ಸುಲಭ ನಿರ್ವಹಣೆಗೆ ಸ್ನೇಕ್ ಪ್ಲಾಂಟ್
ಇದೊಂದು ಅಲಂಕಾರಿಕ ಸಸ್ಯ. ಪಟ್ಟೆ ಪಟ್ಟೆ ಹಾವು ಹೆಡೆ ಎತ್ತಿ ನಿಂತಂತೆ ಕಾಣುವ ಈ ಸಸ್ಯ ಕಚೇರಿ, ಮನೆ, ಉದ್ಯಾನವನ, ಬೀದಿ ಬದಿ ಬೇಲಿಯಲ್ಲೂ ಕಾಣಸಿಗುತ್ತದೆ. ಯಾವುದಿರಬಹುದೆಂದು ಊಹಿಸಬಲ್ಲೀರಾ? ಹೌದು! ಇದೇ ಸ್ನೇಕ್ ಪ್ಲಾಂಟ್; ಗಾರ್ಡನ್ನಿಗರಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ಚಿರಪರಿಚಿತ ʼಸಾನ್ಸಿವೇರಿಯಾʼ.
ನೈಜಿರಿಯಾದಿಂದ ಕೊಂಗೋ ವರೆಗಿನ ಭೌಗೋಳಿಕ ಪ್ರದೇಶದಲ್ಲಿ ಹುಟ್ಟಿದ ಸಾನ್ಸಿವೇರಿಯಾ ಪಶ್ಚಿಮ ಆಫ್ರಿಕಾದ ಸೆಲೆಬ್ರಿಟಿ ಸಸ್ಯ. ಆಫ್ರಿಕನ್ನರ ನಂಬಿಕೆಯ ಪ್ರಕಾರ ಸಾನ್ಸಿವೇರಿಯಾ ದುಷ್ಟಶಕ್ತಿಗಳನ್ನು ದೂರವಿಡಬಲ್ಲ ಅದೃಷ್ಟದಾಯಕ ಸಸ್ಯ!. ಪರಿಣಾಮ, ಆಫ್ರಿಕನ್ನರ ವಿವಿಧ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ, ಔಷಧಿಗಾಗಿ ಸಾನ್ಸಿವೇರಿಯಾ ಬಳಕೆಯಲ್ಲಿದೆ. ಸಾನ್ಸಿವೇರಿಯಾದ ನಾರು ಬಹುಗಟ್ಟಿ ಮತ್ತು ಬಹುಬಾಳಿಕೆ ಬರುವಂತದ್ದು. ಹಾಗಾಗಿ ಇದರ ನಾರನ್ನು ಬಟ್ಟೆ ನೇಯ್ಗೆಯಲ್ಲಿ ಹಗ್ಗ ಹೆಣೆಯಲು ಇಂದಿಗೂ ಉಪಯೋಗಿಸಲಾಗುತ್ತದೆ. ಆಫ್ರಿಕನ್ನರು ಮುಂಚೊಂದು ಕಾಲದಲ್ಲಿ ಈ ನಾರನ್ನು ಬಿಲ್ಲಿನ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ಕಾರಣ ಸಾನ್ಸಿವೇರಿಯಾವನ್ನು ʼವೈಪರ್ಸ್ ಬೋಸ್ಟ್ರಿಂಗ್ ಹೆಂಪ್ʼ ಎಂದು ಕರೆಯುತ್ತಿದ್ದರಂತೆ (ವೈಪರ್ ಎಂದರೆ ಒಂದು ಜಾತಿಯ ಹಾವು, ಹೆಂಪ್ ಎಂದರೆ ಒಂದು ರೀತಿಯ ನಾರು). ಶುಷ್ಕ ಪರಿಸ್ಥಿತಿಗಳಲ್ಲಿ ಬದುಕಬಲ್ಲ ಸಾಮರ್ಥ್ಯವಿರುವ ಸಾನ್ಸಿವೇರಿಯಾ ಮಣ್ಣಿನ ಸವಕಳಿ ತಡೆಯುವ ಮೂಲಕ, ಸಣ್ಣ ಕೀಟಗಳಿಗೆ ಆವಾಸಸ್ಥಾನವನ್ನು ಒದಗಿಸುವ ಮೂಲಕ ಆಫ್ರಿಕನ್ ನೆಲದಲ್ಲಿ ಜೀವವೈವಿಧ್ಯತೆಯನ್ನೂ ಬೆಂಬಲಿಸುತ್ತದೆ.
ಸಸ್ಯಪ್ರಿಯ ಪಾಶ್ಚಾತ್ಯರು ಸಾನ್ಸಿವೇರಿಯಾದ ಚೂಪುತುದಿಯ ಎಲೆಗಳನ್ನು ಅತ್ತೆಯ ಹರಿತ ನಾಲಿಗೆಗೆ ಹೋಲಿಸಿ ತಮಾಷೆಗಾಗಿ ʼಮದರ್ ಇನ್ ಲಾʼಸ್ ಟಂಗ್ʼ ಸಸ್ಯ ಎಂದು ಕರೆದಿದ್ದಾರೆ. ಆಫ್ರಿಕನ್ನರಂತೆ ಗೌರವ ಭಾವನೆಗಳನ್ನು ಬೆಳೆಸಿಕೊಂಡಿರುವ ಬ್ರೆಜಿಲಿಯನ್ನರು ಸಾನ್ಸಿವೇರಿಯಾವನ್ನು ಅವರ ಸಮುದಾಯದ ವೀರಯೋಧ ʼಸೇಂಟ್ ಜಾರ್ಜ್ʼ ನ ʼಕತ್ತಿʼ ಗೆ ಹೋಲಿಸಿದ್ದಾರೆ. ಇವೆಲ್ಲಾ ಹೆಸರುಗಳ ಜೊತೆ ಪ್ರಸ್ತುತ ʼಡ್ರೆಸಿನಾ ಟ್ರೈಫೆಸಿಯಾಟಾʼ ಎಂದು ಮರುವರ್ಗೀಕರಣ ಮಾಡಲಾಗಿದೆಯಾದರೂ ಸಾನ್ಸಿವೇರಿಯಾವನ್ನು ಎಂಬ ಹಳೆಯ ಹೆಸರೇ ಜನಪ್ರಿಯ.
ಸಾನ್ಸಿವೇರಿಯಾಗಳ ಇನ್ನೊಂದು ವಿಶೇಷತೆ ʼCAMʼ ದ್ಯುತಿಸಂಶ್ಲೇಷಣೆ ಕ್ರಿಯೆ. ಈ ಕ್ರಿಯೆಯಲ್ಲಿ ಸಸ್ಯ ಹಗಲಿಡಿ ತನ್ನ ಪತ್ರರಂಧ್ರಗಳನ್ನು ಮುಚ್ಚಿಟ್ಟು ರಾತ್ರಿ ಸಮಯಕ್ಕೆ ತೆರೆದಿಡುತ್ತದೆ. ದ್ಯುತಿಸಂಶ್ಲೇಷಣೆ ಕ್ರಿಯೆಗೆ ಬೇಕಾದ ಇಂಗಾಲದ-ಡೈ-ಆಕೈಡ್ ಅನ್ನು ರಾತ್ರಿ ಹೊತ್ತು ಒಳಗೆಳೆದುಕೊಂಡು ಸಂಗ್ರಹಿಸಿಟ್ಟುಕೊಂಡು ಹಗಲಲ್ಲಿ ಬಳಕೆ ಮಾಡುತ್ತದೆ. ರಾತ್ರಿ ಹೊತ್ತು ತಂಪಾಗಿರುವ ಕಾರಣ ಪತ್ರರಂಧ್ರಗಳ ಮೂಲಕ ನೀರು ಆವಿಯಾಗಿ ವ್ಯರ್ಥವಾಗುವುದೂ ತಪ್ಪುತ್ತದೆ. ಬರ ಸಹಿಷ್ಣುತೆಗೆ ವಿಕಸನವಾದ ಈ ಗುಣ ಸಾನ್ಸಿವೇರಿಯಾವನ್ನು ಅತ್ಯುತ್ತಮ ಒಳಾಂಗಣ ಸಸ್ಯವಾನ್ನಾಗಿಸಿದೆ. ಒಳಾಂಗಣದ ವಾತಾವರಣದಲ್ಲಿರುವ ಕಲುಷಿತ ರಾಸಾಯನಿಕಗಳನ್ನೂ ಹೀರಿಕೊಳ್ಳಬಲ್ಲ ಸಾನ್ಸಿವೇರಿಯಾ ʼಏರ್ ಪ್ಯೂರಿಫಾಯಿಂಗ್ ಪ್ಲಾಂಟ್ʼ ಎಂದು ವೈಜ್ಞಾನಿಕವಾಗಿ ಧೃಡಪಡಿಸಲಾಗಿದೆ.
ಮಬ್ಬು ಬೆಳಕಿನಲ್ಲೂ ತಮ್ಮ ಅಂದವನ್ನು ಕಾಪಿಟ್ಟುಕೊಳ್ಳಬಲ್ಲ ಸಾನ್ಸಿವೇರಿಯಾಗಳ ನಿರ್ವಹಣೆ ತುಂಬಾ ಸುಲಭ. ಮನೆಯೊಡೆಯನ ನಿರ್ಲಕ್ಷ್ಯವನ್ನೂ ನಿಭಾಯಿಸಬಲ್ಲ ಸಸ್ಯವಿದು. ಕಡಿಮೆ ಬೆಳಕನ್ನು ಸಹಿಸಿಕೊಳ್ಳಬಲ್ಲವಾದರೂ ಪ್ರಕಾಶಮಾನವಾದ ಬೆಳಕಿನಲ್ಲಿ ಚುರುಕಾದ ಸೊಂಪಾದ ಬೆಳವಣಿಗೆ ಸಹಜ. ಸಕ್ಯುಲೆಂಟ್ ಸಸ್ಯಗಳಂತೆ ಶರೀರದಲ್ಲಿಯೇ ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲ ಕಾರಣದಿಂದ ಇವುಗಳ ನೀರಿನ ಬೇಡಿಕೆಯೂ ಕಡಿಮೆ; ಒಳಾಂಗಣದ ಒಣ ಹವೆಯಲ್ಲೂ ತಿಂಗಳಿಗೊಮ್ಮೆ ನೀರು ಸಾಕೆಂದರೆ ಆಶ್ಚರ್ಯವಾಗುತ್ತದೆ. ಸಾನ್ಸಿವೇರಿಯಾಗಳಲ್ಲಿ ಒಂದಕ್ಕಿಂತ ಒಂದು ಚಂದದ ತಳಿಗಳೂ ಇವೆ. ಇವುಗಳನ್ನು ಬೇರು ಕಾಂಡಗಳನ್ನು ವಿಭಜಿಸುವ ಮೂಲಕ ಅಥವಾ ಕೇವಲ ಎಲೆಯ ಭಾಗದಿಂದ ಸಸ್ಯಾಭಿವೃದ್ಧಿ ಮಾಡಬಹುದು; ನಿಮ್ಮ ಸುತ್ತಮುತ್ತಲಿರುವ ತಳಿ ಸಂಗ್ರಹ ಮಾಡಲೂಬಹುದು.
Comments
Post a Comment