ಸಸ್ಯಗಳಲ್ಲಿ ರೋಗದ ವಿರುದ್ಧ RNA ಲಸಿಕೆಗಳು
ಕಳೆದ
ಸಂಚಿಕೆಯಲ್ಲಿ ಜೈವಿಕ ತಂತ್ರಜ್ಞಾನದ ನವೀನ ತಂತ್ರವಾದ ಕ್ರಿಸ್ಪರ್ ಬಗ್ಗೆ ಚರ್ಚಿಸಲಾಗಿತ್ತು. ಇದೇ
ವೇಳೆ RNA ಲಸಿಕೆಗಳ ಬಗ್ಗೆ ಗಮನ ಸೆಳೆಯಲಾಗಿತ್ತು. RNAಗಳ ಬಗ್ಗೆ, RNAಯ ತುಣುಕುಗಳನ್ನು ಬಳಸಿ ಸಸ್ಯಗಳಲ್ಲಿ
ಅನುವಂಶೀಯ ಗುಣಗಳನ್ನು ಮಾರ್ಪಾಡು ಮಾಡುವ ಬಗ್ಗೆ, RNA ಲಸಿಕೆಗಳ ಸಾಧ್ಯತೆ ಬಗ್ಗೆ ಕುತೂಹಲಕಾರಿಯಾಗಿ
ಸಂಕ್ಷಿಪ್ತವಾಗಿ ತಿಳಿಸುವುದು ಈ ಸಂಚಿಕೆಯ ಲೇಖನದ ಉದ್ದೇಶ.
RNAಗಳ
ಲೋಕ
ಹಿಂದಿನ
ಸಂಚಿಕೆಯಲ್ಲಿ ಹೇಳಿದಂತೆ ನಮ್ಮ ರೂಪ ನೋಟ ಮಾಟಗಳೆಲ್ಲಾ ನಮ್ಮ ʼಗುಣಾಣುʼಗಳ ಅಥವಾ ʼಅನುವಂಶೀಯ ಧಾತುʼಗಳ
ಅಥವಾ ʼಜೀನ್ʼ ನ ಕೊಡುಗೆ. ಸಸ್ಯಗಳಲ್ಲೂ ಅಷ್ಟೇ; ಅನುವಂಶೀಯ ಧಾತುಗಳು ಮತ್ತು ಸುತ್ತಲ ಪರಿಸರ ಎರಡೂ
ಸೇರಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸುತ್ತದೆ. ನಾವು ರೈತರು ಕೈಗೊಳ್ಳುವ ಚಟುವಟಿಕೆಗಳು ತಿಳಿದೋ ತಿಳಿಯದೆಯೋ
ಇದೇ ಅಂಶಗಳ ಮೇಲೆ ಪ್ರಭಾವ ಬೀರುತ್ತಿರುತ್ತದೆ.
ಮೇಲ್ನೋಟಕ್ಕೆ
ಜಾದೂವಿನಂತೆ ಕಾಣುವ ಬೆಳವಣಿಗೆ ಮೂಲತಃ ರಾಸಾಯನಿಕ ಕ್ರಿಯೆಗಳ ಸರಣಿ ಕ್ರಿಯೆ. ಯಾವುದೋ ರಾಸಾಯನಿಕ ಸಂಯುಕ್ತಗಳ
ಉತ್ಪಾದನೆಯಾಗುವುದು, ಅದು ಇನ್ಯಾವುದನ್ನೋ ಸಕ್ರಿಯಗೊಳಿಸುವುದು, ಅದು ಇನ್ಯಾವುದನ್ನೋ ನಿಷ್ಕ್ರಿಯಗೊಳಿಸುವುದು,
ಅದು ಇನ್ಯಾವುದರದ್ದೋ ಉತ್ಪಾದನೆ ನಿಲ್ಲಿಸುವುದು ಹೀಗೆ ಈ ಸರಣಿ ಕ್ರಿಯೆ ನಮ್ಮ ಕಣ್ಣಿಗೆ ಕಾಣದಿದ್ದರೂ
ಸಸ್ಯಗಳ ಶರೀರದಲ್ಲಿ ನಡೆಯುತ್ತಿರುತ್ತದೆ.
ಅನುವಂಶಿಕ
ಧಾತುಗಳೂ ಕೂಡಾ ರಾಸಾಯನಿಕ ಸಂಯುಕ್ತಗಳೇ. ಇವುಗಳನ್ನು ಬ್ಯಾಕ್ಟೀರಿಯಾದಂತ ಏಕಕೋಶಿ ಜೀವಿಗಳಲ್ಲಿ ಒಂದು
ಎಳೆಯ RNAಯಾಗಿ, ಸಸ್ಯಗಳಂತ ಬಹುಕೋಶಿ ಜೀವಿಗಳಲ್ಲಿ ಎರಡು ಎಳೆಯ DNAಯಾಗಿ ಗುರುತಿಸಬಹುದು. ಪ್ರತಿ
ಜೀವಕೋಶದಲ್ಲೂ ಒಂದು ಮುದ್ದೆ DNA ಇರುತ್ತದೆ. ಜೀವಕೋಶ ವಿಭಜನೆಯಾಗುವಾಗ ಈ ಮುದ್ದೆ ಕೂಡಾ ನಕಲಾಗುತ್ತದೆ.
DNAಯಲ್ಲಿ ಬೆಳವಣಿಗೆಗೆ ಬೇಕಾದ ಎಲ್ಲವೂ ʼಕೋಡ್ʼ ರೂಪದಲ್ಲಿ ಬರೆದಿರುತ್ತದೆ. ಆದರೆ ಯಾವ ಸಮಯಕ್ಕೆ
ಯಾವ ʼಕೋಡ್ʼ ʼಡಿಕೋಡ್ʼ ಆಗಬೇಕೆಂಬುದು ಸಸ್ಯದ ಜಾಣ್ಮೆಗೆ ಬಿಟ್ಟಿದ್ದು.
DNAಯಲ್ಲಿರುವ
ರಾಶಿ ರಾಶಿ ವಿಷಯಗಳನ್ನೆಲ್ಲಾ ಡಿಕೋಡ್ ಮಾಡುತ್ತಾ ಹೋಗುವುದು ವ್ಯರ್ಥ, ಅದಕ್ಕೆ ಸಸ್ಯಗಳಲ್ಲಿ ನಿಯಂತ್ರಣಾ
ವ್ಯವಸ್ಥೆಯಿದೆ. ಬೆಳವಣಿಗೆಯ ಅಗತ್ಯಕ್ಕೆ ಅನುಸಾರವಾಗಿ ಯಾವುದು ಬೇಕೋ ಅಷ್ಟೇ ಭಾಗದ DNA ನಕಲಾಗಿ ಸಣ್ಣ
ತುಣುಕಿನ mRNA (ಮೆಸೇಂಜರ್ RNA) ಉತ್ಪಾದನೆಯಾಗುತ್ತದೆ. mRNA ಮೇಲಿನ ಮೆಸೇಜ್ ನ ಪ್ರಕಾರ ನಿರ್ದಿಷ್ಟವಾದ
ಪ್ರೋಟಿನ್ ಉತ್ಪಾದನೆಯಾಗುತ್ತದೆ. ಆ ಮೂಲಕ ಸಸ್ಯದ ಬೆಳವಣಿಗೆಗೆ ಅನುವಾಗುತ್ತದೆ. mRNA ಗಳಿಗಿಂತಲೂ
ಚಿಕ್ಕದಾದ RNAಗಳಿವೆ, ಇವುಗಳನ್ನು ಸ್ಮಾಲ್ RNAಗಳು (Small RNAಗಳು) ಎಂದು ಕರೆಯಲಾಗುತ್ತದೆ. ಇವುಗಳಲ್ಲಿ
ಪ್ರೋಟಿನ್ ಉತ್ಪಾದಿಸುವ ನಿರ್ದೇಶನಗಳಿರುವುದಿಲ್ಲ ಬದಲಿಗೆ RNAಗಳನ್ನು ನಿಯಂತ್ರಿಸುವ ನಿರ್ದೇಶನವಿರುತ್ತದೆ.
ಸ್ಮಾಲ್RNAಗಳು ಸಸ್ಯಗಳ ಶರೀರದಲ್ಲಿ ಮತ್ತೊಂದು ಸುತ್ತಿನ ನಿಯಂತ್ರಣ ಸಾಧಿಸುತ್ತವೆ.
BOX:
ಕೃಷಿಗೆ ಸಂಬಂಧವಿಲ್ಲದಿದ್ದರೂ ಉಪಯುಕ್ತವಾದ ಒಂದು ಮಾಹಿತಿ: ಕೊರೋನಾ ಕಾಲದಲ್ಲಿ ಮೊದಮೊದಲು ಸುದ್ದಿಯಲ್ಲಿದ್ದ
ʼಫೈಜರ್ʼ ಮತ್ತು ʼಮೊಡೆರ್ನಾʼ ಲಸಿಕೆಗಳ ಬಗ್ಗೆ ನೀವೆಲ್ಲಾ ಓದಿರಬೇಕು. ಭಾರತ ಲಸಿಕಾ ಅಭಿಯಾನ ಶುರುಮಾಡುವುದಕ್ಕಿಂತ
ಎಷ್ಟೋ ಮುಂಚೆ ಅಮೇರಿಕಾ ಮತ್ತು ಯುರೋಪ್ ನಲ್ಲಿ ಇವೆರಡು ಲಸಿಕೆಗಳ ಉಪಯೋಗಕ್ಕೆ ಅನುಮತಿ ಸಿಕ್ಕಿತ್ತು.
ʼಫೈಜರ್ʼ ಮತ್ತು ʼಮೊಡೆರ್ನಾʼ ಇವೆರಡೂ mRNA ಲಸಿಕೆಗಳು!. ಮೇಲೆ ಹೇಳಿದಂತೆ mRNA ಮೇಲಿನ ಮೆಸೇಜ್
ನ ಪ್ರಕಾರ ನಮ್ಮ ದೇಹದಲ್ಲಿ ನಿರ್ದಿಷ್ಟವಾದ ಪ್ರೋಟಿನ್ ಉತ್ಪಾದನೆಯಾಗುತ್ತದೆ. ಈ ಎರಡು ಲಸಿಕೆಗಳಲ್ಲೂ
ಕೋವಿಡ್ ವೈರಾಣುವಿನ ಪ್ರೋಟಿನ್ ಒಂದನ್ನು ತಾತ್ಕಾಲಿಕವಾಗಿ ಉತ್ಪಾದಿಸುವ ನಿರ್ದೇಶನವಿರುವ mRNAಯಿದೆ. ಅಪಾಯಕಾರಿಯಲ್ಲದ ಪ್ರಮಾಣದಲ್ಲಿ ಈ ಅಂಶ ದೇಹ ಸೇರಿದಾಗ
ಇದರೊಳಗಿನ mRNAಯು ಕೋವಿಡ್
ವೈರಾಣುವಿನ ಸ್ಪೈಕ್ ಪ್ರೋಟೀನ್ ಅನ್ನು ಸಣ್ಣ ಪ್ರಮಾಣದಲ್ಲಿ ಉತ್ಪಾದಿಸಲು ತೊಡಗುತ್ತದೆ.
ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಇದನ್ನು ಗುರುತಿಸಿ ಪ್ರತಿರೋಧ ಒಡ್ಡುತ್ತದೆ. ಮುಂದೊಂದು ದಿನ
ನಿಜಕ್ಕೂ ಕೋವಿಡ್ ದಾಳಿಯಾದಾಗ ತೀಕ್ಷ್ಣ ಚುರುಕು ಪ್ರತಿಕ್ರಿಯೆ ಉಂಟುಮಾಡಲು ನಮ್ಮ ಪ್ರತಿರಕ್ಷಣಾ
ವ್ಯವಸ್ಥೆ ಉತ್ತೇಜಿತವಾಗುತ್ತದೆ.
ಭಾರತದಲ್ಲೂ ʼಕೋವಿಶೀಲ್ಡ್ʼ
ʼಕೊವಾಕ್ಸಿನ್ʼ (ಇವು mRNA ಲಸಿಕೆಗಳಲ್ಲ) ಬರುವ ಮುನ್ನ ಸ್ವಲ್ಪ ಕಾಲ ಇವೆರಡನ್ನು ತುರ್ತು ಉಪಯೋಗಕ್ಕೆ
ಅನುಮತಿ ನೀಡಲಾಗಿತ್ತು. ಹೆಚ್ಚಿನ ಬೆಲೆ, ಆಮದು ವೆಚ್ಚ, ಸರಬರಾಜು, ಬಳಕೆಯ ಮೇಲಿನ ಕಠಿಣ ನಿಯಮಗಳು,
ಮುಂತಾದ ಸಮಸ್ಯಾ ದೃಷ್ಟಿಯಿಂದ, ಮತ್ತು ಭಾರತ ಜನಿತ ಲಸಿಕೆಗಳನ್ನು ಉತ್ತೇಜಿಸುವ ಸಲುವಾಗಿ ಇವುಗಳನ್ನು
ದೂರವಿರಿಸಲಾಯಿತು.
ನೋಬಲ್
ಪ್ರಶಸ್ತಿ ಗಳಿಸಿದ ಸಂಶೋಧನೆಗಳು
ಸ್ಮಾಲ್RNAಗಳಲ್ಲಿ
ಎರಡು ವಿಧ; ಒಂದು ಇತರೇ ಹಾನಿಕಾರಕ RNAಗಳನ್ನು ಉದಾಹರಣೆಗೆ ವೈರಾಣುಗಳ RNAಗಳನ್ನು ಹೊಡೆದು ಉರುಳಿಸುವ siRNAಗಳು (ಸ್ಮಾಲ್ ಇಂಟರ್
ಫಿಯರಿಂಗ್ RNA); ಮತ್ತೊಂದು ಸಸ್ಯಗಳ ಅಗತ್ಯಕ್ಕೆ ಹೆಚ್ಚಾದ mRNAಗಳನ್ನು ಜೀರ್ಣಗೊಳಿಸುವ miRNAಗಳು (ಮೈಕ್ರೋ RNA).
ಇವೆರಡು ಸಸ್ಯಗಳ ಬೆಳವಣಿಗೆಯ ನಿಯಂತ್ರಣ ಮಹತ್ವದ ಪಾತ್ರ ವಹಿಸುತ್ತವೆ. ಸಸ್ಯವೊಂದೇ ಅಲ್ಲ ಬ್ಯಾಕ್ಟೀರಿಯಾದಿಂದ
ಮನುಷ್ಯರ ವರೆಗೆ ಎಲ್ಲಾ ಜೀವಿಗಳಲ್ಲಿಯೂ ಈ ನಿಯಂತ್ರಣಾ ವ್ಯವಸ್ಥೆಯಿದೆ.
ಮೇಲೆ
ಹೇಳಿದಂತೆ ವೈರಾಣುಗಳಂತ ಅನ್ಯಜೀವಿಗಳನ್ನು ಧ್ವಂಸ ಮಾಡುವ siRNAಗಳು ಸಸ್ಯಗಳ ರಕ್ಷಣಾ ವ್ಯವಸ್ಥೆಯ
ಭಾಗವಾಗಿವೆ. ಇದೇ ವ್ಯವಸ್ಥೆಯಿಂದ ಪ್ರೇರಿತವಾಗಿ ಹುಟ್ಟಿಕೊಂಡಿದ್ದು RNA ಇಂಟರ್ಫಿಯರೆನ್ಸ್ ಅಥವಾ
RNAi ತಂತ್ರಜ್ಞಾನ. ೧೯೯೮ರಲ್ಲಿ ನಡೆದ ಈ ಸಂಶೋಧನೆಗೆ ಆಂಡ್ರ್ಯೂ ಫೈರ್ ಮತ್ತು ಕ್ರೇಗ್ ಮಿಲ್ಲರ್
ಎಂಬ ವಿಜ್ಞಾನಿಗಳಿಗೆ ೨೦೦೬ರಲ್ಲಿ ನೊಬೆಲ್ ಪ್ರಶಸ್ತಿ ಕೊಡಮಾಡಲಾಯಿತು. miRNAಗಳು mRNAಗಳನ್ನು ನಿಯಂತ್ರಿಸುವ
ವ್ಯವಸ್ಥೆಯನ್ನು ಮೊದಲು ಕಂಡುಹಿಡಿದಿದ್ದು ೧೯೯೦ರಲ್ಲಿ. ಅದಕ್ಕಾಗಿ ವಿಕ್ಟರ್ ಅಂಬ್ರೋಸ್ ಮತ್ತು
ಗ್ಯಾರಿ ರವ್ಕನ್ ಅವರಿಗೆ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಕೊಡಮಾಡಲಾಗಿದೆ.
ಕೃಷಿ
ಅಭಿವೃದ್ಧಿಗೆ RNAi ತಂತ್ರಜ್ಞಾನ
ಸ್ಮಾಲ್RNAಗಳು
RNAಗಳನ್ನು ನಿಯಂತ್ರಣ ಮಾಡುತ್ತವೆ, ವಿಶೇಷವಾಗಿ ವೈರಾಣುಗಳ ದಾಳಿಯ ಸಂದರ್ಭದಲ್ಲಿ ಎನ್ನುವುದು ಈಗ
ತಿಳಿದಿರುವ ವಿಷಯ. ಈ ಜ್ಞಾನವನ್ನು ಬೇರೆಡೆ ಪ್ರಯೋಗಿಸಬಹುದೇ! ಕಾಫಿಯಲ್ಲಿ ಕೇಫಿನ್ ಇದೆಯೆಂದು ನಮಗೆ
ಗೊತ್ತು. ಅತಿಯಾದ ಕೇಫಿನ್ ಸೇವನೆ ಆರೋಗ್ಯಕ್ಕೆ ಹಾನಿಕಾರಕವೆಂದೂ ಗೊತ್ತು. ಆದರೂ ಏನು ಮಾಡುವುದು
ಕಾಫಿ ಸೇವನೆಯೊಂದು ಚಟ. ಕೆಫಿನ್ ಇಲ್ಲದ ಕಾಫಿ ಇದ್ದಿದ್ದರೆ?! (ರುಚಿ ಹೇಗೋ ಕೇಳಬೇಡಿ). ಕಾಫಿಯಲ್ಲಿ
ಕೆಫಿನ್ ಉತ್ಪಾದಿಸಲು ನಿರ್ದೇಶನವಿರುವ mRNAಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸಿದರೆ…
ವಿಜ್ಞಾನಿಗಳು ಇದನ್ನು ಎಂದೋ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಕಾಫಿಯಲ್ಲಿ ಕೆಫಿನ್ ಉತ್ಪಾದನೆಗೆ
ಬೇಕಾದ ʼಥಿಯೋಬ್ರೊಮಿನ್ ಸಿಂಥೇಸ್ʼ ಕಿಣ್ವಗಳನ್ನು ನಿರ್ದೇಶಿಸುವ mRNAಗಳನ್ನು RNAi ನಿಂದ ಜೀರ್ಣಮಾಡಿ
ಕೆಫಿನ್ ರಹಿತ ಕಾಫಿ ಸಸ್ಯಗಳನ್ನು ಪಡೆದಿದ್ದಾರೆ.
ಹೀಗೆ ಅಸಾಧ್ಯ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದಾರೆ.
RNAi
ಬಳಸಿ ಕೀಟ ರೋಗ ಭಾದೆಗೂ ಪರಿಹಾರ ಸಾಧ್ಯ. ಸ್ವಲ್ಪ ಗಂಭೀರ ಉದಾಹರಣೆ ಕೊಡುವುದಾದರೆ ʼಕೊಲೆರಾಡೋ ಪೊಟ್ಯಾಟೋ
ಬೀಟಲ್ʼ ಎಂಬ ಓಡು ಹುಳ ಬಟಾಟೆ ಬೆಳೆಯನ್ನು ನಾಶಮಾಡುವ ಮಹಾಉಪದ್ರವಿ ಕೀಟ. ಬಟಾಟೆ ಗಿಡದ ಎಲೆಗಳನ್ನು
ತಿಂದು ತೇಗುವ ಇವು ಕೀಟನಾಶಕಗಳಿಗೂ ನಿರೋಧಕತೆ ವೃದ್ಧಿಸಿಕೊಂಡಿವೆ. ಇಂತಹ ಸಂದರ್ಭದಲ್ಲಿ RNAi ಬಳಸಿ
ಕೀಟ ಹತೋಟಿ ಮಾಡಬಹುದು. ವಿಜ್ಞಾನಿಗಳು ಮೊದಲು ಕೀಟದ ಜೀರ್ಣಕ್ರಿಯೆಯಂತ ಅಗತ್ಯ ಚಟುವಟಿಕೆಯನ್ನು ನಿಯಂತ್ರಿಸುವ
ಗುಣಾಣುವನ್ನು ಪತ್ತೆಹಚ್ಚುತ್ತಾರೆ. ಆ ಗುಣಾಣು ಕೋಡ್ ಮಾಡುವ mRNAಗಳನ್ನು ನಿಷ್ಕ್ರಿಯಗೊಳಿಸುವುದರಿಂದ
ಕೀಟ ಸಾವಿಗೀಡಾಗುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅದನ್ನೇ ಗುರಿಯಾಗಿಸಿ ಸ್ಮಾಲ್RNAಗಳನ್ನು
ವಿನ್ಯಾಸಗೊಳಿಸಿ ಸಸ್ಯದಲ್ಲಿ ಸೇರಿಸುತ್ತಾರೆ. ಸಸ್ಯದ
ಭಾಗವನ್ನು ತಿಂದಿದ್ದೇ ಸ್ಮಾಲ್RNAಗಳು ಕೀಟದ ದೇಹ ಸೇರಿ ಜೀರ್ಣಕ್ರಿಯೆಗೆ ಅಡ್ಡಿಪಡಿಸಿ ಕೀಟದ ಸಾವಿಗೆ
ಕಾರಣವಾಗುತ್ತವೆ. ಇದನ್ನೂ ಸಹಿತ ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ.
ಹಾಗಾದರೆ
ಸ್ಮಾಲ್RNAಗಳನ್ನು ಸಸ್ಯಗಳಲ್ಲಿ ಸೇರಿಸುವುದು ಹೇಗೆ!? ಸಮಸ್ಯೆ ಇರುವುದು ಇಲ್ಲಿಯೇ. ಸ್ಮಾಲ್RNAಗಳ
ಪ್ರಭಾವ ಶಾಶ್ವತವಾಗಬೇಕೆಂದರೆ ಅವು ಸಸ್ಯದ ಜೀನ್ ನ ಭಾಗವಾಗಬೇಕು. ಅಂದರೆ ಕುಲಾಂತರಿಗಳನ್ನು ಪಡೆದ
ಹಾಗೆ. ಮತ್ತೆ ಇಲ್ಲಿ ಗೊಂದಲ ರಗಳೆ. ಬೇರೆ ದಾರಿಯೇನೆಂದು ಯೋಚಿಸಿದಾಗ ಹೊಳೆಯುವುದು ಸ್ಮಾಲ್RNAಗಳ
ಸಿಂಪಡಣೆ ವಿಧಾನ.
ಸಸ್ಯಗಳಲ್ಲಿ
ಲಸಿಕೆ ಸಾಧ್ಯವೇ
ಸಸ್ಯಗಳ
ಪ್ರತಿರಕ್ಷಣಾ ವ್ಯವಸ್ಥೆ ಮನುಷ್ಯರಂತಲ್ಲ. ಮನುಷ್ಯರ ಪ್ರತಿರಕ್ಷಣಾ ವ್ಯವಸ್ಥೆಗೆ ಹಿಂದಿನ ಸೋಂಕುಗಳನ್ನು
ನೆನಪಿಟ್ಟುಕೊಳ್ಳುವ ವಿಶೇಷ ಶಕ್ತಿಯಿದೆ. ಹಳೆಯ ಸೋಂಕು ಮತ್ತೊಮ್ಮೆ ಉಂಟಾದಾಗ ಬಲವಾದ ಪ್ರತಿಕ್ರಿಯೆ
ನೀಡಲು ಈ ಶಕ್ತಿ ಸಹಕಾರಿ. ಸೋಂಕಿನ ವಿರುದ್ಧ ದಾಳಿಗೆ ಪ್ರತಿಕಾಯಕಗಳು (ಆಂಟಿಬಾಡಿ), ಟಿ-ಕೋಶ, ಬಿ-ಕೋಶ
ಎಂಬ ವಿಶೇಷ ಅಸ್ತ್ರಗಳಿವೆ. ಹಾಗಾಗಿ ಮನುಷ್ಯರಲ್ಲಿ ʼಲಸಿಕೆʼ ಎನ್ನುವುದು ಪರಿಣಾಮಕಾರಿ ವಿಧಾನ. ಸಸ್ಯಗಳಲ್ಲಿ
ಸೋಂಕನ್ನು ನೆನಪಿಟ್ಟುಕೊಳ್ಳುವ ಶಕ್ತಿಯಿಲ್ಲ. ಹಾಗಾಗಿ ಲಸಿಕೆ ನಿಷ್ಪ್ರಯೋಜಕ. ರೋಗ-ಕೀಟಗಳನ್ನು ಗುರಿಯಾಗಿಸಿ
ಆಗಾಗ ಪ್ರತಿರೋಧಕಗಳ ಸಿಂಪಡಣೆ ಮಾಡುವುದೇ ಬದಲಿ ಮಾರ್ಗ. ಸ್ಮಾಲ್RNAಗಳನ್ನು ಸಸ್ಯಗಳ ಮೇಲ್ಮೈಗೆ ಸಿಂಪಡಿಸುವುದು;
ಅಥವಾ ಬೇರುಗಳ ಮೂಲಕ ಸಸ್ಯಗಳ ಶರೀರದಲ್ಲಿ ಹೀರಿಕೆಯಾಗುವಂತೆ ಮಾಡಿ ಸರ್ವವ್ಯಾಪಿಯಾಗಿಸುವುದು; ಆ ಮೂಲಕ
ರೋಗ ಕೀಟಗಳ ನಿಯಂತ್ರಣ ಮಾಡುವ ವಿಧಾನದ ಬಗ್ಗೆ ಸಂಶೋಧನೆಯಾಗುತ್ತಿದೆ. ಇದು ಹೇಳಿದಷ್ಟು ಸುಲಭವಾದ ವಿಷಯವಲ್ಲ.
ಸ್ಮಾಲ್RNAಗಳು ಹೊರಗಿನ ವಾತಾವರಣಕ್ಕೆ ತುಂಬಾ ಸೂಕ್ಷ್ಮ ಸಂವೇದಿಗಳು, ಅವುಗಳ ಸ್ಥಿರತೆಯ ನಿರ್ವಹಣೆ
ಕಷ್ಟಕರ. ಸ್ಪರ್ಧಾತ್ಮಕ ವೆಚ್ಚದಲ್ಲಿ ಇವುಗಳ ಅಭಿವೃದ್ಧಿ ಉತ್ಪಾದನೆಯೂ ಬಹುದೊಡ್ಡ ಸವಾಲು.
ಮನುಷ್ಯರಲ್ಲಿ
ಸ್ಮಾಲ್RNAಗಳನ್ನು ಬಳಸುವ RNAiಆಧಾರಿತ ಚಿಕಿತ್ಸೆ ಇತ್ತೀಚಿನ ದಿನದಲ್ಲಿ ವಾಸ್ತವವಾಗಿದೆ. ನ್ಯಾನೋ
ಅಣುಗಳು ಚುಚ್ಚುಮದ್ದುಗಳ ಮೂಲಕ ಸ್ಮಾಲ್RNAಗಳನ್ನು ದೇಹದೊಳಕ್ಕೆ ಪರಿಚಯಿಸಿ ರೋಗ ಗುಣಪಡಿಸುವ ವಿಧಾನಗಳನ್ನು
ಮುಂದುವರೆದ ದೇಶಗಳು ಅನುಸರಿಸುತ್ತಿವೆ. ಕ್ಯಾನ್ಸರ್ ಮತ್ತು ವಂಶಪಾರಂಪರಿಕ ರೋಗಗಳ ಚಿಕಿತ್ಸೆಯಲ್ಲಿ
ಹೆಚ್ಚಿನ ಬಳಕೆಯಲ್ಲಿವೆ. ಜೀನ್ ಮಾರ್ಪಾಡು ಮಾಡದ ಈ ವಿಧಾನ ಸುರಕ್ಷಿತವೂ ಆಗಿದೆ. ಸಸ್ಯಗಳಲ್ಲೂ ಮುಂದೊಂದು
ದಿನ ಇವುಗಳ ಬಳಕೆ ವ್ಯಾಪಕವಾದರೂ ಆಶ್ಚರ್ಯವಿಲ್ಲ.
Comments
Post a Comment