ಕ್ರಿಪ್ಟಾಂಥಸ್‌ಗಳ ಕೌತುಕ ಲೋಕ
ಒಳಾಂಗಣ ಸಸ್ಯಗಳನ್ನು ಸಂಗ್ರಹಣೆ ಮಾಡಲು ತೊಡಗಿದ್ದ ಪ್ರಾರಂಭದ ದಿನಗಳು; ನರ್ಸರಿಯೊಂದರಲ್ಲಿ ಮೂರು ಇಂಚಿನ ಬಿಳಿ ಪ್ಲಾಸ್ಟಿಕ್ ಪಾಟ್‌ನಲ್ಲಿ ಅಕ್ಟೋಪಸ್‌ನ ಕೊರಕಲು ಕಾಲುಗಳಂತೆ ಹರಡಿದ್ದ ʼಬೇಬಿ ಪಿಂಕ್ʼ ಬಣ್ಣದ ಆ ಗಿಡಕ್ಕೆ ಮನ ಸೋತುಹೋಗಿತ್ತು. ದರವೆಷ್ಟೆಂದು ಕೇಳದೆ ನರ್ಸರಿಯವರು ಹೇಳಿದಷ್ಟು ಕೊಟ್ಟು ತಂದಿದ್ದೆ. ಹೀಗೆ ಪರಿಚಯವಾದದ್ದು ಕ್ರಿಪ್ಟಾಂಥಸ್‌ಗಳ ಕೌತುಕ ಲೋಕ.
ಬೇಬಿ ಪಿಂಕ್‌ನಿಂದ ಶುರುಮಾಡಿ ಹಸಿರು, ಕಂದು, ಪಟ್ಟೆಪಟ್ಟೆಯ ವಿವಿಧ ಬಣ್ಣ ವಿನ್ಯಾಸದ ಹಲವಾರು ಕ್ರಿಪ್ಟಾಂಥಸ್‌ಗಳ ಸಂಗ್ರಹವಾಗಿತ್ತು. ಅವುಗಳಲ್ಲೊಂದು ತನ್ನ ಹೊಕ್ಕುಳಲ್ಲಿ ನಕ್ಷತ್ರದಂತ ಬಿಳಿ ಹೂಗಳನ್ನು ಬಿಟ್ಟು ಕಂಗೊಳಿಸುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಗಿಡ ಸಾಯತೊಡಗಿತು. ಕಾಳಜಿ ಹೆಚ್ಚಾಯಿತೋ, ನನ್ನ ದೃಷ್ಟಿಯೇ ತಾಕಿತೋ; ಗಿಡ ಸಾಯುತ್ತಿರುವುದನ್ನು ಕಂಡು ಬೇಜಾರಾದರೂ ಏನೂ ಮಾಡುವಂತಿರಲಿಲ್ಲ. ಹೇಗಿದ್ದರೂ ಗಿಡದ ಸಾವು ನಿಶ್ಚಿತ ಎಂದುಕೊಂಡು ತಾಯಿಯಿಂದ ಹೊರಟ ಚಿಕ್ಕ ಮರಿಗಳನ್ನು ಬೇರೆ ಮಾಡದೆ ಅವುಗಳ ಪಾಡಿಗೆ ಬಿಟ್ಟು ಸುಮ್ಮನಾದೆ. ಕೆಲವೇ ದಿನದಲ್ಲಿ ಆಶ್ಷರ್ಯ ಕಾದಿತ್ತು. ಆ ಮರಿಗಳೆಲಗಲಾ ದೊಡ್ಡ ದೊಡ್ಡ ಸಸ್ಯಗಳಾಗಿ ತಾಯಿಗಿಂತಲೂ ಚಂದಕ್ಕೆ ಬೆಳೆದು ನಿಂತಿದ್ದವು. ಕ್ರಿಪ್ಟಾಂಥಸ್‌ಗಳ ವಿಶಿಷ್ಟತೆಯ ಬಗ್ಗೆ ತಿಳಿದಿದ್ದು ಆಗಲೇ.
ತಮ್ಮ ಜೀವಿತಾವಧಿಯಲ್ಲಿ ಒಂದೇ ಬಾರಿ ಹೂಬಿಟ್ಟು ತಕ್ಷಣ ಸಾಯುವ ಸಸ್ಯಗಳ ಬಗ್ಗೆ ತಿಳಿದೇ ಇರುತ್ತೀರಾ. ಅಂತಹುದೇ ವಿಶೇಷ ಅಲಂಕಾರಿಕ ಸಸ್ಯ ಬ್ರೊಮಿಲಿಯಾಡ್‌ಗಳದ್ದೇ ವಿಧವಾದ ಕ್ರಿಪ್ಟಾಂಥಸ್. ಕೆಲವು ದಿನ, ತಿಂಗಳು, ವರ್ಷ, ಪರಿಸರದ ಒತ್ತಡಕ್ಕೆ ಅನುಗುಣವಾಗಿ ಒಮ್ಮೆ ಹೂಬಿಟ್ಟ ನಂತರ, ತಾಯಿ ಸಸ್ಯ ನಿಧಾನವಾಗಿ ಸಾಯುತ್ತದೆ. ಅದು ತನ್ನೆಲ್ಲಾ ಶಕ್ತಿಯನ್ನು ಬೀಜಗಳು ಮತ್ತು ಮರಿಗಳನ್ನು ಉತ್ಪಾದಿಸಲು ಧಾರೆ ಎರೆಯುತ್ತದೆ. ಒಂದು ಗಿಡ ಹತ್ತಾರಾಗುತ್ತದೆ.
ಇವುಗಳ ಹುಟ್ಟೂರು ಬ್ರೆಜಿಲ್ ದೇಶದ ಮಳೆಕಾಡುಗಳು. ʼಕ್ರಿಪ್ಟೋಸ್ʼ ಎಂದರೆ ಗೌಪ್ಯವಾದದ್ದು, ʼಆಂಥೋಸ್ʼ ಎಂದರೆ ಹೂವು. ಇತರೇ ಬ್ರೊಮಿಲಿಯಾಡ್‌ಗಳಂತೆಯೇ ಹೊಕ್ಕುಳಲ್ಲಿ ಸುಲಭಕ್ಕೆ ಕಾಣದಂತೆ ಗೌಪ್ಯವಾಗಿ ಹೂಬಿಡುವ ಕಾರಣ ʼಕ್ರಿಪ್ಟಾಂಥಸ್ʼ ಎಂದು ಇವುಗಳಿಗೆ ನಾಮಕರಣ ಮಾಡಲಾಗಿದೆ. ತಮ್ಮ ಸ್ಥಳೀಯ ಆವಾಸಸ್ಥಾನದಲ್ಲಿ ಹೆಚ್ಚೆಂದರೆ ಎರಡಂಚಿನಷ್ಟು ಎತ್ತರಕ್ಕೆ ನೆಲದ ಮೇಲೆ ಹಾಸಾಗಿ ಬೆಳೆಯುವ ಕಾರಣ ಇವುಗಳನ್ನು ʼಅರ್ಥ್ ಸ್ಟಾರ್ʼ ಎಂದೂ ಕರೆಯಲಾಗುತ್ತದೆ. ಹೊಕ್ಕುಳಲ್ಲಿ ಸ್ವಲ್ಪ ಮಟ್ಟಿಗೆ ತೇವಾಂಶವನ್ನು ಹಿಡಿದಿಡಬಲ್ಲ ಕ್ರಿಪ್ಟಾಂಥಸ್‌ಗಳು ಕೀಟಗಳು, ಸಣ್ಣ ಕಪ್ಪೆಗಳು ಮತ್ತು ಸೂಕ್ಷ್ಮಜೀವಿಗಳಿಗೆ ಆಶ್ರಯವನ್ನು ಒದಗಿಸುವ ಮೂಲಕ ಸೂಕ್ಷ್ಮ ಪರಿಸರವೊಂದನ್ನು ರಚಿಸುವುದುದು ವಿಶೇಷ ವಿಷಯ.
ಉಷ್ಣ ವಲಯದ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಕ್ರಿಪ್ಟಾಂಥಸ್‌ಗಳು ಹೆಚ್ಚು ಆರ್ದ್ರತೆಯ ಕಡಿಮೆ ಬೆಳಕಿನ ಒಳಾಂಗಣ ಪ್ರದೇಶದಲ್ಲಿ ಸಲೀಸಾಗಿ ಹೊಂದಿಕೊಳ್ಳಬಲ್ಲವು. ಚೆನ್ನಾಗಿ ಬೆಳಕು ಬೀಳುವ ಕಿಟಕಿ ಪಕ್ಕದ ಟೇಬಲ್ ಮೇಲೆ ಗಿಡವನ್ನಿಟ್ಟು ಆಗಾಗ ನೀರುಣಿಸುತ್ತಾ ಇದ್ದರೆ ಸಾಕು, ಮತ್ತೇನೂ ಕಷ್ಟವಿಲ್ಲದೆ ಸುಲಭವಾಗಿ ಇವುಗಳನ್ನು ಬೆಳೆಸಬಹುದು. ಪ್ಲಾಸ್ಟಿಕ್ ಗಿಡವೇನೋ ಅನ್ನಿಸುವಷ್ಟು ಕೃತಕವಾದ ಇವುಗಳ ನೋಟ ಮೋಡಿ ಮಾಡುವಂತದ್ದು. ಒಂದು ಕೊಂಡು ತಂದರೆ ನೀವು ಅಂತದ್ದೇ ಮತ್ತೊಂದಕ್ಕಾಗಿ ಹಂಬಲಿಸುವುದರಲ್ಲಿ ಸಂಶಯವಿಲ್ಲ.
Comments
Post a Comment