ಹೈಡ್ರೆಂಜಿಯಾ

ಜಪಾನೀ ಬೌದ್ಧಧರ್ಮಿಗಳ ಪ್ರಕಾರ ಏಪ್ರಿಲ್ 8 ಬುದ್ಧನ ಜನ್ಮದಿನ; ಪ್ರತಿವರ್ಷ ಈ ವಿಶೇಷ ದಿನದಂದು ಬುದ್ಧನನ್ನು ನವಜಾತ ಶಿಶುವಾಗಿ ಕಂಡು ‘ಅಮಾ-ಚಾ’ ಎನ್ನುವ ವಿಶೇಷ ಮೂಲಿಕಾ ದ್ರವ್ಯದಿಂದ ಸ್ನಾನ ಮಾಡಿಸುವ ಆಚರಣೆಯಿದೆಯಂತೆ. ಬುದ್ಧ ಹುಟ್ಟಿದಾಗ ಒಂಭತ್ತು ಡ್ರ್ಯಾಗನ್ ಗಳು ಅಮೃತ ಸುರಿಸಿದವು, ಅಮಾ-ಚಾವೇ ಅಮೃತ ಎನ್ನುವುದು ಜಪಾನಿನ ಪುರಾಣಕಥೆ. ಇಂದಿಗೂ ಅಮಾ-ಚಾವನ್ನು ಬುದ್ಧನ ಪ್ರತಿಮೆಯ ಮೇಲೆ ಅಭಿಷೇಕ ಮಾಡಿ ಭಕ್ತರಿಗೆ ತೀರ್ಥದಂತೆ ನೀಡಲಾಗುತ್ತದೆ. ಸಕ್ಕರೆಗಿಂತಲೂ 400-800 ಪಟ್ಟು ಸಿಹಿಯಾಗಿರುವ ಈ ಹರ್ಬಲ್ ಟೀಯನ್ನು ತಯಾರಿಸುವುದು ‘ಹೈಡ್ರೆಂಜಿಯಾ ತನ್ಬರ್ಜಿ’ ಎನ್ನುವ ಸಸ್ಯದ ಎಲೆಗಳಿಂದ. ಅಲಂಕಾರಿಕವಾಗಿ ನಮ್ಮೆಲ್ಲರ ಗಾರ್ಡನ್ ನಲ್ಲಿ ಕಂಡುಬರುವ ಹೈಡ್ರೆಂಜಿಯಾ/ಹೈಡ್ರಾಂಜಿಯಾದ ಸಂಬಂಧೀಸಸ್ಯದಿಂದ.

ಹೈಡ್ರೆಂಜಿಯಾ ಸಸ್ಯಸಮೂಹ ಹುಟ್ಟಿದ್ದು ಪೂರ್ವ ಏಷಿಯಾದಲ್ಲಿ. ಹಾಗಾಗಿ ಜಪಾನ್, ಕೊರಿಯಾ ಮತ್ತು ಚೀನಾದ ಪುರಾಣ-ಆಹಾರ-ಓಷಧಿಯಲ್ಲಿ ಇದಕ್ಕೆ ವಿಶೇಷ ಮಹತ್ವ. ಇದರ ಸೌಂದರ್ಯಕ್ಕೆ ಮಾರುಹೋದ ಯುರೋಪಿಯನ್ ಸಸ್ಯೋತ್ಸಾಹಿಗಳು 18ನೇ ಶತಮಾನದಲ್ಲಿ ಅಲಂಕಾರಿಕ ಉದ್ದೇಶಗಳಿಗಾಗಿ ಬೆಳೆಸಲು ಪ್ರಾರಂಭಿಸಿದರು. ಅಂದಿನಿಂದ ಪ್ರಪಂಚದದೆಲ್ಲೆಡೆ ಹರಡುತ್ತಾ ನಮ್ಮಲ್ಲೂ ಜನಪ್ರಿಯವಾದ ಹೈಡ್ರೆಂಜಿಯಾ ಹೊರಾಂಗಣವಲ್ಲದೇ ಒಳಾಂಗಣ ಸಸ್ಯವಾಗಿ, ಹೂದಾನಿ ಅಲಂಕರಿಸುವ ‘ಕಟ್ ಫ್ಲವರ್’ ಆಗಿಯೂ ಬಳಕೆಯಲ್ಲಿದೆ.

ಹೈಡ್ರೆಂಜಿಯಾಗಳಲ್ಲಿ ಸುಮಾರು ಎಪ್ಪತ್ತೈದು ಪ್ರಭೇದಗಳಿವೆ. ಆದರೆ ಅಲಂಕಾರಿಕವಾಗಿ ಹೆಚ್ಚು ಪ್ರಸಿದ್ಧಿಯಲ್ಲಿರುವುದು ‘ಹೈಡ್ರೆಂಜಿಯಾ ಮ್ಯಾಕ್ರೋಫಿಲ್ಲಾ’. ಕೃತಕವೆನಿಸುವ ಗಟ್ಟಿ ಎಸಳಿನ ಚೆಂಡಿನಾಕಾರದ ವಿವಿಧ ವರ್ಣದ ಹೂವು, ಘಾಡ ಹಸಿರು ಎಲೆಗಳಿಂದ ಕಂಗೊಳಿಸುವ ಹೈಡ್ರೆಂಜಿಯಾಗಳು ಉದ್ಯಾನವನಕ್ಕೆ ವಿಶೇಷ ಕಳೆ ನೀಡಬಲ್ಲವು. ಮಣ್ಣಿನ ಗುಣಧರ್ಮಕ್ಕೆ ತಕ್ಕಂತೆ ಬದಲಾಗುವ ಹೂಬಣ್ಣ ಹೈಡ್ರೆಂಜಿಯಾಗಳ ಇನ್ನೊಂದು ವಿಶೇಷತೆ. ಹೌದು, ನಿಮ್ಮ ಗಾರ್ಡನ್ ನಲ್ಲಿರುವ ಬಣ್ಣ ಬಣ್ಣದ ಹೈಡ್ರೆಂಜಿಯಾಗಳೆಲ್ಲಾ ಒಂದೇ ತಳಿಯವು!

ಮಣ್ಣಿನ ರಸಸಾರವನ್ನು ಸೊನ್ನೆಯಿಂದ ಹದಿನಾಲ್ಕು (0-14) ಅಂಕದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಅಂಕ 7 ಎನ್ನುವುದು ಸಮತೋಲಿತ ರಸಸಾರ. ಎಲ್ಲಾ ಪೋಷಕಾಂಶಗಳೂ ಹದವಾಗಿರುವ ಇಂತಹ ಮಣ್ಣು ಸಸ್ಯಗಳ ಬೆಳವಣಿಗೆಗೆ ಅತ್ಯಂತ ಸೂಕ್ತ. ಆದರೆ ಎಲ್ಲಾ ಮಣ್ಣು ಹೀಗಿರುವುದಿಲ್ಲ. 7ಕ್ಕಿಂತ ಕಡಿಮೆ ಅಂಕವಿರುವ ಆಮ್ಲೀಯ (ಅಸಿಡಿಕ್) ಮಣ್ಣಿನಲ್ಲಿ ‘ಅಲ್ಯುಮಿನಿಯಮ್’ ಧಾತು ಹೆಚ್ಚಿನ ಪ್ರಮಾಣದಲ್ಲಿದ್ದರೆ  7ಕ್ಕಿಂತ ಹೆಚ್ಚು ಅಂಕವಿರುವ ಕ್ಷಾರೀಯ (ಬೇಸಿಕ್) ಮಣ್ಣಿನಲ್ಲಿ ಇದೇ ಧಾತು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೈಡ್ರೆಂಜಿಯಾಗಳು ಮಣ್ಣಿನಲ್ಲಿರುವ ಅಲ್ಯುಮಿನಿಯಮ್ ಧಾತುಗಳ ಪ್ರಮಾಣಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತವೆ. ರಸಸಾರದ ಅನುಸಾರ ಆಮ್ಲೀಯ ಮಣ್ಣಿನಲ್ಲಿ ನೀಲಿ ಹೂ, ಕ್ಷಾರೀಯ ಮಣ್ಣಿನಲ್ಲಿ ಗುಲಾಬಿ ಹೂ, ಇವೆರಡರ ಮಧ್ಯೆ ನೇರಳೆ ಹೂವನ್ನು ಉತ್ಪಾದಿಸುತ್ತವೆ. ಆದರೆ ಯಾವುದೇ ವರ್ಣಹರಿತ್ತನ್ನು ಹೊಂದಿರದ ಬಿಳಿ ಹೈಡ್ರೆಂಜಿಯಾಗಳು ಈ ನಿಯಮಕ್ಕೆ ಹೊರಗೆ.

ಫಲವತ್ತ ಮಣ್ಣು, ಹೇರಳವಾದ ನೀರು, ಭಾಗಶಃ ನೆರಳು ಇವುಗಳ ಬೇಡಿಕೆ; ಆಗಾಗ ಗೊಬ್ಬರ ಕೊಡುವುದು, ಹಳೆಯ ಕಾಂಡವನ್ನು ಕಟಿಂಗ್ ಮಾಡುವುದು ಹೂ ಬಿಡಲು ಉತ್ತೇಜನಕಾರಿ. ಅಲ್ಯುಮಿನಿಯಮ್ ಹೊಂದಿರುವ ಗೊಬ್ಬರ/ರಾಸಾಯನಿಕವನ್ನು ಮಣ್ಣಿಗೆ ಬೆರೆಸುವುದರಿಂದ ಹೂಗಳ ಬಣ್ಣಗಳನ್ನು ಬದಲಾಯಿಸಬಹುದು. ಆದರೆ ಇದು ತುಂಬಾ ನಿಧಾನಕ್ಕೆ, ಎರಡು-ಮೂರು ವರ್ಷಗೂಡಿ ನಡೆವ ಕ್ರಿಯೆ, ಜೊತೆಗೆ ಎಲ್ಲಾ ಬಾರಿ ಫಲಕಾರಿಯಲ್ಲ. ಹೆಚ್ಚು ರಂಜಕದ  ಗೊಬ್ಬರ ಸೇರಿಸಿಯೂ ಈ ಜಾದೂವನ್ನು ಪ್ರಯೋಗಿಸಬಹುದು.

ಕೊನೆಯ ಎಚ್ಚರಿಕೆ! ಮೇಲೆ ಹೇಳಿದಂತೆ ಹೈಡ್ರೆಂಜಿಯಾ ಎಲೆಗಳ ಚಹಾ ಮಾಡಿ ಕುಡಿಯಲು ಮುಂದಾಗಬೇಡಿ. ಎಲ್ಲಾ ಜಾತಿಯ ಎಲೆಗಳೂ ಸೇವನೆಗೆ ಯೋಗ್ಯವಲ್ಲ. ಕೆಲವುದರಲ್ಲಿ ಅಲ್ಪ ಪ್ರಮಾಣದ ‘ಸೈಯನೈಡ್’ ಅಂಶವಿರುತ್ತದೆ. ಸಾವು ಸಂಭವಿಸದಿದ್ದರೂ ಅಸ್ವಸ್ಥರಾಗಬಹುದು.



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ