ಸಸ್ಯಗಳ ಬೇರು ಕಾಂಡ ಎಲೆ ಹೀಗೇಕಿವೆ- ಸಸ್ಯ ಅಂಗರಚನಾಶಾಸ್ತ್ರ ಮತ್ತು ಶರೀರ ಶಾಸ್ತ್ರ ಭಾಗ 2

 

ಹಿಂದಿನ ಸಂಚಿಕೆಯಲ್ಲಿ ಸಸ್ಯ ಕುಲದ ಉಗಮ, ವಿಕಸನ, ಸಸ್ಯ ಅಂಗರಚನಾಶಾಸ್ತ್ರ ಮತ್ತು ಸಸ್ಯ ಶರೀರ ಕ್ರಿಯಾ ಶಾಸ್ತ್ರದ ಮಹತ್ವ, ಸಸ್ಯ ಜೀವಕೋಶ, ಅಂಗಾಂಶ ವ್ಯವಸ್ಥೆ ಬಗ್ಗೆ ತಿಳಿಯಲಾಗಿತ್ತು. ಈ ಸಂಚಿಕೆಯಲ್ಲಿ ಅಂಗರಚನಾಶಾಸ್ತ್ರದ ಮುಂದುವರೆದ ಭಾಗವಾಗಿ ಸಸ್ಯದ ಅಂಗಾಂಗಗಳಾದ ಬೇರು, ಕಾಂಡ, ಎಲೆಯ ಬಗ್ಗೆ ವಿವರವಾಗಿ ನೋಡೋಣ. ಏಕದಳ, ದ್ವಿದಳಗಳು ಅಲ್ಲಲ್ಲಿ ಇಣುಕುತ್ತಿರುತ್ತವೆ, ಎಲ್ಲಾ ಮಾಹಿತಿಯನ್ನು ಒಟ್ಟಾಗಿಸಿ ಮುಂದಿನ ಕಂತುಗಳಲ್ಲಿ ಅವುಗಳ ನಡುವಿನ ವ್ಯತ್ಯಾಸವನ್ನು ಪಟ್ಟಿ ಮಾಡೋಣ. 

ಸಸ್ಯದ ಅಂಗಗಳು

ಸಸ್ಯದ ಬೆಳವಣಿಗೆ, ಅಭಿವೃದ್ಧಿ ಮತ್ತು ಉಳಿವಿಗಾಗಿ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿ ಕೊಡುವ ಅಗತ್ಯ ರಚನೆಗಳೇ ಅಂಗಗಳು. ಸಸ್ಯಗಳಲ್ಲಿ ಪ್ರಮುಖವಾದ ಅಂಗಗಳೆಂದರೆ ಬೇರು, ಕಾಂಡ, ಎಲೆ, ಹೂವು, ಹಣ್ಣು ಮತ್ತು ಬೀಜ. ಪ್ರತಿ ಅಂಗದ ರಚನೆ, ಮಹತ್ವದ ಬಗ್ಗೆ ವಿವರ ಕೆಳಗಿನಂತಿದೆ. ಸೂಚನೆ: ದ್ವಿದಳವೆಂದಾಗ ಯಾವುದಾದರೂ ಹಣ್ಣಿನ ಮರವನ್ನೂ, ಏಕದಳವೆಂದಾಗ ಯಾವುದಾದರೂ ಹುಲ್ಲನ್ನು ಕಲ್ಪಿಸಿಕೊಂಡರೆ ವಿಷಯ ಅರ್ಥೈಕೆ ಸುಲಭವಾಗಬಹುದು.

ಬೇರು

ಮಣ್ಣಿನಲ್ಲಿ ಗುರುತ್ವದೆಡೆಗೆ ಕೆಳಮುಖವಾಗಿ ಬೆಳೆಯುವ ಸಸ್ಯದ ಅಂಗವನ್ನು ಬೇರು ಎನ್ನಬಹುದು. ಬೀಜವೊಂದು ಮೊಳಕೆಯೊಡೆದಾಗ ಮೂಡುವ ಮೊದಲ ಅಂಗವಿದು. ಭ್ರೂಣದಿಂದ ಹುಟ್ಟಿಕೊಳ್ಳುವ ಈ ಅಂಗ ಸಸ್ಯದ ಜೀವನದುದ್ದಕ್ಕೂ ಇರುತ್ತದೆ. ಇವುಗಳನ್ನು ಪ್ರಾಥಮಿಕ ಬೇರುಗಳು/ಪ್ರೈಮರಿ ರೂಟ್ಸ್ ಎನ್ನಲಾಗುತ್ತದೆ. ಸಸ್ಯವನ್ನು ಗಟ್ಟಿಯಾಗಿ ಭೂಮಿಗೆ ಬಿಗಿದಿಡುವುದು, ನೀರು ಮತ್ತು ಪೋಷಕಾಂಶ ಹೀರಿಕೊಳ್ಳುವುದು ಇವುಗಳ ಕೆಲಸ. ಪ್ರಾಥಮಿಕ ಬೇರುಗಳು ಎರಡು ರೀತಿಯವು; ದ್ವಿದಳಗಳಲ್ಲಿ ಕಂಡುಬರುವ ತಾಯಿ ಬೇರು/ಟ್ಯಾಪ್ ರೂಟ್ ಮತ್ತು ಏಕದಳಗಳಲ್ಲಿ ಕಂಡುಬರುವ ತಂತು ಬೇರು/ಫೈಬ್ರಸ್ ರೂಟ್ಸ್.

ದ್ವಿದಳ ಸಸ್ಯಗಳ ಬೇರನ್ನು ತೆಳುವಾದ ಹೋಳು ಮಾಡಿ ಸೂಕ್ಷ್ಮದರ್ಶಕದಡಿ ನೋಡಿದರೆ ಉಂಗುರಾಕಾರದಲ್ಲಿ ಜೋಡಿಸಿರುವ ಜೀವಕೋಶಗಳ ಪದರಗಳನ್ನು ಕಾಣಬಹುದು. ಮೊದಲನೇ ಪದರ ಸೂಕ್ಷ್ಮ ಕೂದಲಿನಂತೆ ರೂಪುಗೊಂಡ ಬೇರಿನ ಹೊರಮೈ. ಮುಂದಿನದು ಹೊರಮೈ ಚರ್ಮದ ಕೆಳಗೆ ಸಡಿಲವಾಗಿ ಜೋಡಿಸಲಾದ ಪ್ಯಾರೆಂಕೈಮಾ ಕೋಶ/ಕಾರ್ಟೆಕ್ಸ್ ನದು. ಮುಂದೆ ಕಾರ್ಟೆಕ್ಸ್ ನ ಒಳಗೊಂದು ಗಟ್ಟಿ ಪದರವಿದೆ – ಇದು ಕ್ಯಾಸ್ಪೇರಿಯನ್ ಪಟ್ಟಿ. ಮುಂದಿನ ಪದರವೇ ಕ್ಸೈಲಮ್ ಫ್ಲೋಯಮ್ ಹೊಂದಿರುವ ನಾಳಕೂಚ/ವ್ಯಾಸ್ಕ್ಯುಲಾರ್ ಬಂಡಲ್ ಪದರ. ದ್ವಿದಳ ಸಸ್ಯಗಳಲ್ಲಿ ಕ್ಸೈಲಮ್ ನಾಲ್ಕು ಕೈ ಉಳ್ಳ ‘+’ ಆಕಾರದಲ್ಲಿ ಬೇರಿನ ಮಧ್ಯದಲ್ಲಿ ನೆಲೆಸಿರುತ್ತದೆ. ಎರಡು ಕ್ಸೈಲಮ್ ಕೈಗಳ ಮಧ್ಯೆ ಫ್ಲೋಯಮ್ ಇರುತ್ತದೆ. ಎಳೆಯ ಬೇರುಗಳು ಬೆಳವಣಿಗೆ ಹೊಂದುತ್ತಾ ವಯಸ್ಸಿಗನುಗುಣವಾಗಿ ಹಳೆಯ ಪದರಗಳೆಲ್ಲಾ ಒಡೆದು ಹೊಸ ಪದರಗಳು ರೂಪುಗೊಳ್ಳುತ್ತಿರುತ್ತವೆ. ತಾಯಿ ಬೇರು ಕವಲೊಡೆಯುತ್ತಾ ಸಾಗುತ್ತದೆ. ಈ ಕ್ರಿಯೆ ನಿರಂತರವಾದದ್ದು. ಹಾಗಾಗಿ ಮೊದ ಮೊದಲು ಗಿಡದ ಬುಡದಲ್ಲೇ ಇರುವ ಬೇರುಗಳು ವಯಸ್ಸಾದಂತೆ ವಿಸ್ತಾರವಾಗುತ್ತಾ ಗಿಡದಿಂದ ದೂರ ಚಲಿಸುತ್ತವೆ.

ಬೇರಿನ ಹೊರಮೈಯಲ್ಲಿರುವ ಕೂದಲಿನಂತ ರಚನೆ ಮೇಲ್ಮೈ ವಿಸ್ತೀರ್ಣವನ್ನು ಹಿಗ್ಗಿಸಿ ಹೆಚ್ಚಿನ ನೀರು-ಪೋಷಕಾಂಶ ಹೀರಲು ಮಾರ್ಪಾಡಾಗಿದೆ. ನೀರು ಹೀರಿಕೆಯಾಗುವುದು ಇದೇ ರೂಟ್ ಹೇರ್ಸ್ ನಲ್ಲಿ. ಕಾರ್ಟೆಕ್ಸ್ ಪದರದಲ್ಲಿ ನೀರು ಮತ್ತು ಖನಿಜಗಳ ಚಲನೆ ಜೊತೆಗೆ ಪಿಷ್ಟ ಮತ್ತು ಇತರ ಪದಾರ್ಥಗಳ ಶೇಖರಣೆಯಾಗುತ್ತದೆ. ಕ್ಯಾಸ್ಪೇರಿಯನ್ ಪಟ್ಟಿ ನೀರು ಮತ್ತು ದ್ರಾವಣಗಳ ಚಲನೆಯ ತಡೆಗೋಡೆಯಾಗಿದೆ. ಬೇರಿನ ಒಳಗೆ ಸಾಗುವ ದ್ರಾವಣದ ಪ್ರಮಾಣವನ್ನು ನಿಯಂತ್ರಿಸುವುದು, ದ್ರಾವಣವನ್ನು ಒಳಗೆ ಸಾಗಿಸುವುದು, ಒಮ್ಮೆ ಸಾಗಿದ ದ್ರಾವಣ ಹೊರಬಾರದಂತೆ ತಡೆಯುವ ಕೆಲಸವನ್ನು ಕ್ಯಾಸ್ಪೇರಿಯನ್ ಪಟ್ಟಿ ನಿರ್ವಹಿಸುತ್ತದೆ. ನಾಳಕೂಚದ ವ್ಯವಸ್ಥೆ ನೀರು ಮತ್ತು ಕರಗಿದ ಪೋಷಕಾಂಶಗಳನ್ನು ಬೇರುಗಳಿಂದ ಸಸ್ಯದ ಇತರ ಭಾಗಗಳಿಗೆ ಸಾಗಿಸಲು ಮಾರ್ಗಗಳನ್ನು ಒದಗಿಸುತ್ತದೆ. ಒಟ್ಟಾರೆಯಾಗಿ ರೂಟ್ ಹೇರ್ಸ್ ನಲ್ಲಿ ಹೀರಲ್ಪಟ್ಟ ನೀರು/ದ್ರಾವಣ ಪಕ್ಕದ ಕಾರ್ಟೆಕ್ಸ್ ಗೆ ಸಾಗಿ, ಪಕ್ಕದ ಕ್ಯಾಸ್ಪೇರಿಯನ್ ಪಟ್ಟಿ ದಾಟಿ, ಪಕ್ಕದ ನಾಳಕೂಚ ಸೇರಿ ನಂತರ ಮೇಲ್ಮುಖವಾಗಿ ಚಲಿಸುತ್ತದೆ (ನೀರು ಪೋಷಕಾಂಶ ಸರಬರಾಜು ಕ್ರಿಯೆಯ ಬಗ್ಗೆ ಇನ್ನೂ ವಿವರವಾಗಿ ಮುಂದಿನ ಕಂತಗಳಲ್ಲಿ ನೋಡೋಣ).

ಏಕದಳ ಸಸ್ಯಗಳ ಬೇರಿನಲ್ಲೂ ರೂಟ್ ಹೇರ್, ಕಾರ್ಟೆಕ್ಸ್, ಕ್ಯಾಸ್ಪೇರಿಯನ್ ಪಟ್ಟಿ, ನಾಳ ಕೂಚದ ಪದರಗಳು ಇರುತ್ತವೆ. ಆದರೆ ನಾಳಕೂಚಗಳು ಮಾತ್ರ ‘+’ ಆಕಾರದಲ್ಲಿ ಬೇರಿನ ಮಧ್ಯದಲ್ಲಿರದೆ ಚಕ್ರದ ಕಡ್ಡಿಗಳಂತೆ ವೃತ್ತವಾಗಿ ಹರಡಿಕೊಂಡಿರುತ್ತವೆ. ಮತ್ತು ಹಳೆಯ ಪದರಗಳು ಸೀಳುವ ಬೆಳವಣಿಗೆಯನ್ನು ಏಕದಳಗಳು ತೋರುವುದಿಲ್ಲ. ಹಾಗಾಗಿ ಏಕದಳ ಸಸ್ಯಗಳಲ್ಲಿ ಬೇರುಗಳು ಬುಡದಲ್ಲೇ ಕೇಂದ್ರೀಕೃತವಾಗಿರುತ್ತವೆ.

ಇನ್ನು ಕೆಲ ಸಸ್ಯಗಳಲ್ಲಿ ಗೆಣ್ಣುಗಳಿಂದಲೂ ಬೇರು ಹುಟ್ಟಬಹುದು. ಇವುಗಳನ್ನು ಹುಸಿ ಬೇರುಗಳು/ ಅಡ್ವೆಂಟಿಶಿಯಸ್ ರೂಟ್ಸ್ ಎನ್ನಲಾಗುತ್ತದೆ. ಅನುಕೂಲಕ್ಕೆ ತಕ್ಕಂತೆ ಉದ್ಭವಿಸುವ ಈ ಬೇರುಗಳು ಶಾಶ್ವತ ಅಥವಾ ತಾತ್ಕಾಲಿಕವೂ ಆಗಿರಬಹುದು. ಇವುಗಳ ಕೆಲಸ ಸಸ್ಯದಿಂದ ಸಸ್ಯಕ್ಕೆ ಭಿನ್ನ. ಜೋಳದಲ್ಲಂತೂ ಇಂತಹ ಬೇರುಗಳನ್ನು ಗಮನಿಸದೇ ಇರಲು ಸಾಧ್ಯವೇ ಇಲ್ಲ. ನಿಂತ ನೀರಿನ ಜವಳು ನೆಲದಲ್ಲಿ ನೀರು ಮತ್ತು ಪೋಷಕಾಂಶಗಳ ನಿರ್ವಹಣೆಗೆ,, ಭಾರೀ ಗಾಳಿ ಮಳೆಯ ಸಮಯದಲ್ಲಿ ಬುಡ ಕಿತ್ತು ಬರದಂತೆ ಆಧಾರಕ್ಕಾಗಿ ಇವು ಸಹಕಾರಿ. ತೆಂಗಿನಮರದಲ್ಲಿ ಮಣ್ಣಿನಿಂದ ಮೇಲೆದ್ದು ಕಾಣುವ ಇಂತಹ ಬೇರುಗಳು ಉಸಿರಾಟಕ್ಕೆ ಸಹಕಾರಿ. ಕಾಳುಮೆಣಸಿನ ಬಳ್ಳಿಯಲ್ಲಿ ಇಂತಹ ಬೇರುಗಳು ಮರಗಳನ್ನು ಬಿಗಿದಪ್ಪಲು, ಮೇಲೆ ಹತ್ತಿಹೋಗಿ ಬೆಳಕನ್ನು ಎಟಕುವಲ್ಲಿ ಸಹಕರಿಸುತ್ತವೆ. ಸಿಹಿ ಗೆಣಸು, ಮರಗೆಣಸುಗಳಲ್ಲಿ ಮೂಡುವ ಆಹಾರ ಸಂಗ್ರಹಿಸಿಡುವ ಇಂತಹ ಬೇರುಗಳನ್ನೇ ನಾವು ತರಕಾರಿಯಾಗಿ ತಿನ್ನಲು ಬಳಸುತ್ತೇವೆ, ಮತ್ತು ಸಸ್ಯಾಭಿವೃದ್ಧಿಗೂ ಉಪಯೋಗಿಸುತ್ತೇವೆ. ಮುಂಚಿನ ಲೇಖನಗಳಲ್ಲಿ ಚರ್ಚಿಸಿದಂತೆ ಕಂಟಿಗ್ ಮತ್ತು ಗೂಟಿ ಕಸಿ ಪದ್ಧತಿಯಲ್ಲಿಯೂ ಮೂಡುವುದು ಇಂತಹುದೇ ಬೇರುಗಳು. ಬೇರು, ಕಾಂಡ, ಸಸ್ಯದ ಯಾವುದೇ ಭಾಗದಲ್ಲಿ ಹೆಚ್ಚಿನ ‘ಅಡ್ವಾಂಟೇಜ್’ಗಾಗಿ ಮೂಡುವ ‘ಅಡ್ವೆಂಟಿಶಿಯಸ್’ ರೂಟ್ಸ್ ಸಸ್ಯದ ದಿನನಿತ್ಯದ ಬೆಳವಣಿಗೆಯಲ್ಲದೇ ಕಳಪೆ ಮಣ್ಣು, ಪ್ರವಾಹ, ಬರಗಾಲ, ಒತ್ತಡ ಪರಿಸ್ಥಿತಿಯನ್ನು ಎದುರಿಸಲೂ ಸಹಾಯಕ.

ಟಿಪ್ಪಣಿ:

·         ಬೇರುಗಳಿಗೆ ವಾಣಿಜ್ಯಿಕವಾಗಿಯೂ ಸಾಕಷ್ಟು ಮಹತ್ವವಿದೆ. ಬೇರುಗಳಲ್ಲಿ ಆಹಾರ ಸಂಗ್ರಹಿಸುವ ಗಜ್ಜರಿ, ಮೂಲಂಗಿ, ಬೀಟ್ರೂಟ್, ಗೆಣಸು ಹೀಗೆ ಎಷ್ಟೋ ಸಸ್ಯಗಳನ್ನು ತರಕಾರಿಗಳೆಂದು ನಾವು ಉಪಯೋಗಿಸುತ್ತೇವೆ. ಅಶ್ವಗಂಧ, ಜ್ಯೇಷ್ಠಮಧು, ನಿತ್ಯಪುಷ್ಪ, ಸರ್ಪಗಂಧ ಮುಂತಾದ ಸಸ್ಯಗಳ ಬೇರುಗಳನ್ನು ಔಷಧೀಯ ಗುಣಗಳಿಗಾಗಿ ಬಳಸುತ್ತೇವೆ; ಲಾವಂಚದಂತಹ ಸಸ್ಯಗಳಲ್ಲಿ ಬೇರನ್ನು ಸುಗಂಧದ್ರವ್ಯ ತಯಾರಿಕೆಗೆ ಬಳಸಲಾಗುತ್ತದೆ.  

·         ಮೇಲೆ ಹೇಳಿದಂತೆ ಅಂಗಾಂಶ ರಚನೆಯ ವ್ಯತ್ಯಾಸದಿಂದಾಗಿ ದ್ವಿದಳ ಸಸ್ಯಗಳ ಬೇರು ಏಕದಳಗಳಿಗಿಂತ ಹೆಚ್ಚು ವಿಸ್ತಾರವಾಗಿಯೂ, ಆಳಕ್ಕೂ ಇಳಿಯಬಲ್ಲವು. ಭೂಮಿಯೊಳಗಿನ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಈ ಗುಣ ಸಹಾಯಕ. ಏಕದಳಗಳ ಬೇರು ಮಣ್ಣಿನ ಮೇಲ್ಮೈಯಲ್ಲಿ ಸೊಂಪಾಗಿರುವುದರಿಂದ ಮೇಲಿನ ಪದರಗಳಿಂದ ತೇವಾಂಶ ಸಂಪನ್ಮೂಲಗಳನ್ನು ತೆಗೆದುಕೊಳ್ಳಬಲ್ಲವು. ಎರಡಕ್ಕೂ ಅದರದೇ ಆದ ಪ್ರಯೋಜನವಿದೆ. ಇದೇ ಗುಣವನ್ನು ಆಧರಿಸಿ ಕೃಷಿಯಲ್ಲಿ ಅತ್ಯಂತ ಯಶಸ್ವಿಯಾಗಿ ಜಾರಿಯಲ್ಲಿರುವ ಕೃಷಿ ವಿಧಾನ ‘ಬಹುಮಹಡಿ ಪದ್ಧತಿ’/ ‘ಮಲ್ಟಿ ಸ್ಟೋರೀಡ್ ಕ್ರಾಪಿಂಗ್ ಸಿಸ್ಟಮ್’. ಬಹುಮಹಡಿ ಪದ್ಧತಿಯಲ್ಲಿ ಒಂದೇ ಜಾಗದಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತದೆ. ಅಡಿಕೆ ಮಧ್ಯ ಕಾಳುಮೆಣಸು, ಅರಿಶಿಣ, ಕಾಫಿಯಂತ ಹಲವು ಬೆಳೆಗಳನ್ನು ಸಂಯೋಜಿಸಿ ಬೆಳೆಯಲಾಗುತ್ತದೆ. ಹೀಗೆ ಬೆಳೆಗಳನ್ನು ಸಂಯೋಜನೆ ಮಾಡುವಾಗ ಬೇರಿನ ವ್ಯಾಪ್ತಿಯ ಬಗ್ಗೆ ತಿಳಿದಿರಿಲೇಬೇಕು. ಜಮೀನಿನಲ್ಲಿ ಅಂತರ್ ಬೆಳೆಯನ್ನು ಆಯ್ಕೆ ಮಾಡುವಾಗಲೂ ಈ ಜ್ಞಾನ ಅವಶ್ಯಕ.

·         ನೀರಾವರಿಗೆ ತೊಡಗಿದಾಗಲೂ ಬೇರಿನ ಬೆಳವಣಿಗೆ ಬಗ್ಗೆ ಅರಿವಿರುವುದು ಮುಖ್ಯ. ಸಾಮಾನ್ಯವಾಗಿ, ವಯಸ್ಸಾದ ಹಳೆಯ ಬೇರುಗಳು ನೀರು-ಪೋಷಕಾಂಶ ಹೀರಿಕೊಳ್ಳಲು ಅಸಮರ್ಥವಾಗಿರುತ್ತವೆ (ವಿಶೇಷವಾಗಿ ದ್ವಿದಳಗಳಲ್ಲಿ). ಇವುಗಳ ಕೆಲಸ ಪೋಷಕಾಂಶಗಳ ಸಂಗ್ರಹಣೆ, ಸಾಗಣೆ, ಮತ್ತು ಆಧಾರ ಮಾತ್ರ. ಹಾಗಾಗಿ ನಾವು ಕೊಡುವ ನೀರು ಮತ್ತು ಪೋಷಕಾಂಶಗಳು ಮುಟ್ಟಬೇಕಾದ್ದು ಸಕ್ರಿಯವಾದ ಎಳೆಯ ಬೇರುಗಳನ್ನು. ಇದೇ ಕಾರಣಕ್ಕೆ ತೋಟಗಾರಿಕಾ ತಜ್ಞರು ಗಿಡದಿಂದ ಒಂದಡಿ ದೂರದಲ್ಲಿ ‘ಬೇಸಿನ್’ ಅಥವಾ ‘ರಿಂಗ್’ ಮಾಡಿ ಪೋಷಕಾಂಶಗಳು ನೀಡುವಂತೆ ಸಲಹೆ ಕೊಡುತ್ತಾರೆ. ಹಾಗಾದರೆ ಒಂದು ಸಸ್ಯದ ಎಳೆಬೇರು ಎಲ್ಲಿವೆಯೆಂದು ಹೇಗೆ ಹೇಳುವುದು!?. ಇದಕ್ಕೊಂದು ಸರಳ ವಿಧಾನವಿದೆ. ಸಸ್ಯ/ಮರವೊಂದರ ಎಲೆಗಳ ಹರವು/ಕೆನೋಪಿ ನೋಡಿ ಇದನ್ನು ನಿರ್ಧರಿಸಬಹುದು. ಮರದ ಮೇಲೆ ಬಿದ್ದ ಮಳೆಯ ನೀರು ಕೆನೋಪಿಯ ತುದಿಗಳಲ್ಲಿ ತೊಟ್ಟಿಕ್ಕುತ್ತಾ ಇರುತ್ತದೆ. ನೀರು ತೊಟ್ಟಿಕ್ಕುವ ನೆಲದ ಅಂಚನ್ನು ‘ಡ್ರಿಪ್ಪಿಂಗ್ ಝೋನ್’ ಎಂದು ಕರೆಯಬಹುದು. ಸಸ್ಯವೊಂದು ಹೀಗೆ ತೊಟ್ಟಿಕ್ಕುವ ನೀರಿನ ಸದ್ಭಳಕೆಗಾಗಿ ನೈಸರ್ಗಿಕವಾಗಿಯೇ ಡ್ರಿಪ್ಪಿಂಗ್ ಝೋನ್ ನಲ್ಲಿ ತನ್ನ ಸಕ್ರಿಯ ಬೇರುಗಳನ್ನು ಕೇಂದ್ರೀಕೃತವಾಗಿರಿಸುತ್ತದೆ. ಇದೇ ವಲಯವನ್ನು ನಾವು ಗುರುತಿಸಿ ನೀರು-ಪೋಷಕಾಂಶಗಳ ಸಮರ್ಥ ನಿರ್ವಹಣೆ ಮಾಡಬಹುದು.

·         ಬೇರುಗಳೇಕೆ ಕೆಳಮುಖವಾಗೇ ಬೆಳೆಯುತ್ತವೆ? ಸಕ್ರಿಯ ಬೇರುಗಳ ತುದಿ/ರೂಟ್ ಟಿಪ್ ನಲ್ಲಿ ವಿಶೇಷ ಕೋಶಗಳಿರುತ್ತವೆ. ಈ ಕೋಶಗಳು ಗುರುತ್ವಾಕರ್ಷಣ ಬಲಕ್ಕೆ ಸಂವೇದಿಸುತ್ತವೆ. ಗುರುತ್ವಕ್ಕೆ ಅನುಗುಣವಾಗಿ ‘ಆಕ್ಸಿನ್’ ಎಂಬ ಪ್ರಚೋದಕಗಳ ಹಂಚಿಕೆಗೆ ಕಾರಣವಾಗುತ್ತವೆ. ಬೇರುಗಳು ಕೆಳಮುಖವಾಗಿ, ಕಾಂಡಗಳು ಮೇಲ್ಮುಖವಾಗಿ ಬೆಳೆಯಲು ನಿರ್ದೇಶಿಸುತ್ತವೆ.

·         ಬೇರುಗಳು ದ್ಯುತಿಸಂಶ್ಲೇಷಣೆಯಲ್ಲಿ ತೊಡಗುವುದಿಲ್ಲ, ಅವುಗಳಿಗೆ ಬೇಕಾದ ಆಹಾರ ಸಸ್ಯದ ಮೇಲ್ಭಾಗದಿಂದಲೇ ಪೂರೈಕೆ ಆಗುತ್ತದೆ.  ಆದರೆ ಬೇರುಗಳು ಉಸಿರಾಡುತ್ತವೆ. ನೀರು ನಿಂತ, ಸಂಕುಚಿತ, ಬಿಗಿ ಮಣ್ಣು ಆಮ್ಲಜನಕದ ಲಭ್ಯತೆಯನ್ನು ಮಿತಿಗೊಳಿಸಿ ಬೇರಿನ ಆರೋಗ್ಯವನ್ನು ಕೆಡಿಸುತ್ತದೆ. ಹಾಗಾಗಿ ಬೇರುಗಳು ಉಸಿರಾಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೀರು ಬಸಿಯುವ ಸಡಿಲವಾದ ಮಣ್ಣು ಮುಖ್ಯವಾಗಿದೆ.

·         ಪ್ರತಿ ಸಸ್ಯದ ಬೇರುಗಳ ಸುತ್ತಲಿರುವ ಸೂಕ್ಷ್ಮಜೀವಿಗಳ ಸಂಕುಲ ವೈವಿಧ್ಯಮಯ ಮತ್ತು ಆಸಕ್ತಿಕರ. ಬೇರುಗಳು ಒಸರಿಸುವ ರಾಸಾಯನಿಕಗಳಿಗೆ ಸೂಕ್ಷ್ಮಜೀವಿಗಳು ಆಕರ್ಷಿತವೂ ಆಗಬಲ್ಲವು, ದೂರಕ್ಕೂ ಓಡಬಲ್ಲವು. ಸಸ್ಯಗಳ ಬೇರು- ಸೂಕ್ಷ್ಮಜೀವಿಗಳ ಸಂವಹನ ಬೇರೆಯದೇ ವೈಜ್ಞಾನಿಕ ಲೋಕವನ್ನು ತೆರೆದಿಡುತ್ತದೆ. ಬೇರಿನ ಸುತ್ತಲಿರುವ ಮಣ್ಣನ್ನು ವೈಜ್ಞಾನಿಕವಾಗಿ ‘ರೈಜೋಸ್ಪಿಯರ್’ ಎಂದು ಕರೆಯಲಾಗುತ್ತದೆ.  ರೈಜೋಸ್ಪಿಯರ್ ನಲ್ಲಿರುವ ಬ್ಯಾಕ್ಟಿರಿಯಾ, ಶಿಲಿಂಧ್ರಗಳನ್ನು ಒಳಗೊಂಡ ಸೂಕ್ಷ್ಮಜೀವಿ ಸಂಕುಲ ಪೋಷಕಾಂಶ ಒದಗಿಸುವಲ್ಲಿ, ನೀರು ಹೀರುವಿಕೆಯಲ್ಲಿ ಪರೋಕ್ಷವಾಗಿ ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಮುಖ್ಯವಾಗಿವೆ.

ಕಾಂಡ

ವಾತಾವರಣಕ್ಕೆ ತೆರೆದುಕೊಂಡಿರುವ, ಎಲೆ ರೆಂಬೆ ಕೊಂಬೆ ಹೂವುಗಳಿಗೆ ಆಧಾರವಾದ ಸಸ್ಯದ ಅಂಗವನ್ನು ಕಾಂಡ ಎನ್ನಬಹುದು. ಭ್ರೂಣದಿಂದಲೇ ಹುಟ್ಟುವ ಕಾಂಡ ಮೊದಲು ವರ್ಧಕ ಅಂಗಾಂಶಗಳಿಂದ (ಮೆರಿಸ್ಟಮ್) ಕೂಡಿರುತ್ತದೆ. ವಯಸ್ಸಾದಂತೆ ಶಾಶ್ವತ ರೂಪ ಪಡೆಯುತ್ತದೆ. ಆಧಾರ, ಇತರೇ ಅಂಗಾಂಗಳಿಗೆ ನೆಲೆ, ನೀರು-ದ್ರಾವಣ-ಪೋಷಕಾಂಶಗಳ ಸಾಗಣೆ, ಸಂಗ್ರಹಣೆ, ಸ್ವಲ್ಪ ಮಟ್ಟಿಗಿನ ದ್ಯುತಿಸಂಶ್ಲೇಷಣೆ ಇವೆಲ್ಲವೂ ಕಾಂಡದ ಕೆಲಸ. ಕಾಂಡಕ್ಕೂ-ಬೇರಿಗೂ ರಚನೆಯಲ್ಲಿ ಸುಮಾರು ಹೋಲಿಕೆಯಿದೆ. ಬೇರಿನಂತೆಯೇ ಕಾಂಡದಲ್ಲೂ ಹೊರಚರ್ಮ, ಒಳಗೆ ನಾಳಕೂಚಗಳ ಪದರವಿದೆ. ಆದರೆ ಕಾಂಡದಲ್ಲಿ ನಾಳಕೂಚಗಳ ವ್ಯವಸ್ಥೆ ಸ್ವಲ್ಪ ಭಿನ್ನವಾಗಿರುತ್ತದೆ. ಬೇರಿನಲ್ಲಿಲ್ಲದ, ಕಾಂಡದಲ್ಲಿರುವ ವಿಶೇಷ ರಚನೆಯೆಂದರೆ ಗೆಣ್ಣುಗಳು. ಏಕದಳ ದ್ವಿದಳ ಎರಡರಲ್ಲೂ ಗೆಣ್ಣು/ನೋಡ್ಸ್ ಗಳಿರುತ್ತವೆ. ಗೆಣ್ಣುಗಳಿಂದಲೇ ಎಲೆ, ಟೊಂಗೆ, ಹೂವುಗಳು ಹುಟ್ಟುವುದು.

ದ್ವಿದಳ ಸಸ್ಯದ ಕಾಂಡವನ್ನು ತೆಳುವಾದ ಹೋಳು ಮಾಡಿ ಸೂಕ್ಷ್ಮದರ್ಶಕದಡಿ ನೋಡಿದರೆ ಬೇರಿನಲ್ಲಿರುವಂತೆಯೇ ಉಂಗುರದಂತೆ ಜೋಡಿಸಿರುವ ವಿವಿಧ ಜೀವಕೋಶಗಳ ಪದರಗಳನ್ನು ಕಾಣಬಹುದು. ಮೊದಲನೇ ಪದರ ಕಾಂಡದ ಗಟ್ಟಿಯಾದ ಹೊರಚರ್ಮ. ಮುಂದಿನದು ಕಾರ್ಟೆಕ್ಸ್. ಕಾಂಡದ ಕಾರ್ಟೆಕ್ಸ್ ಪ್ಯಾರಂಕೈಮಾ ಮತ್ತು ಕೊಲಂಕೈಮಾ ಜೀವಕೋಶಗಳ ಮಿಶ್ರಣ. ಮುಂದಿನ ಪದರ ನಾಳಕೂಚಗಳದ್ದು (ಕಾಂಡದಲ್ಲಿ ಕ್ಯಾಸ್ಪೇರಿಯನ್ ಪಟ್ಟಿ ಇರುವುದಿಲ್ಲ). ನಾಳಕೂಚಗಳು ಅತ್ಯಂತ ಶಿಸ್ತಾಗಿ ಉಂಗುರಾಕಾರದಲ್ಲಿಯೇ ಜೋಡಿಸಿಕೊಂಡಿರುತ್ತವೆ. ಉಂಗುರದ ಹೊರಮೈಯಲ್ಲಿ ಫ್ಲೋಯಮ್, ಒಳಮೈಯಲ್ಲಿ (ಅಂದರೆ ಒಟ್ಟಾರೆ ಕಾಂಡದ ಮಧ್ಯ ಭಾಗದಲ್ಲಿ) ಕ್ಸೈಲಮ್, ಎರಡರ ಮಧ್ಯ ಇನ್ನೂ ಕ್ಸೈಲಮ್-ಫ್ಲೋಯಮ್ ಎಂದು ನಿಗದಿಯಾಗದ ಮೆರಿಸ್ಟಮೆಟಿಕ್ ಅಂಗಾಂಶವಿರುತ್ತದೆ. ಈ ಮೆರಿಸ್ಟಮೆಟಿಕ್ ಅಂಗಾಂಶವೇ ಕೇಂಬಿಯಮ್. ಹೊರಗಿನಿಂದ ಒಳಗೆ ಫ್ಲೋಯಮ್, ಕೇಂಬಿಯಮ್ ಮತ್ತು ಕ್ಸೈಲಮ್ ಇವೆಲ್ಲವೂ ಒಂದೇ ಸಾಲಲ್ಲಿ ಇರುತ್ತವೆ.

ಕಾಂಡದ ಹೊರಚರ್ಮಕ್ಕೆ ‘ಕ್ಯುಟಿಕಲ್’ ನಿಂದ ನಿರ್ಮಿತವಾದ ಹೊರಪೊರೆಯಿದೆ. ವಾತಾವರಣದಿಂದ ತಕ್ಕ ಮಟ್ಟಿಗಿನ ರಕ್ಷಣೆ ಮತ್ತು ಭಾಷ್ಪವಿಸರ್ಜನೆಯ ನಿಯಂತ್ರಣ ಇವುಗಳ ಕೆಲಸ. ಕಾಂಡದಲ್ಲಿ ಕೆಲವು ಸಂಖ್ಯೆಯಲ್ಲಿ ಪತ್ರರಂಧ್ರಗಳೂ ಇರುತ್ತವೆ, ಇವು ವಾತಾವರಣದ ಗಾಳಿ ವಿನಿಮಯದಲ್ಲಿ ತೊಡಗುತ್ತವೆ. ಕೆಲ ಸಸ್ಯಗಳ ಕಾಂಡದಲ್ಲಿ ಸೂಕ್ಷ್ಮವಾದ ರೋಮಗಳನ್ನೂ ಗಮನಿಸಬಹುದು. ಕಾರ್ಟೆಕ್ಸ್ ನಲ್ಲಿರುವ ಪ್ಯಾರಂಕೈಮಾ ಆಹಾರ ಶೇಖರಣೆ, ಮತ್ತು ಕೊಲಂಕೈಮಾ ದ್ಯುತಿ ಸಂಶ್ಲೇಷಣೆಯಲ್ಲಿ ತೊಡಗುತ್ತವೆ. ಎಂದಿನಂತೆ ನಾಳಕೂಚಗಳ ಕೆಲಸ ದ್ರಾವಣಗಳ ಮೇಲ್ಮುಖ ಚಲನೆ. ಕೆಲ ಸಸ್ಯಗಳ ನಾಳಕೂಚದಲ್ಲಿ ಮೇಣ ಒಸರುವ ಲ್ಯಾಟೆಕ್ಸ್ ನಾಳವೂ ಸೇರಿರುತ್ತದೆ.

ಈ ಮೇಲಿನ ಜೀವಕೋಶಗಳ ಪದರಗಳೇನು ಶಾಶ್ವತವಲ್ಲ. ಎಳೆಯ ಕಾಂಡ ಬೆಳವಣಿಗೆ ಹೊಂದುತ್ತಾ ವಯಸ್ಸಿಗನುಗುಣವಾಗಿ ಹಳೆಯ ಪದರಗಳೆಲ್ಲಾ ಒಡೆದು ಹೊಸ ಪದರಗಳು ರೂಪುಗೊಳ್ಳುತ್ತಿರುತ್ತದೆ. ಈ ಕ್ರಿಯೆ ನಿರಂತರವಾದದ್ದು. ಇದರ ಪರಿಣಾಮವನ್ನು ಮರಗಳಲ್ಲಿ ಗಮನಿಸಬಹುದು. ಕಾಂಡ ಎಳಸಾಗಿದ್ದಾಗ ನಾಳಕೂಚಗಳ ಒಂದೇ ಉಂಗುರವಿರುತ್ತದೆ. ವಯಸ್ಸಾಗುತ್ತಿದ್ದಂತೆ ಒಳಮೈಯಲ್ಲಿರುವ ಕ್ಸೈಲಮ್ ಮತ್ತಷ್ಟು ಪ್ರಬುದ್ಧವಾಗಿ ಹಳೆಯ ಉಂಗುರವನ್ನು ಹೊರನೂಕುತ್ತಾ ಸಾಗುತ್ತದೆ. ಹೀಗೆ ಉಂಗುರಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಮರದ ಬೊಡ್ಡೆಗಳಲ್ಲಿ ಉಂಗುರಗಳ ಸಂಖ್ಯೆ ಆಧರಿಸಿ ಮರದ ವಯಸ್ಸನ್ನು  ಹೇಳುವ ಪದ್ಧತಿಯೂ ರೂಢಿಯಲ್ಲಿದೆ. ಜೊತೆಗೆ ಮರಗಳಲ್ಲಿ ಹೊರಮೈ ಪದರ ಬೆಳವಣಿಗೆಯಾಗುತ್ತಾ ಸೀಳಿ ತೊಗಟೆಯಾಗುವುದೂ ಸಾಮಾನ್ಯ.

ಏಕದಳ ಸಸ್ಯಗಳ ಕಾಂಡದಲ್ಲೂ ಹೊರಚರ್ಮ, ಕ್ಯುಟಿಕಲ್, ಹೊರಚರ್ಮದಲ್ಲಿ ಪತ್ರರಂಧ್ರ, ಕಾರ್ಟೆಕ್ಸ್, ಕಾರ್ಟೆಕ್ಸ್ ನಲ್ಲಿ ಪ್ಯಾರಂಕೈಮಾಮ ಕೊಲಂಕೈಮಾ, ನಂತರದಲ್ಲಿ ನಾಳ ಕೂಚದ ಪದರಗಳು ಇರುತ್ತವೆ. ಏಕದಳಗಳಲ್ಲಿ ಕೇಂಬಿಯಮ್ ಪದರವಿರುವುದಿಲ್ಲ. ಮತ್ತು ಕಾರ್ಟೆಕ್ಸ್ ಮತ್ತು ನಾಳಕೂಚಗಳು ಪದರಗಳಲ್ಲಿ ಪ್ರತ್ಯೇಕತೆ ಕಾಣುವುದಿಲ್ಲ; ಇವೆರಡೂ ಪದರಗಳು ಕಲೆತುಕೊಂಡಿರುತ್ತವೆ. ನಾಳಕೂಚಗಳೂ ಒಂದು ವಿನ್ಯಾಸದಲ್ಲಿರದೇ ಅಡ್ಡಾದಿಡ್ಡಿಯಾಗಿ ಚದುರಿಕೊಂಡಿರುತ್ತವೆ. ಮತ್ತು ಹಳೆಯ ಪದರಗಳು ಒಡೆಯುತ್ತಾ ಸಾಗುವ ಬೆಳವಣಿಗೆಯನ್ನು ಏಕದಳಗಳು ತೋರುವುದಿಲ್ಲ. ಹಾಗಾಗಿ ಏಕದಳಗಳದ್ದು ಬಲಿಷ್ಟ ಕಾಂಡವಲ್ಲ.

ಟಿಪ್ಪಣಿ

·         ಕೃಷಿಯಲ್ಲಿ ಕಾಂಡದ ಪ್ರಾಮುಖ್ಯತೆ ಹೇಳತೀರದ್ದು. ಮರಗಳ ಕಾಂಡವನ್ನು ಪೀಠೋಪಕರಣಕ್ಕಾಗಿ; ಕಬ್ಬಿನ ಬೆಳೆಯಲ್ಲಿ ಕಾಂಡವನ್ನು ಸಕ್ಕರೆ, ಬೆಲ್ಲ, ಎಥೆನಾಲ್ ಉತ್ಪಾದನೆಗೆ; ಜೋಳದ ಬೆಳೆಯಲ್ಲಿ ಕಾಂಡವನ್ನು ಜಾನುವಾರುಗಳಿಗೆ ಆಹಾರವಾಗಿ; ಸೆಣಬಿನಲ್ಲಿ ಕಾಂಡವನ್ನು ನಾರಿನ ಉತ್ಪಾನದೆಗೆ; ರಬ್ಬರ್ ಮರದಲ್ಲಿ ಲೆಟೆಕ್ಸ್ ಗಾಗಿ; ಸಿಂಕೋನಾದಲ್ಲಿ ಔಷಧಿಗಾಗಿ; ಅಸ್ಪರಾಗಸ್, ಸಿಲೆರಿ, ನವಿಲುಕೋಸು ಮುಂತಾದ ಸಸ್ಯಗಳ ಕಾಂಡವನ್ನು ತರಕಾರಿಯಾಗಿ; ದಾಲ್ಚಿನಿಯಲ್ಲಿ ಕಾಂಡವನ್ನು ಸಾಂಬಾರು ಪದಾರ್ಥವಾಗಿ ಬಳಸಲಾಗುತ್ತದೆ. ಅರಿಶಿಣ, ಶುಂಠಿ ಕೊಂಬುಗಳು, ಬಟಾಟೆ ಗಡ್ಡೆ ಕಾಂಡದ್ದೇ ಪ್ರತಿರೂಪ ಎಂದರೆ ಆಶ್ಚರ್ಯವೆನಿಸಬಹುದು. ಸಸ್ಯಾಭಿವೃದ್ಧಿಯಲ್ಲಂತೂ ಕಟಿಂಗ್ ಗಳಾಗಿ ಕಾಂಡಗಳ ಉಪಯೋಗ ಅಗಾಧವಾದದ್ದು.

·         ರೆಂಬೆ-ಕೊಂಬೆ, ಹೂಗಳಿಗೆ ಆಧಾರವಾದ ಕಾಂಡಗಳು ತೋಟದ ನಿರ್ವಹಣೆ ದೃಷ್ಟಿಯಿಂದ ಮುಖ್ಯ. ಚಾಟನಿ ಮಾಡುವುದು/ಪ್ರೂನಿಂಗ್, ಕಾಂಡವನ್ನೇ ಕೇಂದ್ರೀಕರಿಸಿ ಕೈಗೊಳ್ಳುವ ತೋಟಗಾರಿಕಾ ತಾಂತ್ರಿಕತೆಯಾಗಿದೆ. ಹಳೆಯ, ಬಂಜರು, ಸತ್ತ, ರೋಗಪೀಡಿತ ಟೊಂಗೆಗಳನ್ನು ಸವರುವುದು, ಆ ಮೂಲಕ ಗಾಳಿ ಬೆಳಕು ಲಭ್ಯತೆಯನ್ನು ಹೆಚ್ಚಿಸುವುದು, ರೋಗಗಳನ್ನು ದೂರವಿರಿಸುವುದು, ಸಂತಾನಕ್ರಿಯೆಯನ್ನು ಪ್ರೋತ್ಸಾಹಿಸುವುದು, ಶಾರರೀಕ ಆಕಾರ ನೀಡುವುದು, ಒಟ್ಟಾರೆ ಬೆಳೆಯ ಆರೋಗ್ಯ ಉತ್ತೇಜಿಸುವ ಪ್ರೂನಿಂಗ್ ಗೆ ಕಾಂಡದ ರಚನೆ, ಕಾರ್ಯಕಲಾಪದ ಸುಳಿವು ಇರಬೇಕಾದದ್ದು ಅಗತ್ಯ.

·         ಹೆಚ್ಚಿನ ಸಸ್ಯಗಳಲ್ಲಿ ಕಾಂಡ ನೇರವಾಗಿ ಗುರುತ್ವಕ್ಕೆ ತದ್ವಿರುದ್ಧವಾಗಿ ಬೆಳೆದರೆ ಜಾಯಿಕಾಯಿ, ಕೋಕೋ, ಕೋಕಂ ನಂತಹ ಕೆಲ ಸಸ್ಯಗಳಲ್ಲಿ ಗುರುತ್ವಕ್ಕೆ ಲಂಬಕೋನದಲ್ಲಿ ಬೆಳೆಯುತ್ತವೆ. ಈ ವಿಸ್ತಾರವಾದ ಕೆನೋಪಿಯ ಹರಡುವಿಕೆ ದ್ಯುತಿಸಂಶ್ಲೇಷಣೆಗೆ ಮತ್ತು ಸಂತಾನೋತ್ಪತ್ತಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುತ್ತದೆ.  

·         ಕಾಂಡಗಳು ಗುರುತ್ವ ಬಲದ ವಿರುದ್ಧವಾಗಿ ಬೆಳವಣಿಗೆ ಹೊಂದುವುದು ನಿಸರ್ಗದ ಜಾದೂಗಳಲ್ಲೊಂದು. ಬಹುಶಃ ಹೆಚ್ಚು ಸೂರ್ಯನ ಬೆಳಕನ್ನು ಹೊಂದಲು, ಮತ್ತು ಸಸ್ಯಾಹಾರಿ ಪ್ರಾಣಿಗಳಿಂದ ಹೂವು-ಬೀಜಗಳನ್ನು ಕಾಪಾಡಲು ಈ ಗುಣ ವಿಕಸನವಾಗಿರಬೇಕು.

ಎಲೆ ಮತ್ತು ತೊಟ್ಟು

ಕಾಂಡದಿಂದ ಹುಟ್ಟಿ ಪಾರ್ಶ್ವವಾಗಿ ಬೆಳೆಯುವ ಸಸ್ಯದ ಅಂಗವನ್ನು ಎಲೆ ಎನ್ನಬಹುದು. ವಾತಾವರಣದೊಂದಿಗೆ ಗಾಳಿ/ಅನಿಲಗಳ ವಿನಿಮಯ, ಉಸಿರಾಟ, ದ್ಯುತಿಸಂಶ್ಲೇಷಣೆ, ಭಾಷ್ಪವಿಸರ್ಜನೆ ಎಲೆಗಳ ಕೆಲಸ. ಎಲೆಗಳ ರಚನೆಯಲ್ಲಿಯೂ ದ್ವಿದಳ, ಏಕದಳಗಳು ಭಿನ್ನ.

ದ್ವಿದಳಗಳಲ್ಲಿ ಎಲೆಯ ಮೇಲುಬದಿ ಹೆಚ್ಚು ಹಸಿರಾಗಿದ್ದು ಬೆಳಕಿಗೆ ತೆರೆದಿರುತ್ತದೆ ಮತ್ತು ಕೆಳಭಾಗ ತಿಳಿ ಹಸಿರಾಗಿದ್ದು ಬೆಳಕಿನಿಂದ ಮರೆಯಾಗಿರುತ್ತದೆ. ಮೇಲೆ ಕೆಳಗೆ ಎರಡೂ ಬದಿಯಲ್ಲೂ ಕ್ಯುಟಿಕಲ್ ಹೊರಪದರವಿರುತ್ತದೆ; ಇದು ಭಾಷ್ಪವಿಸರ್ಜನೆಗೆ ತಡೆಗೋಡೆ. ಮೇಲು ಬದಿಯಲ್ಲಿ ಪತ್ರಹರಿತ್ತು/ಕ್ಲೋರೋಫಿಲ್ ಒಳಗೊಂಡ ಜೀವಕೋಶಗಳು ಹೆಚ್ಚಿನ ಸಂಖ್ಯೆಯಲ್ಲಿ ಒತ್ತತ್ತಾಗಿ ಜೋಡಿಸಿಕೊಂಡಿದ್ದರೆ, ಪತ್ರರಂಧ್ರಗಳು ಅಲ್ಲಲ್ಲಿ ದೂರದಲ್ಲಿ ಇರುತ್ತವೆ. ಹಾಗಾಗಿ ಮೇಲುಬದಿ ಹೆಚ್ಚು ಘಾಡವಾದ ಬಣ್ಣದಲ್ಲಿದ್ದು ಹೆಚ್ಚು ದ್ಯುತಿಸಂಶ್ಲೇಷಣೆಯಲ್ಲಿ ತೊಡಗುತ್ತದೆ, ಅತ್ಯಲ್ಪ ಪ್ರಮಾಣದಲ್ಲಿ ಅನಿಲ ವಿನಿಮಯ, ಭಾಷ್ಪವಿಸರ್ಜನೆಯಾಗುತ್ತದೆ. ಎಲೆಯ ಕೆಳಬದಿಯಲ್ಲಿ ಪತ್ರಹರಿತ್ತಿನ ಜೀವಕೋಶಗಳ ಸಂಖ್ಯೆ ಕಡಿಮೆ, ಮತ್ತು ಪತ್ರರಂಧ್ರಗಳ ಸಂಖ್ಯೆ ಹೆಚ್ಚು. ಹಾಗಾಗಿ ಎಲೆಯ ಕೆಳಬದಿ ತಿಳಿ ಬಣ್ಣದಲ್ಲಿದ್ದು ಅನಿಲ ವಿನಿಮಯ, ಭಾಷ್ಪವಿಸರ್ಜನೆಯಲ್ಲಿ ಹೆಚ್ಚು ಭಾಗಿಯಾಗುತ್ತವೆ, ಮತ್ತು ಅಲ್ಪ ಪ್ರಮಾಣದಲ್ಲಿ ದ್ಯುತಿಸಂಶ್ಲೇಷಣೆಗೆ ತೊಡಗುತ್ತವೆ. ದ್ಯುತಿಸಂಶ್ಲೇಷಣೆಯಲ್ಲಿ ಬೆಳಕನ್ನು ಸಮರ್ಥವಾಗಿ ಉಪಯೋಗಿಸುವಲ್ಲಿ, ಮತ್ತು ಅನಿಲ ವಿನಿಮಯದ ಸಮಯದಲ್ಲಿ ತೇವಾಂಶ/ನೀರಿನ ನಷ್ಟವನ್ನು ತಡೆಯಲು ಈ ರೀತಿಯ ಅದ್ಭುತ ಮಾರ್ಪಾಡಾಗಿರುತ್ತದೆ. ಎಲೆಯ ಮೇಲ್ಬದಿ ಮತ್ತು ಕೆಳಬದಿಯ ಮಧ್ಯದಲ್ಲಿ ಸಾಗುವ ನರ/ವೇನ್ಸ್ ಗಳಲ್ಲಿ ಅರ್ಧ ಉಂಗುರದಾಕೃತಿಯಲ್ಲಿ ನಾಳಕೂಚಗಳಿರುತ್ತವೆ; ಮೇಲ್ಬದಿ ದಿಕ್ಕಿಗೆ ಕ್ಸೈಲಮ್ ಮತ್ತು ಕೆಳಬದಿ ದಿಕ್ಕಿಗೆ ಫ್ಲೋಯಮ್ ಇದ್ದು ಇವು ಕಾಂಡದೊಡನೆ ತೊಟ್ಟಿನ ಮೂಲಕ ನಿರಂತರ ಸಂಪರ್ಕದಲ್ಲಿರುತ್ತವೆ.  ನಾಳಕೂಚಗಳನ್ನು ಸುತ್ತುವರೆದು ಮತ್ತೊಂದು ರೀತಿಯ ವಿಶೇಷವಾದ ಜೀವಕೋಶಗಳಿರುತ್ತವೆ. ಇವುಗಳನ್ನು ‘ಬಂಡಲ್ ಶೀತ್’ ಕೋಶಗಳೆಂದು (ವ್ಯಾಸ್ಕ್ಯುಲಾರ್ ಬಂಡಲ್ಲಿಗೆ ಶೀತ್ ಅಥವಾ ಕವಚವೆಂಬ ಅರ್ಥದಲ್ಲಿ) ಕರೆಯಲಾಗುತ್ತದೆ. ಸದ್ಯಕ್ಕೆ ಬಂಡಲ್ ಶೀತ್ ಗಳನ್ನು ನೆನಪಿಡಿ. ಮುಂದೆ ದ್ಯುತಿಸಂಶ್ಲೇಷಣೆಯಲ್ಲಿ ಇವುಗಳ ಮಹತ್ವದ ಪಾತ್ರದ ಬಗ್ಗೆ ವಿಶೇಷವಾಗಿ ಚರ್ಚಿಸೋಣ.

ಏಕದಳ ಎಲೆಯಲ್ಲಿ ಮೇಲ್ಬದಿ ಕೆಳಬದಿಯೆಂಬ ಪ್ರತ್ಯೇಕತೆಯಿಲ್ಲ. ಎಲೆಯ ಎರಡೂ ಬದಿ ಬೆಳಕಿಗೆ ತೆರೆದಿದ್ದು ಎರಡೂ ಬದಿಗೂ ಕ್ಯುಟಿಕಲ್ ಪದರವಿರುತ್ತದೆ. ಹೊರಮೈಯಲ್ಲಿ ‘ಸಿಲಿಕಾ’ ಹರಳುಗಳಿರುವುದರಿಂದ ಎಲೆ ಹೆಚ್ಚು ಗಡುಸಾಗಿಯೂ, ಹೊಳೆಯುತ್ತಲೂ ಇರುತ್ತದೆ. ಹರಿತ್ತು ಹೊಂದಿರುವ ಜೀವಕೋಶಗಳು, ಪತ್ರರಂಧ್ರಗಳು ಚೆದುರಿಕೊಂಡಿರುತ್ತದೆ. ಎಲೆಯಲ್ಲಿನ ನರಗಳಲ್ಲಿ ನಾಳಕೂಚಗಳಿರುತ್ತವೆ, ಅವು ಕೂಡಾ ಚೆದುರಿಕೊಂಡಿದ್ದು, ಪ್ರತಿ ಬಂಡಲ್ ಸುತ್ತ ಬಂಡಲ್ ಶೀತ್ ಕೋಶಗಳಿರುತ್ತವೆ.

ಎಲೆಯನ್ನು ಕಾಂಡಕ್ಕೆ ಅಂಟಿಸಿಡುವ ಅಂಗ ತೊಟ್ಟು/ಪಿಟಿಯೋಲ್. ಇವುಗಳ ಅಂಗರಚನೆ ಸುಮಾರು ಕಾಂಡದಂತೆಯೇ ಇರುತ್ತದೆ. ಆದರೆ ನಾಳಕೋಚಗಳು ಮಾತ್ರ ಅರ್ಧ ಉಂಗುರಾಕೃತಿಯಲ್ಲಿ ಕಂಡುಬರುತ್ತವೆ. ಕೋಲಂಕೈಮ ಎನ್ನುವ ಜೀವಕೋಶಗಳ ಹೊಂದಿರುವ ಕಾರಣ ಇವು ಗಟ್ಟಿಯಾಗಿ, ಬಾಗಿ-ಬೆಂಡಾಗುವ ಲಕ್ಷಣ ಹೊಂದಿರುತ್ತವೆ.

ಟಿಪ್ಪಣಿ

·         ಎಲೆಗಳಿಗೆ ವಾಣಿಜ್ಯಿಕವಾಗಿಯೂ ಬಹಳ ಮಹತ್ವವಿದೆ. ಹಲವಾರು ಸಸ್ಯಗಳಲ್ಲಿ ಎಲೆಗಳಿಂದ ಸಸ್ಯಾಭಿವೃದ್ಧಿ ಮಾಡುವ ಪದ್ಧತಿ ರೂಢಿಯಲ್ಲಿದೆ; ಅಲಂಕಾರಿಕ ಸಸ್ಯಗಳಲ್ಲಿ ಎಲೆಗಳ ವಿನ್ಯಾಸಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆ; ಹರಿವೆ, ಪಾಲಕ್, ಮೆಂತೆ, ಹಸಿರು ಎಲೆಯ ಸೊಪ್ಪು ತರಕಾರಿಗಳಿಗೆ ಆರೋಗ್ಯ ಕಾಪಾಡುವಲ್ಲಿ ವಿಶೇಷ ಸ್ಥಾನವಿದೆ; ಉಳ್ಳಾಗಡ್ಡೆಯೂ ಎಲೆಗಳದ್ದೇ ಛದ್ಮವೇಷ ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು; ಒಂದೆಲಗ, ತುಳಸಿ ಎಲೆಗಳು ಔಷಧೀಯ ಉತ್ಪನ್ನಗಳ ತಯಾರಿಕೆಗೆ ಬಳಕೆಯಲ್ಲಿವೆ; ನಿಂಬೆ ಹುಲ್ಲು, ಸಿಟ್ರೋನೆಲ್ಲಾ, ಪಚೌಲಿ, ಪುದೀನಾ ಎಲೆಗಳನ್ನು ಸುಗಂಧದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ; ವೀಳ್ಯದೆಲೆ, ಚಹಾ, ತಂಬಾಕಿನ ಬೆಳೆಗಳಲ್ಲಿ ಎಲೆಯೇ ಕೃಷಿ ಉತ್ಪನ್ನ.

·         ಎಲೆಗಳು ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಯುವ ಪ್ರಮುಖ ನಿಲ್ದಾಣ. ಸಸ್ಯಗಳ ಬೆಳವಣಿಗೆ, ಅಭಿವೃದ್ಧಿಗೆ ಬೇಕಾದ ಶಕ್ತಿ ಉತ್ಪಾದನೆಯಾಗುವುದು ಇಲ್ಲಿಯೇ. ಇದೇ ಶಕ್ತಿ ಹೂವು, ಕಾಯಿ, ಬೀಜ ಸಂತಾನೋತ್ಪತ್ತಿಗೂ ಉಪಯೋಗಿಸಲ್ಪಡುತ್ತದೆ. ಹಾಗಾಗಿ ಕೃಷಿ ಬೆಳೆಗಳ ಇಳುವರಿ ನೇರವಾಗಿ ಎಲೆಗಳ ಹರವಿಗೆ ಸಂಬಂಧಿಸಿದೆ. ಎಲೆಗಳಲ್ಲಿ ನಡೆಯುವ ಭಾಷ್ಪವಿಸರ್ಜನೆ ಕಾಂಡದಲ್ಲಿ ಒಂದು ತರಹದ ಸೆಳೆತವನ್ನು ಉಂಟುಮಾಡುತ್ತದೆ, ಈ ಸೆಳೆತ ನೀರು ಹೀರುವಂತೆ ಬೇರಿನ ಮೇಲೆ ಒತ್ತಡ ಹೇರುತ್ತದೆ. ಹೀಗೆ ನೀರು-ಪೋಷಕಾಂಶಗಳ ಹೀರುವಿಕೆಯಲ್ಲಿಯೂ ಎಲೆಗಳು ಪರೋಕ್ಷ ಪಾತ್ರ ವಹಿಸುತ್ತವೆ.

·         ಬೆಳೆಗಳಲ್ಲಿ ರೋಗ-ಕೀಟಗಳ ಭಾದೆ, ಪೋಷಕಾಂಶ ಕೊರತೆಯಾದಾಗ ಮೊದಲ ಸ್ಪಂದನೆ ಸಾಮಾನ್ಯವಾಗಿ ಎಲೆಗಳದ್ದು. ಎಲೆಗಳ ಲಕ್ಷಣಗಳ ಮೇಲೆ ಈ ಭಾದೆಗಳನ್ನು ಪತ್ತೆ ಹಚ್ಚಿ ಪರಿಹಾರ ಮಾಡಲಾಗುತ್ತದೆ.

·         ಗಿಡದ ಮೇಲಷ್ಟೇ ಅಲ್ಲ, ನೆಲಕ್ಕೆ ಉದುರಿದ ಮೇಲೂ ಎಲೆಗಳು ನಿಸರ್ಗದೆಡೆಗೆ ತಮ್ಮ ಕೊಡುಗೆಯನ್ನು ಮುಂದುವರೆಸುತ್ತವೆ. ಉದುರಿದ ಎಲೆಗಳು ಕೊಳೆತು, ಮಣ್ಣಲ್ಲಿ ಬೆರೆತು, ಸಾವಯವ ವಸ್ತುವಾಗಿ ಬದಲಾಗುವ ಕ್ರಿಯೆ ಮಣ್ಣಿನ ರಚನೆ, ಫಲವತ್ತತೆ ಮತ್ತು ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಸುಧಾರಿಸುತ್ತದೆ. ಕೃಷಿಗೂ ಇದು ಅತಿ ಅಗತ್ಯ. ಜೊತೆಗೆ ಉದುರಿದ ಎಲೆಗಳು ಗಿಡದ ಸುತ್ತ ಹಾಸಾಗಿ ನೈಸರ್ಗಿಕ ಮುಚ್ಚಿಗೆಯನ್ನು ನಿರ್ಮಿಸುತ್ತವೆ. ಇದು ಕಳೆ ಹತೋಟಿಯ ಜೊತೆ ತೇವಾಂಶ ಉಳಿಯುವಿಕೆಗೆ ಉಪಯುಕ್ತ. ಇವೆಲ್ಲ ಅಂಶಗಳು ಇಳುವರಿ ಸುಧಾರಿಸುವಲ್ಲಿ ಸಹಕಾರಿ.

·         ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಎಲೆಗಳ ರಚನೆ. ಕೆಲವು ದೊಡ್ಡ, ಕೆಲವು ಚಿಕ್ಕ, ಕೆಲವು ಚೂಪ. ಈ ರಚನೆಗಳು ಆಯಾ ವಾತಾವರಣಕ್ಕೆ ವಿಕಸನವಾದ ಅಂಶಗಳು; ಹೆಚ್ಚು ಬೆಳಕನ್ನು ಸೆರೆ ಹಿಡಿಯಲು ಅಗಲವಾಗಿ, ನೀರನ್ನು ಸಂರಕ್ಷಿಸಲು ಸೂಜಿಯಂತೆ ಮೊನಚಾಗಿ, ಗಾಳಿಯನ್ನು ತಡೆಯಲು ಕವಲು ಕವಲಾಗಿ, ಸಸ್ಯಾಹಾರಿ ಭಕ್ಷಕರಿಂದ ರಕ್ಷಣೆಗೆ ಮುಳ್ಳಾಗಿ ನಾನಾರೂಪ ಹೊಂದಬಲ್ಲವು.

·         ಎಲೆಗಳ ಸುತ್ತಲೂ ಸೂಕ್ಷ್ಮಜೀವಿಗಳ ವಿಶಿಷ್ಟ ಸಂಕುಲವಿರುವುದನ್ನು ವಿಜ್ಞಾನಿಗಳು ಗುರುತಿಸಿ ಇದನ್ನು ‘ಫಿಲ್ಲೋಸ್ಪಿಯರ್’ ಎಂದು ಕರೆದಿದ್ದಾರೆ. ಇಲ್ಲಿ ನೆಲೆಸಿರುವ ಸೂಕ್ಷ್ಮಜೀವಿಗಳು ರೋಗ ತಡೆಯುವಲ್ಲಿ, ವಾತಾವರಣದಿಂದ ಪೋಷಕಾಂಶ ಹೀರುವಲ್ಲಿ, ತೀಕ್ಷ್ಣ ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಿಸುವಲ್ಲಿ, ಇನ್ನು ಹಲವಾರು ಕಾರಣಕ್ಕೆ ಪ್ರಯೋಜನಕಾರಿಯಾಗಿವೆ. ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.

ಮುಂದಿನ ಕಂತಿನಲ್ಲಿ ಸಸ್ಯದ ಇತರೇ ಅಂಗಗಳಾದ ಹೂವು, ಕಾಯಿ, ಹಣ್ಣು, ಬೀಜದ ಬಗ್ಗೆ ಚರ್ಚಿಸೋಣ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ