ಕೋಲಿಯಸ್

ಚಿತ್ರಕಲೆ ಸ್ಪರ್ಧೆ ನಡೆಯುತ್ತಿದೆ ಅಂದುಕೊಳ್ಳಿ. ಎಲೆಯೊಂದನ್ನು ಬಿಡಿಸಲು ಸೂಚನೆ ನೀಡಲಾಗುತ್ತದೆ. ಕಲ್ಪನೆಯಂತೆ ಬಿಡಿಸುತ್ತೀರಿ. ಬಣ್ಣ ತುಂಬುವಾಗ ನಿಮ್ಮ ಆಯ್ಕೆಯೇನು. ತಿಳಿ ಹಸಿರು, ಘಾಡ ಹಸಿರು, ಪಾಚಿ ಹಸಿರು? ಒಟ್ಟಿನಲ್ಲಿ ಹಸಿರು ಅಲ್ಲವೇ. ಅದೇ ಚಿಕ್ಕ ಮಕ್ಕಳ ಕೈಗೆ ಕುಂಚ ಕೊಟ್ಟರೇ? ಗುಲಾಬಿ, ನೇರಳೆ, ಕೆಂಪು, ಕೇಸರಿ, ನಮ್ಮ ಆಲೋಚನೆಗೂ ಮೀರಿ ಅವರ ವರ್ಣ ಲಹರಿ ಸಾಗುವುದು ಸಹಜ. ಹಾಗಾದರೆ ಅವರ ಬಣ್ಣದ ಆಯ್ಕೆ ತಪ್ಪೇ? ಖಂಡಿತ ಇಲ್ಲ. ನಿಮ್ಮ ಹೂದೋಟದಲ್ಲಿ ಕೋಲಿಯಸ್ ಎಂಬ ಅಲಂಕಾರಿಕ ಸಸ್ಯವಿದ್ದರೆ ನೆನಪಿಸಿಕೊಳ್ಳಿ!   

ಘಾಡ ವರ್ಣದ ಎಲೆಗಳ ಕೋಲಿಯಸ್ ತೋಟಗಾರರ ಇಷ್ಟದ ಅಲಂಕಾರಿಕ ಸಸ್ಯ. ನೆರಳು-ಬಿಸಿಲು, ಮನೆಯೊಳಗಿನ-ಹೊರಗಿನ ಅಂದ ಹೆಚ್ಚಿಸುವಲ್ಲಿ ಇವುಗಳ ‘ಜಾದೂಯೀ ಹಾತ್’ ಇದೆ. ತರಹೇವಾರಿ ಬಣ್ಣದೆಲೆಯೆ ಕೋಲಿಯಸ್ ಸಂಗ್ರಹ ಮಾಡುವುದು ಕೆಲವರ ಖಯಾಲಿ. ಎಷ್ಟೇ ಸಂಗ್ರಹಿಸಿದರೂ ಮುಗಿದು ತೀರದ ವೈವಿಧ್ಯತೆ ಇವುಗಳದ್ದು.

ಕೋಲಿಯಸ್ ಗಳ ಹುಟ್ಟೂರು ಆಗ್ನೇಯ ಏಷ್ಯಾ. 1851ರಲ್ಲಿ ವಿಲ್ಲಿಂಕ್ ಎಂಬ ಡಚ್ ತೋಟಗಾರ ಜಾವಾದಿಂದ ಸಂಗ್ರಹಿಸಿದ ಕೋಲಿಯಸ್ ಗಳನ್ನು ಯುರೋಪ್ ನಲ್ಲಿ ಮೊಟ್ಟಮೊದಲು ಪರಿಚಯಿಸಿದ.  ಅಗಲವಾದ ಮಡಿಗಳಲ್ಲಿ ಒತ್ತತ್ತಾಗಿ ಬೆಳೆವ ‘ಬೆಡ್ಡಿಂಗ್ ಪ್ಲಾಂಟ್’ಗಳಾಗಿ ಇವು ಪ್ರಸಿದ್ಧಿ ಹೊಂದಿದವು. 1877ರಲ್ಲಿ ವಿಲಿಯಂ ಬುಲ್ ಎಂಬ ತೋಟಗಾರ 150 ವರ್ಣರಂಜಿತ ತಳಿಗಳನ್ನು ಪರಿಚಯಿಸಿದ. ನಂತರದಲ್ಲಿ ನವೀನ ವಿನ್ಯಾಸದ ಕೋಲಿಯಸ್ ತಳಿಯ ಅಭಿವೃದ್ಧಿ, ಮಾರಾಟದ ಉದ್ದಿಮೆ ವಿಶ್ವಾದ್ಯಂತ ಬಲ ಪಡೆಯಿತು.

ಭಾರತೀಯರಿಗೆ ಕೋಲಿಯಸ್ ಎಂಬ ಸಸ್ಯಜಾತಿ ಹೊಸದೇನಲ್ಲ. ಅಲಂಕಾರಿಕವಾಗಿ ಬೆಳೆವ ಕೋಲಿಯಸ್ (ಕೋ. ಸ್ಕುಟಲ್ಲೆರಿಯೋಡಿಸ್) ಜೊತೆಗೆ ದೊಡ್ಡಪತ್ರೆ/ಕರ್ಪೂರವಲ್ಲಿ (ಕೋ. ಅಂಬೊಯ್ನಿಕಸ್/ಅರೋಮಾಟಿಕಸ್), ಮಾಂಗನಿ/ಮಾಕಂದಿ/ಪಾಷಾಣಭೇದಿ (ಕೋ. ಫೋರ್ಸಕೊಲೈ/ಬಾರ್ಬಟಸ್) ಎಂಬ ಇನ್ನೆರಡು ಪ್ರಭೇದಗಳು ನಮ್ಮಲ್ಲಿ ದಿನನಿತ್ಯದ ಬಳಕೆಯಲ್ಲಿವೆ. ಜ್ವರ, ಶೀತ, ಕೆಮ್ಮಿನಂತ ಶ್ವಾಸ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ದೊಡ್ಡಪತ್ರೆ ಎಂಬ ಹಿತ್ತಲ ಗಿಡದ ಮದ್ದು ತಾತಮುತ್ತಾತನ ಕಾಲದಿಂದ ಹೆಸರುವಾಸಿ; ಬೇರುಗಳಲ್ಲಿ ‘ಪೋರ್ಸಕೊಲಿನ್’ ಎಂಬ ರಾಸಾಯನಿಕ ಸಂಯುಕ್ತ ಹೊಂದಿರುವ ಮಾಕಂದಿ ಔಷಧೀಯ ಬೆಳೆಯಾಗಿ ವಾಣಿಜ್ಯಿಕ ಕೃಷಿಯಲ್ಲಿದೆ. ಇವುಗಳಿಗೆಲ್ಲಾ ಸಸ್ಯಶಾಸ್ತ್ರೀಯವಾಗಿ ‘ಪ್ಲೆಕ್ಟರಾಂತಸ್’ ಎಂದು ನಾಮಕರಣ ಮಾಡಿದರೂ ಕೋಲಿಯಸ್ ಎಂಬ ಹೆಸರೇ ಜನಪ್ರಿಯ.

ಬೀಜ ಮತ್ತು ಕಟಿಂಗ್ ಬಳಸಿ ಕೋಲಿಯಸ್ ಅನ್ನು ಸುಲಭವಾಗಿ, ಶೀಘ್ರವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ಆರ್ದ್ರ ಉಷ್ಣ ವಾತಾವರಣ ಕೋಲಿಯಸ್ ಗಳ ಬೆಳವಣಿಗೆಗೆ ಉತ್ತೇಜನಕಾರಿ. ಬಿಸಿಲು ತಡೆಯುವ ಶಕ್ತಿಯಿದ್ದರೂ ನೆರಳಿನ ಪ್ರದೇಶ ಹೆಚ್ಚು ಸೂಕ್ತ. ಧಾರಾಳ ನೀರು ಬೇಡುವ ಕೋಲಿಯಸ್ ಗಳು ಒಣ ಬಿಸಿಲಲ್ಲಿ ಇನ್ನೇನು ಸತ್ತೇ ಹೋದಂತೆ ಕಂಡರೂ ಮಳೆಗಾಲದಲ್ಲಿ ಬಣ್ಣದ ಓಕುಳಿಯೆರಚಿ ಸೊಂಪಾಗಿ ಬೆಳೆಯಬಲ್ಲವು. ಬೂದು ತುಪ್ಪಟ ರೋಗ ಮತ್ತು ಬಹುತೇಕ ಅಲಂಕಾರಿಕ ಸಸ್ಯಗಳನ್ನೂ ಕಾಡುವ ಹಿಟ್ಟು ತಿಗಣೆಗಳು,ಹೇನುಗಳು ತಾಪತ್ರಯ ಕೊಡಬಲ್ಲವು. ನೀರು ಬಸಿದು ಹೋಗದಿದ್ದರೆ ಸಸ್ಯ ಕೊಳೆಯುವ ಸಾಧ್ಯತೆ ಹೆಚ್ಚು.

ಕೋಲಿಯಸ್ ಮೂಲತಃ ಏಕವಾರ್ಷಿಕ ಸಸ್ಯ. ತುಳಸಿಯಂತೆ (ಕೋಲಿಯಸ್ ನದು ತುಳಸಿಯದೇ ವಂಶ) ಚಿಕ್ಕ ಹೂಗೊಂಚಲನ್ನು ಬಿರಿಯುತ್ತವೆ. ಹೂ ಚಿವುಟುವ ಅಭ್ಯಾಸ ಅವುಗಳ ಜೀವಿತಾವಧಿಯನ್ನು ವಿಸ್ತರಿಸಬಲ್ಲದು. ಎಳೆ ತುದಿಯನ್ನು ಚಿವುಟುವುದರ ಮೂಲಕ ಸಸ್ಯಕ್ಕೆ ಬುಶ್ ಆಕಾರ ನೀಡಬಹುದು. ಹೀಗೆ ಕಾಲಕಾಲಕ್ಕೆ ಕಟಿಂಗ್ ಮಾಡುವುದರ ಮೂಲಕ ಆಕಾರ ನೀಡಿ ಕೋಲಿಯಸ್ ಅನ್ನು ಬಹುವಾರ್ಷಿಕವಾಗಿ ನಿರ್ವಹಿಸಬಹುದಾಗಿದೆ.



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ