ಸಸ್ಯಕ್ಕೂ ಬೇಕು, ನಮಗೂ ಬೇಕು, ಆಂಟಿ ಆಕ್ಸಿಡಂಟ್ಸ್

ʼಆಂಟಿಆಕ್ಸಿಡೆಂಟ್‌ʼ ಹೀಗೊಂದು ಶಬ್ಧವನ್ನು ಕೇಳದವರಾರು! ಆಹಾರ ಪೊಟ್ಟಣಗಳ ಮೇಲೆ ಕಡ್ಡಾಯವೆಂಬಂತೆ ಕಂಗೊಳಿಸುವ ಈ ವರ್ಣರಂಜಿತ ಪದವನ್ನು ಕಾಣದವರಾರು!! ನಮ್ಮ ಉತ್ಪನ್ನ ʼರಿಚ್‌ ಇನ್‌ ಆಂಟಿಆಕ್ಸಿಡೆಂಟ್‌ʼ ಎಂಬ ವಿವಿಧ ಕಂಪನಿಯ ಮೋಹಕ ಜಾಹೀರಾತುಗಳಿಗೆ ಮರುಳಾಗದವರಾರು!!! ನಿಜಕ್ಕೂ ಆಂಟಿಆಕ್ಸಿಡೆಂಟ್ಸ್‌ಗಳೆಂದರೇನು, ಸಸ್ಯಗಳಿಗೂ ಆಹಾರಕ್ಕೂ ಆರೋಗ್ಯಕ್ಕೂ ಅವುಗಳ ಸಂಬಂಧವೇನು, ಸತ್ಯ ಮಿಥ್ಯವೇನು ಎಂದು ಚರ್ಚಿಸುವುದು ಈ ಲೇಖನದ ಉದ್ದೇಶ.

ಉತ್ಕರ್ಷಣೆ

ʼಉತ್ಕರ್ಷಣೆʼ ಅಥವಾ ʼಆಕ್ಸಿಡೇಶನ್‌ʼ ಎಂಬೊಂದು ಕ್ರಿಯೆಯ ಬಗ್ಗೆ ನಾವೆಲ್ಲರೂ ಹೈಸ್ಕೂಲ್‌ನಲ್ಲಿಯೇ ಓದಿರುತ್ತೇವೆ. ಓದಿ ಬಿಟ್ಟಿರುತ್ತೇವೆ ಎಂದರೆ ಸರಿಯೇನೋ. ಆಗ ಉರು ಹೊಡೆದಿದ್ದ ವಿಜ್ಞಾನದ ಪಾಠವನ್ನು ಈಗ ಸ್ವಲ್ಪ ಝಾಡಿಸೋಣ. ಉತ್ಕರ್ಷಣ ಎನ್ನುವುದು ಯಾವುದೇ ವಸ್ತು ಆಮ್ಲಜನಕದೊಂದಿಗೆ ಕೂಡಿದಾಗ ನಡೆಯುವ ಒಂದು ವಿಧದ ರಾಸಾಯನಿಕ ಕ್ರಿಯೆ. ಅಂದರೆ ಅಣು-ಕಣಗಳ ಕೊಟ್ಟು ತೆಗೆದುಕೊಳ್ಳುವಿಕೆ; ಪರಿಣಾಮ ಮೂಲ ವಸ್ತುವಿನ ಭೌತಿಕ ಅಥವಾ ರಾಸಾಯನಿಕ ರೂಪದಲ್ಲಿ ಬದಲಾವಣೆ ಉಂಟಾಗುವುದು. ಅದೇ ಹೈಸ್ಕೂಲಿನ ಉದಾಹರಣೆ ಕೊಡುವುದಾದರೆ ಆಮ್ಲಜನಕದೊಂದಿಗೆ ಕೂಡಿದಾಗ ಕಬ್ಬಿಣ ತುಕ್ಕಾಗಿ ಬದಲಾಗುವುದು.

ಸಸ್ಯ ಪ್ರಾಣಿ ಜೀವಿಗಳ ಶರೀರದೊಳಗೆ ನಡೆಯುವ ಉಸಿರಾಟ, ಜೀರ್ಣಕ್ರಿಯೆ, ದ್ಯುತಿಸಂಶ್ಲೇಷಣೆ ಎಲ್ಲವೂ ಉತ್ಕರ್ಷಣೆಯ ಕ್ರಿಯೆಯನ್ನು ಒಳಗೊಂಡಿರುತ್ತದೆ. ಇಲ್ಲಿ ಹೆಚ್ಚಿನ ಆಸ್ಥೆಯಿರುವುದು ಉತ್ಕರ್ಷಣೆಯ ಕ್ರಿಯೆಯಲ್ಲಲ್ಲ. ಉತ್ಕರ್ಷಣಾ ಕ್ರಿಯೆಯಿಂದ ಬಿಡುಗಡೆಯಾಗುವ ಉತ್ಪನ್ನಗಳಾದ ʼಫ್ರೀ ರಾಡಿಕಲ್ಸ್‌ʼ ಎಂಬ ಅಪಾಯಕಾರಿ ಸ್ವತಂತ್ರ ಅಣುಗಳ ಬಗ್ಗೆ. ಕಬ್ಬಿಣಕ್ಕೇ ತುಕ್ಕು ತರಿಸಬಲ್ಲ ಉತ್ಕರ್ಷಣಾ ಉತ್ಪನ್ನಗಳು ಸಜೀವಿಗಳ ದೇಹಕ್ಕೆ ಎಷ್ಟು ಅಪಾಯಕಾರಿಯಾಗಬಹುದೆಂದು ನೀವೇ ಊಹಿಸಿ. ಫ್ರೀ ರಾಡಿಕಲ್ಸ್‌ ಉತ್ಪಾದನೆ ನಿಸರ್ಗ ಸಹಜವಾದರೂ ಪ್ರದೂಷಣೆ, ಅತಿನೇರಳೆ ಕಿರಣಗಳು ವಾತಾವರಣದ ಒತ್ತಡ ಇವುಗಳ ಉತ್ಪಾದನೆಯನ್ನು ಅಧಿಕವಾಗಿಸಿವೆ. ಜೊತೆಗೆ ಮನುಷ್ಯರಲ್ಲಿ ಆಧುನಿಕ ಆಹಾರ ಪದ್ಧತಿ ಅತಿಯಾಗಿ ಸಂಸ್ಕರಿತ ಪದಾರ್ಥಗಳ ಸೇವನೆ, ಮದ್ಯಪಾನ ಮುಂತಾದ ಜೀವನ ಶೈಲಿಗಳು ಮತ್ತಷ್ಟು ಫ್ರಿ ರಾಡಿಕಲ್ಸ್‌ ಉತ್ಪಾದನೆ ಎಡೆ ಮಾಡಿವೆ.

ಅತಿಯಾದ ಸ್ವಾತಂತ್ರ್ಯ ಸಿಕ್ಕಾಗ ಉಂಟಾಗುವ ಹುಚ್ಚಾಟದಂತೆ ಉತ್ಕರ್ಷಣಾ ಉತ್ಪನ್ನಗಳಾದ ಫ್ರೀ ರಾಡಿಕಲ್ಸ್‌ ತಂದೊಡ್ಡುವ ಅಪಾಯ ಹಲವಾರು. ಡಿ.ಎನ್.ಎ, ಪ್ರೋಟಿನ್‌, ಲಿಪಿಡ್‌ಗಳೊಂದಿಗೆ ರಿಯಾಕ್ಷನ್‌ ಗೆ ಒಳಗಾಗುವ ಈ ಕಣಗಳು ಜೀವದ ಮೂಲವಾದ ಜೀವಕೋಶವನ್ನೇ ಸತಾಯಿಸಬಲ್ಲವು. ಮನುಷ್ಯರಲ್ಲಿ ಒಂದೊಂದೇ ಅಂಗ ಜೀರ್ಣವಾಗುತ್ತಾ ಕಾಲಕ್ರಮೇಣ ಇಡೀ ದೇಹ ಕ್ಯಾನ್ಸರ್‌, ಮಧುಮೇಹ, ಹೃದ್ರೋಗ, ನರದೌರ್ಬಲ್ಯ ಎನ್ನುತ್ತಾ ರೋಗದ ಗೂಡಾಗಬಲ್ಲದು. ಸಸ್ಯಗಳಲ್ಲೂ ಅಷ್ಟೇ ಆಹಾರ ಉತ್ಪಾದನೆಯಲ್ಲಿ ಅಡಚಣೆ, ಪೌಷಕಾಂಶಗಳ ಅಸಮತೋಲನ, ಕುಂಠಿತ ಬೆಳವಣಿಗೆ ಮುಂತಾದ ಸಮಸ್ಯೆ ಉಂಟಾಗುತ್ತದೆ.

ಉತ್ಕರ್ಷಣಾ ನಿರೋಧಕಗಳು

ಉತ್ಕರ್ಷಣೆ ನಡೆಯುತ್ತಿದೆ, ಉತ್ಕರ್ಷಣಾ ಉತ್ಪನ್ನಗಳ ಉತ್ಪಾದನೆಯಾಗುತ್ತಿದೆ ಎಂದರೆ ಯಾವುದೇ ಜೀವಿಯ ದೇಹ ಸುಮ್ಮನಿರುತ್ತದೆಯೇ? ಅದಕ್ಕೊಂದು ಪ್ರತ್ಯಸ್ತ್ರ ಇರಲೇಬೇಕು. ಇವುಗಳನ್ನೇ ಉತ್ಕರ್ಷಣೆಯ ಉತ್ಪನ್ನಗಳನ್ನು ತಟಸ್ಥಗೊಳಿಸುವ ಉತ್ಕರ್ಷಣಾ ನಿರೋಧಕಗಳು ಅಥವಾ ಫ್ರೀ ರಾಡಿಕಲ್ಸ್‌ ಅನ್ನು ಹೊಡೆದುರುಳಿಸುವ ಆಂಟಿಆಕ್ಸಿಡೆಂಟ್ಸ್‌ ಎಂದು ಕರೆಯಲಾಗುತ್ತದೆ.

ಆಂಟಿಆಕ್ಸಿಡೆಂಟ್ಸ್‌ ಹೇಗೆ ಕೆಲಸ ಮಾಡುತ್ತವೆಂದು ತಿಳಿಯಲು ಒಂದು ಸುಲಭ ಉದಾಹರಣೆ ನೋಡೋಣ. ಸೇಬು ಹಣ್ಣನ್ನು ಅರ್ಧ ಕತ್ತರಿಸಿ ಹೊರ ವಾತಾವರಣಕ್ಕೆ ತೆರೆದಿಟ್ಟಾಗ ಕಪ್ಪಾಗುವುದನ್ನು ಎಲ್ಲರೂ ಗಮನಿಸಿಯೇ ಇರುತ್ತೀರಾ. ಇಲ್ಲಿ ನಡೆಯುವುದು ಉತ್ಕರ್ಷಣ ಕ್ರಿಯೆಯೇ. ಸೇಬುವಿನ ಅಂಗಾಂಶದಲ್ಲಿರುವ ಪಾಲಿಫಿನಾಲ್‌ಗಳು ಆಮ್ಲಜನಕದೊಂದಿಗೆ ಕೂಡಿ ಫ್ರೀ ರಾಡಿಕಲ್ಸ್‌ಗಳನ್ನು ಬಿಡುಗಡೆ ಮಾಡಿ ಮೆಲನಿನ್‌ ಎಂಬ ರೂಪಕ್ಕೆ ಬದಲಾಗುತ್ತವೆ. ಇದೇ ಸೇಬುವಿಗೆ ಸ್ವಲ್ಪ ನಿಂಬೆ ರಸವನ್ನು ಸವರಿ ಇಟ್ಟರೆ ಕಪ್ಪಾಗುವುದನ್ನು ತಡೆಯಬಹುದು. ಇಲ್ಲಿ ನಿಂಬೆ ರಸದಲ್ಲಿರುವ ಸಿಟ್ರಿಕ್‌ ಆಮ್ಲ ಆಂಟಿಆಕ್ಸಿಡೆಂಟ್‌ ನಂತೆ ಕೆಲಸ ಮಾಡುತ್ತದೆ.

ಸೂಪರ್‌ ಆಕ್ಸೈಡ್‌ ಡಿಸ್‌ಮ್ಯುಟೇಸ್‌, ಕ್ಯಾಟೇಲೇಸ್‌, ಗ್ಲುಟಾತಿಯಾನ್‌ ಪೆರೋಕ್ಸಿಡೇಸ್‌, ಗ್ಲುಟಾತಿಯಾನ್‌, ವಿಟಮಿನ್‌ ಸಿ, ವಿಟಮಿನ್‌ ಇ, ಇವು ಮಾನವರ ದೇಹದಲ್ಲಿ ಪ್ರಮುಖವಾಗಿ ಉತ್ಪಾದನೆಯಾಗುವ ಉತ್ಕರ್ಷಣಾ ನಿರೋಧಕಗಳು. ನಮ್ಮ ದೇಹದಲ್ಲಿ ಇವು ತಯಾರಾದರೂ ಬಹುತೇಕ ಬಾರಿ ಇವುಗಳ ಪ್ರಮಾಣ ಸಾಲದೇ ಹೋಗಬಹುದು. ಹಾಗಾಗಿ ನಾವು ಸಸ್ಯಗಳನ್ನು ಅವಲಂಬಿತವಾಗುವ ಪ್ರಮೇಯ ಉಂಟಾಗುತ್ತದೆ.

ಸಸ್ಯಗಳು ಉತ್ಪಾದಿಸುವ ಉತ್ಕರ್ಷಣಾ ನಿರೋಧಕಗಳು

ಸಸ್ಯಗಳೂ ಸಹಿತ ತಮ್ಮ ದೇಹ ರಕ್ಷಣೆಗೆ ವಿವಿಧ ವಿಧದ ನಿರೋಧಕಗಳನ್ನು ಉತ್ಪಾದಿಸುತ್ತವೆ. ಮೇಲೆ ಹೇಳಿದ ರಾಸಾಯನಿಕ ಸಂಯುಕ್ತಗಳ ಜೊತೆಗೆ ಕೆರೋಟಿನಾಯ್ಡ್ಸ್‌, ಫ್ಲೇವನಾಯ್ಡ್ಸ್‌, ಫಿನೋಲಿಕ್‌ ಆಮ್ಲಗಳೆಂಬ ಎಂಬ ವಿಭಿನ್ನ ಸಂಯುಕ್ತಗಳನ್ನೂ ಸಸ್ಯಗಳು ತಯಾರಿಸಬಲ್ಲವು. ಕ್ಯಾರೆಟ್‌ ಸಿಹಿಕುಂಬಳದಂತಹ ಹಳದಿ ತರಕಾರಿಗಳಲ್ಲಿರುವ ಬೀಟಾ ಕೆರೋಟಿನ್‌; ಹಸಿರು ಸೊಪ್ಪು ತರಕಾರಿಗಳಲ್ಲಿರುವ ಲ್ಯುಟಿನ್‌, ಜಿಯಾಕ್ಸಾಂತಿನ್;‌ ಟೋಮೆಟೋ ಕಲ್ಲಂಗಡಿ ಕೆಂಪು ಹಣ್ಣು ತರಕಾರಿಗಳಲ್ಲಿರುವ ಲೈಕೋಪೀನ್‌; ಸೇಬು ದ್ರಾಕ್ಷಿಯಲ್ಲಿರುವ ಕ್ವೆರ್ಸಟೀನ್‌; ನೀಲಿದ್ರಾಕ್ಷಿ ಬ್ಲೂಬೆರಿಗಳಂತ ಕಂದು ಹಣ್ಣು ತರಕಾರಿಗಳಲ್ಲಿರುವ ಆಂಥೋಸಯಾನಿನ್;‌ ಧಾನ್ಯಗಳಲ್ಲಿರುವ ಫೆರುಲಿಕ್‌ ಆಮ್ಲ ಮುಂತಾದ ರಾಸಾಯನಿಕ ಸಂಯುಕ್ತಗಳು ಇದೇ ವರ್ಗಗಳಿಗೆ ಸೇರುತ್ತವೆ.

ಈಗ ತಿಳಿಯಿತೇ ತಾಜಾ ತಾಜಾ ಬಣ್ಣದ ಹಣ್ಣು ತರಕಾರಿಗಳನ್ನು ಏಕೆ ಸೇವಿಸಬೇಕೆಂದು. ಇದೇ ಸಸ್ಯಗಳಿಗೂ, ಆಹಾರಕ್ಕೂ, ನಮ್ಮ ಆರೋಗ್ಯಕ್ಕೂ ಇರುವ ಸಂಬಂಧ. ನಮ್ಮ ದೇಹಕ್ಕೆ ಸಾಲದ ಪೋಷಕ ಅಂಶಗಳನ್ನು ಸಸ್ಯಗಳಿಂದ ಪಡೆಯುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಆಧುನಿಕ ಜೀವನ ಪದ್ಧತಿಯಲ್ಲಿ ಇದು ಅತ್ಯಂತ ಅವಶ್ಯಕ.

ಸತ್ಯ-ಮಿಥ್ಯ

1.      ಆಂಟಿಆಕ್ಸಿಡೆಂಟ್ಸ್‌ಗಳು ಬಣ್ಣಬಣ್ಣದ ಹಣ್ಣು ತರಕಾರಿಗಳಲ್ಲಿ, ಬಣ್ಣಬಣ್ಣದ ಭಾಗದಲ್ಲಿ ಮಾತ್ರ ಲಭ್ಯ

ಬಣ್ಣಬಣ್ಣದ ಹಣ್ಣು ಮತ್ತು ತರಕಾರಿಗಳು ಆಂಟಿಆಕ್ಸಿಡೆಂಟ್ಸ್‌ಗಳು ಸಮೃದ್ಧವಾಗಿದ್ದರೂ ಈ ಸಂಯುಕ್ತಗಳು ಬೇರು, ಎಲೆ ಮತ್ತು ಬೀಜ ಸೇರಿದಂತೆ ಇತರ ಸಸ್ಯ ಭಾಗಗಳಲ್ಲಿಯೂ ಇರುತ್ತವೆ. ಒತ್ತಡವನ್ನು ನಿರ್ವಹಿಸಲು ಅಗತ್ಯವಿರುವ ಜಾಗಗಳಲ್ಲಿ ಅಗತ್ಯವಿರುವ ಸಮಯದಲ್ಲಿ ಅವು ತಯಾರಾಗುತ್ತವೆ. ಉದಾಹರಣೆಗೆ, ತೀಕ್ಷ್ಣ ಬೆಳಕಿಗೆ ಒಡ್ಡಿಕೊಂಡ ಎಲೆಗಳು ಆಕ್ಸಿಡೇಟಿವ್ ಹಾನಿಯನ್ನು ತಡೆಗಟ್ಟಲು ಹೆಚ್ಚಿನ ಮಟ್ಟದ ನಿರ್ದಿಷ್ಟ ಆಂಟಿಆಕ್ಸಿಡೆಂಟ್ಸ್‌ ಹೊಂದಿರಬಹುದು, ಆದರೆ ಬೇರುಗಳು ಮಣ್ಣಿನ ರೋಗಕಾರಕಗಳಿಂದ ರಕ್ಷಿಸಲು ನಿರ್ದಿಷ್ಟ ಆಂಟಿಆಕ್ಸಿಡೆಂಟ್ಸ್‌ ಹೊಂದಿರಬಹುದು. ಡ್ರೈ ಫ್ರೂಟ್ಸ್‌, ನಟ್ಸ್‌, ಧಾನ್ಯ ಬೇಳೆ ಕಾಳು ಕಾಫಿ ಚಹಾ ಎಲ್ಲದರಲ್ಲೂ ಆಂಟಿಆಕ್ಸಿಡೆಂಟ್ಸ್‌ಗಳಿರುತ್ತವೆ.

2.      ಫ್ರೀ ರಾಡಿಕಲ್ಸ್‌ ನಿರೋಧಕತೆಯೊಂದೆ ಆಂಟಿಆಕ್ಸಿಡೆಂಟ್ಸ್‌ಗಳ ಕೆಲಸ

ಆಂಟಿಆಕ್ಸಿಡೆಂಟ್ಸ್‌ಗಳ ಕೆಲಸ ಮುಖ್ಯವಾಗಿ ಫ್ರೀ ರಾಡಿಕಲ್ಸ್‌ಗಳನ್ನು ತಟಸ್ಥಗೊಳಿಸುವುದಾದರೂ ಇಷ್ಟಕ್ಕೆ ಸೀಮಿತವಲ್ಲ. ಈ ಸಂಯುಕ್ತಗಳು ಜೀವಕೋಶಗಳ ನಡುವೆ ಸಂವಹನ (ಸಿಗ್ನಲಿಂಗ್) ಸಾಧಿಸಬಲ್ಲವು. ಬರ, ಹೆಚ್ಚಿನ ಲವಣಾಂಶ ಮತ್ತು ರೋಗಕಾರಕ ದಾಳಿಯಂತಹ ಒತ್ತಡಗಳಿಗೆ ಹೊಂದಿಕೊಳ್ಳಲು ಸಸ್ಯಗಳಿಗೆ ಸಹಾಯ ಮಾಡಬಲ್ಲವು. ಹೀಗೆ ಅವು ಕೇವಲ ರಕ್ಷಣೆಗಲ್ಲದೆ ಸಸ್ಯದ ಒಟ್ಟಾರೆ ಒತ್ತಡ ನಿರ್ವಹಣಾ ವ್ಯವಸ್ಥೆಯ ಭಾಗವಾಗಿವೆ.

3.      ಸಸ್ಯವೊಂದರ ಪೌಷ್ಟಿಕ ಗುಣಮಟ್ಟವನ್ನು ಅಳೆಯಲು ಆಂಟಿಆಕ್ಸಿಡೆಂಟ್ಸ್‌ಗಳ ಪ್ರಮಾಣವಷ್ಟೇ ಸಾಕು

ಆಂಟಿಆಕ್ಸಿಡೆಂಟ್ಸ್‌ಗಳು ಸಸ್ಯ ಪೌಷ್ಟಿಕಾಂಶದ ಒಂದು ಭಾಗವಾಗಿದೆಯಷ್ಟೇ. ಆರೋಗ್ಯ ದೃಷ್ಟಿಯಿಂದ ನಾರಿನಂಶ, ಜೀವಸತ್ವಗಳು, ಖನಿಜಗಳು ಮತ್ತು ಇತರ ಜೈವಿಕ ಸಕ್ರಿಯ ಸಂಯುಕ್ತಗಳಂತಹ ಅನೇಕ ಪೋಷಕಾಂಶಗಳು ಅಗತ್ಯವಾಗಿವೆ.

4.      ಮೇಲೆ ಹೇಳಿದ ಎಲ್ಲಾ ಆಂಟಿಆಕ್ಸಿಡೆಂಟ್ಸ್‌ಗಳ ಚಟುವಟಿಕೆ ಒಂದೇ ತರನಾಗಿದ್ದು

ಮೇಲೆ ಹೇಳಿದ ಪ್ರತಿ ಆಂಟಿಆಕ್ಸಿಡೆಂಟ್ಸ್‌ಗಳೂ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ನೀರಿನಲ್ಲಿ ಕರಗುವ ಸಾಮರ್ಥ್ಯವಿರುವ ವಿಟಮಿನ್ ಸಿ ರಕ್ತಪರಿಚಲನೆ ವ್ಯವಸ್ಥೆಯೊಡನೆ ದೇಹವಿಡಿ ಸರಬರಾಜಾಗುತ್ತದೆ. ನೀರಿನಲ್ಲಿ ಕರಗದ ವಿಟಮಿನ್ ಇ ಕೊಬ್ಬಿನ ಅಂಶದ ಜೊತೆ ಒಟ್ಟಾಗಿ ಜೀವಕೋಶ ಪೊರೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹೀಗೆ ಆಂಟಿಆಕ್ಸಿಡೆಂಟ್ಸ್‌ಗಳ ಪ್ರಯೋಜನಗಳು ಅವುಗಳ ಪ್ರಕಾರ, ರೂಪ, ಉತ್ಪಾದಿತ ಮೂಲ ಮತ್ತು ದೇಹದ ನಿರ್ದಿಷ್ಟ ಅಗತ್ಯಗಳನ್ನು ಅವಲಂಬಿಸಿರುತ್ತದೆ.

5.      ತರಕಾರಿಗಳನ್ನು ಬೇಯಿಸುವುದು ಅವುಗಳಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳನ್ನು ನಾಶಮಾಡುತ್ತದೆ

ವಿಟಮಿನ್ ಸಿ ಯಂತಹ ಕೆಲವು ಆಂಟಿಆಕ್ಸಿಡೆಂಟ್ಸ್‌ಗಳ ಶಾಖಕ್ಕೆ ಸಂವೇದನಾಶೀಲವಾಗಿರುತ್ತವೆ ಮತ್ತು ಬೇಯಿಸಿದಾಗ ಇವುಗಳ ಪ್ರಮಾಣ ಕ್ಷೀಣಿಸಬಹುದು (ಅದಕ್ಕೆ ನೋಡಿ ಅಡುಗೆಯೆಲ್ಲಾ ಮುಗಿದ ಮೇಲೆ ಕೊನೆಯಲ್ಲಿ ನಿಂಬೆ ಹಿಂಡಲಾಗುತ್ತದೆ).  ಕೆರೋಟಿನಾಯ್ಡ್ ಗಳು ಬೇಯಿಸಿದಾಘ ನಾಶವಾಗುವುದಿಲ್ಲ, ಬದಲಿಗೆ ಇನ್ನಷ್ಟು ಲಭ್ಯವಾಗುತ್ತವೆ.

6.      ಸಾವಯವ ಪದಾರ್ಥಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಅಧಿಕ

ಸಾವಯವ ಮತ್ತು ರಾಸಾಯನಿಕ ಕೃಷಿ ಉತ್ಪನ್ನಗಳಲ್ಲಿ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುವಷ್ಟು ಆಂಟಿಆಕ್ಸಿಡೆಂಟ್ ಅಂಶಗಳ ವ್ಯತ್ಯಾಸವನ್ನೇನೂ ಗುರುತಿಲಾಗಿಲ್ಲ. ಆದರೆ ಸಹಜವಾಗಿ ಸಾವಯವ ಪದಾರ್ಥಗಳಲ್ಲಿ ರಾಸಾಯನಿಕಗಳ ಬಳಕೆ ಇಲ್ಲದ ಕಾರಣ ಅವು ಆರೋಗ್ಯಕ್ಕೆ ಹೆಚ್ಚು ಲಾಭದಾಯಕ.

7.      ಆಂಟಿಆಕ್ಸಿಡೆಂಟ್ ಕ್ಯಾನ್ಸರ್, ಹೃದ್ರೋಗದಂತಹ ಕಾಯಿಲೆಗಳು ವಕ್ಕರಿಸಿದಂತೆ ತಡೆಗಟ್ಟುತ್ತವೆ

ಆಂಟಿಆಕ್ಸಿಡೆಂಟ್‌ಗಳು ನಮ್ಮ ದೇಹವನ್ನು ಫ್ರೀ ರಾಡಿಕಲ್ಸ್‌ಗಳ ಹಾನಿಯಿಂದ ರಕ್ಷಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ; ರೋಗಗಳನ್ನು ತಕ್ಕಮಟ್ಟಿಗೆ ದೂರವಿಡುತ್ತವೆ. ಆದರೆ ರೋಗ ಬರದಂತೆ ತಡೆಗಟ್ಟಲು ಸಾಧ್ಯವಿಲ್ಲ; ಆರೋಗ್ಯ ಸಮಸ್ಯೆಗಳಿಗೆ ಇವೊಂದೇ ಪರಿಹಾರವಾಗಲು ಸಾಧ್ಯವಿಲ್ಲ.

8.      ಹೆಚ್ಚೆಚ್ಚು ಆಂಟಿಆಕ್ಸಿಡೆಂಟ್ ಸೇವನೆಯಿಂದ ಹೆಚ್ಚೆಚ್ಚು ರೋಗ ನಿರೋಧಕತೆ ಸಾಧ್ಯ.

ಅತಿಯಾದರೆ ಅಮೃತವೂ ವಿಷದಂತೆ ಹೆಚ್ಚಿನ ಆಂಟಿಆಕ್ಸಿಡೆಂಟ್ ಸೇವನೆಯಿಂದ, ವಿಶೇಷವಾಗಿ ಆಂಟಿಆಕ್ಸಿಡೆಂಟ್ ಪೂರಕಗಳ (ಸಪ್ಲಿಮೆಂಟ್ಸ್) ಸೇವನೆಯಿಂದ ಅಡ್ಡಪರಿಣಾಮಗಳೂ ಉಂಟಾಗಬಹುದು. ತಾಜಾ ಸಮತೋಲಿತ ಆಹಾರ ಸೇವನೆ ಎಲ್ಲಾ ದೃಷ್ಟಿಯಿಂದ ಒಳ್ಳೆಯದು.

 

 

 


Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ