ಕುಲಾಂತರಿ ಹಳೆಯದು ಇದು ಕ್ರಿಸ್ಪರ್ ಕ್ರಾಂತಿಯ ಕಾಲ
ಕಳೆದೆರಡು
ತಿಂಗಳಿನಿಂದ ಶ್ರಮಜೀವಿ ಪತ್ರಿಕೆ ಮತ್ತು ನೇರ ಪ್ರಸಾರಗಳಲ್ಲಿ ಕುಲಾಂತರಿ ಬೆಳೆಗಳ
ಬಗ್ಗೆ ಚರ್ಚೆ-ವಿಚರ್ಚೆ ನಡೆಯುತ್ತಿತ್ತು. ಸಾರ್ವಜನಿಕ ವಲಯದಲ್ಲಿ ಈ ವಾದ ವಿವಾದ ಇಂದು ನಿನ್ನೆಯದಲ್ಲ; ದಶಕಗಳಷ್ಟು ಹಳೆಯದು; ತಾರ್ಕಿಕ ಅಂತ್ಯವಿಲ್ಲದ್ದು. ಸಾರ್ವಜನಿಕರೇನು,
ತಜ್ಞ ವಿಜ್ಞಾನಿಗಳಲ್ಲೂ ಈ ಬಗ್ಗೆ ಸ್ಪಷ್ಟತೆಯಿಲ್ಲ. ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು ‘ಧಾರಾ’
ಎಂಬ ಕುಲಾಂತರಿ ಸಾಸಿವೆ ತಳಿಯ ಕೃಷಿಗೆ ಸರ್ವೊಚ್ಛ ನ್ಯಾಯಾಲಯ ಇಬ್ಬಗೆಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ.
ಧಾರಾದ ಧ್ಯೇಯ
ಸಾಸಿವೆ
ಉತ್ತರ ಭಾರತದ ಸಾಂಪ್ರದಾಯಿಕ ಬೆಳೆ. ರಾಜಸ್ಥಾನ, ಪಂಜಾಬ್, ಹರಿಯಾಣಾ, ಮಧ್ಯ ಪ್ರದೇಶಗಳಲ್ಲಿ ಹತ್ತಿರತ್ತಿರ 100 ಲಕ್ಷ ಹೆಕ್ಟೇರ್ ಜಾಗದಲ್ಲಿ ಸಾಸಿವೆ ಬೆಳೆಯಲಾಗುತ್ತದೆ.
ಅಲ್ಲಿಯ ಅಡುಗೆ ಊಟದಲ್ಲಿ ಸಾಸಿವೆ ಎಣ್ಣೆಯ ಬಳಕೆ ಹೆಚ್ಚು. ಆದರೇನು ನಮ್ಮ ದೇಶ ಖಾದ್ಯ ತೈಲ ಉತ್ಪಾದನೆಯಲ್ಲಿ
ಬಹಳ ಹಿಂದೆ. ಬಳಕೆಯ ಅರ್ಧದಷ್ಟೂ ನಮ್ಮ ಉತ್ಪಾದನೆಯಿಲ್ಲ; 60% ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗೆ ಆಮದು ಮಾಡಿಕೊಂಡು ಸೇವಿಸುತ್ತಿರುವ
ಸೋಯಾ ಎಣ್ಣೆ, ಕೆನೋಲಾ ಎಣ್ಣೆಗಳು ಕುಲಾಂತರಿ ತಳಿಗಳಿಂದ ಉತ್ಪಾದಿಸಿದ್ದು ಎನ್ನುವುದು ಬಾಯಿ ಬಿಟ್ಟು ಹೇಳದಿದ್ದರೂ ಸತ್ಯ. ಜಾಗತಿಕವಾಗಿ
ಸಾಸಿವೆಯ ಸರಾಸರಿ ಉತ್ಪಾದಕತೆ ಹೆಕ್ಟೇರಿಗೆ 2 ಟನ್.
ಆದರೆ ನಮ್ಮದು 1.2
ಟನ್. ನಮ್ಮಲ್ಲಿ ಹೆಚ್ಚು ಇಳುವರಿಯ ಉತ್ಕೃಷ್ಟ ಸುಧಾರಿತ ತಳಿಗಳಿಲ್ಲ ಎನ್ನುವುದು ಈ ಕಳಪೆ ಪ್ರದರ್ಶನಕ್ಕೊಂದು
ಕಾರಣ. ಸಾಸಿವೆಯಲ್ಲಿ ಇಂತಹ ತಳಿಗಳ,
ವಿಶೇಷವಾಗಿ ಸಂಕರಣಗಳ
ಅಭಿವೃದ್ಧಿಗೂ ಸಸ್ಯಶಾಸ್ತ್ರೀಯವಾದ ತೊಡಕುಗಳಿವೆ. ಇಳುವರಿ ಹೆಚ್ಚಿಸುವ ದೃಷ್ಟಿಯಿಂದ ಕುಲಾಂತರಿ ಸಂಕರಣಗಳು
ಆಶಾಕಿರಣವಾಗಬಹುದೆಂಬ ಭರವಸೆ ಅದನ್ನು ಅಭಿವೃದ್ಧಿ ಪಡಿಸಿದ ವಿಜ್ಞಾನಿ ಬಳಗದ್ದು. ಹೀಗೆ ಸಾಸಿವೆ ಎಣ್ಣೆ
ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುವುದು ಧಾರಾದ ಧ್ಯೇಯ.
ನ್ಯಾಯಾಲಯಕ್ಕೆ ಬಂದ ಧಾರಾ
ದೆಹಲಿ
ವಿಶ್ವವಿದ್ಯಾಲಯದ ವಿಜ್ಞಾನಿಗಳು ಧಾರಾ ತಳಿಯನ್ನು ಅಭಿವೃದ್ಧಿ ಪಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು
2002ರಲ್ಲಿ! ಶೋಧನೆ, ಪರಿಶೋಧನೆ, ಪ್ರಯೋಗ, ಪರೀಕ್ಷೆ ಎಲ್ಲಾ ಹಂತಗಳನ್ನು ದಾಟಿ ಅವರು ಜಿ.ಇ.ಎ.ಸಿ.ಗೆ ಅರ್ಜಿ ಹಾಕಿ ಕಾದುಕೂತು ದಶಕವೇ
ಆಗಿದ್ದಿರಬಹುದು. ಜಿ.ಇ.ಎ.ಸಿ. 2017 ರಲ್ಲಿ
ಕ್ಷೇತ್ರ ಪ್ರಯೋಗಗಳಿಗೆ ಒಪ್ಪಿಗೆ ನೀಡಿತ್ತು. ಏನೂ ಸಮಸ್ಯೆಯಿಲ್ಲವೆಂದು ಕಂಡಾಗ 2022 ರಲ್ಲಿ ಪಾರಿಸಾರಿಕ ಬಿಡುಗಡೆಗೂ (environmental
release) ಅಸ್ತು ಎಂದಿತ್ತು. ಆಹಾರ ಸುರಕ್ಷತೆ, ಮಣ್ಣಿನ ಆರೋಗ್ಯ, ಜೇನ್ನೊಣಗಳ ಸಂತತಿ, ಪರಿಸರದ ಸುರಕ್ಷತೆ ದೃಷ್ಟಿಯಿಂದ
ಮೌಲ್ಯಮಾಪನಗಳಲ್ಲಿ ಸಮಸ್ಯೆಯೇನು ಕಂಡಿರಲಿಲ್ಲ. ಇಲ್ಲಿಗಾಯಿತು ದ್ವಿದಶಕ. ಇಷ್ಟಾದ ಮೇಲೆ ಜಿ.ಇ.ಎ.ಸಿ.ಯ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಿ
ಸಾಮಾಜಿಕ ಕಾರ್ಯಕರ್ತೆ ಅರುಣಾ ರೋಡ್ರಿಗ್ಸ್ ನ್ಯಾಯಾಲಯದ ಮೆಟ್ಟಿಲೇರಿದರು. ಜುಲೈ 2024 ರಲ್ಲಿ
ಸುಪ್ರೀಂ ಕೋರ್ಟ್ ಧಾರಾ ಬಳಕೆಯ ಬಗ್ಗೆ ವಿಭಜಿತ ತೀರ್ಪು ನೀಡಿತು. ನ್ಯಾಯಮೂರ್ತಿ ಬಿವಿ ನಾಗರತ್ನ ಕುಲಾಂತರಿ
ಬೆಳೆಗಳ ಬಗ್ಗೆ ಸದ್ಯಕ್ಕಿರುವ ರಾಷ್ಟ್ರೀಯ ನೀತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿಡುಗಡೆಯನ್ನು ವಿರೋಧಿಸಿದರೆ, ನ್ಯಾಯಮೂರ್ತಿ ಸಂಜಯ್ ಕರೋಲ್ ಕೃಷಿ ಮತ್ತು ಆಹಾರ
ಭದ್ರತೆಗೆ ಅದರ ಸಂಭಾವ್ಯ ಪ್ರಯೋಜನಗಳನ್ನು ಪ್ರಸ್ತಾಪಿಸಿ ಅದನ್ನು ಬೆಂಬಲಿಸಿದ್ದರು. ಮತ್ತದೇ ಆಚೆಗೂ
ಇಲ್ಲದ ಈಚೆಗೂ ಇಲ್ಲದ ಅಡ್ಡಗೋಡೆಯ ಮೇಲೆ ದೀಪ! ಈ ವಿಷಯವನ್ನು ಈಗ ಹೆಚ್ಚಿನ ಪರಿಗಣನೆಗಾಗಿ ಭಾರತದ ಮುಖ್ಯ
ನ್ಯಾಯಮೂರ್ತಿಗಳಿಗೆ ಉಲ್ಲೇಖಿಸಲಾಗಿದೆ. ನವೆಂಬರಿನಲ್ಲಿ ಮುಂದಿನ ವಿಚಾರಣೆ ನಿಗದಿಯಾಗಿದೆ.
ಕುಲಾಂತರಿ
ತಂತ್ರಜ್ಞಾನ ಸಂಶೋಧನೆಯಾಗಿ ಅರ್ಧ ಶತಕ ಕಳೆಯಿತು. ಎಷ್ಟೋ ರಾಷ್ಟ್ರಗಳು ಎಷ್ಟೆಷ್ಟೋ ಕುಲಾಂತರಿಗಳನ್ನು
ಮೂಸಿ ಬಿಟ್ಟಾಯಿತು. ನಾವೂ ಬಿ.ಟಿ. ಹತ್ತಿ ಬೆಳೆದಾಯಿತು. ಕುಲಾಂತರಿಗಳ ಸುದೀರ್ಘ ಬಳಕೆಯ ಸಾಧಕ ಭಾದಕಗಳ
ಬಗ್ಗೆಯೂ ಸಾಕಷ್ಟು ಮಾಹಿತಿ ಸಿಕ್ಕಾಯಿತು. ಇದೊಂದು ಕ್ರಾಂತಿಕಾರಿ ತಂತ್ರಜ್ಞಾನ ಎನ್ನುವ ಬಗ್ಗೆ ಎರಡು
ಮಾತಿಲ್ಲ. ಆದರೆ ಅವುಗಳ ಪ್ರಸ್ತುತತೆಯನ್ನೂ ಪ್ರಶ್ನಿಸುವ ಹಲವಾರು ತಂತ್ರಜ್ಞಾನಗಳು ದಾಪುಗಾಲಿಡುತ್ತಿರುವ
ಕಾಲವಿದು. ಅಕ್ಷರ ಕಲಿಯದವರೂ ಸಲೀಸಾಗಿ ಸ್ಮಾರ್ಟ್ ಫೋನ್ ಬಳಸುತ್ತಿರುವ ಈ ಯುಗದಲ್ಲಿ ಹಳೆ ಕಾಲದ ನೋಕಿಯಾ
ಸೆಟ್ಟನ್ನು ಕುಟ್ಟುತ್ತಿರುವವರನ್ನು ಕಂಡರೆ ನಿಮಗೇನನ್ನಿಸುತ್ತೇ!?
ಜೈವಿಕ ತಂತ್ರಜ್ಞಾನದ ನಾಗಾಲೋಟ
‘ಜೈವಿಕ
ತಂತ್ರಜ್ಞಾನ’ - 20 ನೇ ಶತಮಾನಕ್ಕೆ ಇಂತದ್ದೊಂದು ವಿಜ್ಞಾನ
ವಿಭಾಗ ಅಸ್ತಿತ್ವಕ್ಕೆ ಬಂದಾಗಿನಿಂದ ವೈದ್ಯಕೀಯ ಮತ್ತು ಕೃಷಿ ಕ್ಷೇತ್ರ ಊಹೆಗೂ ಮೀರಿದ ಅಭಿವೃದ್ಧಿ
ದಾಖಲಿಸಿದೆ. ಕಾರಣ ಇಲ್ಲಿ ನಡೆಯುತ್ತಿರುವ ಅದ್ಭುತ ಆವಿಷ್ಕಾರಗಳು. 1902 ರಲ್ಲಿ ಪರಿಚಯವಾದ ಅಂಗಾಂಶ ಕೃಷಿ ಇಂದಿಗೂ
ತೋಟಗಾರಿಕಾ ಸಸ್ಯಾಭಿವೃದ್ಧಿಯ ಪ್ರಮುಖ ತಂತ್ರವಾಗಿರುವುದರ ಬಗ್ಗೆ ನಮಗೆಲ್ಲಾ ತಿಳಿದಿದೆ. ಜೈವಿಕ ತಂತ್ರಜ್ಞಾನದ ಮಹತ್ವದ
ಸಂಶೋಧನೆಗಳಾಗಿದ್ದು 20 ನೇ
ಶತಮಾನದ ಅಂಚಿಗೆ. 1980 ರ
ಸಮಯದಲ್ಲಿ ಜನನವಾದ ವಂಶವಾಹಿಗಳನ್ನು ಮಾರ್ಪಡಿಸುವ ‘ಜೆನೆಟಿಕ್ ಎಂಜಿನಿಯರಿಂಗ್’ ವಿಧಾನಗಳು ತಳಿ ಅಭಿವೃದ್ಧಿಯಲ್ಲಿ
ಹೊಸ ಪರ್ವವನ್ನೇ ಸೃಷ್ಟಿಸಿತು. ಜೆನೆಟಿಕ್ ಎಂಜಿನಿಯರಿಂಗ್ ನ ಫಲವೇ ಕುಲಾಂತರಿಗಳು. ಇವುಗಳಿಂದ ಕೃಷಿ
ಬೆಳೆಗಳಲ್ಲಿ ಕೀಟ-ರೋಗ
ನಿರೋಧಕತೆ, ಬರ ಸಹಿಷ್ಣುತೆ, ಪೌಷ್ಟಿಕಾಂಶ ವರ್ಧನೆ ಮುಂತಾದ ಅಪೇಕ್ಷಿತ ಗುಣಗಳನ್ನು ಸಾಧಿಸಲು ಸಾಧ್ಯವಾಗಿದ್ದು
ಈಗ ಇತಿಹಾಸ. ಕುಲಾಂತರಿಗಳ ಬಗ್ಗೆ ಸ್ವೀಕಾರ-ನಕಾರ ನಮ್ಮ ಅಭಿಪ್ರಾಯ ಏನೇ ಇರಲಿ; ಬೇರೊಂದು ಜೀವಿಯ
ವಂಶವಾಹಿಗಳನ್ನು ಕತ್ತರಿಸಿ ಜೋಡಿಸಿ ಫಲಾಪೇಕ್ಷಿಸುವ ಮಾನವನ ಕಲ್ಪನೆ, ಯೋಚನೆ, ಸೃಜನಶೀಲತೆ ಯಾವ ಮಟ್ಟದ್ದಿರಬಹುದು!
ಇಂದಿನ
ಜೈವಿಕ ತಂತ್ರಜ್ಞಾನವಂತೂ ಇದಕ್ಕೂ ಮುಂದೆ ಸಾಗಿದೆ. ಈಗೆಲ್ಲಾ ಬೇರೊಂದು ಜೀವಿಯಿಂದ ವಂಶವಾಹಿ ಕತ್ತರಿಸಿ
ಅಂಟಿಸುವ ಪ್ರಮೇಯವೇ ಇಲ್ಲದ ವಿಧಾನಗಳೂ ಆವಿಷ್ಕಾರವಾಗಿವೆ. ಸಸ್ಯದ ವಂಶವಾಹಿಯಲ್ಲೇ ಬದಲಾವಣೆ ಮಾಡುವ,
ವಿವಾದಾತ್ಮಕವಲ್ಲದ ಆರ್.ಎನ್.ಎ.
ಸೈಲೆನ್ಸಿಂಗ್ (CRISPR-cas9) ಜೀನ್ ಎಡಿಟಿಂಗ್ ವಿಧಾನಗಳು ಪ್ರಚಲಿತವಾಗುತ್ತಿವೆ.
ಇನ್ನೂ ಮುಂದಕ್ಕೆ ಹೋಗಿ ವಂಶವಾಹಿಗಳಲ್ಲೂ ಬದಲಾವಣೆ ಮಾಡದೆ, ಪರಿಸರಕ್ಕೂ ಅಡ್ಡಪರಿಣಾಮ ತರದೆ ಕೀಟ ರೋಗ
ಸಮಸ್ಯೆಯ ಉಪಶಮನಕ್ಕಾಗಿ ಆ.ಎನ್.ಎ.
ಸಿಂಪಡಣೆಯಂತಹ ತಂತ್ರಜ್ಞಾನಗಳೂ
ಬಂದಿವೆ. ಇವೆಲ್ಲಾ ನಮಗೆ ಸಂಬಂಧವಿಲ್ಲದಂತೆ ಯಾವುದೋ ದೇಶದ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವ ಸಂಶೋಧನೆಯಲ್ಲ.
ನಮ್ಮದೇ ಐಐಎಚ್ಆರ್ -
ಐಸಿಎರ್ ಸಂಶೋಧನಾ ಕೇಂದ್ರಗಳಲ್ಲಿ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಆಧುನಿಕ
ಸಂಶೋಧನೆಗಳು. ಕೆಲ ದೇಶಗಳಲ್ಲಿ ಈ ಮೂಲಕ ಅಭಿವೃದ್ಧಿ ಪಡಿಸಿದ ತಳಿಗಳು
ವಾಣಿಜ್ಯಿಕ ಕೃಷಿಗೂ
ಇಳಿದಿವೆ. ನಮ್ಮಲ್ಲಿ ಸದ್ಯಕ್ಕೆ ಸಂಶೋಧನೆಯಲ್ಲಷ್ಟೇ.
ಕ್ರಿಸ್ಪರ್ - ಕುಲಾಂತರಿಗಳಲ್ಲ, ವಂಶವಾಹಿ ಮಾರ್ಪಾಡಿತರು
ಸಸ್ಯಗಳ
ವಂಶವಾಹಿಗೆ ಬೇರೊಂದು ಕುಲದ ಜೀವಿಯ (ಬ್ಯಾಕ್ಟೀರಿಯಾ, ವೈರಾಣು, ಇತರೇ ಸಸ್ಯ ಜಾತಿಯ) ವಂಶವಾಹಿಯ ತುಣುಕನ್ನು ಸೇರಿಸಿದರೆ ಅವು ಕುಲಾಂತರಿಗಳು. ಉದಾಹರಣೆ ಧಾರಾ ಸಾಸಿವೆಯಲ್ಲಿ ಬ್ಯಾಸಿಲಸ್
ಅಮಿಲೊಲಿಕ್ವಿಫೇಸಿಯೆನ್ಸ್ (Bacillus
amyloliquefaciens)
ಎಂಬ ಬ್ಯಾಕ್ಟೀರಿಯಾದ
ಮೂರು ಜೀನ್ ಗಳನ್ನು ಅಳವಡಿಸಲಾಗಿದೆ. ಬೇರೊಂದು ಜೀವಿಯ ವಂಶವಾಹಿ ಅಳವಡಿಸಿದ್ದೇ ಇಲ್ಲಿ ತಲೆನೋವು.
ಇವುಗಳ ಬಳಕೆಗೆ ಸಾರ್ವಜನಿಕರ ವಿರೋಧದ ಜೊತೆಗೆ ಪ್ರತಿ
ದೇಶದ್ದೂ ತನ್ನದೇ ಆದ ಕಟ್ಟುನಿಟ್ಟಿನ
ಕಾನೂನೂ ಇದೆ. ಪ್ರಯೋಗಾಲಯದಲ್ಲಿ
ಯಶಸ್ವಿ ಕಂಡರೂ ಇವು ಕ್ಷೇತ್ರಕ್ಕಿಳಿಯುವುದು ಅಪರೂಪವೇ. ಆಧುನಿಕತೆ ಬೇಡ, ಹಳೆಯ ಸಾಂಪ್ರದಾಯಿಕ ತಳಿ
ಅಭಿವೃದ್ಧಿ ಪದ್ಧತಿಯನ್ನೇ ಅನುಸರಿಸೋಣವೆಂದರೆ ಅದು
ಆಮೆಗಿಂತಲೂ ನಿಧಾನ. ಕೆಲಸ ಚುರುಕಾಗಬೇಕು, ಆದರೆ ವಿರೋಧವೂ ಇರಬಾರದು ಎನ್ನುವ ಸವಾಲಿಗೆ ಇಂದಿನ ಜವಾಬು
CRISPR-cas9 (ಕ್ಲಸ್ಟರ್ಡ್ ರೆಗ್ಯುಲರ್ ಇಂಟರ್ ಸ್ಪೇಸ್ಡ್ ಪ್ಯಾಲಿಂಡ್ರೋಮಿಕ್ ಸೀಕ್ವೆನ್ಸ್ – ಕ್ಯಾಸ್ ಪ್ರೋಟಿನ್).
‘ಕ್ರಿಸ್ಪರ್’ ಎಂಬ ಮುದ್ದಾದ ಹೆಸರಿನಿಂದ ಕರೆಯಲ್ಪಡುವ ಈ ತಂತ್ರಜ್ಞಾನ ತನ್ನ ಸರಳತೆ, ನಿಖರತೆ, ಕೈಗೆಟಕುವ
ಬೆಲೆಯ ಕಾರಣ ವಿಜ್ಞಾನಿಗಳ ಮೆಚ್ಚಿನ ಸಾಧನವಾಗಿದೆ.
ಕ್ರಿಸ್ಪರ್
ಏಕಕೋಶಿ ಜೀವಿಗಳಾದ ಬ್ಯಾಕ್ಟೀರಿಯಾಗಳಲ್ಲಿ ನಡೆಯುವ ಒಂದು ನೈಸರ್ಗಿಕ ಕ್ರಿಯೆ. ತಮ್ಮನ್ನು ಕಾಡುವ ವೈರಾಣುಗಳಿಂದ
ಬಚಾವಾಗಲು ಬ್ಯಾಕ್ಟೀರಿಯಾಗಳು ಕಂಡುಕೊಂಡ ರಕ್ಷಣಾ ವ್ಯವಸ್ಥೆಯಿದು. ಬ್ಯಾಕ್ಟೀರಿಯಾ ಮೇಲೆ ವೈರಾಣುವೊಂದು
ದಾಳಿ ಮಾಡಿದೆ ಎಂದುಕೊಳ್ಳಿ. ವೈರಾಣುವಿನ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾ ಅದರ ವಂಶವಾಹಿಯ ಸಣ್ಣ
ತುಂಡನ್ನು ದಾಳಿಯ ನೆನಪಿಗಾಗಿ ತನ್ನ ವಂಶವಾಹಿಯಲ್ಲಿ ಸಂಗ್ರಹಿಸಿಡುತ್ತದೆ – ನೈಸರ್ಗಿಕವಾಗಿ. ಈ ತುಂಡನ್ನೇ
ವಿಜ್ಞಾನದ ಭಾಷೆಯಲ್ಲಿ ಕ್ರಿಸ್ಪರ್ ಎನ್ನಲಾಗುತ್ತದೆ. ಈ ತುಂಡು, ಬ್ಯಾಕ್ಟೀರಿಯಾದ ಸ್ವಂತ ವಂಶವಾಹಿಗಿಂತ ವಿಶಿಷ್ಟ
ಬರಹದ್ದಾಗಿರುತ್ತದೆ. ಮುಂದೊಂದು ದಿನ ಇದೇ ವೈರಾಣು ಆಕ್ರಮಣ ಮಾಡಿದರೆ ಈ ಸಣ್ಣ ತುಂಡಿನ ಮಾರ್ಗದರ್ಶನದಲ್ಲಿ
ಅದನ್ನು ರೋಗಾಣುವೆಂದು ಬ್ಯಾಕ್ಟೀರಿಯಾ ನೆನಪಿಸಿಕೊಳ್ಳುತ್ತದೆ; ಮುಂಚಿಗಿಂತಲೂ ಶೀಘ್ರವಾದ ಪ್ರತಿರೋಧ ಉಂಟಾಗುತ್ತದೆ.
ಈಗ ಬ್ಯಾಕ್ಟೀರಿಯಾ ಕ್ರಿಸ್ಪರ್ ತುಂಡಿನ ನಕಲಿನ ಜೊತೆ Cas9 ಎಂಬ ಪ್ರೋಟಿನ್ ಅನ್ನು ಛೂ ಬಿಟ್ಟು ವೈರಾಣುವಿನ
ವಂಶವಾಹಿಯನ್ನಷ್ಟೇ ಗುರುತಿಸಿ ಕತ್ತರಿಸಿ ಅದನ್ನು ಸಾಯಿಸುತ್ತದೆ. ತನಗೆ ಕೇಡು ಬಗೆದ ವೈರಾಣುವನ್ನು
ಗುರುತಿಟ್ಟುಕೊಂಡು ಅದು ಹಿಂದಿರುಗಿದಾಗ ರಪ್ಪನೆ ಪ್ರತಿಕ್ರಿಯಿಸುವ ಬ್ಯಾಕ್ಟೀರಿಯಾದ ಇರಾದೆ ಇಲ್ಲಿಗೆ
ಸಂಪೂರ್ಣ! ಹೀಗೆ ಕ್ರಿಸ್ಪರ್-ಕ್ಯಾಸ್ ಎನ್ನುವುದು ಕತ್ತರಿಯಂತೆ ಕೆಲಸ ಮಾಡುತ್ತದೆ. ಇದೊಂದು ತೀರಾ
ನಿಖರವಾದ, ನಿರ್ದಿಷ್ವಾದ ಉತ್ಕೃಷ್ಟ ವ್ಯವಸ್ಥೆ.
ಬಹಳ
ವರ್ಷಗಳಿಂದ ಬ್ಯಾಕ್ಟೀರಿಯಾಗಳ ದೇಹದ ಕ್ರಿಸ್ಪರ್ ರಕ್ಷಣಾ ವ್ಯವಸ್ಥೆಯ ಬಗ್ಗೆ ವಿಜ್ಞಾನ ಬಳಗದಲ್ಲಿ
ಅರಿವಿತ್ತು. ಸಾಕಷ್ಟು ಅಧ್ಯಯನವೂ ಆಗಿತ್ತು. ಆದರೆ ಇದರ ಮಹತ್ವ ತಿಳಿದಿದ್ದು 2012ರಲ್ಲಿ; ಜೆನ್ನಿಫರ್
ಡೋಡ್ನಾ ಮತ್ತು ಇಮ್ಯಾನುಯಲ್ ಶಾರ್ಪೆಂಟಿಯರ್ ಎಂಬ ಮಹಿಳಾ ವಿಜ್ಞಾನಿಗಳ ಅತ್ಯದ್ಭುತ ಆವಿಷ್ಕಾರದಿಂದ.
ಬ್ಯಾಕ್ಟೀರಿಯಾಗಳು ಕ್ರಿಸ್ಪರ್ ಮಾರ್ಗದರ್ಶನದಲ್ಲಿ ವೈರಾಣುವಿನ ವಂಶವಾಹಿಯಲ್ಲಿ ನಿರ್ದಿಷ್ಟ ಜಾಗವನ್ನು
ಗುರಿಯಾಗಿಸಿ ಕತ್ತರಿಸಲು ಸಾಧ್ಯವೆಂದರೆ ಇದೇ ವ್ಯವಸ್ಥೆಯನ್ನು ಸಸ್ಯಗಳಲ್ಲಿ ಅನ್ವಯಿಸಬಹುದೇ!? ಅಂದರೆ
ಸಸ್ಯದ ವಂಶವಾಹಿಯಲ್ಲಿ ನಮಗೆ ಬೇಕಾದ ಜಾಗದಲ್ಲಿ ಕತ್ತರಿ ಪ್ರಯೋಗಿಸಿ – ವಂಶವಾಹಿಯ ತುಂಡನ್ನು ಅಳಿಸಿ
ಜೋಡಿಸಬಹುದೇ! ಈ ಸಾಧ್ಯಾಸಾಧ್ಯತೆಗಳಿಂದ ಹೊಸದೊಂದು ಜೀನ್ ಎಡಿಟಿಂಗ್ ತಂತ್ರ ಉದ್ಭವಿಸಿತ್ತು. ವಿಶ್ವಾದ್ಯಂತ
ಹಲವಾರು ಸುಸಜ್ಜಿತ ಪ್ರಯೋಗಾಲಯಗಳಲ್ಲಿ ಅಧ್ಯಯನ ಶುರುವಾಯಿತು. ಕೃಷಿ ಸಂಶೋಧನೆ ದಿಕ್ಕು ದೆಶೆ ಬದಲಿಸಿದ, ಊಹೆಗೂ ನಿಲುಕದ ಈ ಸಂಶೋಧನೆಗೆ 2020 ರಲ್ಲಿ ನೊಬೆಲ್ ಪ್ರಶಸ್ತಿ ಈ ಇಬ್ಬರ ಮುಡಿಗೇರಿತು.
ಸಸ್ಯಗಳ
ವಂಶವಾಹಿಯಲ್ಲೇನು ಬರೆದಿದೆ, ಯಾವ ತುಂಡು ಯಾವ ಕ್ರಿಯೆಯನ್ನು ನಿರ್ದೇಶಿಸುತ್ತದೆ, ಯಾವ ತುಂಡನ್ನು
ಬದಲಾಯಿಸಿದರೆ ಏನಾಗುತ್ತದೆ ಎಂಬೆಲ್ಲಾ ಮಾಹಿತಿಗಳು ಇಂದು ಲಭ್ಯ. ಈ ಮಾಹಿತಿಯನ್ನು ಆಧರಿಸಿ ಸಸ್ಯಗಳ
ವಂಶವಾಹಿಯಲ್ಲೇ ಆಚೀಚೆ ಮಾಡಿ ಬದಲಾವಣೆ ತಂದರೆ ಕೀಟ ರೋಗ ಪ್ರತಿರೋಧಕತೆ, ಪರಿಸರದ ಒತ್ತಡಗಳ ಸಹಿಷ್ಣುತೆ, ಕೊಯ್ಲೋತ್ತರ
ತಾಳಿಕೆ-ಬಾಳಿಕೆ ಸುಧಾರಣೆ,
ಪೌಷ್ಟಿಕಾಂಶ ಸಂವರ್ಧನೆ ಸಾಧ್ಯ. ಏನೇನೋ ಹೇರಾಫೇರಿ ಮಾಡಿ ಪ್ರಕೃತಿಯ ವಿರೋಧವನ್ನೂ ಕಟ್ಟಿಕೊಂಡಂತಾಗಲಿಲ್ಲ.
ಬದಲಿಗೆ ಕೀಟನಾಶಕಗಳ ರಾಸಾಯನಿಕಗಳ ಬಳಕೆಯನ್ನೂ ತಗ್ಗಿಸಬಹುದು. ವಿಶೇಷವಾಗಿ ಪ್ರಸ್ತುತ ಸಮಸ್ಯೆಯಾದ
ಹವಾಮಾನ ಬದಲಾವಣೆಗೆ ಇದೊಂದು ಶಕ್ತಿಶಾಲಿ ತಾಂತ್ರಿಕತೆಯಾಗಬಲ್ಲದು.
ಕೃಷಿಯಲ್ಲಿ ಕ್ರಿಸ್ಪರ್
ಕೃಷಿಯಲ್ಲಿ
ಕ್ರಿಸ್ಪರ್ ತಂತ್ರಜ್ಞಾನದ
ಸಾಮರ್ಥ್ಯವನ್ನು ಈಗಾಗಲೇ
ವಿವಿಧ ಬೆಳೆಗಳಲ್ಲಿ ಅರಿತುಕೊಳ್ಳಲಾಗುತ್ತಿದೆ. ರೈತರಿಗೆ ಮತ್ತು ಗ್ರಾಹಕರಿಗೆ ಇವುಗಳ ಪ್ರಯೋಜನವೂ
ಅರಿಕೆಯಾಗುತ್ತಿದೆ. ಹಲವಾರು ದೇಶಗಳು ಕ್ರಿಸ್ಪರ್ ಎಡಿಟೆಡ್ ಬೆಳೆಗಳನ್ನು ಕುಲಾಂತರಿಗಳಲ್ಲವೆಂದು ಒಪ್ಪಿ
ವಾಣಿಜ್ಯ ಮಟ್ಟದಲ್ಲಿ ಬೆಳೆಯುತ್ತಿವೆ. ಕ್ರಿಸ್ಪರ್ ಎಡಿಟಿಂಗ್ ಮೂಲಕ ಅಭಿವೃದ್ಧಿ ಪಡಿಸಿದ ಬ್ರೌನಿಂಗ್
(ಕೊಯ್ಲಿನ ನಂತರ ಕಂದಾಗುವಿಕೆ) ಕ್ರಿಯೆ ತಡೆಯಬಲ್ಲ ಅಣಬೆಗಳನ್ನು, ಕಡಿಮೆ ಟ್ರಾನ್ಸ್ ಫ್ಯಾಟ್ ಹೊಂದಿರುವ
ಸೋಯಾವನ್ನು ಅಮೇರಿಕಾ (ಯು.ಎಸ್.ಎ.) ಬೆಳೆಯುತ್ತಿದೆ. ಪೌಷ್ಟಿಕಾಂಶ ವರ್ಧಿತ, ರಕ್ತದೊತ್ತಡ ನಿಯಂತ್ರಿಸಬಲ್ಲ ಗುಣಗಳುಳ್ಳ ಕ್ರಿಸ್ಪರ್
ಎಡಿಟೆಡ್ ಟ್ಯೋಮ್ಯಾಟೋಗಳನ್ನು ಜಪಾನ್ ಬೆಳೆಯುತ್ತಿದೆ. ಅರ್ಜೆಂಟೀನಾ ಬರ ಸಹಿಷ್ಣು ಜೋಳವನ್ನು ವಾಣಿಜ್ಯವಾಗಿ
ಬೆಳೆಯುವ ಆರಂಭಿಕ ಹಂತದಲ್ಲಿದೆ. ಬ್ರೆಜಿಲ್, ಕೆನಡಾ, ಆಸ್ಟ್ರೇಲಿಯಾ, ಇಸ್ರೇಲ್ ಮುಂತಾದ ದೇಶಗಳು ಗೋಧಿ,
ಬಾರ್ಲಿ, ಬಟಾಟೆ, ಕಬ್ಬು ಮುಂತಾದ ಬೆಳೆಗಳ ಸಂಶೋಧನೆಯಲ್ಲಿ ತೊಡಗಿವೆ. ಕುಲಾಂತರಿಗಳನ್ನು ಹತ್ತಿರಕ್ಕೂ
ಬಿಟ್ಟುಕೊಳ್ಳದ ಯುರೋಪ್ ಕ್ರಿಸ್ಪರ್ ಎಡಿಟಿಂಗ್ ಬಗ್ಗೆ ಮೃದು ಧೋರಣೆ ತೋರಿದೆ.
ಭಾರತದಲ್ಲೂ
ಕ್ರಿಸ್ಪರ್ ಸಂಶೋಧನೆ ಕ್ಷಿಪ್ರ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ಕ್ರಿಸ್ಪರ್ ಬೆಳೆಗಳ ಕೃಷಿ ನಿಯಂತ್ರಣದ ಕುರಿತು ಕಾಯ್ದೆ ಕಾನೂನುಗಳ ನೀತಿ ನಿರೂಪಣೆಯ ಬಗ್ಗೆಯೂ
ಜಿ.ಇ.ಎ.ಸಿ. ಗಮನಹರಿಸಿದೆ. ಎನ್.ಐ.ಪಿ.ಜಿ.ಆರ್. ಸಂಸ್ಥೆ ಬ್ಯಾಕ್ಟೀರಿಯಲ್ ಬ್ಲೈಟ್ ನಿರೋಧಕ ಕ್ರಿಸ್ಪರ್
ಎಡಿಟೆಡ್ ಭತ್ತ; ಸಿ.ಎಸ್.ಐ.ಆರ್. ಸಂಸ್ಥೆ
ಗುಣಮಟ್ಟದ ಎಣ್ಣೆ, ಹವಾಮಾನ ಸಹಿಷ್ಣು ಕ್ರಿಸ್ಪರ್ ಎಡಿಟೆಡ್ ಸಾಸಿವೆ; ಐ.ಐ.ಎಚ್.ಆರ್. ಸಂಸ್ಥೆ ಪಪ್ಪಾಯಾ ರಿಂಗ್ ಸ್ಪಾಟ್ ವೈರಸ್ ಪ್ರತಿರೋಧಕ್ಕಾಗಿ
ಕ್ರಿಸ್ಪರ್ ಎಡಿಟೆಡ್ ಪಪ್ಪಾಯಿ; ಹೀಗೆ ವೈವಿಧ್ಯಮಯ ಬೆಳೆಗಳಲ್ಲಿ ಕ್ರಿಸ್ಪರ್ ಬಳಸಿ ತಳಿ ಅಭಿವೃದ್ಧಿಯ
ಸಂಶೋಧನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ.
ಭವಿಷ್ಯದಲ್ಲಿ ಕ್ರಿಸ್ಪರ್ ತಂತ್ರಜ್ಞಾನ
ಒಂದು
ತಂತ್ರಜ್ಞಾನವೆಂದರೆ ಒಳಿತು ಕೆಡುಕು ಇದ್ದಿದ್ದೇ. ಕುಲಾಂತರಿಯಲ್ಲವೆಂದು ಪರಿಗಣಿಸಿದರೂ ಕ್ರಿಸ್ಪರ್
ಎಡಿಟೆಡ್ ಜೀವಿಗಳಿಂದ ನಿಸರ್ಗದ ನಿಯಮಕ್ಕೆ ಧಕ್ಕೆ ಉಂಟಾಗಬಹುದೆನ್ನುವುದನ್ನೂ ತಳ್ಳಿಹಾಕುವಂತಿಲ್ಲ. ಕೃಷಿ ಜೀವವೈವಿಧ್ಯತೆ
ನಷ್ಟವಾಗುವುದು, ಕ್ರಿಸ್ಪರ್ ತಂತ್ರಜ್ಞಾನ ದುಡ್ಡಿದ್ದವರ ಸೊತ್ತಾಗುವುದು, ಯಾವುದೋ ಒಂದು ಕಂಪನಿ ಏಕಸ್ವಾಮ್ಯತ್ವ
ಸಾಧಿಸುವುದು, ಸಾರ್ವಜನಿಕ ವಿರೋಧ ಉಂಟಾಗುವುದು ಎಲ್ಲವೂ ಸಂಭವನೀಯ. ಇದಕ್ಕಿಂತ ಹೆಚ್ಚು ಅಪಾಯವಿರುವುದು
ವೈದ್ಯಕೀಯ ಕ್ಷೇತ್ರದಲ್ಲಿ. ಕ್ರಿಸ್ಪರ್ ಬಳಸಿ ಮಾನವನ ವಂಶವಾಹಿ ಕೂಡಾ ಎಡಿಟಿಂಗ್ ಮಾಡಬಹುದಾಗಿದೆ.
ಭ್ರೂಣಗಳಲ್ಲಿ ವಂಶವಾಹಿಯನ್ನು ಎಡಿಟಿಂಗ್ ಮಾಡುವುದರಿಂದ ಅನುವಂಶೀಯ ರೋಗಗಳನ್ನೇನೋ ಉಪಶಮನ ಮಾಡುವ ಲಾಭವಿದೆ.
ಅದೇ ಸಂದರ್ಭದಲ್ಲಿ ಬೇಕುಬೇಕಾದ ಹಾಗೆ ವಂಶವಾಹಿ ಮಾರ್ಪಾಡು ಮಾಡಿ ಮಗುವೊಂದನ್ನು ತಮ್ಮಿಷ್ಟಕ್ಕೆ ತಕ್ಕಂತೆ
‘ಡಿಸೈನ್’ ಮಾಡಬಲ್ಲ ಅಪಾಯವನ್ನೂ ಕ್ರಿಸ್ಪರ್ ತಂದೊಡ್ಡಿದೆ; ಚೀನಾದಲ್ಲೊಬ್ಬ ವಿಜ್ಞಾನಿ 2018 ರಲ್ಲಿ ಸಿ.ಸಿ.ಆರ್.5 ಎಂಬ ವಂಶವಾಹಿಯ ತುಂಡನ್ನು ಕ್ರಿಸ್ಪರ್
ಬಳಸಿ ನಿಷ್ಕ್ರಿಯಗೊಳಿಸುವ ಮೂಲಕ ಎಚ್.ಐ.ವಿ. ಸೋಂಕಿಗೆ ನಿರೋಧಕವಾಗಿರುವ ಭ್ರೂಣಗಳನ್ನು ರಚಿಸಿ ‘ಲುಲು’ ‘ನಾನಾ’ ಎಂಬ ಅವಳಿ
ಮಕ್ಕಳನ್ನು ಪಡೆಯಲು ಯಶಸ್ವಿಯಾಗಿದ್ದ. ಜಾಗತಿಕವಾಗಿ ಸಂಚಲನವನ್ನೇ ಮೂಡಿಸಿದ್ದ ಈ ಪ್ರಕರಣ ವ್ಯಾಪಕ
ಆಕ್ರೋಶ, ಖಂಡನೆಗೆ ಕಾರಣವಾಗಿತ್ತು. ಹೀಗೆ ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕರೆ ಮುಂದೆ ಹೊಸ ರೋಗಕಾರಕಗಳು, ಜೈವಿಕ ಶಸ್ತ್ರಾಸ್ತ್ರಗಳು ರೂಪಗೊಳ್ಳಲೂಬಹುದು.
Comments
Post a Comment