ಸುಂದರ ಕೈತೋಟಕ್ಕೆ ಸಪ್ತ ಸೂತ್ರಗಳು
ಕೈಗೆಟಕುವ ತೋಟವೋ ಕೈಯಷ್ಟಗಲ ತೋಟವೋ, ‘ಕೈದೋಟ’ ಎಂಬುದು ಪ್ರತಿಯೊಬ್ಬ ಹಳ್ಳಿಗ-ಪಟ್ಟಣಿಗನ ಆಸೆ-ಕನಸು. ಇದೇ ಆಸಕ್ತಿಯ ಪರಿಣಾಮ ಹಿತ್ತಲಿಗೆ ಮೀಸಲಾಗಿದ್ದ ಕೈ ತೋಟ ಇಂದು ತಾರಸಿ ವರೆಗೂ ಬಂದು ಮುಟ್ಟಿದೆ. ಇದೊಂದು ಕಲೆ, ಇದೊಂದು ವಿಜ್ಞಾನ; ಇದೊಂದು ಹವ್ಯಾಸ, ಇದೊಂದು ಹುಚ್ಚು. ನಾವೇ ಬೆಳೆದ ತಾಜಾ ತಾಜಾ ಪೌಷ್ಟಿಕ ಆಹಾರ ನಮ್ಮ ಹೊಟ್ಟೆ ಸೇರುವುದೆಂದರೆ ಸೌಭಾಗ್ಯವೇ!. ಮನೆ ಬಳಕೆಗೆ ಬೇಕಾಗುವ ತರಕಾರಿ, ಹೂವು, ಕೆಲ ಔಷಧೀಯ ಸಸ್ಯಗಳು, ಮೂಲಿಕೆಗಳು, ಹಣ್ಣು, ಹೀಗೆ ತರಹೇವಾರಿ ಬೆಳೆಗಳ ಕೈತೋಟದ ನಿರ್ವಹಣೆಯೇನೂ ಸುಲಭವಲ್ಲ. ಶ್ರಮ, ಶ್ರದ್ಧೆ, ಸಮಯ ಬೇಡುವ ಫುಲ್ ಟೈಮ್ ಜಾಬೇ ಸೈ. ಆದರೂ ಇದರ ಗಮ್ಮತ್ತೇ ಬೇರೆ.
ಈಗಾಗಲೇ ಕೈತೋಟವನ್ನು
ನಿರ್ವಹಿಸುತ್ತಿರುವವರು, ಇನ್ನು ಮುಂದೆ ಕೈತೋಟದ ಯೋಜನೆ ಹಾಕಿಕೊಂಡವರಿಗೆ ಇಲ್ಲಿದೆ ಕೆಲ ಟಿಪ್ಸ್
1.ಕಾಲಕ್ಕೆ ತಕ್ಕ ಬೆಳೆಗಳ ಆಯ್ಕೆ
ಪ್ರತಿ ಬೆಳೆಗೂ ತನ್ನದೇ ಆದಂತಹ ವಾತಾವರಣದ ಆದ್ಯತೆಯಿದೆ. ಮೂಲತಃ ಉಷ್ಣ ವಲಯದ ಬೆಳೆಗಳು ಹೆಚ್ಚಿನ ತಾಪಮಾನ, ಆರ್ದ್ರತೆ ಬಯಸಿದರೆ ಮೂಲತಃ ಶೀತಲ ವಾತಾವರಣದ ಬೆಳೆಗಳು ತಂಪು, ಒಣ ಹವೆಯನ್ನು ಬಯಸುತ್ತವೆ. ಹಾಗಾಗಿ ಬೀಜ ಕೊಳ್ಳುವ ಮುನ್ನ ಆಯಾ ಕಾಲಕ್ಕೆ ತಕ್ಕಂತಹ ಬೆಳೆಗಳನ್ನು ಆಯ್ದುಕೊಂಡರೆ ಒಳಿತು.
- ಬೇಸಿಗೆಗೆ: ಟೊಮ್ಯಾಟೋ, ಬದನೆ, ಮೆಣಸು, ಮೂಲಂಗಿ, ಸೌತೆ, ಕುಂಬಳ, ಬೆಂಡೆ ಇತ್ಯಾದಿ. ಬೇಸಿಗೆ ಇವುಗಳ ಆದ್ಯತೆಯಾದರೂ ವರ್ಷಪೂರ್ತಿ ಬೆಳೆಯಬಲ್ಲ ಸುಲಭ ಬೆಳೆಗಳು. ಇನ್ನು ಮೆಂತೆ, ಕೊತ್ತಂಬರಿ, ಹರಿವೆ, ಸಬ್ಬಸಿಗೆ ಸೊಪ್ಪು ತರಕಾರಿಗಳನ್ನೂ ವರ್ಷಪೂರ್ತಿ ಬೆಳೆಯಬಹುದು.
- ಮಳೆಗಾಲಕ್ಕೆ: ಹೀರೆ, ಪಡುವಲ, ಸೋರೆ, ಇತ್ಯಾದಿ. ಹೂಗಳು: ಚೆಂಡು ಹೂ, ಕಾಸ್ಮೋಸ್, ಡೇರೆ,
- ಚಳಿಗಾಲಕ್ಕೆ: ಡೊಳ್ಳು ಮೆಣಸು, ಬಟಾಣಿ, ಚೌಳಿ ಕಾಯಿ, ಎಲೆಕೋಸು, ಹೂಕೋಸು, ಗಡ್ಡೆಕೋಸು, ಬೀಟ್ರೂಟ್, ಗಜ್ಜರಿ ಬ್ರೊಕೊಲಿ, ಕೇಲ್. ಹೂಗಳು: ಸೇವಂತಿಗೆ, ಪೆಟುನಿಯಾ, ಪ್ಯಾನ್ಸಿ, ಆಸ್ಟರ್, ಇತ್ಯಾದಿ
ಇದೇನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮಗಳಲ್ಲ. ಈಗಂತೂ ಯಾವುದೇ ವಾತಾವರಣವನ್ನೂ ಸಹಿಸಬಲ್ಲ ಸುಧಾರಿತ ತಳಿಗಳು ಲಭ್ಯವಿದೆ. ವಾತಾವರಣವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುವ ಕಾರಣ ಎಲ್ಲಾ ಕಡೆಗೆ ಇದೇ ಫಲಿಸುತ್ತದೆನ್ನುವುದು ಸಾಧ್ಯವಿಲ್ಲ.
2.ಬೀಜಗಳ ಆಯ್ಕೆ
ಆಸಕ್ತಿಯಿಂದ ಬೀಜ ಹಾಕಿ
ಮೊಳಕೆ ಒಡೆಯುತ್ತವೆ ಎಂದು ತಿಂಗಳು ಪೂರ್ತಿ ಕಾದು ಕಾದು ಬೇಸರಗೊಂಡ ಅನುಭವ ನಮ್ಮೆಲ್ಲರದೂ ಆಗಿದೆ.
ಬಿತ್ತ ಬೀಜ ಸರಿಯಾಗಿ ಮೊಳಕೆಯೊಡೆಯದೇ ಇರುವುದು, ಮಣ್ಣಲ್ಲಿಯೇ ಕರಗಿ ಕೊಳೆತು ಹೋಗುವುದು, ಇರುವೆಗಳು
ತಿಂದು ಹೋಗುವುದು ಹೀಗೆ ಹಲವು ಬಾರಿ ಬೀಜದ ಸಮಸ್ಯೆಯಿಂದ ನಮ್ಮ ಕೈತೋಟ ವಿಫಲವಾಗಿದ್ದಿದೆ. ಹಾಗಾದರೆ
ಇದಕ್ಕೆ ಪರಿಹಾರವೇನು.
ಬೀಜಗಳ ಗುಣಮಟ್ಟ ಇಲ್ಲಿ
ಮಹತ್ವದ ಪಾತ್ರ ವಹಿಸುತ್ತದೆ. ನಾಟಿ ಬೀಜಗಳು, ನೀವೇ ಸಂಗ್ರಹಿಸಿದ ಬೀಜಗಳಾದರೆ ಮೊಳಕೆ ಬಗ್ಗೆ
ವಿಶ್ವಾಸವಿರುವುದಿಲ್ಲ. ಹಾಗಾಗಿ ಬಿತ್ತನೆ ಮಾಡುವಾಗ ಒಂದರ ಬದಲು ಎರಡು ಬೀಜವನ್ನು ಬಳಸಿ.
ಅವುಗಳನ್ನು ಸಂಗ್ರಹಿಸುವಾಗಲೂ ಸರಿಯಾಗಿ ಒಣಗಿಸಿ ಸಂಸ್ಕರಿಸಿ ಪ್ಯಾಕ್ ಮಾಡಿ ತಂಪು ಒಣ
ವಾತಾವರಣದಲ್ಲಿ (ನಿಮ್ಮ ಫ್ರಿಡ್ಜ್ ಆದರೂ ಸರಿ) ಸಂಗ್ರಹಿಸಿ. ಯಾವುದೇ ಬೀಜವಾಗಲಿ ವರ್ಷಕ್ಕೂ ಅಧಿಕ
ಕಾಲ ಸಂಗ್ರಹಿಸಿದ್ದಲ್ಲಿ ಅವುಗಳ ಗುಣಮಟ್ಟ ಕಳಪೆಯಾಗುತ್ತದೆ. ಹಾಗಾಗಿ ಪ್ರತಿ ಬಾರಿ ತಿಂಗಳು ಮೀರದ
ತಾಜಾ ಬೀಜವನ್ನೇ ಬಳಸಿದರೆ ಒಳಿತು. ಬೀಜಗಳನ್ನು ಬಿತ್ತುವ ಮುನ್ನ ಅವುಗಳನ್ನು ಬೂದಿ, ಅರಶಿಣದಿಂದ
ಅಥವಾ ಶಿಲೀಂದ್ರನಾಶಕ ಕೀಟನಾಶಕದಿಂದ ಉಪಚರಿಸಿ. ಬೀಜಗಳನ್ನು ಕೊಳ್ಳುವಾಗ ನಂಬಲಾರ್ಹ ಮೂಲದಿಂದ
(ಸರ್ಕಾರಿ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ಸಂಸ್ಥೆ, ಅಥವಾ ಖಾಸಗಿ ಬೀಜೋತ್ಪಾದಕರಿಂದ) ಖರೀದಿಸಿ.
3.ಮಣ್ಣು
ಸಸ್ಯಗಳ ಒಟ್ಟಾರೆ
ಬೆಳವಣಿಗೆ ಅವಲಂಬಿತವಾಗಿರುವುದು ಮಣ್ಣಿನ ಫಲವತ್ತತೆಯ ಮೇಲೆ. ಮಣ್ಣು ಆರೋಗ್ಯಕರವಾಗಿದ್ದರೆ ನಾವು
ಬೆಳೆದ ತರಕಾರಿಗಳೂ ಸ್ವಾದಿಷ್ಟ ಮತ್ತು ಪೌಷ್ಟಿಕ. ಮಣ್ಣಿನ ರಸಸಾರ, ಪೋಷಕಾಂಶಗಳ ಪ್ರಮಾಣ
ಫಲವತ್ತತೆಯನ್ನು ನಿರ್ಧರಿಸುವ ಮುಖ್ಯ ಅಂಶಗಳು. ಹಾಗಾಗಿ ನಮ್ಮ ಕೈತೋಟದ ಮಣ್ಣಿನ ಫಲವತ್ತತೆ
ಕಾಪಾಡಲು ಆಗಾಗ ಕಳಿತ ಗೊಬ್ಬರವನ್ನು ಹಾಕುತ್ತಿರಬೇಕು.
ಹಿತ್ತಲ ತೋಟವಾದರೆ
ಮಣ್ಣನ್ನು ಸಡಿಲವಾಗಿಸಿ ಹದವಾಗಿಸುವುದು, ತರಕಾರಿ ಮಡಿಯ ತಯಾರಿಕೆ, ಮಡಿಗಳಿಗೆ ಕಳಿತ ಎರೆಗೊಬ್ಬರ
ಅಥವಾ ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡುವುದನ್ನು ಅನುಸರಿಸಬಹುದು. ತಾರಸಿಯ ತೋಟವಾದರೆ ಮಣ್ಣಿನ
ಮಿಶ್ರಣ ತಯಾರಿಸುವ ಅವಕಾಶ ನಮ್ಮ ಕೈಯಲ್ಲೇ ಇದೆ. ಸಸ್ಯಗಳಿಗೆ ಸಾರಜನಕ, ರಂಜಕ, ಪೊಟ್ಯಾಶ್
(N:P:K) ಎನ್ನುವ ತ್ರಿಮೂರ್ತಿಗಳ ಅವಶ್ಯಕತೆ ಅತ್ಯಧಿಕವಾಗಿರುತ್ತದೆ. ಸಾವಯವ ಗೊಬ್ಬರದಲ್ಲಿ
ಇವುಗಳ ಪ್ರಮಾಣ ಕಡಿಮೆ. ಹಾಗಾಗಿ ಸಾವಯವದ ಜೊತೆ ಶಿಫಾರಸ್ಸಿನ ಅನುಸಾರ ರಾಸಾಯನಿಕ ಗೊಬ್ಬರ
(ಯೂರಿಯಾ, DAP, MOP ಇತ್ಯಾದಿ) ವನ್ನೂ
ಬಳಸಬಹುದು.
4.ಬೀಜಗಳ ಬಿತ್ತನೆ, ಸಸ್ಯಗಳ ನಡುವಿನ ಅಂತರ
ಬೆಂಡೆ, ಬೀನ್ಸ್, ಬಟಾಣಿ,
ಗಜ್ಜರಿ, ಮೂಲಂಗಿ, ಬೀಟ್ರೂಟ್ ನಂತ ಗಡ್ಡೆ ತರಕಾರಿಗಳು, ಸೊಪ್ಪುತರಕಾರಿಗಳ ಬೀಜಗಳನ್ನು ನೇರವಾಗಿ
ಬಿತ್ತಲಾಗುತ್ತದೆ. ಟೊಮ್ಯಾಟೊ, ಬದನೆ, ಮೆಣಸು, ಹೂಕೋಸು, ಕ್ಯಾಬೀಜ, ಸೌತೆ ಜಾತಿಯ ತರಕಾರಿ ಮತ್ತು
ಹೂಬೀಜಗಳನ್ನು ಮೂರು ನಾಲ್ಕು ವಾರಗಳ ಕಾಲ ಬೆಳೆಸಿ ಕಿತ್ತು ನೆಡಬಹುದಾಗಿದೆ. ಹೀಗೆ ಕಿತ್ತು
ನೆಡಬಹುದಾದ ತರಕಾರಿಗಳನ್ನು ಕೋಕೋ ಪೀಟ್ ಮಾಧ್ಯಮದಲ್ಲಿ ಚಿಕ್ಕದೊಂದು ಪಾಟ್ ಅಥವಾ ಟ್ರೇ ನಲ್ಲಿ
ಮೊದಲು ಬೆಳೆಸಿ ನಂತರ ನೆಲಕ್ಕೆ / ಗ್ರೋಬಾಗ್/ ಪಾಟ್ ನಲ್ಲಿ ನೆಡಬಹುದು. ಇದು ತರಕಾರಿಗಳನ್ನು
ಬೆಳೆಸುವ ಅತ್ಯಂತ ಪರಿಣಾಮಕಾರಿ ವಿಧಾನ.
ಇನ್ನು ಕಡಿಮೆ ಜಾಗವಿದೆಯೆಂದು
ಹೆಚ್ಚೆಚ್ಚು ಗಿಡಗಳನ್ನು ತುರುಕುವುದು ಒಳ್ಳೆಯದಲ್ಲ. ಗಿಡಗಳು ಹೆಚ್ಚಿಗೆ ಇದ್ದಂತೆ ಕಂಡರೂ ಅವುಗಳ
ಇಳುವರಿ ಕಡಿಮೆಯಾಗುತ್ತದೆ. ಹಾಗಾಗಿ ಇರುವ ಜಾಗಕ್ಕೇ ಯಾವ ತರಕಾರಿ, ಎಷ್ಟು ಅಂತರದಲ್ಲಿ ಎಂದು
ಮೊದಲೇ ಯೋಜನೆ ಮಾಡುವುದು ಒಳಿತು. ಇದು ಗಿಡವೊಂದರ
ಉತ್ಪಾದಕತೆಯನ್ನು ಹೆಚ್ಚಿಸಲು ಉಪಕಾರಿ. ಜೊತೆಗೆ ಕೀಟ ರೋಗಗಳನ್ನು ನಿರ್ವಹಿಸಲೂ ಸುಲಭ. ಬೆಳೆಗಳು
ಸೊಂಪಾಗಿ ಬೆಳೆಯಲು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಒಂದೂವರೆಯಿಂದ ಎರಡಡಿ ಅಂತರ ನೀಡುವುದು
ಸೂಕ್ತ.
5.ನೀರಿನ ನಿರ್ವಹಣೆ
ತರಕಾರಿ, ಹೂಗಿಡಗಳದು
ಮಣ್ಣಿನ ಮೇಲ್ಮೈ ಅಲ್ಲಿ ಹರಡಿಕೊಂಡಿರುವ ನಾರಿನಂತ
ಬೇರು. ತಾಯಿ ಬೇರಿನಂತೆ ದೃಡವಾಗಿ ತೀರಾ ಆಳಕ್ಕೆ ಇಳಿಯಲಾರವು. ಹಾಗಾಗಿ ಕೈತೋಟಕ್ಕೆ ಪ್ರತಿದಿನ
ಅಥವಾ ದಿನ ಬಿಟ್ಟು ದಿನ ನೀರು ಹನಿಸುವುದು ಅನಿವಾರ್ಯ. ನೀರು ಹನಿಸಲು ಸರಿಯಾದ ಹೊತ್ತು ಮುಂಜಾನೆ
ಮತ್ತು ಸಂಜೆ. ಕಾರಣ ಈ ಸಮಯದಲ್ಲಿ ಸಸ್ಯಗಳಲ್ಲಿ ಭಾಷ್ಪೀಕರಣವೂ ಕನಿಷ್ಟವಾಗಿರುತ್ತದೆ, ಜೊತೆಗೆ ನೀರು
ಬಿಸಿಲಿಗೆ ಆವಿಯಾಗುವ ಪ್ರಮಾಣವೂ ಕಡಿಮೆ.
ಎಷ್ಟು ನೀರು ಸಾಕೆಂಬುದು
ನಿಮ್ಮ ಮಣ್ಣಿನ ಪ್ರಕಾರವನ್ನು ಅವಲಂಬಿತ. ಮೇಲಿನ ಒಂದು ಇಂಚು ಮಣ್ಣು ಒದ್ದೆಯಾಗಿರುವಂತೆ ತೇವಾಂಶ
ಕಾಪಾಡಬೇಕು. ನಿಂತ ನೀರು ರೋಗಗಳನ್ನು ಆಹ್ವಾನಿಸುತ್ತದೆ. ಹಾಗಾಗಿ ಕೊಟ್ಟ ನೀರು ಸರಿಯಾಗಿ ಬಸಿದುಹೋಗಬೇಕು.
ನೀರು ಹನಿಸುವಾಗ ಪೈಪ್ ನಲ್ಲಿ ರಭಸವಾಗಿ ಹಾಕುವುದಕ್ಕಿಂತ ಡ್ರಿಪ್ ಅಥವಾ ಸ್ಪ್ರಿಂಕ್ಲರ್
ವ್ಯವಸ್ಥೆ ಉಪಯುಕ್ತ, ಇದರಿಂದ ನೀರು-ಸಮಯ-ಶ್ರಮ ಎಲ್ಲವೂ ಉಳಿತಾಯ.
6.ರೋಗ ಕೀಟ ನಿರ್ವಹಣೆ
ರೋಗ ಕೀಟಗಳ ದಾಳಿ ಸಮೃದ್ಧವಾಗಿ ಬೆಳೆಯುತ್ತಿರುವ
ಕೈತೋಟವನ್ನು ಕ್ಷಣ ಮಾತ್ರದಲ್ಲಿ ಹಾಳು ಮಾಡುಬಲ್ಲವು. ಹಾಗಾಗಿ ನೆಟ್ಟ ಗಿಡಗಳತ್ತ ಗಮನ ಹರಿಸಿ
ಕೈತೋಟವನ್ನು ಸ್ವಚ್ಛವಾಗಿರಿಸುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಆರೋಗ್ಯಕರ ಬೀಜ,
ಸಸಿಗಳನ್ನು ನೆಡಬೇಕು. ಕಳೆ ಸಸ್ಯಗಳು ರೋಗ ಕೀಟಗಳ ಪರ್ಯಾಯ ವಾಸಸ್ಥಾನವಾದ ಕಾರಣ ಆಗಾಗ ಕಳೆ
ಕೀಳಬೇಕು. ಕೀಟ ರೋಗ ಭಾದಿತ ಸಸ್ಯಗಳನ್ನು ಕಂಡಲ್ಲಿ ತಕ್ಷಣವೇ ಅವುಗಳನ್ನು ವಿಲೇವಾರಿ
ಮಾಡಬೇಕು.
ಕೈತೋಟದಲ್ಲಿ ಕಾಣುವ ಸಾಮಾನ್ಯ ರೋಗವೆಂದರೆ ಬೇರು ಕೊಳೆ
ರೋಗ, ಎಲೆ ಚುಕ್ಕಿ ರೋಗ, ಬೂದಿ ರೋಗ, ಇತ್ಯಾದಿ. ಇಂತಹ ಶಿಲೀಂದ್ರ (ಫಂಗಸ್) ರೋಗಗಳು ಬರದಂತೆ ಮುನ್ನೆಚ್ಚರಿಕಾ
ಕ್ರಮವಾಗಿ ತುತ್ತ ಸುಣ್ಣ ಸಿಂಪಡಿಸಬಹುದು. ಇದು ಸಾವಯವವೂ ಹೌದು. ಕೈತೋಟವನ್ನು ಭಾದಿಸುವ
ಕೀಟಗಳೆಂದರೆ ಹಣ್ಣು ನೊಣ, ರಸ ಹೀರುವ ಹಿಟ್ಟು
ತಿಗಣೆ, ಹೇನು. ಥ್ರಿಪ್ಸ್ ಇತ್ಯಾದಿ. ಹಣ್ಣು
ನೊಣಗಳಿಗಾಗಿ ಟ್ರ್ಯಾಪ್ ಬಳಸಬಹುದು. ಅಥವಾ ಕೀಟಗಳನ್ನು ಹೋಗಲಾಡಿಸಲು ಬೇವಿನ ಎಣ್ಣೆ ಸಿಂಪಡಿಸಬಹುದು.
ಎಲೆ ಕಾಯಿ ಹಣ್ಣು ತಿನ್ನುವ ಕಂಬಳಿಹುಳು ಕಂಡಲ್ಲಿ ಹೊಸಕಿ ಸಾಯಿಸಬಹುದು.
7.ಕೈತೋಟದ ಸುತ್ತಲೊಂದು ಸುತ್ತು
ಕೈತೋಟದ ದಿನ ನಿತ್ಯದ ಆಗು
ಹೋಗುಗಳನ್ನು ವೀಕ್ಷಿಸುವ ಆನಂದಕ್ಕೆ ಬೇರಾವುದೂ ಸಾಟಿಯಿಲ್ಲ. ಸಂಜೆ ಹೊತ್ತಲ್ಲಿ ಕೈತೋಟದ ಸುತ್ತ
ಒಂದು ಸುತ್ತು ಕೇವಲ ಉಲ್ಲಾಸದಾಯಕವಾಗಿರದೇ ನಮ್ಮ
ಬೆಳೆಗಳ ಬೆಳವಣಿಗೆ, ಅವುಗಳ ಕುಂದು ಕೊರತೆಗಳನ್ನು ಆಲಿಸಲೂ ಸಹಾಯಕ. ಕೈತೋಟದ ಹೆಚ್ಚಿನ ಯಶಸ್ಸು
ಅಡಗಿರುವುದು ಇದರಲ್ಲೇ.
ದಿನ ದಿನವೂ ಹೊಸದೊಂದನ್ನು
ಕಲಿಸಿ ಕೊಡುವ ಕೈತೋಟದ ಪಾಠ ಎಂದಿಗೂ ಕಲಿತು ಮುಗಿಯದ ಅಧ್ಯಾಯ. ನಮ್ಮ ಆಹಾರವನ್ನು ನಾವೇ
ಬೆಳೆದುಕೊಳ್ಳುವ, ನಮ್ಮ ಮನೆಯಲ್ಲೇ ಬೆಳೆದ ತರಕಾರಿ ಎಂದು ಅಕ್ಕ ಪಕ್ಕದವರೊಂದಿಗೆ ಹೆಮ್ಮೆಯಿಂದ
ಹಂಚಿಕೊಳ್ಳುವ ಖುಷಿ ಬಲ್ಲವನೇ ಬಲ್ಲ. ಸಲಹೆಗಳ ಮೂಲಕ ಈ ಖುಷಿಯನ್ನು ನಿಮ್ಮದಾಗಿಸಕೊಳ್ಳಿ ಎಂಬ
ಹಾರೈಕೆ ನಮ್ಮದು.

Comments
Post a Comment