ಹೂವು ಹಣ್ಣು ಬೀಜ ಯಾರಿಗಾಗಿ - ಸಸ್ಯ ಅಂಗರಚನಾ ಶಾಸ್ತ್ರ ಶರೀರ ಶಾಸ್ತ್ರ ಭಾಗ 3

 

ಸಸ್ಯ ಅಂಗರಚನಾಶಾಸ್ತ್ರದ ಪರಿಚಯದ ಪ್ರಯುಕ್ತ ಕಳೆದ ಸಂಚಿಕೆಯಲ್ಲಿ ಬೇರು, ಕಾಂಡ, ಎಲೆಯ ಬಗ್ಗೆ ವಿಸ್ತೃತವಾಗಿ ತಿಳಿಯಲಾಗಿತ್ತು. ಈ ಸಂಚಿಕೆಯಲ್ಲಿ ಮುಂದುವರೆದ ಭಾಗವಾಗಿ ಹೂವು, ಕಾಯಿ, ಹಣ್ಣು, ಬೀಜದ ಅಂಗರಚನೆಯ ಬಗ್ಗೆ ಚರ್ಚಿಸೋಣ. ಹೂ ಬಿಡುವುದು, ಪರಾಗಸ್ಪರ್ಷ, ಹೂವಿನಿಂದ ಕಾಯಿಯಾಗುವಿಕೆ, ಕಾಯಿ ಹಣ್ಣಾಗುವಿಕೆ, ಬೀಜ ರೂಪುಗೊಳ್ಳುವಿಕೆ, ಬೀಜ ಪ್ರಸರಣ, ಬೀಜ ಮೊಳಕೆಯೊಡೆದು ಸಸಿಯಾಗುವಿಕೆ, ಇತ್ಯಾದಿ ಶಾರಿರೀಕ ಕ್ರಿಯೆಯ ಬಗ್ಗೆ ಬೇರೊಂದು ಸಂಚಿಕೆಯಲ್ಲಿ ಬರೆಯಲಾಗುವುದು.

ಹೂವು

ಹೂವೆಂದರೆ ಸಸ್ಯದ ಸಂತಾನೋತ್ಪತ್ತಿಯ ಅಂಗ. ಸಹಜವಾಗಿ ಬೆಳವಣಿಗೆ ಹೊಂದುತ್ತಿರುವ ಸಸ್ಯದ ಕಾಂಡ ಆಂತರಿಕ ಸೂಚನೆಗಳು (ವಂಶವಾಹಿ, ಪ್ರಚೋದಕಗಳ ಪ್ರಮಾಣ, ವಯಸ್ಸು, ಪೋಷಣೆ) ಮತ್ತು ಹೊರವಾತಾವರಣದ (ಬೆಳಕು ತಾಪಮಾನದ) ಪ್ರಭಾವಕ್ಕೊಳಗಾಗಿ ಸಂತಾನೋತ್ಪತ್ತಿ ಹಂಬಲಿಸಿ ಹೂ ಬಿರಿಯುತ್ತದೆ; ಕಾಂಡ ಮುಂದುವರೆದು ತುದಿಯಲ್ಲಿರುವ ವರ್ಧನಾ ಅಂಗಾಂಶ ಹೂವಾಗಿ ಮಾರ್ಪಾಡಾಗುತ್ತದೆ. ಹೂವು ಮುಂದೆ ಕಾಯಾಗಿ, ಹಣ್ಣಾಗಿ, ಬೀಜವಾಗಿ, ತಲೆತಲೆಮಾರುಗಳ ಕಾಲ ಸಂತತಿಯ ಹೆಸರನ್ನು ಉಳಿಸಿ ಬೆಳೆಸುತ್ತದೆ.

ಹೂಗಳಲ್ಲಿ ಸಾವಿರಾರು ಬಗೆ. ಸದ್ಯಕ್ಕೆ ದಾಸವಾಳದ ಹೂವನ್ನು ಮಾದರಿಯಾಗಿ ತೆಗೆದುಕೊಂಡರೆ ನಾಲ್ಕು ಮುಖ್ಯ ಭಾಗಗಳನ್ನು ಗುರುತಿಸಬಹುದು. ಹೊರಗಿನಿಂದ ಒಳಗೆ ಕಣ್ಣಿಗೆ ಕಾಣುವಂತೆ - ಎಲೆಯನ್ನೇ ಹೋಲುವ ಹಸಿರು ಬಣ್ಣದ ಪತ್ರದಳಗಳ ಸುರುಳಿ (ಕ್ಯಾಲಿಕ್ಸ್ ಅಥವಾ ಸೆಪಲ್ಸ್); ಬಣ್ಣ ಬಣ್ಣದ ಪುಷ್ಪದಳಗಳ ಸುರುಳಿ (ಕೊರೊಲ್ಲಾ ಅಥವಾ ಪೆಟಲ್ಸ್); ಕೇಸರ ಕಡ್ಡಿ (ಫಿಲಾಮೆಂಟ್), ಮತ್ತು ಕಡ್ಡಿ ತುದಿಯ ಪರಾಗಕೋಶ (ಆಂಥರ್); ಶಲಾಕೆ (ಸ್ಟಿಗ್ಮಾ) ಮತ್ತು ಶಲಾಕೆ ನಳಿಕೆಯ ತಳದಲ್ಲಿರುವ ಅಂಡಾಶಯ (ಓವರಿ). ಹೂವಿನ ತಳದಲ್ಲಿ ತೊಟ್ಟಿಗಿಂತಲೂ ಸ್ವಲ್ಪ ಮೇಲೆ ತ್ರಿಕೋನಾಕಾರದಲ್ಲಿ ಉಬ್ಬಿಕೊಂಡಂತಿರುವ ಥಲಾಮಸ್ ಎಂಬ ಭಾಗಕ್ಕೆ ಈ ಎಲ್ಲಾ ಭಾಗಗಳೂ ಜೋಡಿಸಿಕೊಂಡಿರುತ್ತವೆ.

ದಾಸವಾಳದ ಹೂವಲ್ಲಿ ಐದು ಪತ್ರದಳ, ಐದು ಪುಷ್ಪದಳ (ಜಾಸ್ತಿಯೂ ಇರಬಹುದು), ನೂರಾರು ಸಂಖ್ಯೆಯಲ್ಲಿ ಕೇಸರಗುಚ್ಛ, ಒಂದು ಅಂಡಾಶಯವಿರುತ್ತದೆ. ಗಂಡು ಸಂತಾನೋತ್ಪತ್ತಿ ಅಂಗವಾದ ಕೇಸರಗುಚ್ಛದ ತುದಿಯಲ್ಲಿರುವ ಪರಾಗಕೋಶದಲ್ಲಿ ಕೋಟಿ ಸಂಖ್ಯೆಯಲ್ಲಿ ಪರಾರೇಣುಗಳಿರುತ್ತವೆ. ದಾಸವಾಳದ ಹೂ ಮುಟ್ಟಿದಾಗ ಕೈಗಂಟುವ ಅರಿಶಿಣದಂತ ಪುಡಿಯೇ ಈ ಪರಾಗರೇಣು. ಏಕಕೋಶೀಯವಾದ ಪ್ರತಿ ಪರಾಗರೇಣುವಿನಲ್ಲಿ ವೀರ್ಯಾಣು ನೆಲೆಯಾಗಿರುತ್ತದೆ. ಹೆಣ್ಣು ಸಂತಾನೋತ್ಪತ್ತಿ ಅಂಗವಾದ ಅಂಡಾಶಯದಲ್ಲಿ ಅಂಡಾಣುಗಳಿರುತ್ತವೆ. ದಾಸವಾಳದ ಹೂವಿನ ಬುಡವನ್ನು ಹಿಸುಕಿದರೆ ಬಿಳಿಯ ಮಣಿಗಳಂತೆ ಹೊರಬರುವ ರಚನೆಗಳೇ ಅಂಡಾಣುಗಳು; ದಾಸವಾಳದಲ್ಲಿ ಇವು ಸಾಮಾನ್ಯವಾಗಿ ಹನ್ನೆರಡರ ಸಂಖ್ಯೆಯಲ್ಲಿ ಕಾಣಸಿಗಬಲ್ಲವು, ಇಷ್ಟೇ ಇರಬೇಕೆಂದೇನಿಲ್ಲ. ಪತ್ರದಳ, ಪುಷ್ಪದಳ, ಕೇಸರಗುಚ್ಛ, ಅಂಡಾಶಯ, ಅಂಡಾಣುಗಳ ಸಂಖ್ಯೆ ಪ್ರತಿ ಸಸ್ಯ ಜಾತಿ, ತಳಿಯಿಂದ ತಳಿಗೂ ಬದಲಾಗುತ್ತದೆ.

{BOX: ಹೂವಿನ ಭಾಗಗಳಲ್ಲೊಂದಾದ ಪರಾಗರೇಣುವಿನ ಬಗ್ಗೆ ಮೇಲೆ ಒಂದೇ ವಾಕ್ಯದಲ್ಲಿ ವಿವರಿಸಲಾಯಿತು. ಆದರೆ ಪರಾಗಲೋಕದ ಬಗ್ಗೆ ಒಂದಿಡೀ ಸಂಚಿಕೆ ಬರೆಯುವಷ್ಟು ಕುತೂಹಲಕಾರಿ ಸಂಗತಿಗಳನ್ನು ವಿಜ್ಞಾನವೃಂದ ತೆರೆದಿಟ್ಟಿದೆ. ಪರಾಗರೇಣುವಿನ ರಚನೆಯೇ ಅಂತದ್ದು! ಪರಾಗರೇಣುವಿನ ಕೋಶಭಿತ್ತಿಯಲ್ಲಿ ‘ಸ್ಪೋರೋಪೊಲ್ಲೆನಿನ್’ ಎಂಬ ಸಂಯುಕ್ತವಿದೆ. ಪರಿಸರದ ಒತ್ತಡಗಳಿಗೆ ನಿರೋಧಕವಾದ ‘ಸ್ಪೋರೋಪೊಲ್ಲೆನಿನ್’ ಪ್ರಕೃತಿಯಲ್ಲಿ ನಮಗೆ ತಿಳಿದಿರುವ ಅತ್ಯಂತ ಕಠಿಣ ಸಾವಯವ ವಸ್ತುಗಳಲ್ಲೊಂದು. ಒಳಗಿನ ಬೀಜಕಕ್ಕೆ ರಕ್ಷಣಾತ್ಮಕ ಬೆಂಬಲ ಒದಗಿಸುವುದು ಮತ್ತು ನಿರ್ಜಲೀಕರಣ, ಅತಿನೇರಳೆ ಕಿರಣ, ರಾಸಾಯನಿಕ, ಸೂಕ್ಷ್ಮಜೀವಿಗಳ ದಾಳಿಗೆ ವಿರೋಧ ಒಡ್ಡುವಲ್ಲಿ ಸ್ಪೋರೋಪೊಲ್ಲೆನಿನ್ ಉಪಯುಕ್ತವಾಗಿದೆ. ಕೋಟಿ ವರ್ಷಗಳ ಕಾಲ ಪ್ರಕೃತಿಯಲ್ಲಿ ಪರಾಗ ಕರಗದೇ ಇರಬಲ್ಲದು. ಪರಾಗದ ಪಳೆಯುಳಿಕೆ ಒಂದು ಜಾಗದ ಹಿಂದಿನ ಪರಿಸರ, ಹವಾಮಾನ ಬದಲಾವಣೆ, ಸಸ್ಯ ಪ್ರಭೇದಗಳ ವಿಕಸನ, ಕೃಷಿ ಇತಿಹಾಸ, ಬೆಳೆ ವಿಸ್ತಾರ, ಮುಂತಾದ ವಿಷಯದ ಬಗ್ಗೆ ಸುಳುಹು ನೀಡಬಲ್ಲದು.}

ಹೂಗಳ ಅಂಗಾಂಶ ರಚನೆಯನ್ನು ಎಲೆಗಳಿಗೆ ಹೋಲಿಸಬಹುದು. ಹೊರ ಮೈ, ಅಲ್ಲಲ್ಲಿ ಪತ್ರರಂಧ್ರ, ಒಳಗೆ ಪ್ಯಾರಂಕೈಮಾ ಕೋಶಗಳು, ಹಸಿರು ಅಥವಾ ಬಣ್ಣದ ಹರಿತ್ತು, ಸೂಕ್ಷ್ಮವಾದ ನಾಳಕೂಚಗಳು ಇತ್ಯಾದಿ. ಕೆಲ ಸಸ್ಯಗಳಲ್ಲಿ ಹೊರಮೈ ಜೀವಕೋಶಗಳು ಸುಗಂಧ ದ್ರವ್ಯಗಳನ್ನು ತಯಾರಿಸಬಲ್ಲವು. ಕೆಲ ಸಸ್ಯಗಳಲ್ಲಿ ಮಕರಂದ ತಯಾರಿಸಲೆಂದೇ ವಿಶೇಷ ಅಂಗಗಳು ಹೂವಿನ ವಿವಿಧ ಭಾಗಗಳಲ್ಲಿ ಸ್ಥಾಪಿತವಾಗಿರುತ್ತವೆ. ಏಕದಳ-ದ್ವಿದಳಗಳ ನಡುವೆ ಹೂವಿನ ರಚನೆಯಲ್ಲಿ ಹೇಳಿಕೊಳ್ಳುವಷ್ಟೇನೂ ವ್ಯತ್ಯಾಸವಿಲ್ಲ. ಕೆಲ ಜಾತಿಯ ಸಸ್ಯಗಳಲ್ಲಿ ಗಂಡು-ಹೆಣ್ಣು ಅಂಗಗಳು ಒಂದೇ ಹೂವಲ್ಲಿದ್ದರೆ, (ಟೊಮ್ಯಾಟೋ, ಪೇರಲ ಇತ್ಯಾದಿ); ಇನ್ನು ಕೆಲವುದರಲ್ಲಿ ಒಂದೇ ಸಸ್ಯದಲ್ಲಿ ಪ್ರತ್ಯೇಕವಾಗಿ (ಕುಂಬಳ, ಮೆಕ್ಕೆಜೋಳ ಇತ್ಯಾದಿ) ಇನ್ನು ಕೆಲವುದರಲ್ಲಿ ಗಂಡುಗಿಡ-ಹೆಣ್ಣುಗಿಡಗಳೆಂದು ಪ್ರತ್ಯೇಕವಾಗಿ (ಕಿವಿ, ಖರ್ಜೂರ) ಇರುತ್ತದೆ. ಕೆಲ ಸಸ್ಯಗಳಲ್ಲಿ ಹೆಣ್ಣು ಹೂಗಳು, ಹೆಣ್ಣು-ಗಂಡು ಹೂಗಳು ಒಟ್ಟಿಗೆ ಒಂದೇ ಸಸ್ಯದಲ್ಲಿ (ಮಾವು, ಗೇರು ಇತ್ಯಾದಿ) ಇರಬಲ್ಲವು.

ದಾಸವಳದಂತ ಸರಳ ರಚನೆ ಹೊಂದಿರುವ ಹೂವನ್ನು ಉದಾಹರಿಸಿ ವಿವಿಧ ಭಾಗಗಳ ಬಗ್ಗೆ ಹೇಳಿಯಾಯತು. ಆದರೆ ಹೂಗಳ ಲೋಕ ಇಷ್ಟೊಂದು ಸರಳವಲ್ಲ. ಮೇಲೆ ಹೇಳಿದ ರಚನಾ ಕ್ರಮಕ್ಕಿಂತ ವೈವಿಧ್ಯಮಯ ಮಾರ್ಪಾಡುಗಳನ್ನು ಸಸ್ಯಲೋಕದಲ್ಲಿ ಕಾಣಬಹುದು. ಸೂರ್ಯಕಾಂತಿಯ ಹೂವನ್ನು ನೋಡಿರುತ್ತೀರಾ. ನಿಜಕ್ಕೂ ಇದು ಒಂದೇ ಹೂವಲ್ಲ, ಬದಲಿಗೆ ಅಸಂಖ್ಯಾತ ಸಣ್ಣ ಸಣ್ಣ ಹೂಗಳಿಂದ ಆದಂತಹ ಹೂಗೊಂಚಲು, ಗೊಂಡೆ ಅಥವಾ ಹೂಗುಚ್ಛ (ಇನ್ಫ್ಲೋರಸನ್ಸ್).

ಟಿಪ್ಪಣಿ - ಕೃಷಿಯಲ್ಲಿ ಹೂಗಳ ಮಹತ್ವ

·         ಹಣ್ಣು, ಬೀಜಗಳ ರಚನೆಗೆ ಮುನ್ನುಡಿಯಾಗುವ ಹೂವು ಸಸ್ಯ ಸಂತಾನಾಭಿವೃದ್ಧಿಯ ಮೂಲವಸ್ತುವಾಗಿ ಕೃಷಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ.

·         ಕೃಷಿ ವಿಜ್ಞಾನದಲ್ಲಿ ಹೂಗಳ ಮಹತ್ವ ಸಾರಲು ಅವುಗಳ ಅಧ್ಯಯನ, ತಳಿ ಅಭಿವೃದ್ಧಿ, ವ್ಯವಸಾಯಕ್ಕೆ ಸಂಬಂಧಿಸಿದ ‘ಪುಷ್ಪ ವಿಜ್ಞಾನ’ - ಫ್ಲೋರಿಕಲ್ಚರ್ ಎಂಬ ವಿಭಾಗವೇ ಸಾಕು!

·         ಹೂಗಳ ಆರ್ಥಿಕ ಮೌಲ್ಯವೂ ಗಣನೀಯವಾದದ್ದು. ಅಲಂಕಾರಿಕ ಬಳಕೆಗಾಗಿ ಹೂಗಳನ್ನು ಬೆಳೆಯುವ ಪುಷ್ಪ ಕೃಷಿಯನ್ನೇ ನಂಬಿದ ಎಷ್ಟೊಂದು ರೈತರಿದ್ದಾರೆ.

·         ನಗರಗಳ ಉದ್ಯಾನವನಗಳ ಸೌಂದರ್ಯವರ್ಧನೆಗೆ, ಹಬ್ಬ ಸಮಾರಂಭದ ಸಡಗರಕ್ಕೆ, ಮನೆ ಕೋಣೆ ಕಚೇರಿಗಳಲ್ಲಿ ಉಲ್ಲಾಸಕ್ಕಾಗಿ ಹೂಗಳ ಅಲಂಕಾರ ಕಡ್ಡಾಯವೇ! ಹೂವುಗಳ ಅಲಂಕಾರಿಕ ಮಹತ್ವ ಹೇಳಿ ತೀರದಷ್ಟು. ಕೆಂಪು ದಾಸವಾಳವಿಲ್ಲದೆ ಗಣಪತಿ ಪೂಜೆ ಮುಗಿಯುವುದಿಲ್ಲ; ಹಳದಿ ಗುಲಾಬಿಯಿಲ್ಲದೇ ಸ್ನೇಹಿತರ ದಿನ ಸಾಗುವುದಿಲ್ಲ; ಸಾಂಸ್ಕೃತಿಕವಾಗಿಯೂ ಹೂವು ವಿಶೇಷವಾದದ್ದು.

·         ಲವಂಗ ಕೇಸರಿಯಲ್ಲಿ ಸಾಂಬಾರು ಪದಾರ್ಥವಾಗಿ; ಬ್ರಕೋಲಿ ಹೂಕೋಸುಗಳಲ್ಲಿ ತರಕಾರಿಯಾಗಿ; ಮಲ್ಲಿಗೆ, ಸಂಪಿಗೆಗಳಲ್ಲಿ ಸುಗಂಧದ್ರವ್ಯಕ್ಕಾಗಿ; ಸೇವಂತಿಗೆ, ಜರೇನಿಯಂ, ಚಮೊಮೈಲ್ ಗಳಲ್ಲಿ ಔಷಧೀಯ ಅಂಶಕ್ಕಾಗಿ; ಚೆಂಡು ಹೂವುಗಳಲ್ಲಿ ನೈಸರ್ಗಿಕ ಬಣ್ಣ ಉತ್ಪಾದನೆಗೆ; ಗುಲಾಬಿ ದಳಗಳನ್ನು ಗುಲ್ಕಂದ್ ಗೆ ಉಪಯೋಗಿಸುವಂತೆ ಜ್ಯಾಮ್, ಸಿರಪ್, ಚಹಾ ಮುಂತಾದ ಆಹಾರ ಪೇಯಗಳ ತಯಾರಿಕೆಯಲ್ಲಿ ಹೂಗಳ ಬಳಕೆ ವ್ಯಾಪಕವಾದದ್ದು. ಇತ್ತೀಚೆಗಂತೂ ತಾಜಾ ಹೂಗಳನ್ನು ಬಳಸುವ ಹರ್ಬಲ್ ಪ್ರಾಡಕ್ಟ್, ಥೆರಪಿ, ಸ್ಕಿನ್ ಕೇರ್ ರೂಟಿನ್ ಸಾಕಷ್ಟು ಮುನ್ನೆಲೆಗೆ ಬಂದಿವೆ, ಸಂಬಂಧೀ ವ್ಯಾಪಾರವೂ ಗರಿಗೆದರಿದೆ.

·         ಜೇನುನೊಣಗಳು, ಚಿಟ್ಟೆಗಳು, ಪತಂಗಗಳು, ಜೀರುಂಡೆಗಳು, ಪ್ರಯೋಜನಕಾರಿ ಕೀಟಸಂಕುಲವನ್ನು ಸಲಹುವ ಹೂಲೋಕ ಪರಿಸರಕ್ಕೂ ಉಪಕಾರಿ (ಇಕೋಸಿಸ್ಟಮ್ ಸರ್ವೀಸಸ್). ಕೃಷಿ ಬೆಳೆಗಳ ಇಳುವರಿ ದೃಷ್ಟಿಯಿಂದಲೂ ಈ ಜೀವವೈವಿಧ್ಯತೆ ಮಹತ್ವದ್ದು. ಪರಾಗಸ್ಪರ್ಷದ ಲಾಭಕ್ಕಾಗಿ ಪರೋಪಕಾರಿ ಕೀಟಗಳನ್ನು ಆಕರ್ಷಿಸುವ ಹೂಗಳು ಅವುಗಳ ಸಹಜೀವನವನ್ನು ಉತ್ತೇಜಿಸಿ ಪರೋಕ್ಷವಾಗಿ ಕೃಷಿ ಬೆಳೆಗಳಲ್ಲೂ ಪರಾಗಸ್ಪರ್ಷದ ಲಾಭಕ್ಕೆ ಕಾರಣವಾಗಬಲ್ಲವು.

·         ವೈಜ್ಞಾನಿಕವಾಗಿಯೂ ತಳಿ ಅಭಿವೃದ್ಧಿಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ನೈಸರ್ಗಿಕವಾಗಿ ವಂಶವಾಹಿಗಳ ಬೆರಕೆ, ಮರುಸಂಯೋಜನೆ, ಆನುವಂಶಿಕ ವೈವಿಧ್ಯತೆ ಪರಿಚಯಿಸುವಲ್ಲಿ; ಕೃತಕವಾಗಿ ಉತ್ತಮ ತಳಿ, ಸಂಕರಣ ಅಥವಾ ಹೈಬ್ರೀಡ್ ಗಳ ಉತ್ಪಾದನೆಯಲ್ಲಿ; ಅಂಗಾಂಶ ಕೃಷಿಯಲ್ಲಿ ಹೂವು ಅತ್ಯಮೂಲ್ಯ ಸಾಧನ. ಹೆಚ್ಚಿನ ಇಳುವರಿ, ರೋಗ ನಿರೋಧಕತೆ, ಪರಿಸರ ಒತ್ತಡಗಳಿಗೆ ಸಹಿಷ್ಣುತೆ ಮತ್ತು ಪೌಷ್ಠಿಕಾಂಶಗಳ ವರ್ಧನೆ, ಇತರೇ ಅಪೇಕ್ಷಿತ ಗುಣಲಕ್ಷಣಗಳನ್ನು ಹೊಸ ಪೀಳಿಗೆಯಲ್ಲಿ ಪಡೆಯಲು ಅನುಸರಿಸುವ ಬ್ರೀಡಿಂಗ್ ವಿಧಾನಗಳು ಶುರುವಾಗುವುದು ಹೂಗಳ ಕ್ರಾಸಿಂಗ್ ನಿಂದ.

·         ಹೂಬಿಡುವ ಸಮಯ, ಪರಾಗಸ್ಪರ್ಷವಾಗುವ ರೀತಿ, ಕಾಯಿ ಕಚ್ಚುವಲ್ಲಿ ಅವುಗಳ ಕೊಡುಗೆ, ಇವೆಲ್ಲವನ್ನು ಆಧುನಿಕ ಕೃಷಿಯಲ್ಲಿ ನಿಯಂತ್ರಿಸಬಹುದು, ಮತ್ತು ಇಂತಹ ಜ್ಞಾನ ಹೆಚ್ಚಿನ ಇಳುವರಿ ಗುಣಮಟ್ಟ ಪಡೆಯಲು ಸಹಕಾರಿ. ಕೆಲ ಸಂದರ್ಭದಲ್ಲಿ ಹೂ-ಮೊಗ್ಗುಗಳ ಉದುರುವಿಕೆ, ವಿಚಿತ್ರ ಆಕಾರ ಹೊಂದುವಿಕೆ, ಮುಂತಾದ ಸಣ್ಣ ಪುಟ್ಟ ವಿಚಾರಗಳು ವಾತಾವರಣದ ತಾಪಮಾನ-ತೇವಾಂಶದ ಸೂಚಕಗಳೂ ಆಗಬಲ್ಲವು. 

·         ಸಸ್ಯ ವರ್ಗೀಕರಣ ಮಾಡುವಾಗ ಗಮನದಲ್ಲಿರಿಸುವ ಮುಖ್ಯ ಅಂಶಗಳಲ್ಲೊಂದು ಹೂವಿನ ರಚನೆ. ಹೂವಿನ ಅಂಗಗಳ ಜೋಡಣೆ, ಹೂವಿನ ಭಾಗಗಳ ಸಂಖ್ಯೆ, ವಿಶೇಷ ರಚನೆಗಳ ಉಪಸ್ಥಿತಿ-ಅನುಪಸ್ಥಿತಿ, ಪರಾಗಸ್ಪರ್ಶ ನಡೆಯುವ ವಿಧಾನ ಹೀಗೆ ಹೂವಿನ ಗುಣಲಕ್ಷಣಗಳನ್ನು ಪರಿಶೀಲಿಸುವ ಮೂಲಕ ಸಸ್ಯ ಜಾತಿಗಳ ನಡುವಿನ ಸಂಬಂಧವನ್ನು ಊಹಿಸಿ ಅವುಗಳನ್ನು ವಿಭಿನ್ನ ಕುಟುಂಬಗಳಾಗಿ ವರ್ಗೀಕರಿಸಲಾಗುತ್ತದೆ.

ಕಾಯಿ-ಹಣ್ಣು

ಪರಾಗಸ್ಪರ್ಷ ಕ್ರಿಯೆ ಯಶಸ್ವಿಯಾದಲ್ಲಿ ಅಂಡಾಣುವಿನೊಂದಿಗೆ ಸೇರಿದ ವೀರ್ಯಾಣು ಸೇರಿ ಭ್ರೂಣದ ರಚನೆಯಾಗುತ್ತದೆ. ಮುಂದೆ ಇದೇ ಭ್ರೂಣ ಬೀಜವಾಗಿ, ತನ್ನ ಸುತ್ತಲಿನ ಹೂವಿನ ಭಾಗಗಳೊಂದಿಗೆ ಕಾಯಿ-ಹಣ್ಣು ರಚನೆಯಾಗುತ್ತದೆ. ಅಂಡಾಣುಗಳ ಸಂಖ್ಯೆಯಷ್ಟು ಬೀಜ - ಮಾವಿನಲ್ಲಿ ಒಂದು, ಬೆಂಡೆಯಲ್ಲಿ ಎಂಟಾರು, ಅಂಡಾಶಯದ ಸಂಖ್ಯೆಯಷ್ಟು ಹಣ್ಣು- ಸಾಮಾನ್ಯವಾಗಿ ಒಂದೇ ಹಣ್ಣು - ಮೂಡುತ್ತದೆ. ಹಣ್ಣುಗಳನ್ನು ಸ್ಥೂಲವಾಗಿ – ರಸಭರಿತ ತಿರುಳಿರುವ ಹಣ್ಣು-ಮಾವು,  ಸೇಬು, ಟೊಮ್ಯಾಟೋ ಮುಂತಾದವು; ಮತ್ತು ರಸರಹಿತ ಒಣ ಬಗೆಯ ಹಣ್ಣು - ಬಾದಾಮಿ, ಭತ್ತ, ಬೀನ್ಸ್ ಮುಂತಾದವು ಎಂದು ವಿಂಗಡಿಸಬಹುದು. ಎರಡರ ನಡುವಿನ ಪ್ರಾಥಮಿಕ ವ್ಯತ್ಯಾಸ ಅವುಗಳ ತೇವಾಂಶ.

ರಸಭರಿತ ಮಾವಿನ ಹಣ್ಣನ್ನು ಪರಿಗಣಿಸಿದರೆ ಮೂರು ಪದರಗಳಿರುತ್ತವೆ, ಹೊರಗಿನ ಸಿಪ್ಪೆ (ಎಕ್ಸೋಕಾರ್ಪ್); ಒಳಗಿನ ತಿರುಳು (ಮಿಸೊಕಾರ್ಪ್); ಬೀಜದ ಸುತ್ತಲಿನ ಕವಚ (ಎಂಡೋಕಾರ್ಪ್). ಹಣ್ಣಿನ ಮೇಲಾಗುವ ರೋಗಕಾರಕಗಳ ದಾಳಿಯನ್ನು ನಿರೋಧಿಸುವುದು, ಹಣ್ಣಿನ ತೇವಾಂಶ ನಷ್ಟವಾಗದಂತೆ ತಡೆಯುವುದು ಸಿಪ್ಪೆಗಿರುವ ಉದ್ದೇಶ. ಹಣ್ಣಿನ ಜಾತಿ ಅವಲಂಬಿಸಿ ಸಿಪ್ಪೆಯ ರಚನೆ, ದಪ್ಪ ಮತ್ತು ಬಣ್ಣದಲ್ಲಿ ವ್ಯತ್ಯಾಸವಾಗಬಹುದು. ನೀರಿನ ಅಂಶ, ಸಕ್ಕರೆ ಪಿಷ್ಟಗಳು, ಸಾವಯವ ಆಮ್ಲಗಳು, ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುವುದು ಒಳಗಿನ ತಿರುಳಿನ ವಿಶೇಷ. ಹಣ್ಣಿನ ವಿನ್ಯಾಸ ಮತ್ತು ಪರಿಮಳವನ್ನು ನಿರ್ಧರಿಸುವ ತಿರುಳು ಪ್ರಾಣಿ-ಪಕ್ಷಿಗಳನ್ನು ಆಕರ್ಷಿಸಿ ಹಣ್ಣುಗಳನ್ನು ಭೋಜನ ಯೋಗ್ಯವಾಗಿಸಿ ಸಸ್ಯ ಜಾತಿಯ ಪ್ರಸರಣೆಗೆ ಬೆಂಬಲವಾಗುತ್ತದೆ. ಇನ್ನು ಬೀಜದ ಹೊರಸುತ್ತಲಿರುವ ಎಂಡೋಕಾರ್ಪ್ ನ ಪದರ ತಿರುಳೆಲ್ಲಾ ಕರಗಿದ ಮೇಲೆ ಬೀಜವನ್ನು ಸಂರಕ್ಷಿಸಲು ರಚನೆಯಾಗಿದೆ. ರಸರಹಿತ ಹಣ್ಣುಗಳಲ್ಲಿ ಈ ಎಲ್ಲಾ ಪದರಗಳು ಇರುವುದಿಲ್ಲ ಅಥವಾ ನಿರ್ದಿಷ್ಟವಾಗಿರುವುದಿಲ್ಲ. ಮಾವಿನ ಹಣ್ಣಿನೊಡನೆ ಬೀನ್ಸ್ ನ ಸೋಡಿಗೆಯನ್ನು ಕಲ್ಪಿಸಿಕೊಂಡರೆ ಈ ವ್ಯತ್ಯಾಸ ಸ್ಪಷ್ಟವಾಗುತ್ತದೆ.

ಹಣ್ಣಿನ ಸಿಪ್ಪೆ ಎಪಿಡರ್ಮಿಸ್ ಅಂಗಾಂಶದಿಂದ ರಚನೆಯಾಗಿದೆ. ಈ ಪದರದಲ್ಲಿ ಪತ್ರರಂಧ್ರಗಳು, ಸೂಕ್ಷ್ಮ ರೋಮಗಳು (ಕಿವಿ ಹಣ್ಣುಗಳಲ್ಲಿರುವಂತೆ), ಕ್ಯುಟಿಕಲ್ ಪೊರೆ (ಬೂದು ದ್ರಾಕ್ಷಿಯಲ್ಲಿರುವಂತೆ), ಬಣ್ಣಗಳನ್ನು ಉತ್ಪಾದಿಸುವ ವಿಶೇಷ ಜೀವಕೋಶಗಳು ಇರುತ್ತವೆ. ತಿರುಳಿನ ಮಿಸೊಕಾರ್ಪ್ ನಲ್ಲಿರುವುದು ದ್ರವಗಳನ್ನು ಹೊಂದಿರುವ ಪ್ಯಾರಂಕೈಮಾ ಜೀವಕೋಶಗಳು, ನಾಳಕೂಚ ಮತ್ತು ಹಣ್ಣುಗಳ ಆಕಾರವನ್ನು ಕಾಪಾಡುವ ಕೊಲಂಕೈಮಾ ಜೀವಕೋಶಗಳು. ಗಟ್ಟಿಯಾದ ಪದರವಾಗಿರುವ ಎಂಡೋಕಾರ್ಪ್ ನಲ್ಲಿ ಹೆಚ್ಚಾಗಿ ಸ್ಕ್ಲಿರಂಕೈಮಾ ಜೀವಕೋಶಗಳಿರುತ್ತವೆ.

ಮೇಲೆ ಹೇಳಿದ ಭಾಗಗಳ ಜೊತೆಗೆ ಹಣ್ಣುಗಳು ಕೆಲವು ವಿಶೇಷ ರಚನೆಗಳನ್ನು ಹೊಂದಿರಬಲ್ಲವು. ಉದಾಹರಣೆಗೆ ಸಿಟ್ರಸ್ ಹಣ್ಣುಗಳ ಸಿಪ್ಪೆಯಲ್ಲಿರುವ ತೈಲ ಗ್ರಂಥಿಗಳು, ರಂಬೂಟನ್ ನ ರೋಮಗಳು, ರೆಕ್ಕೆಯುಳ್ಳ ಕೆಲ ಕಾಡು ಮರಗಳ ಹಣ್ಣುಗಳು, ಪ್ರಾಣಿಗಳಿಗೆ ಮೈಗೆ ಅಂಟಿಕೊಳ್ಳುವಂತೆ ಮುಳ್ಳುಗಳಿರುವ ಕಳೆ ಸಸ್ಯದ ಹಣ್ಣುಗಳು, ಇತ್ಯಾದಿ. ಜಾಯಿಪತ್ರೆ, ದಾಳಿಂಬೆಗಳಲ್ಲಿ ನಾವು ಉಪಯೋಗಿಸುವ ಭಾಗ ನಿಜಕ್ಕೂ ಹಣ್ಣಾಗಿರದೆ ಬೀಜದ ಸುತ್ತಲೂ ಇರುವ ‘ಅರಿಲ್’ ಎಂಬ ಹೆಚ್ಚುವರಿ ಭಾಗವಾಗಿದೆ. ಸೇಬು ಹಣ್ಣಿನ ತಿರುಳು ಹೂವಿನ ರಚನೆಯಲ್ಲಿ ಉಲ್ಲೇಖಿಸಿದ ಥಲಾಮಸ್ ಭಾಗವಾಗಿದೆ. ಪೈನಾಪಲ್, ಸ್ಟ್ರಾಬೆರಿ ಒಂದೇ ಹಣ್ಣಂತೆ ಕಂಡರೂ ನಿಜಕ್ಕೂ ಅವು ಚಿಕ್ಕ ಚಿಕ್ಕ ಹಣ್ಣುಗಳನ್ನು ಕೂಡಿ ಆದಂತಹ ಸಂಯೋಜಿತ ಹಣ್ಣುಗಳು.

ಟಿಪ್ಪಣಿ - ಕೃಷಿಯಲ್ಲಿ ಕಾಯಿ-ಹಣ್ಣಿನ ಮಹತ್ವ

·         ಕೃಷಿ-ತೋಟಗಾರಿಕೆಯಲ್ಲಿ ಕಾಯಿ-ಹಣ್ಣಿನ ಮಹತ್ವವನ್ನು ಸಾರಿ ಹೇಳಲು ಹಣ್ಣಿನ ಬೆಳೆಗಳ ವ್ಯವಸಾಯ, ತಳಿ ಅಭಿವೃದ್ಧಿ ಅಧ್ಯಯನಕ್ಕೆಂದೇ ಮೀಸಲಾದ ‘ಹಣ್ಣು ವಿಜ್ಞಾನ’ - ಪೊಮೋಲಜಿ ವಿಭಾಗವೇ ಸಾಕು.

·         ಬಹುತೇಕ ಕೃಷಿ ತೋಟಗಾರಿಕಾ ಬೆಳೆಗಳಲ್ಲಿ ಹಣ್ಣೇ ಪ್ರಮುಖ ವಾಣಿಜ್ಯಿಕ ಉತ್ಪನ್ನ. ಬಹುತೇಕ ತರಕಾರಿಗಳೂ, ಸಾಂಬಾರು ಪದಾರ್ಥಗಳು ಸಸ್ಯಶಾಸ್ತ್ರೀಯವಾಗಿ ಹಣ್ಣೇ ಆಗಿವೆ.

·         ಹಣ್ಣುಗಳ ಕೊಯ್ಲೋತ್ತರ ಸಂಸ್ಕರಣೆ, ಜ್ಯೂಸ್, ಪಲ್ಪ್, ಜ್ಯಾಮ್, ಜೆಲ್ಲಿ, ಬಾರ್ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿರುವ ಗೃಹ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳೂ ಸಾಕಷ್ಟಿವೆ.

·         ಹಿಪ್ಪಲಿ ಕಾಶಿಬದನೆ, ನೆಲ್ಲಿಕಾಯಿಗಳನ್ನು ಔಷಧೀಯ ಉತ್ಪನ್ನಗಳ ತಯಾರಿಕೆಯಲ್ಲಿ; ವೆನಿಲ್ಲಾ, ನಿಂಬು ಗಳನ್ನು ಸುಗಂಧದ್ರವ್ಯಗಳ ತಯಾರಿಕೆಯಲ್ಲಿ; ಹೀಗೆ ತಾಜಾ ಸೇವನೆಗಷ್ಟೇ ಅಲ್ಲದೇ, ಇತರೇ ಕೈಗಾರಿಕೆಗಳಿಗೂ ಕಾಯಿ-ಹಣ್ಣು ಕಚ್ಚಾ ವಸ್ತು.

ಬೀಜ

ಫಲವತ್ತಾದ ಭ್ರೂಣವನ್ನು ಹೊಂದಿರುವ ಬೀಜ ಸಸ್ಯವೊಂದರ ಮುಂದಿನ ಪೀಳಿಗೆಯನ್ನು ಪ್ರಸರಣ ಮಾಡುವ ಮಾಧ್ಯಮ. ಸಸ್ಯಗಳ ಭವಿಷ್ಯದ ಬೆಳವಣಿಗೆಗೆ ಬೇಕಾದ ವಿಷಯ ಬರೆದಿರುವುದು ಇದೇ ಬೀಜದಲ್ಲಿರುವ ಭ್ರೂಣದ ವರ್ಣತಂತುಗಳ ಮೇಲೆ. ಬೀಜವೆಂದರೆ ಆಹಾರ ಒದಗಿಸಿ ಭ್ರೂಣವನ್ನು ಪಾಲನೆ ಮಾಡುವ; ಚಳಿ-ಗಾಳಿ-ಬಿಸಿಲಿನಿಂದ ಭ್ರೂಣಗಳನ್ನು ರಕ್ಷಿಸುವ; ಸರಿಯಾದ ಸಮಯಕ್ಕೆ ಮೊಳಕೆಯೊಡೆಯಲು ನಿರ್ದೇಶಿಸುವ; ನೀರು-ಗಾಳಿಯ ಮೂಲಕ ದೂರದ ಭೌಗೋಳಿಕ ಪ್ರದೇಶಕ್ಕೆ ಚಲಿಸಿ ತನ್ನ ವಂಶವನ್ನು ವಿಸ್ತರಿಸಬಲ್ಲ ಶಕ್ತಿಶಾಲಿ ಮಾಧ್ಯಮ. ಬೀಜ ಒಂದು ರೀತಿ ಬ್ಯಾಟರಿ ಇದ್ದಂತೆ- ಶಕ್ತಿ ಸಂಗ್ರಹಿಸುವ, ಸರಿಯಾದ ವ್ಯವಸ್ಥೆಯಾದಾಗ ಶಕ್ತಿ ಸಂಚಯಿಸುವ ಸಾಧನ.

ಬೀಜ ಕವಚ (ಸೀಡ್ ಕೋಟ್), ಭ್ರೂಣದ ಸುತ್ತಲಿರುವ ಎಂಡೋಸ್ಪರ್ಮ್ ಅಂಗಾಂಶ, ಮತ್ತು ಭ್ರೂಣ (ಎಂಬ್ರಿಯೋ) ಬೀಜದ ಮುಖ್ಯ ಭಾಗಗಳು. ಭ್ರೂಣದಲ್ಲಿ ಮುಂದೆ ಕಾಂಡವಾಗಿ ಬೆಳೆಯಬಲ್ಲ ಸುಪ್ತ ಕಾಂಡದ ಮೊಳಕೆ (ಪ್ಲುಮ್ಯುಲ್) ಮುಂದೆ ಎಲೆಗಳಾಗಿ ಬೆಳೆಯಬಲ್ಲ ಸುಪ್ತ ಎಲೆ ಅಥವಾ ದಳಗಳ ಮೊಳಕೆ (ಕಾಟಿಲಿಡಾನ್), ಮುಂದೆ ಬೇರಾಗಿ ಬೆಳೆಯಬಲ್ಲ ಸುಪ್ತ ಬೇರಿನ ಮೊಳಕೆ (ರಾಡಿಕಲ್) ಹೀಗೆ ವಿವಿಧ ಭಾಗಗಳನ್ನು ಹೆಸರಿಸಬಹುದು. ಬೀಜವೊಂದು ಮೊಳಕೆಯೊಡೆಯುತ್ತಿರುವಾಗ ಈ ಭಾಗಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಕೆಲ ಬೀಜಗಳು ಇನ್ನೂ ಹೆಚ್ಚಿನ ಅಂಗಗಳನ್ನು ಹೊಂದಿರಬಲ್ಲವು. ರೆಕ್ಕೆ ಪುಕ್ಕ, ಮುಳ್ಳು, ಜಾಯಿಪತ್ರೆಯಂತೆ ಹೊರಗೊಂದು ಚಂದದ ಜರಿ, ಭತ್ತಕ್ಕಿರುವಂತೆ ಚುಂಗು, ಯಾಲಕ್ಕಿಗಿರುವಂತೆ ಲೋಳೆ ಇತ್ಯಾದಿ.

ಅಂಡಾಣುವಿನ ಹೊರಚರ್ಮದಿಂದ ರಚನೆಯಾದ ಬೀಜ ಕವಚ ಭ್ರೂಣವನ್ನು ಬಾಹ್ಯ ಪರಿಸರದಿಂದ ಕಾಪಾಡುವ ರಕ್ಷಣಾತ್ಮಕ ಪದರವಾಗಿದೆ. ಸ್ಕ್ಲಿರಂಕೈಮಾ ಜೀವಕೋಶಗಳಿಂದ ನಿರ್ಮಿತವಾದ ಈ ಹೊರಪೊರೆ ಸಾಮಾನ್ಯವಾಗಿ ನೀರನ್ನು ಅಥವಾ ತೇವಾಂಶವನ್ನು ಸುಲಭವಾಗಿ ಹೀರದ, ಕಠಿಣ, ದಪ್ಪ ಪದರವಾಗಿರುತ್ತದೆ – ಹುಣಸೆ ಬೀಜದ ಕವಚದಂತೆ. ಪ್ಯಾರಂಕೈಮಾ ಜೀವಕೋಶಗಳಿಂದ ರಚಿಸಲ್ಪಟ್ಟ ಎಂಡೋಸ್ಪರ್ಮ್ ಅಂಗಾಂಶ ಪೋಷಕಾಂಶ ಶೇಖರಿಸಿ ಭ್ರೂಣದ ಬೆಳವಣಿಗೆಗೆ ಬೆಂಬಲವಾಗುತ್ತದೆ. ಹಲವಾರು ದಿನ ತಿಂಗಳುಗಳ ಕಾಲ ಭ್ರೂಣ ಬದುಕಿರಲು ಆಹಾರದ ಸೆಲೆಯಾಗಿ, ಮೊಳಕೆಯೊಡೆಯುವಾಗ ಭ್ರೂಣವನ್ನು ಪೋಷಿಸುತ್ತದೆ. ಎಳನೀರಿನಲ್ಲಿ ನೀರಾಗಿ, ತೆಂಗಿನಕಾಯಿಯಲ್ಲಿ ಕೊಬ್ಬರಿಯಾಗಿ, ಅಕ್ಕಿ-ಜೋಳದಲ್ಲಿ ಬಿಳಿ ಹಾಲಿನಂತ ಮೃದು ವಸ್ತುವಾಗಿ ಎಂಡೋಸ್ಪರ್ಮ್ ವಿವಿಧ ರೂಪದಲ್ಲಿರುತ್ತದೆ. ಪ್ಯಾರಂಕೈಮಾ ಜೀವಕೋಶಗಳಿಂದಲೇ ರಚಿಸಲ್ಪಟ್ಟ ಸುಪ್ತ ದಳಗಳು ಅಥವಾ ಕಾಟಿಲಿಡಾನ್ ಗಳೂ ಪೋಷಕಾಂಶವನ್ನು ಶೇಖರಿಸುತ್ತವೆ. ಮೊಳಕೆಯೊಡೆಯುವಾಗ ಎಲೆಗಳಾಗಿ ಬೆಳವಣಿಗೆ ಹೊಂದುವ ಕಾಟಿಲಿಡಾನ್, ಬೀಜದ ಆಹಾರ ದಾಸ್ತಾನು ಮುಗಿಯುವ ಸಮಯಕ್ಕೆ ದ್ಯುತಿ ಸಂಶ್ಲೇಷಣೆಯಲ್ಲಿ ತೊಡಗಿ ಸಸ್ಯದ ಉಳಿವಿಗೆ ಬೆಂಬಲವಾಗುತ್ತದೆ. ಭತ್ತದಲ್ಲಿ ಪಿಷ್ಟದ ಕಣಗಳು, ಶೇಂಗಾದಲ್ಲಿ ಎಣ್ಣೆ, ಬೀನ್ಸ್ ನಲ್ಲಿ ಪೌಷ್ಟಿಕ ಪ್ರೋಟಿನ್ ಕಣಗಳು ಸಂಗ್ರಹವಾಗಿರುವುದು ಇದೇ ಕಾಟಿಲಿಡಾನ್ ನಲ್ಲಿ. ನಾಳಕೂಚಕ್ಕೆ ಸಂಬಂಧಿಸಿದ ಅಂಗಾಂಶಗಳು ನೆಲೆಸಿರುವುದು ಇಲ್ಲಿಯೇ.

ಕಾಟಿಲಿಡಾನ್ ಒಂದೇ ಸಂಖ್ಯೆಯಲ್ಲಿದ್ದರೆ ‘ಏಕದಳ’ಗಳೆಂದು, ಎರಡು ಸಂಖ್ಯೆಯಲ್ಲಿದ್ದರೆ ‘ದ್ವಿದಳ’ಗಳೆಂದು ವರ್ಗೀಕರಿಸಲಾಗಿದೆ. ಭತ್ತ, ಗೋಧಿ, ಜೋಳ, ಬಾರ್ಲಿ, ಬಿದಿರು, ಕಬ್ಬು, ಒಟ್ಟಾರೆ ಹುಲ್ಲು ಸಸ್ಯಗಳು; ಆರ್ಕಿಡ್, ಲಿಲ್ಲಿ, ಗ್ಲಾಡಿಯೋಲಸ್, ಕೆಲವು ಅಲಂಕಾರಿಕ ಸಸ್ಯಗಳು; ತೆಂಗು, ಅಡಿಕೆ, ಖರ್ಜೂರ, ತಾಳೆ, ಒಟ್ಟಾರೆ ಪಾಮ್ ಸಸ್ಯಗಳು; ಬಾಳೆ ಇವೆಲ್ಲಾ ಏಕದಳಕ್ಕೆ ಸಸ್ಯಗಳಿಗೆ ಉದಾಹರಣೆ. ಏಕದಳಗಳು ಮೊಳಕೆಯೊಡೆಯುವಾಗ ಕಾಟಿಲಿಡಾನ್ ಮಣ್ಣಲ್ಲೇ ಹುದುಗಿಕೊಂಡಿದ್ದರೆ ದ್ವಿದಳಗಳು ಮೊಳಕೆಯೊಡೆಯುವಾಗ ಕಾಟಿಲಿಡಾನ್ ಮಣ್ಣಿನಿಂದ ಮೇಲೆ ಎದ್ದಿರುತ್ತದೆ. ಸಾಮಾನ್ಯವಾಗಿ ಏಕದಳಗಳಲ್ಲಿ ಎಂಡೋಸ್ಪರ್ಮ್ ಅಂಗಾಂಶ ಸ್ಪಷ್ಟವಾಗಿ ಗೋಚರವಾಗುತ್ತದೆ, ದ್ವಿದಳಗಳಲ್ಲಿ ಬೀಜ ಬೆಳವಣಿಗೆ ಹಂತದಲ್ಲಿ ವ್ಯಯವಾಗುವ ಎಂಡೋಸ್ಪರ್ಮ್ ಬಲಿತ ಬೀಜಗಳಲ್ಲಿ ಇಲ್ಲದೆಯೂ ಇರಬಹುದು.

ಟಿಪ್ಪಣಿ - ಕೃಷಿಯಲ್ಲಿ ಬೀಜದ ಮಹತ್ವ

·         ಸೊಂಟದಷ್ಟೆತ್ತರ ಭತ್ತ, ಇಪತ್ತಡಿ ಅಡಿಕೆ ಮರ, 30X40 ಸೈಟ್ ವಿಸ್ತರಿಸುವ ಮಾವಿನಮರ, ಮನೆ ಮುಂದೆ ದಿನಾ ನೀರೆರೆದು ಪೂಜೆ ಮಾಡುವ ತುಳಸಿ, ಹಿತ್ತಲ ತೋಟದ ಬದನೆ, ಹೆಕ್ಟೆರ್ ವ್ಯಾಪಿಸಿದ ಹತ್ತಿ, ಬಹುತೇಕ ಕೃಷಿ-ತೋಟಗಾರಿಕಾ ಬೆಳೆ ಆರಂಭವಾಗುವುದೇ ಬೀಜದಿಂದ. ಬೀಜ ಕೃಷಿಯ ಅವಿಭಾಜ್ಯ ಅಂಗ. ಕೃಷಿಯ ಸಫಲತೆಯ ನಿರ್ಣಾಯಕ ಅಂಶವೂ ಹೌದು. ಬೆಳೆಯು ಸಿರಿ ಮೊಳಕೆಯಲ್ಲಿ ಎನ್ನುವಂತೆ ಬೀಜದ ಗುಣಮಟ್ಟದ ಮೇಲೆ ಕೃಷಿ ಆಧರಿಸಿದೆ.

·         ಕೃಷಿ ವಿಜ್ಞಾನದ ಪಠ್ಯಕ್ರಮದಲ್ಲಿ ‘ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಪ್ರತ್ಯೇಕ ವಿಭಾಗವೇ ಇದೆ. ಕೃಷಿಯಲ್ಲಿ ಗುಣಮಟ್ಟದ ಬೀಜದ ಮಹತ್ವ, ಬೀಜಗಳ ಗುಣಮಟ್ಟ ಕಾಪಾಡುವ ವಿಧಾನ, ಬೀಜ ಸಂಗ್ರಹಣೆ, ಬೀಜೋಪಚಾರ, ಮುಂತಾದ ವಿಷಯಗಳ ಸಂಶೋಧನೆ, ಅಧ್ಯಯನ ಈ ವಿಭಾಗದ ಕಾರ್ಯಕಲಾಪವಾಗಿದೆ.

·         ಬೀಜದಿಂದ ಸಸ್ಯಾಭಿವೃದ್ಧಿ ಅತ್ಯಂತ ಹಳೆಯ ಮತ್ತು ಸುಲಭದ ವಿಧಾನ. ಕಸಿ, ಅಂಗಾಂಶ ಕೃಷಿಯಂತ ಆಧುನಿಕ ವಿಧಾನಗಳು ಪರಿಚಯವಾದರೂ ಅವುಗಳಿಗೆ ಹೆಚ್ಚಿನ ಬಾರಿ ಬೀಜಗಳೇ ಆರಂಭಿಕ ವಸ್ತು.

·         ವಿಶ್ವದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆಯ ಪ್ರಧಾನ ಆಹಾರ ಅಕ್ಕಿ. ಅಕ್ಕಿಯೆಂದರೆ ಭತ್ತದ ಬೀಜವೇ ಅಲ್ಲವೇ. ನಾವು ಆಹಾರಕ್ಕಾಗಿ ಅವಲಂಬಿಸಿರುವ ಅಕ್ಕಿ ಗೋಧಿ ಜೋಳ ಸಿರಿಧಾನ್ಯ ಕಾಳು ಬೇಳೆ ಬೀಜವೇ ಆಗಿದೆ. ಮಸಾಲೆ ಪದಾರ್ಥಗಳಂತ ಕೆಲ ತೋಟಗಾರಿಕಾ ಬೆಳೆಗಳು, ಕ್ಷೇತ್ರ ಬೆಳೆಗಳಲ್ಲಿ (ಫೀಲ್ಡ್ ಕ್ರಾಪ್ಸ್) ಬೀಜಗಳೇ ಪ್ರಮುಖ ಕೃಷಿ ಉತ್ಪನ್ನ. ಬೀಜಗಳ ಸಂಸ್ಕರಣೆ, ಮೌಲ್ಯವರ್ಧನೆ ಆಹಾರೊದ್ದಿಮೆಯಾಗಿಯೂ ಅರಳುತ್ತಿದೆ.

·         ಬೀಜಗಳ ಮೇಲೆ ನೆಲೆಯಾದ ಇನ್ನೊಂದು ಬೃಹತ್ ಉದ್ದಿಮೆ, ಬೀಜದ ಉತ್ಪಾದನೆ, ವಿತರಣೆ ಮತ್ತು ಮಾರಾಟದಲ್ಲಿ ತೊಡಗಿರುವ ಬೀಜೋದ್ದಿಮೆ. ನೂರಾರು ಸ್ವದೇಶಿ ವಿದೇಶಿ ಬೀಜ ಉತ್ಪಾದನಾ ಕಂಪನಿಗಳ ತವರಾದ ನಮ್ಮ ಕರ್ನಾಟಕದ ಹಾವೇರಿ ಜಿಲ್ಲೆ ಬೀಜ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

·         ಬೀಜವೆಂಬುದು ಕೃಷಿ ಬದುಕಿನ ಬುನಾದಿ. ನಾಗರಿಕತೆಯನ್ನು ಹುಟ್ಟುಹಾಕಿದ್ದೇ ಬೀಜಗಳು (ಸೀಡ್ ಡ್ರೋವ್ ಸಿವಿಲೈಜೇಶನ್) ಎಂಬ ಸಿದ್ದಾಂತಗಳು ವೈಜ್ಞಾನಿಕ ಸಮುದಾಯದಲ್ಲಿ ಪ್ರಚಲಿತದಲ್ಲಿದೆ.

ಅಲ್ಲಲ್ಲಿ ಇಣುಕಿದ ಏಕದಳ-ದ್ವಿದಳಗಳು

ಹಿಂದಿನ ಎರಡು ಸಂಚಿಕೆಗಳಲ್ಲಿ ಏಕದಳ-ದ್ವಿದಳಗಳ ಬಗ್ಗೆ ಅಲ್ಲಲ್ಲಿ ಹೇಳಲಾಗಿತ್ತು, ಎಲ್ಲವನ್ನು ಒಟ್ಟುಗೂಡಿಸಿ ಹೇಳುವುದಾದರೆ: ಬೀಜದಲ್ಲಿರುವ ಕಾಟಿಲಿಡನ್ ಅಥವಾ ಸುಪ್ತದಳಗಳ ಸಂಖ್ಯೆಯನ್ನು ಆಧರಿಸಿ ಒಂದಿದ್ದರೆ ಏಕದಳವೆಂದು, ಎರಡಿದ್ದರೆ ದ್ವಿದಳ ಸಸ್ಯವೆಂದು ವರ್ಗೀಕರಣ ಮಾಡಲಾಗಿದೆ. ತಂತು ಬೇರು (ಫೈಬ್ರಸ್ ರೂಟ್ಸ್), ಕಾಂಡದಲ್ಲಿ ಚದುರಿದ ನಾಳಕೂಚ, ಮೇಲ್ಬದಿ ಕೆಳಬದಿಯೆಂಬ ವ್ಯತ್ಯಾಸವಿಲ್ಲದ ಎಲೆ, ಎಲೆಗಳಲ್ಲಿ ಸಮಾನಾಂತರವಾಗಿ ಓಡುವ ನರಗಳು ಇವು ಏಕದಳಗಳ ಲಕ್ಷಣ. ಗಟ್ಟಿಯಾದ ತಾಯಿ ಬೇರು (ಟ್ಯಾಪ್ ರೂಟ್), ಉಂಗುರಾಕಾರದಲ್ಲಿ ಕ್ರಮಬದ್ಧ ವ್ಯವಸ್ಥೆಯಲ್ಲಿರುವ ನಾಳಕೂಚಗಳು, ಘಾಡ ಹಸಿರು ಹೆಚ್ಚು ಪತ್ರಹರಿತ್ತು ಕಡಿಮೆ ಪತ್ರರಂಧ್ರಗಳನ್ನು ಹೊಂದಿರುವ ಮೇಲ್ಬದಿ ಮತ್ತು ತಿಳಿ ಹಸಿರು ಹೆಚ್ಚು ಪತ್ರರಂಧ್ರ ಹೊಂದಿರುವ ಕೆಳಬದಿ ಎಲೆ, ಎಲೆಗಳಲ್ಲಿ ಕವಲೊಡೆಯುವ ನರಗಳು ಇವು ದ್ವಿದಳಗಳ ಲಕ್ಷಣ. ಜೊತೆಗೆ ದ್ವಿದಳಗಳಂತೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ, ಹೊಸ ಅಂಗಾಂಶ ಮೂಡುತ್ತಾ, ಹಳೆಯ ಅಂಗಾಂಶಗಳು ಬಲಿತು ಹಿಂದೆ ಸರಿಯುತ್ತಾ ಸಾಗುವ ಬೆಳವಣಿಗೆ ಏಕದಳಗಳಲ್ಲಿ ಇಲ್ಲ. ಹಾಗಾಗಿ ಏಕದಳಗಳಲ್ಲಿ ಕಾಣಸಿಗದ, ಆದರೆ ದ್ವಿದಳಗಳಲ್ಲಿ ಕಂಡೇಕಾಣುವ ಇನ್ನೊಂದು ರಚನೆ ಕಾಂಡಗಳಲ್ಲಿನ ಕೆಂಬಿಯಮ್, ಇದೇ ಕಾರಣಕ್ಕೆ ದ್ವಿದಳಗಳು ದೈಹಿಕವಾಗಿ ಹೆಚ್ಚು ಬಲಿಷ್ಟವಾಗಿ ಬೆಳೆಯಬಲ್ಲವು.

ಸಸ್ಯ ವಿಕಸನದಲ್ಲಿ ಹೂ, ಹಣ್ಣು, ಬೀಜಗಳ ಪಾತ್ರ

ಈ ಮಾಲಿಕೆಯ ಮೊದಲ ಸಂಚಿಕೆಯಲ್ಲಿ ಆಂಜಿಯೋಸ್ಪರ್ಮ್ ಗಳು ಹೇಗೆ ಭೂಲೋಕದ ಪ್ರಬಲ ಜೀವಸಂಕುಲವಾಗಿ ವಿಕಸನವಾದವು ಎನ್ನುವುದರ ಬಗ್ಗೆ ಚರ್ಚಿಸಲಾಗಿತ್ತು. ಬೇರು ಕಾಂಡ ನಾಳೀಯ ವ್ಯವಸ್ಥೆಯ ಜೊತೆಗೆ ‘ಹೂ ಬಿಡಬಲ್ಲ’ ಅನುಕೂಲತೆಯಿಂದಾಗಿ ಉಳಿದ ಸಸ್ಯ ವರ್ಗಕ್ಕಿಂತ ಅವು ಹೆಚ್ಚು ಬಲಶಾಲಿಯಾದವು. ಹೂಗಳ ಕಣ್ಣು ಕೋರೈಸುವ ಸೌಂದರ್ಯ, ಬೆರಗುಗೊಳಿಸುವ ಬಣ್ಣ ಆಕಾರ ಗಾತ್ರ ಪರಿಮಳ ಮಕರಂದ ಎಲ್ಲವೂ ಪರಾಗಸ್ಪರ್ಷದ  ಲಾಭಕ್ಕಾಗಿ!. ಜೇನುನೊಣವನ್ನೇ ಆಕರ್ಷಿಸಲು ವಿಕಸನವಾದ ‘ಬೀ ಆರ್ಕಿಡ್’ ಬಗ್ಗೆ ಕೇಳಿರುತ್ತೀರಾ – ಹೀಗೆ ನಿರ್ದಿಷ್ಟ ಪರಾಗಸ್ಪರ್ಷಕಗಳನ್ನು ಆಕರ್ಷಿಸಲು ಹೂಗಳು ಮಾರ್ಪಾಡು ಹೊಂದಿದವು. ಮಕರಂದ ಹೀರುತ್ತಾ ಆ ಮೂಲಕ ಪರಾಗಸ್ಪರ್ಷಕ್ಕೆ ಸಹಕರಿಸುವ ಉದ್ದ ಮೂತಿಯ ಹಮ್ಮಿಂಗ್ ಬರ್ಡ್ ಗಳನ್ನು ನೋಡಿರುತ್ತೀರಾ - ಹೀಗೆ ಕೆಲ ಹೂಗಳನ್ನು ಪರಾಗಸ್ಪರ್ಷ ಮಾಡಲೆಂದೇ ಕೀಟ ಪಕ್ಷಿಗಳೂ ವಿಕಸನವಾದವು. ತಮ್ಮ ಸಂತಾನೋತ್ಪತ್ತಿಯ ಲಾಭಕ್ಕಾಗಿ ಸಸ್ಯಗಳು ಇತರೇ ಜೀವ ಸಂಕುಲವನ್ನು ಭಾಗಿ ಮಾಡಿಕೊಂಡವು. ಈ ಪರಾಗಸ್ಪರ್ಷವೇನು ಒಂದೇ ರೀತಿಯದ್ದೇ; ನೀರು, ಗಾಳಿ, ಕೀಟ, ಪಕ್ಷಿ, ಪ್ರಾಣಿ, ಮನುಷ್ಯ ಹಲವಾರು ದಾರಿಯಿದೆ. ವಿಧವಿಧದ ದಾರಿ ಅವುಗಳನ್ನು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಟ್ಟಿತು. ಕೆಲ ಹೂಗಳ ರಚನೆ ಪರಕೀಯ ಪರಾಗಸ್ಪರ್ಷವನ್ನು ಉತ್ತೇಜಿಸಿತು; ವಂಶವಾಹಿಗಳ ಮರುಸಂಯೋಜನೆಯಾಯಿತು; ಆನುವಂಶಿಕ ವೈವಿಧ್ಯತೆಯ ಉಂಟಾಯಿತು. ಹವಾಮಾಣ ಬದಲಾವಣೆ ಪರಿಸರದ ಒತ್ತಡಗಳಿಗೆ ಪ್ರತಿಕ್ರಿಯೆ ನೀಡುವಲ್ಲಿ ಸಸ್ಯ ಸಫಲವಾಯಿತು. ಹೀಗೆ ಹೂ ಬಿಡುವ ವ್ಯವಸ್ಥೆ ಆಂಜಿಯೋಸ್ಪರ್ಮ್ ಗಳ ಸಂತಾನೋತ್ಪತ್ತಿ ಕ್ರಿಯೆಯನ್ನು ಯಶಸ್ವಿಯಾಗಿಸಿತು.

ಹಣ್ಣೆಂಬ ರಕ್ಷಣಾ ಕವಚ ಬೀಜಗಳನ್ನು ವಾತಾವರಣದ ಕೋಪ-ತಾಪಗಳಿಂದ ರಕ್ಷಿಸಿತು; ಬೀಜಗಳು ಬದುಕುಳಿಯುವ ಸಾಧ್ಯತೆ ಹೆಚ್ಚಿತು. ಬಗೆ ಬಗೆಯ ಬಣ್ಣ, ಆಕಾರ, ವಾಸನೆ, ರುಚಿಯ ಹಣ್ಣುಗಳಿಂದ ಪ್ರಾಣಿಗಳನ್ನು ಆಕರ್ಷಿಸುವ ಮೂಲಕ ಸಸ್ಯ ಪ್ರಸರಣಕ್ಕೆ ಕಾರಣವಾಯಿತು. ಕೆಲ ಸಸ್ಯಗಳು ಹಣ್ಣಲ್ಲಿ ವಿಷವಿರಿಸಿ ಸಸ್ಯಾಹಾರಿ ಭಕ್ಷಕರಿಂದ ಬಚಾವಾಗುವ ತಂತ್ರವನ್ನು ಪಾಲಿಸಿದವು. ಒಟ್ಟಿನಲ್ಲಿ ಹಣ್ಣುಗಳ ಛದ್ಮವೇಷ ಬೀಜದ ಪ್ರಸರಣಕ್ಕೆ, ಅಥವಾ ಕೆಲವೊಮ್ಮೆ ಪರಭಕ್ಷಕರಿಂದ ತನ್ನ ಸಂತಾನವನ್ನು ರಕ್ಷಿಸಿಕೊಳ್ಳಲು ಅನುವಾಯಿತು.

ಈ ಎಲ್ಲಾ ತಂತ್ರಗಾರಿಕೆಯಲ್ಲಿ ಬೀಜಗಳೇನು ಹಿಂದುಳಿದಿಲ್ಲ. ಧೂಳಿನ ಕಣದಷ್ಟು ಹಗುರವಾದ ಗಾಳಿಯಲ್ಲಿ ತೇಲಬಲ್ಲ ಜಗತ್ತಿನಲ್ಲೇ ಅತ್ಯಂತ ಚಿಕ್ಕ ಆರ್ಕಿಡ್ ಬೀಜಗಳಂತೆ; 18 ಕಿಲೋ ತೂಗುವ ಸಮುದ್ರದ ಅಲೆಯೊಡನೆ ದೂರ ತೀರಕ್ಕೆ ಸಾಗಬಲ್ಲ ಜಗತ್ತಿನಲ್ಲೇ ಅತ್ಯಂತ ದೊಡ್ಡ ಕೊಕೊ ಡಿ’ಮರ್’ ತೆಂಗಿನ ಬೀಜದಂತೆ; ಒಮ್ಮೆ ತಾಯಿ ಸಸ್ಯದಿಂದ ಬೇರ್ಪಟ್ಟರೆ ನೂರು ಕಿಲೋ ಮೀಟರ್ ವರೆಗೆ ಸಾಗಬಲ್ಲ ದಂಡೇಲಿಯನ್ ಎಂಬ ಕಳೆ ಸಸ್ಯದ ಬೀಜದಂತೆ;  ಸಾವಿರ-ಎರಡು ಸಾವಿರ ವರ್ಷವಾದರೂ ಜೀವ ಹಿಡಿದಿಟ್ಟುಕೊಂಡ ಇಂದಿಗೂ ಮೊಳಕೆಯೊಡೆಯುತ್ತಿರುವ ಖರ್ಜೂರ-ಕಮಲದ ಬೀಜಗಳಂತೆ; ಪ್ರತಿವಿಷವೂ ಲಭ್ಯವಿಲ್ಲದ ರಿಸಿನ್ ಎಂಬ ರಾಸಾಯನಿಕ ಹೊಂದಿರುವ ಜಗತ್ತಿನ ಅತ್ಯಂತ ವಿಷಕಾರಿ ಔಡಲ ಬೀಜದಂತೆ; ಹೀಗೆ ಪಟ್ಟಿ ಮಾಡಿದರೆ ಸಸ್ಯ ವಿಕಸನ, ವಂಶಾಭಿವೃದ್ಧಿಯಲ್ಲಿ ಬೀಜಗಳದು ಬಹುದೊಡ್ಡ ಕೊಡುಗೆ.

ಒಟ್ಟಾರೆ ಈ ಜಗತ್ತಿನಲ್ಲಿ ತನ್ನ ಉಳಿಯುವಿಕೆಗಾಗಿ ಸಸ್ಯಲೋಕ ಆರಿಸಿಕೊಂಡ ಹಾದಿ ನೂರಾರು. ಈ ಎಲ್ಲಾ ವ್ಯವಸ್ಥೆ ಪರಿಸರದ ಒತ್ತಡ ಬದಲಾವಣೆಗೆ ತಕ್ಕಂತೆ ಇಂದಿಗೂ ವಿಕಸನವಾಗುತ್ತಲೇ ಇದೆ.   

ಮುಂದಿನ ಸಂಚಿಕೆಗೂ ಮುನ್ನ- ಅಂಗಾಂಗ ರಚನೆಯ ಹಿಂದಿನ ಜಾದೂ

ಈ ವರೆಗಿನ ಮೂರು ಸಂಚಿಕೆಯಲ್ಲಿ ಸಸ್ಯಗಳ ಉಗಮ, ಅಂಗರಚನೆ, ಕೃಷಿಯಲ್ಲಿ ಅವುಗಳ ಮಹತ್ವದ ಬಗ್ಗೆ ಬೆಳಕು ಹರಿಸಲಾಗಿತ್ತು. ಮುಂದಿನ ಸಂಚಿಕೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ವರ್ತಮಾನದಲ್ಲಿ ಪರಿಸರದ ಒತ್ತಡಗಳಿಗೆ (ಬರ, ಪ್ರವಾಹ, ಶುಷ್ಕತೆ ಇತ್ಯಾದಿ) ಸಸ್ಯಗಳು ತಮ್ಮ ಅಂಗರಚನೆಯಲ್ಲಿ ಮಾಡಿಕೊಂಡ ಮಾರ್ಪಾಡುಗಳ ಬಗ್ಗೆ, ಮುಂದಕ್ಕೆ ಈ ರಚನೆಗಳು ನಡೆಸುವ ಕಾರ್ಯವಿಧಾನ, ಅರ್ಥಾತ್ ಸಸ್ಯಶರೀರಶಾಸ್ತ್ರದ ಬಗ್ಗೆ ವಿಸ್ತ್ರತವಾಗಿ ತಿಳಿಯೋಣ. ಅದಕ್ಕೂ ಮುನ್ನ ವಿಶೇಷ ವಿಷಯವೊಂದರ ಬಗ್ಗೆ ಹೇಳಲೇಬೇಕು.

ಸಸ್ಯಗಳ ಅಥವಾ ಯಾವುದೇ ಜೀವಿಯ ಅಂಗ ರೂಪವಾಗಲು ಕಾರಣ ಅವುಗಳ ಹಣೆಬರಹ. ಹಣೆಬರಹವೆಂಧರೆ ಅವುಗಳ ವಂಶವಾಹಿಯ ಬರವಣಿಗೆ - ಎಲ್ಲರಿಗೂ ಪರಿಚಿತವಾದ ‘ಜೀನ್ಸ್’. ಇದೊಂದು ವಾಕ್ಯದಂತೆ, ಈ ವಾಕ್ಯದಲ್ಲಿ ಪ್ರತಿ ಅಂಗವೂ ಹೀಗೇ ರೂಪುಗೊಳ್ಳಬೇಕೆಂದು ಉಲ್ಲೇಖಿತವಾಗಿರುತ್ತದೆ. ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ MADS Box ಎಂಬ ಜೀನ್ಸ್ ಹೂವು ಪತ್ರದಳ, ಪುಷ್ಪದಳ, ಕೇಸರ, ಶಲಾಕೆಯ ಬೆಳವಣಿಗೆಯನ್ನು ನಿರ್ದೇಶಿಸುತ್ತದೆ, ಈ ಜೀನ್ ಇಲ್ಲವಾಗಿದ್ದಲ್ಲಿ ಇಡೀ ಹೂವು ಭಾಗಗಳಿಲ್ಲದೇ ಮುದ್ದೆಯಾಗಿ ಇರುತ್ತಿತ್ತೇನೋ. ಇನ್ನು ಸಸ್ಯಗಳಲ್ಲಿ ಹೂವನ್ನು ರೂಪಿಸಬೇಕೆಂದು ನಿರ್ದೇಶಿಸುವುದೂ ಇದೇ ವಂಶವಾಹಿಗಳು. ವಂಶವಾಹಿಯ ವಾಕ್ಯಗಳು ಪ್ರೋಟಿನ್, ಹಾರ್ಮೋನ್ ಗಳಾಗಿ ತರ್ಜುಮೆ ಹೊಂದುವ ವ್ಯವಸ್ಥೆಯೊಂದಿದೆ (ಎಲ್ಲಾ ಜೀವಿಗಳಲ್ಲೂ). ಟ್ಯೋಮ್ಯಾಟೋವೇಕೆ ಮಾವಿನ ಮರದಷ್ಟು ಎತ್ತರ ಬೆಳೆಯಲು ಸಾಧ್ಯವಿಲ್ಲ, ಎಲೆಯ ಆಕಾರ ಹೀಗೇಕಿದೆ, ಅದೇಕೆ ಹೀಗೇ ಬೆಳವಣಿಗೆ ಹೊಂದಬೇಕು, ಎಂಬ ಪ್ರಶ್ನೆಗೆ ಸದ್ಯಕ್ಕೆ ವಂಶವಾಹಿ ಎಂಬುದೇ ಸಮಾಧಾನಕರ ಉತ್ತರ. ಮುಂದೆಂದಾದರೂ ಈ ಅದ್ಭುತಗಳ ಬಗ್ಗೆ ಚರ್ಚಿಸೋಣ.

 

ಹೆಚ್ಚಿನ ವಿಷಯಗಳ ಆಕರ: Crop Plant Anatomy by R. Maiti, P. Satya, D. Rajkumar and A. Ramaswamy 2012

 

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ