ಕೃಷಿಯಲ್ಲಿ ಸಸ್ಯ ಪ್ರಚೋದಕಗಳು ಭಾಗ 1

ಕಳೆದ ಕೆಲವು ಸಂಚಿಕೆಗಳಲ್ಲಿ ಸಸ್ಯ ಅಂಗರಚನಾಶಾಸ್ತ್ರ ಮತ್ತು ಸಸ್ಯ ಶರೀರಶಾಸ್ತ್ರದ ಬಗ್ಗೆ ವಿವರವಾಗಿ ತಿಳಿಯಲಾಗಿತ್ತು. ಮುಂದುವರೆದ ಭಾಗವಾಗಿ ಸಸ್ಯ ಪ್ರಚೋದಕಗಳ ಬಗ್ಗೆ ವಿವರವಾದ ಮಾಹಿತಿ ಈ ಸಂಚಿಕೆಯಲ್ಲಿ

ಅದು 1920ರ ದಶಕ, ನೆದರಲ್ಯಾಂಡಿನ ಯುಟ್ರೆಕ್ಟ್ ವಿಶ್ವವಿದ್ಯಾಲಯದಲ್ಲಿ ಸಸ್ಯಗಳ ಬೆಳವಣಿಗೆ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಸಂಶೋಧನಾ ವಿದ್ಯಾರ್ಥಿ ‘ವೆಂಟ್’ನ ತಲೆಯಲ್ಲಿ ಸಸ್ಯಗಳೇಕೆ ಬೆಳಕಿನ ಕಡೆಗೆ ಬಾಗುತ್ತವೆ ಎಂಬ ಪ್ರಶ್ನೆ ಕೊರೆಯುತ್ತಿತ್ತು (ಸೂರ್ಯಕಾಂತಿ ಸೂರ್ಯನೆಡೆಗೆ ಬಾಗುವಂತೆ). ಈ ರಹಸ್ಯ ಭೇದಿಸಲು ಕೈಗೊಂಡ ಸಾಲು ಸಾಲು ಪ್ರಯೋಗಗಳ ನಂತರ ವೆಂಟ್ ಗೆ ತಿಳಿದಿದ್ದು ಬೆಳಕಿನೆಡೆಗೆ ವಾಲುತ್ತಿದ್ದ ಸಸ್ಯದ ತುದಿಯಲ್ಲಿ ಶೇಖರವಾಗುತ್ತಿದ್ದ ಒಂದು ರಹಸ್ಯ ವಸ್ತುವಿನ ಬಗ್ಗೆ. 1928ರಲ್ಲಿ ವೆಂಟ್ ತನ್ನ ಸಂಶೋಧನೆಯ ಫಲಿತಾಂಶವನ್ನು ಪ್ರಕಟಿಸಿ ಈ ವಸ್ತುವನ್ನು ಗ್ರೀಕ್ ಭಾಷೆಯಲ್ಲಿ ‘ಬೆಳವಣಿಗೆ’ ಎಂಬ ಅರ್ಥ ಕೊಡುವ ‘ಆಕ್ಸಿನ್’ ಎನ್ನುದಾಗಿ ಕರೆದ. 1930ರ ದಶಕದಲ್ಲಿ ಇದೇ ಹೊತ್ತಿಗೆ ಸರಿಯಾಗಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ‘ಥಿಮಾನ್’ ಆಕ್ಸಿನ್‌ಗಳನ್ನು ಸಸ್ಯದೇಹದಿಂದ ಪ್ರತ್ಯೇಕಿಸಿ ಇತರೆ ಬೆಳವಣಿಗೆ ಪ್ರಕ್ರಿಯೆ ಮೇಲೂ ಅವುಗಳ ಪಾತ್ರವನ್ನು ನಿರೂಪಿಸಿದ.

ಪ್ರಾಣಿಗಳ ದೇಹದಲ್ಲಿ ಇದೇ ತರಹದ ರಾಸಾಯನಿಕಗಳ ಬಗ್ಗೆ ಅದಾಗಲೇ ಸಂಶೋಧನೆಯಾಗಿತ್ತು. ‘ಸ್ಟರ್ಲಿಂಗ್’ ಎಂಬ ವಿಜ್ಞಾನಿ ಸಣ್ಣ ಕರುಳಿನಲ್ಲಿ ಉತ್ಪತ್ತಿಯಾಗುತ್ತಿದ್ದ ‘ಸೆಕ್ರೆಟಿನ್’ ಎಂಬ ವಸ್ತು ರಕ್ತದ ಮೂಲಕ ಪ್ಯಾನಕ್ರಿಯಾಸ್ ಸೇರಿ ಅಲ್ಲಿ ಜೀರ್ಣರಸ ಉತ್ಪತ್ತಿಯಾಗುವುದನ್ನು ಪ್ರಚೋದಿಸುವುದರ ಬಗ್ಗೆ ಕಂಡುಹಿಡಿದಿದ್ದ.  ಈ ವಸ್ತುಗಳು ನರವ್ಯೂಹದಿಂದ ಬಂದಂತಹ ಸಂಕೇತಗಳಲ್ಲ, ಬದಲಿಗೆ ರಕ್ತದಲ್ಲಿ ಸಂಚರಿಸುವ ರಾಸಾಯನಿಕ ಸಂದೇಶವಾಹಕಗಳು, ಶಾರಿರೀಕ ಪ್ರಕ್ರಿಯೆಯನ್ನು ಪ್ರಚೋದಿಸುತ್ತವೆ ಎಂದು ತಿಳಿಯಲಾಗಿತ್ತು. ‘ಸ್ಟರ್ಲಿಂಗ್’ ಈ ವಸ್ತುಗಳನ್ನು ಗ್ರೀಕ್ ಭಾಷೆಯಲ್ಲಿ ‘ಪ್ರಚೋದಿಸುವ’ ಅಥವಾ ‘ಉತ್ತೇಜಿಸುವ’ (to stimulate) ಎಂಬ ಅರ್ಥ ಕೊಡುವ ‘ಹಾರ್ಮೋನ್’ ಶಬ್ಧದಿಂದ ಗುರುತಿಸಿದ್ದ. ಆಕ್ಸಿನ್‌ ಗಳೂ ಸಸ್ಯ ದೇಹದಲ್ಲಿ ಇದೇ ತರಹ ವರ್ತಿಸುವದನ್ನು ಗಮನಿಸಿದ ವೆಂಟ್ ಮತ್ತು ಥಿಮಾನ್ ಜೋಡಿಯಾಗಿ 1937ರಲ್ಲಿ ಬರೆದ ಪುಸ್ತಕದಲ್ಲಿ ‘ಪ್ಲಾಂಟ್ ಹಾರ್ಮೋನ್’ ಎಂಬ ಶಬ್ಧವನ್ನು ಮೊದಲ ಬಾರಿಗೆ ಬಳಕೆ ಮಾಡಿದರು. ಆಕ್ಸಿನ್ ಹೊರತುಪಡಿಸಿ ಇತರೇ ಸಸ್ಯ ಪ್ರಚೋದಕಗಳ ಪ್ರಚಂಡ ಪ್ರಯೋಜನಗಳ ಬಗ್ಗೆಯೂ ಈ ಪುಸ್ತಕದಲ್ಲಿ ಗಮನ ಸೆಳೆದಿದ್ದರು. ನಮ್ಮಲ್ಲಿ ಒಂದು ಶತಮಾನ ಕಳೆದ ನಂತರ ಇತ್ತೀಚೆಗೆ ಇವು ರಂಗಕ್ಕಿಳಿದಿವೆ.

ಸಸ್ಯಪ್ರಚೋದಕಗಳೆಂದರೇನು, ಯಾವವು, ಒಂದೊಂದಾಗಿ ಅವು ಎಲ್ಲಿ ಹೇಗೆ ಉತ್ಪಾದನೆಯಾಗುತ್ತವೆ, ಹೇಗೆ ಕಾರ್ಯ ನಿರ್ವಹಿಸುತ್ತವೆ, ಕೃತಕ ರೂಪಗಳೇನು, ಪ್ರತಿರೋಧಗಳೇನು ಎನ್ನುವುದರ ಬಗ್ಗೆ ವಿವರವಾಗಿ ತಿಳಿಯೋಣ. ಅದಕ್ಕೂ ಮೊದಲು ಸುಲಭ ಸಂಕ್ಷಿಪ್ತ ಮಾಹಿತಿ:

·        ಸಸ್ಯಪ್ರಚೋದಕಗಳು ಎಂದರೇನು? : ಪ್ಲಾಂಟ್ ಹಾರ್ಮೋನ್ ಅಥವಾ ಸಸ್ಯ ಪ್ರಚೋದಕಗಳೆಂದರೆ ಸಸ್ಯಗಳ ದೇಹದಲ್ಲಿ ಅತಿ ಸೂಕ್ಷ್ಮ ಪ್ರಮಾಣದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ರಾಸಾಯನಿಕ ಸಂದೇಶವಾಹಕಗಳು. ಸಸ್ಯ ದೇಹದಲ್ಲಿ ಇವುಗಳ ಪ್ರಮಾಣ ಎಷ್ಟು ಸೂಕ್ಷ್ಮವೆಂದರೆ ಒಂದು ಗ್ರಾಮ್ ಅಂಗಾಂಶದಲ್ಲಿ 0.00001ಗ್ರಾಮ್ ಗಿಂತಲೂ ಕಡಿಮೆ. ಸಸ್ಯ ಪ್ರಚೋದಕಗಳು ಪೋಷಕಾಂಶಗಳಲ್ಲ, ಸರಳ ರಚನೆ ಹೊಂದಿರುವ ರಾಸಾಯನಿಕ ವಸ್ತುಗಳು.

·        ಯಾವವು?: ಸದ್ಯಕ್ಕೆ ಸಸ್ಯಗಳಲ್ಲಿ ಐದು ವರ್ಗಗಳನ್ನು ಮುಖ್ಯವಾಗಿ ಹೆಸರಿಸಲಾಗಿದೆ. ಅವೇ ಆಕ್ಸಿನ್, ಜಿಬ್ಬರೆಲಿನ್, ಸೈಟೋಕೈನಿನ್, ಅಬ್ಸಿಸಿಕ್ ಆ್ಯಸಿಡ್ ಮತ್ತು ಎಥೆಲಿನ್. ಇವುಗಳನ್ನು ಹೊರತುಪಡಿಸಿ ಬ್ರಾಸಿನೊಸ್ಟಿರಾಯ್ಡ್, ಸಲಿಸಿಲಿಕ್ ಆ್ಯಸಿಡ್, ಜಾಸ್ಮೋನೇಟ್ಸ್, ಸ್ಟ್ರೈಗೊಲಾಕ್ಟನ್ಸ್, ಪಾಲಿಅಮೈನ್ಸ್, ನೈಟ್ರಿಕ್ ಆಕ್ಸೈಡ್ ಗಳನ್ನೂ ಪ್ರಚೋದಕಗಳೆಂದು ಪರಿಗಣಿಸಲಾಗಿದೆ.

·        ಇವುಗಳ ಕೆಲಸವೇನು?: ಸಸ್ಯಪ್ರಚೋದಕಗಳು ಸಸ್ಯಗಳಲ್ಲಿನ ವಿವಿಧ ಶಾರೀರಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಮಾನವನಲ್ಲಿ ಹೇಗೆ ಹಾರ್ಮೋನ್ ಶರೀರ ಕ್ರಿಯೆಯಿಂದ ‘ಮೂಡ್’ ವರೆಗೂ ನಿಯಂತ್ರಿಸುತ್ತದೋ ಹಾಗೆ ಸಸ್ಯಗಳಲ್ಲಿ ಬೆಳವಣಿಗೆಯಿಂದ ಪರಿಸರಕ್ಕೆ ತಕ್ಕ ಪ್ರತಿಕ್ರಿಯೆಯವರೆಗೂ ಪ್ಲಾಂಟ್ ಹಾರ್ಮೋನ್ ನಿಯಂತ್ರಿಸುತ್ತದೆ. ಚಿಗುರುತ್ತಿರುವ ತುದಿಯಿರಲಿ, ಮೊಳಕೆಯೊಡೆಯುತ್ತಿರುವ ಬೀಜವಿರಲಿ, ಅರಳುತ್ತಿರುವ ಹೂ ಇರಲಿ, ಎಲೆ ಉದುರಿಸುತ್ತಿರುವ ಮರವಿರಲಿ, ಕೀಟರೋಗದ ವಿರುದ್ಧ ಹೋರಾಟವಿರಲಿ, ಪರಿಸರದ ಒತ್ತಡದ ಸವಾಲಿರಲಿ, ಪ್ರತಿ ಕ್ರಿಯೆಯೂ ಹಾರ್ಮೋನ್ ನ ಹದ್ದುಬಸ್ತಿನಲ್ಲೇ ಸಾಗುತ್ತದೆ.

·        ಎಲ್ಲಿ ಉತ್ಪಾದನೆಯಾಗುತ್ತವೆ?: ವಿಶೇಷವೆಂದರೆ ಪ್ರಾಣಿಗಳ ದೇಹದಲ್ಲಿ ನಿರ್ದಿಷ್ಟ ಗ್ರಂಥಿಗಳಲ್ಲಿ ಮಾತ್ರ ಹಾರ್ಮೋನ್ ಸ್ರವಿಕೆಯಾದರೆ ಸಸ್ಯಗಳಲ್ಲಿ ಪ್ರತಿ ಜೀವಕೋಶದಲ್ಲೂ ಹಾರ್ಮೋನ್ ಉತ್ಪತ್ತಿಯಾಗಬಲ್ಲದು. ಎಲ್ಲಾ ಜೀವಕೋಶಗಳಲ್ಲೂ ಎಲ್ಲಾ ಸಮಯದಲ್ಲಿ ಎಲ್ಲಾ ಪ್ರಚೋದಕಗಳೂ ಉತ್ಪಾದನೆಯಾಗುವುದಿಲ್ಲ. ಹಾರ್ಮೋನ್ ನ ಉತ್ಪತ್ತಿ ಸಸ್ಯದ ಬೆಳವಣಿಗೆ ಅಭಿವೃದ್ಧಿ ಹಂತಕ್ಕೆ ಬಿಟ್ಟಿದ್ದು. ಉದಾಹರಣೆ ಆಕ್ಸಿನ್ ಉತ್ಪಾದನೆಯಾಗುವುದು ಎಳೆ ವಯಸ್ಸಿನ ಸಕ್ರಿಯವಾಗಿ ಬೆಳವಣಿಗೆ ಹೊಂದುತ್ತಿರುವ ಕಾಂಡದ ತುದಿಯ ಚಿಗುರುಗಳಲ್ಲಿ. ಪರಿಸರದ ಪ್ರಭಾವವೂ ಇದರ ಮೇಲಿದೆ. ಉದಾಹರಣೆ ರೋಗಕ್ಕೆ ತುತ್ತಾದ ಸಸ್ಯಗಳಲ್ಲಿ ಸಲಿಸಲಿಕ್ ಆ್ಯಸಿಡ್ ಉತ್ಪಾದನೆಯಾಗುತ್ತದೆ. ಹಾಗೆಯೇ ಎಲ್ಲೋ ಉತ್ಪತ್ತಿಯಾದ ಪ್ರಚೋದಕ ಮತ್ತೆಲ್ಲೋ ಕೆಲಸ ನಿರ್ವಹಿಸುತ್ತದೆ. ಉದಾಹರಣೆಗೆ ಚಿಗುರುಗಳಲ್ಲಿ ಉತ್ಪತ್ತಿಯಾಗುವ ಆಕ್ಸಿನ್ ಬೇರುಗಳ ವರೆಗೂ ಚಲಿಸಬಲ್ಲದು.

·        ಹೇಗೆ ಉತ್ಪಾದನೆಯಾಗುತ್ತವೆ?: ಪ್ರಚೋದಕಗಳ ಉತ್ಪಾದನೆ ಸಸ್ಯಗಳ ದೇಹದಲ್ಲಿ ಜೈವಿಕವಾಗಿ ನಡೆಯುವ ಸಂಕೀರ್ಣ ಕ್ರಿಯೆ. ಸರಳ ಕಾರ್ಬೋಹೈಡ್ರೇಟ್, ಅಮೈನೋ ಆಮ್ಲ, ಕೊಬ್ಬಿನಾಮ್ಲಗಳು ಸೇರಿ ಪ್ರಚೋದಕಗಳು ರೂಪುಗೊಳ್ಳುತ್ತವೆ. ಕಿಣ್ವಗಳ ಸಹಾಯದಿಂದ ನಡೆಯುವ ಈ ಕ್ರಿಯೆ ಹಲವಾರು ಹಂತದಲ್ಲಿ ಸಾಗುತ್ತದೆ.

·        ಹೇಗೆ ಸರಬರಾಜಾಗುತ್ತವೆ?: ಹೀಗೆ ತಯಾರಾದ ಪ್ರಚೋದಕಗಳು ಸರಬರಾಜಾಗುವುದು ನೀರು-ಆಹಾರ ಸಾಗುವ ಕ್ಸೈಲಮ್ ಫ್ಲೋಯಮ್ ನಾಳಗಳ ಮೂಲಕ. ಎಥೆಲಿನ್ ಹಾರ್ಮೋನ್ ಅನಿಲರೂಪದಲ್ಲಿರುವುದರಿಂದ ಸಸ್ಯಗಳ ಅಂಗಾಂಶಕ್ಕೆ ಮತ್ತೂ ಸುಲಭಕ್ಕೆ ಹರಡಬಲ್ಲದು.

·        ಹೇಗೆ ಕಾರ್ಯನಿರ್ವಹಿಸುತ್ತವೆ?: ಸರಿಯಾದ ಜಾಗಕ್ಕೆ ಸರಬರಾಜಾದ ಮೇಲೆ ಪ್ರಚೋದಕಗಳು ಅಲ್ಲಿನ ವಂಶವಾಹಿಗಳನ್ನು ವ್ಯಕ್ತವಾಗುವಂತೆ ಪ್ರಚೋದಿಸುತ್ತವೆ. ಇಲ್ಲಿಯವರೆಗೆ ಸುಪ್ತವಾಗಿದ್ದ ವಂಶವಾಹಿಗಳು ಪ್ರಚೋದಕಗಳ ಮೋಡಿಗೆ ಒಳಗಾಗಿ ಅವು ಹೇಳಿದಂತೆ ಕೇಳುತ್ತವೆ! ಪ್ರಚೋದಕಗಳು ಏಕಾಂಗಿಯಾಗಿ ಕೆಲಸ ಮಾಡುವುದಕ್ಕಿಂತ ಹೊಂದಾಣಿಕೆಯಲ್ಲಿ ಕೆಲಸ ಮಾಡುವುದೇ ಹೆಚ್ಚು. ಒಂದಕ್ಕೊಂದು ಸಹಕಾರಿಯಾಗಿ, ಅಥವಾ ಒಂದಕ್ಕೊಂದು ವಿರುದ್ಧವಾಗಿ ಕೆಲಸ ಮಾಡುತ್ತವೆ, ಒಟ್ಟಿನಲ್ಲಿ ಸಸ್ಯ ದೇಹದಲ್ಲಿ ಸಮತೋಲನ ಕಾಪಾಡುವುದು ಅವುಗಳ ಗುರಿ. ಉದಾಹರಣೆಗೆ ಆಕ್ಸಿನ್ ಪ್ರಮಾಣ ಹೆಚ್ಚಿದ್ದಾಗ ಕಾಂಡದ ಬೆಳವಣಿಗೆಯಾಗುತ್ತದೆ; ಅದೇ ಆಕ್ಸಿನ್ ಪ್ರಮಾಣಕ್ಕೆ ಹೋಲಿಸದಾಗ ಸೈಟೋಕೈನಿನ್ ಪ್ರಮಾಣ ಹೆಚ್ಚಿದ್ದರೆ ಬೇರಿನ ಬೆಳವಣಿಗೆಯಾಗುತ್ತದೆ. ಹಾಗೆಯೇ ಆಕ್ಸಿನ್ ಎಳೆಯ ಚಿಗುರುಗಳನ್ನು ಉತ್ತೇಜಿಸಿದರೆ ಜಿಬ್ಬರೆಲಿನ್ ಸಂತಾನೋತ್ಪತ್ತಿ ಸಮಯ ಬಂದಾಗ ಚಿಗುರನ್ನು ಹೂವಾಗಿ ಪರಿವರ್ತಿಸುವಲ್ಲಿ ಪ್ರಭಾವ ಬೀರುತ್ತದೆ.

·        ಕೃತಕ ರೂಪಿಗಳು: ಸಸ್ಯ ಪ್ರಚೋದಕಗಳು ಸಸ್ಯಗಳಲ್ಲಿ ಹೇಗೆ ತಯಾರಾಗುತ್ತವೆ ಮತ್ತು ಕಾರ್ಯ ನಿರ್ವಹಿಸುತ್ತವೆ ಎನ್ನುವ ಬಗ್ಗೆ ತಿಳಿದಿದ್ದದೇ ತಡ ಇವುಗಳನ್ನೇ ಹೋಲುವ ಕೃತಕ (ಸಂಶ್ಲೇಷಿತ ಅಥವಾ ಸಿಂಥೆಟಿಕ್) ಪ್ರಚೋದಕಗಳ ಉತ್ಪಾದನೆಯಲ್ಲೂ ನಾವು ತೊಡಗಿದ್ದೇವೆ. ಇವುಗಳನ್ನು ವೇಗದ ಬೆಳವಣಿಗೆಗೆ, ಕುಂಠಿತ ಬೆಳವಣಿಗೆ, ಹೂವಾಗಲು, ಹೂವಾಗದೇ ಇರಲು, ಕಾಯಿ ಕಚ್ಚಲು, ಹೆಚ್ಚಾದ ಕಾಯಿ ಉದುರಿಸಲು, ಬೀಜ ಮೊಳಕೆಯೊಡೆಯಲು, ಮೊಳಕೆ ಒಡೆಯದಿರಲು, ಕೀಟ ರೋಗ ಒತ್ತಡ ನಿರ್ವಹಣೆಗೆ, ಒಟ್ಟಾರೆ ಕೃಷಿಯಲ್ಲಿ ಇಳುವರಿ ಹೆಚ್ಚಿಸಲು ಊಹಿಸಲೂ ಅಸಾಧ್ಯ ರೀತಿಯಲ್ಲಿ ಬಳಸುತ್ತಿದ್ದೇವೆ. ಕಾರ್ಖಾನೆಗಳಲ್ಲಿ ತಯಾರಾಗುವ ಇವುಗಳನ್ನು ‘ಪ್ಲಾಂಟ್ ಗ್ರೋತ್ ರೆಗ್ಯಲೇಟರ್ಸ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

·        ಕೃತಕ ರೂಪಿಗಳ ಬಳಕೆ: ಇವುಗಳನ್ನು ಅತ್ಯಂತ ಸೂಕ್ಷ್ಮ ಪ್ರಮಾಣದಲ್ಲಿ ಪಾರ್ಟ್ಸ್ ಪರ್ ಮಿಲಿಯನ್ (ppm) ಅಳತೆಯಲ್ಲಿ ಕೃಷಿಯಲ್ಲಿ ಬಳಸಲಾಗುತ್ತದೆ. 1ppm ಎಂದರೆ 1 ಲೀಟರ್ ಗೆ ಅಥವಾ 1 ಕೆ.ಜಿ ಗೆ 1ಮಿಲಿ.ಗ್ರಾಮ್ ಲೆಕ್ಕದಲ್ಲಿ ಮಿಶ್ರಣ ತಯಾರಿಸಿ ಸಿಂಪಡಣೆ, ಅದ್ದುವುದು, ಗಿಡದ ಬುಡಕ್ಕೆ ಹೊಯ್ಯುವುದು, ಪೇಸ್ಟ್ ಮಾಡಿ ಹಚ್ಚುವುದು ಮುಂತಾದ ವಿಧಾನದಲ್ಲಿ ಬಳಸುವುದು. ಬೆಳೆಯಿಂದ ಬೆಳೆಗೆ ಬಳಕೆಯ ಪ್ರಮಾಣ ಬೇರೆ.

·        ಪ್ರಚೋದಕಗಳ ಪ್ರತಿರೋಧಿಗಳು: ಪ್ರಚೋದಕಗಳ ಕಾರ್ಯ ಕಲಾಪಕ್ಕೆ ವಿರೋಧ ಒಡ್ಡುವ ಪ್ರತಿರೋಧಿ ರಾಸಾಯನಿಕಗಳೂ ಇವೆ. ಒಂದೆರಡು ವಾಣಿಜ್ಯ ಬಳಕೆಯಲ್ಲಿರುವುದನ್ನು ಬಿಟ್ಟರೆ ಇತರೇ ರಾಸಾಯನಿಕಗಳು ಸಂಶೋಧನೆಗಷ್ಟೇ ಸೀಮಿತ.

ಆಕ್ಸಿನ್: ಸಸ್ಯಗಳ ಬೆಳವಣಿಗೆ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ಹೊಂದಿರುವ ‘ಮಾಸ್ಟರ್ ಹಾರ್ಮೋನ್’ ಆಕ್ಸಿನ್ ಮೊಟ್ಟಮೊದಲು ಕಂಡುಹಿಡಿಯಲ್ಪಟ್ಟ ಪ್ರಚೋದಕ.

ಆಕ್ಸಿನ್ ತಯಾರಾಗುವುದೆಲ್ಲಿ: ಚಟುವಟಿಕೆಯಿಂದ ಕೂಡಿದ ಸಕ್ರಿಯವಾಗಿ ವಿಭಜನೆಯಾಗುತ್ತಿರುವ ಎಳೆಯ ಜೀವಕೋಶ ಅಥವಾ ವರ್ಧನಾ ಅಂಗಾಂಶದಲ್ಲಿ ಆಕ್ಸಿನ್ ತಯಾರಾಗುತ್ತದೆ. ಅಂದರೆ ಮುಖ್ಯವಾಗಿ ಕಾಂಡದ ತುದಿ (ಅಪಿಕಲ್ ಮೆರಿಸ್ಟಮ್), ಚಿಗುರು, ಎಳೆ ಎಲೆ ಮತ್ತು ಎಳೆ ಬೀಜದಲ್ಲಿ. ಆಕ್ಸಿನ್ ಅತ್ಯಧಿಕ ಪ್ರಮಾಣದಲ್ಲಿರುವುದು ಚಿಗುರಿನ ತುದಿಯಲ್ಲಿ. ಹೂವು ಹಣ್ಣು ಬೇರಿನ ತುದಿಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾಗಬಲ್ಲದು.

ಆಕ್ಸಿನ್ ತಯಾರಾಗುವುದು ಹೇಗೆ? : ‘ಟ್ರಿಪ್ಟೋಫಾನ್’ ಎಂಬ ಸರಳ ಅಮೈನೋಆಮ್ಲದಿಂದ ‘ಇಂಡೋಲ್-3-ಅಸಿಟಿಕ್ ಆ್ಯಸಿಡ್’ (indole-3-acetic acid ಅಥವಾ IAA) ಎಂಬ ಆಕ್ಸಿನ್ ತಯಾರಾಗುತ್ತದೆ. IAA ಸಸ್ಯಗಳ ದೇಹದಲ್ಲಿ ನೈಸರ್ಗಿಕವಾಗಿ ಕಂಡುಬರುವ ಏಕೈಕ ಆಕ್ಸಿನ್.

ಸಸ್ಯಗಳ ದೇಹದಲ್ಲಿ ಆಕ್ಸಿನ್ ನ ಕೆಲಸವೇನು?

·        ಕಾಂಡದ ತುದಿಗಳ ಅನಿಯಮಿತ ಬೆಳವಣಿಗೆ: ಮೊದಲೇ ಹೇಳಿದಂತೆ ಕಾಂಡದ ತುದಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಆಕ್ಸಿನ್ ತುದಿಯನ್ನು ಮತ್ತಷ್ಟು ಬೆಳೆಯಲು ಪ್ರಚೋದಿಸುತ್ತದೆ. ‘ಅಪಿಕಲ್ ಡಾಮಿನನ್ಸ್’ ಎಂದು ಕರೆಯಲಾಗುವ ಈ ಕ್ರಿಯೆಯಲ್ಲಿ ಆಕ್ಸಿನ್ ಕವಲುಗಳು ಹೊರಡುವುದನ್ನು ಹತ್ತಿಕ್ಕುತ್ತದೆ. ಪರಿಣಾಮ ಸಸ್ಯದ ಕಾಂಡ ಉದ್ದುದ್ದವಾಗಿ ಮೇಲೇರುತ್ತಾ ಸಾಗುತ್ತದೆ.

·        ಬೇರಿನ ಬೆಳವಣಿಗೆಗೆ: ಬೇರಿನ ತುದಿಯಲ್ಲಿ ಉತ್ಪತ್ತಿಯಾಗುವ ಆಕ್ಸಿನ್ ಹೆಚ್ಚೆಚ್ಚು ಹೊಸ ಬೇರುಗಳ ರೂಪುಗೊಳ್ಳುವಿಕೆಯನ್ನು ಪ್ರಚೋದಿಸುತ್ತದೆ.

·        ಅಂಗಾಂಶಗಳ ಬೆಳವಣಿಗೆಗೆ: ಕಾಂಡದಲ್ಲಿನ ವರ್ಧನಾ ಅಂಗಾಂಶಗಳು ನಿರ್ದಿಷ್ಟ ಕಾರ್ಯ ನಿರ್ವಹಿಸಲು ಶಾಶ್ವತ ಅಂಗಾಂಶವಾಗಿ ಬದಲಾಗುವಂತೆ ಆಕ್ಸಿನ್ ಪ್ರಚೋದಿಸುತ್ತದೆ. ಅಂದರೆ ನಾಳೀಯ ಅಂಗಾಂಶಗಳು ಕ್ಲೈಲಮ್ ಫ್ಲೋಯಮ್ ಗಳಾಗಿ ಪ್ರತ್ಯೇಕವಾಗಲು, ಮುಂದೆ ವಯಸ್ಸಾದಂತೆ ಇವು ಕೆಂಬಿಯಮ್ ಆಗಿ ರೂಪಗೊಳ್ಳಲು ಆಕ್ಸಿನ್ ಬೇಕು.

·        ಗಾಯ ಮಾಯಲು: ಸಸ್ಯಗಳ ದೇಹದ ಭಾಗದಲ್ಲಿ ಆಕಸ್ಮಿಕವಾಗಿ ಪೆಟ್ಟಾದರೆ ಅಂತಹ ಗಾಯ ಗುಣವಾಗಲು ಆಕ್ಸಿನ್ ಅಗತ್ಯ. ಮರಗಳಲ್ಲಿ ಕತ್ತಿ ತಾಗಿ ಪೆಟ್ಟಾದ ಜಾಗದಲ್ಲಿ ಕೆಲವು ದಿನಗಳ ನಂತರ ಗಂಟಾಗುವುದನ್ನು ಗಮನಿಸಿರುತ್ತೀರಾ. ಇದಕ್ಕೆ ಕಾರಣ ಆ ಜಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಆಕ್ಸಿನ್. ಜೀವಕೋಶಗಳ ವಿಭಜನೆಯನ್ನು ವೃದ್ಧಿಸಿ ಗಾಯಕ್ಕೆ ತೇಪೆ ಹಚ್ಚಲು ತೊಡಗುತ್ತದೆ. ಕಸಿಯ ಯಶಸ್ಸು ನಿಂತಿರುವುದು ಇದೇ ತತ್ವದ ಮೇಲೆ.

·        ಬೆಳಕಿನೆಡೆಗೆ ಬಾಗಲು: ಸಸ್ಯ ಬೆಳಕಿನತ್ತ ವಾಲಲು (ಫೋಟೋಟ್ರೊಪಿಸಮ್) ಮತ್ತು ಗುರುತ್ವದ ಕಡೆಗೆ ಬೆಳೆಯಲು (ಗ್ರಾವಿಟ್ರೋಪಿಸಮ್) ಆಕ್ಸಿನ್ ನಿರ್ದೇಶಿಸುತ್ತದೆ.

·        ಕಾಯಿ ಕಚ್ಚಲು: ಪರಾಗಸ್ಪರ್ಷವಾದ ನಂತರ ಹಲವಾರು ಕಾರಣಕ್ಕೆ ಕಾಯಿ ಉದುರಿ ನಾಶವಾಗಬಹುದು. ಈ ನಷ್ಟವನ್ನು ತಪ್ಪಿಸಲು, ಕಾಯಿ ಮುಪ್ಪಾಗದೆ ಉಳಿಯಲು ಅಂಗಾಂಶಗಳಲ್ಲಿ ಆಕ್ಸಿನ್ ನ ಪ್ರಮಾಣ ನಿರ್ಣಾಯಕವಾಗಿದೆ. ಬೆಳೆಯುತ್ತಿರುವ ಹಣ್ಣಿನಲ್ಲಿ ಕೋಶ ವಿಭಜನೆ ಮತ್ತು ವಿಸ್ತರಣೆಯನ್ನು ಉತ್ತೇಜಿಸುವ ಕಾರಣ ಫಸಲಿನ ಗುಣಮಟ್ಟವನ್ನು ಆಕ್ಸಿನ್ ನಿಯಂತ್ರಿಸುತ್ತದೆ.

·        ಮುಪ್ಪಾಗುವಿಕೆ ಮುಂದೂಡಲು: ಸಸ್ಯಗಳಲ್ಲಿ ಪತ್ರಹರಿತ್ತು ಮತ್ತು ಪ್ರೋಟೀನ್‌ಗಳು ನಷ್ಟವಾಗುವುದನ್ನು ತಡೆಯುವ ಮೂಲಕ ಆಕ್ಸಿನ್ ವೃದ್ಧಾಪ್ಯವನ್ನು ಮುಂದೂಡುತ್ತದೆ. ಎಲೆ ಮತ್ತು ಹಣ್ಣಿನಲ್ಲಿ ಆಕ್ಸಿನ್ ಪ್ರಮಾಣ ಕಡಿಮೆಯಾದಾಗ ಅವು ಸಸ್ಯದಿಂದ ಕಳಚಿಬೀಳುತ್ತವೆ.

ಸಸ್ಯಗಳಲ್ಲಿ ನೈಸರ್ಗಿಕವಾಗಿ ಆಕ್ಸಿನ್ ಉತ್ಪಾದನೆಯನ್ನು ಉತ್ತೇಜಿಸುವ ಚಟುವಟಿಕೆಗಳು:

·        ಪಿಂಚಿಂಗ್ ಮತ್ತು ಪ್ರೂನಿಂಗ್: ಕೃಷಿ ತೋಟಗಾರಿಕೆಯಲ್ಲಿ ತುದಿ ಚಿವುಟುವುದು(ಪಿಂಚಿಂಗ್) ಮತ್ತು ಚಾಟನಿ ಮಾಡುವುದು (ಪ್ರೂನಿಂಗ್) ಸಾಮಾನ್ಯ ಅಭ್ಯಾಸ. ಹೀಗೆ ಮಾಡುವುದರಿಂದ ಕೇವಲ ಕಾಂಡದ ತುದಿಯಲ್ಲಿ ಉತ್ಪತ್ತಿಯಾಗುತ್ತಿದ್ದ ಆಕ್ಸಿನ್  ಪಕ್ಕದ ಕವಲುಗಳಲ್ಲೂ ಉತ್ಪತ್ತಿಯಾಗಲು ಶುರುವಾಗುತ್ತದೆ. ಗಿಡ ಹೆಚ್ಚೆಚ್ಚು ಕವಲೊಡೆಯುವುದರ ಜೊತೆಗೆ ನಿಧಾನಕ್ಕೆ ಪೊದೆಯಾಕಾರ ಪಡೆಯುತ್ತದೆ.

·        ಕಸಿಕಟ್ಟುವಾಗ: ಕಸಿ ಕಟ್ಟುವಾಗ ಆದ ಗಾಯ ಮಾಯಲು, ಬೇರು ಸಸ್ಯ ಮತ್ತು ಸಯಾನ್ ಗಳು ಒಗ್ಗೂಡಬೇಕಾದರೆ ಆಕ್ಸಿನ್ ಉತ್ಪತ್ತಿಯಾಗಬೇಕು. ಗೂಟಿ ಕಟ್ಟಿದ ಭಾಗದಲ್ಲೂ ಆಕ್ಸಿನ್ ಉತ್ಪಾದನೆಯಾಗುವ ಕಾರಣದಿಂದಲೇ ಬೇರುಗಳು ಮೂಡುತ್ತವೆ.

·        ಬೆಳಕು: ಹಗಲು ಮತ್ತು ರಾತ್ರಿಯ ಅವಧಿಯು ಆಕ್ಸಿನ್ ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತದೆ. ದೀರ್ಘ ಕಾಲದ ಬೆಳಕು ಸಾಮಾನ್ಯವಾಗಿ ಆಕ್ಸಿನ್ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಸಕ್ರಿಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

·        ಸಾರಜನಕದ ಲಭ್ಯತೆ: ಆಕ್ಸಿನ್ ರೂಪುಗೊಳ್ಳುವ ಟ್ರಿಪ್ಟೋಫಾನ್ ಅಮೈನೋ ಆಮ್ಲಕ್ಕೆ ಕಚ್ಚಾವಸ್ತು ಸಾರಜನಕ. ಟ್ರಿಪ್ಟೋಫಾನ್ ನಿಂದ IAA ಉತ್ಪಾದನೆಯಾಗಬೇಕಾದರೆ ಸತು ಕೂಡಾ ಮುಖ್ಯ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ಸಾರಜನಕದ ಪೋಷಕಾಂಶ, ಲಘು ಪೋಷಕಾಂಶಗಳ ಬಳಕೆ ಆಕ್ಸಿನ್ ಉತ್ಪಾದನೆ ಹೆಚ್ಚಿಸಬಲ್ಲದು.

ಆಕ್ಸಿನ್ ನ ಕೃತಕ ರೂಪಿಗಳು: ಇಂಡೋಲ್-3-ಬ್ಯುಟೈರಿಕ್ ಆ್ಯಸಿಡ್ ಅಥವಾ IBA; ನ್ಯಾಪ್ತಲಿನ್ ಅಸಿಟಿಕ್ ಆ್ಯಸಿಡ್ ಅಥವಾ NAA; 2,4 ಡೈಕ್ಲೋರೋ ಫಿನಾಕ್ಸಿ ಅಸಿಟಿಕ್ ಆ್ಯಸಿಡ್ ಅಥವಾ 2,4-D; ಡೈಕಾಂಬಾ

ಕೃಷಿ ತೋಟಗಾರಿಕೆಯಲ್ಲಿ ಆಕ್ಸಿನ್ ನ ಬಳಕೆ:

·        ಕಳೆನಾಶಕವಾಗಿ: ಗದ್ದೆ ತೋಟದಲ್ಲಿ ಅಗಲ ಎಲೆಯ ಕಳೆಗಳನ್ನು ನಿಯಂತ್ರಿಸಲು 2,4-D ಮತ್ತು ಡೈಕಾಂಬಾವನ್ನು ಸಿಂಪಡಣೆ ಮಾಡಲಾಗುತ್ತದೆ.

·        ಸಸ್ಯಾಭಿವೃದ್ಧಿಯಲ್ಲಿ: ಆಕ್ಸಿನ್ ಅನ್ನು ರೂಟಿಂಗ್ ಹಾರ್ಮೋನ್ ಎಂದೇ ಕರೆಯಲಾಗುತ್ತದೆ. ಕಟಿಂಗ್ ಗಳಲ್ಲಿ ಬೇರು ಬರಿಸಲು IBA NAA ಮಿಶ್ರಣದಲ್ಲಿ ಅದ್ದಿ ತೆಗೆಯುವುದು, ಅಥವಾ ತುದಿಯಲ್ಲಿ ಪೇಸ್ಟ್ ಹಚ್ಚುವ ಅಭ್ಯಾಸವಿದೆ.

·        ಕಾಯಿ ಉದುರುವಿಕೆ ತಡೆಗಟ್ಟಲು: ಬೆಳವಣಿಗೆಯ ಪೂರ್ವದಲ್ಲಿ ಅಕಾಲಿಕವಾಗಿ ಕಾಯಿ ಉದುರುವುದನ್ನು ತಡೆಗಟ್ಟಲು NAA ಸಿಂಪಡಣೆ ಮಾಡಲಾಗುತ್ತದೆ. ಇದು ಇಳುವರಿ ಹೆಚ್ಚಿಸಲು ಸಹಾಯಕ.

·        ಕಾಯಿಯ ಗುಣಮಟ್ಟಕ್ಕೆ: ಹಣ್ಣಿನ ಬೆಳೆಗಳಲ್ಲಿ ಕೆಲವೊಮ್ಮೆ ಕಾಯಿಯ ಸಂಖ್ಯೆ ಧಾರಣಾ ಸಾಮರ್ಥ್ಯಕ್ಕೂ ಮೀರಿ ಹೆಚ್ಚಾದಾಗ NAA ಸಿಂಪಡಣೆ ಮಾಡಲಾಗುತ್ತದೆ. ಹೀಗೆ ಮಾಡುವುದು ಅನಗತ್ಯ ಕಾಯಿಗಳ ಉದುರುವಿಕೆಯನ್ನು ಪ್ರಚೋದಿಸುತ್ತದೆ. ಈಗ ಸಸ್ಯದಲ್ಲಿ ಉಳಿದಷ್ಟೇ ಸಂಖ್ಯೆಯ ಕಾಯಿಗಳು ದೊಡ್ಡ ಗಾತ್ರದವಾಗಿ ಉತ್ತಮ ಗುಣಮಟ್ಟದ ಬೆಳವಣಿಗೆ ಹೊಂದಿ ಇಳುವರಿ ಹೆಚ್ಚುತ್ತದೆ.

·        ಅಂಗಾಂಶ ಕೃಷಿಯಲ್ಲಿ: ಕೃತಕ ಮಾಧ್ಯಮದ ಮೇಲೆ ಸಸ್ಯದ ಅಂಗಾಂಶದ ತುಣುಕನ್ನು ಬೆಳೆಯುವಾಗ ವರ್ಧನಾ ಅಂಗಾಂಶಗಳ ಬೆಳವಣೆಗೆಗೆ, ಅವು ಶಾಶ್ವತ ಅಂಗಾಂಶಗಳಾಗಿ ಮಾರ್ಪಾಡಾಗಲು, ವಿಶೇಷವಾಗಿ ಕ್ಯಾಲಸ್ ಅಭಿವೃದ್ಧಿ ಮತ್ತು ಬೇರಿನ ಬೆಳವಣಿಗೆ ಪ್ರಚೋದಿಸಲು ಆಕ್ಸಿನ್ ಬಳಸಲಾಗುತ್ತದೆ.

ಆಕ್ಸಿನ್ ನ ಪ್ರತಿರೋಧಕಗಳು: ಆಕ್ಸಿನ್ ನ ಕಾರ್ಯ ಚಟುವಟಿಕೆಗೆ ವಿರುದ್ಧ ಕೆಲಸ ಮಾಡುವ ಪ್ರತಿರೋಧಕ ವಸ್ತುಗಳೂ ಇವೆ. ಸೊಕ್ಕಿ ಬೆಳೆಯುತ್ತಿರುವ ಬೆಳೆಯ ಬೆಳವಣಿಗೆ ಕುಂಠಿತಗೊಳಿಸಲು ಕೆಲವೊಮ್ಮೆ ಇವುಗಳನ್ನು ಬಳಸಲಾಗುತ್ತದೆ. 2,3,5-ಟ್ರೈ ಅಯಾಡೋ ಬೆಂಜೋಯಿಕ್ ಆ್ಯಸಿಡ್ ಅಥವಾ TIBA, ನ್ಯಾಪ್ಥಲ್ತಾಲ್ಮಿಕ್ ಆ್ಯಸಿಡ್ ಅಥವಾ NPA, ಕ್ಲೋರೋಫಿನಾಕ್ಸಿ ಬ್ಯುಟೈರಿಕ್ ಆ್ಯಸಿಡ್ ಅಥವಾ PCIB, ಪಿಕ್ಲೋರಾಮ್ (ಇದು ಕಳೆನಾಶಕ, ಅಪಾಯಕಾರಿಯಾದ ಕಾರಣ ಬಳಕೆಯಲ್ಲಿಲ್ಲ)  ಇತ್ಯಾದಿ. ವಿಶೇಷವೆಂದರೆ ಆಕ್ಸಿನ್ ನ ಕೃತಕ ರೂಪಿಯಾದ 2,4D ಸೂಕ್ಷ್ಮ ಪ್ರಮಾಣದಲ್ಲಿ ಪ್ರಚೋದಕವಾಗಿ ಕಾರ್ಯ ನಿರ್ವಹಿಸಿದರೆ ಹೆಚ್ಚು ಪ್ರಮಾಣದಲ್ಲಿ ಮಿತಿ ಮೀರಿದ ಬೆಳವಣಿಗೆ ಉಂಟುಮಾಡಿ ಸಸ್ಯದ ಸಾವಿಗೆ ಕಾರಣವಾಗಿ ಕಳೆನಾಶಕವಾಗಿ ವರ್ತಿಸುತ್ತದೆ.

ಸೈಟೋಕೈನಿನ್: ಸಸ್ಯದ ಬೆಳವಣಿಗೆ, ಅಭಿವೃದ್ಧಿ ಮತ್ತು ಶಾರೀರಿಕ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸುವ ಇನ್ನೊಂದು ಪ್ರಚೋದಕ ಸೈಟೋಕೈನಿನ್. ಗ್ರೀಕ್ ಭಾಷೆಯ ಪ್ರಕಾರ ‘ಸೈಟೋಸ್’ ಎಂದರೆ ಜೀವಕೋಶ, ‘ಕೈನಿನ್’ ಎಂದರೆ ವಿಭಜನೆ. ಕೋಶ ವಿಭಜನೆಯಲ್ಲಿ ತೊಡಗುವ ಪ್ರಚೋದಕಗಳನ್ನು ಸೈಟೋಕೈನಿನನ್ ಎಂದು ಕರೆಯಲಾಗಿದೆ.

ಸೈಟೋಕೈನಿನ್ ತಯಾರಾಗುವುದೆಲ್ಲಿ: ಸೈಟೋಕೈನಿನ್ ಗಳು ಮುಖ್ಯವಾಗಿ ತಯರಾಗುವುದು ಬೇರಿನ ತುದಿಯ ವರ್ಧನಾ ಅಂಗಾಶದಲ್ಲಿ (ರೂಟ್ ಮೆರಿಸ್ಟಮ್). ಎಳೆಯ ಎಲೆಗಳು, ಬೀಜಗಳು ಮತ್ತು ಹಣ್ಣುಗಳನ್ನು ಒಳಗೊಂಡಂತೆ ಇತರ ಅಂಗಾಂಶಗಳಲ್ಲಿಯೂ ಸಹ ಅವು ಉತ್ಪಾದನೆಯಾಗಬಹುದು.

ಸೈಟೋಕೈನಿನ್ ತಯಾರಾಗುವುದು ಹೇಗೆ? : ಸೈಟೋಕೈನಿನ್ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತು ‘ಅಡಿನೋಸಿನ್ ಮೊನೋಫೋಸ್ಪೇಟ್ (AMP). AMP ಹಂತ ಹಂತವಾಗಿ ಜೈವಿಕ ಕ್ರಿಯೆಯ ಮೂಲಕ ‘ಝಿಯಾಟಿನ್’ ಆಗಿ ಬದಲಾಗುತ್ತದೆ. ಸಸ್ಯಗಳ ದೇಹದಲ್ಲಿ ನೈಸರ್ಗಿಕವಾಗಿ ಹೇರಳವಾಗಿ ಕಂಡುಬರುವ ಸೈಟೋಕೈನಿನ್ ಎಂದರೆ ಝಿಯಾಟಿನ್.

ಸಸ್ಯಗಳ ದೇಹದಲ್ಲಿ ಸೈಟೋಕೈನಿನ್ ನ ಕೆಲಸವೇನು? ನಡವಳಿಕೆಯಲ್ಲಿ ಸಾಮಾನ್ಯವಾಗಿ ಆಕ್ಸಿನ್ ನೊಂದಿಗೆ ವಿರೋಧಾತ್ಮಕ ಸಂಬಂಧವನ್ನು ಹೊಂದಿರುವ ಸೈಟೋಕೈನಿನ್ ಗಳ ಕಾರ್ಯವಿಧಾನ ಈ ಕೆಳಗಿನಂತಿದೆ.

·        ಕೋಶ ವಿಭಜನೆ ಮತ್ತು ಬೇರು-ಕಾಂಡಗಳ ರೂಪುಗೊಳ್ಳುವಿಕೆ: ಸೈಟೋಕೈನಿನ್ ಗಳ ಅತಿ ಮುಖ್ಯ, ಅತಿ ಪರಿಚಿತ ಪಾತ್ರ ಕೋಶ ವಿಭಜನೆಯದು. ಮತ್ತು ವರ್ಧನಾ ಅಂಗಾಂಶವ ಶಾಶ್ವತವಾದ ರೂಪ ಪಡೆಯಲು ಸೈಟೋಕೈನಿನ್ ಮುಖ್ಯವಾಗಿದೆ. ಅಂದರೆ ಜೀವಕೋಶವು ಬೇರಿನ ಭಾಗವಾಗುತ್ತದೋ, ಕಾಂಡದ ಭಾಗವಾಗುತ್ತದೋ ಎನ್ನುವುದನ್ನು ಸೈಟೋಕೈನಿನ್ ಆಕ್ಸಿನ್ ಜೊತೆಗೂಡಿ ನಿರ್ಧರಿಸುತ್ತವೆ.

·        ಎಲೆಗಳ ಮುಪ್ಪಾಗುವಿಕೆ ಮುಂದೂಡುವುದು: ಎಲೆಯಲ್ಲಿರುವ ಪತ್ರಹರಿತ್ತು ಮತ್ತು ಪೋಷಕಾಂಶಗಳು ನಾಶವಾಗುವುದನ್ನು ತಡೆಯುವ ಮೂಲಕ ಸೈಟೋಕೈನಿನ್ ವೃದ್ಧಾಪ್ಯವನ್ನು ವಿಳಂಬಗೊಳಿಸುತ್ತವೆ.

·        ಪೋಷಕಾಂಶಗಳ ಮರುಹಂಚಿಕೆ: ಹಳೆಯ ಎಲೆಗಳಲ್ಲಿರುವ ಪೋಷಕಾಂಶಗಳನ್ನು ಎಳೆಯ ಎಲೆಗಳಿಗೆ ಹಂಚುವ ಸೈಟೋಕೈನಿನ್ ಸಸ್ಯಗಳ ದೇಹದಲ್ಲಿ ಪೋಷಕಾಂಶಗಳ ಮರುಹಂಚಿಕೆಯಲ್ಲಿ ತೊಡಗುತ್ತವೆ.

·        ಪತ್ರರಂಧ್ರಗಳು ತೆರೆಯುವಿಕೆಯಲ್ಲಿ: ಒತ್ತಡದ ಸಮಯದಲ್ಲಿ ಭಾಷ್ಪವಿಸರ್ಜನೆ ಉಸಿರಾಟ ನಡೆಸಲು ಮುಚ್ಚಿದ ಪತ್ರರಂಧ್ರವನ್ನು ತೆರೆಯುವಂತೆ ಸೈಟೋಕೈನಿನ್ ಒತ್ತಾಯಿಸುತ್ತದೆ.

·        ನಾಳೀಯ ಅಂಗಾಂಶಗಳ ಬೆಳವಣಿಗೆಯಲ್ಲಿ: ನಾಳಕೂಚಗಳ, ವಿಶೇಷವಾಗಿ ನೀರು ಸಾಗಣೆ ಮಾಡುವ ಕ್ಸೈಲಮ್ ರೂಪುಗೊಳ್ಳುವಿಕೆಯಲ್ಲಿ ಸೈಟೋಕೈನಿನ್ ಪ್ರಭಾವ ಬೀರುತ್ತದೆ.

·        ಕಾಂಡದ ತುದಿಗಳ ಅನಿಯಮಿತ ಬೆಳವಣಿಗೆ ತಡೆಯುಲು: ‘ಅಪಿಕಲ್ ಡಾಮಿನನ್ಸ್’ ಒಡ್ಡುವ ಆಕ್ಸಿನ್ ವಿರುದ್ಧ ಕೆಲಸ ಮಾಡುವ ಸೈಟೋಕೈನಿನ್ ಸಸ್ಯಗಳಲ್ಲಿ ಅಕ್ಕಪಕ್ಕದ ಕವಲುಗಳನ್ನು ಪ್ರೋತ್ಸಾಹಿಸಿ ಪೊದೆಯಾಗುವಂತೆ ಪ್ರಚೋದಿಸುತ್ತದೆ.

ಸೈಟೋಕೈನಿನ್ v/s ಇತರೇ ಪ್ರಚೋದಕಗಳು: ಸೈಟೋಕೈನಿನ್ ಇತರೇ ಸಸ್ಯ ಪ್ರಚೋದಕಗಳೊಂದಿಗೆ ವಿರೋಧವಾಗಿ (ಕೆಲವೊಮ್ಮೆ ಜೊತೆಯಾಗಿಯೂ) ನಡೆದುಕೊಳ್ಳುತ್ತದೆ ಎನ್ನುವುದು ವಿಶೇಷ. ಬೇರು-ಕಾಂಡ ರೂಪುಗೊಳ್ಳುವಾಗ ಆಕ್ಸಿನ್-ಸೈಟೋಕೈನಿನ್ ಗಳ ವಿರೋಧಿಗಳಾಗಿ ಕೆಲಸ ಮಾಡುತ್ತವೆ. ಸೈಟೋಕೈನಿನ್ ಕಾಂಡದ ಬೆಳವಣಿಗೆಯನ್ನು ಪ್ರಚೋದಿಸಿದರೆ ಆಕ್ಸಿನ್ ಬೇರಿನ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಒತ್ತಡದ ಸಂದರ್ಭದಲ್ಲಿ ಪತ್ರರಂಧ್ರಗಳ ತೆರೆಯುವಿಕೆಯಲ್ಲಿ ಅಬ್ಸಿಸಿಕ್ ಆಮ್ಲ ಮತ್ತು ಸೈಟೋಕೈನಿನ್ ವಿರೋಧಿಗಳಾಗಿ ಕೆಲಸ ಮಾಡುತ್ತವೆ. ಅಬ್ಸಿಸಿಕ್ ಆಮ್ಲ ಪತ್ರರಂಧ್ರಗಳ ಮುಚ್ಚುವಿಕೆಯನ್ನು ಉತ್ತೇಜಿಸಿದರೆ  ಸೈಟೋಕೈನಿನ್ ತೆರೆಯುವಿಕೆಯನ್ನು ಉತ್ತೇಜಿಸುತ್ತದೆ. ಎಥೆಲಿನ್-ಸೈಟೋಕೈನಿನ್ ಜೋಡಿಯದ್ದೂ ಇದೇ ಕಥೆ.  ಹಣ್ಣು ಮಾಗಲು ಎಥೆಲಿನ್ ಪ್ರೋತ್ಸಾಹಿಸಿದರೆ ಸೈಟೋಕೈನಿನ್ ಹಣ್ಣಾಗುವಿಕೆಯನ್ನು ಮುಂದೂಡುತ್ತದೆ.

ಸೈಟೋಕೈನಿನ್ ನ ಕೃತಕ ರೂಪಿಗಳು: ಕೈನೆಟಿನ್; ಬೆಂಜೈಲ್ ಅಮೈನೋ ಪ್ಯುರಿನ್ ಅಥವಾ BAP; ಥೈಡೈಅಜುರಾನ್ ಅಥವಾ TDZ; ಝಿಯಾಟಿನ್ ರೈಬೋಸೈಡ್ ಇತ್ಯಾದಿ

ಕೃಷಿ ತೋಟಗಾರಿಕೆಯಲ್ಲಿ ಸೈಟೋಕೈನಿನ್ ನ ಬಳಕೆ:

·        ಅಂಗಾಂಶ ಕೃಷಿಯಲ್ಲಿ: ಬೇರು-ಕಾಂಡ ಪ್ರತ್ಯೇಕವಾಗಿ ರೂಪುಗೊಳ್ಳಲು ಸೈಟೋಕೈನಿನ್ ಅನ್ನು (ಆಕ್ಸಿನ್ ನ ಜೊತೆಗೆ) ಅಂಗಾಂಶ ಕೃಷಿಯಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ಮೇಲೆ ಹೇಳಿದ ಕೃತಕ ರೂಪಿಗಳು ಅಂಗಾಂಶ ಕೃಷಿಯಲ್ಲಿಯೇ ಹೆಚ್ಚು ಬಳಸಲ್ಪಡುತ್ತಿವೆ.

·        ವೃದ್ಧಾಪ್ಯ ವಿಳಂಬಗೊಳಿಸಲು: ಮುಂಚೆ ಹೇಳಿದಂತೆ ಮುಪ್ಪನ್ನು ಮುಂದೂಡುವ ಸಾಮರ್ಥ್ಯವಿರುವ ಸೈಟೋಕೈನಿನ್ ಅನ್ನು ಸೊಪ್ಪು ತರಕಾರಿಗಳ, ಸಲಾಡ್ ತರಕಾರಿಗಳ, ಮತ್ತು ಕತ್ತರಿಸಿದ ಹೂವುಗಳ ಜೀವಿತಾವಧಿಯನ್ನು ವಿಸ್ತರಿಸಲು ಬಳಸಲಾಗುತ್ತದೆ.

·        ಕಾಯಿ ಕಚ್ಚುವಿಕೆಯನ್ನು ಉತ್ತಮಗೊಳಿಸಲು: ಬೆಳವಣಿಗೆ ಹೊಂದುತ್ತಿರುವ ಕಾಯಿ-ಹಣ್ಣುಗಳಲ್ಲಿ  ಜೀವಕೋಶ ವಿಭಜನೆಯನ್ನು ಉತ್ತೇಜಿಸುವ ಕಾರಣ ಸೈಟೋಕೈನಿನ್ ಅನ್ನು ಉತ್ತಮ ಗಾತ್ರದ, ಗುಣಮಟ್ಟದ ಹಣ್ಣನ್ನು ಪಡೆಯಲು ಬಳಸಲಾಗುತ್ತದೆ.

·        ಪೋಷಕಾಂಶಗಳ ಸಮರ್ಥ ನಿರ್ವಹಣೆಗೆ: ಸಸ್ಯ ದೇಹದಲ್ಲಿ ಪೋಷಕಾಂಶಗಳ ಮರುಹಂಚುವಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಕಾರಣ ಸೈಟೋಕೈನಿನ್  ಪೌಷ್ಟಿಕಾಂಶದ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ರಸಗೊಬ್ಬರಗಳ ಅಗತ್ಯವನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ.

·        ಸುಪ್ತಾವಸ್ಥೆ ಮುರಿಯಲು: ಕೆಲವು ಬಾರಿ ಬೀಜಗಳಲ್ಲಿ ಸುಪ್ತಾವಸ್ಥೆ ಮುರಿದು ಮೊಳಕೆಯೊಡೆಯುವುದನ್ನು ಪ್ರಚೋದಿಸಲು ಸೈಟೋಕೈನಿನ್ ಅನ್ನು (ಜಿಬ್ಬರೆಲಿನ್ ನ ಜೊತೆಗೆ) ಬಳಸಲಾಗುತ್ತದೆ

ಸೈಟೋಕೈನಿನ್ ನ ಪ್ರತಿರೋಧಕಗಳು: ಸೈಟೊಕೈನಿನ್ ಚಟುವಟಿಕೆಯನ್ನು ವಿರೋಧಿಸುವ ಅಥವಾ ನಿಯಂತ್ರಿಸುವ ಕೆಲ ವಸ್ತುಗಳು ಹೀಗೆವೆ. ಲೋವಾಸ್ಟಾಟಿನ್, ಕೈನೆಟಿನ್ ರೈಬೋಸೈಡ್, ಇತ್ಯಾದಿ.

ಮುಂದಿನ ಸಂಚಿಕೆಯಲ್ಲಿ ಇನ್ನುಳಿದ ಪ್ರಚೋದಕಗಳ ಬಗ್ಗೆ ವಿವರವಾಗಿ ತಿಳಿಯೋಣ.


Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ