ಅಲೋ ವೆರಾ

 

‘ಅಲೋ ವೆರಾ’ - ಇಂತದ್ದೊಂದು ಸಸ್ಯದ ಬಗ್ಗೆ ಗೊತ್ತಿಲ್ಲದವರನ್ನು ಹುಡುಕುವುದೆಂದರೆ ಸಾವಿಲ್ಲದ ಮನೆಯಿಂದ ಸಾಸಿವೆ ತಂದಂತೆಯೇ! ಕೈತೋಟ-ಒಳಾಂಗಣದಲ್ಲಿ, ಅಲಂಕಾರಿಕವಾಗಿ-ಔಷಧಿಗಾಗಿ, ಲೋಳೇಸರದ ಪ್ರಸಿದ್ಧಿ ಇಲ್ಲಿಂದ ದಿಲ್ಲಿಯವರೆಗೆ ಹರಡಿರುವಂತದ್ದು.

‘ಅಲೋ ವೆರಾ’ ಎನ್ನುವುದೊಂದು ದ್ವಿನಾಮ. ‘ಅಲೋ’ ಎನ್ನುವುದು ಜಾತಿ (ಜೀನಸ್) ಯಾದರೆ ‘ವೆರಾ’ ಎನ್ನುವುದು ಪ್ರಭೇದ (ಸ್ಪೀಷೀಸ್). ಅರೇಬಿಕ್ ಭಾಷೆಯಿಂದ ಹುಟ್ಟಿದ ಅಲೋ ವೆರಾ ಶಬ್ಧಕ್ಕೆ ಮಿರುಗುವ ಕಹಿ ವಸ್ತು ಎಂಬ ಅರ್ಥವಿದೆ (ಬಹುಶಃ ಕಹಿ ರುಚಿಯ ಮಿರುಗುವ ಲೋಳೆಯ ಕಾರಣಕ್ಕಾಗಿ). ಸಕ್ಯುಲೆಂಟ್ ಸಸ್ಯಗಳ ಪೈಕಿ ಸೇರುವ ಅಲೋ ಗಳದ್ದು ಹತ್ತಿರತ್ತಿರ ಆರುನೂರು ಪ್ರಭೇದಗಳಿರುವ ಕುಲ; ತವರು ಉತ್ತರ ಆಫ್ರಿಕಾವಾದರೂ ಜಗತ್ತಿನಾದ್ಯಂತ ಉಷ್ಣ, ಸಮಶೀತೋಷ್ಣ, ಶುಷ್ಕ, ಹಿಮ ಪ್ರದೇಶದಲ್ಲಿಯೂ  ನಾಟಿಯಾಗಿ ಬೆಳೆಯುತ್ತವೆ.

ಈಜಿಪ್ಟ್, ಗ್ರೀಸ್, ಚೀನಾ, ಜಪಾನ್, ಭಾರತ ಸೇರಿದಂತೆ ಹಳೆಯ ನಾಗರಿಕತೆಯ ಅವಶೇಷಗಳಲ್ಲಿ, ಕಲ್ಲಿನ ಶಾಸಗಳಲ್ಲಿ, ತಾಳೆಗರಿಗಳಲ್ಲಿ ಇಣುಕುವ ಅಲೋವೆರಾದ ಬಳಕೆಗೆ ಆರುಸಾವಿರ ವರ್ಷಗಳ ಇತಿಹಾಸವಿದೆ. ಅತ್ಯಂತ ಹಳೆಯ ದಾಖಲೆ ಬೊಟ್ಟು ಮಾಡುವುದು ಈಜಿಪ್ಶಿಯನ್ ನಾಗರಿಕತೆಯೆಡೆಗೆ.

ಯಾವುದೇ ಪರಿಸ್ಥಿತಿಯಲ್ಲೂ ಬದುಕುವ ಅಲೋವೆರಾ ಈಜಿಪ್ಶಿಯನ್ ಫೇರೋಗಳ ಅಂತ್ಯಕ್ರಿಯೆಯಲ್ಲಿ ಅಮರತ್ವದ ಸಂಕೇತವಾಗಿ ಅವರ ಮುಂದಿನ ಪಯಣಕ್ಕೆ ಉಡುಗೊರೆಯಾಗಿ ಬಳಕೆಯಲ್ಲಿತ್ತಂತೆ. ಜಗತ್ತು ಕಂಡು ಅತ್ಯಂತ ಸುಂದರ ಹೆಣ್ಣು ಈಜಿಪ್ಶಿಯನ್ ರಾಣಿ ಕ್ಲಿಯೋಪಾತ್ರಾಳ ಸೌಂದರ್ಯದ ಗುಟ್ಟು ಇದಂತೆ. ಅಲೆಕ್ಸಾಂಡರ್ ಗಾಯಗೊಂಡಿದ್ದ ತನ್ನ ಸೈನಿಕರ ಉಪಚಾರಕ್ಕೆ ಅಗತ್ಯವಿದ್ದ ಅಲೋವೆರಾ ದೋಚಲು ಸೊಕೋಟ್ರಾ ದ್ವೀಪವನ್ನು ಆಕ್ರಮಣ ಮಾಡಿದ್ದನಂತೆ.

ಈಜಿಪ್ಟ್ ಜೊತೆಗೆ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿದ್ದ ಸುಮೇರಿಯನ್ನರು ಭಾರತ ಸೇರಿದಂತೆ ಏಷಿಯಾ ಖಂಡಕ್ಕೆ ಲೋಳೇಸರವನ್ನು ಪರಿಚಯಿಸಿರಬೇಕು. ಗಿಡಮೂಲಿಕೆಯಾಗಿ ನಮ್ಮ ಸಾಂಪ್ರದಾಯಿಕ ಪದ್ದತಿ, ಆಯುಷ್ ಚಿಕಿತ್ಸೆಯಲ್ಲಿ ಲೋಳೇಸರದ ಔಷಧೀಯ ಗುಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಹಗಲು ರಾತ್ರಿಗಳು ಉರುಳುತ್ತವೆ.

ಲೋಳೇಸರದ ಕೃಷಿ ಶುರುವಾಗಿದ್ದು ಅಮೇರಿಕೆಯಲ್ಲಿ, ಅವುಗಳ ವಿರೇಚಕ ಗುಣವುಳ್ಳ ‘ಅಲ್ಲೋಯಿನ್’ ಎಂಬ ಹಳದಿ ರಸಕ್ಕಾಗಿ. ನಂತರ ‘ಜೆಲ್’ಗಳ ಉತ್ಪಾದನೆ ಇವುಗಳ ಕೃಷಿಗೆ ಮರ್ಯಾದಿಯುತ ಹೆಸರು ತಂದು ಕೊಟ್ಟಿತ್ತು. ಇಂದು ತಂಪುಕಾರಕ ‘ಅಲೋ ಜೆಲ್’ ಆಹಾರ, ಸೌಂದರ್ಯ ವರ್ಧಕಗಳ ಉತ್ಪಾದನೆಯಲ್ಲಿ ಕಡ್ಡಾಯವಷ್ಟೇ!. ಇಷ್ಟೆಲ್ಲಾ ಕುತೂಹಲ ಇತಿಹಾಸವಿರುವ ಲೋಳೇಸರ ಕೆಲವೆಡೆ ಸ್ಥಳಿಯ ಸಸ್ಯ ಸಂಪತ್ತನ್ನು ಕಬಳಿಸಿ (invasive) ಬೆಳೆಯುವಷ್ಟರ ಮಟ್ಟಿಗೆ ವ್ಯಾಪ್ತವಾಗಿದೆ. ತೋಟಗಾರಿಕಾ ಬೆಳೆಯಾಗಿ ರಾಜಸ್ಥಾನ, ಆಂಧ್ರ ಪ್ರದೇಶ, ಗುಜರಾತ್ ನಲ್ಲಿ ನೂರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವ್ಯವಸಾಯದಲ್ಲಿದೆ.

ಇನ್ನು ಲೋಳೇಸರದ ಅಲಂಕಾರಿಕ ಬಳಕೆಯ ಬಗ್ಗೆ ಹೇಳುವುದೇ ಬೇಡ! ನನ್ನಲ್ಲಿರುವ ಲೋಳೆಸರ ಸತ್ತುಹೋಯಿತು ಎಂದು ಯಾರಾದರೂ ಹೇಳಿರುವುದನ್ನು ಕೇಳಿರಲೂ ಸಾಧ್ಯವಿಲ್ಲ; ಅಂತಹ ಗಟ್ಟಿ ಸಸ್ಯವಿದು! ಎಲೆಗಳಲ್ಲೇ ನೀರು ಸಂಗ್ರಹಿಸುವ ಲೋಳೆಸರಕ್ಕೆ ನೀರಿನ ಹಪಾಹಪಿಯಿಲ್ಲ, ರೋಗ ಕೀಟದ ಭಾದೆಯನ್ನು ಕಂಡವರಿಲ್ಲ, ಮನೆಯೊಳಗೆ-ಹೊರಗೆ ಎಲ್ಲಾದರೂ ಸೈ. ಇಂತದ್ದೊಂದು ಸಸ್ಯವಿದೆ ಎಂದರೇ ಆಶ್ಚರ್ಯ.

ಅಲೋವೆರಾವನ್ನು ಅಲಂಕಾರಿಕವಾಗಿ ಬೆಳೆಸುವ ಆಸಕ್ತಿಯಿದ್ದರೆ ಹೆಚ್ಚೆಚ್ಚು ಪ್ರಭೇದಗಳನ್ನು ಸಂಗ್ರಹಿಸಿ ಎನ್ನುವುದೊಂದೇ ಸಲಹೆ. ಅದೇ ಹಳೆ ತಿಳಿಹಸಿರು ಛಾಯೆಯ ಲೋಳೇಸರ ನೋಡಿ ಬೇಸರ ಬಂದಲ್ಲಿ ನಕ್ಷತ್ರ ಆಕಾರದ ಕೆಂಪು ಅಂಚಿನ ಎಲೆಗಳುಳ್ಳ ‘ಅಲೋ ಕ್ರಿಸ್ಮಸ್ ಕ್ಯಾರೋಲ್’, ಹುಲಿಯ ಚೂಪು ಹಲ್ಲಿನಂತ ಎಲೆಗಳುಳ್ಳ  ‘ಅಲೋ ಜುವೆನ್ನಾ’, ಬಿಳಿ ಚಿಬ್ಬಿನ ಎಲೆಗಳುಳ್ಳ ‘ಅಲೋ ಡೊರನ್ ಬ್ಲಾಕ್’, ಸೀರೆ ಲೇಸ್ ನಂತೆ ಬಿಳಿ ಅಂಚು ಹೊಂದಿರುವ ‘ಅಲೋ ಅರಿಸ್ಟಾಟ’, ಹುಲಿಯ ಮೈಯಂತೆ ಪಟ್ಟೆ ಪಟ್ಟೆ ಎಲೆಯ ‘ಅಲೋ ವೇರಿಗೆಟಾ’ ಮುಂತಾದ ಪ್ರಭೇದಗಳನ್ನು ಸಂಗ್ರಹಿಸಿ ಹೆಮ್ಮೆ ಪಡಬಹುದು. ಔಷಧಿಗೆ ಯೋಗ್ಯವಿಲ್ಲದಿದ್ದರೂ ನೋಡಿ ಆನಂದಿಸಲು ಮೋಸವಿಲ್ಲ.



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ