ಹುಟ್ಟದ ಬೀಜದ ಬೆನ್ನು ಹತ್ತಿ ಭಾಗ 2
ಸಮೃದ್ಧ
ಕೈತೋಟವೊಂದರ ಯಶಸ್ಸು ಅಡಗಿರುವುದು ಬೀಜದಲ್ಲಿ. ನೀರು ಹಾಕಿ, ಗೊಬ್ಬರ ಕೊಟ್ಟು, ಎಷ್ಟೇ ಆರೈಕೆ ಮಾಡಿದರೂ
ಬೀಜ ಕೈಕೊಟ್ಟರೆ ಕೈತೋಟ ಸೋಲುತ್ತದೆ. ಬೀಜ ಕೆಡುವುದರ ಹಿಂದಿನ ಹಲವಾರು ಕಾರಣಗಳನ್ನು ಹೇಳುತ್ತಾ ಕಳೆದ
ಸಂಚಿಕೆಯಲ್ಲಿ ಪ್ರಮಾಣೀಕೃತ ಬೀಜದ ವರ್ಗೀಕರಣದ ಬಗ್ಗೆ, ಬೀಜದ ಮೊಳಕೆಪ್ರಮಾಣ, ಜೀವಿತಾವಧಿ, ಬಗ್ಗೆ
ಚರ್ಚಿಸಲಾಗಿತ್ತು. ಬೀಜಗಳ ಗುಣಮಟ್ಟವನ್ನು ನಿರ್ಧರಿಸುವ ಇನ್ನಿತರೇ ಅಂಶಗಳಾದ ಬೀಜಗಳ ರಚನೆ, ಬೀಜಗಳಲ್ಲಿರುವ ತೇವಾಂಶ, ಬೀಜಗಳನ್ನು
ಶೇಖರಿಸಿದ ರೀತಿ, ಬೀಜದ ಆರೋಗ್ಯ, ಬೀಜ ಮೊಳಕೆಯೊಡೆಯುಲು ಬೇಕಾದ ಸೂಕ್ತ ವಾತಾವರಣ ಮುಂತಾದ ವಿಷಯಗಳ
ಬಗ್ಗೆ ಈ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.
ಬೀಜಗಳ ಸುಪ್ತಾವಸ್ಥೆ ಮತ್ತು ಮೊಳಕೆಯೊಡೆಯುವಲ್ಲಿ
ಬೀಜದ ರಚನೆಯ ಪಾತ್ರ
ಕಲ್ಲಂಗಡಿ, ಕುಂಬಳ ಬೀಜಗಳಿಗೆ ಮೇಲೊಂದು
ಅಂಗಿ ಇರುವುದನ್ನು ಗಮನಿಸಿರುತ್ತೀರಾ. ಈ ಮೇಲಂಗಿ ಸುಲಿದು ಒಳಗಿನ ಬೀಜಗಳನ್ನು ತಿನ್ನುವುದುಂಟು. ಒಳಗಿನ
ಭ್ರೂಣಕ್ಕೆ ರಕ್ಷಣೆ ಕೊಡುವ ಈ ಬೀಜ ಕವಚ (ಸೀಡ್ ಕೋಟ್) ಮೊಳಕೆಯೊಡೆಯುವಿಕೆ ದೃಷ್ಟಿಯಿಂದ ಬಹಳ ಮುಖ್ಯ.
ಬೀಜ ಕವಚ ದಪ್ಪವಾಗಿದ್ದಲ್ಲಿ ಸಹಜವಾಗಿ ನೀರು ಹೀರಿಕೊಳ್ಳುವಿಕೆ ಕಷ್ಟವಾಗುತ್ತದೆ, ಬೀಜದೊಳಗಿರುವ ಭ್ರೂಣದ
ಉಸಿರಾಟಕ್ಕೂ ಅಡಚಣೆಯಾಗುತ್ತದೆ. ಮೊಳಕೆಯೊಡೆಯುವಿಕೆಯೂ ನಿಧಾನವಾಗುತ್ತದೆ. ಹಾಗಾಗಿ ನಮ್ಮಲ್ಲಿ ಕಲ್ಲಂಗಡಿ
ಕುಂಬಳ ಬೀಜವನ್ನು ಹಿತ್ತಲಲ್ಲಿ ಬಿತ್ತುವ ಮೊದಲು ಒಂದು ರಾತ್ರಿ ಹಾಲಿನಲ್ಲಿ ನೆನೆಹಾಕುವ ರೂಢಿಯಿದೆ.
ನೀರು ಹೀರಿಕೊಳ್ಳುವ ಕ್ರಿಯೆಯನ್ನು ಚುರುಕುಗೊಳಿಸುವುದು ಇದರ ಉದ್ದೇಶ.
ಎಂದಾದರೂ ಹೂದೋಟದಲ್ಲಿ ಕಮಲದ ಬೀಜವನ್ನು
ಬಿತ್ತಿದ್ದೀರಾ? ಬಹಳ ಗಟ್ಟಿಯಾದ ಬೀಜಕವಚ ಹೊಂದಿರುವ ಕಮಲದ ಬೀಜವನ್ನು ಕೆಸರಲ್ಲಿ ಊರುವ ಮುನ್ನ ತಿಕ್ಕಿ
ತೆಳ್ಳಗಾಗಿಸಲಾಗುತ್ತದೆ. ಇದರ ಉದ್ದೇಶವೂ ಮೊಳಕೆಯೊಡೆಯುವುದನ್ನು ಚುರುಕಾಗಿಸುವುದೇ ಆಗಿದೆ. ಈ ದಪ್ಪನೆಯ
ಬೀಜ ಕವಚದಿಂದಾಗಿಯೇ ಕಮಲದ ಬೀಜಗಳು ನೂರಾರು ವರ್ಷಾನುಗಟ್ಟಲೇ ಬದುಕಬಲ್ಲವು. ಆಯುಷ್ಯದ ದೃಷ್ಟಿಯಿಂದ
ದಪ್ಪನೆಯ ಕವಚ ಹೊಂದಿರುವ ಬೀಜ ಹೆಚ್ಚು ಕಾಲ ಬದುಕಬಲ್ಲದು.
ಪ್ರತಿಕೂಲ ವಾತಾವರಣದಲ್ಲಿ ಬೀಜದ
ಮೊಳಕೆಯೊಡೆಯುವಿಕೆಯನ್ನು ಮುಂದೂಡುವಂತೆ ಸಸ್ಯಗಳಿಗೆ ವಿಶೇಷ ವರವಿರುತ್ತದೆ. ಅದೇ ಬೀಜದ ಸುಪ್ತಾವಸ್ಥೆ
ಅಥವಾ ಡಾರ್ಮೆನ್ಸಿ. ಬೀಜದ ಸುಪ್ತಾವಸ್ಥೆಗೆ ಕಾರಣ ಹಲವಾರು. ಮೇಲೆ ಹೇಳಿದಂತೆ ಗಟ್ಟಿಯಾದ ಹೊರಪದರ/
ಬೀಜಕವಚ ಸುಪ್ತಾವಸ್ಥೆ ಉಂಟುಮಾಡಬಲ್ಲದು. ಅಂತಹ ಬೀಜಗಳನ್ನು ಉಜ್ಜುವುದು, ಸ್ಯಾಂಡ್ ಪೇಪರ್‌ನಿಂದ
ತಿಕ್ಕುವುದು, ನೀರಲ್ಲಿ ನೆನಹಾಕುವುದು, ಆಮ್ಲೀಯ ರಸಾಯನದಿಂದ ಉಪಚರಿಸುವುದು, ಹೀಗೆ ಸುಪ್ತಾವಸ್ಥೆ
ಮುರಿಯಲು ಬೀಜೋಪಚಾರ ಮಾಡಲಾಗುತ್ತದೆ. ಕೆಲವೊಮ್ಮೆ ಹಾರ್ಮೋನ್ ವ್ಯತ್ಯಾಸದಿಂದಲೂ ಸುಪ್ತಾವಸ್ಥೆ ಉಂಟಾಗಹುದು,
ಆಗ ಕೃತಕವಾಗಿ ಹಾರ್ಮೋನ್‌ನಿಂದ ಬೀಜವನ್ನು ಉಪಚರಿಸಬೇಕಾಗುತ್ತದೆ. ಉದಾಹರಣೆಗೆ ಬಟಾಟೆ ಗಡ್ಡೆಗಳಲ್ಲಿ
ಸುಪ್ತಾವಸ್ಥೆ ಮುರಿಯಲು ಜಿಬ್ಬರೆಲಿನ್ ಪ್ರಚೋದಕದ ಬಳಕೆಯಿದೆ.
ಕೆಲವೊಮ್ಮೆ ಹೊರಗಿನ ವಾತಾವರಣವೂ
ಬೀಜದ ಸುಪ್ತಾವಸ್ಥೆಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಗೋಧಿ, ಬಾರ್ಲಿ, ಓಟ್ಸ್, ಲೆಟ್ಟ್ಯುಸ್,
ಗಾರ್ಡನ್ ಪೀ (ಬಟಾಣಿ) ಬೀಜಗಳಿಗೆ ಮೊಳಕೆಯೊಡೆಯಲು ತಂಪು ವಾತಾವರಣ ಬೇಕು. ಇವುಗಳಿಗೆ ವಾತಾವರಣದ ತಾಪಮಾನವೇ
ಸುಪ್ತಾವಸ್ಥೆ ಉಂಟುಮಾಡುವ ಅಂಶ. ಇವುಗಳನ್ನು ಬಿರುಬಿಸಿಲಲ್ಲಿ ಬಿತ್ತನೆ ಮಾಡಿದರೆ ಗಿಡವಾಗುವುದೇನು,
ಬೀಜವೇ ಹುಟ್ಟುವುದಿಲ್ಲ. ಆನ್‌ಲೈನ್‌ನಲ್ಲಿ ಆಕರ್ಷಕವಾಗಿ ಕಾಣುವ ಪ್ಯಾನ್ಸಿ, ಕೆಲೆಂಡ್ಯುಲಾ, ಪ್ರೈಮ್‌ರೋಸ್,
ಪೋಪಿ ಮುಂತಾದ ಹೂಗಿಡಗಳ ಬೀಜಗಳಿಗೂ ಮೊಳಕೆಯೊಡೆಯಲು ವಾತಾವರಣ ತಂಪಿರಬೇಕು.
ಹೀಗೆ ಪ್ರತಿ ಬೆಳೆಯಲ್ಲಿ, ಪ್ರತಿ
ಬೀಜದಲ್ಲಿ ತಮ್ಮ ಉಳಿಯುವಿಕೆಯ ಸಂಭಾವ್ಯತೆಯನ್ನು ಹೆಚ್ಚು ಮಾಡುವ ಡೊರ್ಮೆನ್ಸಿಯಂತ ಹಲವಾರು ರೀತಿಯ
ಮಾರ್ಪಾಡುಗಳನ್ನು ಜಾಣ ಸಸ್ಯಗಳು ಅಳವಡಿಸಿಕೊಂಡಿವೆ. ನೀವು ತೋಟಕ್ಕೆ ಬಳಸುವ ಬೀಜಗಳ ಬಗ್ಗೆ ಇಂತಹ ಮಾಹಿತಿಯೂ
ಅಗತ್ಯವಾಗಬಹುದು.
ಆರ್ಥೋಡಕ್ಸ್ ರಿಕ್ಯಾಲ್ಸಿಟ್ರಂಟ್
ಬೀಜಗಳು ಮತ್ತು ಬೀಜಗಳ ತೇವಾಂಶ
ಈ ವರ್ಷ ಬೆಳೆದ ಟೊಮ್ಯಾಟೋ ಬೀಜವನ್ನು ಸಂಗ್ರಹಿಸಿ ಒಣಗಿಸಿ ಮುಂದಿನ
ಬೆಳೆಗಾಗಿ ಬಳಸುತ್ತೀರಿ; ಈ ವರ್ಷದ ಮಾವಿನ ಗೊರಟೆಯನ್ನು ಮುಂದಿನ ವರ್ಷಕ್ಕೆ ಬಳಸುತ್ತೀರಾ?
ಇಲ್ಲವಲ್ಲ. ಇವುಗಳನ್ನೇ ಕ್ರಮವಾಗಿ ಆರ್ಥೋಡಕ್ಸ್ ಮತ್ತು ರಿಕ್ಯಾಲ್ಸಿಟ್ರಂಟ್ ಬೀಜಗಳು
ಎನ್ನುವುದು. ಕೆಲವು ಬೀಜಗಳನ್ನು ಒಣಗಿಸಿ ಹೆಚ್ಚು ಕಾಲದ ವರೆಗೆ ಶೇಖರಿಸಬಹುದು. ಸರಿಯಾದ
ವಾತಾವರಣದಲ್ಲಾದರೆ ನೂರಾರು ವರ್ಷಗಳ ವರೆಗೂ ಹೆಪ್ಪುಗಟ್ಟುವ ಹಿಮದಲ್ಲಿ ಶತಮಾನಗಳ ಕಾಲವೂ ಇವು
ಜೀವಂತವಿರಬಲ್ಲವು. ಇವೇ ಆರ್ಥೋಡಕ್ಸ್ ಬೀಜಗಳು. ಕ್ಷೇತ್ರ ಬೆಳೆಗಳು, ತರಕಾರಿ ಬೆಳೆಗಳು
ಹೆಚ್ಚಿನವು ಈ ಪ್ರಕಾರಕ್ಕೇ ಸೇರಿವೆ. ಮಾವು, ಕೋಕೋ, ರಬ್ಬರ್, ಬೆಣ್ಣೆಹಣ್ಣು, ಹಲಸು ಹೀಗೆ ಕೆಲ
ಬೆಳೆಗಳ ಬೀಜಗಳನ್ನು ಒಣಗಿಸಿ ಸಂಗ್ರಹಿಸಲು ಸಾಧ್ಯವಿಲ್ಲ. ಇವು ರಿಕ್ಯಾಲ್ಸಿಟ್ರಂಟ್ ಬೀಜಗಳು.
ಒಣಗಿಸಿದರೆ ಇವುಗಳ ಜೀವ ಮರುಕಳಿಸದು.
ಬೀಜದ ತೇವಾಂಶ ಅದರ ಸಂಗ್ರಹಣಾವಧಿ
ಅಥವಾ ತಾಳಿಕೆಯ ಅವಧಿಯ (ಶೆಲ್ಫ್ ಲೈಫ್) ಮೇಲೆ ಘಾಡವಾದ ಪರಿಣಾಮ ಬೀರುತ್ತದೆ. ಬೀಜದ ತೇವಾಂಶ ಪ್ರಶಸ್ತವಾಗಿದ್ದಲ್ಲಿ
ಅದರ ಆಯುಷ್ಯವೂ ಹೆಚ್ಚು, ಮೊಳಕೆ ಪ್ರಮಾಣ, ಗುಣಮಟ್ಟವೂ ಉತ್ತಮವಾಗಿರುತ್ತದೆ. ಪ್ರಮಾಣೀಕೃತವಾದರೆ ಆರ್ಥೋಡಾಕ್ಸ್
ಬೀಜ ಪ್ರಕಾರಗಳಲ್ಲಿ 8-12% ತೇವಾಂಶ ಇರುವಂತೆ ಕಾಳಜಿ ವಹಿಸಲಾಗುತ್ತದೆ. ಆದರೆ ಒಮ್ಮೆ ಪ್ಯಾಕೇಟ್
ಒಡೆದ ನಂತರ ಇವುಗಳನ್ನು ಸರಿಯಾಗಿ ಗಾಳಿಯಾಡದಂತೆ ಮುಚ್ಚಿಡದಿದ್ದರೆ ಗಾಳಿಯಲ್ಲಿನ ತೇವಾಂಶವನ್ನು
ಅವು ಹೀರಿಕೊಂಡು ಗುಣಮಟ್ಟ ಕುಸಿಯುತ್ತದೆ. ನೀವೇ ಸ್ವತಃ ಬೀಜವನ್ನು ಸಂಗ್ರಹಿಸುವುದಾದಲ್ಲಿ
ಸೂರ್ಯನ ಬೆಳಕಲ್ಲಿ ಒಂದೆರಡು ದಿನ ಚೆನ್ನಾಗಿ ಬೀಜಗಳು ಮುಟ್ಟಿದರೆ ಟಕ್ಕನೆ ಮುರಿಯುವಷ್ಟು
ಗರಿಗರಿಯಾಗಿ ಒಣಗಿಸುವುದು ಒಳ್ಳೆಯದು.
ಆರ್ಥೋಡಕ್ಸ್ ಬೀಜಗಳ ಶೇಖರಣೆ
ಬೀಜದ ಗುಣಮಟ್ಟದ ಬಗ್ಗೆ ಇಷ್ಟೆಲ್ಲಾ
ಮಾಹಿತಿ ನಿಮ್ಮಲ್ಲಿದೆ. ನಂಬಲರ್ಹ ಮೂಲದಿಂದ ಪ್ರಮಾಣೀಕೃತವಾದ ಪ್ಯಾಕೆಟ್ ಬೀಜವನ್ನೇ ಕೊಂಡಿದ್ಧೀರಿ.
ಒಮ್ಮೆಯೇನೋ ಬಿತ್ತನೆ ಮಾಡಿ ಗೆಲುವಾಯಿತು. ಹಿಂದಿನ ಬಾರಿ ಚನ್ನಾಗಿಯೇ ಮೊಳಕೆಯೊಡೆದಿದ್ದ ಬೀಜಕ್ಕೆ
ಈ ಸಲ ಏನಾಯಿತೋ ಹುಟ್ಟಲೇ ಇಲ್ಲ. ಅದಕ್ಕೇ; ಬೀಜ ಕೊಳ್ಳುವಾಗಿನ ಹುಷಾರಿತನ ಬೀಜ ಶೇಖರಿಸುವಲ್ಲಿಯೂ ತೋರುವುದು
ಮುಖ್ಯವಾಗುತ್ತದೆ. ಎಷ್ಟೇ ನಂಬಲಾರ್ಹ ಮೂಲಗಳಿಂದ ಬೀಜ ಖರೀದಿಸಿದ್ದರೂ ಕೊನೆಯಲ್ಲಿ ಆ ಬೀಜ ಶೇಖರಿಸುವಾಗ
ಸರಿಯಾದ ವಾತಾವರಣದಲ್ಲಿ ಇಡದ್ದಿದ್ದಲ್ಲಿ ಬೀಜದ ಗುಣಮಟ್ಟ ಗಣನೀಯವಾಗಿ ಕುಸಿಯುತ್ತದೆ.
ಬೀಜಗಳನ್ನು ಸಂಗ್ರಹಿಸಿದ ಜಾಗದಲ್ಲಿ
ತಾಪಮಾನ ಹೆಚ್ಚಾದಲ್ಲಿ ಬೀಜಗಳ ಉಸಿರಾಟ ಹೆಚ್ಚುತ್ತದೆ, ಬೀಜದ ಪೋಷಣೆಗೆಂದು ಸಂಗ್ರಹಿಸಿಟ್ಟಿದ್ದ ಆಹಾರ
ಜೀರ್ಣವಾಗುತ್ತದೆ. ಸಹಜವಾಗಿ ಬೀಜದ ಆಯುಷ್ಯ ಕಮ್ಮಿಯಾಗುತ್ತದೆ.
ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿದರೆ ಬೀಜ ಹೆಚ್ಚು ತೇವಾಂಶವನ್ನು ಹೀರಿಕೊಳ್ಳುತ್ತದೆ. ಬೀಜದ ಜೀವಿತಾವಧಿ
ಕುಸಿಯುತ್ತದೆ. ಆರ್ದ್ರ ವಾತಾವರಣದಲ್ಲಿ ರೋಗ ಕೀಟಗಳ ಹಾವಳಿಯೂ ಹೆಚ್ಚು. ಹಾಗಾಗಿ ಬೀಜಗಳನ್ನು ಹೆಚ್ಚು
ಕಾಲ ಜೀವಂತವಿಡಲು ಗಾಳಿಯಾಡದ ತಂಪು ಒಣ ಹವೆ ಅಗತ್ಯ. ನೇರವಾಗಿ ಬೆಳಕು ತಾಕದ ಕತ್ತಲೆಯ ಹವಾನಿಯಂತ್ರಿತ
ವಾತಾವರಣದ ಜಾಗದಲ್ಲಿರಿಸಿದರೆ ಬೀಜಗಳು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ನಿಮ್ಮ ಮನೆಯ ಫ್ರಿಡ್ಜ್
ಬೀಜ ಸಂಗ್ರಹಣೆಗೆ ಹೇಳಿ ಮಾಡಿಸಿದ ಜಾಗ.
ಬೀಜಗಳನ್ನು ಚಿಕ್ಕ ಪ್ಲಾಸ್ಟಿಕ್
ಕೊಟ್ಟೆಯಲ್ಲಿ ಅಥವಾ ಪೇಪರ್ ಕೊಟ್ಟೆಯಲ್ಲಿ ಕಟ್ಟಿ ಡಬ್ಬಿಯಲ್ಲಿ ಹಾಕಿಡುವುದು ಎಲ್ಲರ ರೂಢಿ. ಏರ್‌ಟೈಟ್
ಕಂಟೇನರ್, ಜಿಪ್ಪರ ಬ್ಯಾಗ್‌ಗಳಾದರೆ ಇನ್ನೂ ಒಳ್ಳೆಯದು. ಸೂಕ್ತ ಪರಿಸ್ಥಿತಿಗಳಲ್ಲಿಯೂ ಸಹ ಬೀಜಗಳು
ಕಾಲಾನಂತರದಲ್ಲಿ ಕ್ರಮೇಣ ಚೈತನ್ಯವನ್ನು ಕಳೆದುಕೊಳ್ಳುತ್ತವೆ. ನಮ್ಮ ಮನೆಮಟ್ಟದಲ್ಲಿ ಶೇಖರಿಸಿದ ಬೀಜಗಳು
ಅಂತೂ ಇಂತೂ ಒಂದು ವರ್ಷ ಚೆನ್ನಾಗಿರಬಹುದು. ಅದಾದ ನಂತರ ಅವುಗಳ ಮೊಳಕೆ ಪ್ರಮಾಣ ಕಡಿಮೆಯಾಗುತ್ತದೆ.
ರೋಗ, ಕೀಟ ಮತ್ತು ಬೀಜದ ಆರೋಗ್ಯ
ಬೀಜವನ್ನು ಸರಿಯಾಗಿ ಶೇಖರಣೇ ಮಾಡದೇ
ಇದ್ದಲ್ಲಿ ಕಾಡುವ ಇನ್ನೊಂದು ಸಮಸ್ಯೆ ರೋಗ ಕೀಟಗಳದ್ದು. ದಿನಸಿ ಬೇಳೆ ಕಾಳುಗಳಂತೆಯೇ ಬೀಜಗಳಿಗೂ ಕೀಟ
ರೋಗಗಳು ಕಾಡುತ್ತವೆ. ಬೀಜ ಸರಿಯಾಗಿ ಒಣಗದೆ ಹಸಿಯಾಗಿದ್ದರೆ ಬ್ರೆಡ್ ಮೇಲೆ ಬೆಳೆಯುವಂತೆ ಬೂಸ್ಟ್
ಹಿಡಿಯಬಹುದು. ಬೀಜಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇದ್ದಲ್ಲಿ ಸಣ್ಣ ಕಣ್ಣಿಗೂ ಕಾಣದ ಹುಳಗಳು ಸೇರಿಕೊಂಡು
ಬೀಜವನ್ನು ಒಳಗಿಂದಲೇ ತಿಂದು ಹಾಳುಗೆಡುವಬಲ್ಲವು.
ಮೇಲ್ನೋಟಕ್ಕೆ ಬೀಜಗಳು ಆರೋಗ್ಯಕರವಾಗಿರುವಂತೆ
ಕಂಡರೂ ಕೆಲ ರೋಗಗಳ ಸೋಂಕು ಬೀಜದೊಳಗೆ ಸುಪ್ತವಾಗಿರುತ್ತವೆ. ಬೂದಿ ರೋಗ ಮತ್ತು ಕೊಳೆರೋಗ ಉಂಟುಮಾಡುವ ಶಿಲೀಂಧ್ರಗಳು; ಸೋರಗು ರೋಗ ಮತ್ತು ಎಲೆ
ಚುಕ್ಕಿ ರೋಗಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು; ಕಟ್ಟೆರೋಗ ಉಂಟುಮಾಡುವ ವೈರಸ್ ರೋಗಾಣುಗಳು
ಬೀಜದಿಂದ
ಹುಟ್ಟುವಂತವು. ರೋಗಕ್ಕೆ ತುತ್ತಾದ
ತಾಯಿ ಗಿಡದಿಂದ ಆರಿಸಿದ ಬೀಜಗಳಲ್ಲೇ ಈ ರೋಗಗಳು
ಅಡಗಿರುತ್ತವೆ. ಬೀಜದ ಮೊಳಕೆಯ ಜೊತೆಯೇ ಅಭಿವೃದ್ಧಿಯಾಗಿ ಸಸಿಯನ್ನು ಸೋಂಕಿಗೆ ಒಳಪಡಿಸುತ್ತವೆ. ಕೆಲವೊಮ್ಮೆ
ನೀವು ಸಂಗ್ರಹಿಸಿದ ಬೀಜದ ಇಟ್ಟಲ್ಲಿಯೇ ಹಿಟ್ಟಾಗಿರುವುದನ್ನು, ಇದರ ಹಿಂದಿನ ಕಾರಣ ಬೀಜವನ್ನು ತಿನ್ನುವ
ಕಣ್ಣಿಗೂ ಕಾಣದಷ್ಟು ಸಣ್ಣ ಓಡುಹುಳಗಳು ಪತಂಗಗಳು ಇತ್ಯಾದಿ ಕೀಟಗಳು. ಮಣ್ಣಿನಲ್ಲಿರುವ ರೋಗಕಾರಕಗಳು
ಬಿತ್ತನೆ ಮಾಡಿದ ಕೂಡಲೇ ಬೀಜಗಳಿಗೆ ಸೋಂಕು ತಗುಲಿಸಬಹುದು. ಪೈಥಿಯಂ, ರೈಜೋಕ್ಟೋನಿಯಾ ಫ್ಯುಸಾರಿಯಮ್ ಶಿಲೀಂಧ್ರಗಳು ಆಗಷ್ಟೆ
ಮೊಳಕೆಯೊಡೆದ ಬೀಜವನ್ನು ಕೊಳೆಯುವಂತೆ ಮಾಡುತ್ತವೆ. ಬಿತ್ತ ಬೀಜವನ್ನು ಇರುವೆಗಳು
ಹೊತ್ತು ಒಯ್ಯಬಲ್ಲವು. ಇಲಿ-ಹೆಗ್ಗಣಗಳು ಅಗೆದು ಹಾಳುಮಾಡಬಲ್ಲವು.
ಹಾಗಾಗಿ ಬೀಜಗಳನ್ನು
ಶೇಖರಣೆಗೂ ಮೊದಲು ಕೈತೋಟದಲ್ಲಿ ಬಿತ್ತುವ ಮೊದಲು ಪೀಡೆನಾಶಕದಿಂದ ಉಪಚರಿಬೇಕಾಗುತ್ತದೆ. ಶೇಖರಣೆ
ಮಾಡುವಾಗ ಬೂದಿ, ಕಹಿಬೇವಿನ ಸೊಪ್ಪು, ಅರಿಶಿಣದಂತ ಸಾವಯವ ವಸ್ತುಗಳಿಂದ ಉಪಚರಿಸಹುದು. ಟ್ರೈಕೋಡರ್ಮಾ, ಸುಡೋಮೋನಾಸ್ ಜೈವಿಕಪೇಡೆನಾಶಕಗಳನ್ನು ಬಳಸಬಹುದು. ಥೈರಾಮ್,
ಕಾರ್ಬೆಂಡೇಜಿಯಮ್‌ನಂತಹ ರಾಸಾಯನಿಕ ಶಿಲೀಂಧ್ರನಾಶಕಗಳನ್ನೂ ಶಿಫಾರಿತ
ಪ್ರಮಾಣದಲ್ಲಿ ಬಳಸಬಹುದು. ಪ್ರಮಾಣೀಕೃತ ಬೀಜಗಳು ಅದಾಗಲೇ
ಪೀಡೆನಾಶಕಗಳಿಂದ ಉಪಚರಿಸಲ್ಪಟ್ಟಿರುತ್ತವೆ.
ಬೀಜ ಮೊಳಕೆಯೊಡೆಯುವಾಗಿನ ವಾತಾವರಣ
ಕೃಷಿ
ಸಂಶೋಧನಾ ಕೇಂದ್ರಗಳಿರಲಿ, ಖಾಸಗಿ ಬೀಜ ಕಂಪನಿಗಳಿರಲಿ, ಬೀಜ ಉತ್ಪಾದನೆ ಮಾಡಿ ಪೂರೈಸುವಾಗ
ತಳಿಯನ್ನು ಹೆಸರಿಸುತ್ತಾರೆ. ಇಂತಹ ತಳಿ ಇಂತಹ ಪ್ರದೇಶದಲ್ಲಿ ಬೆಳೆಯಲು ಸೂಕ್ತ ಎಂದೂ ಸ್ಪಷ್ಟವಾಗಿ
ಹೇಳಿರುತ್ತಾರೆ. ಹಿಮಾಚಲದಲ್ಲಿ ಅಭಿವೃದ್ಧಿ ಪಡಿಸಿದ ತಳಿ ಕರ್ನಾಟಕದಲ್ಲಿ ಹುಟ್ಟಲಾರದೆಂದಲ್ಲ.
ಆದರೆ ನಮ್ಮಲ್ಲಿ ವಾತಾವರಣಕ್ಕೆ ಅದು ಒಗ್ಗಿಕೊಂಡು ನಿರೀಕ್ಷೆಗೆ ತಕ್ಕಂತೆ ಮೊಳಕೆಯೊಡೆಯುವುದು
ಖಾತ್ರಿಯಿರುವುದಿಲ್ಲ. ಪ್ರತಿಕೂಲ ಹವಾಮಾನ
ಮೊಳಕೆಯೊಡೆಯುವುದನ್ನು ವಿಳಂಬಗೊಳಿಸುತ್ತವೆ ಅಥವಾ ತಡೆಯುತ್ತವೆ.
ಹಾಗಾಗಿ ನೀವು ಬೀಜ ಕೊಳ್ಳುವಾಗ, ವಿಶೇಷವಾಗಿ ಅಂತರ್ಜಾಲ
ಮಾಧ್ಯಮದಲ್ಲಿ, ವಿದೇಶೀ ಸಂಬಂಧಿಕರಿಂದ ತರಿಸುವುದಾದಲ್ಲಿ ಅದರ ವಾತಾವರಣದ ಅವಶ್ಯಕತೆಗಳ ಬಗ್ಗೆಯೂ
ಅರಿವಿರಬೇಕು. ಶೀತ ವಲಯದ ತರಕಾರಿಗಳು ಉಷ್ಣ ವಲಯಕ್ಕೆ ಹೊಂದಿಕೊಳ್ಳಬಲ್ಲವೇ. ಉಷ್ಣ ವಲಯಕ್ಕೆಂದೇ ಅಭಿವೃದ್ಧಿ
ಪಡಿಸಿದ ನಿರ್ದಿಷ್ಟ ತಳಿಯಿದೆಯೇ ಎಂಬ ಅರಿವಿರಬೇಕು.
ಸ್ಥಳೀಯ
ವಾತಾವರಣಕ್ಕೆ ಅನುಗುಣವಾಗಿ ನಮ್ಮ ದೇಶದಲ್ಲಿ ಉಷ್ಣ, ಶೀತ, ಸಮಶಿತೋಷ್ಣ ಹೀಗೆ ವಿವಿಧ ಹವಾಮಾನ
ವಲಯಗಳನ್ನು ಗುರುತಿಸಬಹುದು. ಆಯಾ ವಾತಾವರಣಕ್ಕೆ ಅನುಸಾರವಾಗಿ ಮಣ್ಣಿನ ತಾಪಮಾನವೂ ಹೆಚ್ಚು
ಕಮ್ಮಿಯಾಗುತ್ತದೆ. ಬೀಜ ಹುಟ್ಟದಿದ್ದಾಗ
ವಾತಾವರಣದ ತಾಪಮಾನ, ಆರ್ದ್ರತೆ, ಮಣ್ಣಿನ ತಾಪಮಾನ ತೇವಾಂಶದ ಬಗ್ಗೆಯೂ ಲಕ್ಷ್ಯಕೊಡಬೇಕಾಗುತ್ತದೆ. ಲೆಟ್ಟ್ಯುಸ್, ಅಸೆಲೆರಿ, ಪಾರ್ಸ್ಲೆಯಂತಹ ಕೆಲವು ತರಕಾರಿಗಳಿಗೆ
ಮೊಳಕೆಯೊಡೆಯಲು ತಂಪಾದ ನೆಲ ಬೇಕೇ ಬೇಕು. ಅಂತಹ ಶೀತ ವಲಯದ ಬೆಳೆಗಳನ್ನು ನಮ್ಮ ಮಣ್ಣಿನಲ್ಲಿ
ಬೆಳೆಯುವುದು ಕಷ್ಟಸಾಧ್ಯವಾಗಬಹುದು. ಬೆಳೆಯಲೇ ಬೇಕೆಂದಾಗ ಉಷ್ಣವಲಯಕ್ಕೆ ತಕ್ಕುದಾದ ತಳಿಗಳನ್ನು
ಆಯ್ಕೆ ಮಾಡಿಕೊಳ್ಳಬೇಕಾಗಬಹುದು. ಅಥವಾ ಬೇಸಿಗೆ, ಮಳೆ, ಚಳಿಗಾಲಕ್ಕೆ ಹೊಂದುವಂತೆ ಕಾಳಕ್ಕೆ
ತಕ್ಕಂತೆ ಬಿತ್ತನೆ ಮಾಡಬೇಕಾಗಬಹುದು. ಉದಾಹರಣೆ ಮೂಲತಃ ತಂಪು ಪ್ರದೇಶದ ಬೆಳೆಗಳಾದ ಬಟಾಣಿ,
ಹೂಕೋಸು, ಎಲೆಕೋಸಿನ ಬಿತ್ತನೆಯನ್ನು ಚಳಿಗಾಲಕ್ಕೆ ಮಾಡಿದರೆ ಒಳಿತು. ಸೌತೆ, ಕುಂಬಳ, ಹೀರೆ,
ಸೋರೆಗಳು ಮಳೆಗಾಲಕ್ಕೆ ಹೆಚ್ಚು ಸೂಕ್ತ.
ಬೀಜ
ಬಿತ್ತುವಾಗ ಮಣ್ಣಿನ ತೇವಾಂಶವೂ ಮುಖ್ಯವಾಗುತ್ತದೆ. ತೀರಾ ಒಣ ಮಣ್ಣಾದರೆ ಬೀಜ ನೀರು
ಹೀರಿಕೊಳ್ಳದೆ ಮೊಳಕೆಯೊಡೆಯದು. ತೀರಾ ಹಸಿಯಾದ ಮಣ್ಣಾದರೆ ಬೀಜ ಗಾಳಿಯ ಚಲನೆಯಿಲ್ಲದೇ ಉಸಿರುಗಟ್ಟಿ
ಸಾಯಬಹುದು. ತೀರಾ ಹಸಿ ಮಣ್ಣಿನಲ್ಲಿ ಬೀಜ ಕೊಳೆತು ಹೋಗಬಹುದು. ಬೀಜ ಆರೋಗ್ಯಕರವಾಗಿ ಮೊಳಕೆಯೊಡೆದು
ಗಿಡವಾಗಲು ಹದವಾಗಿ ನೀರುಣಿಸಿದ, ನೀರು ನಿಲ್ಲದೆ ಬಸಿಯುವ ಮಣ್ಣು ಉತ್ತಮ.
ಬೀಜ ಬಿತ್ತುವ ಕ್ರಮ
ಮನೆ
ಬಳಕೆಗೆ ತರಕಾರಿ ಬೆಳೆಯುವಾಗ ಹಿತ್ತಲಲ್ಲಿ ಓಳಿಗಳನ್ನು ಮಾಡಿ, ಅಥವಾ ಮಡಿಗಳನ್ನು ಮಾಡಿ ಬೀಜ
ಬಿತ್ತುವುದು ಎಲ್ಲರ ಅಭ್ಯಾಸ. ಜಾಗವಿಲ್ಲದವರು ಹೂಕುಂಡದಲ್ಲೂ ಬೀಜ ಹಾಕುವುದಿದೆ. ನೆಲವಿರಲಿ,
ಹೂಕುಂಡವಿರಲಿ, ಬಿತ್ತನೆ ತಂತ್ರಗಳು ಸರಿಯಾಗಿದ್ದಲ್ಲಿ
ಮೊಳಕೆಯೊಡೆಯುವಿಕೆಯೂ ಉತ್ತಮವಾಗಿರುತ್ತದೆ.
ಬೀಜದ
ಗಾತ್ರದ ಮೂರು ಪಟ್ಟು ಆಳಕ್ಕೆ ಬೀಜವನ್ನು ಊರಬೇಕೆಂಬುದು ರೂಢಿಗತ ನಿಯಮ. ಸಾಮಾನ್ಯವಾಗಿ ಸೊಪ್ಪು ತರಕಾರಿ ಬೀಜಗಳನ್ನು ಹಾಗೆಯೇ
ಬೀರಲಾಗುತ್ತದೆ. ಅಥವಾ ಕಡ್ಡಿಯಲ್ಲಿ ಸಣ್ಣಗೀರುಮಾಡಿ ಮೇಲಿಂದ ಮೇಲೆ ಬಿತ್ತಲಾಗುತ್ತದೆ. ಬೀನ್ಸ್
ಬೀಜಗಳನ್ನು ಮಣ್ಣಿನಲ್ಲಿ ತುಸು ಆಳಕ್ಕೆ ಊರಲಾಗುತ್ತದೆ. ಟೊಮ್ಯಾಟೋ ಬದನೆಗಳನ್ನು ಸಸಿಮಡಿಯಲ್ಲಿ
ತಯಾರಿಸಿ ನಂತರ ಕಿತ್ತು ಸೂಕ್ತ ಅಂತರದಲ್ಲಿ ನಾಟಿಮಾಡಲಾಗುತ್ತದೆ. ಬೀಜವನ್ನು ತುಂಬಾ ಆಳಕ್ಕೆ
ಬಿತ್ತನೆ ಮಾಡಿದರೆ ಬೀಜದಲ್ಲಿನ ಆಹಾರ ಕೊರತೆಯಾಗಿ ಸಸಿ ಹೊರಬರಲಾರದೆ ಸಾಯಬಹುದು; ತುಂಬಾ ಆಳಕ್ಕೆ ಗಾಳಿಯಾಡದೆ
ಉಸಿರುಗಟ್ಟಿಯೂ ಸಾಯಬಹುದು. ತೀರಾ ಮೇಲ್ಮೇಲಕ್ಕೆ ಬೀಜ ಬಿತ್ತನೆ ಮಾಡುವುದರಿಂದ ಬೀಜದ ಮೊಳಕೆ
ಸೂರ್ಯ ಶಾಖಕ್ಕೆ ಒಣಗಿ ಸಾಯಬಹುದು. ಹೀಗೆ ಬೀಜ ಬಿತ್ತುವಾಗ ಆಳ ಮತ್ತು ಸಸಿಗಳ ನಡುವಿನ ಅಂತರ
ಮೊಳಕೆಯ ಯಶಸ್ಸಿಗೆ ನಿರ್ಣಾಯಕವಾಗಿದೆ.
ಬೀಜ
ಬಿತ್ತಲೆಂದು ತಯಾರಿಸಿದ ಮಣ್ಣು ಸಡಿಲವಾಗಿರಬೇಕು, ದೊಡ್ಡ ಕಲ್ಲು-ಮಣ್ಣುಹೆಂಟೆಗಳಿಂದ ಮುಕ್ತವಾಗಿರಬೇಕು, ನೀರು ಬಸಿದು ಹೋಗುವಂತಿರಬೇಕು.
ಇದರಿಂದ ಗಾಳಿಯಾಡುವಿಕೆ ಹೆಚ್ಚುತ್ತದೆ, ಬೀಜ-ಮಣ್ಣಿನ ಸಂಪರ್ಕಕ್ಕೆ ಅನುಕೂಲವಾಗುತ್ತದೆ, ಬೀಜ
ಮೊಳಕೆಯೊಡೆದು ಬೇರುಗಳ ಬೆಳವಣಿಗೆಗೆ ಸಹಕಾರವಾಗುತ್ತದೆ.
ಬಿತ್ತನೆಯ
ನಂತರ ಮೊಳಕೆಯೊಡೆಯಲು ಸಾಕಷ್ಟು ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬೀಜಗಳು
ಕೊಚ್ಚಿ ಹೋಗದಂತೆ ಅಥವಾ ನೀರು ನಿಲ್ಲದಂತೆ ನೀರಾವರಿಯನ್ನು ಎಚ್ಚರಿಕೆಯಿಂದ ಮಾಡಬೇಕು.
ಪ್ರೋಟ್ರೇಗಳ ಉಪಯೋಗ:
ಟೊಮ್ಯಾಟೋ, ಬದನೆ, ಮೆಣಸು, ಎಲೆಕೋಸು, ಹೂಕೋಸು,
ಕ್ಯಾಪ್ಸಿಕಮ್, ಹೀರೆ, ಸೋರೆ, ಸೌತೆ, ಕುಂಬಳ, ಹಾಗಲ, ಪಡುವಲ, ಹೀಗೆ ಹಲವಾರು
ತರಕಾರಿಗಳನ್ನು, ಹೂಬೀಜಗಳನ್ನು ಕಿತ್ತು ನಾಟಿ ಮಾಡಲು ಸಾಧ್ಯ (ಟ್ರಾನ್ಸ್‌ಪ್ಲಾಂಟ್). ಸಸಿ
ಮಡಿಯಲ್ಲಿ ಸಸಿ ತಯಾರಿಸುವುದಕ್ಕಿಂತ ಪ್ರೋಟ್ರೇಗಳಲ್ಲಿ ಕೋಕೋಪೀಟ್, ಎರೆಹುಳುಗೊಬ್ಬರ ತುಂಬಿಸಿ ಸಸಿ ತಯಾರಿಸಿಕೊಂಡರೆ ತುಂಬಾ ಉತ್ತಮ. ಸಸ್ಯ ನರ್ಸರಿಗಳು, ಮತ್ತು ವಾಣಿಜ್ಯ ತರಕಾರಿ ಕೃಷಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ
ಈ ತಂತ್ರ ಮನೆಮಟ್ಟಿಗೂ ಅನುಕೂಲಕರ.
ಪ್ರೋಟ್ರೇಗಳಲ್ಲಿ ಸಸಿ ತಯಾರಿಸಿಕೊಳ್ಳುವುದರಿಂದ ಆಗುವ ಲಾಭಗಳು
·
ತೇವಾಂಶ, ತಾಪಮಾನ, ಬೆಳಕು ಬೀಜಗಳಿಗೆ ಒಂದೇ
ರೀತಿಯಲ್ಲಿ ಲಭ್ಯ
·
ಮಣ್ಣಿನಿಂದ
ಹರಡುವ ರೋಗಗಳನ್ನು ತಪ್ಪಿಸಬಹುದು
·
ಆರಂಭಿಕ
ಸೋಂಕುಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಚಿಕಿತ್ಸೆ ನೀಡುವುದು ಸುಲಭ
·
ಪ್ರೋಟ್ರೇಯ ಒಂದು
ಕೋಶದಲ್ಲಿ ಒಂದೇ ಬೀಜ ಹಾಕುವುದರಿಂದ ಪ್ರತಿ
ಬೀಜಕ್ಕೂ ಬೆಳೆಯಲು ಸ್ಥಳ ಮತ್ತು ಆರೈಕೆ ಸಿಗುತ್ತದೆ. ಬೀಜ ವ್ಯರ್ಥವಾಗುವುದೂ ತಪ್ಪುತ್ತದೆ
·
ಬೀಜವನ್ನು
ಇರುವೆಗಳಿಂದ ಕಾಯ್ದುಕೊಳ್ಳುವುದು ಸಾಧ್ಯ
·
ಬೀಜಗಳು
ಇಷ್ಟು ದಿನವಾದರೂ ಹುಟ್ಟಿಲ್ಲವೆಂದರೆ ಬೀಜದ ಗುಣಮಟ್ಟ ಚೆನ್ನಾಗಿಲ್ಲವೆಂದು ಪರೀಕ್ಷಿಸುವುದು ಸುಲಭ
·
ಸಸಿಗಳನ್ನು
ಬೇರಿಗೆ ಪೆಟ್ಟಾಗದಂತೆ ಕಿತ್ತು ನೆಡಲು ಸಾಧ್ಯ
ಕಳೆದ ಸಂಚಿಕೆ ಮತ್ತು ಈ ಸಂಚಿಕೆಯಲ್ಲಿ
ಹುಟ್ಟದ ಬೀಜದ ಬೆನ್ನು ಹತ್ತಿದ ಪರಿಣಾಮ ಬೀಜವಿಜ್ಞಾನದ ಹಲವಾರು ವಿಷಯಗಳನ್ನು ಮನದಟ್ಟುಮಾಡಿಕೊಂಡೆವು.
ಬೀಜವೊಂದು ಮೊಳಕೆಯೊಡೆದು ಸಸಿಯಾಗಬೇಕಾದರೆ ಆ ಎಲ್ಲ ವಿಷಯಗಳತ್ತ ಗಮನ ಕೊಡಿ, ಸಮೃದ್ಧ ಕೈತೋಟ ನಿಮ್ಮದಾಗಲಿ.
Comments
Post a Comment