ಯುಫೋರ್ಬಿಯಾ


ಮೈಯೆಲ್ಲಾ ಸೂಜಿ ದಬ್ಬಣದಂತ ಚೂಪ ಮೊನೆಯ ಮುಳ್ಳು; ಸ್ವಲ್ಪ ಪೆಟ್ಟಾದರೂ ಸುರಿವ ಹಾಲು; ಎರಡೇ ಪಕಳೆಗಳ ಮಿಶ್ರ ಬಣ್ಣದ ಹೂಗಳು; ಪಕಳೆಗಳ ಮಧ್ಯದಲ್ಲೊಂದು ಬಂಗಾರದ ಬೊಟ್ಟು. ಗಾರ್ಡನರ್ಸ್ ಗುಂಪಿನಲ್ಲಿ ಕಳ್ಳಿ ಎಂದೇ ಕರೆಸಿಕೊಳ್ಳುವ ಈ ಅಲಂಕಾರಿಕ ಸಸ್ಯ 'ಯುಫೋರ್ಬಿಯಾ ಮಿಲಿ'. 'ಕ್ರೌನ್ ಆಫ್ ಥಾರ್ನ್ಸ್' ಎಂದು ಪ್ರ(ಕು)ಖ್ಯಾತವಾದ ಮಿಲಿಯ ಕುಟುಂಬವೇ ಯುಫೋರ್ಬಿಯಾ.

ಧ್ರುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲಾ ಖಂಡಗಳಲ್ಲೂ ಕಂಡುಬರುವ ಯುಫೋರ್ಬಿಯಾಗಳದ್ದು ದೊಡ್ಡ ಬಳಗ. ನಲವತ್ತು ಅಡಿಯಿಂದ (ಯು.ಇಂಜೆಂನ್ಸ್) ನಾಲ್ಕಿಂಚು (ಯು.ಪಾಲಿಕಾರ್ಪಾ) ಬೆಳೆವ ವೈವಿಧ್ಯಮಯ ಗಾತ್ರ, ಆಕಾರ, ವಿನ್ಯಾಸದ ಎರಡು ಸಾವಿರ ಜಾತಿಯ ಯುಫೋರ್ಬಿಯಾಗಳನ್ನು ದಾಖಲಿಸಲಾಗಿದೆ.

ಹೆಸರಲ್ಲೇನಿದೆ!?

ಯುಫೋರ್ಬಿಯಾಗಳ ಹೆಸರ ಹಿಂದಿನ ಕಥೆ ಮಜವಾದದ್ದು. ರೋಮನ್ ಸಾಮ್ರಾಜ್ಯ ಸ್ಥಾಪಿಸಿದ ಚಕ್ರವರ್ತಿ ಅಗಸ್ಟಸ್ ನ ಆಸ್ಥಾನದಲ್ಲಿ ಅಂಟೋನಸ್ ಮೂಸಾ ಎಂಬ ವೈದ್ಯನೊಬ್ಬನಿದ್ದ. ಸಾವಿನ ಸನಿಹದಲ್ಲಿದ್ದ ಅಗಸ್ಟಸ್ ನ ರೋಗವನ್ನು ಗುಣಪಡಿಸಿದಾಗ ಮೂಸಾ ಇದ್ದಕ್ಕಿದ್ದಂತೆ ಪ್ರಸಿದ್ಧನಾದ. ಎಲ್ಲರೂ ಆತನ ಕೈಗುಣವನ್ನು ಕೊಂಡಾಡತೊಡಗಿದರು. ಎಷ್ಟರ ಮಟ್ಟಿಗೆ ಅಂದರೆ ರೋಮ್ ಪಟ್ಟಣದಲ್ಲಿ ಮೂಸಾನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಇದೇ ಸಮಯದಲ್ಲಿ ಮೂಸಾನ ತಮ್ಮ ಯುಫೋರ್ಬಸ್ ಮಾರೇಟಿನಿಯಾದ (ಆಫ್ರಿಕಾ) ರಾಜ ಜುಬಾ II ನ ಆಸ್ಥಾನದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ. ಯುಫೋರ್ಬಸ್ ನ ಮಾಂತ್ರಿಕ ಗುಣದ ಓಷಧಿಗಳಲ್ಲಿ ಸಸ್ಯವೊಂದರ ಹಾಲಿನ ಬಳಕೆಯನ್ನು ಗಮನಿಸಿ ರಾಜ ಜುಬಾ ಆ ಸಸ್ಯಕ್ಕೆ ಯುಫೋರ್ಬಸ್ ಎಂದೇ ಕರೆದ. ಹೀಗೆ ಯುಫೋರ್ಬಿಯಾಗಳು ನಾಮಕರಣಗೊಂಡವು. ಸಸ್ಯಗಳನ್ನು ವರ್ಗೀಕರಣಗೊಳಿಸುವಾಗ ವಿಜ್ಞಾನಿ ಲಿನಿಯಸ್ ಇದೇ ಹೆಸರನ್ನು ಉಳಿಸಿಕೊಳ್ಳುತ್ತಾ 'ಅಣ್ಣನಷ್ಟು ಖ್ಯಾತಿ ಪಡೆಯದಿದ್ದರೂ ತಮ್ಮನ ಹೆಸರು ಇಂದು ಅಜರಾಮರ. ಮೂಸಾನ ಹೆಸರಿನ ಪ್ರತಿಮೆ ನಾಶವಾಯಿತು, ಕಣ್ಮರೆಯಾಯಿತು. ಆದರೆ ಯುಫೋರ್ಬಸ್‌ನ ಹೆಸರು ಜನರ ಬಾಯಲ್ಲಿ ಸ್ಥಿರವಾಯಿತು' ಎಂದು ಈ ಕಥೆಯನ್ನು ನಿರೂಪಿಸಿದ್ದು ವಿಶೇಷ!

ನಿಜಕ್ಕೂ ಹೂವಲ್ಲ,

ನೋಡಲು ಭಿನ್ನವಾದರೂ ಎಲ್ಲಾ ಯುಫೋರ್ಬಿಯಾಗಳಲ್ಲೂ ಕಂಡು ಬರುವ ಸಾಮಾನ್ಯ ಗುಣ ಹಾಲಿನಂತಹ ದ್ರವ (ಲ್ಯಾಟೆಕ್ಸ್). ಪರಭಕ್ಷಕರಿಂದ ಪಾರಾಗಲು ವಿಕಸನವಾದ ಗುಣವಿದು. ಇದರ ಜೊತೆಗೆ ಸಾಮಾನ್ಯವಾದ ಇನ್ನೊಂದು ಲಕ್ಷಣವೆಂದರೆ ಸಸ್ಯಲೋಕದ ಬೇರೆ ಯಾವುದೇ ಜಾತಿಗಳಲ್ಲಿ ಕಂಡುಬರದ ಹೂವಿನ ರಚನೆ. ಮೇಲ್ನೊಟಕ್ಕೆ ಎರಡೇ ಪಕಳೆಗಳಿರುವ ಹೂವಂತೆ ಕಂಡು ಬರುವ ರಚನೆ ನಿಜಕ್ಕೂ ಹೂವಲ್ಲ, ಬದಲಿಗೆ ಚಿಕ್ಕ ಚಿಕ್ಕ ಹೂಗಳನ್ನು (ಮಧ್ಯದ ಬಂಗಾರದ ಬೊಟ್ಟು) ಹಿಡಿದಿಟ್ಟುಕೊಂಡ ಪುಷ್ಪ ಪಾತ್ರೆ (ಸೈಥಿಯಮ್).

ನಿಜಕ್ಕೂ ಕಳ್ಳಿಯಲ್ಲ,

ಮೈ ತುಂಬಾ ಮುಳ್ಳು ಮತ್ತು ನೀರಿನ ಕೊರತೆ, ಬಿಸಿಲ ಬೇಗೆಯನ್ನು ತಡೆಯುವ ಕಾರಣ ಆಡುಭಾಷೆಯಲ್ಲಿ ಯುಫೋರ್ಬಿಯಾಗಳನ್ನು ಕಳ್ಳಿ ಎಂದೇ ಗುರುತಿಸಿಬಿಡುತ್ತೇವೆ. ಆದರೆ ಇವು ಕ್ಯಾಕ್ಟೆ/ಕಳ್ಳಿ ಸಸ್ಯಗಳಲ್ಲ. ಕಳ್ಳಿ ಸಸ್ಯಗಳಲ್ಲಿ ಭಾಷ್ಪೀಕರಣ ತಗ್ಗಿಸುವ ಸಲುವಾಗಿ ಎಲೇಗಳೇ ಮಾರ್ಪಾಡಾಗಿ 'ಹುಸಿ ಮುಳ್ಳು'ಗಳಾಗಿರುತ್ತವೆ.. ಆದರೆ ಯುಫೋರ್ಬಿಯಾಗಳಲ್ಲಿ ಎಲೆಗಳ ಜೊತೆ ಕಾಂಡದ ತುಂಬಾ ನೈಜವಾದ ಮುಳ್ಳುಗಳಿರುವುದನ್ನು ಗಮನಿಸಬಹುದು. ಕಳ್ಳಿಗಳಲ್ಲಿ ನೀರು ಸಂಗ್ರಹಕ್ಕಾಗಿ ವಿಶೇಷ ರಚನೆಗಳಿರುತ್ತವೆ (ಏರಿಯೋಲ್ ಗಳು). ಯಾವುದೇ ಕಳ್ಳಿಗಳಲ್ಲೂ ಯುಫೋರ್ಬಿಯಾದಂತೆ ಹಾಲಿನಂತ ದ್ರವ ಹೊರಸೂಸುವುದಿಲ್ಲ. ಹೀಗೆ ಕಳ್ಳಿಗಳು-ಯುಫೋರ್ಬಿಯಾಗಳು ಬೇರೆಯದೇ ಕುಲಕ್ಕೆ ಸೇರಿದ ಸಸ್ಯಗಳಾಗಿವೆ. ಆದರೂ ಸಕ್ಯುಲೆಂಟ್ಸ್ ಗಳಾಗಿ ಗುರುತಿಸಬಹುದಾದ ಕೆಲ ಯುಫೋರ್ಬಿಯಾಗಳಿವೆ.

ದ್ಯುತಿ ಸಂಶ್ಲೇಷಣೆಯ ಕಿಂಗ್

ಸಸ್ಯಗಳಲ್ಲಿ C3, C4 ಮತ್ತು CAM ಎಂಬ ಮೂರು ರೀತಿಯ ದ್ಯುತಿಸಂಶ್ಲೇಷಣಾ ಕ್ರಿಯೆಗಳನ್ನು ಹೆಸರಿಸಬಹುದು. ಸರಳವಾಗಿ ಹೇಳುವುದಾದರೆ ಸಸ್ಯಗಳು ಆಹಾರ ತಯಾರಿಸಲು ಸವೆಸುವ ಹಾದಿಗಳಿವು. ತಮ್ಮ ಸುತ್ತಲಿನ ಹವಾಗುಣಕ್ಕನುಸಾರ ಸಸ್ಯಗಳು ಈ ಮೂರರಲ್ಲಿ ಓಂದು (ಕೆಲ ಬಾರಿ ಎರಡು) ಹಾದಿಯನ್ನು ಆಯ್ಕೆ ಮಾಡಿಕೊಂಡು ವಿಕಸನವಾಗಿರುತ್ತವೆ.  ಉದಾಹರಣೆ ತಂಪು ಆರ್ದ್ರ ಪ್ರದೇಶಕ್ಕೆ ವಿಕಸಿತವಾದ ಭತ್ತ C3 ಹಾದಿಯನ್ನು, ಬಿಸಿಲು ಉಷ್ಣದ ಪ್ರದೇಶಕ್ಕೆ ವಿಕಸಿತವಾದ ಕಬ್ಬು C4 ಹಾದಿಯನ್ನು, ತೀವ್ರ ಉರಿ ಬಿಸಿಲು ಶುಷ್ಕ ಪ್ರದೇಶಕ್ಕೆ ವಿಕಸಿತವಾದ ಕಳ್ಳಿಗಳು CAM ಹಾದಿಯನ್ನು ಆಯ್ಕೆ ಮಾಡಿಕೊಂಡಿವೆ. ಆಶ್ಚರ್ಯಕರ ಸಂಗತಿಯೆಂದರೆ ಈ ಮೂರೂ ಹಾದಿಯನ್ನು ಅನುಸರಿಸುವ ಸಸ್ಯ ಲೋಕದ ಏಕೈಕ ಕುಲ ಯುಫೋರ್ಬಿಯಾಗಳದ್ದು. ಹಾಗಾಗಿ ಯಾವುದೇ ವಾತಾವರಣಕ್ಕೂ ಒಗ್ಗಿಕೊಳ್ಳುವ ಹಿರಿಮೆ ಇವುಗಳದ್ದು.

ಅಲಂಕಾರಿಕ ಬಳಕೆ

ಹೀಗೆ ಯಾವುದೇ ಪರಿಸ್ಥಿತಿಯಲ್ಲಿ ಬದುಕಬಲ್ಲ ಯುಫೋರ್ಬಿಯಾಗಳು ಉದ್ಯಾನವನಕ್ಕೆ ಕಡಿಮೆ ನಿರ್ವಹಣೆಯ ಉತ್ತಮ ಸೇರ್ಪಡೆಯಾಗಬಲ್ಲವು. ಇತರೇ ಅಲಂಕಾರಿಕ ಸಸ್ಯಗಳು ಬದುಕಲು ಕಷ್ಟವೆನಿಸುವ ತೀವ್ರ ಬಿಸಿಲಿನ ಜಾಗದಲ್ಲೂ ಇವು ಅಂದದ ಹೂ ಬಿರಿಯಬಲ್ಲವು. ಹೊರಾಂಗಣವಲ್ಲದೆ ಸೂಕ್ತ ಪ್ರಮಾಣದ ಬೆಳಕು ಲಭ್ಯವಿರುವ ಒಳಾಂಗಣದಲ್ಲೂ ಖುಷಿಯಿಂದ ಬೆಳೆಯಬಲ್ಲವು . ತಮ್ಮ ರಂಗು ರಂಗಿನ ಎಲೆಗಳಿಂದ ಆಕರ್ಷಿಸುವ ಪೊಯಿನ್ಸೆಟ್ಟಿಯಾ (ಯು.ಪಲ್ಚರಿಮಾ) ಕೂಡಾ ಇದೇ ಕುಲದ ಕುಡಿ.

ಅಲಂಕಾರಿಕ ಬಳಕೆಗೆ 'ಮಿಲಿ'ಗಳು ಒಳ್ಳೆಯ ಆಯ್ಕೆ. ಪೊದೆಯಾಗಿ ಬೆಳೆವ ಮಿಲಿಗಳು ಹಳದಿ ಕೆಂಪು ಗುಲಾಬಿ ಕೇಸರಿ ಬಿಳಿ ಹಸಿರು ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿವೆ. ಸೊಂಪಾಗಿ ಹೂ ಬಿಡಲು ಹಗಲಿಡೀ ಬೆಳಕು, ಕುಂಡದ ಮಿಶ್ರಣದ ಜೊತೆ ಗೊಬ್ಬರ ಅತ್ಯವಶ್ಯಕ. ಅಷ್ಟಾಗಿ ನೀರನ್ನು ಬೇಡದ ಈ ಸಸ್ಯಗಳಿಗೆ ಅಪರೂಪಕ್ಕೆ ನೀರುಣಿಸಿದರೆ ಸಾಕು. ಕೀಟ-ರೋಗಗಳ ಭಾದೆಗಳಿಲ್ಲ. ಆರಿಂಚಿನ ಮಣ್ಣಿನ ಕುಂಡಗಳಲ್ಲಿ ಇವುಗಳು ಸುಂದರವಾಗಿ ಕಾಣಬಲ್ಲವು. ಕಾಡು ಕಾಡಾಗಿ ಬೆಳೆಯುವುದನ್ನು ತಪ್ಪಿಸಲು ಆಗಾಗ ಪ್ರೂನಿಂಗ್/ಸವರುವುದು ಒಳ್ಳೆಯದು. ಇದೇ ಕಟಿಂಗ್ಸ್ ಗಳಿಂದ ಇನ್ನಷ್ಟು ಗಿಡಗಳನ್ನು ಆರಾಮವಾಗಿ ಪ್ರಸರಣ ಮಾಡಬಹುದು. ಮುಳ್ಳುಗಳ ಬಗ್ಗೆ ಎಚ್ಚರ ಅಷ್ಟೇ.



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ