ಬೀಜ ಮೊದಲೋ ಸಸ್ಯ ಮೊದಲೋ - ಸಸ್ಯ ಅಂಗರಚನಾ ಶಾಸ್ತ್ರ ಸಸ್ಯ ಶರೀರ ಶಾಸ್ತ್ರ ಭಾಗ 1
ಬೆಳೆಗಳ
ಅನಾಟಮಿ-ಫಿಸಿಯಾಲಜಿ
ಭಾಗ-1
: ಸಸ್ಯ ಶರೀರದ ಒಳಹೊರಗೆ
|
ನಿಮಗೇನಾದರೂ ಇದ್ದಕ್ಕಿದ್ದಂತೆ ಜ್ವರ ನೆಗಡಿ
ಶುರುವಾದರೆ ಏನು ಮಾಡುತ್ತೀರಿ? ಕೆಲವರು ಇವೆಲ್ಲಾ ಇದ್ದಿದ್ದೇ ಎಂದು ನಿಶ್ಕಾಳಜಿ ಮಾಡುತ್ತೀರಿ;
ಕೆಲವರು ಡಾಕ್ಟರ್ ಬಳಿಯೇಕೆ, ಹಿಂದಿನ ಸಲದ ಜ್ವರ ಬಂದಾಗ ಕೊಟ್ಟ ಡೋಲೋ-650, ಆಂಟಿಬಯಾಟಿಕ್ ಯನ್ನೇ
ದಿನಕ್ಕೆರಡು ತಂಗೊಂಡರಾಯಿತೆಂದು ಸುಮ್ಮನಾಗುತ್ತೀರಿ; ಕೆಲವರು ಔಷಧಿ ಅಂಗಡಿಯ ಅಡ್ಡ ದಾರಿ ಹಿಡಿಯುತ್ತೀರಿ;
ಕೆಲವರು ಪರೀಕ್ಷಿಸಿಯೇ ನೋಡೋಣ ಎಂದು ವೈದ್ಯರನ್ನು ಭೇಟಿಯಾಗುತ್ತೀರಿ; ಕೆಲವೇ ಕೆಲವರು ವೈದ್ಯರನ್ನು
ಸಂಪರ್ಕಿಸಿದಾಗ ಜ್ವರದ ಹಿಂದಿನ ಕಾರಣ, ಅದಕ್ಕೆ ಬೇಕಾದ ಮಾತ್ರೆ, ಆ ಮಾತ್ರೆ ದೇಹದ ಮೇಲೆ ಬೀರುವ
ಪರಿಣಾಮದ ಬಗ್ಗೆ ಚರ್ಚಿಸುತ್ತೀರಿ. ಕೃಷಿಕರಲ್ಲೂ ಇದೇ ನಡವಳಿಕೆ ಕಾಣಬಹುದೇನೋ. ತಮ್ಮ ಬೆಳೆಗಳಿಗಾಗಿರುವ
ಭಾದೆ ಕಂಡು ನಿಶ್ಕಾಳಜಿ ಮಾಡುವವರು; ಏನೇ ಭಾದೆ ಇದ್ದರೂ ಹಿಂದೆ ತಂದಿಟ್ಟ ‘ಕರಾಟೆ ಎಣ್ಣೆ’ಯನ್ನೇ
ದಬಾಯಿಸಿ ಹೊಡೆಯುವವರು; ಗೊಬ್ಬರ ಅಂಗಡಿಗೆ ಹೋಗುವವರು; ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಸಲಹೆ
ಪಡೆದು ಚರ್ಚಿಸುವವರು, ಹೀಗೆ!. ಇವತ್ತಿನ ಮಾಹಿತಿ ಯುಗದಲ್ಲಿ ಡೋಲೋ ದಿಂದ ಹಿಡಿದು ಕರಾಟೆ ವರೆಗೂ
ಏನು, ಏಕೆ, ಹೇಗೆ ಎಂಬ ಎಲ್ಲ ಮಾಹಿತಿ ಅಂಗೈಯಲ್ಲೇ ಲಭ್ಯ. ಮಾಹಿತಿ ಇದ್ದವರು ರೋಗ ಭಾದೆಯ ಉಪಶಮನವನ್ನು
ಕಂಡುಕೊಳ್ಳಬಲ್ಲರು. ಇಲ್ಲವಾದರೆ ಡೋಲೋ ನುಂಗಿ ನುಂಗಿ ತಾವು ಸಾಯುವುದಲ್ಲದೇ, ಕರಾಟೆ ಹೊಡೆದು
ಹೊಡೆದು ಬೆಳೆಗಳನ್ನೂ ಸಾಯಿಸಬಲ್ಲರು (ತಮಾಷೆಗಷ್ಟೇ). ತಮ್ಮ ಆರೋಗ್ಯದೊಡನೆ ಬೆಳೆಗಳ ಆರೋಗ್ಯವನ್ನೂ
ಕಾಪಾಡುವ ದೃಷ್ಟಿಯಿಂದ ಅವುಗಳ ಶರೀರದ ರೂಪ ರಚನೆ ಕಾರ್ಯ ನಿರ್ವಹಣೆ ಬಗ್ಗೆ ಕೃಷಿಕರು ಸ್ವಲ್ಪವಾದರೂ
ತಿಳಿದಿದ್ದರೆ ಒಳ್ಳೆಯದಲ್ಲವೇ. ಹಾಗಾಗಿ ಸಸ್ಯಗಳ ಫಿಸಿಯಾಲಜಿ-ಅನಾಟಮಿ. |
ಭಾರತದ ಕೃಷಿ ವಿಜ್ಞಾನದ ಇತಿಹಾಸವನ್ನು ಹಸಿರುಕ್ರಾಂತಿಯ
ಪೂರ್ವ-ಉತ್ತರ ಭಾಗವೆಂದು ಎರಡು ಕಾಲಾವಧಿಯಾಗಿ ಗುರುತಿಸಬಹುದೇನೋ. ದೇಶಾದ್ಯಂತ ವೈಜ್ಞಾನಿಕ ಕೃಷಿಯ
ಪರಿಕಲ್ಪನೆ ಗರಿಗೆದರಿದ ಸಂಧಿಕಾಲವದು. ಪರಿಣಾಮ, ತೀರಾ ಕೀಳು ಮಟ್ಟದಲ್ಲಿದ್ದ ಆಹಾರ ಉತ್ಪಾದನೆ ಪವಾಡವೆಂಬಂತೆ
ಪ್ರಗತಿಯಾಯಿತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಆಹಾರ ಉತ್ಪಾದನೆಯೆನೋ ಹೆಚ್ಚಾದರೂ ನೀರು ಮಣ್ಣು
ನೈಸರ್ಗಿಕ ಸಂಪನ್ಮೂಲಗಳು ಬರಿದಾಗುತ್ತಿರುವುದು, ಹವಾಮಾನ ಬದಲಾವಣೆಯಂತ ಹೊಸ ಸಮಸ್ಯೆಗಳನ್ನು ಕೃಷಿ
ಕ್ಷೇತ್ರ ಎದುರಿಸುತ್ತಿದೆ. ಪರಿಹಾರಕ್ಕಾಗಿ ಗುಣಮಟ್ಟದ ಬೀಜ, ಗೊಬ್ಬರ, ಕೀಟನಾಶಕ, ಹೈಬ್ರೀಡ್ ನಂತ
ಹೊಸ ತಂತ್ರಜ್ಞಾನಗಳನ್ನು ಕೊಡಮಾಡಿದ ಮೂಲ ವಿಜ್ಞಾನದ (ಬೇಸಿಕ್ ಸೈನ್ಸ್) ಮೊರೆ ಹೋಗುವ ಸಮಯವಾಗಿದೆ.
ಕೃಷಿಯಷ್ಟೇ ಅಲ್ಲ ಇಂದಿನ ವಿಜ್ಞಾನ-ತಂತ್ರಜ್ಞಾನ
ಕ್ಷೇತ್ರವನ್ನು ಗಮನಿಸಿ. ದೊಡ್ಡ ದೊಡ್ಡ ಉಪಗ್ರಹ ಉಡಾವಣೆ ಮಾಡಿದರೂ ಪರಮಾಣು-ಕಣಗಳೆನ್ನುತ್ತಾ ಮೂಲ
ಭೌತ-ರಸಾಯನಶಾಸ್ತ್ರದತ್ತ ನಾವು ಸಾಗುತ್ತಿದ್ದೇವೆ; ಎಂತೆಂತಹದೋ ಮಹಾಮಾರಿಗಳನ್ನು ಗುಣಪಡಿಸಿದ ವೈದ್ಯಕೀಯ
ವಿಜ್ಞಾನ ಡಿ.ಎನ್.ಎ, ಜೀವಕೋಶ ಎಂದು ಮೂಲ ಜೀವಶಾಸ್ತ್ರದತ್ತ ಮುಖಮಾಡಿದೆ; ಸೂಪರ್ ಕಂಪ್ಯೂಟರ್-ರೋಬೋಟ್
ಕಂಡು ಹಿಡಿದ ಮೇಲೂ ಮೂಲ 0-1 ಬೈನರಿ ಗಣಿತದತ್ತ ತಂತ್ರಜ್ಞಾನ ಹೊರಳಿದೆ. ಕೃಷಿ ವಿಜ್ಞಾನವಂತೂ ಭೌತಶಾಸ್ತ್ರ-ರಸಾಯನಶಾಸ್ತ್ರ-ಜೀವಶಾಸ್ತ್ರಗಳ
ಮೂಲ ಕಲ್ಪನೆಗಳ ಮೇಲೆ ನಿಂತಿರುವ ಪ್ರಾಯೋಗಿಕ ವಿಜ್ಞಾನ (ಅಪ್ಲೈಡ್ ಸೈನ್ಸ್). ಹೀಗಿರುವಾಗ ಮೂಲವಿಜ್ಞಾನ
ವಿಜ್ಞಾನಗಳಿಗಷ್ಟೇ ಸೀಮಿತವಾಗಿರದೇ ರೈತರನ್ನೂ ತಲುಪುವ ಅನಿವಾರ್ಯತೆಯಿದೆ. ‘ಬೆಳೆ’ ಎನ್ನುವುದು ‘ಬೆಳೆ’ಯಾಗುವ
ಮುಂಚೆ ‘ಸಸ್ಯ’ವೇ ಅಲ್ಲವೇ! ಹಾಗಾಗಿ ಕೃಷಿ ಮಾಡುವ ಮುನ್ನ ಸಸ್ಯಶಾಸ್ತ್ರವನ್ನು ತಿಳಿಯುವುದು ಜಾಣತನ.
ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ಕಂತುಗಳಲ್ಲಿ ಕೃಷಿವಿಜ್ಞಾನಕ್ಕೆ
ಮೂಲವಾದ ಸಸ್ಯಶಾಸ್ತ್ರ, ವಿಶೇಷವಾಗಿ ಬೆಳೆಗಳ ಅಂಗರಚನಾಶಾಸ್ತ್ರ ಮತ್ತು ಶರೀರ ಶಾಸ್ತ್ರದ ಬಗ್ಗೆ ಗಮನಿಸೋಣ.
ಕೃಷಿಕರಿಗೇಕೆ
ಬೇಕು ಅನಾಟಮಿ ಫಿಸಿಯಾಲಜಿ
ನೀವು ನರ್ಸರಿಗೆ ಹೋಗಿ ನಾಲ್ಕಾರು ಹಲಸಿನ ಸಸಿಯನ್ನು
ತರುತ್ತೀರಿ ಅಂದುಕೊಳ್ಳೋಣ. ಅಂಗೈ ಅಗಲದ ಪಾಲಿಬ್ಯಾಗ್ ನಲ್ಲಿರುವಂತ ವಿವಿಧ ತಳಿಯ ಪುಟ್ಟ ಕಸಿ ಸಸ್ಯಗಳು.
ತಂದವರು ಹೇಗಾದರೂ ಚಿಕ್ಕ ಗಿಡಗಳೆಂದು ಅಲ್ಲೇ ಮನೆ ಹಿಂದೆ ಮಣ್ಣು ಕೆರೆದು ಹತ್ತಡಿ ಅಂತರದಲ್ಲಿ ನೆಡುತ್ತೀರಿ.
ನೆಡುವಾಗ ಈ ಅಂತರ ಸಾಕಷ್ಟಾಯಿತು ಅನಿಸುತ್ತದೆ. ಮೇಲಿಂದ ಕಸಿ ಸಸಿಗಳು ಗಿಡ್ಡಕ್ಕೆ ಬೆಳೆಯುತ್ತವೆಂಬುದು
ನಿಮ್ಮ ಕಲ್ಪನೆ.
ಈ ನಿಮ್ಮ ಕಲ್ಪನೆಗಳೆಲ್ಲಾ ಸುಳ್ಳಾಗಲು ಹೆಚ್ಚು ಕಾಲ
ಬೇಡ. ಸಸಿಗಳು ನಿಧಾನಕ್ಕೆ ಬೃಹದಾಕಾರ ಪಡೆಯುತ್ತಾ ಸಾಗುತ್ತವೆ. ಉದ್ದ ಅಗಲ ವ್ಯಾಪಿಸಿ ಪಕ್ಕದ ಗಿಡಗಳಿಗೆ
ತಾಗುವಂತೆ ದಟ್ಟವಾಗಿ ಬೆಳೆಯುತ್ತವೆ. ಈಗ ಹತ್ತಡಿ ಅಲ್ಲ ಇಪ್ಪತ್ತಡಿ ಅಂತರ ಬೇಕಿತ್ತೇನೋ ಅನ್ನಿಸುತ್ತದೆ.
ತೀರಾ ಮೇಲಕ್ಕೆ ನೆಟ್ಟಿದ್ದರಿಂದ, ಜೊತೆಗೆ ಮಣ್ಣು ಕೊಚ್ಚಿಹೋಗಿದ್ದರಿಂದ ಗಟ್ಟಿಯಾದ ಆಧಾರವಿಲ್ಲದೇ
ಮರ ಬಾಗುತ್ತದೆ. ಆಗ ಎರಡಡಿ ಅಗಲ ಆಳದ ಗುಂಡಿಯನ್ನಾದರೂ ತೆಗೆಯಬೇಕಿತ್ತೇನೋ ಅನ್ನಿಸುತ್ತದೆ. ಬೆಳವಣಿಗೆ
ಚೆನ್ನಾಗಿದ್ದರೂ ಕಾಯಿಯ ಸುದ್ದಿಯಿಲ್ಲ! ಒಂದೆರಡು ಕಾಯಿ ಕಚ್ಚಿದರೂ ಕೆಲವೇ ದಿನಗಳಲ್ಲಿ ಅವು ಉದುರಿ
ಮಾಯ! ಕೆಲವೇ ಮರವಾಗಿದ್ದರೆ ಇಂತಹ ಸಮಸ್ಯೆಯನ್ನು ಹೇಗಾದರೂ ದೂಡಬಹುದು. ಆದರೆ ಇದೇ ಬೆಳೆಯನ್ನು ವಾಣಿಜ್ಯಿಕವಾಗಿ
ಬೆಳೆಯಬೇಕೆಂದಾಗ !?
ಕಸಿ ಗಿಡಗಳೆಂದರೆ ಕುಬ್ಜವೇ ಆಗಿರಬೇಕೆಂದಿಲ್ಲ, ಅದು
ತಳಿ ನಿರ್ಧರಿತ; ಹಲಸು ಬೃಹತ್ತಾಗಿ ಬೆಳೆವ ಬೆಳೆ; ಆಳವಾದ ಬೇರುಗಳುಳ್ಳ
ಈ ಸಸ್ಯಕ್ಕೆ ಆಳವಾದ ಗುಣಿ ತೆಗೆದರೆ ಒಳ್ಳೆಯದು; ಗಿಡದಿಂದ ಗಿಡಕ್ಕೆ ಸರಿಯಾದ ಅಂತರ ಕೊಡದಿದ್ದಲ್ಲಿ
ಕೊಂಬೆಗಳ ಹರವು ದಟ್ಟವಾಗಿ ಸೂರ್ಯನ ಬೆಳಕಿನ ಕೊರತೆಯಾಗಿ ಹೂವು ಬಿಡುವ ಪ್ರಮಾಣ ಕಡಿಮೆಯಾಗುತ್ತದೆ; ನಾವು ಆರಿಸಿದ ತಳಿ ನಮ್ಮ ಪ್ರದೇಶಕ್ಕೆ ಸೂಕ್ತವೇ, ನಮ್ಮ
ಮಳೆ ಬಿಸಿಲಿಗೆ ಕಾಯಿಯೆಲ್ಲಾ ಉದುರಿದವೇ, ಅಥವಾ ಯಾವುದೋ ರೋಗ ಕೀಟದ ಭಾದೆಯಿಂದಲೋ ಹೀಗೆ ಹಲವಾರು ಆಯಾಮದಿಂದ
ಯೋಚಿಸಿ ಕೃಷಿ ಮಾಡಬೇಕಾಗುತ್ತದೆ. ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಇರದ ಹೊಸ ಬೆಳೆಯೊಂದನ್ನು ಪ್ರಾಯೋಗಿಕವಾಗಿ
ಬೆಳೆಯಲು ಆಯ್ಕೆ ಮಾಡಿಕೊಂಡಾಗ ಸಮಸ್ಯೆ ಉಂಟಾದರೆ ಸಮಸ್ಯೆಯ ಮೂಲವನ್ನು ಮೊದಲು ಅರಿಯಬೇಕಾಗುತ್ತದೆ.
ಆಗ ಸಹಾಯಕ್ಕೆ ಬರುವುದು ‘ಅನಾಟಮಿ ಮತ್ತು ಫಿಸಿಯಾಲಜಿ’.
ನಮಗೆ ತೋಚಿದಂತೆ ಬೆಳೆ ಬೆಳೆಯುವುದಕ್ಕೂ, ಬೆಳೆಗಳ
ಅವಶ್ಯಕತೆಯನ್ನು ಅರಿತುಕೊಂಡು ಅವುಗಳ ಬೆಳವಣಿಗೆಗೆ ಬೆಂಬಲವಾಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಇದೆರಡು ಸೂಕ್ಷ್ಮ ವಿಚಾರದ ಮಧ್ಯೆ ಇರುವ ತೆಳುವಾದ
ಪದರವೇ ವೈಜ್ಞಾನಿಕ ಕೃಷಿ. ಈ ವೈಜ್ಞಾನಿಕ ಕೃಷಿಯ ಬೆನ್ನೆಲುಬು ಮೂಲ ವಿಜ್ಞಾನ. ಈ ನಿಟ್ಟಿನಲ್ಲಿ ಸಸ್ಯಗಳ
ಶರೀರದ ರಚನೆ ಬಗ್ಗೆ ತಿಳಿಸುವ ಅಂಗರಚನಾಶಾಸ್ತ್ರ (ಅನಾಟಮಿ) ಮತ್ತು ಸಸ್ಯಗಳ ಶರೀರದ ಕಾರ್ಯನಿರ್ವಹಣೆ
ಬಗ್ಗೆ ತಿಳಿಸುವ ಶರೀರಕ್ರಿಯಾಶಾಸ್ತ್ರ (ಫಿಸಿಯಾಲಜಿ) ಮಾಹಿತಿ ಮುಖ್ಯವಾದದ್ದು. ಮೊಳಕೆಯಿಂದ ಮುಪ್ಪಾಗುವವರೆಗಿನ
ಬೆಳೆಯ ಸಂಪೂರ್ಣ ಜೀವನವನ್ನು ಅರ್ಥೈಸಿಕೊಳ್ಳುವ ಮೂಲಕ ಅವುಗಳ ಉತ್ಪಾದಕತೆಯನ್ನು ಉತ್ತಮಗೊಳಿಸಲು ಈ
ಮಾಹಿತಿ ಸಹಾಯಕ.
ಅನಾಟಮಿ ಮತ್ತು ಫಿಸಿಯಾಲಜಿಯ ಮಾಹಿತಿ ಈ ಕೆಳಗಿನ ಕೆಲ ಸಂದರ್ಭದಲ್ಲಿ ಉಪಯುಕ್ತವಾಗಬಹುದು
- ಒಂದು ಪ್ರದೇಶ ಮತ್ತು ವಾತಾವರಣಕ್ಕೆ ಸೂಕ್ತ ಬೆಳೆ, ಸರಿಯಾದ ಪ್ರಭೇದವನ್ನು ಆಯ್ಕೆ ಮಾಡಲು
- ಸಸ್ಯಗಳನ್ನು ನೆಡುವ ಆಳ, ಅಂತರ ಮತ್ತು ಚಾಟನಿ ಮಾಡುವ ತಂತ್ರಗಳನ್ನು ಅನುಷ್ಠಾನಗೊಳಿಸಲು
- ಬೆಳೆಗಳ ಬೆಳವಣಿಗೆ ಹಂತ ಆಧರಿಸಿ ಪೋಷಕಾಂಶ ನೀಡಬೇಕಾದ ಪ್ರಮಾಣ, ಸಮಯ, ಪದ್ಧತಿ, ಪುನರಾವರ್ತನೆಯನ್ನು ಸಮರ್ಥವಾಗಿ ನಿರ್ಧರಿಸಲು
- ಕೀಟ ರೋಗ ಮತ್ತು ಪೋಷಕಾಂಶ ಕೊರತೆಯ ವ್ಯತ್ಯಾಸ ಗುರುತಿಸಲು
- ಕೀಟ ರೋಗ ತಡೆಗಟ್ಟುವ ಸಮರ್ಥ ನಿಯಂತ್ರಣಾ ತಂತ್ರಗಳನ್ನು ಅಳವಡಿಸಿಕೊಳ್ಳಲು
- ಬೆಳೆಗಳ ಬೇರಿನ ರಚನೆ ಕಾರ್ಯ ನಿರ್ವಹಣೆ ಅರ್ಥ ಮಾಡಿಕೊಂಡು ಸಮರ್ಥ ನೀರಾವರಿ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಉತ್ತಮಗೊಳಿಸಲು ಮತ್ತು ನೀರಾವರಿ ವೇಳಾಪಟ್ಟಿಯನ್ನು ಹೊಂದಿಸಲು
- ಹೂವು, ಬೀಜ, ಕಾಯಿ, ಹಣ್ಣುಗಳ ಬೆಳವಣಿಗೆ ಆಧರಿಸಿ ಕೊಯ್ಲಿನ ಸಮಯವನ್ನು ನಿಗದಿಪಡಿಸಲು
- ಹೆಚ್ಚು ತಾಳಿಕೆ ಬರುವಂತೆ ಫಸಲಿನ ಕೊಯ್ಲೋತ್ತರ ನಿರ್ವಹಣೆಗೆ
- ಮಣ್ಣು, ನೀರು, ಜೀವ ವೈವಿಧ್ಯತೆ, ಸಂಪನ್ಮೂಲಗಳ ದುರ್ಬಳಕೆ ತಡೆಯಲು
- ರಾಸಾಯನಿಕ ಗೊಬ್ಬರ, ಕಳೆನಾಶಕ, ಕೀಟನಾಶಕಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡಲು
- ಗಾಳಿ, ಬೆಳಕು, ಉಷ್ಣತೆ, ಆರ್ದ್ರತೆಗೆ ತಕ್ಕಂತೆ ಬೆಳೆಗಳ ವರ್ತನೆ ಗಮನಿಸಿ ಉರಿ ಬಿಸಿಲು, ಕೊರೆವ ಚಳಿ, ಅತಿವೃಷ್ಟಿ, ಹವಾಮಾನ ವೈಪರೀತ್ಯಗಳನ್ನು ದಕ್ಷವಾಗಿ ಎದುರಿಸಲು
- ಕೃಷಿಯಿಂದಾಗಿ ಪರಿಸರದ ಮೇಲಾಗುತ್ತಿರುವ ಋಣಾತ್ಮಕ ಪರಿಣಾಮಗಳನ್ನು ದೂರವಾಗಿಸಿ ಸುಸ್ಥಿರ ಕೃಷಿ ಪದ್ಧತಿ ಪಾಲಿಸಲು
ಇಷ್ಟಕ್ಕೆ ಸೀಮಿತವಾಗದೆ ಇನ್ನೂ ಹಲವಾರು ಸನ್ನಿವೇಶಗಳಲ್ಲಿ
ಅಂಗರಚನಾಶಾಸ್ತ್ರ ಮತ್ತು ಶರೀರಕ್ರಿಯಾಶಾಸ್ತ್ರದ ಮಾಹಿತಿ ಪ್ರಯೋಜನವಾಗುತ್ತದೆ. ಆಧುನಿಕ ಬೇಸಾಯದಲ್ಲಂತೂ
ಇದರ ಕೊಡುಗೆ ಮಹತ್ವದ್ದು. ಅಂತಹ ವಿಷಯಗಳ ಬಗ್ಗೆ ತಿಳಿಯುತ್ತಾ ಮಾಹಿತಿಯ ಪ್ರಾಯೋಗಿಕ ಉಪಯುಕ್ತತೆಯನ್ನು
ಮುಂದೆ ವಿವರವಾಗಿ ನೋಡೋಣ.
ಬೀಜ
ಮೊದಲೋ ಸಸ್ಯ ಮೊದಲೋ
ಸಸ್ಯಶಾಸ್ರ್ತದ ವಿಭಾಗಗಳಾದ ಅನಾಟಮಿ ಮತ್ತು ಫಿಸಿಯಾಲಜಿಯ
ವ್ಯಾಪ್ತಿ ತುಂಬಾ ದೊಡ್ಡದು. ತುದಿ ಬುಡವಿಲ್ಲದ ವ್ಯೂಹದಂತೆ ಒಂದಕ್ಕೊಂದು ಬೆಸೆದುಕೊಂಡು ಸಂಕೀರ್ಣವಾಗಿ
ಸಾಗುವ ಅಧ್ಯಯನವಿದು. ಹಾಗಾಗಿ ಈ ಲೇಖನವನ್ನು ಎಲ್ಲಿಂದ ಪ್ರಾರಂಭಿಸಬೇಕೆಂದು ಗೊಂದಲ ಉಂಟಾದಾಗ ಹೊಳೆದಿದ್ದು
ಮೇಲಿನ ಪ್ರಶ್ನೆ. ಮೇಲ್ನೋಟಕ್ಕೆ ತಮಾಷೆಯೆನಿಸುವ ಈ ಸವಾಲಿಗೆ ತುಂಬಾ ಗಂಭೀರವಾದ ಜವಾಬಿದೆ. ಸಸ್ಯ ಎಂಬ
ಜೀವಿಯೊಂದರ ವಿಕಸನ, ಅದು ಬೆಳೆಯಾಗಿ ಪರಿವರ್ತನೆಯಾದ ಕುತೂಹಲಕಾರಿ ಸಂಗತಿಯನ್ನು ಇದು ತಿಳಿಸುತ್ತದೆ.
ಈ ಭೂಮಂಡಲದಲ್ಲಿ ಜೀವ ಉಗಮವಾಗಿದ್ದು ಹೇಗೆಂಬ ಪ್ರಶ್ನೆಗೆ
ಉತ್ತರ ಇನ್ನೂ ಸಿಕ್ಕಿಲ್ಲ. ಜೈವಿಕ ಕಣಗಳು ಸಂಘಟನೆಯಾಗಿ ಏಕಕೋಶಿಗಳಿಂದ ಜೀವ ಉಗಮವಾಯಿತೆಂದು, ಮೊದಲು
ನೀರಿನಲ್ಲಿ ಉಗಮವಾದ ಜೀವಿಗಳು ವಿಕಸನವಾಗಿ ನೆಲ ಸೇರಿದವು ಎನ್ನುವುದು ಪ್ರಸ್ತುತ ಸಿದ್ದಾಂತ.
·
ನೀರಲ್ಲಿ
ಕಂಡುಬರುವ ಏಕಕೋಶೀಯ ಹಸಿರು ಪಾಚಿಗಳು ಸಸ್ಯಗಳ ಪೂರ್ವಜರಾಗಿರಬೇಕು; ಕಾರಣ ಇವುಗಳು ಹೊಂದಿರುವ ಹಸಿರು
ಹರಿತ್ತು (ಕ್ಲೋರೋಫಿಲ್) ಮತ್ತು ನೀರಲ್ಲಷ್ಟೇ ಅಲ್ಲದೇ ನೆಲದಲ್ಲೂ ಹಾವಸೆಯಾಗಿ ಬೆಳೆಯಬಲ್ಲ ಸಾಮರ್ಥ್ಯ.
ಇವುಗಳಿಂದ ಬಹುಕೋಶಿಗಳ ಬೆಳವಣಿಗೆಯಾಗಿ ಯಾವಾಗ ನೀರು-ಆಹಾರ ಸಾಗಣೆಗೆ ವಿಶೇಷ ನಾಳದ ಸಂಪರ್ಕ ಹೊಂದಿದವೋ
ಅಂದು ಸಸ್ಯದ ಉದ್ಭವವಾಗಿರಬೇಕು.
·
ಮೊದಲು
ವಿಕಸನವಾಗಿದ್ದು ಸರಳ ನಾಳದ ರಚನೆ ಹೊಂದಿದ್ದ, ಬೇರು-ಕಾಂಡಗಳೆಂಬ ನಿರ್ದಿಷ್ಟ ರಚನೆಯಿಲ್ಲದ ‘ಬ್ರಯೋಫೈಟ್’ಗಳು;
ಸರಳ ಉದಾಹರಣೆ ನರ್ಸರಿಗಳಲ್ಲಿ ಮೀಡೀಯಾ ಆಗಿ ಬಳಸುವ ಸ್ಪಾಗ್ನಮ್ ಮಾಸ್
·
ನಂತರ
ವಿಕಸನವಾಗಿದ್ದು ಬೇರು-ಕಾಂಡಗಳನ್ನು ಹೊಂದಿದ, ಆದರೆ ಹೂಬಿಡದ ‘ಟೆರಿಡೋಫೈಟ್’ಗಳು; ಸರಳ ಉದಾಹರಣೆ ಅಲಂಕಾರಿಕವಾಗಿ
ಬಳಸುವ ಫರ್ನ್/ಜರೀ ಗಿಡಗಳು, ಅಜೋಲ್ಲಾ,
·
ನಂತರ
ವಿಕಸನವಾಗಿದ್ದು ಗಟ್ಟಿ ಬೇರು-ಕಾಂಡ ಉಳ್ಳ, ಬೀಜ ಹೊಂದುವ, ಆದರೆ ಹೂಬಿಡದ ‘ಜಿಮ್ನೋಸ್ಪರ್ಮ್’ಗಳು
(ಚೂಪನೆಯ ಎಲೆಯ ಸೂಚಿಪರ್ಣಿಗಳು); ಸರಳ ಉದಾಹರಣೆ ಅಲಂಕಾರಿಕವಾಗಿ ಬಳಸುವ ಕ್ರಿಸ್ಮಸ್ ಮರ (ಆರುಕೆರಿಯಾ),
ಸೈಕಸ್, ಪೀಠೋಪಕರಣಗಳ ನಿರ್ಮಾಣದಲ್ಲಿ ಬಳಕೆಯಲ್ಲಿರುವ ದೇವದಾರು, ಪೈನ್ ಇತ್ಯಾದಿ
·
ನಂತರ
ವಿಕಸನವಾಗಿದ್ದು ನಿರ್ದಿಷ್ಟ ಬೇರು-ಕಾಂಡ, ಹೂವು, ಬೀಜ, ಸಂಕೀರ್ಣ ನಾಳದ ವ್ಯವಸ್ಥೆ ಹೊಂದಿರುವ ‘ಆಂಜಿಯೋಸ್ಪರ್ಮ್’ಗಳು;
ಉದಾಹರಣೆ ಇಂದು ನಾವು ಬೆಳೆಯುವ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು
ಹೀಗೆ ಹಂತಹಂತವಾಗಿ ನಡೆದ ವಿಕಸನದಿಂದಾಗಿ 42 ದಶಲಕ್ಷ
ವರ್ಷಗಳ ಹಿಂದೆ ಮೊದಲ ಸಸ್ಯವನ್ನು ಕಾಣಬೇಕಾಯಿತಂತೆ. ಆಂಜಿಯೋಸ್ಪರ್ಮ್ ಗಳು ಹುಟ್ಟಿ 13-14 ದಶಲಕ್ಷ
ವರ್ಷಗಳಾಗಿರಬೇಕು (ಮೊದಲ ಮಾನವ ಹುಟ್ಟಿದ್ದು 2-3 ಲಕ್ಷ ವರ್ಷದ ಹಿಂದೆ). ಈ ಸಸ್ಯಗಳು ಬೆಳೆಯಾಗಿ ಪರಿವರ್ತನೆಯಾಗಿದ್ದು
ಕೃಷಿ ಆರಂಭವಾದಾಗ, ಕೇವಲ 10-12 ಸಾವಿರ ವರ್ಷಗಳ ಹಿಂದೆ!!! ನೈಸರ್ಗಿಕವಾಗಿ ಕೋಟಿ-ಲಕ್ಷ ವರ್ಷಗಳು
ಬೇಕಾಗಿದ್ದ ವಿಕಸನ ಕ್ರಿಯೆಯನ್ನು ಮಾನವ ಸಾವಿರ ವರ್ಷಕ್ಕಿಳಿಸಿದ. ಇಂದಿನ ಮುಂದುವರಿದ ತಂತ್ರಜ್ಞಾನ
ಈ ಕಾಲಾವಧಿಯನ್ನು ನೂರು-ಹತ್ತು ವರ್ಷಕ್ಕೂ ಇಳಿಸಬಲ್ಲದು (ಈ ತಂತ್ರಜ್ಞಾನದ ಹಿಂದಿರುವುದೂ ಮೂಲ ವಿಜ್ಞಾನವೇ!)
ಆಂಜಿಯೋಸ್ಪರ್ಮ್ ಸಸ್ಯಗಳನ್ನು ಬೇರೆ ಬೇರೆ ರೀತಿ
ವರ್ಗೀಕರಣ ಮಾಡಬಹುದಾದರೂ ಕೃಷಿ ದೃಷ್ಟಿಯಿಂದ ಎರಡು ಮುಖ್ಯ ವರ್ಗಗಳಿವೆ– ಏಕದಳ ಮತ್ತು ದ್ವಿದಳ. ಬಹುತೇಕರಿಗೆ
ಮೇಲ್ನೋಟಕ್ಕೆ ಏಕದಳವೆಂದರೆ ಹುಲ್ಲು ಸಸ್ಯಗಳು, ಅವುಗಳ ಬೀಜದಲ್ಲಿ ಒಂದೇ ಪಾಲಿರುತ್ತದೆ; ದ್ವಿದಳವೆಂದರೆ
ಮರಗಳು, ಅವುಗಳ ಬೀಜದಲ್ಲಿ ಎರಡು ಪಾಲಿರುತ್ತವೆಂದು ತಿಳಿದಿರುತ್ತದೆ. ಶರೀರ ರಚನೆಯಲ್ಲಿ, ವಾತಾವರಣಕ್ಕೆ
ಒಗ್ಗಿಕೊಳ್ಳುವ ರೀತಿಯಲ್ಲಿ ಏಕದಳಕ್ಕೂ-ದ್ವಿದಳಕ್ಕೂ ಗಮನಾರ್ಹ ವ್ಯತ್ಯಾಸವಿದೆ. ಇಡೀ ಲೇಖನದ ತುಂಬಾ
ಏಕದಳಕ್ಕೂ-ದ್ವಿದಳಗಳು ಆಗಾಗ ಇಣುಕುತ್ತಿರುತ್ತವೆ. ಮುಂದಿನ ಕಂತುಗಳಲ್ಲಿ ಅವುಗಳನ್ನು ಒಟ್ಟಾಗಿಸಿ
ಮತ್ತೆ ಚರ್ಚಿಸೋಣ.
ಟಿಪ್ಪಣಿ
ಸಸ್ಯಗಳಲ್ಲಿ (ನಂತರ ಬೆಳೆಗಳಲ್ಲಿ) ವಾತಾವರಣಕ್ಕೆ
ಹೊಂದಿಕೊಳ್ಳಬಲ್ಲ ಸಾಮರ್ಥ್ಯ, ಅದಕ್ಕೆ ತಕ್ಕ ಅಂಗಾಂಗ ರಚನೆಯಾಗಿದ್ದು ವಿಕಸನದ ಕಾರಣದಿಂದ. ನೀರಲ್ಲಿ
ಆರಾಮವಾಗಿ ಲಭ್ಯವಾಗುತ್ತಿದ್ದ ಪೋಷಕಾಂಶಗಳನ್ನು ಬಿಟ್ಟು ಗಾಳಿ-ಬೆಳಕಿಗಾಗಿ ಭೂಪ್ರದೇಶಕ್ಕೆ ಸಾಗಿದ
ಸಸ್ಯಗಳು ನೆಲದಿಂದ ಪೋಷಕಾಂಶ ಹೀರುವ ಕ್ರಿಯೆಗಾಗಿ ಬೇರು ಕಾಂಡಗಳನ್ನು ಹೊಂದಿದವು. ಹೂ ಬಿಟ್ಟರೆ ತನ್ನ
ಬೀಜಕ್ಕೊಂದು ಹಣ್ಣೆಂಬ ಕವಚವಾಯಿತು ಎಂಬುದಕ್ಕಾಗಿ ಆಂಜಿಯೋಸ್ಪರ್ಮ್ ಗಳಾದವು. ನಿಮ್ಮ ಮನೆಯ ಮಾವಿನ
ಮರ ಆಳವಾಗಿ ಬೇರು ಬಿಟ್ಟು, ನೀವು ಕೊಟ್ಟ ಗೊಬ್ಬರ ತಿಂದು, ಹೂ ಬಿಡುತ್ತಿದೆ, ಅದರ ಬೀಜವನ್ನು ನೀವು
ಮತ್ತೆ ಮೊಳಕೆಗೆ ಬಳಸುತ್ತಿದ್ದೀರೆಂದರೆ ಅದಕ್ಕೆ ಕಾರಣ ಸಸ್ಯ ವಿಕಸನ ಕ್ರಿಯೆಯಲ್ಲಿ ರೂಪುಗೊಂಡ ಶರೀರ,
ಶಾರಿರೀಕ ಕ್ರಿಯೆ.
ವಾತಾವರಣಕ್ಕೆ ತಕ್ಕಂತೆ ವಿಕಸನವಾಗುವ ಗುಣಗಳು ಸಸ್ಯಗಳ
ಉಳಿಯುವಿಕೆಗೆ ಅವಶ್ಯ. ಹಾಗಾಗಿ ಪ್ರತಿ ಪ್ರದೇಶದ ವಾತಾವರಣ ನಿರ್ಧರಿಸಿ ಸಸ್ಯಗಳು ತಮ್ಮ ಅಂಗರಚನೆ,
ಶರೀರ ಕ್ರಿಯೆಯಲ್ಲಿ ವ್ಯತ್ಯಾಸ ಮಾಡಿಕೊಂಡಿವೆ. ಇತರೇ ಹುಲ್ಲುಗಳಂತೇ ಇದ್ದರೂ ಭತ್ತವೇಕೆ ನೀರಲ್ಲಿ
ಮುಳಗಿದರೂ ಬದುಕಬಲ್ಲದು! ಇಂತಹ ವಿಶೇಷ ಗುಣಗಳು ದತ್ತವಾಗಿರುವುದು ವಾತಾವರಣಕ್ಕೆ ತಕ್ಕಂತೆ ವಿಕಸನವಾದಾಗ.
ಹಾಗಾಗಿ ನೀವು ವಿದೇಶದಿಂದ ಪರಿಚಿತವಾದ ಹೊಸ ಬೆಳೆಯನ್ನು ಬೆಳೆವ ಹುಮ್ಮಸ್ಸಿನಲ್ಲಿದ್ದರೆ ಅದು ಹುಟ್ಟಿ
ವಿಕಸನವಾದ ಪ್ರದೇಶದ ಬಗ್ಗೆ, ಅದರ ಅನಾಟಮಿ ಫಿಸಿಯಾಲಜಿಯ ಬಗ್ಗೆ ಹೋಮ್ ವರ್ಕ್ ಮಾಡಲೇಬೇಕು.
ಹೀಗೆ ಅನಾಟಮಿ ಫಿಸಿಯಾಲಜಿ ಎಂಬ ಪರಿಕಲ್ಪನೆ ಶುರುವಾಗುವುದು
ವಿಕಸನದ ಹಾದಿಯಿಂದ. ಕೃಷಿಗೆ ಬೇಕಾದ ಮೂಲವಿಜ್ಞಾದ ವಿಷಯವನ್ನು ಅನಾಟಮಿಯಿಂದ ಶುರುಮಾಡಿ ಮುಂದಿನ ಕಂತುಗಳಲ್ಲಿ
ಫಿಸಿಯಾಲಜಿ ವರೆಗೂ ನೋಡೋಣ.
|
ಕಾಫಿ ತೋಟದಲ್ಲಿ ನೆರಳಿಗಾಗಿ ನೆಡುವ ಸಿಲ್ವರ್
ಓಕ್ (ಗ್ರೆವೆಲ್ಲಿಯಾ) ಮತ್ತು ಗಾಳಿ ಗಿಡ (ಕ್ಯಾಸುರಿನಾ) ನೋಡಲು ಸೂಚಿಪರ್ಣಿಗಳಂತೆ ಕಂಡರೂ ಇವು
ನಿಜಕ್ಕೂ ಆಂಜಿಯೋಸ್ಪರ್ಮ್ ಗಳು. ವೇಗವಾದ ಬೆಳವಣಿಗೆ, ಚೂಪು ಎಲೆ, ಪೈನ್ ಕೋನ್ ಗಳಂತೆ ಕಾಣುವ
ಕಾಯಿಗಳಿಂದ ಒಂದು ಕ್ಷಣ ಇವು ಜಿಮ್ನೋಸ್ಪರ್ಮ್ ಗಳೇ ಎಂದು ಭ್ರಮೆ ಹುಟ್ಟಿಸದರೂ ಆಂಜಿಯೋಸ್ಪರ್ಮ್
ನಂತೆ ಶಾರಿರೀಕ ವ್ಯವಸ್ಥೆ ಹೊಂದಿರುವ ಸಸ್ಯಗಳು. ಆಸ್ಟ್ರೇಲಿಯಾದ ಪೂರ್ವ ಸಮುದ್ರ ತೀರದಲ್ಲಿ ಬೀಸುವ
ರಭಸವಾದ ಗಾಳಿಗೆ ತಡೆಯೊಡ್ಡಲು ಇವುಗಳ ಎಲೆ ಚೂಪವಾಗಿದೆ. ಅದೇ ಕಾರಣಕ್ಕೆ ‘ವಿಂಡ್ ಬ್ರೇಕರ್’ ಆಗಿ
ನಮಲ್ಲಿ ಪರಿಚಿತ. ಬರಡು ಮಣ್ಣು, ನೀರಿನ ಅಭಾವ ಎಂತದ್ದೇ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುವ ಈ
ಸಸ್ಯಗಳು ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರಗೊಳಿಸುವ ಗುಣ ಹೊಂದಿವೆ. ಆಳವಾದ ಬೇರು, ತೀವ್ರವಾಗಿ
ಬೆಳೆಯುವ, ಕತ್ತರಿಸಿದಷ್ಟೂ ಚಿಗುರುವ, ಕಡಿಮೆ ಜೀವಿತಾವಧಿ ಹೊಂದಿರುವ ಸಿಲ್ವರ್ ಓಕ್ ಸದ್ಯಕ್ಕೆ
ನಮ್ಮ ಫೇವರೆಟ್. ಆದರೂ ಫಿಸಿಯಾಲಜಿಯ ದೃಷ್ಟಿಯಿಂದ ರಕ್ತಬೀಜಾಸುರನಂತೆ ಹುಟ್ಟಿಕೊಳ್ಳುವ ಭಯವಿದೆ
(ಈಗಾಗಲೇ ಕೆಲವೆಡೆ ಇದು ಆಕ್ರಮಣಶೀಲವಾಗಿ ಸ್ಥಳೀಯ ವೈವಿಧ್ಯತೆಯನ್ನು ನಾಶ ಪಡಿಸಿದ್ದಿದೆ). ಇನ್ನು ಬೇರೆ ಲೋಕದವೇನೋ ಎನ್ನಿಸುವ ಅಲಂಕಾರಿಕ ಕ್ಯಾಕ್ಟಸ್,
ಕಳ್ಳಿಗಳು, ಡ್ರಾಗನ್ ಫ್ರುಟ್ ಕೂಡಾ ಆಂಜಿಯೋಸ್ಪರ್ಮ್ ಗಳು. |
ಸಸ್ಯಗಳ
ಅಂಗರಚನೆ - ಅನಾಟಮಿ
ಸಸ್ಯಗಳ ದೇಹದ ಆಂತರಿಕ ರಚನೆಗಳು, ಅಂದರೆ ಜೀವಕೋಶಗಳು
(cells); ಜೀವಕೋಶಗಳು ಸಂಘಟನೆಯಾಗಿ ರೂಪಿತವಾದ ಅಂಗಾಂಶಗಳು (tissues); ಅಂಗಾಂಶಗಳು ಸಂಘಟನೆಯಾಗಿ
ರೂಪವಾದ ಅಂಗಾಂಗ(organs) ವ್ಯವಸ್ಥೆಯನ್ನು ಅಭ್ಯಸಿಸುವ ವಿಜ್ಞಾನಕ್ಕೆ ಅಂಗರಚನಾಶಾಸ್ತ್ರ ಎನ್ನಲಾಗುತ್ತದೆ.
ವಿಜ್ಞಾನದ ಈ ಶಾಖೆ ಪ್ರಚಲಿತವಾದದ್ದು ಸೂಕ್ಷ್ಮದರ್ಶಕಗಳ ಅನ್ವೇಷಣೆಯಾದ ಮೇಲೆ. 1665ರಲ್ಲಿ ರಾಬರ್ಟ್
ಹುಕ್ ಎಂಬ ವಿಜ್ಞಾನಿ ಗಾಜಿನ ಬಾಟಲ್ ನ ಮರದ ಮುಚ್ಚಳ/ಕಾರ್ಕ್ ನ ತೆಳ್ಳನೆಯ ತುಂಡನ್ನು ತೆಗೆದು ಸೂಕ್ಷ್ಮದರ್ಶಕದ
ಅಡಿಯಲ್ಲಿಟ್ಟಾಗ ಕಂಡ ಕೋಣೆಕೋಣೆಯಂತ ರಚನೆಗೆ ಸೆಲ್ ಎಂಬುದಾಗಿ ಕರೆದ.
ಯಾವುದೇ ಪ್ರಾಣಿಯ ದೇಹದ ರಚನೆ ಹಾಗೂ ಕ್ರಿಯೆ ನಡೆಯುವುದು
ಸೆಲ್/ಜೀವಕೋಶದಲ್ಲಿ. ನಾವು ಉಸಿರಾಡುತ್ತಿದ್ದೆವೆಂದರೆ ಬರಿ ಶ್ವಾಸಕೋಶವಲ್ಲ, ದೇಹದ ಪ್ರತಿ ಜೀವಕೋಶವೂ
ಉಸಿರಾಟ ಕ್ರಿಯೆಯಲ್ಲಿ ತೊಡಗಿರುತ್ತವೆ; ದೇಹದಲ್ಲಿ ಆಹಾರ ಜೀರ್ಣವಾಗುವುದು ಬರೀ ಕರುಳಿನಲ್ಲಲ್ಲ ಬದಲಿಗೆ
ದೇಹದ ಪ್ರತೀ ಜೀವಕೋಶದಲ್ಲಿ. ನಮ್ಮ ಇಡೀ ದೇಹ ಹುಟ್ಟುವುದೇ ಅಂಡಾಣು-ವೀರ್ಯಾಣು ಗಳ ಸಮ್ಮಿಳನವಾದ ಝೈಗೋಟ್
ಎಂಬ ಏಕಕೋಶದಿಂದ. ಹಾಗೆಯೇ ಸಸ್ಯದ ಶಾರಿರೀಕ ಕ್ರಿಯೆಗಳೂ ಕೂಡಾ ಜೀವಕೋಶದಲ್ಲೇ ನಡೆಯುತ್ತವೆ. ಹಾಗೂ
ಆಂಜಿಯೋಸ್ಪರ್ಮ್ ಗಳು ಹುಟ್ಟುವುದೂ ಝೈಗೋಟ್ ಮಾದರಿಯ
ಏಕಕೋಶದಿಂದ.
ಸಸ್ಯ
ಜೀವಕೋಶ
ಆಯತಾಕಾರದ ಪೆಟ್ಟಿಗೆಯನ್ನು ಹೋಲುವ ಸಸ್ಯ ಜೀವಕೋಶದ
ಸೂಕ್ಷ್ಮ ಕೋಣೆಯೊಳಗೆ ದೊಡ್ಡ ಒಟ್ಟು ಕುಟುಂಬವೊಂದು ವಾಸಿಸುತ್ತದೆ ಎಂದರೆ ಆಶ್ಚರ್ಯವೆನಿಸುತ್ತದೆ.
ಎರಡು ಗೋಡೆಯ ಪದರ (ಕೋಶ ಭಿತ್ತಿ), ಒಳಗೆ ಜೀವರಸ, ಜೀವರಸದಲ್ಲಿ ತೇಲುವ ನ್ಯೂಕ್ಲಿಯಸ್ (ಸಸ್ಯಗಳ ಬೆಳವಣಿಗೆಯನ್ನು
ನಿರ್ದೇಶಿಸುವ ವಂಶವಾಹಿ ಇರುವುದು ಇದರಲ್ಲೇ), ರೈಬೋಸೋಮ್ಸ್ (ಪ್ರೋಟೀನ್ ಉತ್ಪತ್ತಿಯಾಗುವುದು ಇದರಲ್ಲೇ), ಮೈಟೊಕಾಂಡ್ರಿಯಾ (ಉಸಿರಾಟ ಎಂಬ ಶಕ್ತಿ ಉತ್ಪಾದನಾ ಕ್ರಿಯೆ
ನಡೆಯುವುದು ಇದರಲ್ಲೇ), ಕ್ಲೋರೋಪ್ಲಾಸ್ಟ್ (ಪತ್ರಹರಿತ್ತು ಕಂಡುಬರುವುದು ಇದರಲ್ಲೇ) ಮುಂತಾದ ಹತ್ತಾರು
ಅವಯವಗಳು ಸೇರಿ ಒಂದು ಜೀವಕೋಶ ರೂಪಗೊಳ್ಳುತ್ತದೆ. ಪ್ರತಿ ಜೀವಕೋಶಕ್ಕೂ ನಡುವೆ ‘ಪ್ಲಾಸ್ಮೋಡೆಸ್ಮಟಾ’
ಎನ್ನುವ ಕಾಲುವೆಯ ಸಂಪರ್ಕವಿದೆ. ಈ ಕಾಲುವೆಯಲ್ಲಿಯೇ ನೀರು, ಪೋಷಕಾಂಶ, ಹರಿಯುವುದು.
ಈ ಎಲ್ಲಾ ಅವಯವಗಳ ಸಹಯೋಗದೊಂದಿಗೆ ಒಂದೇ ಜೀವಕೋಶವೂ
ಸ್ವತಂತ್ರವಾಗಿ ಬದುಕುವ ತಾಕತ್ತು ಹೊಂದಿದೆ. ಆದರೆ ವಿಕಸನ ಕ್ರಿಯೆ ಬಹುಕೋಶಿಗಳಲ್ಲಿ ಸಂಕೀರ್ಣವಾದ
ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಾಗಾಗಿ ಒಂದೇ ತರಹದ ಜೀವಕೋಶಗಳು ಗುಂಪಾಗಿ ಅಂಗಾಂಶಗಳಾಗಿ ರೂಪಗೊಂಡು
ನಿರ್ದಿಷ್ಟ ಕೆಲಸವನ್ನು ನಿರ್ವಹಿಸಲು ತೊಡಗುತ್ತವೆ. ಸಸ್ಯದ ದೇಹವನ್ನು ಒಂದು ದೊಡ್ಡ ಕಂಪನಿ ಅಂದುಕೊಂಡರೆ
ಉದ್ಯೋಗಿಗಳನ್ನು ಜೀವಕೋಶಗಳಾಗಿಯೂ, ನಿರ್ದಿಷ್ಟ ಕೆಲಸ ನಿರ್ವಹಿಸುವ ಉದ್ಯೋಗಿಗಳ ಟೀಮ್ ಅನ್ನು ಅಂಗಾಂಶವಾಗಿಯೂ,
ಟೀಮ್ ಲೀಡರ್ ಅನ್ನು ಅಂಗವಾಗಿಯೂ ಹೋಲಿಸಬಹುದೇನೋ.
ಸಸ್ಯ
ಶರೀರದ ಪ್ರಮುಖ ಅಂಗಾಂಶಗಳು
ಆಯತಾಕಾರದ ಪೆಟ್ಟಿಗೆಗಳನ್ನು ಒಂದರ ಪಕ್ಕ ಒಂದನ್ನು
ಜೋಡಿಸಿದಂತೆ ಕಾಣುವುದು ಅಂಗಾಂಶ (ಜೇನುಗೂಡಿನ ಆಕಾರಕ್ಕೂ ಹೋಲಿಸಬಹುದು). ಒಂದೇ ಮೂಲದಿಂದ ಹುಟ್ಟಿದ,
ಒಂದೇ ರೀತಿಯ ಕೆಲಸ ನಿರ್ವಹಿಸುವ, ಒಂದೇ ರೂಪದ ಜೀವಕೋಶಗಳ ಗುಂಪನ್ನು ಅಂಗಾಂಶ ಎನ್ನಲಾಗುತ್ತದೆ. ಸಸ್ಯಗಳಲ್ಲಿ
ಈ ಕೆಳಗಿನಂತೆ ಅಂಗಾಂಶಗಳನ್ನು ವರ್ಗೀಕರಿಸಲಾಗಿದೆ.
1. ವರ್ಧನಾ ಅಂಗಾಂಶ – ಮೆರಿಸ್ಟಮೆಟಿಕ್ ಟಿಶ್ಯು
– ಅರ್ಥಾತ್ ಎಂದಿಗೂ ವರ್ಧಿಸುತ್ತಿರುವ, ಚಟುವಟಿಕೆಯಲ್ಲಿ ತೊಡಗಿರುವ ಜೀವಕೋಶಗಳ ಗುಂಪು. ಸಕ್ರಿಯವಾಗಿ
ದ್ವಿಗುಣಗೊಳ್ಳುತ್ತಾ ಹೊಸ ಹೊಸ ಜೀವಕೋಶಗಳನ್ನು ರೂಪಿಸುತ್ತಾ ಹೋಗುವುದೇ ಇವುಗಳ ಕೆಲಸ, ಒಂದು ರೀತಿ
ಜೀವಕೋಶ ಸೃಷ್ಟಿಸುವ ಫ್ಯಾಕ್ಟರಿ ಇದ್ದಂತೆ.
ಇಂತಹ ಅಂಗಾಂಶಗಳನ್ನು ಉದ್ದಕ್ಕೆ ಬೆಳೆಯುತ್ತಿರುವ
ಚಿಗುರಿನ ತುದಿಯಲ್ಲಿ ಮತ್ತು ಬೇರಿನ ತುದಿಯಲ್ಲಿ ಕಾಣಬಹುದು (ಅಪಿಕಲ್ ಮೆರಿಸ್ಟಮ್); ಕಾಂಡ ಅಥವಾ ಬೇರಿನ
ಹಿಗ್ಗುತ್ತಿರುವ ಹೊರಮೈ ಸುತ್ತ ಕಾಣಬಹುದು (ಲ್ಯಾಟರಲ್ ಮೆರಿಸ್ಟಮ್); ಕಾಂಡದ ಎರಡು ಗೆಣ್ಣುಗಳ ನಡುವೆ
ಕಾಣಬಹುದು (ಇಂಟರ್ ನೋಡಲ್ ಮೆರಿಸ್ಟಮ್) ಹಾಗೂ ಗೆಣ್ಣಿನ ಆಚೀಚೆ ಕಾಣಬಹುದು (ಇಂಟರ್ ಕ್ಯಾಲರಿ ಮೆರಿಸ್ಟಮ್)
ಹೀಗೆ ರೂಪಗೊಂಡ ಜೀವಕೋಶಗಳು ಮೊದಲು ಅಪಕ್ವವಾಗಿರುತ್ತವೆ.
ಇಂತದ್ದೇ ನಿರ್ದಿಷ್ಟ ಕೆಲಸವನ್ನು ಮಾಡಬೇಕೆಂದು ಅವುಗಳಿಗೆ ಗೊತ್ತಿರುವುದಿಲ್ಲ. ಸಸ್ಯಗಳಲ್ಲಿ ವಿಶೇಷವಾಗಿ
ಕಂಡು ಬರುವ ಗುಣವಿದು. ಮನುಷ್ಯ ಮತ್ತು ಪ್ರಾಣಿಗಳಿಗೆ ಈ ವರದಾನವಿಲ್ಲ. ಅಪಕ್ವ ಜೀವಕೋಶಗಳು ಸ್ವಲ್ಪ
ಸಮಯವಾದ ಮೇಲೆ ತಮ್ಮ ಸುತ್ತಲಿನ ಜೀವಕೋಶಗಳು ಮಾಡುತ್ತಿರುವ ಕೆಲಸವನ್ನು ಕಂಡು ತಾವೂ ಅದನ್ನೇ ಮಾಡಬೇಕೆಂದು
ಮೊದಲಾಗುತ್ತವೆ (ಈ ಕ್ರಿಯೆಯನ್ನು cell differentiation ಎನ್ನಲಾಗುತ್ತದೆ). ಪೂರ್ಣ ಪಕ್ವವಾಗಿ
ಶಾಶ್ವತ ಅಂಗಾಂಶಗಳಾಗುತ್ತವೆ. ಬಾಲ್ಯಾವಸ್ಥೆ ಕಳೆದು ಪ್ರೌಢಾವಸ್ಥೆ ಸೇರಿದಂತೆ.
2. ಶಾಶ್ವತ ಅಂಗಾಂಶಗಳು – ಪರ್ಮನೆಂಟ್ ಟಿಶ್ಯು – ಅರ್ಥಾತ್ ಇನ್ನೆಂದೂ
ಬಾಲ್ಯಕ್ಕೆ ಹಿಂದಿರುಗಲಾರದ ಜೀವನದ ಗುರಿ ಸಾಧಿಸಲು ಹೊರಟ ಪ್ರಬುದ್ಧ ಪ್ರೌಢ ಜೀವಕೋಶಗಳು. ಈ ಜೀವಕೋಶಗಳಿಗೆ
ಹೊಸ ಜೀವಕೋಶ ಸೃಷ್ಟಿಸುವ ಶಕ್ತಿಯೂ ಇರುವುದಿಲ್ಲ.
ಕೆಲ ಶಾಶ್ವತ ಅಂಗಾಂಶಗಳು ಸರಳ ರಚನೆ ಹೊಂದಿರುತ್ತವೆ
- ಹೂವು, ಎಲೆ, ಹಣ್ಣು, ಕಾಂಡದ ಒಳಭಾಗ, ಹೀಗೆ ಮೃದು ಭಾಗದಲ್ಲಿ ಕಂಡುಬರುವ ಪ್ಯಾರಂಕೈಮಾಗಳು; ಸಲ್ಪ
ಗಟ್ಟಿಯಾದ ಕಾಂಡ, ಎಲೆಯ ತೊಟ್ಟು, ಎಲೆಯ ಮಧ್ಯ ಸಾಗುವ ನಾಳಗಳಲ್ಲಿ ಕಂಡುಬರುವ ಕಾಲಂಕೈಮಾಗಳು; ಸಸ್ಯದ
ನಾರು, ಬೀಜದ ಗಟ್ಟಿ ಹೊರಮೈಯಲ್ಲಿ ಕಂಡುಬರುವ ಸ್ಕ್ಲಿರಂಕೈಮಾಗಳು. ಪ್ಯಾರಂಕೈಮಾಗಳು ಗಾಳಿ ತುಂಬಿದ
ಬಲೂನಿನಂತೆ ತಮ್ಮ ರೂಪವನ್ನು ತುಸು ಬದಲಾಯಿಸಿಕೊಂಡು ಏರಂಕೈಮಾಗಳಾಗುತ್ತವೆ. ಭತ್ತ, ತಾವರೆ, ಕಮಲಗಳಂತ
ನೀರಲ್ಲಿ ಮುಳುಗಿರುವ ಸಸ್ಯಗಳಲ್ಲಿ ಈ ವಿಶೇಷ ಜೀವಕೋಶಗಳಿರುತ್ತವೆ.
ಪ್ಯಾರಂಕೈಮಾಗಳ ಕೋಶಭಿತ್ತಿಯಲ್ಲಿ ಸೆಲ್ಯುಲೋಸ್ ಎಂಬ
ಸಂಯುಕ್ತವಿರುತ್ತದೆ. ಹಾಗಾಗಿಯೇ ಇವು ಮೃದು ಸ್ವಭಾವದವು. ಕಾಲಂಕೈಮಾಗಳ ಕೋಶಭಿತ್ತಿಯಲ್ಲಿ ಹೆಮಿಸೆಲ್ಯುಲೋಸ್
ಮತ್ತು ಪೆಕ್ಟಿನ್ ಇದ್ದರೆ ಸ್ಕ್ಲಿರಂಕೈಮಾಗಳ ಕೋಶಭಿತ್ತಿಯಲ್ಲಿ ಲಿಗ್ನಿನ್ ಇರುತ್ತದೆ. ಹಾಗಾಗಿ ಇವು
ಗಟ್ಟಿ ಸ್ವಭಾವದವು.
ಇನ್ನು ಕೆಲ ಶಾಶ್ವತ ಅಂಗಾಂಶಗಳು ಸಂಕೀರ್ಣ ರಚನೆ
ಹೊಂದಿರುತ್ತವೆ- ನೀರು ಸಾಗಿಸುವ ನಾಳ ಕ್ಸೈಲಮ್ ಮತ್ತು ಆಹಾರ ಸಾಗಿಸುವ ನಾಳ ಫ್ಲೋಯಮ್. ಇನ್ನು ಕೆಲ
ಶಾಶ್ವತ ಅಂಗಾಂಶಗಳು ವಿಶೇಷ ಕೆಲಸಕ್ಕೆ ರೂಪಿತವಾಗುತ್ತವೆ – ಮಕರಂದ ಬೀರುವ ನೆಕ್ಟರಿ ಗ್ರಂಥಿ; ಕೀಟಭಕ್ಷಕ
ಸಸ್ಯಗಳಲ್ಲಿ ಕಂಡುಬರುವ ಜೀರ್ಣಗ್ರಂಥಿ; ಸುಗಂಧದ್ರವ್ಯ ಸಸ್ಯಗಳಲ್ಲಿ ಎಣ್ಣೆ ಒಸರಿಸುವ ತೈಲ ಗ್ರಂಥಿ;
ಎಲೆಗಳ ಅಂಚಲ್ಲಿ ನೀರು ಒಸರಿಸುವ ಹೈಡಾತೋಡ್; ಹಲಸು, ಆಲ ಜಾತಿಯ ಸಸ್ಯಗಳಲ್ಲಿ ಮೇಣ ಒಸರಿಸುವ ಲ್ಯಾಟೆಕ್ಸ್
ಅಂಗಾಂಶ ಇತ್ಯಾದಿ.
ಅಂಗಾಂಶಗಳ
ವ್ಯವಸ್ಥೆ – ಟಿಶ್ಯು ಸಿಸ್ಟಮ್
ಈ ಮೇಲೆ ಹೇಳಿದ ಕೆಲ ಅಂಗಾಂಶಗಳು ಪೋಷಕಾಂಶ ಸಾಗಣೆಗೋ,
ನೀರು ಸಾಗಣೆಗೋ, ಭಾಷ್ಪವಿಸರ್ಜನೆಗೋ ಒಂದು ಕ್ರಿಯೆಯ ಸರಪಳಿಯಲ್ಲಿರುತ್ತವೆ. ಅಂಗಾಂಶಗಳ ಜಾಲ/ಸರಪಳಿಯ
ಈ ವ್ಯವಸ್ಥೆಯನ್ನು ಟಿಶ್ಯು ಸಿಸ್ಟಮ್ ಎನ್ನಬಹುದು.
1. ಸಸ್ಯಗಳ ಹೊರಮೈಯ ಅಂಗಾಂಶಗಳ ಜಾಲ ಅಥವಾ ಎಲೆ,
ಕಾಂಡ, ಬೇರುಗಳ ಹೊರಹೊದಿಕೆಯ ವ್ಯವಸ್ಥೆ (ಎಪಿಡರ್ಮಿಸ್): ವಾತಾವರಣಕ್ಕೆ ತೆರೆದುಕೊಂಡಿರುವ ಸಸ್ಯದ
ಹೊರಭಾಗವನ್ನು ಚರ್ಮ ಎಂದೇ ಕರೆಯಬಹುದೇನೋ. ಚರ್ಮ ಭಾಗಿಯಾಗುವುದು ರಕ್ಷಣೆ, ಗಾಳಿ ವಿನಿಮಯ ಮತ್ತು ಭಾಷ್ಪವಿಸರ್ಜನೆಯಲ್ಲಿ
(ಈ ಕ್ರಿಯೆಗಳ ಬಗ್ಗೆ ವಿವರವಾಗಿ ಮುಂದೆ ನೋಡೋಣ).
ಇದಕ್ಕೆ ತಕ್ಕಂತೆ ಎಲೆಗಳಲ್ಲಿ ರಕ್ಷಣೆಗಾಗಿ ಹೊರಗೊಂದು
ದಪ್ಪನೆಯ ಪೊರೆ ಇರುತ್ತದೆ. ಉದಾಹರಣೆ: ಕೆಸು, ತಾವರೆಗಳ ಎಲೆ ಮೇಲೆ ನೀರು ನಿಲ್ಲದಂತೆ ಜಾರುವ ಕ್ಯುಟಿಕಲ್
ಪೊರೆ; ಸಸ್ಯ ಭಕ್ಷಕರನ್ನು ದೂರವಿರಿಸಲು ಟ್ರೈಕೋಮ್ಸ್ ಎನ್ನುವ ಸೂಕ್ಷವಾದ ರೋಮಗಳುಗಳಿರುತ್ತವೆ. ಉದಾಹರಣೆ
ಟೋಮ್ಯಾಟೋ ಸಸಿಯ ಎಲೆ ಕಾಂಡಗಳಲ್ಲಿರುವ ಸೂಕ್ಷ ರೋಮಗಳು; ಕೀಟಗಳನ್ನು ದೂರವಿರಿಸಲು ರಾಸಾಯನಿಕಗಳನ್ನು ಸ್ರವಿಸುವ
ಗ್ರಂಥಿಗಳು ಇರಬಲ್ಲವು.
ಎಲ್ಲಕ್ಕಿಂತ ವಿಶೇಷವೆಂದರೆ ಎಲೆಗಳ ಹೊರಮೈಯಲ್ಲಿರುವ
ಪತ್ರರಂಧಗಳು (ಸ್ಟೊಮಾಟಾ). ಎಲೆಯ ಮೇಲೆ ಕೆಳಗೆ ಎರಡೂ ಕಡೆಯಿರುವ ಈ ಜೀವಕೋಶಗಳು ಗಾಳಿ ವಿನಿಮಯ ಮತ್ತು
ಭಾಷ್ಪವಿಸರ್ಜನೆಯಲ್ಲಿ ತೊಡಗುವ ಬಾಗಿಲುಗಳಂತೆ. ಈ ಬಾಗಿಲನ್ನು ತೆರೆದು ಮುಚ್ಚಿ ಮಾಡಿಲು ಎರಡು ಕಿಡ್ನಿ
ಆಕಾರದ ಗಾರ್ಡ್ ಜೀವಕೋಶಗಳಿರುತ್ತವೆ. ಪತ್ರರಂಧ್ರದ ಬಾಗಿಲು ತೆಗೆದರೆ ತೇವಾಂಶ, ಗಾಳಿ ಸಸ್ಯದ ಶರೀರದಿಂದ
ಒಳಕ್ಕೆ ಹೊರಕ್ಕೆ ಓಡಾಡಬಲ್ಲವು.
ಇನ್ನು ಬೇರುಗಳ ಹೊರಮೈಯಲ್ಲಿ ಪೋಷಕಾಂಶ ನೀರು ಹೀರಲೆಂದು
ಸೂಕ್ಷ ರೋಮಗಳು (ರೂಟ್ ಹೇರ್ಸ್) ಇರುತ್ತವೆ. ಮರಗಳ ಹೊರಮೈಯಲ್ಲಿ ತೊಗಟೆ/ಕಾರ್ಕ್ ರೂಪಿಸುವ ಫೆಲ್ಲಮ್
ಅಂಗಾಂಶಗಳಿರುತ್ತವೆ.
2. ಪೋಷಕಾಂಶ ಸಾಗಣೆಯ ಸರಪಳಿಯ ಭಾಗವಾದ ನಾಳ ಕೂಚಗಳು/ವಾಸ್ಕ್ಯುಲಾರ್
ಬಂಡಲ್ ವ್ಯವಸ್ಥೆ: ಕಾಂಡ ಮತ್ತು ಬೇರಿನಲ್ಲಿ ನೀರು-ಪೋಷಕಾಂಶ ಸಾಗಣೆಗೆ ಕ್ಸೈಲಮ್ ಮತ್ತು ಫ್ಲೋಯಮ್
ನಾಳಗಳು ಜೋಡಿಯಾಗಿ ಬೆಸೆದಿರುತ್ತವೆ. ಈ ಜೋಡಿಗಳು ಮತ್ತಷ್ಟು ಜೋಡಿಗಳೊಡನೆ ಸೇರಿ ಒಂದು ಕಂತೆಯಾಗಿ/ಬಂಡಲ್/ಕಟ್ಟನ್ನು
ರೂಪಿಸುತ್ತವೆ (ಜೋಡಿ-ಜೋಡಿ ಕಡ್ಡಿ ಸೇರಿ ಪೊರಕೆಯೊಂದನ್ನು ಕಟ್ಟಿದಂತೆ). ಇದೇ ವಾಸ್ಕ್ಯುಲಾರ್ ಬಂಡಲ್
ವ್ಯವಸ್ಥೆ (ಕಾಂಡ ಮತ್ತು ಬೇರುಗಳ ಬಗ್ಗೆ ಹೇಳುವಾಗ ಇದನ್ನು ವಿವರವಾಗಿ ತಿಳಿಯೋಣ).
3. ಸಸ್ಯ ನೆಲದಿಂದ ಮೇಲೆ ಗಟ್ಟಿಯಾಗಿ ನಿಲ್ಲಲು ಸಹಕರಿಸುವ
ಆಧಾರ ವ್ಯವಸ್ಥೆ: ಬೇರು ಮತ್ತು ಕಾಂಡದಲ್ಲಿ ಹೊರ ಚರ್ಮ ಮತ್ತು ವಾಸ್ಕ್ಯುಲಾರ್ ಬಂಡಲ್ ಗಳ ನಡುವೆ ಇನ್ನೊಂದಿಷ್ಟು
ಅಂಗಾಂಶಗಳಿರುತ್ತವೆ. ಈ ಎರಡು ವ್ಯವಸ್ಥೆಗಳ ಮಧ್ಯದಲ್ಲಿ ಗ್ಯಾಪ್ ತುಂಬುವ ಮಿಕ್ಕೆಲ್ಲಾ ಅಂಗಾಂಶಗಳನ್ನು
ಗ್ರೌಂಡ್ ಟಿಶ್ಯು ಎನ್ನಲಾಗುತ್ತದೆ. ಬೇರು ಕಾಂಡದ ತಿರುಳು (ಪಿಥ್), ವಾಸ್ಕ್ಯುಲಾರ್ ಬಂಡಲ್ ಸುತ್ತ
ಇರುವ ಈ ಅಂಗಾಂಶಗಳು ಸಾಮಾನ್ಯವಾಗಿ ಸರಳ ಶಾಶ್ವತ ಅಂಗಾಂಶವಾದ ಪ್ಯಾರಂಕೈಮಾಗಳಾಗಿರುತ್ತವೆ. ಸಸ್ಯಗಳಿಗೆ
ಎದ್ದು ನಿಲ್ಲಲು ಆಧಾರ ನೀಡುವುದು, ದ್ಯುತಿ ಸಂಶ್ಲೇಷಣೆ, ಆಹಾರ ಶೇಖರಣೆ ಇವುಗಳ ಮುಖ್ಯ ಕಾರ್ಯ.
ಟಿಪ್ಪಣಿ
ಒಮ್ಮೆ ಶಾಶ್ವತವಾದ ಅಂಗಾಂಶಗಳು
(differentiate) ಎಂದಿಗೂ ಬಾಲ್ಯಾವಸ್ಥೆಗೆ/ ಮೆರಿಸ್ಟಮ್ ಅವಸ್ಥೆಗೆ ಹೋಗಲಾರವು ಎಂದು ಮುಂಚೆ ಹೇಳಿಯಾಗಿತ್ತು.
ಈಗ ಇಲ್ಲೊಂದು ಟ್ವಿಸ್ಟ್! ಶಾಶ್ವತ ಅಂಗಾಂಶಗಳೂ ಕೂಡಾ ಕೆಲ ಸಂದರ್ಭದಲ್ಲಿ ಪುನಃ ಅಪಕ್ವವಾಗಿ ಮತ್ತಷ್ಟು
ಅಪಕ್ವ ಜೀವಕೋಶಗಳ ಉತ್ಪಾದನೆಗೆ ತೊಡಗಬಹುದು (ಇದನ್ನು dedifferentiation ಕ್ರಿಯೆ ಎನ್ನಲಾಗುತ್ತದೆ)
ಮುಂದೆ ಮತ್ತೆ ನಿರ್ದಿಷ್ಟ ಕಾರ್ಯಕ್ಕೆ ಒಳಗಾಗಬಹುದು (ಇದನ್ನು redifferentiation ಕ್ರಿಯೆ ಎನ್ನಲಾಗುತ್ತದೆ).
ಸಸ್ಯಲೋಕದ ಈ ಅದ್ಭುತ ಕ್ರಿಯೆ ಬೇರಾವ ಜೀವಿಯಲ್ಲಿ ಕಾಣುವುದು ತೀರಾ ಅಪರೂಪ.
ಸಸ್ಯದ ಯಾವುದೇ ಭಾಗಕ್ಕೆ ಪೆಟ್ಟಾಗಿದ್ದರೂ ತಕ್ಷಣಕ್ಕೆ
ನಡೆಯಬೇಕಾದದ್ದು ಗಾಯ ಗುಣವಾಗುವ ಕೆಲಸ. ಹಾಗಾಗಿ ಅಲ್ಲಿ ಯಾವುದೇ ಕಾರ್ಯ ನಿರ್ವಹಿಸುವ ಅಂಗಾಂಶಗಳಿದ್ದರೂ ಮೊದಲು ಅವು
ವಿಭಜನೆಯಾಗಿ ಗಾಯ ರಿಪೇರಿ ಮಾಡಿ ಮುಂದಿನ ಕೆಲಸಕ್ಕೆ ಹೋಗುತ್ತವೆ. ಆಗೆಲ್ಲಾ ನಡೆಯುವುದು ಮೇಲೆ ಹೇಳಿದ
ಕ್ರಿಯೆ. ಹಾಗಾದರೆ ಕಸಿ ಕಟ್ಟುವಾಗ ಈ ಅಂಗಾಂಶಗಳ ಮತ್ತು ಕ್ರಿಯೆಯ ಪಾತ್ರ ಎಷ್ಟಿದೆ ಎನ್ನುವುದನ್ನು
ನೀವೇ ಊಹಿಸಿ.
ಇನ್ನು ಕಟಿಂಗ್ ಅನ್ನು ಮಣ್ಣಲ್ಲಿ ಊರಿದಾಗ ತಕ್ಷಣಕ್ಕೆ
ಆಗಬೇಕಾದ ವ್ಯವಸ್ಥೆ ಬೇರುಗಳದ್ದು. ಹಾಗಾಗಿ ಕಟಿಂಗ್ ಕತ್ತರಿಸಿದ ಜಾಗದಿಂದ ಜೀವಕೋಶಗಳ ವಿಭಜನೆಯಾಗಿ
ಹುಸಿಬೇರುಗಳು (adventitious roots) ಮೂಡುತ್ತವೆ. ಇನ್ನು ಚಾಟನಿ ಮಾಡಿದಾಗ ತಕ್ಷಣಕ್ಕೆ ಆಗಬೇಕಾದ
ವ್ಯವಸ್ಥೆ ಇನ್ನಷ್ಟು ಹಸಿರು ಎಲೆಗಳದ್ದು. ಹಾಗಾಗಿ ಕಾಂಡದ ಜೀವಕೋಶಗಳು ಶಾಶ್ವತವಾಗಿ ರೂಪಾಂತರವಾಗಿದ್ದರೂ
ಮರಳಿ ಹುಸಿ ಚಿಗುರು (adventitious buds) ಮೂಡಿಸುವಲ್ಲಿ ಉತ್ತೇಜಿತವಾಗುತ್ತವೆ.
ಮೆರಿಸ್ಟಮ್, ಕಾಂಡ, ಬೇರು, ಎಲೆ, ಹೂವು ಸಸ್ಯದ ಯಾವುದೇ
ಭಾಗದಿಂದ ಹೊಸ ಸಸ್ಯ ಪಡೆಯಬೇಕೆಂದರೆ ಮೊದಲ ಅವಶ್ಯಕತೆ
ಅಂಗಾಂಶದ ಭಾಗ. ಹಾಗಾಗಿ ಇಡೀ ಅಂಗಾಂಶ ಕೃಷಿ ವಿಜ್ಞಾನವೇ ಈ ತತ್ವದ ಮೇಲೆ ನಿಂತಿದೆ. ಮೆರಿಸ್ಟಮ್ ಅಂಗಾಂಶದ
ವಿಭಜನೆ ವೈರಸ್ ಕಣದ ವಿಭಜನೆಗಿಂತಲೂ ತ್ವರಿತವಾಗಿರುತ್ತದೆ. ಹಾಗಾಗಿ ಕೆಲ ತೋಟಗಾರಿಕಾ ಬೆಳೆಗಳ ಸಸ್ಯಾಭಿವೃದ್ಧಿ
ಮಾಡುವಾಗ ವೈರಲ್ ರೋಗ ರಹಿತ ಸಸಿಗಳನ್ನು ಪಡೆಯಲು ಮೆರಿಸ್ಟಮ್
ಕಟಿಂಗ್ ಬಳಸಲಾಗುತ್ತದೆ.
ಒಟ್ಟಿನಲ್ಲಿ ನಿರ್ಲಿಂಗ ವಿಧಾನದ ಸಸ್ಯಾಭಿವೃದ್ಧಿ
ಪದ್ಧತಿ ಅಂಗಾಂಶಗಳು, ಅವುಗಳ ರಚನೆ, ಕಾರ್ಯವನ್ನೇ ಅವಲಂಬಿಸಿದೆ!
ಮೇಲೆ ಚರ್ಚಿಸಿದ ಪ್ರತಿ ಜೀವಕೋಶ-ಅಂಗಾಂಶಕ್ಕೂ ಬೆಳೆಗಳ
ಶಾರಿರೀಕ ಕಾರ್ಯಗಳಲ್ಲಿ ತೊಡಗುವ ಜೊತೆಗೆ ವಾತಾವರಣಕ್ಕೆ ಸೂಕ್ತವಾಗಿ ಹೊಂದಿಕೊಳ್ಳಲು, ಬೆಳೆಗಳ ಉತ್ಪಾದನೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಿದೆ. ಕೆಲವೊಮ್ಮೆ
ಇದಕ್ಕೂ ಮೀರಿ ವಾಣಿಜ್ಯಿಕ ಮಹತ್ವವೂ ಇದೆ. ಉದಾಹರಣೆಗೆ ಕೃಷಿಯೊಡನೆ ಬೆಸೆದುಕೊಂಡಿರುವ ಇನ್ನೊಂದು ಇಂಡಸ್ಟ್ರಿ
ಬಟ್ಟೆ ಅಥವಾ ನಾರಿನದ್ದು. ಸೆಣಬು, ಹತ್ತಿ, ಅಗಸೆ (ಲಿನೆನ್), ತೆಂಗಿನ ಸಿಪ್ಪೆ, ಅಡಿಕೆ ಸಿಪ್ಪೆ, ಇವೆಲ್ಲವುಗಳ ಕೋಶಭಿತ್ತಿಯಲ್ಲಿರುವುದು
ಸ್ಕ್ಲಿರಂಕೈಮಾ ಅಂಗಾಂಶಗಳು. ಲಿಗ್ನಿನ್ ನಿಂದ ಆಗಿರುವ ಈ ನಾರುಗಳು ಬಟ್ಟೆ, ಪೇಪರ್, ವಾಟರ್ ಪ್ರೂಫ್
ಜೈವಿಕ ಪ್ಲಾಸ್ಟಿಕ್ ಹೀಗೆ ಸುಮಾರು ಉದ್ಯಮಗಳಿಗೆ ಕಚ್ಚಾವಸ್ತು. ಈಗಂತೂ ಹಣ್ಣಿನ ಸಿಪ್ಪೆಯ ಸ್ಕ್ಲಿರಂಕೈಮಾವನ್ನೂ ಬಿಡದೆ ವೆಗನ್ ಲೆದರ್ ತಯಾರಿಸಲಾಗುತ್ತಿದೆ.
ಮುಂದಿನ ಕಂತಿನಲ್ಲಿ ಇದರ ಮುಂದುವರಿದ ಭಾಗವಾಗಿ ಸಸ್ಯ
ಶರೀರದ ಅಂಗಗಳ ಬಗ್ಗೆ ವಿವರವಾಗಿ ನೋಡೋಣ.
Comments
Post a Comment