ಮನೀ ಪ್ಲಾಂಟ್
ಚೀನಾದ ಫೆಂಗ್ ಶೂಯಿ ಬಗ್ಗೆ ಕೇಳಿರುತ್ತೀರಿ. ನಮ್ಮ
ಸುತ್ತಲಿನ ವಸ್ತುಗಳಿಂದ ಪ್ರವಹಿಸುವ ಶಕ್ತಿ ನಮ್ಮ ಭಾವ, ಸಂಬಂಧ, ಆರೋಗ್ಯ, ಸಂಪತ್ತಿನ ಮೇಲೆ ಪರಿಣಾಮ
ಬೀರಬಲ್ಲದು ಎನ್ನುತ್ತದೆ ಈ ಪ್ರಾಚೀನ ಪದ್ಧತಿ. ಫೆಂಗ್ ಶೂಯಿಯ ತತ್ವಗಳೊಂದಿಗೆ ಸದ್ದಿಲ್ಲದೆ ನಮ್ಮ
ದೇಶವನ್ನು ಆಕ್ರಮಿಸಿದ್ದು ಮನೀ ಪ್ಲಾಂಟ್ ನಂತಹ ಒಳಾಂಗಣ ಸಸ್ಯಕುಲ. ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ
ಹುಟ್ಟಿದ ಮನೀಪ್ಲಾಂಟ್ ಚೀನಾದ ಸಂಸ್ಕೃತಿಯೊಡನೆ ಬೆರೆತು ಭಾರತದ ವಾಸ್ತುಪ್ರಕಾರಕ್ಕೂ ಸೈ ಎನಿಸಿಕೊಂಡಿದ್ದು
ಆಶ್ಚರ್ಯವೇ ಸರಿ. ಈಗಂತೂ ಮನೆ, ಕಚೇರಿ, ಕೆಫೆ, ಅಂಗಡಿ, ಶಾಲೆ-ಕಾಲೇಜು, ಆಸ್ಪತ್ರೆ ಹೀಗೆ ಎಲ್ಲಾ ಸ್ಥಳಗಳಲ್ಲೂ
ಕಾಣಸಿಗುವ ಸಸ್ಯವೊಂದಿದ್ದರೆ ಅದು ಮನೀಪ್ಲಾಂಟ್.
ಅದ್ಹೇಗೆ ಮನೀಪ್ಲಾಂಟ್ ಹಳೆಯ ಪದ್ಧತಿಯಿಂದ ಶುರುವಾಗಿ
ಆಧುನಿಕ ಜಮಾನಾದ ಭಾಗವಾಯಿತೋ ಯಾರೂ ತಿಳಿಯರು. ಆಕರ್ಷಕ ಹಸಿರು ಹೊಳಪಿನ ಎಲೆ, ನೆರಳಲ್ಲೂ ಸಮೃದ್ಧವಾದ
ಬೆಳವಣಿಗೆ, ಸುಲಭ ಆರೈಕೆ, ಗಾಳಿ ಶುದ್ಧೀಕರಿಸಬಲ್ಲ ಹಣೆಪಟ್ಟಿ, ಈ ಎಲ್ಲಾ ಕಾರಣಕ್ಕೆ ಅಭಿವೃದ್ಧಿ,
ಅದೃಷ್ಟದ ಸಂಕೇತವಾಗಿ ಮನೀಪ್ಲಾಂಟ್ ಬಳಕೆಗೆ ಬಂದಿರಬೇಕು. ಮೇಲಿನ ಹೇಳಿಕೆಗಳಿಗೆ ವೈಜ್ಞಾನಿಕವಾಗಿ ಯಾವುದೇ
ಆಧಾರವಿಲ್ಲದಿದ್ದರೂ ಭಾವನಾತ್ಮಕವಾಗಿ ಬೆಸುಗೆ ಆಗಿಹೋಗಿದೆ! ಹಣದ ಹೊಳೆ ಹರಿಸುವ ಭ್ರಮೆಯೊಂದಿಗೆ ಮನೀಪ್ಲಾಂಟ್
ಎಲ್ಲೆಡೆ ಹೊಕ್ಕಿಬಿಟ್ಟಿದೆ. ಎಷ್ಟರ ಮಟ್ಟಿಗೆಯೆಂದರೆ ಶ್ರೀಲಂಕಾದ ಕಾಡುಗಳಲ್ಲಿ ಯಾವುದೇ ಶತ್ರುಗಳಿಲ್ಲದೆ
ಸೊಕ್ಕಿ ಬೆಳೆದು ಸ್ಥಳೀಯ ಸಸ್ಯಸಂಪತ್ತನನ್ನು ಹಾಳುಗೆಡುವಿದೆ. ಆಫ್ರಿಕಾ, ಆಸ್ಟ್ರೇಲಿಯಾ, ಏಷಿಯಾದ
ಉಷ್ಣವಲಯದ ಪ್ರದೇಶಗಳ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ.
ಕೆಸುವಿನ ಕುಟುಂಬವಾದ ‘ಅರೇಸೆ’ಗೆ ಸೇರಿದ
ಮನೀಪ್ಲಾಂಟ್ ನ ವೈಜ್ಞಾನಿಕ ಹೆಸರು
‘ಎಪಿಪ್ರೆಮ್ನಮ್ ಔರಿಯಮ್’. ಹಳೆಯ ಹೆಸರು ಪೋಥೋಸ್ ಕೂಡಾ ರೂಢಿಯಲ್ಲಿದೆ. ಜೇಡ್ ಪೋಥೋಸ್, ಸಾಟಿನ್ ಪೋಥೋಸ್,
ಗೋಲ್ಡನ್ ಪೋಥೋಸ್, ನಿಯಾನ್, ಎನ್’ಜಾಯ್, ಮಾರ್ಬಲ್ ಕ್ವೀನ್, ಸ್ನೋ ಕ್ವೀನ್, ಮಂಜುಲಾ ಮುಂತಾದ ಹಲವು
ಬಣ್ಣ ವಿನ್ಯಾಸದ ತಳಿಗಳನ್ನು ಗುರುತಿಸಲಾಗಿದೆ.
ಎಂತಹ ಕೆಟ್ಟ ಪರಿಸ್ಥಿತಿಯನ್ನೂ ಜಯಿಸಬಲ್ಲ ಮನೀಪ್ಲಾಂಟ್
ಗಳ ಕಾಳಜಿ ಅತ್ಯಂತ ಸುಲಭದ್ದು. ನೀರು ಬಸಿಯುವ ಪೋಷಕಾಂಶಯುಕ್ತ ಮಣ್ಣು, ಅಗತ್ಯಕ್ಕೆ ತಕ್ಕಂತೆ ನೀರು
ಕೊಟ್ಟಲ್ಲಿ ಸೊಂಪಾಗಿ ಬೆಳೆಯಬಲ್ಲವು. ನೆರಳು, ಮಬ್ಬುಗತ್ತಲೆಯಿಂದ ಪ್ರಕಾಶಮಾನವಾದ ಬೆಳಕಿರುವ ಕೋಣೆಯ
ಎಲ್ಲಾ ಭಾಗಗಳಲ್ಲೂ ಹೊಂದಿಕೊಳ್ಳಬಲ್ಲವು. ತೀರಾ ನೆರಳಾದಲ್ಲಿ ಬಿಳುಚಿಕೊಂಡು ಬಳ್ಳೆಬಳ್ಳೆಯಾಗಿ ಆಕಾರ
ಕಳೆದುಕೊಳುತ್ತವೆ. ನೇರವಾದ ಸೂರ್ಯನ ಬೆಳಕು ಎಲೆಗಳನ್ನು ಸುಡಬಲ್ಲದು. ವಾತಾವರಣದಲ್ಲಿ ತೇವಾಂಶದ ಕೊರತೆಯಾದರೂ ಎಲೆಯ ತುದಿ ಸುಡುವುದನ್ನು
ಗಮನಿಸಬಹುದು. ಉಳಿದಂತೆ ಎಲೆಗಳು ಹಳದಿಯಾಗುವಿಕೆ, ಸೊರಗುವಿಕೆ, ಮುಂತಾದ ಸಮಸ್ಯೆಗಳು ಎದುರಾಗಬಹುದು,
ಹೆಚ್ಚಿನ ಬಾರಿ ನೀರು- ಪೋಷಕಾಂಶ ನಿರ್ವಹಣೆಯಿಂದಲೇ ಈ ಸಮಸ್ಯೆ ದೂರವಾಗುತ್ತದೆ. ಆರಂಭಿಕರಿಗೆ ನಂಬರ್
ಒನ್ ಸಸ್ಯ.
ವೇಗವಾಗಿ ಬೆಳವಣಿಗೆ ಹೊಂದುವ ಮನೀಪ್ಲಾಂಟ್ ಕೆಲವೇ
ತಿಂಗಳಲ್ಲಿ ಕುಂಡದ ಪೂರ್ತಿ ಮಣ್ಣನ್ನು ಬೇರಿನಿಂದ ಆವರಿಸಬಹುದು; ಆಗಾಗ ರೀಪಾಟಿಂಗ್ ಅಗತ್ಯ. ಹುಸಿ
ಬೇರು ಬಿಟ್ಟು ಬಳ್ಳಿಯಾಗಿ ಹಬ್ಬುತ್ತಾ ಸಾಗುವ ಕಾರಣ ಆಧಾರ ಬೇಕಾಗಬಹುದು ಅಥವಾ ಅವುಗಳನ್ನು ತೂಗುಕುಂಡದಲ್ಲಿ
ಇಳಿಬಿಡಬಹುದು. ಪೊದೆಯಂತಹ ಆಕಾರ ನೀಡಲು ಟ್ರಿಮ್ಮಿಂಗ್ ಬೇಕಾಗಬಹುದು. ಹೀಗೆ ಟ್ರಿಮ್ ಮಾಡಿದ ಕಟಿಂಗ್ಸ್
ಗಳಿಂದಲೇ ಸಸ್ಯಾಭಿವೃದ್ಧಿ ಮಾಡಬಹುದು; ಕಟಿಂಗ್ಸ್ ಗಳನ್ನು ಗಾಜಿನ ಬಾಟಲಿಯ ನೀರಿನಲ್ಲೂ ಬೆಳೆಸಬಹುದು.
ಅಕ್ವೇರಿಯಮ್, ಟೆರೆರಿಯಮ್ ಗಳಿಗೂ ಸೂಕ್ತ.. ಕಾಲ್ಶಿಯಮ್ ಆಕ್ಸಲೇಟ್ ಹರಳುಗಳನ್ನು ಹೊಂದಿರುವ ಕಾರಣ
ಇವುಗಳ ಎಲೆ ಸಾಕುಪ್ರಾಣಿಗಳಿಗೆ, ಸ್ವಲ್ಪ ಮಟ್ಟಿಗೆ ಮನುಷ್ಯರಿಗೂ ವಿಷಕಾರಿ ಎಂದು ಹೇಳಲಾಗಿದೆ.
ಕೊನೆಯದಾಗಿ, ಮನೀಪ್ಲಾಂಟ್ ಹೂಬಿಡುವುದು ತೀರಾ ಅಪರೂಪ. ಬೀಜಬಿಟ್ಟು ಸಸ್ಯ ಪ್ರಸರಣ ಮಾಡಲಾಗದ ಕಾರಣ ನೈಸರ್ಗಿಕವಾಗಿ ಇತರೇ ಪ್ರದೇಶಗಳನ್ನು ಹೊಕ್ಕುವುದು ಸಾಧ್ಯವಿಲ್ಲ. ಮಾನವ ಹಸ್ತಕ್ಷೇಪದಿಂದ ಮಾತ್ರ ಸಾಧ್ಯ. ಹಾಗಾಗಿ ಇಂತಹ ಸಸ್ಯಗಳನ್ನು ಕಾಳಜಿಯಿಂದ ಬೆಳೆಸೋಣ.

Comments
Post a Comment