ಬೀಜವೋ ಕಾಂಡವೋ ಎಲೆಯೊ - ಸಸ್ಯಾಭಿವೃದ್ಧಿ ವಿಧಾನಗಳು ಭಾಗ 1
ಸಸ್ಯಾಭಿವೃದ್ಧಿಯ ವಿವಿಧ ವಿಧಾನಗಳಾದ ಲಿಂಗ ಪದ್ಧತಿ
ಮತ್ತು ನಿರ್ಲಿಂಗ ಪದ್ಧತಿಯ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಪರಿಚಯಿಸಲಾಗಿತ್ತು. ಬೀಜ ಉತ್ಪಾದನೆಯ ಮೂಲಕ
ಸಸ್ಯಾಭಿವೃದ್ಧಿ ಮಾಡುವ ಲಿಂಗ ಪದ್ಧತಿ; ಎಲೆ ಕಾಂಡ ಕಟಿಂಗ್ಸ್ ಮತ್ತು ಅಂಗಾಂಶ ಕೃಷಿಯ ನಿರ್ಲಿಂಗ ಪದ್ಧತಿಯ
ಬಗ್ಗೆ ವಿಸ್ತೃತವಾಗಿ ತಿಳಿಸಲಾಗಿತ್ತು. ಈ ಸಂಚಿಕೆಯಲ್ಲಿ ಮುಂದುವರೆದು ಕಸಿ ವಿಧಾನಗಳ ಬಗ್ಗೆ ನೋಡೋಣ.
‘ಕಸಿ’ ಎಂದರೇನು
ಎರಡು ಬೇರೆ ಬೇರೆ ಸಸ್ಯಗಳನ್ನು ಜೋಡಿಸಿ ಒಂದೇ ಸಸ್ಯವಾಗಿ
ಬೆಳೆಸುವ, ಆ ಮೂಲಕ ಏಕಕಾಲಕ್ಕೆ ನೂರಾರು ತದ್ರೂಪಿ ಸಸ್ಯಗಳನ್ನು ಪಡೆಯುವ ನಿರ್ಲಿಂಗ ಪದ್ಧತಿಯ ಸಸ್ಯಾಭಿವೃದ್ಧಿ
ವಿಧಾನಕ್ಕೆ ಕಸಿ ಕಟ್ಟುವುದು ಎನ್ನಬಹುದು. ‘ಕಸಿ’ ಎಂದರೆ ಬೆಸುಗೆ. ಈ ಬೆಸುಗೆಯಲ್ಲಿ ಪಾಲ್ಗೊಳ್ಳುವ
ಎರಡು ಸಸ್ಯಗಳೇ ಬೇರುಸಸ್ಯ/ರೂಟ್ ಸ್ಟಾಕ್ ಮತ್ತು ಕಸಿಕೊಂಬೆ/ಸಯಾನ್. ಬೇರುಸಸ್ಯ-ಕಸಿಕೊಂಬೆ, ಎರಡರಲ್ಲೂ
ಒಂದೇ ತೆರನಾಗಿ ತೊಗಟೆ/ಚಕ್ಕೆಯನ್ನು ತೆಗೆದು, ಬೀಗದಕೈ ಒಳಗೆ ಕೀಲಿಕೈ ಕೂರುವಂತೆ ಬಿಗಿಯಾಗಿ ಜೋಡಿಸಿ
ಕಟ್ಟಲಾಗಿ, ಕೆಲ ಸಮಯದಲ್ಲಿ ಅವೆರಡು ಒಂದೇ ಸಸ್ಯವಾಗಿ ಬೆಳೆಯುವುದೇ ಕಸಿ ವಿಧಾನದ ಮೂಲ ತತ್ವ.
ಕಸಿ ವಿಧಾನದಿಂದ ಸಸ್ಯಾಭಿವೃದ್ಧಿಯ ಪ್ರಯೋಜನಗಳು
·
ತದ್ರೂಪಿಗಳ
ಉತ್ಪಾದನೆ: ಕಸಿ ವಿಧಾನದಲ್ಲಿ ಬೀಜೋತ್ಪಾದನೆಯಲ್ಲಿರುವಂತೆ ವಂಶವಾಹಿಗಳ ಕೂಡುವಿಕೆ ಮರುಜೋಡಣೆಯಿಲ್ಲ.
ಹಾಗಾಗಿ ಒಂದೇ ರೀತಿಯ ಗುಣಲಕ್ಷಣ ಉಳ್ಳ ಸಾವಿರಾರು ತದ್ರೂಪಿ ಸಸ್ಯಗಳನ್ನು ಕಡಿಮೆ ಸಮಯದಲ್ಲಿ ಪಡೆಯಲು
ಸಾಧ್ಯ.
·
ಶೀಘ್ರ
ಫಲ: ಬೀಜದಿಂದ ಬೆಳೆಸಿದ ಸಸ್ಯ ಬಾಲ್ಯಾವಸ್ಥೆ ದಾಟಿ ಪ್ರೌಡಾವಸ್ಥೆ ತಲುಪುವ ವರೆಗೆ ಆರೆಂಟು ವರ್ಷಗಳ
ಸಮಯ ಹಿಡಿಯುತ್ತದೆ. ಆದರೆ ಕಸಿ ವಿಧಾನಗಳಲ್ಲಿ ಬಳಸುವ ಕಸಿಕೊಂಬೆಯನ್ನು ಈಗಾಗಲೇ ಫಲ ಕೊಡುತ್ತಿರುವ
ವಯಸ್ಕ ತಾಯಿ ಸಸ್ಯದಿಂದ ಆರಿಸಲಾಗುವ ಕಾರಣ ಈ ಬೆಳವಣಿಗೆ ಅವಧಿಯನ್ನು ತಪ್ಪಿಸಬಹುದು. ಪ್ರೌಢ ವಯಸ್ಸಿನ
ಕಸಿಕೊಂಬೆ ಹೂಬಿಡಲು ಹವಣಿಸುವ ಪ್ರವೃತ್ತಿ ಹೊಂದಿರುವುದು ಸಹಜ. ಹಾಗಾಗಿ ಕಸಿ ಗಿಡ ಶೀಘ್ರ ಫಲಕಾರಿಯಾಗುತ್ತವೆ.
·
ವಿಭಿನ್ನ
ಗುಣಗಳ ಸಮ್ಮಿಳನ: ಯಾವುದೇ ಬೆಳೆಯಿರಲಿ ಸಾಮಾನ್ಯವಾಗಿ ನಾಟಿ/ಕಾಡು ತಳಿಗಳಲ್ಲಿ ಪ್ರಕೃತಿಯ ವಿಕೋಪಗಳನ್ನು
ಸಶಕ್ತವಾಗಿ ಎದುರಿಸಬಲ್ಲ ಸಾಮರ್ಥ್ಯವಿರುತ್ತದೆ. ಆದರೆ ಇವುಗಳ ಇಳುವರಿ, ಗುಣಮಟ್ಟ ಸುಧಾರಿತ ತಳಿಗಳಿಗಿಂತ
ತುಂಬಾ ಕಡಿಮೆ. ನಾಟಿ ತಳಿ ಮತ್ತು ಸುಧಾರಿತ ತಳಿಗಳ ಧನಾತ್ಮಕ ಗುಣಗಳನ್ನು ಒಂದೇ ಸಸ್ಯದಲ್ಲಿ ಕಾಣುವಂತಿದ್ದರೆ
ಒಳ್ಳೆಯದಲ್ಲವೇ. ಇದನ್ನು ಕಸಿವಿಧಾನದಿಂದ ಸಾಧ್ಯವಾಗಿಸಬಹುದು. ಬೇರುಸಸ್ಯ ಭೂ ಜನ್ಯ ರೋಗ-ಕೀಟಗಳಿಂದ
ಪಾರಾಗಲು, ಮಣ್ಣಿನ ಗುಣಲಕ್ಷಣಗಳಿಗೆ ಹೊಂದಿಕೊಳ್ಳಲು ಸಹಕರಿಸಿದರೆ ಕಸಿಕೊಂಬೆ ಆರ್ಥಿಕ ಇಳುವರಿ, ಗುಣಮಟ್ಟವನ್ನು
ಪಡೆಯಲು ಉಪಯುಕ್ತ.
·
ಹಳೆಯ
ಮರಗಳ ಪುನರುಜ್ಜೀವನ: ಬಹುವಾರ್ಷಿಕವಾದ ಹಣ್ಣು ಬೆಳೆಗಳನ್ನು ಒಮ್ಮೆ ನಾಟಿ ಮಾಡಿದರೆ ಅವುಗಳನ್ನು ಬದಲಾಯಿಸಲು
ಸಾಧ್ಯವಿಲ್ಲ. ಕೆಲ ಕಾಲದ ನಂತರ ಅವುಗಳ ಆರ್ಥಿಕ ಇಳುವರಿ ತಗ್ಗುತ್ತದೆ. ಆ ತಳಿಯ ಮಾರುಕಟ್ಟೆ ಬೇಡಿಕೆಯೂ
ತಗ್ಗುವ ಸಾಧ್ಯತೆ ಇರುತ್ತದೆ. ನಮ್ಮ ಹವಾಮಾನಕ್ಕೆ ಅವು ಒಗ್ಗದೆಯೂ ಇರಬಹುದು. ಈ ಎಲ್ಲಾ ಸಂದರ್ಭದಲ್ಲಿ
ಈಗಿರುವ ತೋಟದಲ್ಲೇ ಕಸಿ ಮಾಡುವುದರಿಂದ ಹೊಸದೊಂದು ತಳಿಯನ್ನು ಪಡೆಯಲು ಸಾಧ್ಯ.
·
ಕುಬ್ಜ
ಗಿಡಗಳ ನಾಟಿ: ಕೆಲ ತಳಿಗಳಿಗೆ ಕುಬ್ಜವಾಗಿ ಬೆಳೆಯುವ ಗುಣವಿರುತ್ತದೆ. ವಿಶೇಷವಾಗಿ ಹಣ್ಣಿನ ಬೆಳೆಗಳಲ್ಲಿ
ಹೆಚ್ಚು ಸಾಂದ್ರತೆಗೆ, ಸುಲಭ ಚಾಟನಿಗೆ, ಸಿಂಪಡಣೆಗೆ, ಕೊಯ್ಲಿಗೆ ಕುಬ್ಜ ಗಿಡಗಳು ಸಹಕಾರಿ. ಅಂತಹ ತಳಿಗಳನ್ನು
ಬೇರುಸಸ್ಯವಾಗಿ ಆರಿಸಿ, ವಾಣಿಜ್ಯಿಕ ತಳಿಯನ್ನು ಕಸಿಕೊಂಬೆಯಾಗಿ ಆರಿಸುವ ಅವಕಾಶ ಕಸಿ ವಿಧಾನಲ್ಲಿದೆ.
ಕಸಿ ಕೂಡುವಿಕೆ ಹಿಂದಿನ ವಿಜ್ಞಾನ
ಪ್ರತಿಯೊಂದು ಮರ/ಸಸ್ಯದ ತೊಗಟೆಯ ಕೆಳಗೆ ಸಕ್ರಿಯ
ಜೀವಕೋಶಗಳ ಪದರವೊಂದು ಇರುತ್ತದೆ. ತೊಗಟೆ ಕೆತ್ತಿದಾಗ ಕಾಣುವ ತಿಳಿ ಹಸಿರು ಭಾಗ/ಚಕ್ಕೆ. ಇದನ್ನು
‘ಕೇಂಬಿಯಮ್’ ಎಂದು ಕರೆಯಲಾಗುತ್ತದೆ. ಕೇಂಬಿಯಮ್ ನಲ್ಲಿರುವ ಜೀವಕೋಶಗಳು ವಿಭಜನೆಯಾಗುತ್ತಾ ಹೊಸ ಜೀವಕೋಶ
ಸೃಷ್ಟಿಸುತ್ತಾ ಸಸ್ಯದ ಬೆಳವಣಿಗೆಗೆ ಕಾರಣವಾಗುತ್ತವೆ. ೀ ಹೊಸ ಜೀವಕೋಶಗಳೇ ನೀರು ಸರಬರಾಜು ಮಾಡುವ
‘ಕ್ಸೈಲಮ್ ನಾಳ’ ಮತ್ತು ಆಹಾರ ಸರಬರಾಜು ಮಾಡುವ ‘ಫ್ಲೋಯಮ್ ನಾಳ’ ವಾಗಿ ರೂಪುಗೊಳ್ಳುತ್ತವೆ. ಕಾಂಡಕ್ಕೇನಾದರೂ
ಗಾಯವಾದರೇ ಗುಣ ಮಾಡುವುದೂ ಇದೇ ಕೇಂಬಿಯಮ್ ಪದರ.
ಕಸಿ ತತ್ವ ನಿಂತಿರುವುದು ಕೇಂಬಿಯಮ್ ಗಳ ಜೋಡಣೆ ಮೇಲೆ.
ಕಸಿ ಕಟ್ಟುವ ವಿಧಾನ ಯಾವುದೇ ಇರಲಿ, ಎರಡು ಕೆಲಸವನ್ನು ಕಟ್ಟುನಿಟ್ಟಾಗಿ ಮಾಡುವುದನ್ನು ಕಾಣಬಹುದು.
ಮೊದಲನೆಯದು ಎರಡೂ ಸಸ್ಯದಲ್ಲಿ ತೊಗಟೆಯ ಭಾಗವನ್ನು ಒಂದೇ ರೀತಿಯಲ್ಲಿ ತೆಗೆಯುವುದು; ಎರಡನೆಯದು ಅವುಗಳನ್ನು
ಒಂದಕ್ಕೊಂದು ಅಂಟಿಸಿ ಸಲ್ಪವೂ ಅಂತರ ಇರದಂತೆ ಬಿಗಿಯಾಗಿ ಟೇಪ್ ನಿಂದ ಸುತ್ತುವುದು. ಇದರ ಹಿಂದಿರುವ
ಉದ್ದೇಶ ಎರಡು ಬೇರೆ ಬೇರೆ ಸಸ್ಯಗಳ ಕೇಂಬಿಯಮ್ ಪದರದ ಮರುಜೋಡಣೆ ಮತ್ತು ನಾಳೀಯ ಸಂಪರ್ಕದ ಮರುಪೂರಣೆ.
ಬೇರುಸಸ್ಯ-ಕಸಿಕೊಂಬೆಯಲ್ಲಿ ಕೇಂಬಿಯಮ್ ಕೆತ್ತಿದಾಗ
ಆದ ಗಾಯ ಮಾಯಲು ಜೀವಕೋಶಗಳ ಜಡ್ಡೊಂದು ಅಲ್ಲಿ ಬೆಳೆಯುತ್ತದೆ. ಈ ಜಡ್ಡು ಮೊದಲು ಎರಡು ಸಸ್ಯಗಳ ನಡುವೆ
ಕೊಂಡಿಯಾಗುತ್ತದೆ. ನಿಧಾನಕ್ಕೆ ನಾಳಗಳು ರೂಪುಗೊಂಡು ಎರಡು ಸಸ್ಯದ ನಡುವೆ ಸಂಪರ್ಕ ಸಾಧ್ಯವಾಗುತ್ತದೆ.
ಗಾಯ ಗುಣವಾಗುವ ಕ್ರಿಯೆ ಮುಗಿಯುವ ಹೊತ್ತಿಗೆ ಕಸಿ ಕೂಡಿರುತ್ತದೆ, ಸಸ್ಯ ತನ್ನ ದೈನಂದಿನ ಚಟುವಟಿಕೆಯನ್ನು
ಪುನಃ ಪ್ರಾರಂಭಿಸುತ್ತದೆ. ಇಲ್ಲೇನಾದರೂ ಎಡವಟ್ಟಾದರೆ ಗಾಯ ಮಾಯದೇ ಸೋಂಕಾಗಿ ಕಸಿ ವಿಫಲವಾಗುತ್ತದೆ.
ಬೇರುಸಸ್ಯ-ಕಸಿಕೊಂಬೆ ನಡುವಿನ ಹೊಂದಾಣಿಕೆ
ಮೇಲೆ ಹೇಳಿದಂತೆ ಕಸಿ ಕೂಡುವ ಕ್ರಿಯೆ ಸಫಲವಾಗಲು
ಬೇರುಸಸ್ಯ-ಕಸಿಕೊಂಬೆ ನಡುವೆ ವಂಶಾವಳಿ ಹೊಂದಾಣಿಕೆ ಇರಬೇಕು.
·
ಕೆಲ
ಬೆಳೆಗಳಲ್ಲಿ ಒಂದೇ ಕುಟುಂಬದ ಎರಡು ಜಾತಿಗಳ ನಡುವೆ ಕಸಿ ಸಾಧ್ಯ, ಉದಾಹರಣೆ ಸೊಲಾನೆಸೆ ಕುಟುಂಬದ ಟೋಮ್ಯಾಟೋ-ಬದನೆ
ನಡುವೆ
·
ಕೆಲ
ಬೆಳೆಗಳಲ್ಲಿ ಒಂದೇ ಜಾತಿಯ ಎರಡು ಪ್ರಭೇದಗಳ ನಡುವೆ ಕಸಿ ಸಾಧ್ಯ, ಉದಾಹರಣೆ ನಿಂಬು ಬೆಳೆಯಲ್ಲಿ ಚಕ್ಕೋತಾ,
ಕಿತ್ತಳೆ, ನಿಂಬು ಇತರೇ ಸಿಟ್ರಸ್ ಗಳ ನಡುವೆ
·
ಕೆಲ
ಬೆಳೆಗಳಲ್ಲಿ ಒಂದೇ ಜಾತಿಯ ಒಂದೇ ಪ್ರಭೇದ ಬೇರೆ ತಳಿಯ ನಡುವೆ ಕಸಿ ಸಾಧ್ಯ, ಉದಾಹರಣೆ ಮಾವಿನ ಬೆಳೆಯಲ್ಲಿ
ನಾಡು ತಳಿ ಮತ್ತು ಸುಧಾರಿತ ತಳಿಗಳ ನಡುವೆ
·
ಕೆಲವೊಮ್ಮೆ
ಇದ್ಯಾವುದೂ ಫಲಿಸದೇ ಇರಬಹುದು. ಮಾವು ಮತ್ತು ಗೇರು ಅನಾಕಾರ್ಡೇಸೆ ಎನ್ನುವ ಒಂದೇ ಕುಟುಂಬಕ್ಕೆ ಸೇರಿದ್ದರೂ
ಅವುಗಳ ನಡುವೆ ಕಸಿ ಸಾಧ್ಯವಿಲ್ಲ.
·
ಕಸಿ
ಕಟ್ಟಲು ಆಯ್ಕೆ ಮಾಡುವ ಸಸ್ಯ ದ್ವಿದಳವಾಗಿರಬೇಕು. ಅಡಿಕೆ, ತೆಂಗು, ತಾಳೆಯಂತ ಏಕದಳ ಸಸ್ಯಗಳಲ್ಲಿ ಕಸಿ
ಸಾಧ್ಯವಿಲ್ಲ. ಏಕದಳ ಸಸ್ಯಗಳಲ್ಲಿ ಕೆಂಬಿಯಮ್ ನ ರಚನೆ ಒಂದು ಪದರವಾಗಿರದೇ ಚದುರಿಕೊಂಡು ಇರುತ್ತದೆ.
ಹಾಗಾಗಿ ಇವುಗಳಲ್ಲಿ ಕಸಿ ಅಸಾಧ್ಯ.
ಕಸಿ ಕಟ್ಟಲು ಸೂಕ್ತ ಕಾಲ
ಕಸಿ ಕಟ್ಟುವ ಕ್ರಿಯೆಯ ಸಫಲತೆ ಕಾಲದ ಮೇಲೂ ಅವಲಂಬಿತ.
ನಾವು ಆಯ್ಕೆ ಮಾಡಿಕೊಂಡ ಬೆಳೆ, ಪ್ರದೇಶ, ಹವಾಗುಣ, ಕಸಿ ವಿಧಾನ ಎಲ್ಲವೂ ನಿರ್ಣಾಯಕ ಅಂಶಗಳಾಗಿವೆ.
ಕಸಿ ಕಟ್ಟಲು ಇದೇ ಕಾಲವೆಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೂ ಇದರ
ಬಗ್ಗೆ ಅಭಿಪ್ರಾಯ ಬದಲಾಗಬಹುದು. ಆದರೂ ಚಳಿಗಾಲ, ಎಡಬಿಡದೆ ಸುರಿಯುತ್ತಿರುವ ಮಳೆಗಾಲ ಕಸಿಗೆ ಯೋಗ್ಯವಲ್ಲ.
ಈ ಕಾಲದಲ್ಲಿ ರೋಗ ರುಜಿನಗಳೂ ಹೆಚ್ಚು, ಸಸ್ಯಗಳ ಚಟುವಟಿಕೆಯೂ ಕಡಿಮೆ.
ಸಾಮಾನ್ಯವಾಗಿ ಚಳಿಗಾಲ ಮುಗಿದು ವಸಂತ ಕಾಲ ಶುರುವಾಗುವ
ಹೊತ್ತು ಕಸಿ ಕಟ್ಟಲು ಸೂಕ್ತ. ಕಾರಣ ಈ ಸಮಯದಲ್ಲಿ ಸಸ್ಯ ಮೈಮುರಿದು ತನ್ನ ಸುಪ್ತಾವಸ್ಥೆಯಿಂದ ಹೊರಬಂದು
ಸಕ್ರಿಯ ಬೆಳವಣಿಗೆ ಹೊಂದುವ ತಯಾರಿ ನಡೆಸಿರುತ್ತದೆ. ಬೆಚ್ಚನೆಯ ವಾತಾವರಣ, ಏರುತ್ತಿರುವ ತಾಪಮಾನ ಕಸಿಯ
ಸಫಲತೆಯನ್ನು ಹೆಚ್ಚಿಸುತ್ತದೆ. ಕಸಿ ಸಫಲವಾಗಲು ಕರಾವಳಿಯ ಹವಾಮಾನದ ತರಹದ ಹೆಚ್ಚು ಉಷ್ಣತೆ, ಆರ್ದ್ರತೆಯ
ವಾತಾವರಣ ಒಳ್ಳೆಯದು. ನರ್ಸರಿಗಳಲ್ಲಿ ಹಸಿರು ಮನೆ, ನೆರಳು ಮನೆಗಳಲ್ಲಿ ಇದೇ ವಾತಾವರಣವನ್ನು ಕಲ್ಪಿಸಿ
ವರ್ಷವಿಡೀ ಕಸಿ ಕೆಲಸ ಕೈಗೊಳ್ಳಲಾಗುತ್ತದೆ.
ರೂಟ್ ಸ್ಟಾಕ್/ ಬೇರುಸಸ್ಯ
ಕಸಿ ಸಸ್ಯದ ಬುಡದ ಭಾಗವನ್ನು, ಅಂದರೆ ಆಧಾರ ಬೇರುಗಳನ್ನು
ಹೊಂದಿರುವ ತಾಯಿ ಸಸ್ಯವನ್ನು ರೂಟ್ ಸ್ಟಾಕ್ ಎನ್ನಬಹುದು.
·
ಬೀಜಗಳಿಂದ
ಅಥವಾ ಕಟಿಂಗ್ ಗಳಿಂದ ಬೇರುಸಸ್ಯವನ್ನು ಪಡೆಯಲಾಗುತ್ತದೆ.
·
ಬೀಜದಿಂದ
ಪಡೆದ ಬೇರುಸಸ್ಯಗಳಿಗೆ ಆಳವಾದ ಸದೃಢವಾದ ಬೇರಿನ ಜಾಲವನ್ನು ಹೊಂದುವ ಸಾಮರ್ಥ್ಯ ಇರುತ್ತದೆ. ಬೀಜದಿಂದ
ಸಸ್ಯಗಳನ್ನು ಪಡೆಯುವುದು ಸುಲಭ ವಿಧಾನವೂ ಹೌದು, ವೈರಲ್ ರೋಗ ಹರಡುವಿಕೆಯೂ ಕಡಿಮೆ. ಹಾಗಾಗಿ ಬೀಜಗಳಿಂದ
ಪಡೆದ ಬೇರುಸಸ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತದೆ. ಆದರೆ ಇವು ತಾಯಿಸಸ್ಯಕ್ಕಿಂತ ವಿಭಿನ್ನ
ಗುಣಗಳನ್ನು ಹೊಂದಿರುತ್ತವೆ.
·
ಕಟಿಂಗ್ಸ್
ಮೂಲಕ ಪಡೆದ ಬೇರುಸಸ್ಯಗಳಿಗೆ ನಾರಿನಂತ ಬೇರುಗಳಿರುತ್ತವೆ. ಗುಣಲಕ್ಷಣಗಳಲ್ಲಿ ಇವು ತಾಯಿಸಸ್ಯದ ತದ್ರೂಪಿಗಳು/
ಕ್ಲೋನ್ ಗಳು. ಹಾಗಾಗಿ ಇವುಗಳನ್ನು ‘ಕ್ಲೋನಲ್ ರೂಟ್ ಸ್ಟಾಕ್’ ಎನ್ನಲಾಗುತ್ತದೆ. ಕೆಲ ಬೆಳೆಗಳಲ್ಲಿ,
ವಿಶೇಷವಾಗಿ ಸೇಬಿನಲ್ಲಿ ಕ್ಲೋನಲ್ ರೂಟ್ ಸ್ಟಾಕ್ ಬಳಕೆಯಲ್ಲಿವೆ
·
ಬೀಜಗಳನ್ನು
ಪಾಲಿಬ್ಯಾಗ್ ನಲ್ಲಿ ಬಿತ್ತುವ ಮೂಲಕ ಮುಂದೆ ಕಸಿ ಕಟ್ಟಲು ಬೇರುಸಸ್ಯವನ್ನು ತಯಾರಿಸಿಕೊಳ್ಳಬಹುದು.
·
ಒಂದರಿಂದು
ಎರಡು ವರ್ಷ ವಯಸ್ಸಿನ ಆರೋಗ್ಯಯುತ, ಕೀಟ ರೋಗ ಮುಕ್ತ, ಪೆನ್ಸಿಲ್ ದಪ್ಪದ ಕಾಂಡ ಹೊಂದಿರುವ ಬೀಜದಿಂದ
ಪಡೆದ ಬೇರುಸಸ್ಯ ಕಸಿ ಕಟ್ಟಲು ಒಳ್ಳೆಯದು (ಬೆಳೆಯನ್ನು ಆಧರಿಸಿ ಬೇರುಸಸ್ಯದ ಆಯಸ್ಸು ಬದಲಾಗಬಹುದು).
·
ಬೇರುಸಸ್ಯ
ಒಟ್ಟಾರೆ ಕಸಿ ಗಿಡದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಲ್ಲದು.
ಮಾವಿನಲ್ಲಿ ಬಳಕೆಯಲ್ಲಿರುವ
‘ವೆಲ್ಲೈಕೊಲಂಬನ್’ ಎಂಬ ಹೆಸರಿನ ಬೇರುಸಸ್ಯ ಒಟ್ಟಾರೆ ಕಸಿಗಿಡವನ್ನು ಕುಬ್ಜವಾಗಿಸುತ್ತದೆ.
ಮಾವಿನಲ್ಲಿ ಬಳಸುವ
‘ನೆಕ್ಕರೆ’, ‘ಮೂವಂದನ್’ ಎನ್ನುವ ಬೇರುಸಸ್ಯಗಳು ಕಸಿಗಿಡದಲ್ಲಿ ಮಣ್ಣಿನ ಲವಣಾಂಶವನ್ನು ಸಹಿಸುವ ಸಾಮರ್ಥ್ಯ
ವರ್ಧಿಸುತ್ತವೆ
ನಿಂಬು ಜಾತಿಯ ಬೆಳೆಗಳಲ್ಲಿ
ಬೇರುಸಸ್ಯ ಹಣ್ಣಿನ ಗಾತ್ರ, ರುಚಿಯ ಮೇಲೆ ಪ್ರಭಾವ ಬೀರಬಲ್ಲದು
ದ್ರಾಕ್ಷಿಯಲ್ಲಿ ಬಳಸುವ
ಡಾಗ್ರಿಡ್ಜ್ ಹೆಸರಿನ ಬೇರುಸಸ್ಯ ಒಟ್ಟಾರೆ ಕಸಿಗಿಡವನ್ನು ಬರಸಹಿಷ್ಣುವಾಗಿಸಬಲ್ಲದು
ಕಾಳುಮೆಣಸಿನಲ್ಲಿ ಬಳಸುವ ಪೈಪರ್ ಕೊಲುಬ್ರಿನಮ್ ಬೇರುಸಸ್ಯ
ಒಟ್ಟಾರೆ ಕಸಿಗಿಡವನ್ನು ಸೋರಗು ರೋಗಕ್ಕೆ ಪ್ರತಿರೋಧ ಒಡ್ಡಬಲ್ಲದು.
ಸಯಾನ್ /ಕಸಿಕೊಂಬೆ
ಕಸಿ ಸಸ್ಯದ ಮೇಲ್ಭಾಗವನ್ನು, ಅಂದರೆ ಸಕ್ರಿಯ ಬೆಳವಣಿಗೆ
ಹಂತದಲ್ಲಿರುವ ಕಣ್ಣು/ಚಿಗುರು ಮೊಗ್ಗುಗಳುಳ್ಳ ಟೊಂಗೆಯ ಭಾಗವನ್ನು ಕಸಿಕೊಂಬೆ ಎನ್ನಬಹುದು. ಕಸಿಕೊಂಬೆಯನ್ನು
ಸಾಮಾನ್ಯವಾಗಿ ನಮ್ಮ ಇಚ್ಛೆಯ ಉತೃಷ್ಟ ತಳಿಯ ತಾಯಿಸಸ್ಯದಿಂದ ಆರಿಸಲಾಗುತ್ತದೆ. ಕಸಿಕೊಂಬೆ ಆರಿಸುವಾಗ
ಗಮನಿಸಬೇಕಾದ ಅಂಶಗಳು ಕೆಳಗಿನಂತಿವೆ
·
ಆರೋಗ್ಯಯುತ
ರೋಗ ರಹಿತ ಕೀಟ ಮುಕ್ತ ತಾಯಿ ಸಸ್ಯದಿಂದ ಕಸಿಕೊಂಬೆಯನ್ನು ಆರಿಸಬೇಕು
·
ಪ್ರಸಕ್ತ
ವರ್ಷದ ಬೆಳವಣಿಗೆಯ, ಸಾಕಷ್ಟು ಬಲಿತ, ಬೇರುಸಸ್ಯದಷ್ಟೇ ಪೆನ್ಸಿಲ್ ದಪ್ಪವಾದ ಕಸಿಕೊಂಬೆ ಒಳ್ಳೆಯದು
·
ಕಸಿಕೊಂಬೆ
ಆರೋಗ್ಯಕರ ಉಬ್ಬು ಕಣ್ಣುಗಳನ್ನು ಹೊಂದಿರಬೇಕು, ಕಣ್ಣುಗಳು ಸುಪ್ತಾವಸ್ಥೆಯಲ್ಲಿರಬೇಕು
ಕಸಿಕೊಂಬೆಯ ತಯಾರಿ ಕಸಿ ವಿಧಾನವನ್ನು ಅವಲಂಬಿಸಿ
ಭಿನ್ನವಾದರೂ ಒಂದೆರಡು ವಿಷಯ ಗಮನದಲ್ಲಿರಬೇಕು.
·
ಕಸಿಕಟ್ಟುವ
ಹತ್ತು ದಿನ ಮೊದಲು ಆಯ್ಕೆಯಾದ ಕಸಿಕೊಂಬೆಯ ಎಲೆಗಳನ್ನು ಕತ್ತರಿಸಿದರೆ ಉತ್ತಮ. ಇದು ಪ್ರಯೋಗಿಕವಾಗಿ
ಸಾಧ್ಯವಾಗದೇ ಇದ್ದಲ್ಲಿ ಕಸಿಕಟ್ಟುವ ಪೂರ್ವದಲ್ಲಾದರೂ ಮಾಡಬಹುದಾಗಿದೆ. ಹೀಗೆ ಎಲೆಗಳನ್ನು ಕತ್ತರಿಸುವಾಗ
ತೊಟ್ಟನ್ನು ಉಳಿಸಬೇಕು. ಕಸಿಕೊಂಬೆಯಲ್ಲಿ ತೊಟ್ಟನ್ನಷ್ಟೇ ಉಳಿಸಿ ಎಲೆಗಳನ್ನು ಕತ್ತರಿಸಿ ತೆಗೆಯುವುದರಿಂದ
ಸುಪ್ತಾವಸ್ಥೆಯಲ್ಲಿರುವ ಕಣ್ಣುಗಳು ಜಾಗ್ರತವಾಗುತ್ತವೆ. ಕತ್ತರಿ ಪ್ರಯೋಗದಿಂದ ಕಸಿಕೊಂಬೆಗೆ ಗಾಯವಾಗದಂತೆ
ಲಕ್ಷ್ಯ ವಹಿಸಬೇಕು
·
ಕಸಿ
ಕಟ್ಟಲು ಬಳಸುವ ಕಸಿಕೊಂಬೆ ಯಾವುದೇ ಕಾರಣಕ್ಕೂ ಒಣಗಬಾರದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ
ಕೊಂಡೊಯ್ಯುವ ಸಂದರ್ಭದಲ್ಲಿ ತಾಜಾತನ ಉಳಿಸಿಕೊಳ್ಳಲು ಒದ್ದೆ ಬಟ್ಟೆ/ಒದ್ದೆ ಗೋಣಿಚೀಲ ದಲ್ಲಿ ಸುತ್ತಬಹುದು.
ಕಸಿಯ ಸಫಲತೆ-ವಿಫಲತೆ
ಕಸಿ ಕಟ್ಟುವುದೊಂದು ಕಲ. ಕಸಿಯ ಯಶಸ್ಸು ಅಡಗಿರುವುದು ಕಸಿಗಾರನ ಕೌಶಲ್ಯತೆ, ಸತತ ಅಭ್ಯಾಸ,
ಚುರುಕುತನ ಒಟ್ಟಾರೆ ನೈಪುಣ್ಯತೆಯ ಮೇಲೆ. ಪಿ.ಎಚ್.ಡಿ ಓದಿದ ವಿಜ್ಞಾನಿಗೂ ಒಲಿಯದ ಈ ಕಲೆ ದಿನವೂ ಕಸಿ
ಗಿಡದ ಆರೈಕೆ ಮಾಡುವ ಕೂಲಿಯಾಳಿಗೆ ಗಿಟ್ಟಬಹುದು. ಆದರೂ ಹವ್ಯಾಸಕ್ಕಾಗಿ ಕಸಿ ಕಟ್ಟುವ ಹುಚ್ಚಿದ್ದರೆ
ಕೆಲ ವಿಷಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು
·
ಮೇಲೆ
ತಿಳಿಸಿದಂತೆ ಕಸಿಯ ಸಫಲತೆ ಕೇಂಬಿಯಮ್ ಗಳ ಜೋಡಣೆಯ ಮೇಲೆ ಅವಲಂಬಿತ. ಹಾಗಾಗಿ ಕಸಿ ಕಟ್ಟುವಾಗ ಕೈ ತುಂಬಾ
ಚುರುಕಾಗಿರಬೇಕು. ತೊಗಟೆಯನ್ನು ಕೆತ್ತಿ ಅಂಟಿಸಿ ಬಿಗಿಯಾಗಿ ಕಟ್ಟುವ ಪ್ರಕ್ರಿಯೆ ಈ ಸಾಲನ್ನು ಓದಿದಷ್ಟೇ
ವೇಗವಾಗಿರಬೇಕು. ತೊಗಟೆಯನ್ನು ಹೆಚ್ಚು ಸಮಯ ವಾತಾವರಣಕ್ಕೆ ಒಡ್ಡದೇ ತ್ವರಿತವಾಗಿ ನಡೆಯಬೇಕು. ಕಸಿಕೊಂಬೆಯ
ಕೆತ್ತನೆ ಸಮತಟ್ಟಾಗಿರಬೇಕು ಮತ್ತು ಪದೇ ಪದೇ ಚಾಕು ಆಡಿಸಿ ಆ ಭಾಗವನ್ನು ಘಾಸಿಗೊಳಿಸಬಾರದು.
·
ಕಸಿ
ಕೂಡುವ ಗಂಟಿನ ಜಾಗದಲ್ಲಿ ಗಾಳಿ ಕಟ್ಟಬಾರದು, ಯಾವುದೇ ಸೋಂಕು ತಾಗಬಾರದು, ನಮ್ಮ ಕೈಯಚ್ಚು ಕೂಡಾ!
·
ಕಸಿಕಟ್ಟಲು
ಬಳಸುವ ಕಸಿಕೊಂಬೆಯ ತಾಜಾ ಆಗರಿಬೇಕು.
·
ಕಸಿ
ಕಟ್ಟಲು ಉಪಯೋಗಿಸುವ ಚಾಕು ಸ್ವಚ್ಛವಾಗಿರಬೇಕು
·
ಕಸಿ
ಕಟ್ಟಲು ನಮ್ಮ ಪ್ರದೇಶಕ್ಕೆ ಸೂಕ್ತವಾದ ಕಾಲವನ್ನು ಅಭ್ಯಸಿಸಿ ಆಯ್ದುಕೊಳ್ಳಬೇಕು
·
ಒಮ್ಮೆ
ಕಸಿಕಟ್ಟಾದ ಮೇಲೆ ಅನುಕೂಲಕರ ವಾತಾವರಣ, ನೀರು ಕೊಟ್ಟು ಸರಿಯಾಗಿ ಆರೈಕೆ ಮಾಡಬೇಕು.
ವಿವಿಧ ಕಸಿ ವಿಧಾನಗಳು:
ಕಸಿ ವಿಧಾನಗಳಲ್ಲಿ ಹತ್ತಾರು ಬಗೆಯಿದೆ. ಯಶಸ್ಸಿನ
ಪ್ರಮಾಣ ಆಧರಿಸಿ ವಾಣಿಜ್ಯವಾಗಿ ಕೆಲವನ್ನು ಮಾತ್ರ ಅನುಸರಿಸಲಾಗುತ್ತಿದೆ.
ಗ್ರಾಫ್ಟಿಂಗ್
1. ಅಪ್ರೋಚ್ ಗ್ರಾಫ್ಟಿಂಗ್/ಅಪ್ಪುಗೆ ಕಸಿ/ ಸಾಮೀಪ್ಯ
ಕಸಿ
ಈ ವಿಧಾನದಲ್ಲಿ ಕಸಿಕೊಂಬೆಯನ್ನು ಮುಂಚಿತವಾಗಿ ತಾಯಿ
ಸಸ್ಯದಿಂದ ಕತ್ತರಿಸುವುದಿಲ್ಲ. ಬದಲಾಗಿ ಪಾಲಿಬ್ಯಾಗ್ ನಲ್ಲಿ ಬೆಳೆದ ಬೇರುಸಸ್ಯವನ್ನು ಮೊದಲು ಅಪೇಕ್ಷಿತ
ಕಸಿಕೊಂಬೆಯ ಬಳಿ ಇಡಲಾಗುತ್ತದೆ. ಎರಡರಲ್ಲೂ ಅಂಡಾಕಾರದಲ್ಲಿ ಚಕ್ಕೆಯನ್ನು ಕೆತ್ತಿ ಜೋಡಿಸಿ ಕಟ್ಟಲಾಗುತ್ತದೆ
(ಅರ್ಥಾತ್ ಎರಡನ್ನೂ ಒಂದಕ್ಕೊಂದು ಅಪ್ಪುವಂತೆ ಕೂಡಿಸಲಾಗುತ್ತದೆ). 2-3 ತಿಂಗಳ ನಂತರ ಕಸಿ ಕೂಡಿದ ಮೇಲೆ ಬೇರುಸಸ್ಯದ ತುದಿ ಮತ್ತು
ಕಸಿಕೊಂಬೆಯ ಬುಡಭಾಗವನ್ನು ಕಸಿಗಂಟಿನ ಆಚೀಚೆ ಹಂತ ಹಂತವಾಗಿ ಕಚ್ಚುಕೊಟ್ಟು ಬೇರ್ಪಡಿಸಲಾಗುತ್ತದೆ.
ಕಸಿಕೊಂಬೆ ನೆಲಮಟ್ಟದಲ್ಲಿದ್ದರೆ ಈ ವಿಧಾನ ಸುಲಭ.
ಮಾವು, ಚಿಕ್ಕು, ಪೇರಲದಲ್ಲಿ ಈ ವಿಧಾನ ರೂಢಿಯಲ್ಲಿದೆ.
2. ವಿನೀಯರ್ ಗ್ರಾಫ್ಟಿಂಗ್
ಈ ವಿಧಾನದಲ್ಲಿ ಮೊದಲು ತಳದಿಂದ ಒಂದಡಿ ಎತ್ತರದಲ್ಲಿ
ಬೇರುಸಸ್ಯದ ತಲೆಯನ್ನು ಕತ್ತರಿಸಲಾಗುತ್ತದೆ. ನಂತರ ಕಾಂಡದ ಮಧ್ಯದಲ್ಲಿ ಒಂದಿಂಚು ಉದ್ದದ ಇಳಿಜಾರಿನ
ಕಚ್ಚನ್ನು ಕೊಟ್ಟು ಅದರ ಬುಡದಲ್ಲಿ ಅಡ್ಡ ಕಚ್ಚು ಕೊಟ್ಟು ಆ ಚಕ್ಕೆಯನ್ನು ತೆಗೆದು ಹಾಕಲಾಗುತ್ತದೆ
(ಹೆಚ್ಚುಕಮ್ಮಿ ಡೊಂಕಾದ L ರೀತಿಯಲ್ಲಿ). ಒಂದು ಬದಿಗೆ ಚೂಪವಾಗಿಸಿ ಮತ್ತೊಂದು ಬದಿಗೆ ಸಣ್ಣ ಇಳಿಜಾರು
ಕಚ್ಚನ್ನು ಕೊಟ್ಟು ಇದೇ ಆಕಾರದಲ್ಲಿ ಕಸಿಕೊಂಬೆಯನ್ನು ತಯಾರಿಸಲಾಗುತ್ತದೆ. ಒಂದರಲ್ಲೊಂದು ಕೂರುವಂತೆ
ಜೋಡಿಸಿ ಕಸಿ ಕಟ್ಟಲಾಗುತ್ತದೆ.
ಮಾವಿನಲ್ಲಿ ಈ ವಿಧಾನ ರೂಢಿಯಲ್ಲಿದೆ.
3. ಸೈಡ್ ಗ್ರಾಫ್ಟಿಂಗ್/ ಪಾರ್ಶ್ವ ಕಸಿ
ವಿನೀಯರ್ ಕಸಿಯನ್ನೇ ಬೇರುಸಸ್ಯದ ಒಂದು ಬದಿ ಪಾರ್ಶ್ವದಲ್ಲಿ
ಡೊಂಕಾಗಿ ಮಾಡಿದರೆ ಪಾರ್ಶ್ವ ಕಸಿ ಎನ್ನಬಹುದು. ಬೇರು ಸಸ್ಯದ ಮೇಲ್ಭಾಗವನ್ನು ಕತ್ತರಿಸಿ ಕಾಂಡದ ಯಾವುದೇ
ಒಂದು ಬದಿಯಲ್ಲಿ (ಮಧ್ಯದಲ್ಲಲ್ಲ) ಇಳಿಜಾರಿನ ಕಚ್ಚು ಕೊಟ್ಟು ಬುಡದಲ್ಲಿ ಅಡ್ಡ ಕಚ್ಚು ಕೊಟ್ಟು ಚಕ್ಕೆಯನ್ನು
ತೆಗೆಯಬೇಕು. ಒಂದು ಬದಿಗೆ ಚೂಪವಾಗಿಸಿ ಮತ್ತೊಂದು
ಬದಿಗೆ ಸಣ್ಣ ಇಳಿಜಾರು ಕಚ್ಚನ್ನು ಕೊಟ್ಟು ಇದೇ ಆಕಾರದಲ್ಲಿ ಕಸಿಕೊಂಬೆಯನ್ನು ತಯಾರಿಸಿ ಜೋಡಿಸಿ ಕಸಿ
ಕಟ್ಟಬೇಕು.
3. ವಿಪ್ ಗ್ರಾಫ್ಟಿಂಗ್ / ಸ್ಪ್ಲೈಸ್ ಗ್ರಾಫ್ಟಿಂಗ್
ತುಂಬಾ ಸರಳವಾದ ಈ ವಿಧಾನದಲ್ಲಿ ಬೇರುಸಸ್ಯ ಮತ್ತು
ಕಸಿಕೊಂಬೆ ಎರಡನ್ನೂ ಇಳಿಜಾರಿನಂತೆ ಓರೆಯಾಗಿ ಕತ್ತರಿಸಲಾಗುತ್ತದೆ (ಬ್ರೆಡ್ ಸ್ಲೈಸ್ ಮಾಡಿದ ತರಹ).
ನಂತರ ಒಂದರ ಮೇಲೊಂದನ್ನು ಜೋಡಿಸಿ ಬಿಗಿಯಾಗಿಸಿ ಟೇಪ್ ಸುತ್ತಲಾಗುತ್ತದೆ.
4. ವಿಪ್ & ಟಂಗ್ ಗ್ರಾಫ್ಟಿಂಗ್ / ನಾಲಿಗೆ
ಕಸಿ
ವಿಪ್ ವಿಧಾನದಲ್ಲೇ ಸ್ವಲ್ಪ ಮಾರ್ಪಾಡು ಮಾಡಿಕೊಂಡು
ನಾಲಿಗೆ ಕಸಿಯನ್ನು ಕಟ್ಟಲಾಗುತ್ತದೆ. ಮೊದಲು ಬೇರುಸಸ್ಯ ಕಸಿಕೊಂಬೆ ಎರಡರಲ್ಲೂ ಒಂದೇ ರೀತಿಯಾಗಿ ಇಳಿಜಾರಿನಂತೆ
ಓರೆಯಾಗಿ ಕತ್ತರಿಸಲಾಗುತ್ತದೆ. ನಂತರ ಇಳಿಮುಖವಾಗಿ ಸೀಳಲಾಗುತ್ತದೆ (ತೆರೆದ ಬಾಯಿಯಲ್ಲಿ ನಾಲಿಗೆ ಹೊರಚಾಚಿರುವಂತೆ).
ನಂತರ ಒಂದರಲ್ಲೊಂದನ್ನು ತೂರಿಸಿ ಬಿಗಿಯಾಗಿ ಟೇಪ್ ಸುತ್ತಲಾಗುತ್ತದೆ.
5. ಕ್ಲೆಫ್ಟ್ ಗ್ರಾಫ್ಟಿಂಗ್/ ಸೀಳು ಕಸಿ
ವಾಣಿಜ್ಯಿಕವಾಗಿ ತುಂಬಾ ಬಳಕೆಯಲ್ಲಿರುವ, ಕಸಿಗಾರರಲ್ಲಿ
ಪ್ರಸಿದ್ಧವಾಗಿರುವ ನಂಬರ್ ಒನ್ ಕಸಿವಿಧಾನವಿದು. ಕ್ಲೆಫ್ಟ್ ಎಂದರೆ ಸೀಳು ಎಂದರ್ಥ. ಹೆಸರೇ ಸೂಚಿಸುವಂತೆ
ಈ ವಿಧಾನದಲ್ಲಿ ಮೊದಲು ಬೇರುಸಸ್ಯದ ಮೇಲ್ಭಾಗ ಕತ್ತರಿಸಿ ಕಾಂಡದ ಮಧ್ಯದಲ್ಲಿ ಒಂದಿಂಚು ಆಳದ ಸೀಳು ಮಾಡಲಾಗುತ್ತದೆ.
ಕಸಿಕೊಂಬೆಯನ್ನು V ಆಕಾರದಲ್ಲಿ ಚೂಪಾಗಿಸಿ ಸೀಳಿನಲ್ಲಿ ಈ ಕೂರಿಸಿ ಬಿಗಿಯಾಗಿ ಟೇಪ್ ಸುತ್ತಲಾಗುತ್ತದೆ.
ಈ ವಿಧಾನ ಸುಲಭವಾಗಿದ್ದು ಬಹುತೇಕ ಹಣ್ಣಿನ ಬೆಳೆಗಳಲ್ಲಿ ಪ್ರಚಲಿತದಲ್ಲಿದೆ.
ಇದೇ ಕ್ಲೆಫ್ಟ್ ಕಸಿಯನ್ನು ಅಷ್ಟೇ ಮೊಳಕೆಯೊಡೆದಿರುವ
7-10 ದಿನಗಳ ಎಳೆ ವಯಸ್ಸಿನ ಬೇರುಸಸಸ್ಯವನ್ನು ಬಳಸಿ ಮಾಡಿದರೆ ಸ್ಟೋನ್/ ಎಪಿಕೊಟೈಲ್/ ಓಟೆ ಕಸಿ ಎಂದು
ಕರೆಯಲಾಗುತ್ತದೆ. ಮಾವು, ಗೇರಿನಲ್ಲಿ ಇದು ಬಳಕೆಯಲ್ಲಿದೆ.
ಬೇರುಸಸ್ಯದ ಕಾಂಡ ಇನ್ನೂ ಮೃದುವಾಗಿದ್ದಾಗ ಕ್ಲೆಫ್ಟ್
ಕಸಿ ಅನುಸರಿಸುವ ವಿಧಾನಕ್ಕೆ ಸಾಫ್ಟ್ ವುಡ್ ಗ್ರಾಫ್ಟಿಂಗ್/ ಮೃದುಕಾಂಡ ಕಸಿ ಎನ್ನಲಾಗುತ್ತದೆ.
6. ವೆಡ್ಜ್ ಗ್ರಾಫ್ಟಿಂಗ್
ಈ ವಿಧಾನದಲ್ಲಿ ಮೊದಲು ತಳದಿಂದ ಒಂದಡಿ ಎತ್ತರದಲ್ಲಿ
ಬೇರುಸಸ್ಯದ ತಲೆಯನ್ನು ಕತ್ತರಿಸಿ ಕಾಂಡದಲ್ಲಿ V ಆಕಾರದಲ್ಲಿ ಚಕ್ಕೆ ತೆಗೆಯಲಾಗುತ್ತದೆ. ಈ ಕಚ್ಚಿನಲ್ಲಿ
ಕೂರುವಂತೆ ಕಸಿಕೊಂಬೆಯನ್ನು V ಆಕಾರದಲ್ಲಿ ಚೂಪಾಗಿಸಿ ಕೂರಿಸಿ ಬಿಗಿಯಾಗಿ ಟೇಪ್ ನಿಂದ ಕಟ್ಟಲಾಗುತ್ತದೆ.
ಸೀಳು ತೆಗೆಯಲು ಸಾಧ್ಯವಿಲ್ಲದ ಗಟ್ಟಿ ಕಾಂಡದಲ್ಲಿ/ ಮರದ ಬೊಡ್ಡೆಯಲ್ಲಿ ವೆಡ್ಜ್ ಗ್ರಾಫ್ಟಿಂಗ್ ಅನ್ನು
ಅನುಸರಿಸಬಹುದಾಗಿದೆ.
ಕ್ಲೆಫ್ಟ್ ಗ್ರಾಫ್ಟಿಂಗ್ /
ಈ ವಿಧಾನದಲ್ಲಿ 6. ಟಾಪ್ ವರ್ಕಿಂಗ್ /ವಯಸ್ಸಾದ ಮರಗಳಿಗೆ
ಕಾಯಕಲ್ಪ (ರೇಜುವಿನೇಶನ್)
ವಯಸ್ಸಾದ ಹಣ್ಣಿನ ಮರಗಳ ಇಳುವರಿ ಕುಸಿಯುವುದು ಸರ್ವೇ
ಸಾಮಾನ್ಯ. ಇಂತಹ ಸಂದರ್ಭದಲ್ಲಿ ಇರುವ ಮರಗಳನ್ನು ಕಡಿದು ಹೊಸ ಸಸಿಗಳನ್ನು ನೆಡುವುದು ಆರ್ಥಿಕವಾಗಿ
ನಷ್ಟಕರ. ಆಗ ಹಳೆಯ ಗಿಡಗಳ ಬೊಡ್ಡೆಯನ್ನು ಗರಗಸದಿಂದ ಕತ್ತರಿಸಿ ನಂತರ ಬಂದಂತಹ ಹೊಸ ಚಿಗುರುಗಳಿಗೆ
ವೆಡ್ಜ್ ಕಸಿ/ಕ್ಲೆಫ್ಟ್ ಕಸಿ ಮಾಡಬಹುದಾಗಿದೆ.
ಹಲಸು, ಮಾವು, ಚಿಕ್ಕು, ನೆಲ್ಲಿ, ಬಾರೆ, ಗೋಡಂಬಿ
ಮುಂತಾದ ಬೆಳೆಗಳಲ್ಲಿ ಈ ಪದ್ಧತಿ ಯಶ್ವಸಿಯಾಗಿ ಬಳಕೆಯಲ್ಲಿದೆ.
ಹಳೆಯ ಕಾಲದಲ್ಲಿ ರೇಜುವಿನೇಶನ್ ಗಾಗಿ ಕುಡಿ ಹಾಕುವುದು
ಎನ್ನುವ ವಿಧಾನವನ್ನೂ ಅನುಸರಿಸಲಾಗುತ್ತಿತ್ತು. ಈ ವಿಧಾನದಲ್ಲಿ ಮೊದಲು ಹಳೆಯ ಮರದ ಬೊಡ್ಡೆಯನ್ನು ಗರಗಸದಿಂದ
ಕೊಯ್ಯಲಾಗುತ್ತದೆ. ನಂತರ ಸಣ್ಣ ಸುತ್ತಿಗೆಯಿಂದ ಕುಟ್ಟುತ್ತಾ ದಪ್ಪನೆಯ ಬೊಡ್ಡೆಯೊಳಗೆ ಬ್ಲೇಡ್ ತೂರಿಸಿ
ಮಧ್ಯದಲ್ಲಿ ಅಥವಾ ಒಂದು ಬದಿಯಲ್ಲಿ ಒಂದಿಂಚು ಕಾಂಡವನ್ನು ಸೀಳಲಾಗುತ್ತದೆ. ಕಸಿಕೊಂಬೆಯನ್ನು V ಆಕಾರಕ್ಕೆ
ಚೂಪವಾಗಿಸಿ ಈ ಸೀಳಿನಲ್ಲಿ ಒಂದಕ್ಕಿಂತ ಹೆಚ್ಚು ಕಡೆ ತೂರಿಸಲಾಗುತ್ತದೆ. ಟೇಪ್ ನಿಂದ ಬಿಗಿಯಾಗಿ ಕಟ್ಟಲಾಗುತ್ತದೆ.
7. ಇನ್ ಸಿತು ಗ್ರಾಫ್ಟಿಂಗ್
ಈ ಯಾವುದೇ ವಿಧಾನವನ್ನು ತೋಟದಲ್ಲಿಯೇ ನೇರವಾಗಿ ಪ್ರಯೋಗಿಸುವುದಕ್ಕೆ
ಇನ್ ಸಿತು ವಿಧಾನವೆಂದು ಕರೆಯಲಾಗುತ್ತದೆ. ತೋಟ ಅಭಿವೃದ್ಧಿ ಪಡಿಸಬೇಕೆಂದಿರುವ ಸ್ಥಳದಲ್ಲಿಯೇ ಬೇರುಸಸ್ಯವನ್ನು
ಬೆಳೆಸಿ ಕಸಿ ಕಟ್ಟುವ ಪದ್ಧತಿ ಇದಾಗಿದೆ.
ಬಡ್ಡಿಂಗ್ / ಕಣ್ಣು ಕಸಿ
ಮೇಲೆ ಹೇಳಿದ ಕಸಿ ವಿಧಾನಗಳಲ್ಲಿ ಒಂದಕ್ಕಿಂತ ಹೆಚ್ಚು
ಕಣ್ಣುಗಳುಳ್ಳ ಕಸಿಕೊಂಬೆಯನ್ನು ಬಳಸಲಾಗುತ್ತದೆ. ಆದರೆ ಕಣ್ಣು ಕಸಿ ಪದ್ಧತಿಯಲ್ಲಿ ಒಂದೇ ಕಣ್ಣನ್ನು
ಬಳಸಿ ಕಸಿ ಕಟ್ಟಲಾಗುತ್ತದೆ. ಈ ವಿಧಾನದಲ್ಲಿ ಬೇರುಸಸ್ಯದ ತಲೆಯನ್ನು ಮೊದಲೇ ಕತ್ತರಿಸುವುದಿಲ್ಲ. ಬದಲಾಗಿ
ಕಣ್ಣು ಕೂಡಿದ ನಂತರವೇ ಕತ್ತರಿಸಿ ತೆಗೆಯಲಾಗುತ್ತದೆ.
8. ಶೀಲ್ಡ್ ಬಡ್ಡಿಂಗ್/ T ಬಡ್ಡಿಂಗ್/ ಗುರಾಣಿಯಾಕಾರದ
ಕಣ್ಣು ಕಸಿ
ಈ ವಿಧಾನದಲ್ಲಿ ಬೇರುಸಸ್ಯದ ತೊಗಟೆಯಲ್ಲಿ T ಆಕಾರದ
ಕಚ್ಚು ಕೊಡಲಾಗುತ್ತದೆ. ಕಸಿಕೊಂಬೆಯಿಂದ ಒಂದೇ ಕಣ್ಣನ್ನು ತೊಗಟೆ ಕೆಳಗಿನ ಕೇಂಬಿಯಮ್ ಸಮೇತ ಗುರಾಣಿಯಾಕಾರದಲ್ಲಿ
ತೆಗೆಯಲಾಗುತ್ತದೆ. T ಕಚ್ಚನ್ನು ಸಲ್ಪ ಹಿಗ್ಗಿಸಿ ಗುರಾಣಿಯಾಕಾರದ ಕಣ್ಣನ್ನು ಕೂರಿಸಿ T ಕಚ್ಚಿನ ತುಟಿ
ಕಣ್ಣಿನ ಮೇಲೆ ಸಮವಾಗಿ ಹೊಂದಿಕೊಳ್ಳುವಂತೆ ಮಾಡಿ ಬಿಗಿಯಾಗಿ ಟೇಪ್ ಕಟ್ಟಲಾಗುತ್ತದೆ. ಟೇಪ್ ಸುತ್ತುವಾಗ
ಕಸಿಕಣ್ಣನ್ನು ಮುಚ್ಚುವಂತಿಲ್ಲ.
ಉಲ್ಟಾ T ವಿಧಾನದಲ್ಲೂ ಹೀಗೆ ಕಸಿ ಕಟ್ಟಬಹುದಾಗಿದೆ.
ಇದನ್ನು ಇನವರ್ಟಡ್ T ಬಡ್ಡಿಂಗ್ ಎನ್ನಲಾಗುತ್ತದೆ. T ಬದಲು I ಕಚ್ಚನ್ನು ಮಾಡಿದರೆ I ಬಡ್ಡಿಂಗ್ ಎನ್ನಲಾಗುತ್ತದೆ.
ಗುಲಾಬಿ, ಸೇಬು ಜಾತಿಯ ಸಸ್ಯಗಳಲ್ಲಿ ಈ ವಿಧಾನವನ್ನು
ಅನುಸರಿಸಲಾಗುತ್ತದೆ.
9. ಪಾಚ್ ಬಡ್ಡಿಂಗ್ – ತೇಪೆ ಕಸಿ ವಿಧಾನ
ಈ ವಿಧಾನದಲ್ಲಿ ಬೇರುಸಸ್ಯದ ಕಾಂಡದಲ್ಲಿ ಆಯತಾಕಾರದಲ್ಲಿ
ಕಚ್ಚು ಕೊಟ್ಟು ತೊಗಟೆ ಬಿಡಿಸಲಾಗುತ್ತದೆ. ನಂತರ ಕಸಿಕೊಂಬೆಯಲ್ಲಿ ಅಷ್ಟೇ ಅಗಲದ ಕಣ್ಣನ್ನು ಕೆತ್ತು
ತೆಗೆದು ಬೇರುಸಸ್ಯದ ಆಯತದ ಕಚ್ಚಲ್ಲಿ ಜೋಡಿಸಿಟ್ಟು ಬಿಗಿಯಾಗಿ ಟೇಪ್ ಕಟ್ಟಲಾಗುತ್ತದೆ. ಟೇಪ್ ಸುತ್ತುವಾಗ
ಕಸಿಕಣ್ಣನ್ನು ಮುಚ್ಚುವಂತಿಲ್ಲ
ಹಲಸು, ಕೋಕೋ, ರಬ್ಬರ್ ಸಸ್ಯಗಳಲ್ಲಿ ಈ ವಿಧಾನ ಚಾಲ್ತಿಯಲ್ಲಿದೆ.
10. ಫೋರ್ಕೆರ್ಟ್ ಬಡ್ಡಿಂಗ್/ ಫ್ಲಾಪ್ ಬಡ್ಡಿಂಗ್
ಪ್ಯಾಚ್ ಬಡ್ಡಿಂಗ್ ವಿಧಾನವನ್ನೇ ತುಸು ಮಾರ್ಪಡಿಸಿ
ಫೋರ್ಕೆರ್ಟ್ ಬಡ್ಡಿಂಗ್ ಅನುಸರಿಸಲಾಗುತ್ತದೆ. ಈ ವಿಧಾನದಲ್ಲಿ ಆಯಾತಾಕಾರದ ಮೂರು ಬದಿಯಲ್ಲಿ ಕಚ್ಚು
ಕೊಟ್ಟು ಕೆಳಗಿನ ಭಾಗವನ್ನು ಹಾಗೆಯೇ ಉಳಿಸಲಾಗುತ್ತದೆ (ಕಿಟಕಿ ಬಾಗಿಲಿನಂತೆ). ಆಯತಾಕಾರದ ಕಸಿ ಕಣ್ಣನ್ನು
ಈ ಕಚ್ಚಿನಲ್ಲಿಟ್ಟು ಮುಚ್ಚಿ (ಬಾಗಿಲು ಮುಚ್ಚಿದಂತೆ) ಬಿಗಿಯಾಗಿ ಟೇಪ್ ನಿಂದ ಕಟ್ಟಲಾಗುತ್ತದೆ. ಟೇಪ್ ಸುತ್ತುವಾಗ ಕಸಿಕಣ್ಣನ್ನು ಮುಚ್ಚುವಂತಿಲ್ಲ.
11. ಚಿಪ್ ಬಡ್ಡಿಂಗ್
ಈ ವಿಧಾನದಲ್ಲಿ ಬೇರುಸಸ್ಯದ ಕಾಂಡದಲ್ಲಿ ಮೊದಲು ಇಳಿಮುಖವಾಗಿ
ಓರೆಯಾಗಿ ಆಳವಾಗಿ ಸೀಳಿ ಕೆಳಗೊಂದು ಅಡ್ಡ ಕಚ್ಚು ಕೊಟ್ಟು ಚಕ್ಕೆಯನ್ನು ತೆಗೆಯಲಾಗುತ್ತದೆ. ಇದೇ ಆಕಾರದಲ್ಲಿ
ಕಸಿಕೊಂಬೆಯ ಕಣ್ಣನ್ನು ತೊಗಟೆಯ ಕೇಂಬಿಯಮ್ ಸಮೇತ ಚಕ್ಕೆ ತೆಗೆದು ಜೋಡಿಸಿ ಬಿಗಿಯಾಗಿ ಟೇಪ್ ನಿಂದ ಕಟ್ಟಲಾಗುತ್ತದೆ.
ಟೇಪ್ ಸುತ್ತುವಾಗ ಕಸಿಕಣ್ಣನ್ನು ಮುಚ್ಚುವಂತಿಲ್ಲ.
12. ರಿಂಗ್ ಬಡ್ಡಿಂಗ್
ಈ ವಿಧಾನದಲ್ಲಿ ಬೇರುಸಸ್ಯದ ಕಾಂಡದಲ್ಲಿ ವೃತ್ತಾಕಾರವಾಗಿ
ತೊಗಟೆಯನ್ನು ತೆಗೆಯಲಾಗುತ್ತದೆ. ಕಸಿಕೊಂಬೆಯಲ್ಲಿ ಕಣ್ಣನ್ನು ಕೇಂದ್ರೀಕರಿಸಿ ಇದೇ ಉದ್ದಗಲದ ತೊಗಟೆಯನ್ನು
ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಡಿಸಿದ ಸುರಳಿಯನ್ನು ಬೇರುಸಸ್ಯಕ್ಕೆ ಜೋಡಿಸಿ ಬಿಗಿಯಾಗಿ ಟೇಪ್
ನಿಂದ ಕಟ್ಟಲಾಗುತ್ತದೆ. ಟೇಪ್ ಸುತ್ತುವಾಗ ಕಸಿಕಣ್ಣನ್ನು ಮುಚ್ಚುವಂತಿಲ್ಲ.
ಬೋರೆ, ಮಲ್ಬರಿ ಗಿಡಗಳಲ್ಲಿ ಈ ವಿಧಾನ ಪ್ರಚಲಿತದಲ್ಲಿದೆ.
13. ಫ್ಲೂಟ್ ಬಡ್ಡಿಂಗ್
ರಿಂಗ್ ಬಡ್ಡಿಂಗ್ ನಲ್ಲೇ ಸ್ವಲ್ಪ ಮಾರ್ಪಾಡು ಮಾಡಿಕೊಂಡು
ಫ್ಲೂಟ್ ಬಡ್ಡಿಂಗ್ ವಿಧಾನವನ್ನು ಅನುಸರಿಸಲಾಗುತ್ತದೆ. ತೊಗಟೆಯನ್ನು ಪೂರ್ತಿ ತೆಗೆಯದೇ ಒಂದು ಪಾರ್ಶ್ವದಲ್ಲಿ
ತೊಗಟೆಯನ್ನು ಉಳಿಸಿ (ಫ್ಲೂಟ್/ಕೊಳಲಿನಂತೆ) ಇದೇ ತರಹದಲ್ಲಿ ಕಸಿಕೊಂಬೆಯ ಕಣ್ಣನ್ನು ತೆಗೆದು
ಲೇಯರಿಂಗ್
13. ಏರ್ ಲೇಯರಿಂಗ್ / ಗರ್ಡಲಿಂಗ್/ ಗೂಟಿ ಕಸಿ
ಮೇಲೆ ಹೇಳಿದ ಎಲ್ಲಾ ವಿಧಾನಗಳಿಗಿಂತಲೂ ಗೂಟಿ ವಿಧಾನ
ಭಿನ್ನವಾದಂತದ್ದು. ಈ ವಿಧಾನದಲ್ಲಿ ಬೇರುಸಸ್ಯ-ಕಸಿಕೊಂಬೆಗಳೆಂಬ ವಿಭಾಗವಿಲ್ಲ. ನಮ್ಮ ಇಚ್ಛೆಯ ತಾಯಿ
ಸಸ್ಯದಲ್ಲಿಯೇ ಕಸಿ ಕೈಗೊಳ್ಳಬಹುದು.
ಮೊದಲು ತಾಯಿಸಸ್ಯದಲ್ಲಿ ಹದವಾಗಿ ಬಲಿತ, ಪ್ರಸಕ್ತ
ವರ್ಷದ ಬೆಳವಣಿಗೆಯ, ತೊಗಟೆಯನ್ನು ಸರಳವಾಗಿ ತೆಗೆಯಲು ಬರುವ ಪೆನ್ಸಿಲ್ ಗಾತ್ರದ ಟೊಂಗೆಯನ್ನು ಆರಿಸಬೇಕು.
ಟೊಂಗೆಯ ಬೆಳೆಯುವ ತುದಿಯಿಂದ ಒಂದಡಿ ಕೆಳಗೆ ಚಾಕುವಿನಿಂದ ವೃತ್ತಾಕಾರವಾಗಿ ಎರಡು ಕಚ್ಚು ಕೊಟ್ಟು ಒಂದಿಂಚು
ಅಗಲದ ತೊಗಟೆಯನ್ನು ತೆಗೆಯಬೇಕು. ಹೀಗೆ ತೊಗಟೆ ತೆಗೆದ ಭಾಗದ ಹಸಿರು ಪದರ (ಕೇಂಬಿಯಮ್ ಅಂಗಾಂಶ) ಇನ್ನೂ
ಉಳಿದಿದ್ದರೆ ಚಾಕುವಿನಿನಂದ ಸವರಿ ಸಂಪೂರ್ಣವಾಗಿ ತೆಗೆಯಬೇಕು. ಈ ಭಾಗವನ್ನು ಹಸಿಯಾದ ಸ್ಪಾಗ್ನಮ್ ಮಾಸ್
ಅಥವಾ ಕೋಕೋಪೀಟ್ ನಿಂದ ಮುಚ್ಚಿ ಪಾರದರ್ಶಕ ಪ್ಲಾಸ್ಟಿಕ್
ಹಾಳೆಯಿಂದ ಕಟ್ಟಬೇಕು.
ತೊಗಟೆಯ ಕೆಂಬಿಯಮ್ ತೆಗೆದ ಕಾರಣ ಎಲೆಗಳಲ್ಲಿ ತಯಾರಾದ
ಆಹಾರ ಬೇರಿನೆಡೆಗೆ ಸರಬರಾಜಾಗುವ ಪ್ರಕ್ರಿಯೆ ಮುರಿಯುತ್ತದೆ. ಆಹಾರ ಗೂಟಿ ಕಟ್ಟಿದ ಗಂಟಿನವರೆಗಷ್ಟೇ
ಪೂರೈಕೆಯಾಗುತ್ತದೆ. ಸಸ್ಯ ಯಾವುದೋ ಒತ್ತಡಕ್ಕೆ ಸಿಲುಕಿದ ಪರಿಣಾಮ ಸಸ್ಯಪ್ರಚೋದಕಗಳನ್ನು ತಯಾರಿಸಲು
ತೊಡಗುತ್ತದೆ. ಇವುಗಳಲ್ಲಿ ಮುಖ್ಯವಾದದ್ದು ‘ಆಕ್ಸಿನ್’. ಸಸ್ಯಗಳಲ್ಲಿ ಆಕ್ಸಿನ್ ತಯಾರಾಗುವುದು ಚಿಗುರು/ತುದಿಯಲ್ಲಿ,
ನಂತರ ಅದು ಕೆಳಮುಖವಾಗಿ ಸಂಚರಿಸಿ ಇಡೀ ಸಸ್ಯವನ್ನು ವ್ಯಾಪಿಸುತ್ತದೆ. ಗೂಟಿ ಕೆತ್ತಿದಾಗ ಆಕ್ಸಿನ್
ಸಂಚಲನಕ್ಕೂ ಅಡ್ಡಿಯಾಗುತ್ತದೆ. ಟೊಂಗೆಯ ತುದಿಯಲ್ಲಿ ತಯಾರಾದ ಆಕ್ಸಿನ್ ಗೂಟಿಯ ಗಂಟಿನಲ್ಲಿ ಸಂಗ್ರಹವಾಗಿ
ಬೇರಿನ ಬೆಳವಣಿಗೆಗೆ ಪ್ರೇರೆಪಿಸುತ್ತದೆ. ಹೀಗೆ ಗೂಟಿ ಕಟ್ಟಿದ ಕೆಲವೇ ದಿನಗಳಲ್ಲಿ ಹೊಸ ಸಸ್ಯವೊಂದು
ತಯಾರಾಗುತ್ತದೆ.
ಗೂಟಿ ಕಸಿಯಲ್ಲಿ ಕೇಂಬಿಯಮ್ ಪದರವನ್ನು ಕೆರೆಸಿ ತೆಗೆಯುವುದು
ಅವಶ್ಯಕ. ಇಲ್ಲವಾದಲ್ಲಿ ಬೇರು ಮೂಡುವ ಬದಲು ಗಾಯ ಗುಣವಾಗಿ ತೊಗಟೆ ಪುನಃ ಕೂಡಿಕೊಂಡು ಬಿಡುತ್ತದೆ.
ಕೆಲವು ಬಾರಿ ಬೇರು ಬಿಡಲು ಸಸ್ಯ ಪ್ರಚೋದಕಗಳ ಬಳಕೆಯನ್ನೂ ಮಾಡಲಾಗುತ್ತದೆ.
ಈ ವಿಧಾನವನ್ನು ಪೇರಲೆ, ದಾಳಿಂಬೆ, ಅಂಜೂರ, ನಿಂಬು
ಜಾತಿಯ ಸಸ್ಯಗಳಲ್ಲಿ ಅನುಸರಿಸಲಾಗುತ್ತದೆ.
14. ಇತರೆ ಲೇಯರಿಂಗ್ ವಿಧಾನಗಳು
ನೆಲಕ್ಕೆ ಸಮೀಪವಿರುವ ಟೊಂಗೆಯನ್ನು ಬಗ್ಗಿಸಿ ಮಣ್ಣಲ್ಲಿ
ಮುಚ್ಚಿಟ್ಟು ಬೇರು ತರಿಸಿ ಹೊಸದೊಂದು ಸಸ್ಯವನ್ನು ಪಡೆಯುವುದು (ಸಿಂಪಲ್ ಲೇಯರಿಂಗ್); ಗಿಡವನ್ನು ಚಾಟನಿ
ಮಾಡಿ ಹೊಸ ಟೊಂಗೆಗಳು ಮೂಡಿದಾಗ ಆ ಟೊಂಗೆಗಳ ಸುತ್ತ ಮಣ್ಣು ಏರಿಸಿ ಹೊಸ ಸಸ್ಯಗಳನ್ನು ಪಡೆಯುವುದು
(ಮೌಂಡ್ ಲೇಯರಿಂಗ್); ಗಿಡದ ತುದಿಯನ್ನಷ್ಟೇ ಮಣ್ಣಲ್ಲಿ ಹುದುಗಿಸಿ ಹೊಸ ಸಸ್ಯಗಳನ್ನು ಪಡೆಯುವುದು
(ಟಿಪ್ ಲೇಯರಿಂಗ್) ಮುಂತಾದ ಇತರೇ ಲೇಯರಿಂಗ್ ವಿಧಾನಗಳನ್ನೂ ವಿವಿಧ ಬೆಳೆಗಳಲ್ಲಿ ಅನುಸರಿಸಬಹುದು.
ಕಸಿ ಗಿಡಗಳ ಆರೈಕೆ / ನಿರ್ವಹಣೆ
ಕಸಿ ಗಿಡಗಳನ್ನು ತಯಾರಿಸಿದ ಶ್ರದ್ಧೆಯಂತೆ ಅವುಗಳ
ಆರೈಕೆಯೂ ಮಹತ್ವದ್ದು.
ನರ್ಸರಿಯಲ್ಲಿ
·
ಕಸಿ
ಕೂಡಲು ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಬೇಕೆಂದು ಮುಂಚೆಯೇ ಹೇಳಾಗಿದೆ. ಜೊತೆಗೆ ಕಸಿ ಕಟ್ಟಿದ
ಪ್ರದೇಶದಲ್ಲಿ ನೀರು ತಾಗದಂತೆ ಸೋಂಕನ್ನು ತಡೆಯುವುದೂ ಅಗತ್ಯವಾಗಿದೆ. ಈ ದೃಷ್ಟಿಯಿಂದ ಕಸಿ ಕಟ್ಟಿದ
ಭಾಗದಲ್ಲಿ ಪೆಪ್ಸಿ ಕೊಟ್ಟೆಯನ್ನು ಬೋರಲಾಗಿ ಮುಚ್ಚುವ ರೂಢಿಯಿದೆ.
·
ಕಸಿಗಿಡಗಳಿಗೆ
ಸರಿಯಾದ ಪ್ರಮಾಣದಲ್ಲಿ ನೀರು ಕೊಡಬೇಕು. ನೀರು ನಿಲ್ಲದಂತೆ, ಕಸಿಗಂಟಿನ ಮೇಲೆ ನೇರವಾಗಿ ನೀರು ತಾಗದಂತೆ
ನೋಡಿಕೊಳ್ಳಬೇಕು.
·
ಕಸಿ
ಕಟ್ಟಿದ ಸಸ್ಯಗಳನ್ನು ನೆರಳಲ್ಲಿಟ್ಟು ಪೋಷಿಸಬೇಕು.
·
ಕಸಿ
ಕೂಡಲು ಬೇಕಾದ ಸಮಯ ಬೆಳೆಯಿಂದ ಬೆಳೆಗೆ ಭಿನ್ನ. ಯಾವುದೇ ಬೆಳೆಯಾದರೂ ಕನಿಷ್ಟ ಎರಡು ತಿಂಗಳ ಕಾಲಾವಕಾಶವಂತೂ
ಬೇಕೆ ಬೇಕು. ಕಸಿ ಕಟ್ಟಿದ ಕೊಂಬೆ ಚಿಗುರಿ ಒಂದೆರಡು ಎಲೆ ಹೊರಚಾಚಿದೆಯೆಂದರೆ ಕಸಿ ಕೂಡಿದೆ ಎಂದರ್ಥ
·
ಕಸಿಗಿಡಗಳು
ಚಿಗುರಲು ಪ್ರಾರಂಭವಾದ ಮೇಲೆ ಪೋಷಕಾಂಶಗಳನ್ನು ಒದಗಿಸಬೇಕು
ತೋಟದಲ್ಲಿ
·
ಕಸಿಗಿಡಗಳನ್ನು
ತೋಟದಲ್ಲಿ ನೆಡುವ ಮೊದಲು ಕಸಿಗಂಟಿನ ಮೇಲಿರುವ ಕಟ್ಟನ್ನು ಬಿಚ್ಚಬೇಕು. ಇಲ್ಲವಾದಲ್ಲಿ ಇದೇ ಟೇಪ್ ಸಸ್ಯಗಳಿಗೆ
ಪಾಶವಾಗಬಹುದು.
·
ಕಸಿಗಂಟಿನ
ಕೆಳಭಾಗದಲ್ಲಿ ಬೆಳೆಯುವ ಚಿಗುರುಗಳನ್ನು ಕಾಲಕಾಲಕ್ಕೆ ಚಿವುಟಿ ಹಾಕಬೇಕು. ಇಲ್ಲವಾದಲ್ಲಿ ಬೇರುಸಸ್ಯ
ಕಸಿಕೊಂಬೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ
·
ಕಸಿಗಿಡಗಳು
ಬೀಜಗಿಡಗಳಿಗಿಂತಲೂ ಸೂಕ್ಷ್ಮವಾಗಿರುವ ಕಾರಣ ಅವುಗಳಿಗೆ ನೆಟ್ಟ ನಂತರ ಸ್ವಲ್ಪ ಕಾಲ ನೆರಳನ್ನು ಒದಗಿಸಬೇಕು.
·
ವೇಗವಾದ
ಗಾಳಿಗೆ ಕೊಂಬೆ ಮುರಿದು ಬೀಳದಂತೆ ಕೋಲಿನ ಆಧಾರ ಕೊಡಬೇಕು
·
ಕಸಿಗಿಡಗಳು
ಬೇಗ ಫಲ ಕೊಡುವುದು ಸಾಧ್ಯವಾದರೂ ನೆಟ್ಟ ಮೊದಲೆರಡು ವರ್ಷ ಹೂವು ಕಾಣಿಸಿಕೊಂಡರೆ ತೆಗೆದು ಹಾಕುವುದು
ಒಳಿತು. ಈ ಚಟುವಟಿಕೆ ಪುಟ್ಟ ಸಸಿಗಿಡದ ಆರೋಗ್ಯಕರ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಮೂರನೇ ವರ್ಷದಿಂದ
ಅವು ಹದವಾದ ಎಲೆ ಟೊಂಗೆಯ ಹರವು ಪಡೆದ ನಂತರ ಕಾಯಿ ಬಿಟ್ಟರೆ ಒಳ್ಳೆಯದು.
ಕಸಿ ಗಿಡಗಳ ಸೀಮಿತತೆ
·
ಬೀಜಗಿಡಗಳಿಗೆ
ಹೋಲಿಸಿದರೆ ಕಸಿಗಿಡಗಳ ಹರವು ಕಡಿಮೆ. ಕೆಲವೊಮ್ಮೆ ಕಸಿಗಿಡಗಳು ಮರವಾಗಿ ಬೆಳೆಯದೇ ಫಸಲು ನಷ್ಟವಾಗುವ
ಸಾಧ್ಯತೆಯಿದೆ.
·
ಬೀಜಗಿಡಗಳಿಗಿಂತ
ಕಸಿಗಿಡಗಳು ಸೂಕ್ಷ್ಮವಾಗಿರುತ್ತವೆ. ಗಾಳಿ ಹೊಡೆತಕ್ಕೆ ಸಿಕ್ಕಿ ವಿಶೇಷವಾಗಿ ಕಸಿಗಂಟಿನ ಬಳಿ ಮುರಿಯುವ
ಸಾಧ್ಯತೆ ಹೆಚ್ಚು.
·
ಬೇರುಸಸ್ಯಗಳು
ಕಸಿಕೊಂಬೆಯ ಮೇಲೆ ತಮ್ಮ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಕೆಲವೊಮ್ಮೆ ಋಣಾತ್ಮಕ ಫಲಗಳನ್ನು ನೀರೀಕ್ಷಿಸಬಹುದಾಗಿದೆ
·
ಬೀಜಗಿಡಗಳಿಗಿಂತ
ಕಸಿಗಿಡಗಳು ನಾಜೂಕಾಗಿರುತ್ತವೆ. ಹಾಗಾಗಿ ಅವುಗಳ ಆರೈಕೆಗೆ ಹೆಚ್ಚು ಶ್ರಮ ವ್ಯಯವಾಗಬಹುದು.
·
ಗೂಟಿ
ಕಸಿಯಿಂದ ಪಡೆದಂತಹ ಸಸ್ಯಗಳಲ್ಲಿ ಆಳವಾಗಿ ಇಳಿಯಬಲ್ಲ ತಾಯಿ ಬೇರಿರದ ಕಾರಣ ಅವುಗಳ ನೀರಿನ ಅಗತ್ಯತೆ
ಹೆಚ್ಚು.
·
ಇನ್ನು
ಕೋಕಂ, ಜಾಯಿಕಾಯಿ ಮೊದಲಾದ ಬೆಳೆಗಳಲ್ಲಿ ನೇರವಾಗಿ ಬೆಳೆಯುವ ತುದಿ ಕುಡಿಯನ್ನು ಮಾತ್ರ ಕಸಿ ಕಟ್ಟಲು
ಬಳಸಬಹುದಾಗಿದೆ. ಅಂತಹ ಕುಡಿಗಳ ಸಂಗ್ರಹಣೆ ಕಷ್ಟವಾಗಬಹುದು.
Comments
Post a Comment