ಗೋಡೆಗೆ ಹಸುರಿನ ಅಪ್ಪುಗೆ
ಹಾರುತ ದೂರಾ ದೂರಾ, ಮೇಲೆರುವ ಬಾರಾ ಬಾರಾ… ಹೋಲ್ಡಾನ್! ಇದು ಬೇರೆ ಸನ್ನಿವೇಶ, ಇಲ್ಲಿ ನಟನಟಿ ಕೈಕೈ ಹಿಡಿದು ಸಾಗುವುದು ಚಂದಿರ ತಾರೆ ಆಗಲಲ್ಲ, ಸೂರ್ಯನ ಸ್ಪರ್ಶವ ಸವಿಯಲು. ಯಾರೀ ನಟನಟಿ ಎಂದೇ? ಗಾರ್ಡನ್ನಿಗರಿಗೆ ಸಸ್ಯಗಳನ್ನು ಬಿಟ್ಟು ಮತ್ಯಾರಾದರೂ ಸೆಲೆಬ್ರಿಟಿ ಆಗಿರಲು ಸಾಧ್ಯವೇ!. ಉದ್ಯಾನವನವೆಂಬ ನಾಟಕರಂಗದ ಇಂದಿನ ನಾಯಕಿ ಲತೆ, ಬೋರಿಂಗ್ ಕಾಂಕ್ರೀಟು ಗೋಡೆಗೆ ಹಸಿರು ಮೆತ್ತುವ ಚಾರುಲತೆ. ಒಗಟು ಪಕ್ಕಕ್ಕಿರಿಸಿ ನೇರವಾಗಿ ಹೇಳುವುದಾದರೆ ಗೋಡೆಗೆ ಹಬ್ಬುವ ʼವಾಲ್ ಕ್ಲಿಂಗಿಂಗ್ ಕ್ಲೈಂಬರ್ಸ್ʼ.
ಗಾರ್ಡನ್ನಿಗರಿಗೆ ಇಷ್ಟವಾದ ಸಸ್ಯವಿಧಗಳಲ್ಲಿ ಬಳ್ಳಿಗಳೂ ಒಂದು. ಮುಂಬೈಮಲ್ಲಿ, ಶಂಖಪುಷ್ಪ, ಪ್ಯಾಷನ್ ಫ್ಲವರ್, ಬ್ಲೀಡಿಂಗ್ ಹಾರ್ಟ್, ಹೀಗೆ ಮನೆಯ ಮುಂದೆ ಹತ್ತಾರು ಹೂಬಿಡುವ ಬಳ್ಳಿಗಳನ್ನು ಹಬ್ಬಿಸುವುದನ್ನು ನೋಡಿರಬಹುದು. ಆದರೆ ಹೂ ಬಿಡದಿದ್ದರೂ ರೊಮಾಂಟಿಕ್ ಆಗಿ ಗೋಡೆಯನ್ನು ತಬ್ಬುತ್ತಾ ಮೇಲೇರುವ ಹಸಿರು ಬಳ್ಳಿಗಳನ್ನು ಕಂಡಿದ್ದೀರಾ? ಹೀಗೆ ಸುಮ್ಮನೆ ಬೆಂಗಳೂರಿನ ʼಪಾಶ್ʼ ಬೀದಿಗಳಲ್ಲಿ ಸುತ್ತುತ್ತಾ ಸಾಗಿದರೆ ಗೋಡೆಯೋ ಗಿಡವೋ ಎಂದು ಭ್ರಮಿಸುವಂತೆ ಕಣ್ಣುಕುಕ್ಕುವ ಈ ಸಸ್ಯಗಳು ಯಾವುದಿರಬಹುದೆಂದು ಉದ್ಘರಿಸುವ ಮುನ್ನ ಅವುಗಳ ಬಗ್ಗೆ ತಿಳಿದಿರಲಿ.
· ಫೈಕಸ್ ರೆಪೆನ್ಸ್ ಅಥವಾ ಫೈಕಸ್ ಪ್ಯುಮಿಲಾ: ʼಕ್ರೀಪಿಂಗ್ ಫಿಗ್ʼ ಎಂದೇ ಕರೆಯಲ್ಪಡುವ ಈ ಬಳ್ಳಿ ಆಲದ ಜಾತಿಗೆ ಸೇರಿದ್ದು. ಪುಟ್ಟ ಹೃದಯಾಕಾರದ ಎಲೆಗಳುಳ್ಳ ನಿತ್ಯಹಸಿರಿನ ಈ ಬಳ್ಳಿಯನ್ನು ಸಾಮಾನ್ಯವಾಗಿ ಓಂ, ಸ್ವಸ್ತಿಕ್, ಹೃದಯದ ಹೀಗೆ ವಿವಿಧ ವಿನ್ಯಾಸದಲ್ಲಿ ಗೋಡೆಗೆ ಹಬ್ಬಿಸಲಾಗುತ್ತದೆ. ಚುರುಕು ಬೆಳವಣಿಗೆಗೆ ಹೆಸರುವಾಸಿಯಾಗಿರುವ ಪ್ಯುಮಿಲಾ ದೊಡ್ಡ ಗೋಡೆಗಳನ್ನೂ ಶೀಘ್ರವಾಗಿ ಮುಚ್ಚಬಲ್ಲವು.
· ಹೆಡೆರಾ ಹೆಲಿಕ್ಸ್: ʼಇಂಗ್ಲೀಷ್ ಐವಿʼ ಎಂದು ಕರೆಯಲ್ಪಡುವ ಈ ಸಸ್ಯ ಬಹಳ ವರ್ಷಗಳಿಂದ ಭಾರತಕ್ಕೆ ಪರಿಚಿತ. ಯಾವುದೇ ಜಾಗಕ್ಕೂ ಹೊಂದಿಕೊಳ್ಳಬಹುದೆಂಬ ಕಾರಣಕ್ಕೆ ಜನಪ್ರಿಯ. ಡಾರ್ಜಿಲಿಂಗ್‌ನ ತಂಪು ಪ್ರದೇಶದ ಹಳೆಯ ಕಾಲದ ಕಲ್ಲಿನ ಗೋಡೆಗಳ ಸಂದಿನಲ್ಲಿ ಬೇರೂರಿ ಬೆಳೆಯುತ್ತಿರುವ ಈ ಬಳ್ಳಿ ಇಂಗ್ಲೀಷರ ಗುರುತೇ ಸೈ. ನೋಡಲು ತೊಂಡೆ ಬಳ್ಳಿಯಂತೆ ಎಲೆ ಹೊಂದಿರುವ ಈ ಸಸ್ಯ ಬೆಳವಣಿಗೆಯಲ್ಲಿ ಸ್ವಲ್ಪ ತೀವ್ರಗಾಮಿ. ಲಕ್ಷ್ಯ ವಹಿಸದಿದ್ದರೆ ರಾಕ್ಷಸಾಕಾರವಾಗಿ ಬೆಳೆಯಬಲ್ಲದು.
· ರಾಪಿಡೋಫೋರಾ ಹಾಯಿ: ಸರ್ಪಸುತ್ತಿನಂತೆ ಹಬ್ಬುವ ಈ ಬಳ್ಳಿಗೆ ʼಶಿಂಗಲ್ಸ್ ಪ್ಲಾಂಟ್ʼ ಎಂದೇ ಹೆಸರು. ಮಳೆಕಾಡುಗಳಲ್ಲಿ ಮರಗಳಿಗೆ ಹಬ್ಬಿಬೆಳೆಯುವ ಈ ಪರಾವಲಂಬಿಗೆ ಆರಂಭದಲ್ಲಿ ಆಧಾರ ಬೇಕು. ಫಿಲೋಡೆಂಡ್ರಾನ್‌ಗಳನ್ನೇ ಹೋಲುವ ಈ ಬಳ್ಳಿ ಮನೆಗೆ ಉಷ್ಣವಲಯದ ಟ್ರಾಪಿಕಲ್ ಲುಕ್ ನೀಡಬಲ್ಲದು.
· ಮೇಲಿನ ಮೂರು ಜನಪ್ರಿಯ ಕ್ಲೈಂಬರ್ಸ್ ಜೊತೆಗೆ ಮನಿ ಪ್ಲಾಂಟ್ ಕುಟುಂಬಕ್ಕೆ ಸೇರಿದ ಕೆಲ ಸ್ಕಿಂಡಾಪ್ಸಿಸ್‌ಗಳು ಮತ್ತು ಕರಿಮೆಣಸಿನ ಕುಟುಂಬಕ್ಕೆ ಸೇರಿದ ಅಲಂಕಾರಿ ಪೈಪರ್‌ಗಳನ್ನೂ ಗೋಡೆಗೆ ಹಬ್ಬಿಸಲಾಗುತ್ತದೆ.
ಈ ಎಲ್ಲಾ ಬಳ್ಳಿಗಳೂ ಭಾಗಶಃ ಅಥವಾ ಪೂರ್ಣ ನೆರಳಿನಲ್ಲಿ ಸೊಂಪಾಗಿ ಬೆಳೆಯಬಲ್ಲವು. ನೆಲದಲ್ಲಿರುವ ಮೂರಬೇರು ಆಹಾರಕ್ಕಾದರೆ ಗೋಡೆಗೆ ಅಂಟಿರುವ ಹುಸಿಬೇರುಗಳು ಆಧಾರಕ್ಕೆ. ಒಮ್ಮೆ ನೆಟ್ಟ ನಂತರ ಇವು ತಮ್ಮ ಪಾಡಿಗೆ ತಾವು ಬೇರೂರುತ್ತಾ ಹಸಿರ ಹೊದಿಕೆ ಹೊದಿಸಬಲ್ಲವು; ನಂತರದ ನಿರ್ವಹಣೆಯೂ ಕನಿಷ್ಠ. ಮೃದುಸ್ವಭಾವದ ಇವ್ಯಾವುವೂ ಗೋಡೆಗಳಿಗೆ ಹಾನಿ ಮಾಡುವ ಜಾತಿಗಳಲ್ಲ. ಆದರೂ ದೈತ್ಯಾಕಾರದಲ್ಲಿ ಬೆಳೆಯದಂತೆ ಕಾಳಜಿ ಅಗತ್ಯ. ಇವೆಲ್ಲಾ ಸಸ್ಯಗಳು ನಮ್ಮ ನೆಲದಲ್ಲಿ ನೆಲೆ ಕಂಡ ವಿದೇಶಿಗರು. ಹಾಗಾಗಿ ಅಪರೂಪದ ಈ ಸಸ್ಯಗಳನ್ನು ಕೊಳ್ಳಲು ಕೊಂಚ ಕಷ್ಟವೇ. ಆದರೂ ಜಡಗೋಡೆಗಳಿಗೆ ತಾಜಾತನದ ಸ್ಪರ್ಶದ ಜೊತೆ ಉಷ್ಣನಿರೋಧಕತೆಯ ಲಾಭ ಯಾರಿಗುಂಟು ಯಾರಿಗಿಲ್ಲ!
Comments
Post a Comment