ಹೈಬ್ರಿಡ್ ಹೆದರಿಕೆ, ಹೈಬ್ರಿಡ್ ತಳಿಗಳ ಬಗ್ಗೆ ಸತ್ಯ ಶೋಧನೆ

ನಮ್ಮದು ಶಿರಸಿ ಸಮೀಪದ ಹಳ್ಳಿ. ಮಲೆನಾಡ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿರುವ, ತಲೆಮಾರುಗಳಿಂದ ವ್ಯವಸಾಯದಲ್ಲಿರುವ, ಎಲ್ಲಾ ಸ್ಥಳೀಯ ರೈತರು/ತೋಟಗಾರರಂತೆ ನಮ್ಮ ಹೊಟ್ಟೆ ಹೊರೆಯುತ್ತಿರುವ ಬೆಳೆಯೂ ಅಡಿಕೆಯೇ; ಅಡಿಕೆಯೆಂಬ ಮುಖ್ಯಬೆಳೆ ಜೊತೆ ಕಾಳುಮೆಣಸು ಕಾಫಿಯೆಂಬ ಉಪಬೆಳೆ. ಸಣ್ಣ ಜಾಗದಲ್ಲಿ ಇವುಗಳ ಜೊತೆಗೊಂದಿಷ್ಟು ಹೊಸ ಬೆಳೆಯನ್ನು ಪ್ರಯೋಗಿಸುವುದು ನಮ್ಮ ಉಮೇದಿ. ಎಷ್ಟು ಕೈ ಸುಟ್ಟುಕೊಂಡರೂ ಇದೊಂದು ಗೀಳು ಮಾತ್ರ ನಮ್ಮನ್ನು ಬಿಡದು. ಇಂತದ್ದೇ ಒಂದು ಉಮೇದಿಯಲ್ಲಿ ಮೂರ್ನಾಲ್ಕು ವರ್ಷದ ಕೆಳಗೆ ನಾವೊಂದು ಹೊಸ ಬೆಳೆಗೆ ಕೈ ಹಚ್ಚಿದ್ದೆವು. ಅದೇ ಮಾಡಹಾಗಲ ಕೃಷಿ.

ಮಾಡಹಾಗಲ, ಇಂಗ್ಲೀಷಿನಲ್ಲಿ ಸ್ಪೈನ್‌ ಗಾರ್ಡ್‌, ವೈಜ್ಞಾನಿಕವಾಗಿ ʼಮಮೊರ್ಡಿಕಾ ಡಯೋಕಾʼ ಮತ್ತು ʼಮಮೊರ್ಡಿಕಾ ಸಹ್ಯಾದ್ರಿಕಾʼ ನಮ್ಮ ಭಾಗಕ್ಕೇನೂ ಹೊಸದಲ್ಲ. ಮಳೆಗಾಲದಲ್ಲಿ ವಿಶೇಷವಾಗಿ ಶ್ರಾವಣ ಮಾಸಕ್ಕೆ ಲಭ್ಯವಾಗುವ ಈ ತರಕಾರಿಯ ವೈವಿಧ್ಯಮಯ ಪದಾರ್ಥ ತಯಾರಿಸಿ ಚಪ್ಪರಿಸುವುದು ಇಲ್ಲಿಯವರಿಗೆ ಪ್ರಾಣಪ್ರಿಯ. ಪಿಂಗ್‌ಪಾಂಗ್‌ ಬಾಲ್‌ ಗಾತ್ರದ, ಮುಳ್ಳು ಮೈಯ, ಘಾಡ ಹಸಿರು ಬಣ್ಣದ ತರಕಾರಿಯನ್ನು ಇಷ್ಟಪಡದವರಿಲ್ಲ. ಮಾಡಹಾಗಲದ ಕಾಯಿಗಳು ಅದೃಷ್ಟ ಚನ್ನಾಗಿದ್ದರೆ ಮನೆ ಅಂಚಿನ ಬೇಲಿ ಬದಿಯಲ್ಲೇ ಸಿಕ್ಕಿಬಿಡಬಹುದು; ಇಲ್ಲವಾದರೆ ಮುಳ್ಳು ಮಟ್ಟಿ, ಜಂಗಲ್ಲಿನಲ್ಲಿ ಹುಡುಕಿ ತರಬೇಕಾಗುತ್ತದೆ. ಮುಂಚೆಲ್ಲಾ ಸಿಕ್ಕಿದ್ದೇ ಸೀರುಂಡೆ ಎಂದು ಈ ತರಕಾರಿಯನ್ನು ಸವಿಯಲಾಗುತ್ತಿತ್ತು, ಈಗ ಸಣ್ಣ ಪ್ರಮಾಣದಲ್ಲಿ ಅದರ ಕೃಷಿಯನ್ನು ಮಾಡುವವರು ಇದ್ದಾರೆ. ತೀರಾ ಚಿಕ್ಕ ಗಾತ್ರದ ಕಾಯಿಗಳು, ಕಡಿಮೆ ಇಳುವರಿ ಕಾರಣ ಇವುಗಳ ಕೃಷಿ ಲಾಭದಾಯಕವಲ್ಲ. ಆದರೆ ಈ ತರಕಾರಿಗೆ ಮಾರ್ಕೆಟ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ. ಹಾಗಾಗಿ ಕೆಲ ಸಂಶೋಧನಾ ಸಂಸ್ಥೆಗಳು ಇದರ ಬಗ್ಗೆ ಗಮನ ಹರಿಸಿ ಒಳ್ಳೆ ತಳಿಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡವು. ಅಸ್ಸಾಮ್‌, ಪಶ್ಚಿಮ ಬಂಗಾಳ, ಮತ್ತು ಓಡಿಶಾದಲ್ಲಿ ಇದೇ ಮಾಡಹಾಗಲದ ಸಹೋದರ ಪ್ರಭೇದವೊಂದಿದೆ. ಅದುವೇ ʼಮಮೋರ್ಡಿಕಾ ಸಬ್‌ಆಂಗ್ಯುಲೆಟಾʼ, ಇಂಗ್ಲೀಷಿನಲ್ಲಿ ಟೀಸಲ್‌ ಗಾರ್ಡ್. ಸಂಶೋಧನಾ ಪ್ರಯುಕ್ತ ಈ ಬೆಳೆ ಕರ್ನಾಟಕವನ್ನೂ ಪ್ರವೇಶಿಸಿತು. ನಂತರ ನಿಧಾನಕ್ಕೆ ಒಳ್ಳೆಯ ಸಸ್ಯಗಳ ಆಯ್ಕೆ ಪ್ರಕ್ರಿಯೆ ನಡೆಸಿ ನಮ್ಮ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಐಐಎಚ್‌ಆರ್‌ ಕೆಲವು ಸುಧಾರಿತ ತಳಿಗಳ ಬಿಡುಗಡೆ ಮಾಡಿತು. ನಾವು ಕೂಡಾ ಹೀಗೆ ಅಭಿವೃದ್ಧಿ ಪಡಿಸಿದ ʼಅರ್ಕಾ ಭಾರತʼ ಎಂಬ ಸುಧಾರಿತ ತಳಿಯನ್ನು ಕೃಷಿಗಾಗಿ ಕೊಂಡುತಂದೆವು.

ಟೀಸಲ್‌ ಗಾರ್ಡ್‌ ಏನೋ ನಮ್ಮಲ್ಲಿ ಚೆನ್ನಾಗಿ ಬೆಳೆಯಿತು ಒಳ್ಳೆಯ ಇಳುವರಿಯೂ ಸಿಕ್ಕಿತು. ತೊಂದರೆ ಆಗಿದ್ದು ಮಾರ್ಕೆಂಟಿಗ್‌ನಲ್ಲಿ. ಟೀಸಲ್‌ ಗಾರ್ಡ್‌ನದು ಕ್ರಿಕೆಟ್‌ ಬಾಲ್‌ನಷ್ಟು ದೊಡ್ಡ ಗಾತ್ರದ ಕಾಯಿ, ಹೊಂಬಣ್ಣ. ಮಳೆಗಾಲವಲ್ಲದೆ ನೀರಾವರಿ ಇರುವಾಗ ಯಾವಾಗ ಬೇಕಾದರೂ ಬೆಳೆಯಬಹುದು. ವರ್ಷಕ್ಕೆ ಎರಡು ಬೆಳೆ ತೆಗೆಯಬಹುದು. ಗಡ್ಡೆಗಳ ಮೂಲಕ ಸಸ್ಯಾಭಿವೃದ್ಧಿಯಂತೂ ಬಹಳ ಸುಲಭ. ನಾವಿದನ್ನು ಮಾಡಹಾಗಲ ಎಂದೇ ಕರೆದರೂ ಗ್ರಾಹಕರು ಒಪ್ಪಲೇ ಇಲ್ಲ. “ಕಲರ್‌ ಸೈಜ್‌ ನೋಡಿ ಇದು ಹೈಬ್ರಿಡ್‌, ಚೆನ್ನಾಗಿ ಗೊಬ್ಬರ ತಿಂದು ಕೊಬ್ಬಿದಂತಿದೆ, ಇದು ವಿದೇಶದ್ದು, ನಮ್ಮೂರ ದೇಸಿ ಮಾಡಹಾಗಲದಷ್ಟು ರುಚಿಯಲ್ಲ, ಮಳೆಗಾಲ ಬಿಟ್ಟು ಬೇರೆ ಕಾಲದಲ್ಲಿ ಇದನ್ನು ತಿಂದರೆ ಆರೋಗ್ಯದಲ್ಲಿ ತೊಂದರೆಯಾದೀತು” ಎಂದೆಲ್ಲಾ ಸುಳ್ಳುಸುದ್ದಿ ಹರಡಿತು. ಸ್ಥಳೀಯ ಮಾರುಕಟ್ಟೆ ನಿರಾಶಾದಾಯಕವಾಯಿತು. ಇತ್ತ ಹೀಗಾದರೆ ಅತ್ತ ಗೋವಾದವರು ಕಚ್ಚಾಡಿ ಕೊಂಡರು. ಈಗ ಅಡ್ಡಿ ಇಲ್ಲ. ನಿಧಾನಕ್ಕೆ ಪರಿಚಯವಾದ ಅಸ್ಸಾಮೀ ಮಾಡಹಾಗಲ ಕೊಳ್ಳುವ ಆಸಾಮಿಗಳ ಸಂಖ್ಯೆಯೂ ಏರಿದೆ. ಕೆಜಿಗೆ ೧೨೦ ೧೪೦ ರೂಪಾಯಿಯವರೆಗೂ ಕೊಳ್ಳುವುದಿದೆ.

ಈಗ ವಿಷಯಕ್ಕೆ ಬರೋಣ. ಇಷ್ಟೆಲ್ಲಾ ಕಥೆ ಹೇಳಿದ್ದರ ಉದ್ದೇಶ ಈ ಬೆಳೆಯ ಸುತ್ತ ಹಬ್ಬಿದ ಸುಳ್ಳುಸುದ್ದಿಗಳತ್ತ ಗಮನ ಸೆಳೆಯುವುದು

1.      ಟೀಸಲ್‌ ಗಾರ್ಡ್‌ ಅಸ್ಸಾಮ್ ಮೂಲದ್ದು. ವಿದೇಶಿಯಲ್ಲ, ದೇಸಿ.

2.      ಯಾವುದೇ ಹಣ್ಣು ತರಕಾರಿ ಅಕಾಲಕ್ಕೆ ಸಿಗುತ್ತಿದೆಯೆಂದರೆ ಅದರರ್ಥ ಅದು ವಿಷಕಾರಿಯೆಂದಲ್ಲ. ಇಂದಿನ ಆಧುನಿಕ ಯುಗದಲ್ಲಿ ಸಮರ್ಪಕ ತಂತ್ರಜ್ಞಾನ ಬಳಸಿ ಯಾವ ಬೆಳೆಯನ್ನು ಯಾವ ಕಾಲಕ್ಕೂ ಯಾವ ವಾತಾವರಣದಲ್ಲೂ ಬೆಳೆಯಬಹುದು. ಆ ಬೆಳೆಗಳನ್ನು ಶೀತಲೀಕರಿಸಿ ನಂತರ ಸಂಸ್ಕರಿಸಿ ಹೆಚ್ಚಿನ ಬೆಲೆಗೆ ಮಾರಾಟವನ್ನೂ ಮಾಡಬಹುದು. ʼಆಫ್‌ಸೀಸನ್‌ʼ ಎನ್ನುವುದು ಈಗಿನ ಮಾರ್ಕೆಟಿಂಗ್‌ ತಂತ್ರ. ಟೀಸಲ್‌ ಗಾರ್ಡ್‌ ಇರಲಿ ನಮ್ಮ ಭಾಗದ ಮಾಡಹಾಗಲವಿರಲಿ, ಮೇಲೆ ಹೇಳಿದಂತೆ ನೀರಾವರಿ ನಿಯಂತ್ರಿಸಿ ಯಾವ ಕಾಲಕ್ಕೂ ಲಭ್ಯವಾಗುವಂತೆ ಮಾಡಬಹುದು.

3.      ಗೊಬ್ಬರ ಕೊಟ್ಟು ಗಾತ್ರ ಹೆಚ್ಚು ಮಾಡುವುದಾಗಿದ್ದರೆ ಸೋರೆಕಾಯಿ ಗಾತ್ರದ ಬಾಳೆಯನ್ನೂ ಬೆಳೆದುಬಿಡುತ್ತಿದ್ದೆವೇನೂ! ಆಯಾ ಬೆಳೆಗಳ ಬಣ್ಣ ಗಾತ್ರ ಆಕಾರಗಳೆಲ್ಲಾ ಆಯಾ ಬೆಳೆಯ ಆಯಾ ತಳಿಯ ಅನುವಂಶಿಕ ಗುಣಧರ್ಮಗಳಿಂದ ನಿರ್ಧಾರವಾಗುವಂತದ್ದು. ಕೆಲ ಬೆಳೆಗಳಲ್ಲಿ (ಕಲ್ಲಂಗಡಿ, ಟೊಮೇಟೋ) ಸರಿಯಾದ ಬೆಳವಣಿಗೆ ಹಂತದಲ್ಲಿ ಗೊಬ್ಬರ ಕೊಡುವುದು ಗಾತ್ರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬಹುದೇ ವಿನಾ ಅಜಗಜಾಂತರ ವ್ಯತ್ಯಾಸ ಉಂಟುಮಾಡಲು ಸಾಧ್ಯವಿಲ್ಲ.

4.      ಗಾತ್ರವೊಂದು ದೊಡ್ಡವಿರುವ ಮಾತ್ರಕ್ಕೆ ಹಣ್ಣು ತರಕಾರಿಗಳು ಹೈಬ್ರಿಡ್‌ ಆಗಲಾರವು. ನಾವು ಬೆಳೆದು ಮಾರಾಟ ಮಾಡುತ್ತಿದ್ದ ಅರ್ಕಾ ಭಾರತ ತಳಿಯು ಹೈಬ್ರಿಡ್‌ ಅಲ್ಲ. ಒಳ್ಳೆ ಇಳುವರಿ ಕೊಡುವ ಆರೋಗ್ಯಕರ ತಾಯಿ ಬಳ್ಳಿಗಳನ್ನು ಆರಿಸಿ (ಸೆಲೆಕ್ಷನ್) ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿದ ಸುಧಾರಿತ ತಳಿ‌ (ವೆರೈಟಿ).

5.      ಅಷ್ಟಕ್ಕೂ ಇದು ಹೈಬ್ರಿಡ್‌ ಆಗಿದ್ದಿದ್ದರೆ ತಿನ್ನಲೇನು ಸಮಸ್ಯೆ?

ಮಾವಿನ ಸೀಸನ್ನಿನಲ್ಲಿ ನೀವು ಚಪ್ಪರಿಸುವ ಮಲ್ಲಿಕಾ, ಆಮ್ರಪಾಲಿಗಳು ಹೈಬ್ರಿಡ್‌; ಶುಗರ್‌ಕ್ವೀನ್‌ ಕಲ್ಲಂಗಡಿ, ಬೆಂಗಳೂರು ಬ್ಲೂ ದ್ರಾಕ್ಷಿ, ಸ್ವೀಟ್‌ ಚಾರ್ಲಿ ಸ್ಟ್ರಾಬೆರಿ, ಮಾರುಕಟ್ಟೆಯಲ್ಲಿರುವ ಬಹುತೇಕ ತರಕಾರಿಗಳು ಹೈಬ್ರಿಡ್.‌ ಹಾಗೆ ನೋಡಿದರೆ ನೈಸರ್ಗಿಕವಾಗಿ ಈಗಿರುವ ಬೆಳೆಗಳೆಲ್ಲಾ ಒಂದಾನೊಂದು ಕಾಲಕ್ಕೆ ವಿವಿಧ ಪ್ರಭೇದಗಳ ನಡುವೆ ನಡೆದ ಹೈಬ್ರಿಡೈಸೇಶನ್ ಪರಿಣಾಮವೇ. ಆದರೂ ಹೈಬ್ರಿಡ್‌ಗಳ ಬಗ್ಗೆ ಜನಸಾಮಾನ್ಯರಲ್ಲಿ ಏನೆಲ್ಲಾ ತಾತ್ಸಾರವಿದೆ, ತಪ್ಪು ಕಲ್ಪನೆಯಿದೆ; ಸುಖಾಸುಮ್ಮನೆ ಜನರ ನಡುವೆ ಅವು ವಿಲನ್‌ಗಳಾಗಿವೆ. ಇವುಗಳ ಬಗ್ಗೆ ಸತ್ಯಕ್ಕಿಂತ ಸುಳ್ಳೇ ಹೆಚ್ಚು, ಊಹಾಪೋಹಗಳೇ ರಾಶಿ. ಈ ಲೇಖನ ಅದನ್ನು ಸ್ವಲ್ಪ ಮಟ್ಟಿಗೆ ಹೋಗಲಾಡಿಸುವ ಪ್ರಯತ್ನ.

ಹೈಬ್ರಿಡ್‌ ಎಂದರೇನು?

ಹೈಬ್ರಿಡ್‌ ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸುವ ಮುನ್ನ ಬ್ರೀಡ್‌ ಬಗ್ಗೆ ತಿಳಿಯೋಣ. ಮಾವು ಎಂದ ತಕ್ಷಣ ಮಲ್ಲಿಕಾ, ಆಮ್ರಪಾಲಿ, ಕೇಸರ್‌, ದಶೇರಿ, ಲಾಂಗ್ರಾ, ಚೌಸಾ, ಮಾಲ್ಡಾ, ಕಾಲಾಪಾಡ್‌, ಮಲಗೋವಾ, ಪೈರಿ, ಅಲ್ಫಾನ್ಸೋ,‌ ಇಶಾಡಿ, ಸಿಂಧು, ಬನೇಶಾನ್‌, ಅಪ್ಪೆಮಿಡಿ, ಬಾದಾಮಿ, ಬಂಗನಪಲ್ಲಿ, ರಸಪುರಿ, ತೋತಾಪುರಿ ಹೀಗೆ ಸಾಲು ಸಾಲು ಮಾವಿನ ವಿಧಗಳು ಕಣ್ಣ ಮುಂದೆ ಸುಳಿಯುತ್ತದಲ್ಲ?  ಎಲ್ಲವೂ ಮಾವೇ; ಆದರೂ ಪ್ರತಿಯೊಂದಕ್ಕೂ ನಿರ್ದಿಷ್ಟ ಬಣ್ಣ, ರುಚಿ, ಆಕಾರ, ಗಾತ್ರ, ವಾಸನೆಯಿದೆ. ಈ ವಿವಿಧ ಬಗೆಗಳೇ ತಳಿಗಳು ಅಥವಾ ಬ್ರೀಡ್‌. ಸಸ್ಯಗಳಲ್ಲಿ ಬ್ರೀಡ್‌ ಪದದ ಬದಲು ವೆರೈಟಿ ಎಂಬ ಪದ ಬಳಕೆಯಲ್ಲಿದೆ.

ಒಂದು ಪ್ರದೇಶದ ಹವಾಗುಣಕ್ಕೆ ಹೊಂದಿಕೊಳ್ಳಲು, ರೋಗ-ಕೀಟಗಳ ದಾಳಿಗೆ ಪ್ರತಿರೋಧ ಒಡ್ಡಲು ವಿಕಸನವಾಗುತ್ತಾ ನೈಸರ್ಗಿಕವಾಗಿ ತಳಿಗಳ ಉದ್ಭವವಾಗುತ್ತದೆ. ಇವುಗಳನ್ನು ಸ್ಥಳೀಯ ತಳಿಗಳು (ಲ್ಯಾಂಡ್‌ ರೇಸಸ್), ಸಾಂಪ್ರದಾಯಿಕ ತಳಿಗಳು (ಟ್ರೆಡಿಷನಲ್‌ ವೆರೈಟೀಸ್) ಎನ್ನಬಹುದು. ಹೆಚ್ಚಿನ ಇಳುವರಿ, ರೋಗನಿರೋಧಕತೆ, ಇತರೇ ಅಪೇಕ್ಷಿತ ಗುಣಗಳಿಗಾಗಿ ವಿಜ್ಞಾನಿಗಳು ಕೃತಕವಾಗಿಯೂ ತಳಿ ಅಭಿವೃದ್ಧಿ ಪಡಿಸುತ್ತಾರೆ ಇವೇ ಸುಧಾರಿತ ತಳಿಗಳು (ಇಮ್ಪ್ರೂವ್ಡ್ ವೆರೈಟೀಸ್)‌. ಸುಧಾರಿತ ತಳಿಯನ್ನು ಅಭಿವೃದ್ಧಿ ಪಡಿಸಲು ಹಲವಾರು ಮಾರ್ಗವಿದೆ. ಯಾವ ಮಾರ್ಗ ಎನ್ನುವುದನ್ನು ಆಧರಿಸಿ ಮತ್ತೆ‌ ಇವುಗಳನ್ನು ವಿಂಗಡಸಿಲಾಗುತ್ತದೆ. ಇರುವ ತಳಿಗಳಲ್ಲಿ ಉತ್ತಮ ಸಸ್ಯವನ್ನು ಆರಿಸಿದರೆ ಅದು ಸೆಲೆಕ್ಷನ್‌ (ಅಥವಾ ಸೆಲೆಕ್ಟೆಡ್‌ ವೆರೈಟಿ); ಉತ್ತಮ ಸಸ್ಯಗಳ ನಡುವೆ ನೈಸರ್ಗಿಕ ಅಡ್ಡಪರಾಗಸ್ಪರ್ಷ ಏರ್ಪಡಿಸಿ ಪಡೆದ ತಳಿಯಾದರೆ ಓಪನ್‌ ಪಾಲಿನೇಟಡ್‌ ವೆರೈಟಿ. ಸಾಂಪ್ರದಾಯಿಕ ತಳಿಯಿರಲಿ, ಸೆಲೆಕ್ಟೆಡ್‌ ತಳಿಯಿರಲಿ, ಓಪನ್‌ ಪಾಲಿನೇಟಡ್‌ ತಳಿಯಿರಲಿ, ಇವುಗಳಲ್ಲಿ ಎರಡು ಉತ್ತಮ ತಳಿಯನ್ನು (ಬ್ರೀಡ್/ವೆರೈಟಿಯನ್ನು) ಆರಿಸಿ ಅವುಗಳ ನಡುವೆ ನಿಯಂತ್ರಿತ ಪರಾಗಸ್ಪರ್ಷ‌ (ಹೈಬ್ರಿಡೈಸೇಶನ್ ಅಥವಾ ಕ್ರಾಸಿಂಗ್‌) ನಡೆಸಿ ಅಭಿವೃದ್ಧಿ ಪಡಿಸಿದ ತಳಿಯೇ ಮಿಶ್ರತಳಿ ಅಥವಾ ಸಂಕರಣ ತಳಿ ಅಥವಾ ಹೈಬ್ರಿಡ್.‌ ಎರಡು ಉತ್ತಮಗಳ ಸಂಗಮದಿಂದ ಅತ್ಯುತ್ತಮವೊಂದು ಸಿಕ್ಕುವದಿದೆಯೆಲ್ಲಾ (ಇದಕ್ಕೆ ಹೆಟರೋಸಿಸ್‌ ಎನ್ನಲಾಗುತ್ತದೆ), ಅದೇ ಹೈಬ್ರಿಡ್‌ಗಳ ಉಪಯುಕ್ತತೆ.

ನೀಲಂ ಮಾವಿನ ಬಗ್ಗೆ ದಕ್ಷಿಣ ಭಾರತೀಯರಾದ ನಮಗೆಲ್ಲಾ ತಿಳಿದೇ ಇದೆ. ನೀಲಂನದು ದಪ್ಪ ಸಿಪ್ಪೆಯ, ಅಂಡಾಕಾರದ, ಮಧ್ಯಮ ಗಾತ್ರದ ಹಣ್ಣುಗಳು; ಕೊಯ್ದ ಮೇಲೆ ಇವುಗಳ ತಾಳಿಕೆ ಬಾಳಿಕೆಯೂ ಹೆಚ್ಚು. ದಶೇರಿ ಅನ್ನುವ ಉತ್ತರ ಭಾರತದ ಮಾವೂ ನಮಗೆ ಪರಿಚಿತ. ಬಂಗಾರ ಬಣ್ಣದ, ಕೆಂಪು ಕೆನ್ನೆಯ, ದೊಡ್ಡಗಾತ್ರದ, ರಸಭರಿತ ಸಿಹಿಸಿಹಿ ಹಣ್ಣುಗಳನ್ನು ಕತ್ರಿನಾಕೈಫ್‌ ಜ್ಯೂಸ್‌ ಮಾಡಿ ಸವಿಯುವ ಜಾಹೀರಾತನ್ನು ನಾವು ನೋಡಿದ್ದೇವೆ. ನೀಲಂ ಮತ್ತು ದಶೇರಿ ತಮ್ಮದೇ ಆದ ವಿಶಿಷ್ಟ ಗುಣವುಳ್ಳ ಸ್ಳಳೀಯ ತಳಿಗಳು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಐಎಆರ್‌ಐ ನೀಲಂನ ತಾಳಿಕೆ ಬಾಳಿಕೆ, ದಶೇರಿಯ ಮಧುರ ಸವಿಯನ್ನು ಒಟ್ಟುಗೂಡಿಸುವ ಯೋಚನೆಯಿಂದ ನಡೆಸಿದ ಪ್ರಯೋಗಾರ್ಥದ ಫಲವಾಗಿ ಸಿಕ್ಕಿದ್ದು ಮಲ್ಲಿಕಾ ಮತ್ತು ಆಮ್ರಪಾಲಿ. ಮಲ್ಲಿಕಾದ ಅಮ್ಮ ನೀಲಂ, ಅಪ್ಪ ದಶೇರಿಯಾದರೆ ಆಮ್ರಪಾಲಿಯ ಅಮ್ಮ ದಶೇರಿ, ಅಪ್ಪ ನೀಲಂ!

ಹೈಬ್ರಿಡ್‌ಗಳನ್ನು ಹೇಗೆ ಅಭಿವೃದ್ಧಿ ಪಡಿಸಲಾಗುತ್ತದೆ?

ಮೇಲೆ ಹೇಳಿದಂತೆ ಎರಡು ತಳಿಗಳ ನಡುವೆ ನಿಯಂತ್ರಿತ ಪರಾಗಸ್ಪರ್ಷದ ಮೂಲಕ ಹೈಬ್ರಿಡ್‌ ತಳಿಯನ್ನು ಪಡೆಯಲಾಗುತ್ತದೆ.

·        ಮೊದಲು ಸೂಕ್ತ ಗುಣಗಳುಳ್ಳ ತಾಯಿ ತಂದೆ ತಳಿಯನ್ನು ಆರಿಸಲಾಗುತ್ತದೆ. ಈ ತಳಿಗಳು ಅನುವಂಶೀಕವಾಗಿ ಶುದ್ಧವಾಗಿರುತ್ತವೆ.

·        ತಾಯಿಯೆಂದು ಆಯ್ಕೆ ಮಾಡಿದ ಸಸ್ಯದ ಹೂವಿನಲ್ಲಿ ಪರಾಗವನ್ನು ತೆಗೆಯಲಾಗುತ್ತದೆ. ಮತ್ತು ಇತರೇ ಹೂವಿನ ಪರಾಗ ಸ್ಪರ್ಷವಾಗದಂತೆ ಮುಚ್ಚಿಡಲಾಗುತ್ತದೆ. ತಂದೆಯೆಂದು ಆರಿಸಿದ ಸಸ್ಯದಿಂದ ಪರಾಗವನ್ನು ಸಂಗ್ರಹಿಸಿ ಈ ಹೂವಿಗೆ ವರ್ಗಾಯಿಸಲಾಗುತ್ತದೆ.

·        ಪರಾಗಸ್ಪರ್ಶವು ಯಶಸ್ವಿಯಾಗಿ ಮೂಡಿದ ಹಣ್ಣುಗಳಿಂದ ಬೀಜಗಳನ್ನು ಸಂಗ್ರಹಿಸಿ ಸಸಿ ಮಾಡಲಾಗುತ್ತದೆ. ಪ್ರತಿಯೊಂದು ಬೀಜವು ತಂದೆ ತಾಯಿ ಇಬ್ಬರ ಗುಣಲಕ್ಷಣಗಳೂ ಮಿಶ್ರವಾಗಿರುವ ಸಂಭಾವ್ಯ ಹೊಸ ಹೈಬ್ರಿಡ್ ಆಗಿರುತ್ತದೆ

·        ಸಸಿಗಳು ಬೆಳೆದಂತೆ ಅಪೇಕ್ಷಣೀಯ ಲಕ್ಷಣಗಳಿಗಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

·        ಅತ್ಯಂತ ಭರವಸೆಯ ಸಂತತಿಯನ್ನು ಕ್ಷೇತ್ರ ಪ್ರಯೋಗಗಳಿಗೆ ಸ್ಥಳಾಂತರಿಸಲಾಗುತ್ತದೆ.

·        ವ್ಯಾಪಕವಾದ ಕ್ಷೇತ್ರ ಪ್ರಯೋಗ, ಮೌಲ್ಯಮಾಪನದ ನಂತರ ಈ ಸಂತತಿಯನ್ನು ಹೈಬ್ರಿಡ್‌ ಎಂದು ನೋಂದಣಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಹೈಬ್ರಿಡ್ ಅಭಿವೃದ್ಧಿ ಮೇಲೆ ಓದಿದಷ್ಟು ಸುಲಭವಲ್ಲ. ಪ್ರತಿ ಹಂತದಲ್ಲೂ ಸಾಕಷ್ಟು ಪರಿಶ್ರಮವಿದೆ; ಸಂಪನ್ಮೂಲಗಳ ಅವಶ್ಯಕತೆಯಿದೆ. ಬೇಕಾದ ಗುಣವುಳ್ಳ ಸಂತತಿ ಸಿಕ್ಕೇ ಬಿಡುತ್ತದೆಂಬ ಖಾತ್ರಿಯಿಲ್ಲ. ಸಿಕ್ಕರೂ ಅದು ಸದ್ಯಕ್ಕಿರುವ ತಳಿಗಳಿಗಿಂತ ಉತ್ತಮ ಗುಣ ತೋರಬೇಕು, ಆ ಗುಣಗಳು ಅನುವಂಶಿಕವಾಗಿ ಸ್ಥಿರವಾಗಿರಬೇಕು ಇತ್ಯಾದಿ. ಕೆಲವೊಮ್ಮೆ ವಿಜ್ಞಾನಿಗಳ ಇಡೀ ಜೀವಮಾನದ ಸಾಧನೆ ಇದರಲ್ಲಿ ಅಡಗಿರುತ್ತದೆ. ಬಹುವಾರ್ಷಿಕ ಹಣ್ಣಿನ ಬೆಳೆಗಳಿಂತ ಏಕವಾರ್ಷಿಕ ತರಕಾರಿ ಬೆಳೆಗಳಲ್ಲಿ ಈ ಚಟುವಟಿಕೆ ವೇಗವಾಗಿ ನಡೆಯುತ್ತದೆ. ಹಾಗಾಗಿ ತರಕಾರಿಗಳಲ್ಲಿ ಹೈಬ್ರಿಡ್‌ಗಳ ಸಂಖ್ಯೆ ಹೆಚ್ಚು.

ಹೈಬ್ರಿಡ್‌ ಏಕೆ ಬೇಕು?

ರೈತರಿಗೆ: ಹೆಚ್ಚಿನ ಇಳುವರಿ, ರೋಗ ನಿರೋಧಕತೆ ಮತ್ತು ಹವಾಮಾನ ಒತ್ತಡಕ್ಕೆ ಸಹಿಷ್ಣುಗಳಾಗಿರುವ ಹೈಬ್ರಿಡ್‌ ಬೆಳೆಯಿಂದಾಗಿ ಕೃಷಿಯಲ್ಲಿ ನಷ್ಟ ಕಡಿಮೆ.  ಏಕರೂಪವಾಗಿರುವ ಉತ್ಪನ್ನದಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭವನ್ನೂ ನಿರೀಕ್ಷಿಸಬಹುದು.

ಗ್ರಾಹಕರಿಗೆ: ಉತ್ತಮ ಗುಣಮಟ್ಟಕ್ಕಾಗಿ, ರುಚಿಗಾಗಿ, ಪೌಷ್ಟಿಕಾಂಶಕ್ಕಾಗಿ, ತಾಳಿಕೆಗಾಗಿ ಅಭಿವೃದ್ಧಿ ಪಡಿಸಿದ ಹೈಬ್ರಿಡ್‌ಗಳು ಗ್ರಾಹಕರಿಗೂ ಉಪಕಾರಿ. ಹೈಬ್ರಿಡ್‌ಗಳಿಂದ ಕೃಷಿ ಉತ್ಪಾದಕತೆ ಹೆಚ್ಚುವ ಕಾರಣ ಹಣ್ಣು ತರಕಾರಿಗಳು ಕೈಗೆಟುಕುವ ಬೆಲೆಯಲ್ಲೂ ಲಭ್ಯವಾಗಬಲ್ಲವು.

ಹೈಬ್ರಿಡ್‌ಗಳ ಬಗ್ಗೆ ಒಂದಿಷ್ಟು ಸತ್ಯ ಮಿಥ್ಯ

·        ಹೈಬ್ರಿಡ್‌ಗಳು ಅನೈಸರ್ಗಿಕ, ಹೈಬ್ರಿಡೈಸೇಶನ್ ಎನ್ನುವುದು ಪ್ರಯೋಗಾಲಯದಲ್ಲಿ ನಡೆಯುವ ಅಸ್ವಾಭಾವಿಕ ಪ್ರಕ್ರಿಯೆ

ಹೈಬ್ರಿಡೈಸೇಶನ್‌ ಕ್ರಿಯೆಯನ್ನು ನಾವು ಕಲಿತದ್ದೇ ಪ್ರಕೃತಿಯಿಂದ. ಸಸ್ಯಗಳ ಕ್ರಾಸಿಂಗ್‌ ಬ್ರೀಡಿಂಗ್‌ ಅನ್ನು ಅರಿವಿಲ್ಲದೆಯೇ ಶತಮಾನಗಳಿಂದ ಅಭ್ಯಸಿಸುತ್ತಿದ್ದೇವೆ. ಹೈಬ್ರಿಡೈಸೇಶನ್‌ ಪ್ರಯೋಗಾಲಯದಲ್ಲಿ ನಡೆಯುವ ಕ್ರಿಯೆಯೂ ಅಲ್ಲ. ಸಸ್ಯಗಳ ಸಂತಾನೋತ್ಪತ್ತಿಯಂತೆ ತೆರೆದ ಬಯಲಲ್ಲಿ ನಡೆಯುವ ತೀರಾ ಸಹಜ ಕ್ರಿಯೆ. ಇದರಲ್ಲಿ ವಿಜ್ಞಾನಿಗಳು ಜೈವಿಕ ಮಟ್ಟದಲ್ಲಿ ಯಾವುದೇ ಮಾರ್ಪಾಡುಗಳನ್ನೂ ಮಾಡುವುದಿಲ್ಲ. ಹಾಗಾಗಿ ಹೈಬ್ರಿಡ್‌ಗಳು ಕೃತಕವೆಂಬ ಮಾತಿನಲ್ಲಿ ಹುರುಳಿಲ್ಲ. ನಾವು ನೀವೂ ಕೂಡಾ ಮನೆಯಲ್ಲಿ ಹೈಬ್ರಿಡ್‌ಗಳ ಉತ್ಪಾದನೆ ಮಾಡಬಹುದು; ನೋಂದಣಿ ಕೂಡಾ ಮಾಡಬಹುದು. ಇದನ್ನು ರೈತರ ತಳಿ (ಫಾರ್ಮರ್ಸ್‌ ವೆರೈಟಿ) ಎಂದು ಗುರುತಿಸುವ ಸವಲತ್ತನ್ನು ಕಾನೂನು ಕಲ್ಪಿಸಿದೆ.

·        ಹೈಬ್ರಿಡ್‌ಗಳನ್ನು ಕೀಟನಾಶಕ, ಗೊಬ್ಬರ ಸುರಿದು ಬೆಳೆಯಲಾಗುತ್ತದೆ

ಹೈಬ್ರಿಡ್‌ಗಳಿಗೆ ಕೀಟನಾಶಕ ಗೊಬ್ಬರಗಳ ಅವಶ್ಯಕತೆ ಹೆಚ್ಚು ಎನ್ನುವ ಕಲ್ಪನೆಯೇ ತಪ್ಪು. ವಾಸ್ತವವಾಗಿ ಹೈಬ್ರಿಡ್‌ಗಳು ರಸಗೊಬ್ಬರಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತವೆ. ಅಂದರೆ ಕಡಿಮೆ ಪ್ರಮಾಣದ ಗೊಬ್ಬರವೂ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಅಷ್ಟಕ್ಕೂ ರೋಗ ಕೀಟ ನಿರೋಧಕತೆಗೆಂದು ಹೈಬ್ರಿಡ್‌ ಅಭಿವೃದ್ಧಿ ಪಡಿಸಿದಾಗ ಕೀಟನಾಶಕದ ಅಗತ್ಯವಾದರೂ ಏನು. ತಳಿ ಯಾವುದೇ ಇರಲಿ ಕೀಟನಾಶಕ ರಸಗೊಬ್ಬರ ಬಳಕೆ ವೈಯಕ್ತಿಕ. ದೇಸೀ ತಳಿಗಳನ್ನೂ ಕೀಟನಾಶಕ ಸುರಿದು ಬೆಳೆವ ರೈತರಿದ್ದಾರೆ. ಹೈಬ್ರಿಡ್‌ಗಳನ್ನೂ ಸಾವಯವವಾಗಿ ಬೆಳೆವ ರೈತರಿದ್ದಾರೆ.

·        ಹೈಬ್ರಿಡ್‌ಗಳು ಸಾವಯವವಲ್ಲ

ಸಾವಯವ ಮತ್ತು ರಾಸಾಯನಿಕ ಎನ್ನುವುದು ಬೆಳೆಗಾರನ ಕೃಷಿ ಪದ್ಧತಿಯನ್ನು ಅವಲಂಬಿಸಿರುತ್ತದೆ ಹೊರತು ಬೀಜ ಅಥವಾ ತಳಿಯ ಪ್ರಕಾರವನ್ನಲ್ಲ. ಹೈಬ್ರಿಡ್‌ ಬೀಜ ಬಿತ್ತನೆ ಮಾಡಿಯೂ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಬಹುದು.

·        ಹೈಬ್ರಿಡ್‌ಗಳಿಗಿಂತ ದೇಸೀ ತಳಿಗಳೇ ಉತ್ತಮ

ಸ್ಥಳೀಯ ಭಾವನೆಗಳೊಂದಿಗೆ ಬೆಸೆದುಕೊಂಡ ದೇಸೀ ಸಾಂಪ್ರದಾಯಿಕ ತಳಿಗಳಿಗೆ ತಮ್ಮದೇ ಆದ ಮಹತ್ವವಿದೆ. ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವಿಕೆ, ರೋಗ ನಿರೋಧಕತೆಯಲ್ಲಿ ಸುಧಾರಿತ ತಳಿಗಳಿಗಿಂತಲೂ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲವು. ಆದರೆ ಸ್ವಾಭಾವಿಕವಾಗಿ ಅವುಗಳ ಇಳುವರಿ ಕಡಿಮೆ, ವಾಣಿಜ್ಯ ಕೃಷಿಯಲ್ಲಿ ಅವು ಲಾಭದಾಯಕವಲ್ಲ. ಇಂತಹ ಸಂದರ್ಭದಲ್ಲಿ ಹೈಬ್ರಿಡ್‌ಗಳನ್ನೇ ಮೆಚ್ಚಬೇಕಾಗಬಹುದು.

·        ಹೈಬ್ರಿಡ್‌ ಹಣ್ಣು ತರಕಾರಿಗಳಿಗೆ ದೇಸಿ ರುಚಿ ಇರುವುದಿಲ್ಲ

ವಾಸ್ತವವಾಗಿ ಕೆಲವು ಬೆಳೆಗಳಲ್ಲಿ ರುಚಿ ಹೆಚ್ಚಿಸಲೆಂದೇ ತಳಿ ಅಭಿವೃದ್ಧಿ ಮಾಡಲಾಗುತ್ತದೆ. ಇಳುವರಿಯನ್ನು ಗಮನದಲ್ಲಿರಿಸಿ ಬ್ರೀಡಿಂಗ್‌ ಮಾಡಿದಾಗ ಅನುವಂಶಿಕ ಧಾತುಗಳ ಮರುಹೊಂದಾಣಿಕೆಯಿಂದಾಗಿ ಕೆಲವು ಗುಣಗಳು ನಷ್ಟವಾಗಬಹುದೆಂಬ ವಾದವಿದೆ. ಆದರೂ ಇದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.

·        ಹೈಬ್ರಿಡ್‌ಗಳು ಪರಿಸರ ಸ್ನೇಹಿಯಲ್ಲ, ಹೈಬ್ರಿಡ್‌ ಬೆಳೆಯುವುದರಿಂದ ಮಣ್ಣು ಹಾಳು, ನೀರು ಪೋಲು.

ನಮ್ಮ ಕೃಷಿ ಭೂಮಿಯ ಮಣ್ಣಿನ ಆರೋಗ್ಯ ನಮ್ಮ ಕೃಷಿ ಪದ್ಧತಿಯನ್ನು ಅವಲಂಬಿಸಿದೆ ವಿನಃ ತಳಿಯನ್ನಲ್ಲ. ರಾಸಾಯನಿಕಗಳ ಅನಿಯಂತ್ರಿತ ಬಳಕೆ, ಅಸಮರ್ಪಕ ನೀರಾವರಿಯಿಂದ ಮಣ್ಣು ಹಾಳಾಗಬಲ್ಲದು. ನೀರು ಮತ್ತು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲೆಂದೇ ಹೈಬ್ರಿಡ್‌ಗಳನ್ನು ಅಭಿವೃದ್ಧಿಪಡಿಸಲಾದಾಗ ಅವುಗಳ ಬಳಕೆಯಿಂದ ಮಣ್ಣಿಗೆ ಹಾನಿ, ನೀರು ಪೋಲಾಗುವುದು ಹೇಗೆ ಸಾಧ್ಯ.

·        ಹೈಬ್ರಿಡ್‌ ಗಳಿಂದ ಜೀವವೈವಿಧ್ಯದ ನಷ್ಟವಾಗುತ್ತದೆ

ಹೀಗೇ ಹೈಬ್ರಿಡ್‌ಗಳನ್ನೇ ಬೆಳೆಯುತ್ತಾ ಹೋದರೆ ಮುಂದೊಂದು ದಿನ ದೇಸೀ ತಳಿಗಳೆ ಇಲ್ಲವಾಗುತ್ತವೆ; ಹೈಬ್ರಿಡ್‌ಗಳು ದೇಸೀ ತಳಿಗಳೊಡನೆ ಪರಾಗಸ್ಪರ್ಷ ಹೊಂದಿ ತಳಿ ನಷ್ಟ ಸಂಭವಿಸುತ್ತದೆ ಎನ್ನುವುದು ಕೆಲವರ ಧೋರಣೆ. ಮೂಲತಃ ಹೈಬ್ರಿಡ್‌ ಅಭಿವೃದ್ಧಿಪಡಿಸುವಾಗ ವಿಶೇಷ ಗುಣಗಳಿಗಾಗಿ ಸಾಂಪ್ರದಾಯಿಕ ತಳಿಗಳನ್ನು ಅವಲಂಬಿಸಬೇಕಾಗುತ್ತದೆ. ಹಾಗಾಗಿ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸಲು ಸಂಶೋಧನಾ ಕೇಂದ್ರಗಳು ಸಾಕಷ್ಟು ಪ್ರಯತ್ನ ಮಾಡುತ್ತವೆ. ರೈತರು, ಹವ್ಯಾಸಿ ಬೆಳೆಗಾರರು ಸಾಂಪ್ರದಾಯಿಕ ತಳಿಗಳನ್ನು ಬೆಳೆಯಲು ಪ್ರೋತ್ಸಾಹವೂ ಇದೆ. ಅನೇಕ ಬೀಜ ಬ್ಯಾಂಕುಗಳು ದೇಸಿ ತಳಿಗಳ ಸಂರಕ್ಷಣೆಯಲ್ಲಿ ತೊಡಗಿವೆ. ಹಾಗಾಗಿ ಇವು ಮಾಯವಾಗುವ ಸಂಭವವಿಲ್ಲ. ಹೇಳಬೇಕೆಂದರೆ ನೈಸರ್ಗಿಕವಾಗಿ ತಳಿ ಉದ್ಭವವಾಗುವಂತೆ ದೇಸಿ ಮತ್ತು ಮಿಶ್ರತಳಿಗಳ ನಡುವೆ ಪರಾಗಸ್ಪರ್ಷ ನಡೆದರೆ ಜೀವವೈವಿಧ್ಯಕ್ಕೆ ಮತ್ತಷ್ಟು ಕೊಡುಗೆ ಸಾಧ್ಯ.

·        ಹೈಬ್ರಿಡ್ ಬೆಳೆಗಳು ವಾಣಿಜ್ಯ ಕೃಷಿಗೆ ಮಾತ್ರವೇ ಹೊರತು ಮನೆ ಬಳಕೆಗೆ ಅಲ್ಲ

ಉಳಿದೆಲ್ಲಾ ಬೆಳೆ ತಳಿಗಳಂತೆ ಹೈಬ್ರಿಡ್‌ಗಳನ್ನೂ ಹಿತ್ತಿಲಲ್ಲಿ ಬೆಳೆಯಬಹುದು. ಅನೇಕ ತೋಟಗಾರರು ಬೆಳೆಯುತ್ತಾರೆ ಕೂಡಾ. ಸಮಸ್ಯೆಯೆಂದರೆ ಹೈಬ್ರಿಡ್‌ ಬೀಜಗಳನ್ನು ಮನೆ ಬಳಕೆಗೆ ಗ್ರಾಮ್‌ ಲೆಕ್ಕದಲ್ಲಿ ಕೊಳ್ಳುವುದು ಸಾಧ್ಯವಿಲ್ಲ. ಕೆಜಿಗಟ್ಟಲೆ ಕೊಳ್ಳುವಾಗ ಹೈಬ್ರಿಡ್ ಬೀಜಗಳು ಸಾಂಪ್ರದಾಯಿಕ ಬೀಜಗಳಿಗಿಂತ ಹೆಚ್ಚು ವೆಚ್ಚವಾಗಬಹುದಾದರೂ, ಅವು ಕೀಟನಾಶಕ ರಾಸಾಯನಿಕಗಳ ಬಳಕೆಗೆ ಕಡಿವಾಣ ಹಾಕಬಲ್ಲವು.

·        ಕಸಿ ಗಿಡಗಳೆಲ್ಲಾ ಹೈಬ್ರಿಡ್‌

ಜನಸಾಮಾನ್ಯರ ತಲೆಯಲ್ಲಿ ಕುಳಿತುಹೋದ ಮತ್ತೊಂದು ತಪ್ಪು ಕಲ್ಪನೆಯಿದು. ಕಸಿ ಗಿಡಗಳೆಲ್ಲಾ ಹೈಬ್ರಿಡ್‌ಗಳಲ್ಲ. ಬೇರುಸಸ್ಯಕ್ಕೆ ಹೈಬ್ರಿಡ್‌ ತಳಿಯ ಕಸಿಕೊಂಬೆಯನ್ನು (ಸಯಾನ್)‌ ಕಟ್ಟಿದರೆ ಮಾತ್ರ ಅದು ಹೈಬ್ರಿಡ್‌ ಆಗಬಲ್ಲದು.

·        ಹೈಬ್ರಿಡ್‌ಗಳ ಹಣ್ಣು ತರಕಾರಿಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಹೈಬ್ರಿಡ್ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಸಾಂಪ್ರದಾಯಿಕ ತಳಿಗಳನ್ನು ತಿನ್ನುವಷ್ಟೇ ಸುರಕ್ಷಿತವಾಗಿದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯು ಇತರ ಯಾವುದೇ ಆಹಾರದಂತೆಯೇ ಹೈಬ್ರಿಡ್‌ಗಳನ್ನೂ ಸಂಸ್ಕರಿಸುತ್ತದೆ. ವಾಸ್ತವವಾಗಿ, ಅನೇಕ ಹೈಬ್ರಿಡ್‌ಗಳು ಸಾಂಪ್ರದಾಯಿಕ ತಳಿಗಳಿಗಿಂತ ಹೆಚ್ಚು ಪೌಷ್ಟಿಕ, ಹೆಚ್ಚು ಔಷಧೀಯ. ವಿಟಮಿನ್‌ ಎ ವರ್ಧಿತ ಮಾವು, ವಿಟಮಿನ್‌ ಸಿ ವರ್ಧಿತ ನೆಲ್ಲಿ, ಕುರ್ಕುಮಿನ್‌ ವರ್ಧಿತ ಅರಶಿಣ, ಹೀಗೆ ಬಹಳಷ್ಟು ಬೆಳೆಗಳಲ್ಲಿ ಹೈಬ್ರಿಡ್‌ಗಳನ್ನು ಪೌಷ್ಟಿಕಾಂಶದ ವರ್ಧನೆಗೆ, ಔಷಧೀಯ ಗುಣಗಳ ವರ್ಧನೆಗೆಂದೇ ಅಭಿವೃದ್ಧಿಪಡಿಸಲಾಗಿದೆ.

·        ಹೈಬ್ರಿಡ್‌ ಬೀಜಗಳ ಮರುಬಳಕೆ ಸಾಧ್ಯವಿಲ್ಲ.

ಹೈಬ್ರಿಡ್‌ ಸಸ್ಯಗಳಿಂದ ಪಡೆದ ಬೀಜಗಳು ಬಂಜೆಯಾಗಿರುತ್ತವೆ, ಅವುಗಳನ್ನು ಉಳಿಸಿ ಮತ್ತೆ ಬಿತ್ತನೆ ಮಾಡಿದರೆ ಫಲವತ್ತಾಗಿರುವ ಸಸ್ಯಗಳನ್ನು ಪಡೆಯುವುದು ಸಾಧ್ಯವಿಲ್ಲ ಎಂಬ ಕಲ್ಪನೆ ತಪ್ಪು. ಹೈಬ್ರಿಡ್‌ ಸಸ್ಯಗಳಿಂದ ಪಡೆದ ಬೀಜಗಳು ಬಂಜೆಯಾಗಿರುವುದಿಲ್ಲ, ಅವೂ ಫಲ ಕೊಡಬಲ್ಲವು. ಆದರೆ ಹೈಬ್ರಿಡ್‌ಗಳ ಮುಂದಿನ ಪೀಳಿಗೆಯಲ್ಲಿ ತಾಯಿ ತಂದೆಯ ಗುಣಗಳು ಪ್ರತ್ಯೇಕವಾಗುತ್ತವೆ; ಹಾಗಾಗಿ ಅವುಗಳಲ್ಲಿ ಮೂಲ ಹೈಬ್ರಿಡ್‌ನ ಗುಣಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಹೈಬ್ರಿಡ್ ಬೀಜಗಳು ಮೊಳಕೆಯೊಡೆಯುತ್ತವೆ, ಆದರೆ ಅವು ಏಕರೂಪದ ವಿಶ್ವಾಸಾರ್ಹ ಸಂತತಿಯನ್ನು ಉತ್ಪಾದಿಸುವುದಿಲ್ಲ. ಹೈಬ್ರಿಡ್ ಬೀಜಗಳ ಸಂತತಿಯನ್ನು ಉಳಿಸಿ ಬಳಸಿದರೆ ಇಳುವರಿ ಗುಣಮಟ್ಟ ಏರುಪೇರಾಗಿ ನಷ್ಟವಾಗಬಹುದು. ತರಕಾರಿ ಬೆಳೆ ಮತ್ತು ಕ್ಷೇತ್ರ ಬೆಳೆಗಳಲ್ಲಿ ಏಕರೂಪತೆ, ಹೆಚ್ಚಿನ ಇಳುವರಿ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ರೈತರು ಪ್ರತಿ ಬಿತ್ತನೆಯಲ್ಲಿ ತಾಜಾ ಹೈಬ್ರಿಡ್ ಬೀಜಗಳನ್ನು ಖರೀದಿಸಬೇಕು.

·        ಹೈಬ್ರಿಡ್ ತಳಿಗಳು ಬೀಜ ಕಂಪನಿಗಳಿಗೆ ಹಣ ಮಾಡಲೊಂದು ಮಾರ್ಗವಷ್ಟೇ

ಶತಮಾನಗಳ ಹಿಂದೆ ಕೃಷಿ ಶುರುವಾದಾಗ ಮೊದಲ ನಡೆದಿದ್ದು ಕಾಡು ಬೆಳೆಗಳನ್ನು ವ್ಯವಸಾಯಕ್ಕೆ ಒಗ್ಗಿಸುವ ʼಡೊಮೆಸ್ಟಿಕೇಶನ್‌ʼ ಕ್ರಿಯೆ. ಹಿಂದೆಯೇ ನಡೆದದ್ದು ಉತ್ತಮ ಸಸ್ಯಗಳ ಬೀಜ ಸಂಗ್ರಹ. ಅಂದಿನಿಂದ ಇಂದಿನ ವರೆಗೂ ಯಶಸ್ವಿ ಕೃಷಿಯ ಅಡಿಪಾಯ ಗುಣಮಟ್ಟದ ಬೀಜವೇ ಆಗಿದೆ. ಮುಂಚೆಲ್ಲಾ ರೈತರೇ ಬೀಜವನ್ನು ಉಳಿಸಿ ಬೆಳೆಸುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ವಾಣಿಜ್ಯ ಕೃಷಿಯಲ್ಲಿ ಇಳುವರಿ ಪ್ರಶ್ನೆ ಉದ್ಭವಿಸಿದಾಗ ರೈತರ ಬೀಜಗಳು ತಳಿಗಳು ತೃಪ್ತಿದಾಯಕವಲ್ಲ. ಕಾರಣ ಹೈಬ್ರಿಡ್‌ಗಳು ಪ್ರವರ್ಧಮಾನಕ್ಕೆ ಬಂದವು. ನಿಧಾನಕ್ಕೆ ಹೈಬ್ರಿಡ್ ಬೀಜಗಳ ಉತ್ಪಾದನೆ ಆದಾಯ ತರುವ ಉದ್ದಿಮೆಯೂ ಆಯಿತು.

ಮುಂಚೆ ಹೇಳಿದಂತೆ ಬೀಜಗಳು ಗುಣಮಟ್ಟದ್ದಾಗಿರಬೇಕು, ಬೆಳೆ ಹುಲುಸಾಗಬೇಕು ಎಂದರೆ ಹೈಬ್ರಿಡ್‌ ತಳಿಗಳ ಬೀಜವನ್ನು ಪ್ರತಿ ಸಲವೂ ಕೊಳ್ಳಬೇಕಾಗಬಹುದು. ಆದರೂ ಅದು ಅನಿವಾರ್ಯವಲ್ಲ, ಸಾಂಪ್ರದಾಯಿಕ ಬೀಜಗಳು ಲಭ್ಯವಿವೆ ಮತ್ತು ರೈತರಿಗೆ ಯಾವುದು ಉತ್ತಮ ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ. ಹಾಗಾಗಿ ಹೈಬ್ರಿಡ್‌ಗಳು ಖಾಸಗಿ ಬೀಜ ಕಂಪನಿಗಳ ಪಿತೂರಿ ಎಂದರೆ ತಪ್ಪಾಗುತ್ತದೆ. ಎಷ್ಟೋ ಸರ್ಕಾರಿ ಸಂಸ್ಥಗೆಗಳು ಕೃಷಿ ವಿಶ್ವವಿದ್ಯಾಲಯಗಳೂ ಒಳ್ಳೊಳ್ಳೆ ಹೈಬ್ರಿಡ್ ಅಭಿವೃದ್ಧಿಪಡಿಸಿ ಬೀಜೋತ್ಪಾದನೆಯಲ್ಲಿ ತೊಡಗಿವೆ. ಕಡಿಮೆ ದರದಲ್ಲೂ ಪೂರೈಸುತ್ತಿವೆ.

·        ಹೈಬ್ರಿಡ್‌ ಬೀಜಗಳ ದರ ಹೆಚ್ಚು

ಖಾಸಗಿ ಸಂಸ್ಥೆಯಿರಲಿ ಸರ್ಕಾರೀ ಸಂಸ್ಥೆಯಿರಲಿ, ಹೈಬ್ರಿಡ್‌ಗಳ ಸಂಶೋಧನೆ ಅಭಿವೃದ್ಧಿಗೆ ಸಾಕಷ್ಟು ಹಣ, ಸಮಯ, ಸಂಪನ್ಮೂಲವನ್ನು ವ್ಯಯಮಾಡಿರುತ್ತವೆ. ಮತ್ತು ಹೈಬ್ರಿಡ್‌ಗಳ ಗುಣಮಟ್ಟ ಕಾಪಾಡಲು ಪ್ರತಿ ಬಾರಿ ನಿಯಂತ್ರಿತ ಪರಾಗಸ್ಪರ್ಷ ನಡೆಸಿ ಉತ್ಪಾದನೆ ಮಾಡಬೇಕಾಗುತ್ತದೆ. ಸ್ವಾಭಾವಿಕವಾಗಿ ಬೀಜಗಳ ದರವೂ ಹೆಚ್ಚುತ್ತದೆ. ಆದರೆ ಇವುಗಳ ವಿಶ್ವಾಸಾರ್ಹ ಗುಣಮಟ್ಟ, ಹೆಚ್ಚಿನ ಇಳುವರಿ ವೆಚ್ಚವನ್ನು ಪರಿಣಾಮಕಾರಿಯಾಗಿಸುತ್ತದೆ.

·        ಹೈಬ್ರಿಡ್‌ಗಳು ಕುಲಾಂತರಿಗಳು

ಕುಲಾಂತರಿಗಳೆಂದರೆ ಬೇರೆ ಜೀವಿಯ ಅನುವಂಶಿಕ ಧಾತುಗಳನ್ನು ಒಳಗೊಂಡ ತಳಿಗಳು. ವಂಶವಾಹಿಯಲ್ಲಿ ಕೃತಕ ಮಾರ್ಪಾಡುಗಳನ್ನು ಮಾಡಿ ಪಡೆಯುವ ಈ ತಳಿಗಳು ಹೈಬ್ರಿಡ್‌ ಆಗಿರಲು ಸಾಧ್ಯ. ಆದರೆ ಹೈಬ್ರಿಡ್‌ಗಳೆಲ್ಲಾ ಕುಲಾಂತರಿಗಳಲ್ಲ. ಹೈಬ್ರಿಡ್‌ಗಳ ಅಭಿವೃದ್ಧಿ ನೈಸರ್ಗಿಕ ಕ್ರಿಯೆಯನ್ನು ಅನುಸರಣೆಯಷ್ಟೆ; ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ನಡೆಯುವ ಕೃತಕ ಕ್ರಿಯೆಯಲ್ಲ.

ಕೊನೆಮಾತು

ನಮ್ಮ ದೇಶಕ್ಕೆ ಹೈಬ್ರಿಡ್‌ಗಳ ಪರಿಚಯವಾಗಿದ್ದು ಹಸಿರು ಕ್ರಾಂತಿಯ ಕಾಲಕ್ಕೆ. ಒಂದು ಹೊತ್ತಿನ ಆಹಾರಕ್ಕೂ ತತ್ವಾರವಿದ್ದ ಆ ಕಾಲದಲ್ಲಿ ಹೈಬ್ರಿಡ್‌ಗಳು ಭರವಸೆಯ ಆಶಾಕಿರಣವಾಗಿ ಕಂಡಿದ್ದವು. ಹಸಿರು ಕ್ರಾಂತಿಯ ಕಾರಣದಿಂದ ಇಂದು ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಆದರೆ ಈಗ ಪಂಜಾಬ್‌ನಂತ ರಾಜ್ಯಗಳನ್ನು ಕ್ಯಾನ್ಸರ್‌ ಕೂಪಕ್ಕೆ ತಳ್ಳಿದೆ ಎಂಬ ಕಾರಣಕ್ಕೆ ಹಸಿರು ಕ್ರಾಂತಿಯನ್ನು ಹಳಿಯಲಾಗುತ್ತಿದೆ. ಇದರಲ್ಲಿ ದೂಷಿಸಬೇಕಾದ್ದು ಹೈಬ್ರಿಡ್‌ಗಳನ್ನಲ್ಲ, ಹಸಿರುಕ್ರಾಂತಿಯನ್ನಲ್ಲ, ಬದಲಿಗೆ ರಾಸಾಯನಿಕಗಳನ್ನು ದುರ್ಬಳಕೆ ಮಾಡಿದ ರೈತರನ್ನ.

ಜನಸಾಮಾನ್ಯರ ಪ್ರಕಾರ ಇಂದು ಮಾರುಕಟ್ಟೆಯಲ್ಲಿರುವ ಹಣ್ಣು ತರಕಾರಿಗಳೆಲ್ಲಾ ನಕಲಿ. ಹೊಳೆಯುವ ಮೈಯಿರುವ ನೋಡಲು ಚಂದವಿರುವ ಹಣ್ಣು ತರಕಾರಿಗಳನ್ನು ಕೊಳ್ಳಬೇಡಿ, ಅವು ಹೈಬ್ರಿಡ್‌ಗಳು, ರಸಗೊಬ್ಬರ ರಾಸಾಯನಿಕ ಸುರಿದು ಬೆಳೆದಂತವು ಎಂದು ಹೇಳುವುದನ್ನು ಕೇಳಿರುತ್ತೇವೆ. ಅಷ್ಟಕ್ಕೂ ಹೈಬ್ರಿಡ್‌ಗಳನ್ನು ಅಭಿವೃದ್ದಿ ಪಡಿಸುವುದೇ ಮಾರುಕಟ್ಟೆಯ ಆಕರ್ಷಿಸಲು, ರಸಗೊಬ್ಬರ ರಾಸಾಯನಿಕ ಬಳಕೆ ತಗ್ಗಿಸಲು! ಹೈಬ್ರಿಡ್‌ಗಳು ಪ್ರಕೃತಿಯೇ ಉತ್ಪಾದಿಸುವ ಪರಿಪೂರ್ಣತೆಗೆ ಇನ್ನಷ್ಟು ಪುಷ್ಟಿಯಷ್ಟೇ ಹೊರತು ಕೃತಕತೆಯಲ್ಲ.


Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ