ಹಸುರು ಹಬ್ಬುವ ಫೈಕಸ್
ಕಾಡು, ಮೇಡು, ಕಡಲು; ಯಾವುದೇ ಪರಿಸರವಿರಲಿ, ಅಲ್ಲಿಯ ಜೈವಿಕ ವಾತಾವರಣವನ್ನು ಸುವ್ಯವಸ್ಥಿತವಾಗಿ ಇರಿಸುವ ಒಂದು ಅನನ್ಯ ಜೀವ ಪ್ರಭೇದವಿರುತ್ತದೆ. ಬಾಗಿದ ಕಲ್ಲಿನ ಕಮಾನನ್ನು ಹಿಡಿದಿಡುವ ʼನೆತ್ತಿಗಲ್ಲಿʼನಂತೆ ಆ ಒಂದು ಪ್ರಭೇದವಿಲ್ಲದಿದ್ದರೆ ಅಲ್ಲಿಯ ಪರಿಸರವೇ ಕುಸಿದು ಬೀಳುತ್ತದೆ. ಇದನ್ನೇ ʼಕೀ ಸ್ಟೋನ್ ಪ್ರಭೇದʼ ಎನ್ನಲಾಗುತ್ತದೆ. ಉದಾಹರಣೆಗೆ ಸಸ್ಯಾಹಾರಿಗಳ ಸಂಖ್ಯೆಯನ್ನು ಹದ್ದುಬಸ್ತಿನಲ್ಲಿಡುವ ಹುಲಿಗಳು, ಸಮುದ್ರದ ಜೀವರಾಶಿಯನ್ನ ಸಮತೂಗಿಸುವ ಶಾರ್ಕ್‌ಗಳು, ಕರಾವಳಿಯನ್ನು ಕಾಪಾಡುವ ಮ್ಯಾಂಗ್ರೋವ್‌ಗಳು ಇತ್ಯಾದಿ. ಸಸ್ಯಗಳಲ್ಲಿ ಪ್ರಮುಖವಾದದ್ದು ʼಫೈಕಸ್ʼ; ನಮ್ಮ ಸುತ್ತಲೂ ಸದ್ದಿಲ್ಲದೆ ಜೀವವೈವಿಧ್ಯತೆ ಸಲಹುತ್ತಿರುವ ಅತ್ತಿ, ಆಲ, ಅರಳಿ, ಗೋಳಿ, ಬಸರಿ ಮುಂತಾದವು. ಬೃಹದಾಕಾರವಾಗಿ ಹರಡಿಕೊಂಡಿರುವ ಫೈಕಸ್ ಪ್ರಭೇದದ ಒಂದು ಮರವಿದ್ದರೆ ಸುತ್ತಲ ಹತ್ತು ಮೈಲಿನ ಜೀವರಾಶಿ ಸಮೃದ್ಧವಾದಂತೆ. ಅಧ್ಯಯನವೊಂದರ ಪ್ರಕಾರ ಒಂದು ಫೈಕಸ್ ಮರ 1200 ಜಾತಿಯ ಜೀವಿಗಳಿಗೆ ಆವಾಸಸ್ಥಾನವಾಗಬಲ್ಲದಂತೆ, ಆಹಾರ ಮೂಲವಾಗಬಲ್ಲದಂತೆ.
ನಮ್ಮ ಸೌಭಾಗ್ಯ ಈ ಎಲ್ಲಾ ಫೈಕಸ್‌ಗಳನ್ನು ಬೋನ್ಸಾಯ್‌ಗಳಾಗಿ ಬೆಳೆಸಬಹುದಾಗಿದೆ. ಇವುಗಳ ಜೊತೆಗೆ ಕೆಲ ಫೈಕಸ್‌ಗಳನ್ನು ಒಳಾಂಗಣ ವಿನ್ಯಾಸಕ್ಕಾಗಿ ಬಳಸುವದಿದೆ. ಐಷಾರಾಮಿ ಹೊಟೇಲ್, ರೆಸ್ಟೋರೆಂಟ್, ಕಛೇರಿಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಹಸುರು ಸೂಸುವ ಅಂತಹ ಅಲಂಕಾರಿಕ ಫೈಕಸ್‌ಗಳ ಪಟ್ಟಿ ಹೀಗಿದೆ.
ʼಫೈಕಸ್ ಬೆಂಜಮಿನಾʼ: ಅಳುವಾಗ ಕಣ್ಣಂಚಲ್ಲಿ ಇಳಿಯುವ ನೀರಿನ ಹನಿಯಂತೆ ಇಳಿಮುಖವಾದ ಹರವುಳ್ಳ, ಕಡುಹಸಿರಿನ ಚೂಪು ತುದಿಯ ಎಲೆಯ ಈ ಗಿಡವನ್ನು ʼವೀಪಿಂಗ್ ಫಿಗ್ʼ ಎಂದೇ ಕರೆಯಲಾಗುತ್ತದೆ. ರೆಸ್ಟೋರೆಂಟ್‌ಗಳ ಬಾಗಿಲಲ್ಲಿ ಆಚೆಗೊಂದು ಈಚೆಗೊಂದರಂತೆ ಕೆಲವೆಡೆ ಕಾಂಡ ಹೆಣೆದುಕೊಂಡು, ಕೆಲವೆಡೆ ಬಾಲ್ ಆಕಾರಕ್ಕೆ ಅಂದವಾಗಿ ಟ್ರಿಮ್ ಮಾಡಿಕೊಂಡು ಸ್ಟೇಟ್‌ಮೆಂಟ್ ಲುಕ್ ಕೊಡುವ ಈ ಸಸ್ಯಗಳು ಕಣ್‌ತಪ್ಪಲು ಸಾಧ್ಯವೇ ಇಲ್ಲ.
ʼಫೈಕಸ್ ಎಲಾಸ್ಟಿಕಾʼ: ಈ ಸಸ್ಯ ʼರಬ್ಬರ್ ಗಿಡʼ ಎಂದೇ ಹೆಸರುವಾಸಿ. ಕಂದು ಬಣ್ಣದ ಎಲೆಗಳುಳ್ಳ ಎಲಾಸ್ಟಿಕಾದ ಸಾಲಿಗೆ ತಿಳಿಹಸಿರು, ತಿಳಿಗುಲಾಬಿ ಬಣ್ಣದ ಎಲೆಗಳ ಜಾತಿಗಳೂ ಇತ್ತೀಚೆಗೆ ಸೇರ್ಪಡೆಯಾಗಿವೆ.
ಫೈಕಸ್ ಲೈರಾಟಾ: ವಯಲಿನ್ ವಾದ್ಯವನ್ನು ಹೋಲುವ ಎಲೆಗಳುಳ್ಳ ಈ ಸಸ್ಯ ʼಫಿಡಲ್ ಲೀಫ್ ಫಿಗ್ʼ ಎಂದೇ ಫೇಮಸ್. ಪಿಂಟರೆಸ್ಟ್, ಇನ್‌ಸ್ಟಾಗ್ರಾಮ್‌ಗಳ ಹಾವಳಿಯಲ್ಲಿ ಅದರಲ್ಲೂ ಕರೋನಾದ ನಂತರ ಈ ಫೈಕಸ್ ಸಿಕ್ಕಾಪಟ್ಟೆ ಸದ್ದು ಮಾಡಿದೆ.
ʼಫೈಕಸ್ ಟ್ರಯಾಂಗ್ಯುಲ್ಯಾರಿಸ್ʼ: ತ್ರಿಕೋನಾಕಾರದ ಎಲೆಗಳುಳ್ಳ ʼಟ್ರಯಾಂಗ್ಯುಲಾರ್ ಫಿಗ್ʼ, ಅದರಲ್ಲೂ ಬಿಳಿ ಅಂಚಿನ ಎಲೆಗಳುಳ್ಳ ʼವೆರಿಗೇಟಾʼ ತನ್ನ ವಿಭಿನ್ನ ಆಕಾರದ ಎಲೆಗಳಿಂದಾಗಿ ಸಸ್ಯಪ್ರೇಮಿಗಳ ಗಮನ ಸೆಳೆಯುತ್ತಿದೆ.
ಫೈಕಸ್ ಪ್ಯುಮಿಲಾ/ ರೆಪೆನ್ಸ್: ಗೋಡೆಯನ್ನು ಆವರಿಸುವ ಪುಟ್ಟ ಹೃದಯಾಕಾರದ ಎಲೆಗಳುಳ್ಳ ನಿತ್ಯಹಸಿರಿನ ಈ ಬಳ್ಳಿಗೆ ʼಕ್ರೀಪಿಂಗ್ ಫಿಗ್ʼ ಎಂದೇ ಹೆಸರು. ಸಾಮಾನ್ಯವಾಗಿ ಓಂ, ಸ್ವಸ್ತಿಕ್, ಹೃದಯದ ವಿನ್ಯಾಸದಲ್ಲಿ ಗೋಡೆಗೆ ಹಬ್ಬಿಸಿರುವುದನ್ನು ನೋಡಿರಲು ಸಾಕು.
ಫೈಕಸ್ ಜಿನ್‌ಸೆಂಗ್: ಇತ್ತೀಚೆಗೆ ರೆಡಿಮೇಡ್ ಬೋನ್ಸಾಯ್‌ಗಳೆಂದು ನರ್ಸರಿಗಳಲ್ಲಿ ಮಾರಾಟವಾಗುತ್ತಿರುವ ಈ ಸಸ್ಯಗಳು ಜಿನ್‌ಸೆಂಗ್ ಬೇರಿನಂತೆ ದಪ್ಪದಾಗಿ ಉಬ್ಬಿರುವ ಕಾಂಡಗಳಿಂದಾಗಿ ಆಕರ್ಷಕ. ಸಾಮಾನ್ಯವಾಗಿ ಜಿನ್‌ಸೆಂಗ್ ಮೇಲೆ ʼಫೈಕಸ್ ಮೈಕ್ರೊಕಾರ್ಪಾʼವನ್ನು ಕಸಿ ಕಟ್ಟಿರಲಾಗುತ್ತದೆ. ʼಮೈಕ್ರೊಕಾರ್ಪಾʼ ಕೂಡಾ ಹೆಡ್ಜ್ ಸಸ್ಯವಾಗಿ ಬಳಕೆಯಲ್ಲಿದೆ.
ಫೈಕಸ್‌ಗಳು ಮೂಲತಃ ಹೊರಾಂಗಣ ಸಸ್ಯ ಜಾತಿಯಾಗಿರುವ ಕಾರಣ ಚೆನ್ನಾಗಿ ಬೇರೂರಲು ದೊಡ್ಡ ಹೂಕುಂಡ, ಹೆಚ್ಚು ಮಣ್ಣು, ಪೋಷಕಾಂಶ ಅಗತ್ಯ. ಮೇಲಿನ ಎಲ್ಲಾ ಫೈಕಸ್‌ಗಳು ಒಳಾಂಗಣಕ್ಕಾದರೂ ಏಳೆಂಟು ಘಂಟೆಯ ಬೆಳಕು ಬೇಕು. ಮಣ್ಣು ಒಣಗದಂತೆ, ತೀರಾ ಜವಳೂ ಆಗದಂತೆ ಹದವಾಗಿ ನೀರುಣಿಸಬೇಕು. ಒಳಾಂಗಣ ವಾತಾವರಣ ಹಿಡಿಸದಿದ್ದರೆ ಬೆಳವಣಿಗೆ ಸ್ತಬ್ಧವಾಗಿ ಎಲೆ ಉದುರುವ ಲಕ್ಷಣಗಳು ಗೋಚರಿಸಬಹುದು. ಒಮ್ಮೆ ಹೊಂದಿಕೊಂಡರೆ ಹಸಿರು ಹಬ್ಬವಂತೂ ಪಕ್ಕಾ.
Comments
Post a Comment