಹುದಾದ ಲಾಭದಾಯಕ ಚಟುವಟಿಕೆಗಳು
ಪಾಲಿಮನೆ
ಖರ್ಚಿನದು ಎಂದು ಈಗ ಮನದಟ್ಟಾಗಿದೆ. ಪಾಲಿಮನೆ ನಿರ್ಮಾಣಕ್ಕೆ ಹಾಕಿದ ಬಂಡವಾಳ ಹಿಂಪಡೆಯಬೇಕಾದರೆ ಅಲ್ಲಿ
ಕೈಗೊಳ್ಳಬೇಕಾದ ಚಟುವಟಿಕೆಯನ್ನು ಯೋಚಿಸಿ ಯೋಜಿಸಿ ಮುಂದುವರೆಯವುದು ಜಾಣತನ. ಪಾಲಿಮನೆಯಲ್ಲಿ ಲಾಭದಾಯಕವಾಗಿ
ನಿರ್ವಹಿಸಬಹುದಾದ ಚಟುವಟಿಕೆಗಳು ಈ ಕೆಳಗಿನಂತಿವೆ.
ಸಂರಕ್ಷಿತ
ಬೇಸಾಯ: ಪಾಲಿಮನೆಯಲ್ಲಿ ಬಹುತೇಕ ಎಲ್ಲಾ ತೋಟಗಾರಿಕಾ ಬೆಳೆಯನ್ನು ಬೆಳೆಯಬಹುದಾದರೂ ಲಾಭದ ದೃಷ್ಟಿಯಿಂದ
ಮಾರುಕಟ್ಟೆಯ ಅಧ್ಯಯನ ಮಾಡಿ ತಕ್ಕುದಾದ ಬೆಳೆ ತಳಿಗಳನ್ನು ಆರಿಸಿಕೊಳ್ಳಬೇಕು. ಉದ್ದಕ್ಕೆ ಬೆಳೆಯುವ
ಇನ್‌ಡಿಟರ್ಮಿನೆಂಟ್ ತಳಿಯ ಟೊಮ್ಯಾಟೋ, ಚೆರ್ರಿ ಟೊಮ್ಯಾಟೋ, ಹಸಿರು ಮತ್ತು ಬಣ್ಣಬಣ್ಣದ ಕ್ಯಾಪ್ಸಿಕಮ್,
ಇಂಗ್ಲೀಷ್ ಸೌತೆ, ಲೆಟ್ಯುಸ್ ಕೇಲ್ ಸೆಲೆರಿ ಪಾರಸ್ಲೆ, ಜುಕಿನಿಯಂತಹ ವಿದೇಶೀ ತರಕಾರಿಗಳು, ಕಾರ್ನೇಷನ್,
ಡಚ್ ರೋಸ್, ಆಂಥುರಿಯಮ್, ಜರ್ಬೆರಾ, ಲಿಲ್ಲಿ, ಆರ್ಕಿಡ್, ಸೇವಂತಿಗೆಯಂತಹ ಹೂವಿನ ಬೆಳೆಗಳು, ಸ್ಟ್ರಾಬೆರಿ
ಹಣ್ಣುಗಳಂತ ಬೆಳೆಗಳ ಸಂರಕ್ಷಿತ ಬೇಸಾಯಕ್ಕೆ ಪಾಲಿಮನೆಯಲ್ಲಿ ಹೆಚ್ಚು ಆದಾಯವಿದೆ.
ಸಸ್ಯಾಭಿವೃದ್ಧಿ:
ತೋಟಗಾರಿಕಾ ಬೆಳೆಗಳ ನರ್ಸರಿ ಅಥವಾ ಸಸ್ಯಾಗಾರವಾಗಿ ಪಾಲಿಮನೆಯನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದಾಗಿದೆ.
ಪಾಲಿಮನೆಯೊಳಗೆ ವಾಣಿಜ್ಯಿಕ ಮಟ್ಟದಲ್ಲಿ ಹೆಚ್ಚು ಮೌಲ್ಯದ ಅಲಂಕಾರಿಕ ಸಸ್ಯಗಳ ಸಸ್ಯಾಭಿವೃದ್ಧಿ, ಹಣ್ಣು
ತೋಟಪಟ್ಟಿ ಸಾಂಬಾರು ಬೆಳೆಗಳ ಸಸ್ಯಾಭಿವೃದ್ಧಿ, ಕಸಿ ಗಿಡಗಳ ತಯಾರಿಕೆ, ತರಕಾರಿ ಸಸಿಗಳ ಉತ್ಪಾದನೆ,
ಅಂಗಾಂಶ ಕೃಷಿಯ ಮರಿಸಸಿಗಳ ಆರೈಕೆ ಮಾಡಿ ಮಾರಾಟ ಮಾಡಿದಲ್ಲಿ ಫಾಯಿದೆಯಿದೆ.
ಒಪ್ಪಂದದ
ಕೃಷಿ: ಪಾಲಿಮನೆಯಲ್ಲಿ ಬೆಳೆದ ಬೆಳೆಗೆ ಖಚಿತ ಮಾರುಕಟ್ಟೆಯಿದೆ, ಅಧಿಕ ಮೌಲ್ಯವಿದೆ, ಕೊಳ್ಳುವಿಕೆ ಒಪ್ಪಂದವಿದೆ
ಎಂದರೆ ಯಾವುದೇ ತೋಟಗಾರಿಕಾ ಬೆಳೆಯ ಕೃಷಿಯನ್ನೂ ಕೈಗೊಳ್ಳಬಹುದು.
ಹೈಟೆಕ್
ಕೃಷಿ: ಹೈಡ್ರೋಫೋನಿಕ್ಸ್, ಏರೋಫೋನಿಕ್ಸ್, ವರ್ಟಿಕಲ್ ಪಾರ್ಮಿಂಗ್ ಮುಂತಾದ ಹೈಟೆಕ್ ಕೃಷಿಗೆ ಪಾಲಿಮನೆ ಸಂಪಾದನೆಯ ಮೂಲವಾಗಬಲ್ಲದು.
ಪಾಲಿಮನೆ
ಕೃಷಿಯ ಇತರೇ ಸವಾಲುಗಳು
ಧೃಡ ನಿರ್ಧಾರದೊಂದಿಗೆ ಖರ್ಚನ್ನು ಭರಿಸಿ ಪಾಲಿಮನೆ ನಿರ್ಮಿಸಿಕೊಂಡರೆ ಮುಗಿಯುವುದಿಲ್ಲ.
ನಿರ್ಮಾಣಕ್ಕೆ ಬೇಕಾದ ಬಂಡವಾಳದ ಬೆನ್ನಲ್ಲೇ ಎರಗುವ ಇತರೇ ಸವಾಲುಗಳನ್ನೂ ಎದುರಿಸಲು ತಯಾರಿರಬೇಕಾಗುತ್ತದೆ.
·
ಪಾಲಿಮನೆಯಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳುವಾಗ ಅದು ಲಾಭಧಾಯಕವಾಗಿ ಇರಲೇಬೇಕಾದ್ದು
ಅನಿವಾರ್ಯ. ಇಲ್ಲಿ ಹೊರಾಂಗಣದಂತೆ ಬಂದರೆ ಬರಲಿ, ಹೇಗಾಗುತ್ತೋ ನೋಡೋಣ ಎನ್ನುವ ಪ್ರಯೋಗಗಳಿಗೆ ಅವಕಾಶವಿಲ್ಲ.
·
ಸಂರಕ್ಷಿತ ಕೃಷಿಗೆ ಬೆಳೆಯೊಂದನ್ನು ಆಯ್ಕೆ ಮಾಡಿಕೊಳ್ಳುವಾಗ ಸಂಭಾವ್ಯ ಮಾರುಕಟ್ಟೆ, ಗ್ರಾಹಕರ ಬೇಡಿಕೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ
ನಿಟ್ಟಿನಲ್ಲಿ ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣೆ ಅತ್ಯಗತ್ಯ. ಎಲ್ಲಾ
ಬೆಳೆಗಳನ್ನೂ ಬೆಳೆಯುವ ಶಕ್ಯತೆ ಇದ್ದರೂ ಲಾಭ ನಷ್ಟದ ಅನ್ವಯ ಪಾಲಿಮನೆ ಕೃಷಿ ಕೆಲವೇ ಬೆಳೆಗೆ ಸೀಮೀತವಾಗುತ್ತದೆ.
ಹಾಗಾದಾಗ ಮಾರುಕಟ್ಟೆ ಕುಸಿಯುವ ಆತಂಕವೂ ಹೆಚ್ಚು.
·
ಗಿಡದಿಂದ ಗಿಡಕ್ಕೆ ಅಂತರಿಂದ ಹಿಡಿದು ಕೊಯ್ಲಿನ ವರೆಗೂ ಪಾಲಿಮನೆ ಕೃಷಿ ಹೊರಾಂಗಣ
ಸಾಂಪ್ರದಾಯಿಕ ವಿಧಾನಕ್ಕಿಂತಲೂ ತೀರಾ ವಿಭಿನ್ನ. ಸಂರಕ್ಷಿತ ಬೇಸಾಯಕ್ಕೆಂದು
ಬೇರೆಯದೇ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಅನ್ನು ಶಿಫಾರಸ್ಸು ಮಾಡಲಾಗುತ್ತದೆ. ಇವುಗಳನ್ನು
ಅಳವಡಿಸಿಕೊಳ್ಳಲು ನಿರ್ದಿಷ್ಟ ಜ್ಞಾನ ಮತ್ತು ಕೌಶಲ್ಯಗಳು ಬೇಕಾಗುತ್ತವೆ. ಇದಕ್ಕೆ ಹವಾಮಾನ ನಿಯಂತ್ರಣ, ನೀರಾವರಿ ವ್ಯವಸ್ಥೆಗಳು, ಕೀಟ ನಿರ್ವಹಣೆ ಮತ್ತು ಸಂರಕ್ಷಿತ ಪರಿಸರದಲ್ಲಿ ಬೆಳೆ ಪೋಷಣೆಯಂತಹ ಪರಿಕಲ್ಪನೆಗಳನ್ನು
ಅರ್ಥಮಾಡಿಕೊಳ್ಳಬೇಕಾಗುತ್ತದೆ. ಭಿನ್ನ ರೀತಿಯ ಬೆಳೆಯ ಪೋಷಣೆಯ ಬಗ್ಗೆ ಹೊಸದಾಗಿ ಅಧ್ಯಯನ ಮಾಡಿ,
ಮಾರುಕಟ್ಟೆಯನ್ನೂ ಅಭ್ಯಸಿಸಿ ಹೊಸ ಕೌಶಲ್ಯವೊಂದನ್ನು ಕಲಿತು ರಂಗಕ್ಕೆ ಇಳಿಯುವುದು ರೈತರಿಗೆ ಕಷ್ಟವೆನಿಸಬಹುದು.
ಆದರೆ ಇದು ಅನಿವಾರ್ಯ, ಇಲ್ಲವಾದಲ್ಲಿ
ನಷ್ಟ ಕಟ್ಟಿಟ್ಟ ಬುತ್ತಿ.
·
ಪಾಲಿಮನೆಗೆ ಸೂಕ್ತವಾದ ತಳಿಗಳೂ ಭಿನ್ನವಾದಂತವು. ಅವುಗಳ ಬೀಜಗಳೂ ಸಸಿಗಳೂ
ದುಬಾರಿಯೇ. ನೀರಲ್ಲಿ ಕರಗುವ ರಸಗೊಬ್ಬರ, ಜೈವಿಕ ನಿಯಂತ್ರಣಗಳು ಎನ್ನುತ್ತಾ
ಒಳಸುರಿಗಳಿಗೂ ಹೆಚ್ಚು ಖರ್ಚಾಗುತ್ತದೆ.
·
ತೇವಾಂಶ,
ಕೀಟಗಳು, ಬೆಳೆಯ
ಹಂತಗಳ ಮೇಲ್ವಿಚಾರಣೆ, ನೀರು
ಗೊಬ್ಬರ ಇತ್ಯಾದಿಗಳ ನಿರ್ವಹಣೆ ಎನ್ನುತ್ತಾ ಪಾಲಿಮನೆಯ ಬೆಳೆಗಳಿಗೆ ಹೊರಾಂಗಣಕ್ಕಿಂತಲೂ
ಹೆಚ್ಚು ದೈನಂದಿನ ಆರೈಕೆಯ ಅಗತ್ಯವಿರುತ್ತದೆ. ಕಣ್ಣು ಮಿಟುಕಿಸಿದರೆ ಕಥೆ ಮುಗಿಯಿತು ಯಾವುದೋ
ರೋಗವೋ ಕೀಟವೂ ಪ್ರವೇಶ ಪಡೆದಿರುತ್ತದೆ, ನಾವದನ್ನು ಗುರುತಿಸದೇ ಹೋಗಬಹುದು ಹತೋಟಿ ಕೈಗೊಳ್ಳುವ
ಮುನ್ನವೇ ಬೆಳೆ ಸಂಪೂರ್ಣ ನಾಶವಾಗಬಹುದು. ಪಾಲಿಮನೆಯಲ್ಲಿ ಒಂದೆರಡು ವಾರ ಹೆಚ್ಚು ಕಡಿಮೆಯಾದರೆ
ನಡೆಯುತ್ತೆ ಎನ್ನುವ ಉಢಾಫೆಗೆ ಅವಕಾಶವಿಲ್ಲ. ಜಮೀನಿನ
ಕೆಲಸಗಳನ್ನು ನಿರ್ವಹಿಸುತ್ತಾ ಪಾಲಿಮನೆಯತ್ತ ಗಮನಹರಿಸಲು ಹೆಣಗಾಡಬೇಕಾಗುವ ಪರಿಸ್ಥಿತಿ
ಉಂಟಾಗಬಹುದು.
·
ಪಾಲಿಮನೆಯಲ್ಲಿ ನಿರ್ವಹಿಸಬಹುದಾದ ಚಟುವಟಿಕೆಗಳಿಗೆ ನುರಿತ ಕೆಲಸಗಾರರ ಅಗತ್ಯತೆಯಿದೆ.
ಸ್ಟೇಕಿಂಗ್, ಟ್ರೆಲ್ಲಿಸಿಂಗ್, ತುದಿ ಚಿವುಟುವುದು, ಹೆಣೆ ಬಾಗಿಸುವುದು ಮುಂತಾದ
ಕಾರ್ಯಾಚರಣೆಗಳಿಗೆ ತರಬೇತಿ ಬೇಕು. ಜೊತೆಗೆ ಬೆಳೆಯ ಬೆಳವಣಿಗೆ ಹಂತದ ಅನುಗುಣವಾಗಿ ಸರಿಯಾದ
ಸಮಯಕ್ಕೆ ಹೆಚ್ಚೆಚ್ಚು ಕೌಶಲ್ಯಪೂರ್ಣ ಕೂಲಿಕಾರರು ಬೇಕಾಗಬಹುದು.
·
ಪಾಲಿಮನೆ ಬೇಸಾಯದಲ್ಲಿ ಬೆಳೆ ಹಂತಗಳು, ಗೊಬ್ಬರ ಹಾಕುವ ಸಮಯ, ಕೀಟ ಗುರುತಿಸುವಿಕೆಯ ಬಗ್ಗೆ ಆಗಾಗ್ಗೆ
ತಜ್ಞರ ಸಲಹೆ ಅಗತ್ಯ. ಪಾಲಿಮನೆ ಕೃಷಿಗೆ ಹೊಸಬರಾಗಿದ್ದಲ್ಲಿ ಇಂತಹ ತಾಂತ್ರಿಕತೆಯ ಸಂಕೀರ್ಣತೆಯನ್ನು
ಪರಿಗಣಿಸಿ ಒಬ್ಬ ಕನ್ಸಲ್ಟಂಟ್ ಅಗತ್ಯವಾಗಬಹುದು. ಇದು ಇನ್ನಷ್ಟು ವೆಚ್ಚಕ್ಕೆ ದಾರಿಯಾದರೂ ಯಶಸ್ವಿ
ಕೃಷಿಗಾಗಿ ಸಲಹೆಗಾರರೊಬ್ಬರ ನೇಮಕ ಮಾಡಿಕೊಳ್ಳುವುದು ಅನಿವಾರ್ಯ ಮತ್ತು ಸಾಮಾನ್ಯ.
·
ಪಾಲಿಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಪ್ರತಿ ವರ್ಷ ಪಾಲಿಶೀಟ್
ತೊಳೆಯುವುದು, ಕಾಲಕಾಲಕ್ಕೆ ಮೇಲಿನ ಹೊದಿಕೆಯ ಬದಲಾವಣೆ, ಹೀಟಿಂಗ್ ಕೂಲಿಂಗ್ ಕೃತಕ ಬೆಳಕಿನ ವ್ಯವಸ್ಥೆ
ಇತರೇ ಯಾಂತ್ರೀಕತೆ ಹೊಂದಿದ್ದರೆ ವಿದ್ಯುತ್ ಖರ್ಚು ಎನ್ನುತ್ತಾ ಪಾಲಿಮನೆ ನಿರ್ವಹಣೆಯೂ ದುಬಾರಿಯೇ.
·
ಪಾಲಿಮನೆಯ ಸೀಮಿತ ಒಳಾಂಗಣದಲ್ಲಿ ಕೀಟ ರೋಗಗಳ ನಿಯಂತ್ರಣ ಎಷ್ಟು
ಸಾಧ್ಯವೋ ಅವು ಒಳನುಸುಳದಂತೆ ತಡೆಯುವುದೂ ಅಷ್ಟೇ ಕಷ್ಟ. ರೋಗ ಕೀಟಗಳಿಂದ ಒಂದೇ ಒಂದು ಬೆಳೆ
ವಿಫಲವಾದರೂ ಭರಿಸಲಾಗದ ನಷ್ಟ ಉಂಟಾಗಬಹುದು. ಸಸ್ಯಹೇನು, ಬಿಳಿನೊಣಗಳು ಒಂದು ಸಲ ಒಳಹೊಕ್ಕವೆಂದರೆ
ಪ್ರಾರಂಭದಲ್ಲೇ ಗುರುತಿಸಿ ಹತೋಟಿಯಾಗದಲ್ಲಿ ಅವು ಮಹಾಮಾರಿಯಾಗಿ ಕಾಡಬಲ್ಲವು. ತೇವಾಂಶ ಹೆಚ್ಚಿರುವ
ಕಾರಣ ಬೂದುರೋಗದಂತ ಶಿಲೀಂಧ್ರ ಸಮಸ್ಯೆಗಳೂ ಸಾಮಾನ್ಯ. ಒಮ್ಮೆ ಮಣ್ಣಿನಲ್ಲಿ ಕೊಳೆ ರೋಗ
ಸೇರಿತೆಂದರೆ ನಿರ್ಮೂಲನೆ ಕಷ್ಟ.
·
ಸ್ಥಳೀಯ ಹವಾಮಾನ ಮತ್ತು ಪರಿಸರ ಪರಿಸ್ಥಿತಿಗಳ ಸೂಕ್ತತೆಯು ಪಾಲಿಮನೆಯ
ಅಳವಡಿಕೆಯ ಮೇಲೆ ಪ್ರಭಾವ ಬೀರುವ ಅಂಶವಾಗಿದೆ. ಸಂರಕ್ಷಿತ ರಚನೆಗಳು ತೀವ್ರ ಹವಾಮಾನ ಪರಿಸ್ಥಿತಿಗಳ
ವಿರುದ್ಧ ನಿರೋಧನವನ್ನು ಒದಗಿಸಬಹುದು, ಆದರೆ ಅವುಗಳಿಗೆ ಸಾಕಷ್ಟು ಸೂರ್ಯನ ಬೆಳಕು,
ನೀರಿನ ಲಭ್ಯತೆ ಮತ್ತು ಸೂಕ್ತವಾದ ತಾಪಮಾನ ಬೇಕಾಗುತ್ತವೆ. ಜೊತೆಗೆ ಸ್ಥಳೀಯ
ಪರಿಸ್ಥಿತಿಗಳು ಸಂರಕ್ಷಿತ ಕೃಷಿಯ ಅವಶ್ಯಕತೆಗಳೊಂದಿಗೆ ಹೊಂದಿಕೆಯಾಗುತ್ತವೆಯೇ ಎಂದು
ನಿರ್ಣಯಿಸುವುದು ಅತ್ಯಗತ್ಯ. ಚಂಡಮಾರುತಗಳು,
ಭಾರೀ ಮಳೆ, ಆಲಿಕಲ್ಲು
ಮಳೆಯಿಂದ ಪಾಲಿಮನೆಗೆ ಹಾನಿ ಉಂಟಾಗಬಹುದು.
ಸ್ಥಳೀಯ ಕೃಷಿಯಲ್ಲಿ ಪಾಲಿಮನೆಯ ಅವಶ್ಯಕತೆ ಮತ್ತು ಲಾಭದಾಯಕತೆ
ವೈವಿಧ್ಯಮಯ ಭೌಗೋಳಿಕ ಗುಣಲಕ್ಷಣಗಳು, ಉಷ್ಣ-ಶೀತ-ಸಮಶೀತೋಷ್ಣ-ಶುಷ್ಕ ಎನ್ನುತ್ತಾ
ಎಲ್ಲಾ ರೀತಿಯ ವಾಯುಗುಣವನ್ನು ಹೊಂದಿರುವ ರಾಷ್ಟ್ರ ನಮ್ಮ ಭಾರತ. ರಫ್ತು ಮಾಡುವ ಮಟ್ಟಕ್ಕಲ್ಲದಿದದ್ದರೂ
ಎಲ್ಲಾ ಬೆಳೆಗಳನ್ನೂ ನಮಗೆ ಬೇಕಷ್ಟನ್ನು ಬೆಳೆದುಕೊಳ್ಳುವ ಸ್ವಾವಲಂಬತೆ ನಮ್ಮಲ್ಲಿದೆ. ಆಹಾರದ ಮಟ್ಟಿಗಂತೂ
ನಾವು ಸದ್ಯಕ್ಕೆ ಸುಭದ್ರ. ಇಸ್ರೇಲ್ ದೇಶಕ್ಕೆ ತನಗೆ ಬೇಕಾದ ಬೆಳೆಗಳನ್ನು ಹೊರಾಂಗಣದಲ್ಲಿ ಬೆಳೆಯಲು
ಸಾಧ್ಯವಿಲ್ಲ, ಅದಕ್ಕೆಂದೇ ಪಾಲಿಮನೆ ಕಟ್ಟಿಕೊಂಡಿದೆ.
ಅದರಲ್ಲಿ ಬಹುವಾರ್ಷಿಕ ಬೆಳೆಗಳಾದ ಮಾವನ್ನೂ ಸಾಂದ್ರ ಪದ್ಧತಿಯಲ್ಲಿ (ಅಲ್ಟ್ರಾ ಹೈ ಡೆನ್ಸಿಟಿ
ಮಾದರಿಯಲ್ಲಿ) ಬೆಳೆಯಲಾಗುತ್ತದೆ. ನಮ್ಮ ದೇಶದಲ್ಲಿ ಇವೆಲ್ಲವೂ ಹೊರಾಂಗಣದಲ್ಲೇ ಸಾಧ್ಯವಾದಾಗ ಅಲ್ಲಿಯ
ತಂತ್ರಜ್ಞಾನವನ್ನು ಭಟ್ಟಿ ಇಳಿಸುವುದು ಸೂಕ್ತವಲ್ಲ. ಪಾಲಿಮನೆಯಲ್ಲೇ ಬೆಳೆಯಲಿ, ಹೊರಾಂಗಣದಲ್ಲೇ ಬೆಳೆಯಲಿ
ಟೊಮ್ಯಾಟೋ ಖರೀದಿ ನಮ್ಮಲ್ಲಿ 10ರೂ ಕೆಜಿಯೇ.
ಇನ್ನು ಗುಣಮಟ್ಟದ ಬೆಳೆ ಬೆಳೆಯಲು, ಹೆಚ್ಚು ಇಳುವರಿ ಪಡೆಯಲು ಪಾಲಿಮನೆಯೊಂದು
ವರ ಎಂಬಲ್ಲಿ ಎರಡು ಮಾತಿಲ್ಲ. ಕ್ಯಾಪ್ಸಿಕಮ್‌ಗಳನ್ನಂತು ಬೆಳೆಯಲು ಸಾಧ್ಯವಾಗಿಸಿದ್ದೇ ಇಂತದ್ದೊಂದು
ತಂತ್ರಜ್ಞಾನ. ಹಿಮಾಚಲದಲ್ಲಿ ಕ್ಯಾಪ್ಸಿಕಮ್‌ಗಳ ಸಂರಕ್ಷಿತ ಕೃಷಿಯೊಂದು ಯಶಸ್ವೀ ಉದ್ಯೋಗ. ನಮ್ಮ ಸ್ಥಳೀಯ
ಮಾರುಕಟ್ಟೆಗೆ ಅನುಸಾರ ಚಟುವಟಿಕೆ ಕೈಗೊಂಡರೆ ಪಾಲಿಮನೆ ಕೃಷಿ ಲಾಭದಾಯಕವಾಗುವುದರಲ್ಲಿ ಸಂದೇಹವಿಲ್ಲ.
ಕರ್ನಾಟಕದ ವಿವಿಧ ಭಾಗಕ್ಕೆ ಪಾಲಿಮನೆಯ ಸೂಕ್ತತೆ
ಕರಾವಳಿ
ಹೆಚ್ಚು ಆರ್ದ್ರತೆಯ, ತಾಪಮಾನದ, ಒಳ್ಳೆಯ ಮಳೆ ಕಾಣುವ ಕರಾವಳಿ ಪ್ರದೇಶಕ್ಕೆ
ಪಾಲಿಮನೆ ಅಷ್ಟಾಗಿ ಸೂಕ್ತವಲ್ಲ. ಹೆಚ್ಚಿನ ಆರ್ದ್ರತೆಯು ಶಿಲೀಂಧ್ರ ಮತ್ತು
ಬ್ಯಾಕ್ಟೀರಿಯಾದ ರೋಗಗಳನ್ನು ಹೆಚ್ಚಿಸುತ್ತದೆ. ಸತತ ಗಾಳಿ ಮಳೆಯಿಂದಾಗಿ ಪಾಲಿಫಿಲ್ಮ್‌ಗಳು ಬೇಗ
ಹಾಳಾಗುತ್ತವೆ. ಸಂರಕ್ಷಿತ ಬೇಸಾಯಕ್ಕಿಂತಲೂ ನರ್ಸರಿಯಂತ ಚಟುವಟಿಕೆ ಕೈಗೊಳ್ಳಬಹುದು. ಇದಕ್ಕೆ
ಪಾಲಿಟನಲ್ ಅಥವಾ ನೆರಳುಮನೆಯೇ ಸಾಕು.
ಮಲೆನಾಡು
ಹದವಾದ ಆರ್ದ್ರತೆ, ಹದವಾದ
ಮಳೆ, ಮಿತವಾದ ಚಳಿಯಿರುವ ಮಲೆನಾಡು ಭಾಗದಲ್ಲಿ ಪಾಲಿಮನೆ ಹೊಂದಬಹುದಾದರೂ ಸಂರಕ್ಷಿತ ಬೇಸಾಯಕ್ಕೆ
ಬೆಳೆ ಆಯ್ಕೆ ಮಾಡಿಕೊಳ್ಳುವಾಗ ಮಾರುಕಟ್ಟೆ ಅಧ್ಯಯನ ಅಗತ್ಯ. ಮಿಸ್ಟಿಂಗ್ ಫಾಗಿಂಗ್
ವ್ಯವಸ್ಥೆಯೊಂದಿಗೆ ಕಸಿ ಗಿಡಗಳ ತಯಾರಿಕೆಯೂ ಇಲ್ಲಿ ಲಾಭದಾಯಕ. ಆದರೂ ಇದಕ್ಕೆ ಪಾಲಿಟನಲ್ ಹೆಚ್ಚು
ಸೂಕ್ತ.
ಉತ್ತರ ಕರ್ನಾಟಕ
ಒಣಭೂಮಿ, ಬಿಸಿ ಬೇಸಿಗೆ, ತಂಪಾದ ಚಳಿಗಾಲದ ಈ ಭಾಗಕ್ಕೆ ಪಾಲಿಮನೆ
ಒಳ್ಳೆಯ ಗಳಿಗೆಯ ಮೂಲವಾಗಬಹುದು. ತರಕಾರಿ ಬೆಳೆಯುವಂತಹ ಜಾಗದಲ್ಲಿ ಸಸಿ ತಯಾರಿಕೆ ಹೆಚ್ಚು ಲಾಭದಾಯಕ.
ಬೆಂಗಳೂರು ಸುತ್ತಮುತ್ತ
ಹದವಾದ ವಾಯುಗುಣ ಹೊಂದಿರುವ ಪ್ರದೇಶಗಳು ಬೆಂಗಳೂರು ಮಾರುಕಟ್ಟೆಯನ್ನುಗಮನದಲ್ಲಿರಿಸಿ
ತರಕಾರಿ ಮತ್ತು ಪುಷ್ಪಕೃಷಿಗೆ ಪಾಲಿಮನೆ ಹೊಂದಬಹುದು. ವರ್ಷವಿಡೀ ಬೆಳೆ ಕೈಗೊಳ್ಳಬಹುದು.
ಇಷ್ಟೊತ್ತಿಗಾಗಲೇ ಸಣ್ಣ ರೈತರಿಗೆ, ದೈನಂದಿನ ಕೃಷಿಯಲ್ಲಿ, ಹಿತ್ತಲ ತರಕಾರಿಗೆ,
ಬಿಸಿಲು ಮಳೆ ಗಾಳಿಯಿಂದ ರಕ್ಷಣೆಗಾಗಿ ಪಾಲಿಮನೆಯಲ್ಲ ಎಂದು ತಿಳಿದಿರಬೇಕು. ಅಷ್ಟಕ್ಕೂ ಬೇಕೇ ಬೇಕೆನಿಸಿದರೆ
ಪರ್ಯಾಯವಾಗಿ ಸಣ್ಣ ಮಟ್ಟದ ತರಕಾರಿ ಕೃಷಿ, ನರ್ಸರಿ ಚಟುವಟಿಕೆಗಳಿಗಾಗಿ 3-4ಮೀಟರ್ ಎತ್ತರದ ನೆರಳು
ಮನೆ (ನೆಟ್ ಹೌಸ್), ಸಸ್ಯಾಭಿವೃದ್ಧಿಗಾಗಿ 4-4.5 ಮೀ ಎತ್ತರದ ಪಾಲಿಟನಲ್ ಅಳವಡಿಸಿಕೊಳ್ಳಬಹುದು.
ಇವುಗಳನ್ನೂ ವ್ಯವಸ್ಥಿತವಾಗಿ ಫ್ಯಾಬ್ರೀಕೇಟರ್‌ಗಳ ಬಳಿ ನಿರ್ಮಿಸಿಕೊಳ್ಳಬೇಕೆಂದರೆ ಸಾಕಷ್ಟು ಖರ್ಚಿದೆ.
ನಾವೇ ಸ್ವತಃ ನಿರ್ಮಿಸಿಕೊಂಡರೆ ಒಳಗಿನ ತಾಪಮಾನ, ಆರ್ದ್ರತೆ ನಿರ್ವಹಿಸಲು ಕಷ್ಟವಾಗಿ ತಾಂತ್ರಿಕವಾಗಿ
ಕೈಕೊಡಬಹುದು (ಆರ್ದ್ರತೆ ಹೆಚ್ಚಾಗಿ ಕಾವೇರುವ ಕುಬ್ಜ ಗಾತ್ರದ ಪಾಲಿಟನಲ್‌ನಲ್ಲಿ ತರಕಾರಿ ಕೃಷಿ ಸಾಧ್ಯವಿಲ್ಲ).
ಅಷ್ಟಾಗಿಯೂ ಪಾಲಿಮನೆ ಕೃಷಿ ಮಾಡಿಯೇ ಸಿದ್ಧ ಎಂದಾದರೆ ಸಬ್ಸಿಡಿ ಇಲ್ಲದಿದ್ದರೂ ಸಹ ಸಂಪೂರ್ಣ ಖರ್ಚನ್ನು ಅನ್ನು ನಿಭಾಯಿಸಬಹುದೇ, ಮೊದಲೆರಡು
ವರ್ಷ ಲಾಭವಿಲ್ಲದೇ ಮುಂದುವರೆಯುವ ಸಾಮರ್ಥ್ಯವಿದೆಯೇ, ನಿಮ್ಮ ಉತ್ಪಾದನೆಗೆ ಮಾರುಕಟ್ಟೆ ಮೌಲ್ಯವಿದೆಯೇ,
ಖರೀದಿದಾರರು ಯಾರು, ನಿರಂತರವಾಗಿ ಖರೀದಿಯಿದೆಯೇ, ನಿಮ್ಮ ಸ್ಥಳೀಯ ಹವಾಮಾನ ಸಾಥ್
ಕೊಡಬಹುದೇ, ಪೂರ್ತಿ ಲಕ್ಷ್ಯವನ್ನು ಇಲ್ಲಿಯೇ ಹರಿಸಿ ಚಟುವಟಿಕೆಯನ್ನು ನಿರ್ವಹಿಸಬಲ್ಲೆಯೆಂಬ
ವಿಶ್ವಾಸವಿದೆಯೇ, ಸಮಸ್ಯೆಯಾದರೆ ಪರಿಹರಿಸಲು ತಜ್ಞರ ಲಭ್ಯತೆಯಿದೆಯೇ, ನುರಿತ ಕೆಲಸಗಾರರು
ಲಭ್ಯವೇ, ಸ್ಥಳೀಯವಾಗಿ ನೀರು ವಿದ್ಯುತ್ ಇತರೇ ಸಂಪನ್ಮೂಲಗಳ ಸಾಕಷ್ಟಿದೆಯೇ, ಸಾರಿಗೆ ವ್ಯವಸ್ಥೆ
ಹೇಗೆ ಎನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರಿಸಿಕೊಂಡು ಮುಂದುವರೆಯಬಹುದು.
Comments
Post a Comment