ಡೆಟ್ರಾಯ್ಟ್ ನಲ್ಲೊಂದು ಹಸಿರು ಕ್ರಾಂತಿ: ಬಿಳಿಯರು ತೊರೆದ ನೆಲದಲ್ಲಿ ಹಸಿರು ಬೆಳೆದ ಕರಿಯರು
ವಿಶ್ವದ ‘ಮೋಟಾರ್ ಸಿಟಿ’; ಜನರಲ್ ಮೋಟರ್ಸ್, ಫೋರ್ಡ್ ನಂತ ದೈತ್ಯ ವಾಹನ ತಯಾರಿಕಾ ಕಂಪನಿಗಳ ಹುಟ್ಟೂರಾದ ಅಮೇರಿಕಾದ ಡೆಟ್ರಾಯ್ಟ್ ನಗರದ ಬಗ್ಗೆ ಕೇಳದೇ ಇರುವವರಿಲ್ಲ. 20ನೇ ಶತಮಾನದ ಪ್ರಾರಂಭಕ್ಕೆ ಆಟೋಮೋಬೈಲ್ ಕ್ಷೇತ್ರ ಲೆಕ್ಕ ತಪ್ಪಿ ಬೆಳೆದು, ಶತಮಾನದ ಅಂತ್ಯಕ್ಕೆ ದಿವಾಳಿಯಾಗಿ, ಇತ್ತೀಚೆಗೆ ತನ್ನ ಕೃಷಿ ಕ್ರಾಂತಿಯಿಂದ ಮೇಲೆದ್ದುನಿಂತ ಡೆಟ್ರಾಯ್ಟ್ ನ ಕಥೆ ರೋಚಕವಾದದ್ದು.
1920-30,
ಡೆಟ್ರಾಯ್ಟ್ ನಲ್ಲಿ ಆಟೋಮೊಬೈಲ್ ಕೈಗಾರಿಕೆ ಆಗಷ್ಟೇ ಗರಿಗೆದರಿತ್ತು; ಸುತ್ತ ಹಳ್ಳಿಗಳಿಗೂ ವ್ಯಾಪಿಸಿತ್ತು.
ದಿನದಿನವೂ ಬೆಳೆಯುತ್ತಿರುವ ನಗರ ತನ್ನ ಹೊಸ ಅವಕಾಶಗಳಿಂದ ಯುವಕರನ್ನು ಆಕರ್ಷಿಸಿತು. ಪರಿಣಾಮ, ಉತ್ತರ
ಅಮೇರಿಕಾದ ಗ್ರಾಮೀಣ ಭಾಗದಿಂದ ಬಿಳಿಯ-ಕರಿಯರೆನ್ನದೇ ಕಾರ್ಮಿಕರು ವಲಸೆ ಬರತೊಡಗಿದರು. ಮಾನವ ಸಂಪನ್ಮೂಲ
ಹೆಚ್ಚುತ್ತಿದ್ದಂತೆ ಬ್ರೀವಿಂಗ್, ಫಾರ್ಮಸಿ ಎನ್ನುತ್ತಾ ಇತರೆ ಕೈಗಾರಿಕೆಗಳು ಮೊಳೆಯತೊಡಗಿದವು. ಇಷ್ಟರಲ್ಲೇ
ಜನಸಂಖ್ಯೆ, ಅದರಲ್ಲೂ ಬ್ಲಾಕ್ ಅಮೇರಿಕನ್ನರ ಸಂಖ್ಯೆ ಮಿತಿ ಮೀರಿ ಬೆಳೆಯಿತು.
ಎಂದಿನಂತೆ
ಡೆಟ್ರಾಯ್ಟ್ ನ ಸುಖ ಜೀವನದ ಕನಸು ಬಿಳಿಯರಿಗಷ್ಟೇ ನನಸಾಯಿತು! ಕಪ್ಪು ವರ್ಣೀಯರಿಗೆ ವಸತಿ ವ್ಯವಸ್ಥೆ,
ಸಂಬಳ, ಕಾರ್ಯ ಕ್ಷೇತ್ರದಲ್ಲಿ ತಾರತಮ್ಯ ಶುರುವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಅಸ್ಪ್ರಶ್ಯರಂತೆ
ನಗರ ವ್ಯವಸ್ಥೆಯಿಂದ ತೀರಾ ಹೊರಗುಳಿಸಲಾಯಿತು. ತಾಜಾ ಆಹಾರ ಸಿಕ್ಕುವ ಸೂಪರ್ ಮಾರ್ಕೆಟ್ ಗೆ ಅವರು ದುಡ್ಡು
ತೆತ್ತು ಪಯಣಿಸಲೂ ಸಾಧ್ಯವಿರಲಿಲ್ಲ; ಹಣ್ಣು, ತರಕಾರಿ, ಮೊಟ್ಟೆ, ಮಾಂಸಗಳನ್ನಂತೂ ಕನಸಲ್ಲೂ ಊಹಿಸುವಂತಿರಲಿಲ್ಲ.
ಅಲ್ಲೊಂದು ‘ಫುಡ್ ಡೆಸರ್ಟ್’ ನಿರ್ಮಾಣವಾಗಿತ್ತು. ಕಡಿಮೆ ವೆಚ್ಚದ ಜಂಕ್ ಆಹಾರಕ್ಕೆ, ಫಾಸ್ಟ್ ಫುಡ್
ಗೆ ಅವರು ಮೊರೆಹೋಗಬೇಕಾಯಿತು.
ಇತ್ತ
ಕಡೆ ಎರಡನೇ ವಿಶ್ವ ಸಮರ, ಏರುತ್ತಿರುವ ಕಚ್ಚಾ ತೈಲದ ಬೆಲೆ, ವಿದೇಶೀ ಪೈಪೋಟಿ, ಬದಲಾಗುತ್ತಿರುವ ಗ್ರಾಹಕರ
ಆದ್ಯತೆ ಆಟೋಮೊಬೈಲ್ ಕ್ಷೇತ್ರಕ್ಕೆ ಬರೆ ಎಳೆದಿತ್ತು. ನಾಗರಿಕ ಹಕ್ಕುಗಳಿಗಾಗಿ ನಡೆಯುತ್ತಿದ್ದ ಚಳುವಳಿ
ಸಾಮಾಜಿಕ ಅಶಾಂತಿ ಉಂಟು ಮಾಡಿತ್ತು. 1963ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜ್ಯೂ. ‘ಐ ಹ್ಯಾವ್ ಎ ಡ್ರೀಮ್’
ಎಂದಾಗ ಡೆಟ್ರಾಯ್ಟ್ ನ ಕಪ್ಪು ಕಂಗಳಲ್ಲಿ ಸಂಚಲನವೊಂದು ಉಂಟಾಯಿತು; ತೀವ್ರ ಹಿಂಸಾತ್ಮಕ ಗಲಭೆ ಶುರುವಾಯಿತು.
ಚಿಲ್ಲರೆ ವ್ಯಾಪಾರಗಳು ಬಾಗಿಲು ಮುಚ್ಚಿದವು. ಸ್ವಲ್ಪ ಸ್ಥಿತಿವಂತರಾದವರು ಗಂಟು ಮೂಟೆ ಕಟ್ಟತೊಡಗಿದರು.
1950ರಲ್ಲಿ 18 ಲಕ್ಷವಿದ್ದ ಜನಸಂಖ್ಯೆ 2001ರಲ್ಲಿ 9 ಲಕ್ಷಕ್ಕೆ ಇಳಿದಿತ್ತು. ಜನಸಂಖ್ಯೆ ಇಳಿದಿದ್ದೆ
ತೆರಿಗೆ ಸಂಗ್ರಹ ತೀವ್ರ ಕುಸಿಯಿತು, ಆರ್ಥಿಕ ವ್ಯವಸ್ಥೆ ಹದಗಟ್ಟಿತ್ತು, ಕಾನೂನು ವ್ಯವಸ್ಥೆ ಬಿಗಡಾಯಿಸಿತು,
ನಿರುದ್ಯೋಗ, ಬಡತನ, ಅಪರಾಧ ಹೆಚ್ಚಿತು. 2013ಕ್ಕೆ ದಿವಾಳಿಯೆಂದು ಘೋಷಣೆಯಾದಾಗ ಡೆಟ್ರಾಯ್ಟ್ ಕೊಳೆತು
ನಾರುತ್ತಿತ್ತು!!!
ಇದು
ನಮ್ಮ ಅಕ್ಕಪಕ್ಕದ ಯಾವುದಾದರೂ ಶಹರದ ಭವಿಷ್ಯದ ಕಥೆಯೇ? ನೀವಾಗಿದ್ದರೆ ಇಂತ ಹೊತ್ತಲ್ಲಿ ಹೇಗೆ ಪ್ರತಿಕ್ರಯಿಸುತ್ತಿದ್ದಿರಿ?!
ಡೆಟ್ರಾಯ್ಟಿಗರು
ಎದೆಗುಂದದೆ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು. ಇಲ್ಲಿನ ಜಾಣ ಜನ ಮೊದಲು ಒತ್ತು ಕೊಟ್ಟಿದ್ದು
ಆಹಾರ ಭದ್ರತೆಗೆ. ಬಿಳಿಯರು ತೊರೆದ ನೆಲವನ್ನೆಲ್ಲ ಅವರು ಚಿಕ್ಕ ಪೌಷ್ಟಿಕ ತೋಟವಾಗಿ ಬದಲಾಯಿಸಿದರು.
ತಮಗಾಗಿ ತಮ್ಮವರಿಗಾಗಿ ಬೆಳೆದರು. ‘ಅರ್ಬನ್ ಫಾರ್ಮಿಂಗ್’ ಚಳುವಳಿಯನ್ನೇ ಪ್ರಾರಂಭಿಸಿದರು. ನೋಡನೋಡುತ್ತಾ
ಸದೃಢ ಸಮುದಾಯವೊಂದು ನಿರ್ಮಾಣವಾಗಿತ್ತು. ಆರ್ಥಿಕ ಲಾಭಕ್ಕಾಗಿ ತಾಜಾ ಆಹಾರೋದ್ಯಮ ಶುರುಮಾಡಿದರು.
‘ಫಾರ್ಮ್ ಟೂರ್’, ‘ಮೀಟ್ ಎ ಫಾರ್ಮರ್’, ‘ಫಾರ್ಮ್ ಟು ಪ್ಲೇಟ್’ ಎನ್ನುತ್ತಾ ಸಿರಿವಂತರನ್ನು ಕರೆದು
ಸರ್ವ್ ಮಾಡಿದರು. ಡೆಟ್ರಾಯ್ಟ್ ಕೃಷಿ ಪ್ರವಾಸೋದ್ಯಮ ಸವಿಯಲು ಪಟ್ಟಣಿಗರು ತಂಡೋಪತಂಡವಾಗಿ ಮಕ್ಕಳು
ಮರಿಯೊಡನೆ ಬರತೊಡಗಿದರು.
ಸ್ವಲ್ಪ
ದಿನಗಳ ಹಿಂದೆ ‘ಕೀಪ್ ಗ್ರೋಂಯಿಂಗ್ ಡೆಟ್ರಾಯ್ಟ್’ ಸಂಸ್ಥೆಯ ಬ್ಲಾಕ್ ಅಮೇರಿಕನ್ ಮಹಿಳೆ ‘ರುಶ್ದನ್’
ಎಂಬಾಕೆ ನಗರಕೃಷೀ ನಿರ್ದೇಶಕರಾಗಿ ನೇಮಕಗೊಂಡಿದ್ದು ಈ ಹೋರಾಟಕ್ಕೆ ಮತ್ತಷ್ಟು ಬಲನೀಡಿದೆ. ನಗರಕೃಷಿಯೊಂದೇ
ಡೆಟ್ರಾಯ್ಟ್ ನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ; ಆದರೆ ಈ ಚಳುವಳಿ ಅಭಿವೃದ್ಧಿಯೆಡೆಗಿನ ನಮ್ಮ ನೋಟ,
ಚಿಂತನಾ ಲಹರಿಯನ್ನೇ ಬದಲಾಯಿಸಿದೆ ಎಂಬುದು ಅವರ ಅಭಿಪ್ರಾಯ.
ಒಂದೊಮ್ಮೆ ಕೈಗಾರಿಕೆಗೆ ಹೆಸರಾಗಿದ್ದ ಡೆಟ್ರಾಯ್ಟ್ ಇಂದು ಸುಸ್ಥಿರ ಕೃಷಿಗೆ ಮಾದರಿಯಾಗಿ ನಿಂತಿದೆ; ಅಂದಿನಂತೆ ಇಂದಿಗೂ ಬೆಳೆಯುತ್ತಲೇ ಇದೆ, ಆದರೆ ಆರೋಗ್ಯಕರವಾಗಿ!.

Comments
Post a Comment