ಪರಿಸರದ ಒತ್ತಡಗಳಿಗೆ ಸಸ್ಯಗಳ ಮಾರ್ಪಾಡು - ಸಸ್ಯ ಅಂಗರಚನಾ ಶಾಸ್ತ್ರ & ಶರೀರ ಶಾಸ್ತ್ರ ಭಾಗ-4
ಹಿಂದಿನ
ಸಂಚಿಕೆಗಳಲ್ಲಿ ಸಸ್ಯ ಶರೀರದ ವಿವಿಧ ಭಾಗಗಳಾದ ಬೇರು, ಕಾಂಡ, ಎಲೆ, ಹೂವು, ಹಣ್ಣು, ಬೀಜದ ಅಂಗರಚನೆ,
ಮತ್ತದರ ಪ್ರಾಯೋಗಿಕ ಮಹತ್ವದ ಬಗ್ಗೆ ವಿವರವಾಗಿ ತಿಳಿಯಲಾಗಿತ್ತು. ಈ ಮಾಹಿತಿ ಸ್ಥೂಲವಾದದ್ದು; ಪ್ರತಿ
ಸಸ್ಯ ಜಾತಿಗೂ ಅಂಗರಚನೆಯಲ್ಲಿ ವ್ಯತ್ಯಾಸವಿದೆ; ಸುತ್ತಲಿನ ವಾತಾವರಣದ ಒತ್ತಡಗಳಿಗೆ ತಕ್ಕಂತೆ ಅಂಗರಚನೆ
ರೂಪಾಂತರವಾಗಿದೆ. ಹಾಗೊಂದು ವಿಶೇಷ ವಸ್ತು ವಿಷಯದ ಬಗ್ಗೆ ಗಮನ ಸೆಳೆಯುವುದು ಈ ಸಂಚಿಕೆಯ ಉದ್ದೇಶ.
ನಾನು
ಪ್ರೌಢಶಾಲೆಯಲ್ಲಿ ಓದುವಾಗ ಸಮಾಜವಿಜ್ಞಾನ ಪಠ್ಯದಲ್ಲಿ ಕೃಷಿ ಸಂಬಂಧಿತ ಅಧ್ಯಾಯವೊಂದಿತ್ತು. ‘ಕೃಷಿ
ನಮ್ಮ ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬು’ ಎಂಬ ಗಾಂಧೀಜಿಯ ಡೈಲಾಗ್ ಮೊದಲು ಪರಿಚಯವಾಗಿದ್ದೇ ಇಲ್ಲಿ. ಕೃಷಿ ಕ್ಷೇತ್ರದ ಪ್ರಾಮುಖ್ಯತೆಯ ಬಗ್ಗೆ ಶುರುವಾಗಿ
‘Indian agriculture is gambled with rainfall’ ಎನ್ನುವಲ್ಲಿ ಈ ಅಧ್ಯಾಯ ಮುಗಿಯುತ್ತಿತ್ತು.
ಪರೀಕ್ಷಾ ದೃಷ್ಟಿಯಿಂದ ಈ ಅಧ್ಯಾಯ ವೆರಿ ವೆರಿ ಇಂಪಾರ್ಟಂಟ್, ಕಾರಣ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಟಿಪ್ಪಣಿ
ಮಾಡಿ ಎನ್ನುವ ಕಡ್ಡಾಯ ಪ್ರಶ್ನೆ! ಐದು ಅಂಕದ ಈ ಪ್ರಶ್ನೆಗೆ ಅನಿಶ್ಚಿತ ಮುಂಗಾರು; ಯಾಂತ್ರೀಕರಣದ ಕೊರತೆ;
ವೈಜ್ಞಾನಿಕ ಮಾಹಿತಿಯ ಕೊರತೆ; ಕೃಷಿ ಉತ್ಪನ್ನಗಳ ಶೇಖರಣೆ, ಸಾರಿಗೆ, ಮತ್ತು ಮಾರುಕಟ್ಟೆಯ ಕೊರತೆ;
ಭೂ ಹಿಡುವಳಿ ಸಮಸ್ಯೆ ಎಂದು ಐದು ಬುಲೆಟ್ ಪಾಯಿಂಟ್ಸ್ ಬರೆದರೆ ಪೂರ್ಣ ಅಂಕ ನಿಶ್ಚಿತವಾಗಿತ್ತು. ಈ
ಪ್ರಶ್ನೆಯನ್ನು ಈಗ ಕೇಳಿದರೆ ಹಳೆಯ ಸವಾಲುಗಳೊಡನೆ ಹೊಸದೊಂದಿಷ್ಟು ಸೇರಿಸಿ ಹೇಳಬಹುದೇನೋ!
ನವಯುಗದಂತೆ
ಸಮಸ್ಯೆಗಳೂ ನವೀನ. ಕೃಷಿಯೂ ಹೊರತಲ್ಲ. ಮುಂಚೆ ಇಲ್ಲದ ಕೀಟ-ರೋಗ ಹಾವಳಿ, ತಾಸು-ತಾಸಿಗೂ ಬದಲಾಗುವ ಹವಾಮಾನ,
ನೀರಿನ ಕೊರತೆ, ಕುಸಿಯುತ್ತಿರುವ ಮಣ್ಣಿನ ಫಲವತ್ತತೆ ಕೃಷಿಯನ್ನು ಕಷ್ಟಕ್ಕೀಡುಮಾಡಿದೆ. ಪರಿಣಾಮ, ಗಮನ-ಸಂಶೋಧನೆಗಳೆಲ್ಲ
ಹೊಸ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವತ್ತ ಹೊರಳುತ್ತಿದೆ.
ಸಸ್ಯಗಳು
ಬುದ್ಧಿಜೀವಿಗಳು! ಮೇಲಿನ ಸಮಸ್ಯೆಗಳನ್ನೆಲ್ಲಾ ಮೊದಲೇ ಅರಿತಂತೆ ವಾತಾವರಣಕ್ಕೆ ಒಗ್ಗಿಕೊಳ್ಳಲು, ಸಂತಾನೋತ್ಪತ್ತಿಯ
ಕ್ಷಮತೆ ಹೆಚ್ಚಿಸಲು, ರೋಗ-ಕೀಟ, ಬರ-ಪ್ರವಾಹ ಎದುರಿಸಲು ತಮ್ಮ ಅಂಗರಚನೆಯಲ್ಲಿ ಅವು ವಿಶೇಷ ಮಾರ್ಪಾಡುಗಳನ್ನು
ಮಾಡಿಕೊಂಡಿವೆ. ಇಂತಹ ನೈಸರ್ಗಿಕ ಮಾರ್ಪಾಡುಗಳಿಂದ ಸ್ಪೂರ್ತಿ ಪಡೆದೋ ಏನೋ ಬೆಳೆಗಳಲ್ಲೂ ಇವುಗಳನ್ನು
ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ನಮಗೆ ತಿಳಿದೋ ತಿಳಿಯದೆಯೋ ಈ ಮಾಹಿತಿಯ ಪ್ರಯೋಗವಾಗುತ್ತಲೇ ಇದೆ;
ಸಂಶೋಧನೆಯೂ ನಡೆಯುತ್ತಿದೆ. ಭವಿಷ್ಯದ ಕೃಷಿಯೂ ಇದೇ ವಿಜ್ಞಾನದ ಮೇಲೆ ನಿಂತಿದೆಯೆಂದರೆ ತಪ್ಪಲ್ಲ. ಹಾಗಾಗಿ
ಸಸ್ಯಕುಲದ ಜಾಣ್ಮೆ, ನಾವದನ್ನು ಬಳಸಿಕೊಳ್ಳುತ್ತಿರುವ ಚಾಣಾಕ್ಷತೆ ಬಗ್ಗೆ ಗಮನ ಹರಿಸುವುದು ಈ ಸಂಚಿಕೆಯ
ಉದ್ದೇಶ. ಪ್ರಾಯೋಗಿಕ ಮಹತ್ವವನ್ನು ಅತಿಯಾಗಿ ಓರೆಗೆ ಹಚ್ಚದೆ ಕುತೂಹಲಕ್ಕಾಗಿ ಓದಿಕೊಂಡು ಹೋಗಬೇಕೆನ್ನುವುದು
ಮನವಿ.
ಪ್ರಾಕೃತಿಕ
ಒತ್ತಡಗಳು
ಸಸ್ಯಗಳು
ನಿರಂತರವಾಗಿ ಪ್ರಕೃತಿಯ ಒತ್ತಡಕ್ಕೆ ಒಳಗಾಗುತ್ತಿರುತ್ತವೆ. ಇಂತಹ ಒತ್ತಡಗಳನ್ನು ಸ್ಥೂಲವಾಗಿ ಎರಡು
ವರ್ಗಗಳಾಗಿ ವರ್ಗೀಕರಿಸಬಹುದು : ಜೈವಿಕ ಮತ್ತು ಅಜೈವಿಕ. ರೋಗಕಾರಕಗಳು (ಶಿಲೀಂಧ್ರ, ಬ್ಯಾಕ್ಟೀರಿಯಾ,
ವೈರಸ್, ನೆಮಟೋಡ್), ಕೀಟಗಳು, ಸಸ್ಯಾಹಾರಿ ಪ್ರಾಣಿಗಳು, ಕಳೆ ಮತ್ತು ಪರಾವಲಂಬಿ ಸಸ್ಯಗಳು, ಇತರೇ ಜೀವಿಗಳಿಂದ
ಉಂಟಾಗುವ ಒತ್ತಡಗಳನ್ನು ಜೈವಿಕ ಒತ್ತಡಗಳೆಂದು ಕರೆಯಲಾಗುತ್ತದೆ. ಸೂರ್ಯನ ಬೆಳಕಿನಲ್ಲಿರುವ ವಿಕಿರಣಗಳು,
ಗಾಳಿ-ಆಲಿಕಲ್ಲು, ಉಷ್ಣ-ಶೀತ ತಾಪಮಾನ, ಬರ-ಪ್ರವಾಹ, ಮಣ್ಣಿನ ಲವಣಾಂಶ-ಕ್ಷಾರತೆ-ಖನಿಜತೆ-ಫಲವತ್ತತೆ
ಹೀಗೆ ಪರಿಸರದ ನಿರ್ಜೀವ ವಸ್ತುಗಳಿಂದ ಉಂಟಾಗುವ ಒತ್ತಡಗಳನ್ನು ಅಜೈವಿಕ ಒತ್ತಡಗಳೆಂದು ಕರೆಯಲಾಗುತ್ತದೆ.
ಈ ಎಲ್ಲಾ ಒತ್ತಡಗಳು ಸಸ್ಯಗಳ ಬೆಳವಣಿಗೆ, ಅಭಿವೃದ್ಧಿ ಮತ್ತು ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ
ಬೀರಬಲ್ಲವು. ಪ್ರಕೃತಿ ದತ್ತವಾಗಿ ಒತ್ತಡ ನಿಭಾಯಿಸಲು ಸಸ್ಯಗಳು ತಮ್ಮ ಅಂಗರಚನೆಯಲ್ಲಿ ಮಾರ್ಪಾಡು ಮಾಡಿಕೊಂಡಿರುತ್ತವೆ.
ಇದರ ಬಗ್ಗೆ ಮುಂಚಿನ ಸಂಚಿಕೆಗಳಲ್ಲಿ ಅಲ್ಲಲ್ಲಿ ಹೇಳಲಾಗಿತ್ತು. ಈಗ ಮತ್ತೊಮ್ಮೆ ಒಟ್ಟಾಗಿ.
ಜೈವಿಕ
ಒತ್ತಡಗಳ ವಿರುದ್ಧ ಸೆಣೆಸಲು ಅಂಗರಚನೆಯ ಮಾರ್ಪಾಡು:
ಕೀಟ-ರೋಗಗಳ
ಹಾವಳಿಗೆ ಕೃಷಿಯಷ್ಟೇ ಹಳೆಯ ಇತಿಹಾಸವಿದೆ. ಕೀಟನಾಶಕಗಳ ಅನಿಯಂತ್ರಿತ ಬಳಕೆಯಿಂದ ಈ ಸಮಸ್ಯೆ ಮತ್ತಷ್ಟು
ಉಲ್ಬಣಿಸಿದೆ. ಸಸ್ಯಗಳು ತಮ್ಮ ರಕ್ಷಣಾ ವ್ಯವಸ್ಥೆಯಿಂದ ಈ ಒತ್ತಡವನ್ನು ತಕ್ಕ ಮಟ್ಟಿಗೆ ನಿರ್ವಹಿಸುತ್ತವೆ.
ಆದರೆ ಸಸ್ಯಕುಲಕ್ಕೆ ಹೋಲಿಸಿದರೆ ಬೆಳೆಗಳದ್ದು ಸೀಮಿತ ಅನುವಂಶಿಕ ವೈವಿಧ್ಯತೆ; ಒಳ್ಳೆಯ ತಳಿಯ ಸತತವಾದ
ಆಯ್ಕೆಯಿಂದಾಗಿ ಅನುವಂಶಿಕ ವೈವಿಧ್ಯತೆ ಕುಸಿಯುತ್ತಲೂ ಇದೆ. ಹಾಗಾಗಿ ಬೆಳೆಗಳು ದೈಹಿಕವಾಗಿ ದುರ್ಬಲರು.
1.
‘ಕ್ಯುಟಿಕಲ್’ ಎಂಬ ರಕ್ಷಣಾ ಕವಚ: ನಮ್ಮ ಚರ್ಮ ಹೇಗೋ ಹಾಗೇ ಸಸ್ಯಗಳ ಎಪಿಡರ್ಮಿಸ್ ಬಾಹ್ಯ ಒತ್ತಡಗಳಿಗೆ
ತಡೆಗೋಡೆಯಾಗಿದೆ. ಕೆಲ ಸಸ್ಯಗಳಲ್ಲಿ ಎಪಿಡರ್ಮಿಸ್ ಮೇಣ ಅಥವಾ ಕೊಬ್ಬಿನಂಶ ಹೊಂದಿರುವ ‘ಕ್ಯುಟಿಕಲ್’
ಆಗಿ ಮಾರ್ಪಾಡಾಗಿರುತ್ತದೆ. ಕಮಲ, ಕೆಸು, ಸಕ್ಯುಲೆಂಟ್ ಗಳಲ್ಲಿ ಮುಟ್ಟಿದರೆ ನುಣುಪೆನಿಸುವ; ಕೆಲ ದ್ರಾಕ್ಷಿ,
ಸೇಬು ತಳಿಗಳಲ್ಲಿ ಬೂದುಬೂದಾಗಿರುವ ಕ್ಯುಟಿಕಲ್ ಪದರವನ್ನು ಗಮನಿಸಬಹುದು. ವಾಟರ್ ಪ್ರೂಫ್ ಆಗಿರುವ
ಕ್ಯುಟಿಕಲ್ ಪದರ ನೀರು ತೇವಾಂಶವನ್ನು ಹಿಡಿಯದ ಕಾರಣ ಶಿಲೀಂಧ್ರಗಳ ಬೀಜಕ(ಸ್ಪೋರ್)ಗಳ ಮೊಳಕೆ ಒಡೆಯುವುದನ್ನು
ತಪ್ಪಿಸುತ್ತದೆ, ಹೀಗೆ ಸಸ್ಯದ ಶರೀರದೊಳಗೆ ರೋಗಕಾರಕಗಳ ವಿಶೇಷವಾಗಿ ಶಿಲೀಂಧ್ರಗಳ ಪ್ರವೇಶವನ್ನು ತಡೆಯುತ್ತದೆ.
ಉದಾಹರಣೆಗೆ ಗುಲಾಬಿಯಲ್ಲಿ ಪೌಡರಿ ಮಿಲ್ಡ್ಯು, ದ್ರಾಕ್ಷಿಯಲ್ಲಿ ಗ್ರೇ ಮೌಲ್ಡ್ ಮುಂತಾದ ರೋಗಗಳನ್ನು
ತಡೆಯುವಲ್ಲಿ ಕ್ಯುಟಿಕಲ್ ವಹಿಸುವ ಪಾತ್ರದ ಬಗ್ಗೆ ಅಧ್ಯಯನ ಮಾಡಲಾಗಿದೆ. ಮೇಣದಂಶ ಹೊಂದಿರುವ ಕ್ಯುಟಿಕಲ್
ಅನ್ನು ಕೀಟಗಳೂ ಬಯಸಲಾರವು, ಮೆಕ್ಕೆಜೋಳದ ರೇಷ್ಮೆಯಿಂದ ಬೇರ್ಪಡಿಸಿದ ಕ್ಯುಟಿಕಲ್ ಅಂಶಗಳು ಕಾರ್ನ್
ಇಯರ್ ವರ್ಮ್ಗಳ ಬೆಳವಣಿಗೆಯನ್ನು ಕುಂಠಿಸುತ್ತದೆಂದು
ಕಂಡುಹಿಡಿಯಲಾಗಿದೆ. ಕ್ಯುಟಿಕಲ್ ಇರುವ ಕಾರಣ ಉಪದ್ರವಕಾರಿ ಕೀಟಗಳಿಂದಲೂ ಸಸ್ಯಗಳು ಸುರಕ್ಷಿತ.
{Box:
ಉಪದ್ರವಕಾರಿ ಕೀಟ-ರೋಗಗಳಷ್ಟೇ ಫೇಮಸ್ ಆದ ಇನ್ನೊಂದು ಉತ್ಪನ್ನವೆಂದರೆ ಪೆಸ್ಟಿಸೈಡ್ಸ್. ಹಲವಾರು ಶಿಲೀಂಧ್ರನಾಶಕಗಳು
(ಫಂಜಿಸೈಡ್) ಮತ್ತು ಕೀಟನಾಶಕಗಳು (ಇನ್ಸೆಕ್ಟಿಸೈಡ್) ಕ್ಯುಟಿಕಲ್ ತರಹವೇ ಸಸ್ಯದ ಮೇಲ್ಮೈಯಲ್ಲಿ ರಕ್ಷಣಾತ್ಮಕ
ಪದರವನ್ನು ರಚಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ. ಭೌತಿಕ ಅಡೆತಡೆ ಜೊತೆಗೆ ರಾಸಾಯನಿಕದ ದ್ವಿಗುಣ
ಪರಿಣಾಮ ಇವುಗಳಿಂದ ಲಭ್ಯ. ಕೃಷಿಯಲ್ಲಿ ಸಾಮಾನ್ಯವಾಗಿ ಬಳಸುವ ಬೇವಿನ ಎಣ್ಣೆ, ತಾಮ್ರ ಹೊಂದಿರುವ ಶಿಲೀಂಧ್ರನಾಶಕಗಳು (ಬೋರ್ಡೋ ಮಿಶ್ರಣ,
ಕಾಪರ್ ಓಕ್ಸಿ ಕ್ಲೋರೈಡ್) ಸಲ್ಫರ್ ಹೊಂದಿರುವ ಶಿಲೀಂಧ್ರನಾಶಕಗಳು (ವೆಟ್ಟೆಬಲ್ ಸಲ್ಫರ್, ಲೈಮ್ ಸಲ್ಫರ್,
ಕಾಪರ್ ಸಲ್ಫೇಟ್) ಕೆಲಸ ಮಾಡುವುದು ಇದೇ ಮಾದರಿಯಲ್ಲಿ. ಸಸ್ಯಗಳ ನೈಸರ್ಗಿಕ ನಡತೆಗಳಿಂದಲೇ ಸ್ಪೂರ್ತಿ
ಹೊಂದಿದ ಈ ಉತ್ಪನ್ನಗಳನ್ನು ಸಾವಯವವೆಂದೂ (ನಿರ್ದಿಷ್ಟ ಪ್ರಮಾಣದ ವರೆಗೆ) ಪರಿಗಣಿಸಲಾಗಿದೆ}
2.
‘ಸಿಲಿಕಾ’ದ ತಡೆಗೋಡೆ: ಹುಲ್ಲಿನ ಜಾತಿಯ ಸಸ್ಯಗಳ, ಭತ್ತ, ಜೋಳದಂತ ಧಾನ್ಯದ ಬೆಳೆಗಳ (ಸಿರಿಯಲ್ಸ್)
ಎಲೆ, ಕಾಂಡವನ್ನು ಮುಟ್ಟಿದರೆ ಕೈ ಕೊರೆಯುವ ಅನುಭವ ಆಗಬಹುದು. ಇದಕ್ಕೆ ಕಾರಣ ಎಲೆಗಳ ಹೊರಚರ್ಮದಲ್ಲಿರುವ
‘ಸಿಲಿಕಾ’ದ ಅಂಶ. ಎಲೆಗಳನ್ನು ಒರಟಾಗಿಸುವ ಸಿಲಿಕಾ ರೋಗಕಾರಕಗಳ ಪ್ರವೇಶವನ್ನು ತಡೆಯಬಲ್ಲದು ಮತ್ತು
ಕೀಟಗಳನ್ನೂ ದೂರ ಇರಿಸಬಲ್ಲದು. ಹುಲ್ಲು ಬೆಳೆಗಳಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಿಲಿಕಾ
ಶೇಖರಿಸುವ ಬೆಳೆ ಭತ್ತ. ಭತ್ತದ ಒಟ್ಟು ಒಣತೂಕದಲ್ಲಿ (ಡ್ರೈವೇಟ್) 10-15% ‘ಸಿಲಿಕಾ’ವೇ ಇರುತ್ತದೆ!
ಭತ್ತದಲ್ಲಿ ಬ್ಲಾಸ್ಟ್, ಬ್ರೌನ್ ಸ್ಪಾಟ್, ಶೀತ್ ಬ್ಲೈಟ್ ರೋಗಗಳನ್ನು ವಿರೋಧಿಸುವಲ್ಲಿ ‘ಸಿಲಿಕೀಕರಣ’ದ
ಮಹತ್ವವನ್ನು ವಿವರಿಸಲಾಗಿದೆ. ಇದೇ ದೃಷ್ಟಿಯಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗಾಗಿ ಭತ್ತದ ಬೆಳೆಗೆ
ಸಿಲಿಕಾ ನೀಡುವ ಪದ್ಧತಿ ರೂಢಿಯಲ್ಲಿದೆ. ಕೀಟ-ರೋಗ ದಾಳಿ ಮಾಡಿದಾಗ ಸಸ್ಯದ ದೇಹದೊಳಗೆ ಉಂಟಾಗುವ ಸಿಗ್ನಲಿಂಗ್
ವ್ಯವಸ್ಥೆಗೂ ಸಿಲಿಕಾ ಬೇಕು. ಹಾಗಾಗಿ ಸಸ್ಯಗಳ ರಕ್ಷಣಾ ವ್ಯವಸ್ಥೆಯಲ್ಲಿ ಸಿಲಿಕಾ ಮುಖ್ಯ ಸಿಪಾಯಿ.
3.
‘ಲಿಗ್ನಿನ್’ ಮತ್ತು ‘ಸುಬೇರಿನ್’ಗಳ ಅಡ್ಡಗೋಡೆ: ಲಿಗ್ನಿನ್ ಸುಬೇರಿನ್ ಗಳ ಬಗ್ಗೆ ಮೊದಲ ಸಂಚಿಕೆಯಲ್ಲಿ
ಹೇಳಲಾಗಿತ್ತು (ತೆಂಗಿನ ಸಿಪ್ಪೆಯ ನಾರು, ಸೆಣಬು, ಮರದ ತೊಗಲಿನಲ್ಲಿರುವ ಸಾವಯವ ವಸ್ತು). ಕೋಶಭಿತ್ತಿಯಲ್ಲಿ
ಶೇಖರವಾಗುವ ಈ ನೈಸರ್ಗಿಕ ರಾಸಾಯನಿಕ ಸಂಯುಕ್ತಗಳು ಸಸ್ಯಗಳಲ್ಲಿ ದೈಹಿಕ ಧೃಡತೆಯನ್ನು ಉಂಟುಮಾಡುತ್ತವೆ.
ವಾಟರ್ ಪ್ರೂಫ್ ಆಗಿರುವ ಲಿಗ್ನಿನ್ ಸೂಕ್ಷ್ಮಾಣು ಜೀವಿ, ರೋಗಕಾರಕಗಳ ಪ್ರವೇಶಕ್ಕೆ ಅತ್ಯಂತ ಸಮರ್ಥ,
ಪರಿಣಾಮಕಾರಿ ತಡೆಗೋಡೆ. ಎಲೆ, ಹಸಿಕಸಗಳಿಗಿಂತಲೂ ತೆಂಗಿನ ಸಿಪ್ಪೆ ಕೊಳೆಯಲು ತೆಗೆದುಕೊಳ್ಳುವ ಸಮಯವನ್ನು
ಗಮನಿಸಿಸದರೆ ಸಾಕು,
ಲಿಗ್ನಿನ್ ನ ಗಟ್ಟಿತನದ ಅರಿವಾಗುತ್ತದೆ.
ಬಾಳೆಯಲ್ಲಿ ಪನಾಮಾ ವಿಲ್ಟ್ ಸೊರಗು ರೋಗ ತಡೆಯುವಲ್ಲಿ ಲಿಗ್ನಿನ್ ನ ಮಹತ್ವವನ್ನು ತೀವ್ರವಾಗಿ ಅಧ್ಯಯನ
ಮಾಡಲಾಗಿದೆ. ರೋಗಕ್ಕೆ ಬಹುಬೇಗ ತುತ್ತಾಗುವ ತಳಿಗಳಿಗಿಂತ ಪ್ರತಿರೋಧ ಒಡ್ಡುವ ಬಾಳೆ ತಳಿಗಳ ಬೇರಿನಲ್ಲಿ
ಲಿಗ್ನಿನ್ ನ ಪ್ರಮಾಣ ಹೆಚ್ಚಿರುವುದನ್ನು ಗಮನಿಸಲಾಗಿದೆ. ಟೊಮ್ಯಾಟೋ, ಬಟಾಟೆ ವಿವಿಧ ಬೆಳೆಗಳಲ್ಲಿ
ಸೊರಗು ರೋಗ, ಬೇರುಕೊಳೆ ರೋಗ ತಡೆಯುವಲ್ಲಿ ಲಿಗ್ನಿನ್ ನ ಮಹತ್ವದ ಬಗ್ಗೆ ಸಂಶೋಧನೆಯಾಗುತ್ತಿದೆ. ಹಾಗೆಯೇ
ವರ್ಷ ಪೂರ್ತಿ ಹೊರಲೋಕಕ್ಕೆ ತೆರೆದೇ ಇರುವ ಮರದ ತೊಗಟೆಗಳಿಗೂ ಯಾವುದೇ ರೋಗ-ಕೀಟ ತಗುಲದ ಕಾರಣ ಸುಬೇರಿನ್
ಪದರವೇ ಆಗಿದೆ.
4.
‘ಟ್ರೈಕೋಮ್’ ಎಂಬ ಟ್ರಿಕ್: ಸಸ್ಯಗಳ ಹೊರಮೈಯಲ್ಲಿ ಕಂಡುಬರುವ ಸೂಕ್ಷ್ಮ ರೋಮಗಳನ್ನು ಟ್ರೈಕೋಮ್ ಎನ್ನಲಾಗುತ್ತದೆ.
ಟೊಮ್ಯಾಟೋ, ಬದನೆ, ಬೆಂಡೆ, ಸೋಯಾಬೀನ್ ಮುಂತಾದ ಸಸ್ಯಗಳಲ್ಲಿ ಇದನ್ನು ಸ್ಪಷ್ಟವಾಗಿ ಗಮನಿಸಬಹುದು.
ನುಸಿ (ಮೈಟ್ಸ್) ಮತ್ತು ಕೀಟಗಳು ವಿಶೇಷವಾಗಿ ಮಿಡತೆ (ಗ್ರಾಸ್ ಹೋಪರ್), ಜಿಗಿಹುಳು (ಪ್ಲಾಂಟ್ ಹಾಪರ್),
ಹೇನು (ಅಫಿಡ್)ಗಳ ವಿರುದ್ಧ ಸೆಣಸಲೆಂದೇ ಈ ಗುಣ ವಿಕಸನವಾಗಿದೆ. ಟ್ರೈಕೋಮ್ ನ ಇರುವಿಕೆ ಸಸ್ಯ ಅಂಗಾಂಶದ ಮೇಲೆ ಕೀಟಗಳು ನೆಲೆ ನಿಲ್ಲುವುದನ್ನು, ವಿಶೇಷವಾಗಿ
ಮೊಟ್ಟೆ ಇಡುವಿಕೆಯನ್ನು ತಪ್ಪಿಸುತ್ತದೆ. ಜಗಿಯಲು, ರಸ ಹೀರಲು ರುಚಿಯೆನಿಸದ ಟ್ರೈಕೋಮ್ ಹೊಂದಿದ ಅಂಗಾಂಶಗಳಿಂದ
ಕೀಟಗಳು ದೂರ ಇರುತ್ತವೆ. ಹಾಗಾಗಿ ತಳಿ ಅಭಿವೃದ್ಧಿ ಪಡಿಸುವಾಗ ಟ್ರೈಕೋಮ್ ನ ಇರುವಿಕೆ ಅಪೇಕ್ಷಿತ ಗುಣ.
ಕೆಲ ಸಸ್ಯಗಳಲ್ಲಿ ಟ್ರೈಕೋಮ್ ಗಳು ಅಹಿತಕರವಾದ ರಾಸಾಯನಿಕಗಳನ್ನು ಸ್ರವಿಸಬಲ್ಲವು. ಈ ರಾಸಾಯನಿಕಗಳು
ಬಲೆಯಂತೆ, ವಿಕರ್ಷಕದಂತೆ ಕೆಲಸ ಮಾಡಬಲ್ಲವು. ಕಾಡು ಬಟಾಟೆಗಳ ಟ್ರೈಕೋಮ್ ಸಿಮೆಂಟ್ ನಂತಹ ರಾಸಾಯನಿಕ
ಸ್ರವಿಸುವುದರ ಮೂಲಕ ಹೇನುಗಳನ್ನು ಬಲೆಗೆ ಬೀಳಿಸುವುದನ್ನು, ಕೊಲರಾಡೋ ಬೀಟಲ್ ಮತ್ತು ಟ್ಯುಬರ್ ಮಾತ್
ನಂತ ಉಪದ್ರವಕಾರಿ ಕೀಟಗಳನ್ನು ವಿಕರ್ಷಿಸುವುದನ್ನು ದಾಖಲಿಸಲಾಗಿದೆ.
5.
‘ಸ್ಟೊಮಾಟಾ’ದ ಆಟ: ಎಲೆ ಕಾಂಡದಲ್ಲಿರುವ ಸ್ಟೊಮಾಟಾ ಅಥವಾ ಪತ್ರರಂಧ್ರಗಳು ತೆರೆದು ಮುಚ್ಚುವ ವಿಷಯ
ಗೊತ್ತೇ ಇದೆ. ಇವು ಕೂಡಾ ಕೆಲವೊಮ್ಮೆ ರೋಗಕಾರಕಗಳ ವಿಶೇಷವಾಗಿ ಬ್ಯಾಕ್ಟೀರಿಯಾಗಳ ಪ್ರವೇಶಕ್ಕೆ ದ್ವಾರವಾಗಬಲ್ಲವು.
ಹಾಗಾಗಿ ವಾತಾವರಣದಲ್ಲಿ ಅತಿಯಾದ ತೇವಾಂಶವಿದ್ದಾಗ (ರೋಗಕಾರಕಗಳ ಪ್ರಸರಣಕ್ಕೆ ಅನುಕೂಲಕರ ವಾತಾವರಣವಿದ್ದಾಗ)
ಪತ್ರರಂಧ್ರ ಮುಚ್ಚಿಕೊಳ್ಳುವುದು, ಪತ್ರರಂಧ್ರಗಳ ಸಂಖ್ಯೆ ಇಳಿಮುಖವಾಗುವುದು, ರಂಧ್ರಗಳ ಹೊರಪೊರೆ ದಪ್ಪವಾಗುವುದು,
ಹೀಗೆ ಹಲವು ಮಾರ್ಪಾಡುಗಳನ್ನು ಗಮನಿಸಲಾಗಿದೆ.
ಅಜೈವಿಕ
ಒತ್ತಡಗಳ ವಿರುದ್ಧ ಸೆಣೆಸಲು ಅಂಗರಚನೆಯ ಮಾರ್ಪಾಡು:
ಜಾಗತಿಕ
ಮಟ್ಟದಲ್ಲಿ ಕೃಷಿಯನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಹವಾಮಾನ ಬದಲಾವಣೆ. ಈಗೊಂದು ದಶಕದ ಹಿಂದೆ ಇದರ
ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಸೆಮಿನಾರ್, ಸಮಾವೇಶಗಳಲ್ಲಿ ವಿಜ್ಞಾನಿಗಳು ಗಂಟಲು ಹರಿದುಕೊಂಡಿದ್ದೆ
ಬಂತು. ಇತ್ತೀಚೆಗೆ ಉಷ್ಣ ಗಾಳಿ, ಬಿರುಬಿಸಿಲು, ಅತಿವೃಷ್ಟಿ ಎಂದು ನಮ್ಮ ಮನೆಯ ಕದ ತಟ್ಟಿದ ಮೇಲೆ ನಮಗೆಲ್ಲಾ
ಎಚ್ಚರವಾದಂತಿದೆ. ಬರ, ಪ್ರವಾಹ, ಶೀತ, ಅಧಿಕ ಉಷ್ಣತೆ, ಮಣ್ಣಿನ ಮಾಲಿನ್ಯತೆ ಇವೆಲ್ಲ ಈಗ ಶುರುವಷ್ಟೇ,
ಮುಂದಿನ ಅನಾಹುತಗಳನ್ನು ಕಲ್ಪಿಸಲೂ ಸಾಧ್ಯವಿಲ್ಲ. ಕೆಟ್ಟದ್ದಕ್ಕೆ ಈಗಲೇ ಸಜ್ಜಾಗುವಂತೆ ಆಹಾರ ಭದ್ರತೆ
ದೃಷ್ಟಿಯಿಂದ ಕೃಷಿಯಲ್ಲಿಯೂ ಪ್ರತಿಕೂಲ ಹವಾಮಾನಕ್ಕೆ ಸಹಿಷ್ಣುವಾದ ಬೆಳೆ, ತಳಿಗಳ ಅಧ್ಯಯನ, ಅಭಿವೃದ್ಧಿಯ
ಬಗ್ಗೆ ಸಂಶೋಧನೆಯಾಗುತ್ತಿದೆ.
1.
ಬರ ಸಹಿಷ್ಣುಗಳು: ನೀರಿನ ಕೊರತೆಯನ್ನು ಸಮರ್ಥವಾಗಿ ಎದುರಿಸುವ ಕ್ಯಾಕ್ಟೈ ಕಳ್ಳಿಗಳಂತ ಹಲವಾರು ಸಸ್ಯಜಾತಿಗಳು
ನಮ್ಮ ಸುತ್ತಮುತ್ತ ಕಾಣಸಿಗುತ್ತವೆ. ಅಂಗಾಂಶದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವ ಇಂತಹ ಸಸ್ಯಜಾತಿಗಳಲ್ಲಿ
ಕಂಡುಬರುವ ಮುಖ್ಯ ಕಾರ್ಯವೆಂದರೆ ಭಾಷ್ಪವಿಸರ್ಜನೆ ಚಟುವಟಿಕೆಯನ್ನು ತಗ್ಗಿಸುವುದು. ಅದಕ್ಕಾಗಿ ಪತ್ರರಂಧ್ರಗಳ
ತೆರೆದು-ಮುಚ್ಚುವಿಕೆ ನಿಯಂತ್ರಿಸುವುದು, ಎಲೆಗಳ ಮೇಲ್ಮೈ ಹರವನ್ನು ಕಡಿಮೆ ಮಾಡಿಕೊಳ್ಳುವುದು, ಮುಳ್ಳು
ಎಲೆಗಳನ್ನು ಹೊಂದುವುದು, ಎಲೆಗಳನ್ನು ಮುದುರಿಸುವುದು, ಕ್ಯುಟಿಕಲ್ ನಂತ ಬೂದು ಪದರದ ಪ್ರಯೋಗ, ಕೋಶಭಿತ್ತಿಯನ್ನು
ಗಟ್ಟಿಯಾಗಿಸುವುದು ಮತ್ತು ಇತರೇ ತಂತ್ರಗಳಾಗಿ ಬೇರಿನ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ, ಕೋಶಗಳ
ಕಣಕಣದಲ್ಲಿ ನೀರಿನ ಸಂಗ್ರಹಣೆ, ಬರ ಸಹಿಷ್ಣು ಪ್ರಚೋದಕಗಳ ಶೇಖರಣೆ, ಬರಗಾಲದಲ್ಲಿ ಸುಮ್ಮನಿದ್ದು ಪ್ರತಿಕೂಲ
ವಾತಾವರಣ ಸಿಕ್ಕಾಗ ಬೆಳವಣಿಗೆಯಾಗುವುದನ್ನು ಸಸ್ಯಗಳು ಅನುಸರಿಸುತ್ತವೆ. ಈ ಮಾರ್ಪಾಡುಗಳು ನೀರಿನ ಕೊರೆತೆಯೊಂದೇ
ಅಲ್ಲದೆ ಒಣ ಹವೆ, ಉಷ್ಣ, ತೀಕ್ಷ್ಣ ಬೆಳಕು, ವಾಯು ಮಾಲಿನ್ಯದ ಒತ್ತಡವನ್ನು ಎದುರಿಸಲೂ ಸಹಾಯಕ.
2.
ನೀರಲ್ಲಿ ಮುಳುಗಿ ಈಸಲು: ಬರದಷ್ಟೇ ಅಪಾಯಕಾರಿ ಪರಿಸ್ಥಿತಿ ಪ್ರವಾಹದ್ದು. ಬೇರುಗಳು ಉಸಿರಾಡುತ್ತವೆ,
ಅವುಗಳ ಬೆಳವಣಿಗೆಗೂ ಆಮ್ಲಜನಕದ ಅವಶ್ಯಕತೆಯಿದೆ. ಆದರೆ
ನೀರಲ್ಲಿ ಮುಳುಗಿದಾಗ ಸಸ್ಯ ಅಂಗಾಂಶಗಳು ಆಮ್ಲಜನಕದ ಕೊರತೆಗೆ ಒಳಗಾಗುತ್ತವೆ. ಮಣ್ಣಲ್ಲಿರುವ ಕಬ್ಬಿಣ
ಅಲಭ್ಯ ರೂಪಕ್ಕೆ ತಿರುಗಿ ಸಸ್ಯದ ಅಂಗಾಂಶದ ಮೇಲೆ ಜಿಡ್ಡಾಗಿ ಕೂತು ಅಪಾಯಕಾರಿಯಾಗಬಹುದು; ನಮ್ಮ ಭತ್ತದ
ಗದ್ದೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ರೋಗಲಕ್ಷಣವನ್ನು ಬ್ರಾನ್ಜಿಂಗ್ ಎಂದು ಕರೆಯಲಾಗುತ್ತದೆ.
ಕೆಲವು
ಸಸ್ಯಗಳು ಸ್ವಲ್ಪ ಕಾಲ ನಿಂತ ನೀರನ್ನು ಸಹಿಸಿದರೆ ಕೆಲ ಸಸ್ಯಗಳದ್ದು ನೀರಲ್ಲೇ ಜೀವನ (ಜಲವಾಸಿಗಳು).
ಭತ್ತ ಹಾಗಲ್ಲ, ಅತ್ತ ಕಡೆ ಪೂರ್ತಿ ನೀರಲ್ಲೂ ಇರಬಲ್ಲದು, ಇತ್ತ ಕಡೆ ನೀರಿಲ್ಲದೆ ಒಣಭೂಮಿಯಲ್ಲೂ ಬೆಳೆಯಬಲ್ಲದು.
ಹಾಗಾಗಿ ಈಸಬಲ್ಲ ಬೆಳೆಗಳ ಪೈಕಿ ಭತ್ತದ್ದು ಅದ್ವಿತೀಯ ಸ್ಥಾನ - ಕಾರಣ ಏರಂಕೈಮಾ ಜೀವಕೋಶಗಳು. ಹೆಸರೇ
ಹೇಳುವಂತೆ ಗಾಳಿ ತುಂಬಿದ ಈ ಜೀವಕೋಶಗಳು ಅಂಗಾಂಶದ ಉಸಿರಾಟಕ್ಕೆ ಅನುವು ಮಾಡಿಕೊಡುತ್ತವೆ. ಪರಿಸರಕ್ಕೆ
ತೆರೆದಿರುವ ಸಸ್ಯದ ಮೇಲ್ಭಾಗದಿಂದ ಎಳೆದುಕೊಂಡ ಗಾಳಿ ಏರಂಕೈಮಾದ ಸರಪಳಿಯ ಮೂಲಕ ಮುಳುಗಿರುವ ಕೆಳಭಾಗಕ್ಕೆ
ಸರಬರಾಜಾಗುತ್ತದೆ. ಗೋಧಿ, ಜೋಳ, ಬಾರ್ಲಿಗಳಲ್ಲಿ ನೀರಲ್ಲಿ
ಮುಳುಗಿದ ಮೇಲೆ ಜೀವಕೋಶಗಳು ಏರಂಕೈಮಾಗಳಾಗಿ ಮಾರ್ಪಾಡಾದರೆ ಭತ್ತಗಳಲ್ಲಿ ಇವು ವಂಶವಾಹಿಯಲ್ಲೇ ಅಡಗಿರುತ್ತವೆ.
ಹಾಗಾಗಿ ಭತ್ತ ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲ ಅರೆಜಲವಾಸಿ.
3.
ಕೊರೆಯುವ ಚಳಿಯಲ್ಲಿ ಬದುಕುಲು: ನಮ್ಮಲ್ಲಿ ಧೋ ಎಂದು ಮಳೆ ಸುರಿದು ಬೆಳೆ ಹಾನಿಯಾದಂತೆ ತಂಪು ಪ್ರದೇಶಗಳಲ್ಲಿ
ಹಿಮಪಾತದಿಂದ ಅನಾಹುತವಾಗುತ್ತದೆ. ಅಲ್ಲೂ ಕೂಡಾ ಮಳೆಯಂತೆ ಹಿಮಪಾತಗಳ ಅನಿಶ್ಚಿತತೆ ಪರಿಸ್ಥಿತಿಯನ್ನು
ಬಿಗಡಾಯಿಸಿದೆ. ಸದ್ಯಕ್ಕೆ ಕರ್ನಾಟಕಕ್ಕೇನೂ ಚಳಿಯ
ಸಮಸ್ಯೆ ಇದ್ದಂತಿಲ್ಲ. ಆದರೂ ತಾಪಮಾನ ಕುಸಿತ ಎಚ್ಚರಿಕೆ ಗಂಟೆಯನ್ನು ಬಾರಿಸಿದೆ. ಫ್ರಾಸ್ಟಿಂಗ್ ಹಾನಿಯನ್ನು
ಎದುರಿಸಲು ಶೀತ ಪ್ರದೇಶದ ಬೆಳೆಗಳು ಸಾಕಷ್ಟು ತಯಾರಿ ಮಾಡುಕೊಳ್ಳುತ್ತವೆ. ಎಲೆ ಉದುರಿಸುವುದು, ಸುಪ್ತಾವಸ್ಥೆ
ಪ್ರವೇಶಿಸುವುದು, ದಪ್ಪ ತೊಗಟೆ ಹೊಂದುವುದು, ನಂತರದ ಬೆಳವಣಿಗೆಯನ್ನು ಬೆಂಬಲಿಸಲು ಕಾಂಡದಲ್ಲಿ ಆಹಾರವನ್ನು
ಶೇಖರಿಸಿಟ್ಟುಕೊಳ್ಳುವುದು; ಕೆಲ ಬೆಳೆಗಳಲ್ಲಿ ವಿಶೇಷ
ಆಂಟಿ ಫ್ರಿಜಿಂಗ್ ವಸ್ತುಗಳು ಶೇಖರವಾಗುವುದನ್ನು ದಾಖಲಿಸಲಾಗಿದೆ.
4.
ಮಣ್ಣಿನ ಲವಣಾಂಶಗಳ ವಿರುದ್ಧ ಹೋರಾಡಲು: ಮಣ್ಣಿನ ಲವಣಾಂಶ (ಸಲಿನಿಟಿ) ಕೃಷಿಯಲ್ಲಿ ಪ್ರಚಲಿತ ಸವಾಲು.
ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆ ಮಣ್ಣಿನಲ್ಲಿ ಉಪ್ಪು ಅಥವಾ ಲವಣದ ಶೇಖರಣೆಗೆ ಮುಖ್ಯ ಕಾರಣವಾಗಿದೆ.
ಶರೀರದಲ್ಲಿ ಲವಣಗಳ ಸಾಂದ್ರತೆ ಕಡಿಮೆ ಮಾಡಲು ಹೆಚ್ಚು ನೀರು ಹೀರುವಿಕೆ, ಪೋಷಕಾಂಶ ಹೀರುವಾಗ ಲವಣಗಳನ್ನು
ಹೊರಗಿಡುವುದು, ಅದಕ್ಕೆ ತಕ್ಕಂತೆ ಅಂಗರಚನೆಯ ಮಾರ್ಪಾಡುಗಳನ್ನು ಸಸ್ಯಗಳು ಮಾಡಿಕೊಂಡಿವೆ. ಉದಾಹರಣೆಗೆ
ಶರೀರದಲ್ಲಿ ಸೋಡಿಯಂ, ಪೊಟ್ಯಾಶಿಯಮ್ ಲವಣಗಳ ಸಮತೋಲನ ಕಾಪಾಡಿಕೊಳ್ಳಬಲ್ಲ ‘ಕ್ವಿನೋವಾ’ ಬೆಳೆ ಲವಣಾಂಶ
ಭರಿತ ಮಣ್ಣಿನ ಪ್ರದೇಶದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.
5.
ಮಣ್ಣಿನ ಪೋಷಕಾಂಶ ಕೊರತೆಯ ಒತ್ತಡ ಎದುರಿಸಲು: ಸಾರಜನಕ, ರಂಜಕ, ಪ್ಯೊಟಾಶ್ ತ್ರಿಮೂರ್ತಿಗಳ ಪ್ರಾಮುಖ್ಯತೆ
ಕೃಷಿಯಲ್ಲಿ ತಿಳಿದೇ ಇದೆ. ಎಲ್ಲಾ ಮಣ್ಣು ಈ ಪೋಷಕಾಂಶಗಳನ್ನು ಅವಶ್ಯಕ ಪ್ರಮಾಣದಲ್ಲಿ ಹೊಂದಿರುವುದಿಲ್ಲ,
ಅಥವಾ ಪದೇ ಪದೇ ವ್ಯವಸಾಯ ಮಾಡಿ ಪೋಷಕಾಂಶಗಳು ಇಂಗಿಹೋಗಿರುತ್ತವೆ. ಅಧ್ಯಯನಗಳ ಪ್ರಕಾರ ಭೂಮಿಯ 33%
ಮಣ್ಣು ಪುನಶ್ಚೇತನಗೊಳಿಸಲಾಗದ ಸ್ಥಿತಿ ತಲುಪಿವೆ. ಈ ಅಂಕಿಅಂಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಹೀಗಾದಲ್ಲಿ ನೈಸರ್ಗಿಕವಾಗಿ ಪೋಷಕಾಂಶ ಕೊರತೆ ಎದುರಿಸುವ ಆಹಾರ ಬೆಳೆ, ತಳಿಗಳ ಮೊರೆಹೋಗುವುದು ಅನಿವಾರ್ಯ.
ಉದ್ದು, ಹೆಸರು, ಅವರೆ, ಅಲಸಂದಿ ಇತ್ಯಾದಿ ‘ಲೆಗ್ಯುಮಿನಸ್’ ಬೆಳೆಗಳು ವಾತಾವರಣದಲ್ಲಿರುವ ಸಾರಜನಕವನ್ನು
ಭೂಮಿಯಲ್ಲಿ ಸ್ಥಾಪಿಸುವ ವಿಶೇಷ ಸಾಮರ್ಥ್ಯ ಹೊಂದಿವೆ. ಇವುಗಳ ಬೇರುಗಳ ಗಂಟುಗಳಲ್ಲಿ ಸಹಜೀವನ ನಡೆಸುವ
‘ರೈಜೋಬಿಯಮ್’ ಎಂಬ ಬ್ಯಾಕ್ಟಿರೀಯಾ ಈ ಕೆಲಸ ನಿರ್ವಹಿಸಬಲ್ಲವು. ಬೇರುಗಳಲ್ಲಿ ವಾಸಿಸುವ ‘ಮೈಕೋರೈಜಾ’
ಎನ್ನುವ ಶಿಲೀಂಧ್ರ ಕೂಡಾ ರಂಜಕ ಮತ್ತು ಇತರೇ ಸೂಕ್ಷ್ಮ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತವೆ.
ಇಂತಹ ಅಂಗರಚನಾ ಮಾರ್ಪಾಡು ಮತ್ತು ಉಪಕಾರಿ ಸೂಕ್ಷ್ಮಾಣು ಜೀವಿಗಳೊಡನೆ ಸಹಜೀವನ ಕಳಪೆ ಗುಣಮಟ್ಟದ ಮಣ್ಣಿನಲ್ಲೂ
ಬೆಳೆ ಬೆಳೆಯಲು ಸಹಕಾರಿ.
6.
ಅತಿನೇರಳೆ ಕಿರಣಗಳ (ಅಲ್ಟ್ರಾವಯೊಲೆಟ್ ರೇ’ಸ್) ಹಾನಿ ಸಹಿಸಲು: ಕೆಲ ತರಕಾರಿ ಹಣ್ಣುಗಳೇಕೆ ಬಣ್ಣ ಹೊಂದಿವೆ
ಎಂದು ಯೋಚಿಸಿದ್ದೀರಾ! ಬೀಜ ಪ್ರಸರಣ ಮಾಡುವ ಪ್ರಾಣಿ ಪಕ್ಷಿಗಳನ್ನು (ನಮ್ಮನ್ನೂ ಸೇರಿಸಿ) ಆಕರ್ಷಿಸಲು
ಎಂಬ ಕಾರಣ ಒಂದಾದರೆ, ಇನ್ನೊಂದು ಮುಖ್ಯ ಕಾರಣ ಅತಿನೇರಣೆ ಕಿರಣಗಳ ವಿರುದ್ಧ ರಕ್ಷಣೆ. ಸಸ್ಯಗಳ ಮೇಲೆ
ಅತಿನೇರಳೆ ಕಿರಣಗಳ ಹಾನಿಯ ಬಗ್ಗೆ ವಿಜ್ಞಾನ ಬಳಗ ಇತ್ತೀಚೆಗೆ ತಲೆ ಕೆಡಿಸಿದೆ. ಅತಿನೇರಳೆ ಕಿರಣಗಳು
ಸಸ್ಯಗಳ ವಂಶವಾಹಿಗಳ ಮೇಲೆ, ದ್ಯುತಿಸಂಶ್ಲೇಷಣೆ ಕ್ರಿಯೆಯೆ ಮೇಲೆ ಅಡ್ಡಪರಿಣಾಮ ಬೀರುವುದರಿಂದ ಕೃಷಿ
ಇಳುವರಿ ಕಡಿಮೆಯಾಗುತ್ತದೆ. ಮುಂದೊಂದು ದಿನ ಇದು ದೊಡ್ಡ ಸಮಸ್ಯೆಯಾಗಬಲ್ಲದು ಎಂಬುದು ಊಹೆ. ಜೀವಕೋಶಗಳಲ್ಲಿ
ಬಣ್ಣ ಉಂಟುಮಾಡುವ ‘ಆಂತೋಸಯಾನಿನ್’ ಹರಿತ್ತುಗಳು ಸಸ್ಯಗಳಲ್ಲಿ ಅತಿನೇರಳೆ ಕಿರಣಗಳನ್ನು ಹೀರಿ ‘ಸನ್
ಸ್ಕ್ರೀನ್’ನಂತೆ ಕೆಲಸ ಮಾಡಬಲ್ಲವು. ಹಾಗಾಗಿ ತಳಿ ಅಭಿವೃದ್ಧಿ ಪಡಿಸುವಾಗ ಬಣ್ಣದ ತಳಿ ಹೆಚ್ಚು ಅಪೀಕ್ಷಿತ
ಗುಣವಾಗಿದೆ. ಬಣ್ಣ ವ್ಯಕ್ತಪಡಿಸುವ ವಂಶವಾಹಿಗಳನ್ನು ಭತ್ತ, ಇತರೇ ವಾಣಿಜ್ಯ ಬೆಳೆಗಳಲ್ಲಿ ಸೇರಿಸುವ
ಪ್ರಯತ್ನ ನಡೆದಿದೆ.
ಹೆಚ್ಚಿನ
ದ್ಯುತಿಸಂಶ್ಲೇಷಣೆಗೆ (ಪರೋಕ್ಷವಾಗಿ ಹೆಚ್ಚಿನ ಇಳುವರಿಗೆ) ಅಂಗರಚನೆಯ ಮಾರ್ಪಾಡು:
ಸಸ್ಯಗಳಿಗೂ
ಬೆಳೆಗಳಿಗೂ ಪ್ರಮುಖ ವ್ಯತ್ಯಾಸವೆಂದರೆ ಇಳುವರಿ. ಇಳುವರಿಯನ್ನು ಸಸ್ಯಗಳ ಭಾಷೆಯಲ್ಲಿ ಹೇಳುವುದಾದರೆ
ಜೀವರಾಶಿಯ (ಬೈಯೋಮಾಸ್) ಉತ್ಪಾದನೆ. ಸಸ್ಯಗಳ ಪಾಲಿಗೆ ಜೀವರಾಶಿಯೆಂದರೆ ಅದರ ಇಡೀ ದೇಹ; ಬೇರೋ, ಎಲೆಯೋ
ಕಾಂಡವೋ ಹೂವೋ ಹಣ್ಣೋ ಸಂಬಂಧವಿಲ್ಲದೆ ಒಟ್ಟಾರೆ ಶರೀರ. ಈ ಶರೀರ ಮೂಡುವುದು ಜೀವಕೋಶದಿಂದ - ಜೀವಕೋಶದ
ಬೆಳವಣಿಗೆಗೆ ಬೇಕಾಗಿದ್ದು ಶಕ್ತಿ (ಅಥವಾ ಸರಳವಾಗಿ ಆಹಾರ) - ಈ ಶಕ್ತಿ ಸಿಗುವುದು ದ್ಯುತಿಸಂಶ್ಲೇಷಣೆಯಿಂದ
- ದ್ಯುತಿಸಂಶ್ಲೇಷಣೆಗೆ ಬೇಕಾಗಿರುವುದು ಸೂರ್ಯನ ಬೆಳಕು - ಹೀಗೆ ಸೂರ್ಯನ ಬೆಳಕಿನ ಶಕ್ತಿ ಸಸ್ಯದ ಜೀವರಾಶಿಯಾಗಿ
ಬದಲಾಗಿ ಸಸ್ಯದ ಶರೀರದಲ್ಲಿ ಶೇಖರವಾಗುತ್ತದೆ. ಈ ಶಕ್ತಿಯನ್ನೇ ನಾವು ಆಹಾರವಾಗಿ ನಮ್ಮ ಶಕ್ತಿಗಾಗಿ
ಬಳಸುತ್ತೇವೆ. ಕೆಲ ಬಾರಿ ಎಲೆ, ಸೊಪ್ಪು ಕಾಂಡ ನಮ್ಮ ಆಹಾರವಾದರೆ ಇನ್ನು ಕೆಲವು ಬಾರಿ ಹಣ್ಣು ಕಾಯಿ
ಅಥವಾ ಬೀಜ. ಸಸ್ಯಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೇ
ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ನಾವು ನಮ್ಮಅನುಕೂಲಕ್ಕೆ ತಕ್ಕ ಹಾಗೆ ಸಸ್ಯವನ್ನು ಬಳಸಿಕೊಳ್ಳುತ್ತೇವೆ.
ಹಾಗಾಗಿಯೇ ನಮ್ಮ ಇಷ್ಟಕ್ಕೆ ಅನುಸಾರವಾಗಿ ತಳಿ ಆಯ್ಕೆ ನಡೆದಿದ್ದು. ಈಗ ಹೇಳಿ, ಹೆಚ್ಚಿನ ಇಳುವರಿಯ
ತಳಿ ಬೇಕಾದಲ್ಲಿ ಹೆಚ್ಚು ದ್ಯುತಿಸಂಶ್ಲೇಷಣೆಯಲ್ಲಿ ತೊಡಗಿರುವ ತಳಿ, ಬೆಳೆ ಆಯ್ಕೆ ಮಾಡುವುದು ಸಮಂಜಸವಲ್ಲವೇ!
ಆಹಾರ
ಭದ್ರತಾ ದೃಷ್ಟಿಯಲ್ಲಿ ಮುಂಚಿನಿಂದಲೂ ಮಾನವ ಅಪೇಕ್ಷಿಸಿದ್ದು ಇಳುವರಿಯನ್ನು, ಇಂದಿಗೂ ವಾಣಿಜ್ಯಿಕ ದೃಷ್ಟಿಯಿಂದ ಮಾಡುತ್ತಿರುವುದು ಅದನ್ನೇ. ಹೆಚ್ಚಿನ ಇಳುವರಿ
ಕೊಡುವ ತಳಿಯ ಆಯ್ಕೆ ಎಂದರೆ ಪರೋಕ್ಷವಾಗಿ ಹೆಚ್ಚಿನ ಸೂರ್ಯನ ಬೆಳಕನ್ನು ಕೊಯ್ಲು ಮಾಡುವ ತಳಿಯ ಆಯ್ಕೆಯೇ
ಆಗಿದೆ. ಮನುಷ್ಯರಷ್ಟೇ ಅಲ್ಲ, ಸಸ್ಯಗಳಿಗೂ ತಮ್ಮ ಉಳಿವಿಗಾಗಿ ಸೂರ್ಯನ ಶಕ್ತಿಯನ್ನು ಕೊಯ್ಲು ಮಾಡುವ
ಸಾಮರ್ಥ್ಯ ಮುಖ್ಯವಾಗಿರಬೇಕು. ಹಾಗಾಗಿ ವಿಕಸನದ ಹಾದಿಯಲ್ಲಿ ಹಲವಾರು ರಚನಾತ್ಮಾಕ ಮಾರ್ಪಾಡು, ಕಾರ್ಯವಿಧಾನದಲ್ಲಿ
ಹೊಂದಾಣಿಕೆ ಮಾಡಿಕೊಂಡಿವೆ. ಇದರಲ್ಲೊಂದು ಮುಖ್ಯ ಘಟ್ಟ C3 C4 ಸಸ್ಯಗಳ ವಿಕಾಸ.
ದ್ಯುತಿಸಂಶ್ಲೇಷಣೆ
ಆಗುವಾಗ ಸೂರ್ಯನ ಬೆಳಕಿನ ಶಕ್ತಿ ಸಸ್ಯಗಳಲ್ಲಿ ಸಾವಯವ ವಸ್ತುವಾಗಿ ಶೇಖರವಾಗುವುದನ್ನು ಹೇಳಿಯಾಯಿತು.
ಆ ಸಾವಯವ ವಸ್ತು ಯಾವುದೆಂದರೆ ಗ್ಲುಕೋಸ್ ಅಥವಾ ಸಕ್ಕರೆ, ಶರ್ಕರ. ಸೂರ್ಯನ ಬೆಳಕಿನ ಇರುವಿಕೆಯಲ್ಲಿ
ವಾತಾವರಣದ ಇಂಗಾಲದ ಡೈ ಆಕ್ಸೈಡ್ (CO2) ಒಂದೊಂದೇ ಕಣವಾಗಿ ಸಸ್ಯದ ದೇಹ ಸೇರಿ ಜೋಡಿಕೆಯಾಗಿ
ಆರು ಇಂಗಾಲವಿರುವ ಗ್ಲುಕೋಸ್ (C6H12O6) ಆಗಿ ಶೇಖರವಾಗುತ್ತದೆ.
ನಂತರ ಇದೇ ಗ್ಲುಕೋಸ್ ಕರಗಿ ಬೆಳವಣಿಗೆಗೆ ಬೇಕಾದ ಶಕ್ತಿ ನೀಡುತ್ತದೆ (ಇದರ ಬಗ್ಗೆ ಮುಂದೆ ಬೆಳೆ ಶರೀರ
ಶಾಸ್ತ್ರದಲ್ಲಿ ವಿವರವಾಗಿ ನೋಡೋಣ). ಇದು ಹಂತಹಂತವಾಗಿ ನಡೆಯುವ ಕ್ರಿಯೆ. ಸಸ್ಯದ ದೇಹದಲ್ಲಿ ಮೊದಲ
ಹಂತದಲ್ಲಿ ಮೂರು ಇಂಗಾಲದ ರಾಸಾಯನಿಕ ರೂಪಿತವಾದರೆ C3 ಸಸ್ಯವೆಂದು, ನಾಲ್ಕು ಇಂಗಾಲದ ರಾಸಾಯನಿಕ ರೂಪವಾದರೆ C4 ಸಸ್ಯವೆಂದು ಹೇಳಲಾಗುತ್ತದೆ. ಭತ್ತ,
ಗೋಧಿ, ಲೆಗ್ಯುಮ್ಸ್, ತರಕಾರಿ, ಹಣ್ಣು ಬೆಳೆಗಳು ಸೇರಿ ಜಗತ್ತಿನ 85% ಸಸ್ಯಗಳು ಅನುಸರಿಸುವುದು C3
ಹಾದಿಯನ್ನು. ಜೋಳ, ಮೆಕ್ಕೆಜೋಳ, ಕಬ್ಬು, ಪೈನಾಪಲ್ ಸಿರಿಧಾನ್ಯಗಳು, ತರಕಾರಿಗಳಲ್ಲಿ ಹರಿವೆ ಹೀಗೆ
ಕೆಲವೇ ಬೆಳೆಗಳು, ಜಗತ್ತಿನ 3% ಸಸ್ಯಗಳು C4 ಹಾದಿಯನ್ನು ಅನುಸರಿಸುತ್ತವೆ. ಜೋಳ, ಸಿರಿಧಾನ್ಯಗಳಿಗೇಕೆ
ಬಿರುಬಿಸಿಲು, ಅಪೌಷ್ಟಿಕ ಮಣ್ಣು, ಕಠಿಣ ಪರಿಸ್ಥಿತಿಯನ್ನೂ ಜಯಿಸಬಲ್ಲವು ಎಂಬ ಪ್ರಶ್ನೆಗೆ ಉತ್ತರವಿರುವುದು
ಇಲ್ಲೇ. ವಾಸ್ಕ್ಯುಲಾರ್ ಬಂಡಲ್ ಗಳನ್ನು ಸುತ್ತವರೆದಿರುವ ಬಂಡಲ್ ಶೀತ್ ಜೀವಕೋಶಗಳ ಬಗ್ಗೆ ಹಿಂದಿನ
ಸಂಚೆಕೆಯಲ್ಲಿ ಹೇಳಿಯಾಗಿತ್ತು. C4 ಸಸ್ಯಗಳಲ್ಲಿ ಬಂಡಲ್ ಶೀತ್ ಜೀವಕೋಶಗಳ ವಿಶೇಷ ಜಾಲವಿರುತ್ತದೆ (ಕ್ರಾನ್ಜ್ ಅನಾಟಮಿ ಎಂಬ ವಿಶೇಷ ಅಂಗರಚನೆ). ಇದು ಹೆಚ್ಚೆಚ್ಚು
CO2 ಶೇಖರಣೆಗೆ ಅನುವು ಮಾಡಿಕೊಡುತ್ತದೆ, ಹಾಗಾಗಿ C4ಗಳಲ್ಲಿ ದ್ಯುತಿಸಂಶ್ಲೇಷಣೆ ಕ್ಷಮತೆ
ಹೆಚ್ಚು.
{Box
: C4 ರೈಸ್ ಪ್ರಾಜೆಕ್ಟ್: C3 ಸಸ್ಯವಾದ ಭತ್ತ ಜಗತ್ತಿನ 50% ಗಿಂತಲೂ
ಅಧಿಕ ಜನಸಂಖ್ಯೆಯ ಪ್ರಮುಖ ಆಹಾರ. ಏಷಿಯಾ ಭಾಗದಲ್ಲಂತೂ ಅಕ್ಕಿ ಅತಿಯಾಗಿ ಅವಲಂಬಿತ ‘ಸ್ಟೇಪಲ್ ಫುಡ್’.
ಭತ್ತದ ಬೆಳೆಯಲ್ಲಿ ನಡೆದಷ್ಟು, ನಡೆಯುತ್ತಿರುವ ಸಂಶೋಧನೆ ಬೇರೆ ಯಾವ ಬೆಳೆಯಲ್ಲೂ ಆಗಿದ್ದು ಸುಳ್ಳು.
ಆದರೆ ಕಳೆದ ಕೆಲ ದಶಕಗಳಲ್ಲಿ ಭತ್ತದ ಉತ್ಪಾದಕತೆ ಹೆಚ್ಚಿಸುವಲ್ಲಿ ಅಂಥ ಮಹತ್ತರ ಬೆಳವಣಿಗೆಯೇನೂ ಆಗಿಲ್ಲ.
C3 ಸಸ್ಯಗಳಿಂದಲೇ C4ಗಳು ವಿಕಸನವಾದ ಕಾರಣ C3 ಸಸ್ಯವಾದ ಭತ್ತವನ್ನು C4 ಆಗಿ ಪರಿವರ್ತಿಸುವ ಸಾಧ್ಯತೆಯ
ಬಗ್ಗೆ ವಿಜ್ಞಾನಿಗಳು ಯೋಚಿಸಿದ್ದಿದೆ. ಹೀಗೆ ಗರಿಗೆದರಿದ್ದು ವಂಶವಾಹಿಗಳ ಮಾರ್ಪಾಡು, ಬ್ರೀಡಿಂಗ್
ಮೂಲಕ C4 ಮಾರ್ಗವನ್ನು ಭತ್ತದಲ್ಲಿ ಕೃತಕವಾಗಿ ಸೇರಿಸುವ ಮಹತ್ವಾಕಾಂಕ್ಷೆಯ C4 ರೈಸ್ ಪ್ರಾಜೆಕ್ಟ್!.
ಇಂಟರ್ ನ್ಯಾಶನಲ್ ರೈಸ್ ರಿಸರ್ಚ್ ಇನಸ್ಟಿಟ್ಯೂಟ್ (IRRI)ನ ನಾಯಕತ್ವದಲ್ಲಿ 2008ರಲ್ಲಿ ಪ್ರಾರಂಭವಾದ
ಈ ದೂರಗಾಮಿ ಯೋಜನೆ ವರ್ಷದಿಂದ ವರ್ಷಕ್ಕೆ ಗಮನಾರ್ಹ ಪ್ರಗತಿ ಸಾಧಿಸುತ್ತಾ ಸಾಗುತ್ತಿದೆ. ಭತ್ತದಲ್ಲಿ
C4 ಹಾದಿಯನ್ನು ಪರಿಚಯಿಸಲು ಸಾಧ್ಯವಾದರೆ ಅವುಗಳ ದ್ಯುತಿಸಂಶ್ಲೇಷಣಾ ಕ್ಷಮತೆ ಹೆಚ್ಚುತ್ತದೆ, ನೀರಿನ
ಬಳಕೆಯ ದಕ್ಷತೆ ಹೆಚ್ಚುತ್ತದೆ, ಇಳುವರಿ ಹೆಚ್ಚುತ್ತದೆ; ಮಿಗಿಲಾಗಿ ಹೆಚ್ಚಿನ ತಾಪಮಾನ ಹೆಚ್ಚಿನ ಬೆಳಕಿಗೆ
ಹೊಂದಿಕೊಳ್ಳಬಲ್ಲ ಕಾರಣ ಬದಲಾಗುತ್ತಿರುವ ಹವಾಮಾನಕ್ಕೂ ಇದು ಬಹುಮುಖ್ಯ ಕೊಡುಗೆಯಾಗಿದೆ. ಇದೇನಾದರೂ
ಸಾಧ್ಯವಾದಲ್ಲಿ ಕೃಷಿವಿಜ್ಞಾನದ ಹೊಸಶಕೆಯ ಕ್ರಾಂತಿಯಾಗುವುದು ಸತ್ಯ}
ಅಂಗರಚನಾ
ಶಾಸ್ತ್ರಕ್ಕೊಂದು ಅರ್ಧವಿರಾಮ.
ಇಂದಿನ
ಸಂಚಿಕೆ ಸೇರಿಸಿ ಕಳೆದ ಮೂರು ಸಂಚಿಕೆಯಲ್ಲಿ ಸಸ್ಯ ಅಂಗರಚನಾ ಶಾಸ್ತ್ರದ ಬಗ್ಗೆ ವಿವರವಾಗಿ ಹೇಳಲಾಗಿತ್ತು.
ಅಂಗರಚನಾ ಶಾಸ್ತ್ರದ ತಿಳುವಳಿಕೆ, ಸಸ್ಯಗಳು ಮತ್ತು ಅವುಗಳ ಪರಿಸರದ ನಡುವಿನ ಸಂಕೀರ್ಣ ಸಂವಹನಗಳನ್ನು
ಅರ್ಥಮಾಡಿಕೊಳ್ಳುವುದು ಕೃಷಿ ಉತ್ಪಾದಕತೆ ಹೆಚ್ಚಿಸುವಲ್ಲಿ ಭರವಸೆಯಾಗಿದೆ. ಮುಂದಿನ ಸಂಚಿಕೆಯಿಂದ ಬೆಳೆಶರೀರಸಾಸ್ತ್ರದ
ಬಗ್ಗೆ ವಿವರವಾಗಿ ತಿಳಿಯೋಣ.
Comments
Post a Comment