ಪಾಲಿಹೌಸ್ ಪುರಾಣ ಭಾಗ 1
ನಮ್ಮದು
ಉತ್ತರಕನ್ನಡದ ಶಿರಸಿ ಸಮೀಪದ ಹಳ್ಳಿ. ಬಹಳ ವರ್ಷಗಳಿಂದ ಕೃಷಿ ಜೊತೆಜೊತೆಗೆ ಕೃಷಿ ಸಂಬಂಧೀ ಉದ್ದಿಮೆಗಳನ್ನು
ನಡೆಸಿಕೊಂಡು ಬರುತ್ತಿದ್ದೇವೆ. ಅದರಲ್ಲೊಂದು ʼಪಾಲಿಹೌಸ್ʼಗಳ ನಿರ್ಮಾಣದ ಕೆಲಸ. ಸರ್ಕಾರದಿಂದ ಮಾನ್ಯತೆ
ಪಡೆದು ಕರ್ನಾಟಕದಾದ್ಯಂತ ಪಾಲಿಹೌಸ್‌ಗಳನ್ನು ನಿರ್ಮಿಸಿದ್ದೇವೆ, ನಿರ್ಮಿಸುತ್ತಲೂ ಇದ್ದೇವೆ. ʼನೀವೇನೋ
ಪಾಲಿಹೌಸ್ ಕಟ್ತೀರಂತೆ, ನಮ್ದೊಂದು ಪಾಲಿಹೌಸ್ ಆಗಬೇಕಿತ್ತುʼ ಎಂದು ಹತ್ತಾರು ಜನ ಕರೆ ಮಾಡುತ್ತಲೇ
ಇರುತ್ತಾರೆ. ಖರ್ಚು ವೆಚ್ಚ ಮಾತಾಡಿದ್ದೇ ʼಓಹ್ ಇದು ನಮಗಲ್ಲ
ಬಿಡಿʼ ಎನ್ನುತ್ತಾ ಅರ್ಧ ಜನ ಕರೆ ಕಡಿತಗೊಳಿಸುತ್ತಾರೆ. ಇನ್ನೊಂದಿಬ್ಬರು “ಜಾಸ್ತಿ ಉದ್ದ ಬೇಡ, ಒಂದ್
ಹತ್ತಡಿ ಸಾಕು; ಒಂದು ಗುಂಟೆ ಅಷ್ಟೇ, ಕಡಿಮೆಗೆ ಮಾಡಿಕೊಡಿ” ಎಂದು ಕೋರಿಕೊಳ್ಳುತ್ತಾರೆ. ಪಾಲಿಹೌಸ್‌ಗೆ
ಇಷ್ಟೇ ಅಗಲ ಇಷ್ಟೇ ಉದ್ದವೆಂಬ ಮಾನದಂಡವಿದೆ, ಇಲ್ಲವಾದಲ್ಲಿ ಅದು ಹೌಸ್ ಆಗಬಹುದೇನೋ, ಪಾಲಿಹೌಸ್
ಅಲ್ಲ ಎಂದಾಗ ನಿರಾಶೆಗೊಳ್ಳುತ್ತಾರೆ. ಇನ್ನೊಂದಿಬ್ಬರು ಸ್ವಲ್ಪ ಜಾಣ್ಮೆ ಉಪಯೋಗಿಸಿ “ನಮಗೆ ನಟ್ ಬೋಲ್ಟ್
ಬೇಡ, ವೆಲ್ಡಿಂಗ್ ಮಾಡಿದ್ರೆ ಸಾಕು” ಎಂದಾಗ, ಈ ತರಹದ ಕಳಪೆ ಗುಣಮಟ್ಟದ ಕಾಮಗಾರಿ ನಾವು ಮಾಡುವುದಿಲ್ಲವೆಂದು
ನಾವೇ ಕರೆ ಕಟ್ ಮಾಡಿರುತ್ತೇವೆ. ಏನೇನೋ ಜುಗಾಡ್ ಮಾಡಿ ಮರದ ಕಂಬ ನಿಲ್ಲಿಸಿ ಪ್ಲಾಸ್ಟಿಕ್ ಶೀಟ್
ಹೊದೆಸಿ ಮನೆ ಕಟ್ಟಿಕೊಂಡವರು ಒಂದೇ ವರ್ಷದ ಮಳೆ-ಗಾಳಿಗೆ ಹರಿದುಕೊಂಡ ಬಿದ್ದ ನಂತರ ರಿಪೇರಿ ಮಾಡಿಕೊಡಿ
ಎಂದು ಕೇಳಿದಾಗ ಪಾಪ ಅನ್ನಿಸುತ್ತದೆ. ನಮ್ಮನೆಯಲ್ಲಿಯೂ ಒಂದು ಪಾಲಿಹೌಸಿದೆ. ಇದರ ಬಗ್ಗೆ ತಿಳಿದಿರುವ
ಸಂಬಂಧಿಕರು ನಾವು ಬೆಳೆದ ಪೇರಲೆ ಕಿತ್ತಳೆ ಮಾವು ಬೇವು ಏನೇ ಕೊಂಡೊಯ್ದು ಕೊಟ್ಟರೂ “ಪಾಲಿಹೌಸ್‌ನಲ್ಲಿ
ಬೆಳೆದದ್ದಾ” ಎಂದು ಕೇಳಿದಾಗ ನಗು ತಡೆದುಕೊಂಡು ಉತ್ತರ ಕೊಡಬೇಕಾದ ಪರಿಸ್ಥಿತಿ ಉಂಟಾಗಿದ್ದಿದೆ. ಜನಸಾಮಾನ್ಯರಲ್ಲಿ
ಪಾಲಿಹೌಸ್‌ನ ಬಗ್ಗೆ ಏನೇನೋ ಕಲ್ಪನೆಗಳಿವೆ. ಕೆಲ ರೈತರು, ಅದರಲ್ಲೂ ರೈತ ಮಹಿಳೆಯರು ತಾವೂ ಒಂದು ಪಾಲಿಹೌಸ್
ಹೊಂದಬೇಕೆಂದು ಹಾತೊರೆಯುತ್ತಿರುತ್ತಾರೆ. “ವರ್ಷದಲ್ಲಿ ಆರು ತಿಂಗಳು ನಮ್ಮ ಕಡೆ ಜೋರು ಮಳೆ, ಹಿತ್ತಲ
ತರಕಾರಿ ಬೆಳೆಯೋದೆ ಕಷ್ಟವಾಗಿದೆ. ಪಾಲಿಹೌಸ್ ಇದ್ದಿದ್ದರೆ ಚನ್ನಾಗಿರುತ್ತಿತ್ತು”, “ಪಾಲಿಹೌಸ್‌ನಲ್ಲಿ
ರೋಗ ಕೀಟದ ಕಾಟ ಇಲ್ವಂತೆ, ಈ ಸಲ ನಾವೂ ಒಂದು ಕಟ್ಟಿಸೋದೆ”, ಎಂದೆಲ್ಲಾ ಆಶೆ ಹೊತ್ತಿರುತ್ತಾರೆ. ಅಂತ
ಎಲ್ಲ ಓದುಗರಿಗೆ ಈ ಲೇಖನ.
ಏನಿದು
ಹಸಿರುಮನೆ?
ಹೆಸರೇ
ಹೇಳುವಂತೆ ʼಹಸಿರುಮನೆʼ ಅಥವಾ ʼಗ್ರೀನ್‌ಹೌಸ್ʼ ಎಂದರೆ ನಿಮ್ಮ ಹಸಿರುಗಳಿಗೊಂದು ಮನೆ. ಮಾನವಾದಿ
ಎಲ್ಲ ಜೀವಿಗಳಂತೆ ಸಸ್ಯಗಳು, ಕೃಷಿ ಬೆಳೆಗಳು ಆರೋಗ್ಯಕರ ಬೆಳವಣಿಗೆ ಹೊಂದಲು ಸ್ಥಿರವಾದ ತಾಪಮಾನ ಆರ್ದ್ರತೆಯ
ವಾತಾವರಣವನ್ನು ಬಯಸುತ್ತವೆ. ಹಠಾತ್ ಮಳೆ,
ಸುಡುವ ಸೆಕೆ, ಬಲವಾಗಿ
ಬೀಸುವ ಗಾಳಿ, ಕೊರೆವ ಚಳಿ, ದಿಢೀರ್ ಹಿಮಪಾತ ಅವುಗಳ ಬೆಳವಣಿಗೆಯನ್ನು ಅಡ್ಡಿಪಡಿಸುತ್ತವೆ. ಇಂತಹ ಪ್ರತಿಕೂಲ
ವಾತಾವರಣದಲ್ಲಿ ಕೃಷಿ ಮಾಡುವಾಗ ಬೆಳೆಯನ್ನು ಸಂರಕ್ಷಿಸಿ ಅವು ಬಯಸುವ ಹಿತಕರ ಸನ್ನಿವೇಶವನ್ನು
ಒದಗಿಸಲು ನಿರ್ಮಿಸಲಾದ ಆಶ್ರಯವೇ ಹಸಿರುಮನೆ.
ಶೀತವಲಯದ
ಹೊರಾಂಗಣದಲ್ಲಿ ಬೆಳೆ ಬೆಳೆಯುವುದು ಕಷ್ಟವಾದಾಗ ಒಳಾಂಗಣವೊಂದನ್ನು ರಚಿಸಿ ಅಲ್ಲಿ ಸೂರ್ಯನ ಬೆಳಕನ್ನು
ಬಂಧಿಯಾಗಿಸಿ ಬೆಚ್ಚನೆಯ ವಾತಾವರಣವನ್ನು ಸೃಷ್ಟಿಸುವ ಮೂಲಕ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವುದು
ಹಸಿರುಮನೆ ಹುಟ್ಟಿಕೊಂಡದ್ದರ ಹಿಂದಿನ ಉದ್ದೇಶ. ಹಾಗಾಗಿಯೇ ಹಸಿರುಮನೆಗಳು ಪಾರದರ್ಶಕ ಛಾವಣಿಗಳನ್ನು
ಹೊಂದಿರುತ್ತವೆ. ಇಂದು ಹಸಿರುಮನೆಯ ವ್ಯವಸ್ಥೆಯ ಅಡಿಯಲ್ಲಿ ಪಾರದರ್ಶಕತೆಯನ್ನು ನಿರ್ವಹಿಸುವ ಮೂಲಕ
ಎಂತಹುದೇ ಕಠಿಣ ಹೊರಾಂಗಣದ ಪರಿಸ್ಥಿತಿಯಲ್ಲಿಯೂ ಒಳಗಿನ ವಾತಾವರಣವನ್ನು ಹೊಂದಿಸಿ ಬೆಳೆ ಬೆಳೆಯುವುದು
ಸಾಧ್ಯವಾಗಿದೆ. ಹಸಿರುಮನೆಯ ಪಾರದರ್ಶಕ ರಚನೆಗಳು ಗಾಜಿನದ್ದಾಗಿದ್ದಲ್ಲಿ ಅದು ʼಗಾಜಿನ ಮನೆʼ ಅಥವಾ
ʼಗ್ಲಾಸ್‌ಹೌಸ್ʼ ಎಂದೂ, ಪ್ಲಾಸ್ಟಿಕ್ ಪಾಲಿಶೀಟ್ ಹೊದೆಸಿದ್ದಲ್ಲಿ ಅದು ʼಪಾಲಿಮನೆʼ ಅಥವಾ ʼಪಾಲಿಹೌಸ್ʼ
ಎಂ̧ದೂ ಸಣ್ಣ ಕಿಂಡಿಗಳ ಜಾಳಿಗೆಯಾಗಿದ್ದಲ್ಲಿ ʼನೆರಳುಮನೆʼ
ಅಥವಾ ́ಶೇಡ್‌ಹೌಸ್ʼ, ʼನೆಟ್‌ಹೌಸ್ʼ
ಎಂದೂ ಕರೆಸಿಕೊಳ್ಳುತ್ತವೆ. ಹಸಿರುಮನೆ ಕೃಷಿಯನ್ನು ʼಸಂರಕ್ಷಿತ ಬೇಸಾಯʼ ಅಥವಾ ʼಪ್ರೊಟೆಕ್ಟೆಡ್ ಕಲ್ಟಿವೇಶನ್ʼ
ಎಂದು ಕರೆಯಲಾಗುತ್ತದೆ.
ಹಸಿರುಮನೆಯ
ಇತಿಹಾಸ
ಸುಮಾರು
ಎರಡು ಸಾವಿರ ವರ್ಷಗಳ ಹಿಂದೆ; ರೋಮನ್ ಸಾಮ್ರಾಜ್ಯದ ಉಗಮದ ಕಾಲ; ರಾಜ ಟೈಬೆರಿಸ್ ಇದ್ದಕ್ಕಿದ್ದಂತೆ
ಅನಾರೋಗ್ಯಕ್ಕೀಡಾದ. ರಾಜನ ಆರೋಗ್ಯ ವೃದ್ಧಿಗೆ ವೈದ್ಯರು ದಿನಕ್ಕೊಂದು ಸೌತೆಕಾಯಿ ತಿನ್ನುವ ಸಲಹೆಯಿತ್ತರು.
ಆದರೇನು, ರೋಮ್‌ನ ಚಳಿಯಲ್ಲಿ ವರ್ಷವಿಡೀ ಮೃದು ಸ್ವಭಾವದ ಸೌತೆಬಳ್ಳಿ ಬೆಳೆಯುವುದು ಕಷ್ಟವಾಯಿತು. ಅದಕ್ಕೆ
ರೋಮನ್ನರು ಚಕ್ಕಡಿಗಾಡಿಯಲ್ಲಿ ಸೌತೆಬಳ್ಳಿಯನ್ನು ಬೆಳೆಸಿ ಹಗಲಲ್ಲಿ ಸೂರ್ಯನ ಬೆಳಕಿಗೆ ತೆರೆದಿಟ್ಟು
ಚಳಿಯ ರಾತ್ರಿಯಲ್ಲಿ ಗೂಡಿಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ರೂಪಿಸಿಕೊಂಡರು. ಎಣ್ಣೆ ಬಳಿದ ಬಟ್ಟೆಯನ್ನು
ಹೊದೆಸಿದ ಅಥವಾ ಸೆಲೆನೈಟ್ ಹರಳಿನಿಂದ ನಿರ್ಮಿತವಾದ ಈ ಪಾರದರ್ಶಕ ಗೂಡುಗಳನ್ನು ಸೌತೆಮನೆ (ಸ್ಪೆಕ್ಯುಲೇರಿಯಾ)
ಎಂದು ಕರೆದರು. ಹೀಗೆ ಹುಟ್ಟಿತು ಹಸಿರುಮನೆಗಳ ಪರಿಕಲ್ಪನೆ.
ಅಲ್ಲಿಂದ ಮುಂದೆ ಹಸಿರುಮನೆಗಳ ವಿನ್ಯಾಸ, ಉದ್ದೇಶ ಬದಲಾಗುತ್ತಾ ಸಾಗಿತು. 17-18ನೇ
ಶತಮಾನದ ಹೊತ್ತಿಗೆ ವಿಶೇಷವಾಗಿ ಶೀತವಲಯದಲ್ಲಿ
ಇವುಗಳ ಬಳಕೆ ಹೆಚ್ಚಿತು. 19ನೇ ಶತಮಾನದ ವಸಾಹತುಶಾಹಿ ಆಡಳಿತದ ಸಮಯ ಇಂಗ್ಲೆಂಡ್‌ನಲ್ಲಿ ಗಾಜಿನಮನೆಗಳು
ಕೃಷಿಗಷ್ಟೇ ಸೀಮಿತವಾಗಿರದೆ ವಿದೇಶೀ ಸಸ್ಯಗಳನ್ನು ಪ್ರದರ್ಶಿಸುವ ಆಕರ್ಷಣೆಯ ಕೇಂದ್ರಬಿಂದುವಾದವು.
20ನೇ ಶತಮಾನದ ತುದಿಯಲ್ಲಿ ಗಾಜಿನ ಬದಲಿಗೆ ಪ್ಲಾಸ್ಟಿಕ್ ಬಳಕೆ ಕಂಡುಕೊಂಡಿದ್ದೇ ಶ್ರೀಮಂತ
ರಾಷ್ಟ್ರಗಳಷ್ಟೇ ಅಲ್ಲದೇ ಅಭಿವೃದ್ಧಿಶೀಲರಾಷ್ಟ್ರಗಳಿಗೂ ಹಸಿರುಮನೆಯ ಪರಿಚಯವಾಯಿತು.
{BOX ITEM: ಇಂಗ್ಲೆಂಡಿನಲ್ಲಿರುವ
ʼಥಾನೆಟ್ ಅರ್ಥ್ ಗಾಜಿನಮನೆʼ ವಿಶ್ವದ ಅತಿ ದೊಡ್ಡ ಹಸಿರುಮನೆಯೆಂಬ ಖ್ಯಾತಿ ಹೊಂದಿದೆ. ಇದರ
ಒಟ್ಟು ವಿಸ್ತೀರ್ಣ 90 ಹೆಕ್ಟೇರ್.
ಸ್ಪೇನ್ ದೇಶದ ಅಲ್ಮೇರಿಯಾದಲ್ಲಿ ವಿಶ್ವದ
ಅತಿದೊಡ್ಡ ಹಸಿರುಮನೆಗಳ ಸಂಕೀರ್ಣವಿದೆ. ನೂರಾರು ಸಂಖ್ಯೆಯಲ್ಲಿ ಒಂದೇ ಸ್ಥಳದಲ್ಲಿ
ಕೇಂದ್ರಿಕೃತವಾದ ಹಸಿರುಮನೆಗಳು ಸುಮಾರು 200 ಸ್ಕ್ವೇರ್ ಕಿಮೀ (49,000 ಎಕರೆ) ವಿಸ್ತೀರ್ಣದಲ್ಲಿ
ವ್ಯಾಪಿಸಿವೆ. ಉಪಗ್ರಹದಿಂದ ಕಂಡಂತೆ ಇದನ್ನು ಪ್ಲಾಸ್ಟಿಕ್‌ನ ಸಮುದ್ರ sea of plastic ಎಂದೇ
ಕರೆಯಲಾಗುತ್ತದೆ. https://en.wikipedia.org/wiki/Greenhouse#/media/File:Plastic_sea,_Almer%C3%ADa_Spain.jpg include the
picture for spaińs sea of plastic}
ಡಿಆರ್‌ಡಿಓ ಮತ್ತು ಐಸಿಏರ್ ಸಂಸ್ಥೆಗಳ
ಜಂಟೀ ಪ್ರಯತ್ನದೊಂದಿಗೆ 1980ರ ದಶಕದಲ್ಲಿ ಭಾರತದ ಮೊತ್ತಮೊದಲ ಪಾಲಿಹೌಸ್ ಅನ್ನು ಲೇಹ್‌ನಲ್ಲಿ ಸ್ಥಾಪಿಸಲಾಯಿತು.
ಇದು ಸಂಶೋಧನಾ ಚಟುವಟಿಕೆಗಳಿಗಷ್ಟೇ ಮೀಸಲಾಗಿತ್ತು. ಇಂಡೋ-ಇಸ್ರೇಲ್ ಯೋಜನೆಯಡಿ 1998-2000ನೇ
ಇಸ್ವಿಯ ನಡುವೆ ಸಂರಕ್ಷಿತ ಕೃಷಿಗೆಂದೇ ಪ್ರತ್ಯೇಕ ತಂತ್ರಜ್ಞಾನ ಕೇಂದ್ರವನ್ನು ದೆಹಲಿಯ ಐಎಆರ್‌ಐನಲ್ಲಿ
ಸ್ಥಾಪಿಸಲಾಯಿತು. ಇಲ್ಲಿಂದ ಮುಂದೆ ಆಧುನಿಕ ಕೃಷಿಯಲ್ಲಿ ಹಸಿರುಮನೆಗಳ ಅವಶ್ಯಕತೆ ಮನಗಂಡು ಸರ್ಕಾರ
ಕೈಗೊಂಡ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ನ್ಯಾಶನಲ್ ಹಾರ್ಟಿಕಲ್ಚರ್ ಮಿಶನ್ (NHM)ನಂತಹ
ಯೋಜನೆಗಳ ಅಡಿಯಲ್ಲಿ ಸಂರಕ್ಷಿತ ಕೃಷಿಯ ಜಾಗೃತಿ
ಮೂಡಿಸುವ ಜೊತೆಗೆ ಆರ್ಥಿಕ ನೆರವು ಸಿಕ್ಕಿದ್ದೇ ಪಾಲಿಹೌಸ್‌ಗಳ ನಿರ್ಮಾಣಕ್ಕೆ ಉತ್ತೇಜನ ದೊರಕಿತು.
ಹಸಿರುಮನೆ
ಕೃಷಿಯ ಕಿರುನೋಟ
ಜಗತ್ತಿನಾದ್ಯಂತ
ಕಷ್ಟಕರ ಹವಾಮಾನ ಅಥವಾ ಸೀಮಿತ ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ದೇಶಗಳು ಹಸಿರುಮನೆ ತಂತ್ರಜ್ಞಾನವನ್ನು
ವ್ಯಾಪಕವಾಗಿ ಅಳವಡಿಸಿಕೊಂಡು ತರಕಾರಿ,
ಹಣ್ಣು, ಹೂವು, ಅಲಂಕಾರಿಕ
ಸಸ್ಯಗಳು ಸೇರಿದಂತೆ ಹಲವಾರು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿವೆ. ಅಭಿವೃದ್ಧಿ ಹೊಂದಿದ
ದೇಶಗಳು ಸ್ವಯಂಚಾಲಿತ ಹಸಿರುಮನೆಗಳ ನಿಯಂತ್ರಿತ
ಪರಿಸರದಲ್ಲಿ ಹೈಡ್ರೋಪೋನಿಕ್ಸ್ ಮತ್ತು ವರ್ಟಿಕಲ್ ಫಾರ್ಮಿಂಗ್ ಸೇರಿದಂತೆ ಆಧುನಿಕ
ತಂತ್ರಜ್ಞಾನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ.
ವಿಶ್ವಾದ್ಯಂತ ಸುಮಾರು ಆರು ಲಕ್ಷ ಹೆಕ್ಟೇರ್
ಪ್ರದೇಶಲ್ಲಿ ಸಂರಕ್ಷಿತ ಬೇಸಾಯ ನಡೆಯುತ್ತಿದೆ. ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಚೀನಾದ ಪಾಲೇ
ಅತಿ ದೊಡ್ಡದು (45%). ಇತರೇ ಉತ್ಪಾದಕ ದೇಶಗಳೆಂದರೆ ಟರ್ಕಿ, ಸ್ಪೇನ್, ದಕ್ಷಿಣ ಕೊರಿಯಾ, ಇಟಲಿ, ಜಪಾನ್, ಮೊರಾಕೊ ಮತ್ತು
ಫ್ರಾನ್ಸ್. ಪ್ರತಿಕೂಲ ಹವಾಮಾನ
ಮತ್ತು ಮಣ್ಣಿನ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಎರಡು ದೇಶಗಳಾದ ನೆದರ್‌ಲ್ಯಾಂಡ್ಸ್ ಮತ್ತು
ಇಸ್ರೇಲ್ ದೇಶದಲ್ಲಿಯೂ ಹಸಿರುಮನೆಯ ವ್ಯಾಪ್ತಿ ಸಾಕಷ್ಟಿದೆ. ಅನೇಕ ಅಭಿವೃದ್ಧಿಶೀಲ
ರಾಷ್ಟ್ರಗಳಿಗೆ, ವಿಶೇಷವಾಗಿ ಭಾರತಕ್ಕೆ ಹಸಿರುಮನೆ ತಂತ್ರಜ್ಞಾನದ ಪ್ರಮುಖ ಪೂರೈಕೆದಾರರೂ ಆಗಿರುವ
ಕಾರಣ ನಮ್ಮ ನಡುವೆ ಇವುಗಳ ಹೆಸರು ಹೆಚ್ಚು ಪ್ರಚಲಿತವಾಗಿದೆ.
ಭಾರತದಲ್ಲಿ ತೋಟಗಾರಿಕಾ ಬೆಳೆಗಳ
ಸಂರಕ್ಷಿತ ಕೃಷಿ ಪ್ರದೇಶ ಸುಮಾರು ಹನ್ನೊಂದುಸಾವಿರ ಹೆಕ್ಟೇರ್‌ಗಳಷ್ಟಿದೆ. ಸಂರಕ್ಷಿತ ಬೇಸಾಯ
ಅಳವಡಿಸಿಕೊಂಡಿರುವ ಪ್ರಮುಖ ರಾಜ್ಯಗಳೆಂದರೆ ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಪಂಜಾಬ್. ಪ್ರಮುಖ
ತೋಟಗಾರಿಕಾ ಬೆಳೆಗಳಲ್ಲಿ ಟೊಮ್ಯಾಟೊ, ಸೌತೆಕಾಯಿ, ಕ್ಯಾಪ್ಸಿಕಂ, ಗುಲಾಬಿ ಮತ್ತು ಜರ್ಬೆರಾಗಳು ಸೇರಿವೆ. ಇತ್ತೀಚಿನ
ವರ್ಷಗಳಲ್ಲಿ ವಿದೇಶೀ(ಎಕ್ಸಾಟಿಕ್) ಬೆಳೆಗಳನ್ನು
ಬೆಳೆಯಲು, ತಾಜಾ ಉತ್ಪನ್ನಗಳನ್ನು ಅಕಾಲಿಕ ಸಮಯದಲ್ಲಿ(ಆಫ್‌ಸೀಸನ್) ಒದಗಿಸಲು, ಆಹಾರ ಬೆಳೆಗಳ
ಸ್ಥಿರವಾದ ಪೂರೈಕೆಗೆ ಹೆಚ್ಚೆಚ್ಚು ಪಾಲಿಮನೆಗಳ ಸ್ಥಾಪನೆಯಾಗಿದೆ. ಗಾಜಿನಮನೆಗಳನ್ನು ಅಲ್ಲಲ್ಲಿ ಉದ್ಯಾನವನ, ಬಾಟನಿಕಲ್
ಗಾರ್ಡನ್‌ಗಳಲ್ಲಿ ಕಾಣಬಹುದಾದರೂ ತುಂಬಾ ದುಬಾರಿಯಾದ ಕಾರಣ ಅವು ಕೃಷಿ ಬಳಕೆಯಲ್ಲಿಲ್ಲ.
ಪಾಲಿಮನೆಯಲ್ಲಿದೆ
ವಿವಿಧ ಮಾದರಿ
ಮೊದಲೇ
ಹೇಳಿದಂತೆ ಪಾಲಿಶೀಟ್ (ಪಾಲಿಥೀನ್ ಅಥವಾ ಪಾಲಿಕಾರ್ಬನೇಟ್) ಹೊದೆಸಿದ ಹಸಿರುಮನೆಗಳನ್ನು ಪಾಲಿಮನೆ
ಎಂದು ಕರೆಯಬಹುದು. ಪಾಲಿಮನೆಯಲ್ಲಿ ಹತ್ತಾರು ಮಾದರಿಯಿದ್ದು ಪ್ರತಿ ಮಾದರಿಯು ನಿರ್ದಿಷ್ಟ ಪರಿಸ್ಥಿತಿಗಳಿಗೆ
ಅನುಗುಣವಾಗಿ ರಚಿತವಾಗಿರುತ್ತದೆ. ಪಾಲಿಮನೆ ಸರಿಯಾಗಿ ಕೆಲಸ ಕೊಡಬೇಕೆಂದರೆ ಅದರ ಹಿಂದಿನ ವಿನ್ಯಾಸ
ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ಪ್ರದೇಶಕ್ಕೆ ತಕ್ಕುದಾದ ಪಾಲಿಮನೆ ನಿರ್ಮಾಣ ಮಾಡಬೇಕಾದರೆ ಗಾಳಿ
ಮಳೆ ಚಳಿ ಮುಂತಾದ ಹೊರಾಂಗಣದ ವಾತಾವರಣ, ಖರ್ಚು ವೆಚ್ಚ ಬಂಡವಾಳ, ಬೆಳೆಯಬೇಕಾಗಿರುವ ಬೆಳೆ ಮುಂತಾದವನ್ನು
ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಗ್ಯಾಲ್ವನೈಜಡ್
ಕಬ್ಬಿಣ (ಜಿ.ಐ) ಅಥವಾ ಮೈಲ್ಡ್ ಸ್ಟೀಲ್(ಎಂ.ಎಸ್) ಅಥವಾ ಅಲ್ಯುಮಿನಿಯಮ್ ಪೈಪ್‌ನ ಚೌಕಟ್ಟು; ಅತಿನೇರಳೆ
ಕಿರಣಗಳಿಗೆ ನಿರೋಧಕವಾದ ʼUV ಸ್ಟೆಬಿಲೈಡ್‌ಜ್ಡ್ʼ ಪಾರದರ್ಶಕ ಪಾಲಿ ಫಿಲ್ಮ್ನ ಹೊದಿಕೆ; ಬಫರ್ ವಲಯ ಹೊಂದಿದ ಡಬಲ್ ಡೋರ್
ವ್ಯವಸ್ಥೆ ಪಾಲಿಮನೆಯ ಕಡ್ಡಾಯ ಅಂಗಗಳು. ಇನ್ನುಳಿದಂತೆ ನೆರಳುಪರದೆ (ಶೇಡ್ ನೆಟ್), ಕೀಟನಿರೋಧಕ
ಪರದೆ (ಇನ್‌ಸೆಕ್ಟ್ ಪ್ರೂಫ್ ನೆಟ್), ತುಂತುರು ಹನಿ ಸಿಂಪಡಣೆಗಾಗಿ ಫಾಗಿಂಗ್/ಮಿಸ್ಟಿಂಗ್
ವ್ಯವಸ್ಥೆಗಳು, ಹೀಟಿಂಗ್ ಕೂಲಿಂಗ್ ವ್ಯವಸ್ಥೆ ಮತ್ತು ಕೃತಕ ಬೆಳಕಿನ ವ್ಯವಸ್ಥೆ ಅಗತ್ಯಕ್ಕೆ
ತಕ್ಕಂತೆ ಹೊಂದಬಹುದಾಗಿವೆ.
ಕರ್ನಾಟಕ
ಸೇರಿದಂತೆ ಭಾರತದ ವಿವಿಧ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ ಪಾಲಿಮನೆಯ ಮಾದರಿ ಎರಡು ತರಹದ್ದು:
೧.
ನೈಸರ್ಗಿಕವಾಗಿ ಗಾಳಿ ಸಂಚರಿಸುವ ʼನ್ಯಾಚುರಲಿ ವೆಂಟಿಲೇಟೆಡ್ʼ ಪಾಲಿಮನೆಗಳು: ಈ ಮಾದರಿಯಲ್ಲಿ ಅಕ್ಕ ಪಕ್ಕದ ಗೋಡೆಗಳನ್ನು ಇನ್‌ಸೆಕ್ಟ್
ಪೂಫ್ ನೆಟ್ ಹೊದೆಸಿರಲಾಗುತ್ತದೆ; ಆ
ಮೂಲಕ ಗಾಳಿಯ ನೈಸರ್ಗಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇವು ಕಡಿಮೆ ಖರ್ಚಿನ
ಮಾದರಿಗಳಾಗಿದ್ದು ವ್ಯಾಪಕವಾಗಿ ಬಳಕೆಯಲ್ಲಿವೆ.
೨.
ಎಕ್ಸಾಸ್ಟ್ ಫ್ಯಾನ್‌ಗಳು,
ಕೂಲಿಂಗ್ ಪ್ಯಾಡ್‌ಗಳು ಮತ್ತು ಕೆಲವೊಮ್ಮೆ ಹೀಟರ್‌ಗಳನ್ನು ಹೊಂದಿದ ಹವಾಗುಣ ನಿಯಂತ್ರಿತ ʼಫ್ಯಾನ್ ಮತ್ತು ಪ್ಯಾಡ್ʼ
ಪಾಲಿಮನೆಗಳು: ಪಾಲಿಶೀಟ್‌ಗಳಿಂದಲೇ ಪೂರ್ತಿ ಮುಚ್ಚಿದ ಈ ಪಾಲಿಮನೆಗಳು ಹೈಟೆಕ್
ಕೃಷಿಗೆ, ಹೆಚ್ಚು
ಮೌಲ್ಯದ ರಫ್ತು ಆಧಾರಿತ ಬೆಳೆಗಳ ಕೃಷಿಗೆ ಬಳಕೆಯಲ್ಲಿವೆ. ತುಸು ದುಬಾರಿಯಾದ ಈ ಪಾಲಿಮನೆಗಳಿಗೆ ನಿರಂತರ
ವಿದ್ಯುತ್ ಮತ್ತು ನಿಯಮಿತ ನಿರ್ವಹಣೆಯ ಅಗತ್ಯವಿರುತ್ತದೆ. ಪುಣೆ ನಾಸಿಕ್ ಮಹಾರಾಷ್ಟ್ರದಲ್ಲಿ
ಇವುಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ.
ಹಸಿರುಮನೆಯ ಪ್ರಯೋಜನಗಳು
·
ಹಸಿರುಮನೆಗಳು ಅಧಿಕ ತಾಪಮಾನ, ಭಾರೀ ಮಳೆ, ಆಲಿಕಲ್ಲು ಮತ್ತು ಬಲವಾದ ಗಾಳಿಯಂತಹ ಪ್ರತಿಕೂಲ ಹವಾಮಾನದಿಂದ ಬೆಳೆಗಳನ್ನು ಸಂರಕ್ಷಿಸುತ್ತವೆ.
ಇದರಿಂದ ಬೆಳೆ ಹಾನಿಯ ಅಪಾಯ ಕಡಿಮೆಯಾಗುತ್ತದೆ.
·
ಹಸಿರುಮನೆಗಳಲ್ಲಿ ಸ್ಥಿರವಾದ ಸೂಕ್ಷ್ಮ ವಾತಾವರಣವೊಂದು
ಸೃಷ್ಟಿಯಾಗುವುದರಿಂದ ಬೆಳೆಯ ಬೆಳವಣಿಗೆ ಮತ್ತು ಅಭಿವೃದ್ಧಿ ಆರೋಗ್ಯಕರವಾಗಿರುತ್ತದೆ. ಅಸಾಧ್ಯವಾದ
ಪ್ರದೇಶಗಳಲ್ಲಿ ಬಗೆಬಗೆಯ ಬೆಳೆಗಳನ್ನು ಉತ್ಪಾದಿಸಲೂ ಇದು ಅನುಕೂಲಕರ.
·
ಹೊರಗಿನ ಹವಾಮಾನ ಸ್ಥಿತಿಗಳನ್ನು ಲೆಕ್ಕಿಸದೆ ಬೆಳೆ ಉತ್ಪಾದನೆ ಸಾಧ್ಯವಾಗುವುದರಿಂದ
ಹಸಿರುಮನೆ ಕೃಷಿಯು ವರ್ಷವಿಡೀ ತಾಜಾ ಉತ್ಪನ್ನಗಳ ಸ್ಥಿರ ಪೂರೈಕೆಯನ್ನು ಖಚಿತಪಡಿಸುತ್ತದೆ, ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ
ಮಾಡುತ್ತದೆ. ಇದರಿಂದ ಬೆಳೆಗಾರರಿಗೂ ಹೆಚ್ಚಿನ ಮಾರುಕಟ್ಟೆ ಬೆಲೆಗಳನ್ನು ಲಾಭ ಮಾಡಿಕೊಳ್ಳಲು
ಸಾಧ್ಯ. ಆಹಾರ ಭದ್ರತೆ ದೃಷ್ಟಿಯಿಂದಲೂ ಇದೊಂದು ಕೊಡುಗೆಯಾಗಿದೆ.
·
ಹಸಿರುಮನೆಯಲ್ಲಿ ಬೆಳೆಗಳ ಮೇಲಿನ ಒತ್ತಡ ಕಡಿಮೆ ಇರುವುದರಿಂದ ಸಾಂಪ್ರದಾಯಿಕ
ಹೊರಾಂಗಣ ಕೃಷಿ ವಿಧಾನಗಳಿಗೆ ಹೋಲಿಸಿದರೆ ಇಳುವರಿಯೂ ಹೆಚ್ಚು.
·
ತೆರೆದ ಮೈದಾನದ ಕೃಷಿಗೆ ಹೋಲಿಸಿದರೆ ಹಸಿರುಮನೆ ಕೃಷಿಯು ಕೀಟ ಮತ್ತು
ರೋಗಗಳ ಒತ್ತಡದ ವಿರುದ್ಧ ತಕ್ಕ ಮಟ್ಟಿಗೆ ರಕ್ಷಣೆ ನೀಡುತ್ತದೆ.
·
ಹಸಿರುಮನೆ ರಚನೆಗಳು ಭೌತಿಕ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುವ ಮೂಲಕ ಕೆಲವು
ಕೀಟಗಳ ಪ್ರವೇಶವನ್ನು ತಡೆಯುತ್ತವೆ ಮತ್ತು ರಾಸಾಯನಿಕ ಕೀಟನಾಶಕಗಳ ಅಗತ್ಯವನ್ನು ಕಡಿಮೆ
ಮಾಡುತ್ತವೆ.
·
ಕೀಟಗಳ ಸಂಖ್ಯೆಯನ್ನು ನಿಗ್ರಹಿಸಲು ಪ್ರಯೋಜನಕಾರಿ ಕೀಟಗಳು ಅಥವಾ
ಸೂಕ್ಷ್ಮಜೀವಿಗಳಂತಹ ಜೈವಿಕ ನಿಯಂತ್ರಕಗಳ ಬಳಕೆಗೆ ಹಸಿರುಮನೆಗಳು ಸೂಕ್ತ ವಾತಾವರಣವನ್ನು
ಒದಗಿಸುತ್ತವೆ. ಈ ವಿಧಾನವು ಕೀಟ ನಿರ್ವಹಣೆಯ ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿ
ವಿಧಾನಗಳನ್ನು ಉತ್ತೇಜಿಸುತ್ತದೆ.
·
ಹಸಿರುಮನೆಯೊಳಗೆ ತೆರೆದ ಮೈದಾನಕ್ಕಿಂತ ಹೆಚ್ಚು ಸುಲಭವಾಗಿ ಮತ್ತು ಕಟ್ಟುನಿಟ್ಟಾದ
ನೈರ್ಮಲ್ಯ ವಿಧಾನಗಳನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗುವ ಕಾರಣ ರೋಗಗಳ ಭಾದೆ ಮತ್ತು ಹರಡುವಿಕೆ
ಕಡಿಮೆ ಇರುತ್ತದೆ.
·
ಅಜೈವಿಕ ಮತ್ತು ಜೈವಿಕ ಒತ್ತಡಗಳಿಂದ ತಕ್ಕ ಮಟ್ಟಿಗೆ ಮುಕ್ತಿ ದೊರೆಯುವ
ಕಾರಣ ಹಸಿರುಮನೆಯಿಂದ ಪಡೆದ ಉತ್ಪನ್ನಗಳು ಉತ್ತಮ ಗುಣಮಟ್ಟ ಹೊಂದಿರುವುದನ್ನು ನಿರೀಕ್ಷಿಸಬಹುದು.
·
ಹಸಿರುಮನೆಯಲ್ಲಿ ಹೈಡ್ರೋಪೋನಿಕ್ಸ್, ಏರೋಪೋನಿಕ್ಸ್ ವರ್ಟಿಕಲ್
ಫಾರ್ಮಿಂಗ್ ರೊಬೊಟಿಕ್ಸ್ ಮುಂತಾದ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಸಾಧ್ಯ.
·
ಸಂರಕ್ಷಿತ ಬೇಸಾಯದಲ್ಲಿ ನಿಖರ ಕೃಷಿ ಸಾಧ್ಯವಾಗಿದ್ದು ನೈಸರ್ಗಿಕ
ಸಂಪನ್ಮೂಲ ಗೊಬ್ಬರ ನೀರು ಒಳಸುರಿಗಳ ಸಮರ್ಪಕ ಬಳಕೆ ಸಾಧ್ಯ.
ಮುಂದಿನ
ಸಂಚಿಕೆಯಲ್ಲಿ ಪಾಲಿಮನೆಗಳಲ್ಲಿ ಬೆಳೆಯಬಹುದಾದ ಬೆಳೆಗಳು, ಪಾಲಿಮನೆ ನಿರ್ಮಾಣಕ್ಕೆ ತಗಲುವ ವೆಚ್ಚ,
ಪಾಲಿಮನೆ ಕೃಷಿಯ ಸವಾಲುಗಳು, ಸ್ಥಳೀಯ ಕೃಷಿಯಲ್ಲಿ ಇದರ ಸುಸಂಭದ್ಧತೆ, ಅವಶ್ಯಕತೆ, ಲಾಭದಾಯಕತೆ ಮುಂತಾದ
ವಿಷಯಗಳ ಬಗ್ಗೆ ಚರ್ಚಿಸೋಣ.
Comments
Post a Comment