ಸಸ್ಯ ಪೋಷಕಾಂಶಗಳು, ರೂಪ-ಹೀರಿಕೆ-ಬಳಕೆ
ಸೂರ್ಯನ ಬೆಳಕು, ಮಣ್ಣು ಮತ್ತು ಇವುಗಳನ್ನು ಆಧರಿಸಿ ಬೆಳೆದ ಸಸ್ಯ – ಇಂತದ್ದೊಂದು ಸಂಕೀರ್ಣ ವ್ಯವಸ್ಥೆ ನಮ್ಮ ಹೊಟ್ಟೆ-ಬಟ್ಟೆಯ ಮೂಲವೆಂದರೆ ಉತ್ಪ್ರೇಕ್ಷೆಯಲ್ಲ. ಇವುಗಳಲ್ಲಿ ಸೂರ್ಯನ ಬೆಳಕನ್ನಂತೂ ಮುಟ್ಟುವಂತಿಲ್ಲ ಬಿಡಿ. ಇನ್ನು ಮಣ್ಣನ್ನು ತಿದ್ದಿ ತೀಡುವ ಸುಮಾರು ಹಾದಿಯನ್ನು ನಾವು ಕಂಡುಕೊಂಡಿದ್ದೇವೆ. ಇದೇ ಹಿನ್ನೆಲೆಯಲ್ಲಿ ರಾಸಾಯನಿಕವೇ ಇರಲಿ, ಜೈವಿಕ/ಸಾವಯವವೇ ಇರಲಿ, ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ, ಪೂರೈಕೆಯೂ ಇದೆ. ಎಡುವುತ್ತಿರುವುದು ಬಹುಶಃ ಅವುಗಳ ಸಮರ್ಪಕ ಬಳಕೆಯಲ್ಲಿ. ಈ ನಿಟ್ಟಿನಲ್ಲಿ ಮಣ್ಣು-ಸಸ್ಯ ವ್ಯವಸ್ಥೆಯ ತಿಳುವಳಿಕೆ ಅಗತ್ಯ.
ಪೋಷಕ ಅಂಶ:
ಬೆಳೆಗಳ ಆರೋಗ್ಯದ ದೃಷ್ಟಿಯಿಂದ
ನಾವು ಹೊರಗಿನಿಂದ ನೀಡುವ ಗೊಬ್ಬರವನ್ನೇ ಅಥವಾ ಆಡುಭಾಷೆಯಲ್ಲಿ ಆಹಾರವನ್ನೇ ಪೋಷಕಾಂಶಗಳೆಂದು ಕರೆಯಬಹುದು.
ಈ ಪೋಷಕಾಂಶಗಳೇ ಬೆಳೆಗಳ ದೇಹ ಸೇರಿ ಜೀವರಾಶಿಯಾಗಿ ಪರಿವರ್ತನೆಯಾಗುತ್ತದೆ. ನಮ್ಮ ಪೋಷಣೆ ಹೆಚ್ಚಿದ್ದಷ್ಟು
ಬೆಳೆಗಳು ಸದೃಢವಾಗಿ ಬೆಳೆಯುತ್ತವೆ, ಇಳುವರಿ ಹೆಚ್ಚುತ್ತದೆ, ನಮ್ಮ ಹೊಟ್ಟೆ ಸೇರುವ ಆಹಾರವೂ ಪೌಷ್ಟಿಕವಾಗಿರುತ್ತದೆ.
ಆಯಾ ಹವಾಗುಣವನ್ನು ಆಧರಿಸಿ ಸಸ್ಯದ
ಸಂಪೂರ್ಣ
ಜೀವನಕ್ಕೆ
ಬೇಕಾಗುವಷ್ಟು
ಪೋಷಕಾಂಶಗಳನ್ನು ಮಣ್ಣು ಹೊಂದಿರುತ್ತದೆ. ಹೊರಗಿನಿಂದ ಗೊಬ್ಬರ ಕೊಡದೆಯೇ ಸಸ್ಯಗಳ ಬೆಳೆಯಬಲ್ಲವು. ಆದಾಗ್ಯೂ
ಪದೇ ಪದೇ ಒಂದೇ ಜಾಗದಲ್ಲಿ ಬೆಳೆ ಬೆಳೆದಾಗ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ. ಸಾಕಷ್ಟು
ನೀರು
ಬೆಳಕಿದ್ದರೂ
ಪೌಷ್ಟಿಕಾಂಶದ
ಕೊರತೆಯು
ಇಳುವರಿಯನ್ನು
ಮಿತಿಗೊಳಿಸುತ್ತದೆ. ಹಾಗಾಗಿ ಕೃಷಿ ಮಾಡುವಾಗ ಮಣ್ಣಿಗೆ ಗೊಬ್ಬರ ಸೇರಿಸುವುದರೊಂದಿಗೆ
ಫಲವತ್ತತೆಯನ್ನು ಕೃತಕವಾಗಿ ಮಾರ್ಪಡಿಸುವುದು ಅವಶ್ಯಕವಾಗುತ್ತದೆ.
ಸಸ್ಯಗಳಿಗೇಕೆ ಬೇಕು ಪೋಷಕಾಂಶ:
ನಮ್ಮ ದೇಹದಂತೆಯೇ ಸಸ್ಯಗಳ ದೇಹದ
ಜೀವಕೋಶಗಳ ರಚನೆ, ಕಾರ್ಯ ನಿರ್ವಹಣೆಗೆ ಬೇಕಾದ ಕಾರ್ಬೋಹೈಡ್ರೇಟ್, ಲಿಪಿಡ್, ಪ್ರೋಟೀನ್ ಮತ್ತು ಡಿ.ಎನ್.ಎ
ರೂಪುಗೊಳ್ಳಲು ಪೋಷಕಾಂಶಗಳು ಅವಶ್ಯಕ. ಶಕ್ತಿ ಸಂಗ್ರಹ, ಸಂಚಯನಕ್ಕೆ; ಕಿಣ್ವಗಳು ಸಕ್ರಿಯವಾಗಲು; ಅಯಾನ್/Ion
ಕಣಗಳ ಸಮತೋಲನಕ್ಕೆ; ಜೀವಕೋಶಗಳ ವಿಭಜನೆ, ಬೆಳವಣಿಗೆಗೆ; ದ್ಯುತಿಸಂಶ್ಲೇಷಣೆಗೆ; ಸಂತಾನೋತ್ಪತ್ತಿಗೆ;
ಕೀಟ ರೋಗ ನಿರೋಧಕತೆಗೆ ಪೋಷಕಾಂಶಗಳು ಅಗತ್ಯ.
ಬೆಳೆಗಳ ಪೋಷಕಾಂಶ ನಿರ್ವಹಣೆ
ಬಗ್ಗೆ ಹೇಳುವಾಗ ವಾಸ್ತವವಾಗಿ ಚರ್ಚೆ ಮಾಡುವುದು ರಾಸಾಯನಿಕ ಮೂಲಧಾತುಗಳ/elements ಬಗ್ಗೆ. ನಮ್ಮ
ಭೂಮಂಡಲದಲ್ಲಿ 118 ಮೂಲಧಾತುಗಳಿವೆ, ಇವುಗಳಲ್ಲಿ ಸುಮಾರು 60 ಮೂಲಧಾತುಗಳನ್ನು ಸಸ್ಯಗಳು ಮಣ್ಣಿನಿಂದ
ಎಳೆದುಕೊಳ್ಳಬಲ್ಲವು. ಅದರಲ್ಲೂ ಸಸ್ಯಗಳು ತಮ್ಮ ಬಾಡಿ ಬಿಲ್ಡಿಂಗ್ ಗೆ ಬಳಸಿಕೊಳ್ಳುವುದು 17 ಅವಶ್ಯಕ
ಧಾತುಗಳನ್ನು ಮಾತ್ರ. ಇನ್ನುಳಿದ 43ನ್ನು ಬಳಸದೇ ಹಾಗೇ ಶೇಖರಿಸಿಕೊಳ್ಳಬಲ್ಲವು ಅಥವಾ ಈ ಜಡ ಧಾತುಗಳು
ಕೆಲವೊಮ್ಮೆ ಸಸ್ಯಗಳ ದೇಹದಲ್ಲಿ ಅತಿಯಾಗಿ ಶೇಖರವಾಗಿ ಸಸ್ಯಗಳು ಸಾಯಲೂಬಲ್ಲವು.
ಬೆಳೆಗಳ ಚಯಾಪಚಯ ಕ್ರಿಯೆಯಲ್ಲಿ
ನೇರವಾಗಿ ತೊಡಗಿರಬೇಕು; ಒಂದರ ಸರಿಸಾಟಿ ಇನ್ನೊಂದಿರಬಾರದು; ಒಂದನ್ನು ಇನ್ನೊಂದು ಬದಲಿಸಲಾಗದಷ್ಟು
ವಿಶಿಷ್ಟವಾಗಿರಬೇಕು; ಬೆಳೆಗಳು ಇವುಗಳ ಕೊರತೆ ಲಕ್ಷಣವನ್ನು ತೋರಬೇಕು; ಒಟ್ಟಿನಲ್ಲಿ ಇವಿಲ್ಲದೆ ಬೆಳೆಗಳು
ತಮ್ಮ ಜೀವನ ಸಾಗಿಸುವುದು ಅಸಾಧ್ಯವೆನಿಸಬೇಕು. ಇವುಗಳನ್ನೇ ಈ 17 ಅವಶ್ಯಕ ಮೂಲಧಾತುಗಳು ಅಥವಾ ಪೋಷಕಾಂಶಗಳೆಂದು
ಪರಿಗಣಿಸಲಾಗಿದೆ.
ಈ 17 ಧಾತುಗಳು ಯಾವವು, ವಾತಾವರಣದಲ್ಲಿ
ಇವುಗಳ ಲಭ್ಯತೆ ಮತ್ತು ಸಸ್ಯಗಳಲ್ಲಿ ಏಕೆ ಬಳಕೆಯಾಗುತ್ತವೆ: ಕೋಷ್ಟಕ 1 ನೋಡಿ
ಪೋಷಕಾಂಶ ಪಡೆಯಲು ಬೆಳೆಗಳ ಕಸರತ್ತು
17 ಮೂಲಧಾತುಗಳಲ್ಲಿ ಮೂರು ಮುಖ್ಯ
ಧಾತುಗಳು, ಆಮ್ಲಜನಕ ಇಂಗಾಲ ಮತ್ತು ಜಲಜನಕ ವಾತಾವರಣದಲ್ಲಿ ಹೇರಳವಾಗಿ ಲಭ್ಯ. ಸಸ್ಯಗಳ ಶರೀರದ 95%
ಭಾಗ, ಒಣ ತೂಕ ಆಧರಿಸಿ, ಇದೇ ಧಾತುಗಳಿಂದ ಆದಂತದ್ದು. ಇವು ಬೆಳವಣಿಗೆಗೆ ಮೂಲಭೂತ. ಸಾರಜನಕ ಕೂಡ ಮಣ್ಣಿಗಿಂತ
ಹೆಚ್ಚು ಹೇರಳವಾಗಿರುವುದು ವಾತಾವರಣದಲ್ಲಿ. ಆದರೆ ಸಸ್ಯಗಳಿಗೆ ವಾತಾವರಣದ ಸಾರಜನಕವನ್ನು ಸ್ಥಾಪಿಸುವ
ಸಾಮರ್ಥ್ಯವಿಲ್ಲ. ವಾತಾವರಣದಲ್ಲಿನ ಸಾರಜನಕ ಸಿಡಿಲು, ಮಳೆಯ ಮೂಲಕ ಭೂಮಿ ಸೇರಿ Ion ಕಣಗಳಾಗಿ ಪರಿವರ್ತನೆಯಾಗುತ್ತವೆ.
Ion ಗಳು ಬೇರಿನ ಮೂಲಕ ಹೀರಲ್ಪಡುತ್ತವೆ.
ರೈಝೋಬಿಯಮ್ ಎಂಬ
ಸೂಕ್ಷ್ಮಾಣು ಜೀವಿಗಳೂ ಕೂಡಾ ವಾತಾವರಣದಲ್ಲಿನ ಸಾರಜನಕವನ್ನು ಮಣ್ಣಿನಲ್ಲಿ Ion ಕಣಗಳಾಗಿ ಸ್ಥಾಪಿಸಬಲ್ಲವು.
ಇನ್ನುಳಿದ ಮೂಲಧಾತುಗಳು ಲವಣ-ಖನಿಜ
ರೂಪದಲ್ಲಿ ಲಭ್ಯ. ಖನಿಜ ಹೊಂದಿರುವ ಬಂಡೆ ಕಲ್ಲುಗಳು ಕಾಲಕ್ರಮೇಣ ತುಂಡಾಗುವುದರಿಂದ; ಸಾವಯವ ವಸ್ತುಗಳು
ಕೊಳೆಯುವಿಕೆಯಿಂದ; ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಂದ; ನಾವೇ ಕೊಡುವ ಗೊಬ್ಬರದಿಂದ
ಪೋಷಕಾಂಶಗಳು ಸಸ್ಯಗಳಿಗೆ ಲಭ್ಯವಾಗುತ್ತದೆ. ಈ ಕ್ರಿಯೆಯಾಗುವಾಗ Ion ಎಂಬ ಸುಲಭ ಕಣಗಳ ರೂಪದಲ್ಲಿ ರಾಸಾಯನಿಕ
ಸಂಯುಕ್ತಗಳು/ಪೋಷಕಾಂಶಗಳು ಮಣ್ಣಿನ ದ್ರವ್ಯರಾಶಿಯಲ್ಲಿ ಬೆರೆಯುತ್ತವೆ.
ನಂತರ ಗಾಳಿಯಿಂದ ಎಲೆಗಳ ಮೂಲಕ
ಮತ್ತು ಮಣ್ಣಿನಿಂದ ಬೇರುಗಳ ಮೂಲಕ ಅಗತ್ಯವಾದ ಪೋಷಕಾಂಶಗಳು ಎಳೆಯಲ್ಪಡುತ್ತವೆ. ಸಸ್ಯ ಶರೀರ ಶಾಸ್ತ್ರದಲ್ಲಿ
ಈ ಜಟಿಲ ಕ್ರಿಯೆಗಳನ್ನು ಭೇದಿಸಿ ಪ್ರತಿ ಹೆಜ್ಜೆಯನ್ನೂ ಗುರುತಿಸಲಾಗಿದೆ. ಈ ಪೋಷಕಾಂಶಗಳನ್ನು ಹೊಂದಬೇಕಾದರೆ
ಸಸ್ಯಗಳು ಬಹಳ ಶ್ರಮವಹಿಸಿ ಸಾಕಷ್ಟು ಕಸರತ್ತು ನಡೆಸಬೇಕಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ.
ಗಾಳಿಯಿಂದ
ಎಲೆಗಳ ಮೂಲಕ
ಮೇಲ್ನೋಟಕ್ಕೆ ಹೇಳುವುದಾದರೆ
ಸಸ್ಯಗಳ ಎಲೆಯಲ್ಲಿ ಸ್ಟೊಮಾಟಾ ಎಂಬ ರಂಧ್ರಗಳಿವೆ, ಇವುಗಳನ್ನು ಬಾಗಿಲು ಎಂದು ತಿಳಿಯೋಣ. ಈ ಬಾಗಿಲು
ತೆಗೆದಾಗ ಸಸ್ಯಗಳ ಜೀವಕೋಶಗಳಲ್ಲಿ ಗಾಳಿ ಒಡಾಡಬಲ್ಲದು. ಇದೇ ಸಮಯ ಇಂಗಾಲದ ಡೈ ಆಕ್ಸೈಡ್ ಒಳ ಸೇರುತ್ತದೆ.
ದ್ಯುತಿಸಂಶ್ಲೇಷಣೆ ಕ್ರಿಯೆ ನಡೆದು ಇಂಗಾಲದ ಅಣುಗಳು ಸಸ್ಯಗಳ ಭಾಗವಾಗಿ ಸ್ಥಾಪಿತವಾಗುತ್ತವೆ. ಈ ಕ್ರಿಯೆಯಲ್ಲಿ
ಆಮ್ಲಜನಕವೂ ಉತ್ಪಾದನೆಯಾಗುತ್ತದೆ, ಉಸಿರಾಟ ಕ್ರಿಯೆಗೆ ಬಳಕೆಯಾಗುತ್ತದೆ. ಆಮ್ಲಜನಕದ ಕೊರತೆಯಾದಾಗ
(ರಾತ್ರಿ ಸಮಯ) ಸ್ಟೊಮಾಟಾ ಮೂಲಕ ಆಮ್ಲಜನಕ ಒಳಸೇರುತ್ತದೆ. ಬಾಗಿಲು ಕಾಯುವ ಗಾರ್ಡ್ ಗಳ ತರಹವೇ ಸ್ಟೊಮಾಟಾಗಳ
ತೆರೆದು-ಮುಚ್ಚುವಿಕೆ ನಿಯಂತ್ರಿಸುವ ಗಾರ್ಡ್ ಗಳಿದ್ದಾರೆ. ಹೀಗೆ ಸಸ್ಯಗಳು ಅವಶ್ಯಕತೆಗೆ ತಕ್ಕಂತೆ
ಗಾಳಿಯಿಂದ ಎಲೆಗಳ ಮೂಲಕ ಇಂಗಾಲ-ಆಮ್ಲಜನಕ ಹೊಂದುವ ಕ್ರಿಯೆಯನ್ನು ಸ್ವಯಂ ನಿಯಂತ್ರಿಸುತ್ತವೆ.
ಮಣ್ಣಿನಿಂದ
ಬೇರುಗಳ ಮೂಲಕ
ಇನ್ನು ಇತರೇ ಪೋಷಕಾಂಶಗಳನ್ನು
ಬೇರಿನ ಮೂಲಕ ಮಣ್ಣಿನ ದ್ರವ್ಯದಲ್ಲಿ ಬೆರೆತಿರುವ ಲವಣ-ಖನಿಜಗಳ Ion ಕಣಗಳಿಂದ ತೆಗೆದುಕೊಳ್ಳಲಾಗುತ್ತದೆ.
Ion ಕಣಗಳು ನೀರಿನ/ದ್ರವ್ಯದ ರೂಪದಲ್ಲಿ ‘ಕ್ಸೈಲಮ್’
ನಾಳಗಳ ಮೂಲಕ ಇತರೇ ಅಂಗಾಂಗಳಿಗೆ ಸರಬರಾಜು ಆಗುತ್ತದೆ.
ಬೇರಿನಿಂದ ಕ್ಸೈಲಮ್ ಸೇರುವ ಕ್ರಿಯೆ
ಮೂರು ತರಹ ನಡೆಯಬಲ್ಲದು;
·
ಒಂದು,
ಹೆಚ್ಚು ಸಾಂದ್ರತೆ ಪ್ರದೇಶದಿಂದ/ಮಣ್ಣಿನಿಂದ ಯಾವುದೇ ಸಹಾಯವಿಲ್ಲದ ಕಡಿಮೆ ಸಾಂದ್ರತೆಯಿರುವ ಪ್ರದೇಶಕ್ಕೆ/ಸಸ್ಯಗಳ
ದೇಹದೊಳಕ್ಕೆ ತಾನಾಗಿಯೇ ದ್ರವ ಹರಿಯುವುದು; ನೀರು ಇದೇ ಮಾದರಿಯಲ್ಲಿ ಸಸ್ಯದ ದೇಹ ಸೇರುತ್ತದೆ.
·
ಎರಡು,
ಹೆಚ್ಚು ಸಾಂದ್ರತೆಯಿಂದ ಕಡಿಮೆ ಸಾಂದ್ರತೆಯಿರುವ ಪ್ರದೇಶಕ್ಕೆ ಸಹಾಯ ಪಡೆದು ಸಾಗುವುದು; ಒಂದು ಪ್ರದೇಶದಿಂದ
ಇನ್ನೊಂದು ಪ್ರದೇಶಕ್ಕೆ ಹೋಗಲು ಬಸ್ ವ್ಯವಸ್ಥೆ ಇರುವಂತೆ ಸಸ್ಯಗಳಲ್ಲೂ ಪೋಷಕಾಂಶಗಳ ಸಾಗಣೆಗೆ ಸಾರಿಗೆ
ವ್ಯವಸ್ಥೆಯಿದೆ. ಸೀಟ್ ಮೀಸಲಾತಿಯೂ ಇದೆ. ಕೆಲವರು ಬಸ್ ನಲ್ಲಿ ಫ್ರಿಯಾಗಿ ಹೋದಂತೆ ಕೆಲ
ಪೋಷಕಾಂಶಗಳು ಶಕ್ತಿ ವ್ಯಯ ಮಾಡದೇ ಈ ಸಾರಿಗೆಯಲ್ಲಿ ಸಾಗುತ್ತವೆ. ಬೋರಾನ್, ಸಿಲಿಕಾನ್ ಈ ಮಾದರಿಯಲ್ಲಿ
ಶಕ್ತಿ ವ್ಯಯಿಸದೆ ತಮ್ಮ ಸೀಟ್ ನಲ್ಲಿ ಕುಳಿತು ಸಾಗಬಲ್ಲವು.
·
ಮೂರು,
ಸಾಂದ್ರತೆಯ ಸಂಬಂಧವಿಲ್ಲದೆ ಸರಬರಾಜು ಆಗುವುದು. ಈ ಹಾದಿಯಲ್ಲಿ ಸಸ್ಯ ಯೋಚನೆ ಮಾಡಿ ಶಕ್ತಿ ವ್ಯಯಿಸಿ
ತನಗೆ ಬೇಕೆನಿಸಿದ ಪೋಷಕಾಂಶವನ್ನು ಮಣ್ಣಿನಿಂದ ಹೀರಿಕೊಳ್ಳುತ್ತದೆ. ಹೆಚ್ಚಿನ ಪೋಷಕಾಂಶಗಳು ಸಸ್ಯಗಳ
ದೇಹ ಸೇರುವುದು ಇದೇ ದಾರಿಯಲ್ಲಿ. ಗಮನಿಸಿ‘ಶಕ್ತಿ ವ್ಯಯಿಸಿ’.
ಹೀಗೆ‘ಕ್ಸೈಲಮ್’ಗೆ
ಸರಬರಾಜಾದ ಪೋಷಕಾಂಶ ಮುಂದೆ ಎಲ್ಲಾ ಅಂಗಾಂಗಳಿಗೆ ಸಾಗುತ್ತದೆ. ಕೆಲವೊಮ್ಮೆ ‘ಫ್ಲೊಯೆಮ್’
ಎನ್ನುವ ಮತ್ತೊಂದು ನಾಳವೂ ಇದಕ್ಕೆ ಕೊಂಡಿಯಾಗುತ್ತದೆ. ಫ್ಲೊಯೆಮ್’ನ
ಬಹು ಮುಖ್ಯ ಕೆಲಸ ಎಲೆಗಳಲ್ಲಿ ತಯಾರಾದಂತಹ ಶರ್ಕರವನ್ನು ಬೇರೆ ಅಂಗಗಳಿಗೆ ತಲುಪಿಸುವುದು. ಬೆಳವಣಿಗೆ
ಹಂತ ಆಧರಿಸಿ ಎಲೆಗಳಿಗೋ, ಹೂವು ಕಾಯಿಗೋ ಎಂದು ಪೋಷಕಾಂಶಗಳ ಹಂಚಿಕೆಯಾಗುತ್ತದೆ. ಗಮನಿಸಿ, ಗುರುತ್ವಾಕಷಣೆಗೆ
ವಿರುದ್ಧವಾಗಿ ಈ ಸಾಗಣೆಯಾಗಬೇಕಾದರೆ ಇದೂ ಕೂಡಾ ಖರ್ಚಿನ ಕೆಲಸವೇ. ನೀರು ಎಲೆಗಳ ಮೂಲಕ ಭಾಷ್ಪೀಕರಣವಾಗಬೇಕು,
ಮತ್ತೆ ಬೇರಿನಲ್ಲಿ ನೀರಿನ ಜಗೆತ ಉಂಟಾಗಬೇಕು, ನೀರಿನ ಮೂಲಕ ಪೋಷಕಾಂಶ ಸಾಗಬೇಕು ಈ ಚಕ್ರ ಎಂದೂ ಮುಗಿಯದ್ದು.
ಸೂಕ್ಷ್ಮಾಣು ಜೀವಿಗಳು ಮತ್ತು ಪೋಷಕಾಂಶ
ಸರಬರಾಜು
ಪೋಷಕಾಂಶಗಳನ್ನು ಹೊಂದಲು ಅನುಕೂಲವಾಗುವಂತೆ
ವಿಕಸನವಾದ ಸಸ್ಯ ಲೋಕದ ಮತ್ತೊಂದು ವಿಶೇಷ ಸಹಬಾಳ್ವೆ. ಅವರೆ ಕುಟುಂಬದ ಸಸ್ಯಗಳ ಬೇರಲ್ಲೇ ಜೀವಿಸುವ
ರೈಝೋಬಿಯಮ್ ಎಂಬ ಸೂಕ್ಷ್ಮಾಣು ಜೀವಿ ವಾತಾವರಣದಲ್ಲಿರುವ
ಸಾರಜನಕವನ್ನು NH4+ Ion ಆಗಿ ಪರಿವರ್ತನೆಗೊಳಿಸಿ ಸಸ್ಯಗಳಿಗೆ ಸುಲಭ ಲಭ್ಯವಾಗಿಸುತ್ತವೆ.
ಸಸ್ಯಗಳ ಬೇರಲ್ಲೇ ಬೆಳೆಯುವ ಮೈಕೋರೈಝಾ ಎಂಬ ಉಪಕಾರಿ ಶಿಲಿಂಧ್ರ ಬೇರಿನ ವ್ಯೂಹವನ್ನು ಬಲಗೊಳಿಸಿ ಹೆಚ್ಚಿನ
ಪೋಷಕಾಂಶ ಹೀರುವಲ್ಲಿ ಸಹಾಯ ಮಾಡುತ್ತದೆ. ಸಸ್ಯಗಳ ಬೇರುಗಳ ಸುತ್ತಲಿನ ಮಣ್ಣಲ್ಲಿ ವಾಸಿಸುವ ಪೋಸ್ಫೇಟ್
ಸೊಲ್ಯುಬಲೈಜಿಂಗ್ ಬ್ಯಾಕ್ಟೀರಿಯಾ (PSB) ಖನಿಜ ರೂಪದ ಫಾಸ್ಫರಸ್ ಅನ್ನು ಮಣ್ಣಿನ ದ್ರವ್ಯರಾಶಿಯಲ್ಲಿ
ಕರಗಿಸುವಲ್ಲಿ ಉಪಯುಕ್ತವಾಗಿವೆ.
ರಾಸಾಯನಿಕ V/S ಜೈವಿಕ
ಇಲ್ಲಿಯ ವರೆಗೆ ನೀವು ಗಮನಿಸಿರಬಹುದು,
ಸಸ್ಯಗಳು ಪೋಷಕಾಂಶಗಳನ್ನು ಹೀರುವ ಪ್ರಕ್ರಿಯೆಯಲ್ಲಿ ಜೈವಿಕ ರಾಸಾಯನಿಕವೆಂದು ಭೇಧ ಭಾವ ಮಾಡುವುದಿಲ್ಲ.
ಎಲ್ಲವೂ ವಾತಾವರಣದಿಂದ ಅಥವಾ ಮಣ್ಣಿನಿಂದ ರಾಸಾಯನಿಕ ಅಣುಗಳಾಗೇ ಸಸ್ಯದ ದೇಹ ಸೇರುತ್ತವೆ. ಸಾವಯವ ರೂಪದಲ್ಲಿ
ಬೇಕಾದ NPK ಅಂಶಗಳು ತೀರಾ ಕಡಿಮೆ ಪ್ರಮಾಣದಲ್ಲಿರುತ್ತವೆ. ರಸಗೊಬ್ಬರದಲ್ಲಿ ಗಣನೀಯ ಪ್ರಮಾಣದಲ್ಲಿ
ಸಾಂದ್ರವಾಗಿರುತ್ತದೆ, ಹಾಗಾಗಿ ವಾಣಿಜ್ಯ ಕೃಷಿಯಲ್ಲಿ ಇವು ಮಹತ್ವದ ಸ್ಥಾನ ಪಡೆದಿವೆ. ಆದರೆ ಮಣ್ಣಿನ
ಸ್ವಾಸ್ಥ್ಯಕ್ಕೆ ಜೈವಿಕ ಅಥವಾ ಸಾವಯವ ಗೊಬ್ಬರಗಳ ಪ್ರಯೋಗ ಬೇಕೇ ಬೇಕು. ಬರೀ ರಾಸಾಯನಿಕಗಳ ಪ್ರಯೋಗ
ಮಣ್ಣಿನ ಸೂಕ್ಷ್ಮ ವಾತಾವರಣವನ್ನು ಕೆಡಿಸಬಹುದು. ಅದೇ ರೀತಿ ಬರೀ ಸಾವಯವದ ಪ್ರಯೋಗ ಪೋಷಕಾಂಶಗಳ ಕೊರತೆಯನ್ನು
ಉಂಟುಮಾಡಬಹುದು. ವಾಣಿಜ್ಯಿಕ ಕೃಷಿಯಲ್ಲಿ ರಾಸಾಯನಿಕ-ಜೈವಿಕ ಎರಡೂ ಕೂಡಿಕೊಂಡ ಸಮಗ್ರ ಪದ್ಧತಿ ಒಳ್ಳೆಯದು.
ಇತ್ತೀಚೆಗೆ ಮಾರುಕಟ್ಟೆ ಹೊಸ
ಪ್ರವೇಶ ನ್ಯಾನೋ ಗೊಬ್ಬರಗಳದ್ದು. ಬಿಲಿಯನ್ನಿನ (ನೂರು ಕೋಟಿಯ) ಒಂದು ಭಾಗಕ್ಕೆ ನ್ಯಾನೋ ಎಂದು ಕರೆಯಲಾಗುತ್ತದೆ.
ನ್ಯಾನೋ ಕಣಗಳ ಮಟ್ಟದಲ್ಲಿ ಪ್ರಯೋಗ ನಡೆಸುವ ವಿಜ್ಞಾನದ ಶಾಖೆ ನ್ಯಾನೋ ಟೆಕ್ನಾಲಜಿ. ನ್ಯಾನೋ ತಂತ್ರಜ್ಞಾನ
ಬಳಸಿ ತಯಾರಿಸುವ ಗೊಬ್ಬರಗಳನ್ನು ನ್ಯಾನೋ ಗೊಬ್ಬರಗಳೆಂದು ಕರೆಯಲಾಗುತ್ತದೆ. ರಸಗೊಬ್ಬರ ಕಣಗಳ ನ್ಯಾನೋ
ಗಾತ್ರವೇ ಈ ಗೊಬ್ಬರಗಳ ವಿಶೇಷತೆ. ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದು, ಪರಿಸರದ ಪರಿಣಾಮಗಳನ್ನು
ಕಡಿಮೆ ಮಾಡುವುದು ಮತ್ತು ರಸಗೊಬ್ಬರಗಳ ಒಟ್ಟಾರೆ ಪರಿಣಾಮಕಾರಿತ್ವವನ್ನು ಸುಧಾರಿಸುವುದು ನ್ಯಾನೋ ಗೊಬ್ಬರಗಳ
ಉದ್ದೇಶ.
ಗೊಬ್ಬರ ಪ್ರಯೋಗ ಮಣ್ಣಿಗೋ, ನೀರಾವರಿಯಲ್ಲೋ,
ಸಿಂಪಡಣೆಯೋ
ಮುಂಚೆಲ್ಲಾ ಸಸ್ಯದ ಸುತ್ತ ಪಾತಿ
ಮಾಡಿ ಗೊಬ್ಬರ ಸೋಕುವುದು ಸಾಮಾನ್ಯ ರೂಢಿಯಾಗಿತ್ತು. ಈಗ ನೀರಾವರಿ ಮಾಡುವಾಗ ಗೊಬ್ಬರ ಕೊಡುವ ‘ಫರ್ಟಿಗೇಶನ್’
ಪದ್ಧತಿ, ಸೂಕ್ಷ್ಮ ಪೋಷಕಾಂಶಗಳನ್ನು ಸಿಂಪಡಣೆ ಮಾಡುವ ‘ಫೋಲಿಯಾರ್ ಸ್ಪ್ರೇ’ ಪದ್ಧತಿ ಪ್ರಚಲಿತವಾಗುತ್ತಿದೆ.
ಈ ಪದ್ಧತಿಗಳಲ್ಲಿ ಆಯ್ಕೆ ವೈಯಕ್ತಿಕ. ಪ್ರತಿ ಪದ್ಧತಿಗೂ ಸಾಧಕ ಭಾದಕಗಳಿವೆ. ಬೆಳೆ, ಅವುಗಳ ಪೋಷಕಾಂಶಗಳ
ಬೇಡಿಕೆ, ಬೆಳವಣಿಗೆ ಹಂತ, ಮತ್ತು ಸುತ್ತಲ ವಾತಾವರಣ ಆಧರಿಸಿ ಸಸ್ಯಗಳು ಈ ಮೂರೂ ಪದ್ಧತಿಗಳಿಗೂ ಬೇರೆಯಾಗಿ
ಸ್ಪಂದಿಸುತ್ತವೆ.
·
ಬೇರುಗಳನ್ನು
ಕೇಂದ್ರಿಕರಿಸಿ ಮಣ್ಣಿಗೆ ಗೊಬ್ಬರ ಹಾಕುವ ಪದ್ಧತಿಗೆ ಸಸ್ಯಗಳು ಚೆನ್ನಾಗಿ ಸ್ಪಂದಿಸುತ್ತವೆ. ಪೋಷಕಾಂಶಗಳು
ಸಸ್ಯಗಳಿಗೆ ನೇರವಾಗಿ, ನಿಧಾನವಾಗಿ ಲಭ್ಯ. ಮಣ್ಣಿನ ಫಲವತ್ತತೆ ಉತ್ತಮವಾಗಿದ್ದಲ್ಲಿ ಈ ಪದ್ಧತಿ ಹೆಚ್ಚು
ಫಲಕಾರಿ. ಆದರೆ ಹಾಕಿದ ಗೊಬ್ಬರ ಕೊಚ್ಚಿ ಹೋಗಿ ವ್ಯರ್ಥವಾಗುವ ಪ್ರಮಾಣವೂ ಜಾಸ್ತಿ. ಆಳ
ಬೇರಿನ ಬಹುವಾರ್ಷಿಕ ಬೆಳೆಗಳಿಗೆ ಈ ಪದ್ಧತಿ ಹೆಚ್ಚು
ಸೂಕ್ತ.
·
ಫರ್ಟಿಗೇಶನ್
ಪದ್ಧತಿಯಲ್ಲಿ ಪೋಷಕಾಂಶ ದ್ರವ ರೂಪದಲ್ಲೇ ಬೇರುಗಳಿಗೆ ಲಭ್ಯವಾಗುವುದರಿಂದ ಸಸ್ಯಗಳು ಶೀಘ್ರವಾಗಿ ಸ್ಪಂದಿಸುತ್ತವೆ.
ಬೆಳವಣಿಗೆ ಹಂತ ಆದರಿಸಿ ಸ್ವಲ್ಪ ಸ್ವಲ್ಪವಾಗಿಯೇ ಅಳೆದು ತೂಗಿ ಗೊಬ್ಬರ ಕೊಡಬಹುದು. ಈ ಸುಧಾರಿತ ಪದ್ಧತಿಯಲ್ಲಿ
ಪೋಷಕಾಂಶಗಳ ನಷ್ಟ ಕಮ್ಮಿ. ಆದರೆ ಇದಕ್ಕೆಂದೇ ಒಂದು ನೀರಾವರಿ-ಫಿಲ್ಟರ್ ಘಟಕ ಬೇಕು. ತರಕಾರಿಗಳಲ್ಲಿ
ಹೂವು, ಕಾಯಿ, ಹಣ್ಣಿನ ಬೆಳವಣಿಗೆಗೆ ಬೇರೆ ಬೇರೆ ಪೋಷಕಾಂಶ ಬೇಕಾಗುವ ಸಂದಭದಲ್ಲಿ ಈ ಪದ್ಧತಿ ಅನುಸರಿಸಬಹುದು.
·
ಇನ್ನು
ಸಿಂಪಡಣೆ ಪದ್ಧತಿಯಲ್ಲಿ ಪೋಷಕಾಂಶ ಎಲೆಗಳ ಮೇಲ್ಮೈ ಸ್ಟೊಮಾಟಾಗಳ ಮೂಲಕ ನೇರವಾಗಿ ಹೀರಲ್ಪಡುವುದರಿಂದ
ತಕ್ಷಣವೇ ಸಸ್ಯಗಳ ದೇಹ ಸೇರಿ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸಬಲ್ಲದು.
ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ತ್ವರಿತವಾಗಿ ಪೋಷಕಾಂಶಗಳ ಕೊರತೆ ಕಂಡಲ್ಲಿ ಈ ಪದ್ಧತಿ ಸೂಕ್ತ. ಲಘು
ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವುದರಿಂದ ಅವುಗಳನ್ನು ಹೊರತುಪಡಿಸಿ ಸೂಕ್ಷ್ಮ ಪೋಷಕಾಂಶಗಳ
ಕೊರತೆಯ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಈ ವಿಧಾನ ಒಳ್ಳೆಯದು. ಪ್ರಮಾಣ ತುಸು ಹೆಚ್ಚಾದರೂ ಎಲೆಗಳು
ಸುಡುವ ಸಂದರ್ಭ ಎದುರಾಗಬಹುದು.
ಪೋಷಕಾಂಶಗಳು ಅಧಿಕವಾದರೇನು! ಕೊರತೆಯಾದರೇನು?
ಪೋಷಕಾಂಶಗಳ ಹೀರುವಿಕೆ ಮತ್ತು
ಸರಬರಾಜು ಪರಸ್ಪರ ಅವಲಂಬಿತ. ಒಂದರ ಕೊರತೆ ಇನ್ನೊಂದರ ಕೊರತೆಗೆ ಕಾರಣವಾಗಬಹುದು. ಅದೇ ರೀತಿ ಒಂದು
ಹೆಚ್ಚಾದರೆ ಇನ್ನೊಂದರ ಸರಬರಾಜಿಗೆ ತೊಂದರೆ ಆಗಬಹುದು.
ಸಾರಜನಕ, ರಂಜಕ, ಪೊಟ್ಯಾಶ್ ಗಳು
ಆರಾಮಾಗಿ ಸಸ್ಯಗಳ ಎಲ್ಲ ಭಾಗಗಳಿಗೆ ಚಲಿಸಬಲ್ಲವು. ಹಾಗಾಗಿ ಇವುಗಳ ಕೊರೆತ ತೀವ್ರತೆಯ ಲಕ್ಷಣ ಸಾಮಾನ್ಯವಾಗಿ
ಇಡೀ ಸಸ್ಯದಲ್ಲಿ ಗೋಚರವಾಗುತ್ತದೆ. ಕಾಲ್ಶಿಯಮ್, ಗಂಧಕ, ಬೋರಾನ್, ಕಬ್ಬಿಣ, ಮತ್ತು ತಾಮ್ರ ಚಲಿಸಲಾರವು,
ಹಿಂದೊಮ್ಮೆ ಹೀರಿಕೊಂಡ ಅಂಗಾಂಶದಲ್ಲಿ ಅವು ನಿಶ್ಚಲವಾಗಿ ನಿಂತು ಬಿಡುತ್ತವೆ. ಹಾಗಾಗಿ ಇವುಗಳ ಕೊರತೆ
ತೀವ್ರತೆ ಹೊಸ ಚಿಗುರುಗಳನ್ನು ಹೆಚ್ಚು ಭಾದಿಸುತ್ತದೆ.
ಸಾಮಾನ್ಯವಾಗಿ ಪೋಷಕಾಂಶಗಳ ಕೊರೆತೆಯಿಂದ
ಬೆಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಎಲೆಗಳು ಹಳದಿಯಾಗುವುದು, ಸುಟ್ಟಂತಹ ಲಕ್ಷಣ, ಅಸಹಜ ರೂಪ,
ಹೂವು ಹಣ್ಣುಗಳ ಕೆಡುವಿಕೆ ಇವೆಲ್ಲ ಲಕ್ಷಣಗಳು ಗೋಚರವಾಗಬಹುದು.
ಕೋಷ್ಟಕ ಒಂದನ್ನು ಗಮನಿಸಿ, ಸಸ್ಯಗಳಲ್ಲಿ
ಪೋಷಕಾಂಶದ ಪ್ರಮಾಣ ನೋಡಿ. ಸಸ್ಯಗಳ ದೇಹದ 5% ಭಾಗ ಮಾತ್ರ ಲಘು-ಸೂಕ್ಷ್ಮ ಪೋಷಕಾಂಶಗಳಿಂದ ಆದಂತದ್ದು.
ಅಂದರೆ ಅವುಗಳ ಪ್ರಮಾಣ ಮೂಲಧಾತುಗಳಿಗೆ ಹೋಲಿಸಿದರೆ ತೀರಾ ಕಡಿಮೆ. ಅತಿಯಾದರೆ ಅಮೃತವೂ ವಿಷವಾದಂತೆ
ಅಗತ್ಯಕ್ಕಿಂತ ಹೆಚ್ಚಿನ ಪೋಷಕಾಂಶ ಸಸ್ಯಗಳ ಬೆಳವಣಿಗೆಗೆ ಮಾರಕವಾಗಬಲ್ಲದು. ರಸಗೊಬ್ಬರ ಅಗತ್ಯಕ್ಕಿಂತ
ಹೆಚ್ಚಾದರೆ ಮಣ್ಣಿನ ಸೂಕ್ಷ್ಮ ವಾತಾವರಣಕ್ಕೆ ಒಳ್ಳೆಯದಲ್ಲ. ಜೊತೆಗೆ ಮಣ್ಣಿನ Ion ಅಸಮತೋಲನ ಬೆಳೆಗಳ
ಬೆಳವಣಿಗೆಗೆ ತೊಂದರೆ ಒಡ್ಡುತ್ತದೆ. ಕೃಷಿ ವಿಶ್ವವಿದ್ಯಾಲಯಗಳು ಸಾಕಷ್ಟು ಪ್ರಯೋಗ ನಡೆಸಿ ನೀಡಿದಂತ
ಶಿಫಾರಸ್ಸನ್ನು ಪಾಲಿಸುವುದು ಒಳ್ಳೆಯದು.
ಪೋಷಕಾಂಶಗಳ ಕೊರತೆ, ತೀವ್ರತೆಯ
ಲಕ್ಷಣಗಳಿಗಾಗಿ ಕೋಷ್ಟಕ 3 ನೋಡಿ.
ವಿಶೇಷ ಟಿಪ್ಪಣಿ
ಮಣ್ಣು-ಸಸ್ಯ ವ್ಯವಸ್ಥೆಯ ಬಗ್ಗೆ
ಇಷ್ಟು ವಿಷಯ ತಿಳಿದ ಮೇಲೆ ಕೆಲ ಪ್ರಾಯೋಗಿಕ ಅಂಶಗಳನ್ನೂ ಪಟ್ಟಿ ಮಾಡಬಹುದು.
·
ಎಲ್ಲಾ
ಪೋಷಕಾಂಶಗಳು ದ್ರವ ರೂಪದಲ್ಲೇ ಸರಬರಾಜಾಗುವ ಕಾರಣ ರಸಗೊಬ್ಬರವೇ ಇರಲಿ ಸಾವಯವ ಗೊಬ್ಬರವೇ ಇರಲಿ ಹಾಕುವ
ಮೊದಲು ಮಣ್ಣಿನಲ್ಲಿ ನೀರು/ತೇವಾಂಶ ಇರುವುದು ಕಡ್ಡಾಯ.
·
ಗೊಬ್ಬರ
ಹಾಕುವ ಮೊದಲು ಮಣ್ಣಿನ ಪರೀಕ್ಷೆ ಕಡ್ಡಾಯ. ರಸಸಾರ, ವಿವಿಧ ಪೋಷಕಾಂಶಗಳ ಲಭ್ಯತೆ, ಕೊರತೆಯ ಬಗ್ಗೆ ಜ್ಞಾನ
ಅವಶ್ಯಕ.
·
ಪ್ರತಿ
ವರ್ಷವೂ ತಪ್ಪದೇ ನಿಮ್ಮ ಮಣ್ಣಿನ ರಸಸಾರಕ್ಕೆ ಅನುಸಾರವಾಗಿ ಕೃಷಿ ಸುಣ್ಣದ ಪ್ರಯೋಗ ಮರೆಯದಿರಿ. ಮಣ್ಣಿನ
ರಸಸಾರ ಮತ್ತು Ion ಸಮತೋಲನದಿಲ್ಲವೆಂದರೆ ಗೊಬ್ಬರ ಪ್ರಯೋಗ ನಿಷ್ಪ್ರಯೋಜಕ. ಅವು ಸಸ್ಯಗಳಿಗೆ ಲಭ್ಯವೂ
ಆಗುವುದಿಲ್ಲ; ಲಭ್ಯವಾದರೂ ಸಸ್ಯಗಳು ಅವುಗಳನ್ನು ಸ್ವೀಕರಿಸಲಾರವು. ಆಮ್ಲೀಯ ಮಣ್ಣಿಗೆ ಡೋಲೋಮೈಟ್,
ಕ್ಷಾರೀಯ ಮಣ್ಣಿಗೆ ಜಿಪ್ಸಮ್ ಶಿಫಾರಸ್ಸು ಮಾಡಲಾಗುತ್ತದೆ.
·
ರಸಗೊಬ್ಬರದಲ್ಲಿನ
ರಾಸಾಯನಿಕ ಶುದ್ಧ ರೂಪದಲ್ಲಿರದೆ ಸಂಯುಕ್ತ ರೂಪದಲ್ಲಿರುವುದನ್ನು ಗಮನಿಸಿ. ಗೊಬ್ಬರ ಹಾಕುವ ಮೊದಲು
ಪ್ರತಿ ಬೆಳೆಯ ಶಿಫಾರಸ್ಸನ್ನು ಗಮನಿಸಬೇಕು. ಬೆಳೆಯೊಂದಕ್ಕೆ ಒಂದು ವರ್ಷಕ್ಕೆ 100:50:150 NPK ಶಿಫಾರಸ್ಸು
ಮಾಡಿದ್ದಾರೆ ಎಂದರೆ ಪ್ರತಿ ವರ್ಷ ಗಿಡದ ಬುಡಕ್ಕೆ 100 ಗ್ರಾಂ ಸಾರಜನಕ, 50 ಗ್ರಾಮ್ ರಂಜಕ, 150 ಗ್ರಾಮ್
ಪೊಟ್ಯಾಶ್ ಬೇಕೆಂದು ಅರ್ಥ. ಇಷ್ಟು ಬೇಡಿಕೆಯನ್ನು ತೃಪ್ತಿಪಡಿಸಲು ಎಷ್ಟು ಗೊಬ್ಬರ ಸಾಕು ಎಂಬುದನ್ನು
ಮೊದಲು ಲೆಕ್ಕಾಚಾರ ಮಾಡಬೇಕು.
·
ಉದಾಹರಣೆ
ಯೂರಿಯಾದಲ್ಲಿ ಸಾರಜನಕ ಮಾತ್ರ ಲಭ್ಯ. 100 ಗ್ರಾಮ್ ಯೂರಿಯಾದಲ್ಲಿ 46 ಗ್ರಾಮ್ ಸಾರಜನಕ ಇರುತ್ತದೆ
(ಬೇರೆ ಬೇರೆ ಗೊಬ್ಬರದಲ್ಲಿ ಸಿಕ್ಕುವ ರಾಸಾಯನಿಕದ ಪ್ರಮಾಣಕ್ಕಾಗಿ ಕೋಷ್ಟಕ 2 ನೋಡಿ). ಲೆಕ್ಕಾಚಾರವನ್ನು
ಮಾಡಿದರೆ 100 ಗ್ರಾಮ್ ಸಾರಜನಕಕ್ಕಾಗಿ ಸುಮಾರು 217 ಗ್ರಾಮ್ ಯೂರಿಯಾವನ್ನು ಹಾಕಬೇಕಾಗುತ್ತದೆ. ಹೆಚ್ಚು
ಕಮ್ಮಿ ಕಾಲು ಕೆಜಿ ಯೂರಿಯಾ ಎಂದುಕೊಳ್ಳಿ. ಅದೇ DAP ಆಯ್ಕೆ ಮಾಡಿಕೊಂಡರೆ 100 ಗ್ರಾಮ್ DAP ಹಾಕಿದಾಗ
46 ಗ್ರಾಮ್ ರಂಜಕ 20ಗ್ರಾಮ್ ಸಾರಜನಕ ಮಣ್ಣು ಸೇರುತ್ತದೆ. ಶಿಫಾರಸ್ಸಿನಂತೆ 100 ಗ್ರಾಮ್ DAPಯಿಂದ
ರಂಜಕದ ಬೇಡಿಕೆ ತೃಪ್ತಿಯಾಯಿತು. ಆದರೆ ಸಾರಜನಕ ಸುಮಾರು 80 ಗ್ರಾಮ್ ನಷ್ಟು ಕೊರತೆಯಾಯಿತು. ಇದನ್ನು
ಸರಿದೂಗಿಸಲು ಮತ್ತೆ ಲೆಕ್ಕಾಚಾರ ಮಾಡಿ ಯೂರಿಯಾ ಅಥವಾ ಇನ್ನಾವುದೇ ಸಂಯುಕ್ತ ಕೊಡಬೇಕಾಗುತ್ತದೆ.
·
ಒಂದು
ವರ್ಷಕ್ಕೆ ಶಿಫಾರಸ್ಸಾದ ಪ್ರಮಾಣವನ್ನು ಒಂದೇ ಬಾರಿ ಕೊಡುವುದು ಬೇಡ. ಇದೇ ಪ್ರಮಾಣವನ್ನು ಎರಡು ಮೂರು
ಭಾಗವಾಗಿ ವಿಭಜಿಸಿ ಒಂದೆರಡು ತಿಂಗಳ ಅಂತರದಲ್ಲಿ ಕೊಟ್ಟರೆ ಒಳ್ಳೆಯದು. ಇದರಿಂದ ಗೊಬ್ಬರ ಕೊಚ್ಚಿ ಹೋಗುವ
ನಷ್ಟವೂ ತಪ್ಪುತ್ತದೆ ಬೆಳೆಗಳಿಗೂ ಅವು ಹೆಚ್ಚು ಕಾಲ ಲಭ್ಯವಾಗುತ್ತದೆ.
·
ವಾತಾವರಣ
ಅನಾನುಕೂಲ ಇದ್ದಾಗ, ಅತೀವ ಮಳೆ ಚಳಿಯಲ್ಲಿ ಗೊಬ್ಬರ ಪ್ರಯೋಗ ಸರಿಯಲ್ಲ. ಬೆಳೆಗಳು ಹಾಗೋ ಹೀಗೋ ತಮ್ಮ
ಜೀವನ ನಡೆಸುದರೆ ಸಾಕು ಎನ್ನುವ ಪರಿಸ್ಥಿತಿಯಲ್ಲಿದಾಗ ಗೊಬ್ಬರ ಪ್ರಯೋಗ ಅರ್ಥಹೀನ.
·
ಮುಂಜಾನೆ
ಅಥವಾ ಉರಿ ಮಧ್ಯಾಹ್ನದ ನಂತರದ ಸಂಜೆ ಸಮಯವನ್ನು ರಸಗೊಬ್ಬರಗಳ ಪ್ರಯೋಗಕ್ಕೆ ಶಿಫಾರಸ್ಸು ಮಾಡಲಾಗುತ್ತದೆ.
ಈ ಸಮಯದಲ್ಲಿ ಸೂರ್ಯನ ತಾಪಮಾನ ಕಡಿಮೆ, ಭಾಷ್ಪೀಕರಣ ತೇವಾಂಶದ ನಷ್ಟವೂ ಕಡಿಮೆ, ಗೊಬ್ಬರದ ಅಡ್ಡ ಪರಿಣಾಮವೂ
ಕಡಿಮೆ. ರಾತ್ರಿ ಸಸ್ಯಗಳು ಸಾಮಾನ್ಯವಾಗಿ ಉಸಿರಾಟವನ್ನಷ್ಟೇ ನಡೆಸುತ್ತಾ ವಿಶ್ರಾಂತಿ ಪಡೆಯುತ್ತವೆ.
ಹಾಗಾಗಿ ರಾತ್ರಿಯೂ ಸಲ್ಲ.
Comments
Post a Comment