ಹೈಡ್ರೆಂಜಿಯಾ
ಜಪಾನೀ ಬೌದ್ಧಧರ್ಮಿಗಳ ಪ್ರಕಾರ ಏಪ್ರಿಲ್ 8 ಬುದ್ಧನ ಜನ್ಮದಿನ; ಪ್ರತಿವರ್ಷ ಈ ವಿಶೇಷ ದಿನದಂದು ಬುದ್ಧನನ್ನು ನವಜಾತ ಶಿಶುವಾಗಿ ಕಂಡು ‘ಅಮಾ-ಚಾ’ ಎನ್ನುವ ವಿಶೇಷ ಮೂಲಿಕಾ ದ್ರವ್ಯದಿಂದ ಸ್ನಾನ ಮಾಡಿಸುವ ಆಚರಣೆಯಿದೆಯಂತೆ. ಬುದ್ಧ ಹುಟ್ಟಿದಾಗ ಒಂಭತ್ತು ಡ್ರ್ಯಾಗನ್ ಗಳು ಅಮೃತ ಸುರಿಸಿದವು, ಅಮಾ-ಚಾವೇ ಅಮೃತ ಎನ್ನುವುದು ಜಪಾನಿನ ಪುರಾಣಕಥೆ. ಇಂದಿಗೂ ಅಮಾ-ಚಾವನ್ನು ಬುದ್ಧನ ಪ್ರತಿಮೆಯ ಮೇಲೆ ಅಭಿಷೇಕ ಮಾಡಿ ಭಕ್ತರಿಗೆ ತೀರ್ಥದಂತೆ ನೀಡಲಾಗುತ್ತದೆ. ಸಕ್ಕರೆಗಿಂತಲೂ 400-800 ಪಟ್ಟು ಸಿಹಿಯಾಗಿರುವ ಈ ಹರ್ಬಲ್ ಟೀಯನ್ನು ತಯಾರಿಸುವುದು ‘ಹೈಡ್ರೆಂಜಿಯಾ ತನ್ಬರ್ಜಿ’ ಎನ್ನುವ ಸಸ್ಯದ ಎಲೆಗಳಿಂದ. ಅಲಂಕಾರಿಕವಾಗಿ ನಮ್ಮೆಲ್ಲರ ಗಾರ್ಡನ್ ನಲ್ಲಿ ಕಂಡುಬರುವ ಹೈಡ್ರೆಂಜಿಯಾ/ಹೈಡ್ರಾಂಜಿಯಾದ ಸಂಬಂಧೀಸಸ್ಯದಿಂದ. ಹೈಡ್ರೆಂಜಿಯಾ ಸಸ್ಯಸಮೂಹ ಹುಟ್ಟಿದ್ದು ಪೂರ್ವ ಏಷಿಯಾದಲ್ಲಿ. ಹಾಗಾಗಿ ಜಪಾನ್, ಕೊರಿಯಾ ಮತ್ತು ಚೀನಾದ ಪುರಾಣ-ಆಹಾರ-ಓಷಧಿಯಲ್ಲಿ ಇದಕ್ಕೆ ವಿಶೇಷ ಮಹತ್ವ. ಇದರ ಸೌಂದರ್ಯಕ್ಕೆ ಮಾರುಹೋದ ಯುರೋಪಿಯನ್ ಸಸ್ಯೋತ್ಸಾಹಿಗಳು 18ನೇ ಶತಮಾನದಲ್ಲಿ ಅಲಂಕಾರಿಕ ಉದ್ದೇಶಗಳಿಗಾಗಿ ಬೆಳೆಸಲು ಪ್ರಾರಂಭಿಸಿದರು. ಅಂದಿನಿಂದ ಪ್ರಪಂಚದದೆಲ್ಲೆಡೆ ಹರಡುತ್ತಾ ನಮ್ಮಲ್ಲೂ ಜನಪ್ರಿಯವಾದ ಹೈಡ್ರೆಂಜಿಯಾ ಹೊರಾಂಗಣವಲ್ಲದೇ ಒಳಾಂಗಣ ಸಸ್ಯವಾಗಿ, ಹೂದಾನಿ ಅಲಂಕರಿಸುವ ‘ಕಟ್ ಫ್ಲವರ್’ ಆಗಿಯೂ ಬಳಕೆಯಲ್ಲಿದೆ. ಹೈಡ್ರೆಂಜಿಯಾಗಳಲ್ಲಿ ಸುಮಾರು ಎಪ್ಪತ್ತೈದು ಪ್ರಭೇದಗಳಿವೆ. ಆದರೆ ಅಲ...