ಸಸ್ಯ ತಳಿ ವಿಜ್ಞಾನ
ಮಾನವನ ವಿಕಸನದ ಹಾದಿಯಲ್ಲಿ ವಿಶೇಷವಾದ ಮೈಲಿಗಲ್ಲು ಕೃಷಿ ಚಟುವಟಿಕೆಯ ಆರಂಭ. ಒಂದಾನೊಂದು ಕಾಲದಲ್ಲಿ ಎರಡೇ ಎರಡು ಜೊಳ್ಳು ಕಾಳಿನ ಗುಚ್ಚ ಹೊಂದಿದ್ದ ಭತ್ತವೆಂಬ ‘ಹುಲ್ಲು’ಸಸ್ಯ ಇಂದು ತೆನೆತೆನೆ ತೂಗುವ, ವಿಶ್ವಕ್ಕೇ ಆಹಾರ ಒದಗಿಸುವ ಬೆಳೆಯಾಗಿ ಪರಿವರ್ತನೆಯಾದ ಪವಾಡದ ಹಿಂದೆ ಕೃಷಿಯ ಕೊಡುಗೆಯಿದೆ. ಕಾಡಿನ ಪ್ರಾಣಿ-ಸಸ್ಯಗಳು ಜಾನುವಾರು-ಆಹಾರ ಬೆಳೆಯಾಗಿ ಇಂದು ಭೋಗಿಸಲು ಯೋಗ್ಯವಾಗಿದ್ದು ಶತಶತಮಾನಗಳಿಂದ ಮಾನವ ನಡೆಸಿದ, ಹೆಚ್ಚು ಇಳುವರಿ ನೀಡುವ ತಳಿಯೊಂದರ ನಿರಂತರ ಆಯ್ಕೆ, ಸಂಶೋಧನೆಯೇ ಕಾರಣ. ಇಂದೂ ಕೂಡಾ ಬಹುಪಾಲು ಕೃಷಿ ವಿಜ್ಞಾನಿಗಳು ತಮ್ಮ ಜೀವನ ಸವೆಸುವುದು ಇದೇ ಮಾದರಿಯ, ಇನ್ನಷ್ಟು ವೈಜ್ಞಾನಿಕವಾದ ಉನ್ನತ ತಳಿಗಳ ಸಂಶೋಧನೆಗೆ. ಜಾಗತಿಕ ಆಹಾರ ವ್ಯವಸ್ಥೆಯ ಸಮಸ್ಯೆಗಳನ್ನು ಎದುರಿಸುವಲ್ಲಿ ಸುಧಾರಿತ ತಳಿಗಳ ಆವಿಷ್ಕಾರ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳುವ ಸಮಯವಿದು. ಇದೇ ಹಿನ್ನೆಲೆಯಲ್ಲಿ ತಳಿ ವಿಜ್ಞಾನದ ಪರಿಚಯ, ತಳಿ ಎಂದರೇನು, ತಳಿ ಅಭಿವೃದ್ಧಿ ಪಡಿಸುವ ವಿಧಾನ, ತಗಲುವ ಪರಿಶ್ರಮ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವುದು ಈ ಲೇಖನದ ಉದ್ದೇಶ.
ತಳಿ ವಿಜ್ಞಾನ
ಜಾನುವಾರುಗಳಲ್ಲಿ ಬಳಕೆಯಲ್ಲಿರುವ 'ಬ್ರೀಡ್' ಅಥವಾ 'ತಳಿ' ಎಂಬ ಶಬ್ಧ ಎಲ್ಲರಿಗೂ ಪರಿಚಿತ. ಉದಾಹರಣೆ ಹಸುಗಳಲ್ಲಿ ಗಿರ್, ಸಿಂಧಿ, ಇತ್ಯಾದಿಯಾಗಿ ಹಲವಾರು ತಳಿಗಳನ್ನು ಹೆಸರಿಸಬಹುದು. ಕೆಲ ತಳಿಗಳು ದೇಶೀಯ (ಉದಾ:ಮಲೆನಾಡು ಗಿಡ್ಡ), ಕೆಲವು ವಿದೇಶದಿಂದ ಪರಿಚಿತ (ಉದಾ:ಜರ್ಸಿ). ಒಂದೇ ತಳಿಯ ಹಸುಗಳನ್ನು ಪರಿಗಣಿಸಿದರೆ ಅವುಗಳ ನಡುವೆ ಒಂದನ್ನೊಂದು ಹೋಲುವ ರೂಪ, ಒಂದೇ ಸ್ವಭಾವ, ವಿಶೇಷ ಗುಣಲಕ್ಷಣಗಳನ್ನು ಪಟ್ಟಿಮಾಡಬಹುದು. ಒಂದೇ ತಳಿಯ ಹಸುಗಳ ನಡುವಿನ ಸಂತಾನೋತ್ಪತ್ತಿ ಅದೇ ತಳಿಯ ಕರುವಿಗೆ ಜನ್ಮ ಕೊಟ್ಟರೆ ಎರಡು ತಳಿಗಳ ನಡುವಿನ ಸಂತಾನೋತ್ಪತ್ತಿ 'ಕ್ರಾಸ್ ಬ್ರೀಡ್' ಅಥವಾ 'ಮಿಶ್ರ ತಳಿ'ಗೆ ಜನ್ಮ ನೀಡುತ್ತದೆ. ಈ ಮಿಶ್ರ ತಳಿಗಳ ಉಗಮ ನೈಸರ್ಗಿಕವೂ ಇರಬಹುದು, ಕೃತಕವೂ ಇರಬಹುದು. ಹೆಚ್ಚು ಹಾಲು ಉತ್ಪಾದನೆ ಸಲುವಾಗೋ, ಇತರೇ ಕಾರಣಕ್ಕೋ ಕೃತಕವಾಗಿ ತಳಿಗಳ ಮಿಶ್ರಣ ನಡೆಸಿ ಹೊಸ ತಳಿ ಪಡೆಯುವ ವಿಧಾನಕ್ಕೆ 'ಬ್ರೀಡಿಂಗ್' ಅಥವಾ 'ತಳಿ ಅಭಿವೃದ್ಧಿ' ಎಂದು ಕರೆಯಲಾಗುತ್ತದೆ.
ಇದೇ ಮಾದರಿಯ ಬ್ರೀಡಿಂಗ್ ಅಥವಾ ತಳಿ ಅಭಿವೃದ್ಧಿಯನ್ನು ತೋಟಗಾರಿಕಾ, ಕೃಷಿ ಬೆಳೆಗಳಲ್ಲಿಯೂ ಮಾಡಲಾಗುತ್ತದೆ. ಪ್ರಕ್ರಿಯೆ ಬೇರೆ ಅಷ್ಟೇ.
ಸಸ್ಯಗಳಲ್ಲಿ ತಳಿ
ಶಾಸ್ತ್ರದ ಹಿನ್ನೆಲೆ, ಇತಿಹಾಸ
ತಮ್ಮ ಸಂತತಿಯ ಉಳಿಯುವಿಕೆಗಾಗಿ ನಿಸರ್ಗದೊಂದಿಗೆ ಜೀವಿಗಳು ನಡೆಸಿದ ಸಂಘರ್ಷ, ತಮ್ಮದೇ ಜಾತಿಯ ಜೀವಿಗಳ ನಡುವೆ ನಡೆಸಿದ ಸಂತಾನೋತ್ಪತ್ತಿ ನೈಸರ್ಗಿಕವಾಗಿ ತಳಿ ಸಂವರ್ಧನೆಗೆ ಕೊಡುಗೆ ಮಾಡಿದೆ; ಮಾನವನ ಹಸ್ತಕ್ಷೇಪದಿಂದ ನಡೆದ ಕಾಡು ಪ್ರಾಣಿ-ಸಸ್ಯಗಳನ್ನು ಪಳಗಿಸುವಿಕೆ, ತಳಿಗಳ ಮಿಶ್ರಣ ಇವೆಲ್ಲಾ ಕ್ರಿಯೆಗಳು ತಳಿ ವೈವಿಧ್ಯತೆಗೆ ಕಾರಣವಾಗಿದೆ ಎಂದು ಅವಲೋಕಿಸಿದ್ದು ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್.
ಇದಕ್ಕೊಂದು ವೈಜ್ಞಾನಿಕ ಹಿನ್ನೆಲೆ ನೀಡುವ ಮೊದಲ ಮಹತ್ತರ ಪ್ರಯೋಗಗಳನ್ನು ನಡೆಸಿದ್ದು ಜರ್ಮನ್ ವಿಜ್ಞಾನಿ, ತಳಿ ವಿಜ್ಞಾನದ ಪಿತಾಮಹ, ಗ್ರೆಗೋರ್ ಮೆಂಡಲ್. ವೃತ್ತಿಯಲ್ಲಿ ಪಾದ್ರಿಯಾಗಿದ್ದ ಮೆಂಡಲ್ ಗೆ ಗಾರ್ಡನಿಂಗ್ ಮತ್ತು ಜೇನು ಸಾಕಣೆಯಲ್ಲಿ ಅಪಾರ ಆಸಕ್ತಿಯಿತ್ತು. 1856-62ರ ನಡುವೆ ತನ್ನ ಮೊನೆಸ್ಟರಿಯ ಹಿತ್ತಲಿನ ನಾಲ್ಕೆಕರೆ ಜಮೀನಿನಲ್ಲಿ ಮೆಂಡಲ್ 'ಬಟಾಣಿ' ಸಸ್ಯದಲ್ಲಿ ತನ್ನ ಬ್ರೀಡಿಂಗ್ ನ ಪ್ರಯೋಗಗಳನ್ನು ನಡೆಸಿದ್ದ. ಗುಣ ಸ್ವಭಾವಗಳಲ್ಲಿ ವಿರುದ್ಧವಾಗಿದ್ದ (ಉದಾಹರಣೆ ಎತ್ತರ-ಕುಳ್ಳ) ತಂದೆ ತಾಯಿ ಸಸ್ಯಗಳ ಮುಂದಿನ ಪೀಳಿಗೆಯಲ್ಲಿ ಈ ಗುಣಗಳು ಮಿಶ್ರವಾಗುತ್ತವೆ (ಎತ್ತರ, ಕುಳ್ಳ, ಗರಿಷ್ಟ-ಕನಿಷ್ಟಗಳ ಸರಾಸರಿ) ಎಂಬ 'ಹೈಬ್ರಿಡೈಜೇಶನ್' ನ ಮೊದಲ ವಾಕ್ಯಗಳನ್ನು ಬರೆದಿದ್ದು ಮೆಂಡಲ್. ಮುಂದೆ ಈ ಪ್ರಯೋಗಗಳೇ 'ಅನುವಂಶಿಯತೆ' ಅಥವಾ 'ಹೆರೆಡಿಟರಿ'ಯ ಬಗ್ಗೆ ಬೆಳಕು ಚೆಲ್ಲಿದವು.
ಇದೇ ಆಧಾರದ ಮೇಲೆ ಇಂದಿನ ಆಧುನಿಕ ಸಸ್ಯ ತಳಿ ಶಾಸ್ತ್ರ ರೂಪುಗೊಂಡಿದೆ. ಕೇವಲ ವಿಜ್ಞಾನವಾಗಿರದೆ ಬಿಲಿಯಗಟ್ಟಲೇ ಜನಸಂಖ್ಯೆಯ ಹೊಟ್ಟೆಹೊರೆಯುವ ಆಹಾರ ಉತ್ಪಾದನೆ ಹೆಚ್ಚಿಸಲು ಅಗತ್ಯವಾದ ತಂತ್ರಜ್ಞಾನವಾಗಿ ಬೆಳೆಯುತ್ತಿದೆ. ಇತ್ತೀಚೆಗಷ್ಟೆ ಅಗಲಿದ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಶ್ರಮಿಸಿದ್ದೂ ಇದೇ ಕ್ಷೇತ್ರದಲ್ಲಿ.
ತಳಿ ವಿಜ್ಞಾನದ ಜ್ಞಾನ ನಮಗೇಕೆ?!
ಹೊಲದಲ್ಲಿ ಬೆಳೆ ಬೆಳೆಯುವ ಮುನ್ನ ರೈತರು ಆಯಾ ಜಾಗಕ್ಕೆ, ಆಯಾ ಕಾಲಕ್ಕೆ ತಕ್ಕುದಾದ, ಉದ್ದೇಶಿತ ಗುಣಲಕ್ಷಣಗಳುಳ್ಳ ತಳಿ ಆಯ್ಕೆ ನಡೆಸುವುದು ಸಾಮಾನ್ಯ. ಉದಾಹರಣೆ ಅಡಿಕೆ ಬೆಳೆಯುವ ಮುನ್ನ ಮಲೆನಾಡಿಗೋ-ಬಯಲಿಗೋ-ಕರಾವಳಿಗೋ, ಕೆಂಪಡಿಕೆಗೋ-ಚಾಲಿ ಉದ್ದೇಶಕ್ಕೋ, ಲೋಕಲ್ ತಳಿಯೂ (ರೈತರ ಹೊಲದಿಂದಲೇ ಆರಿಸಿದ ಉತ್ತಮ ತಾಯಿ ಸಸಿಯ ಪೀಳಿಗೆಗಳು) - ಸಂವರ್ಧಿತ ತಳಿಯೋ (ಮಂಗಳಾ, ಮೋಹಿತ್ ನಗರ ಮುಂತಾದವು) - ಅಲಂಕಾರಿಕ ಮತ್ತು ಕೊಯ್ಲಿಗೆ ಅನುಕೂಲವಾಗುವ ಕುಬ್ಜ ತಳಿಯೋ ಹೀಗೆ ಆಯ್ಕೆ ನಡೆಸುವುದು ರೂಢಿ. ಈ ತಳಿ ಆಯ್ಕೆಯ ಸಾಮಾನ್ಯ ಜ್ಞಾನ ಇಂದು ಎಲ್ಲ ರೈತರಿಗೂ ಇರುವಂತದ್ದು.
ಮುಂದುವರಿದ ಭಾಗವಾಗಿ ಈ ತಳಿಗಳ ನಿರ್ವಹಣೆ (ನೀರು-ಗೊಬ್ಬರ ಇತ್ಯಾದಿ), ಈ ತಳಿಗಳಿಂದ ಮುಂದಿನ ಪೀಳಿಗೆ ಪಡೆಯುವ ಪ್ರಯತ್ನದಲ್ಲಿ ತಳಿಗಳ ಮೂಲ, ಅಭಿವೃದ್ಧಿ ಪಡೆಸಿದ ವಿಧಾನ ಮುಂತಾದ ಜ್ಞಾನ ಅವಶ್ಯಕವಾಗುತ್ತದೆ. ಉದಾಹರಣೆ ಸ್ಥಳಿಯ ತಳಿಗಳಾದಲ್ಲಿ ನಿರ್ವಹಣೆ ಸುಲಭ, ಸಂಕರಣ ತಳಿಗಳಾದಲ್ಲಿ ಮುಂದಿನ ಪೀಳಿಗೆಯ ಗುಣಲಕ್ಷಣಗಳು ಪ್ರತ್ಯೇಕವಾಗುವುದು (ಕುಬ್ಜ ಸಂಕರಣ ತಳಿಯ ಮುಂದಿನ ಪೀಳಿಗೆಗಳು ಕುಬ್ಜವಾಗಿರದೇ ಬೇರೆ ಸ್ವಭಾವಗಳನ್ನು ತೋರಬಲ್ಲವು), ಕೊಳೆ ರೋಗಕ್ಕೆ ಕೆಲ ತಳಿಗಳು ವಿರೋಧ ಒಡ್ಡುವಿಕೆ ಹೀಗೆ. ಈ ತರಹದ ಮಾಹಿತಿ ರೈತರ ಬೆಳೆ ಬೆಳೆಯುವ ಅಭ್ಯಾಸಗಳಿಗೆ ಹೊಸ ಹೊಳಪು ನೀಡಬಲ್ಲವು. ಆಧುನಿಕ ವೈಜ್ಞಾನಿಕ ಕೃಷಿಯಲ್ಲಿ ಈ ಮಾಹಿತಿ 'ಪ್ಯಾಕೇಜ್ ಆಫ್ ಪ್ರಾಕ್ಟೀಸ್'ನಲ್ಲಿ ಬಂಧವಾಗಿರದೇ ರೈತರ ಹೊಲದಲ್ಲಿ ಪ್ರಚಲಿತವಾಗುವುದು ಅವಶ್ಯಕ.
ಸಾಮಾನ್ಯ ಗ್ರಾಹಕರ ದೃಷ್ಟಿಯಿಂದಲೂ ತಳಿ ಶಾಸ್ತ್ರದ ಜ್ಞಾನ ಮುಖ್ಯ. ಸೋನಾ ಮಸೂರಿ ಅಕ್ಕಿ, ಅಲ್ಫಾನ್ಸೋ ಮಾವು, ದಿಲ್ ಖುಷ್ ದ್ರಾಕ್ಷಿ, ರೆಡ್ ಲೇಡಿ ಪಪ್ಪಾಯಾ, ಶುಗರ್ ಕ್ವೀನ್ ಕಲ್ಲಂಗಡಿ, ಥೈವಾನ್ ಪೇರಲೆ, ರೆಡ್ ಡೆಲಿಶಿಯಸ್ ಸೇಬು; ಸೂಪರ್ ಮಾರ್ಕೆಟ್ ನ ತರಕಾರಿ ಹಣ್ಣು ವಿಭಾಗಕ್ಕೆ ಭೇಟಿ ಕೊಟ್ಟಾಗ ಈ ಹೆಸರುಗಳು ತರಹೇವಾರಿ ತಳಿಗಳೆಂಬ ಕಲ್ಪನೆ ಜನಸಾಮಾನ್ಯರಿಗೂ ಮನದಟ್ಟಾಗಿದೆ. ಇವೆಲ್ಲವೂ ತಳಿಗಳಾದರೂ ಅಭಿವೃದ್ಧಿ ಪಡಿಸಿದ ರೀತಿ, ಉದ್ದೇಶ ಬೇರೆಯದು. ಯಾವ ತಳಿ ಹೆಚ್ಚು ಕಾಲ ತಾಜಾ ಇರಬ್ಲಲವು, ಈ ತಳಿಗಳ ಬೀಜವನ್ನು ಸಂಗ್ರಹಿಸಿ ಕೈತೋಟದಲ್ಲಿ ಬೆಳೆಸಲು ಸಾಧ್ಯವೇ, ಯಾವ ತಳಿ ರುಚಿಕರ ಮತ್ತು ಹೆಚ್ಚು ಪೌಷ್ಟಿಕ ಮುಂತಾದ ಆಸಕ್ತಿದಾಯಕ ಮಾಹಿತಿಯನ್ನು ತಳಿ ವಿಜ್ಞಾನ ನೀಡಬಲ್ಲದು. ಸಾಂಬಾರು ಮಾಡುವಾಗ ಬ್ಯಾಡಗಿ ಮೆಣಸಿಗೂ ಇತರೇ ತಳಿಗಳಿಗೂ ಬಣ್ಣ-ಖಾರದಲ್ಲಿನ ವ್ಯತ್ಯಾಸ ಕಂಡುಕೊಂಡ ಹಾಗೇ.
ಆದರೂ ದೊಡ್ಡ ಗಾತ್ರ, ಭಿನ್ನ ರುಚಿ, ಬಣ್ಣ ಕಂಡೊಡನೇ ಇದು ಹೈಬ್ರೀಡ್ ಜಾತಿಯದು ಎಂದು ಕರೆಯುವ ತಪ್ಪು ಕಲ್ಪನೆ ಜನಸಾಮಾನ್ಯರಲ್ಲಿ ಬೇರೂರಿಬಿಟ್ಟಿದೆ. ದೊಡ್ಡ ಗಾತ್ರದ ಎಲೆ, ಕಾಯಿ, ಕುಬ್ಜ ಗಿಡಗಳೆಲ್ಲಾ ಹೈಬ್ರೀಡ್ ಗಳಲ್ಲ, ಸಂವರ್ಧಿತ ತಳಿಗಳೆಲ್ಲಾ ಸಂಕರಣ ತಳಿಗಳಲ್ಲ. ಈ ತಳಿಗಳ ನಡುವಿನ ವ್ಯತ್ಯಾಸವನ್ನು ಮುಂದೆ ನೋಡೋಣ.
ತಳಿಗಳಲ್ಲಿ ಬಗೆ, ತಳಿ ಸಂವರ್ಧನೆ
ಮತ್ತು ಅಭಿವೃದ್ಧಿಯ ಪ್ರಮುಖ ವಿಧಾನಗಳು
ಸಸ್ಯಗಳಲ್ಲಿ ಕಾಯಿ ಕಚ್ಚುವ ಮೊದಲು ನಡೆಯುವ ಕ್ರಿಯೆ ಪರಾಗಸ್ಪರ್ಷ. ಕೆಲ ಸಸ್ಯಗಳು ಸ್ವಯಂ ಪರಾಗಸ್ಪರ್ಷ ಕೈಗೊಂಡರೆ (ಉದಾ: ಬೀನ್ಸ್, ಬೆಂಡೆ) ಕೆಲ ಸಸ್ಯಗಳು ಕೀಟಗಳ ಮೇಲೆ ಪರಾಗಸ್ಪರ್ಷಕ್ಕೆ ಅವಲಂಬಿತ (ಉದಾ:ಸೌತೆ ಜಾತಿಯ ತರಕಾರಿಗಳು, ಮಾವು, ಗೇರು). ಇನ್ನು ಕೆಲ ಸಸ್ಯಗಳು (ಉದಾ: ಬಾಳೆ, ಶುಂಠಿ) ತಮ್ಮ ಶಾರಿರೀಕ ಅಂಗಗಳಿಂದ ಸಸ್ಯಾಭಿವೃದ್ಧಿ ನಡೆಸುತ್ತವೆ. ಈ ಆಧಾರದ ಮೇಲೆ ಹಲವಾರು ತಳಿ ಸಂವರ್ಧನಾ ವಿಧಾನವನ್ನು ಪಟ್ಟಿ ಮಾಡಬಹುದು.
ಯಾವುದೇ ಸಂವರ್ಧಿತ ತಳಿಗೆ ಪ್ರಾದೇಶಿಕ ತಳಿಗಳು ಮೂಲ ಸಾಮಗ್ರಿಗಳು. ಎಲ್ಲಾ ಸುಧಾರಿತ ತಳಿಗಳು (ವೆರೈಟೀಸ್) ಹಿಂದೊಮ್ಮೆ ದೇಶೀಯ ತಳಿಗಳಾಗಿರುವುದು ಇಲ್ಲಿ ಗಮನಿಸುವಂತಹ ವಿಷಯ. ಇಂದಿಗೂ ಸ್ಥಳೀಯ ತಳಿಗಳು (ಲ್ಯಾಂಡ್ ರೇಸಸ್) ತಳಿ ಸಂವರ್ಧನೆಯಲ್ಲಿ ವಿಶೇಷ ಪಾತ್ರ ವಹಿಸುತ್ತವೆ.
ಕೆಳಗಿನ ಎಲ್ಲಾ ವಿಧಾನಗಳೂ ಒಂದಲ್ಲಾ ಒಂದು ರೀತಿಯಲ್ಲಿ ಸಸ್ಯಗಳ ಮೂಲ ಅನುವಂಶಿಕ ನಕ್ಷೆಯಲ್ಲಿ ಬದಲಾವಣೆ ತರುವುದೇ ಆಗಿದೆ.
1.
ಉತ್ತಮ ವಿದೇಶೀ ತಳಿಗಳ ಪರಿಚಯ (ಇಂಟ್ರೊಡಕ್ಷನ್)
ಈ ವಿಧಾನದಲ್ಲಿ ನಿರ್ದಿಷ್ಟ ಪ್ರದೇಶವೊಂದರಲ್ಲಿ ಮುಂಚೆ ಬೆಳೆಯದ ಹೊಸ ಬೆಳೆಯನ್ನು, ಮತ್ತು ವಿಶೇಷ ತಳಿಗಳನ್ನು ಪರಿಚಯ ಮಾಡಲಾಗುತ್ತದೆ.
ದೆಹಲಿಯ ‘ಭಾರತೀಯ ಕೃಷಿ ಅನುಸಂಧಾನ ಪರಿಷತ್ ‘(ಐಸಿಎರ್), ಸಸ್ಯ ತಳಿ ಸಂಪನ್ಮೂಲಗಳ ‘ನ್ಯಾಶನಲ್ ಬ್ಯುರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸ್’, ಕಲ್ಕತ್ತಾದ ‘ಬಾಟನಿಕಲ್ ಸರ್ವೇ ಆಫ್ ಇಂಡಿಯಾ’, ಡೆಹ್ರಾಡೂನ್ ನ ‘ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್’ ಮುಂತಾದ ಸಂಸ್ಥೆಗಳು ಕ್ವಾರಂಟೈನ್ ವಿಧಾನಗಳನ್ನು ಅನುಸರಿಸಿ ಹೊಸ ಬೆಳೆಗಳನ್ನು, ತಳಿಗಳನ್ನು ಪರಿಚಯಿಸುತ್ತವೆ.
ಉದಾ: ಐಐಎಚ್ಆರ್ ಪರಿಚಿತ 'ಪ್ಯಾಟಿ ಪ್ಯಾನ್' ಎನ್ನುವ ಕುಂಬಳ ಜಾತಿಯ ತರಕಾರಿ; ಅಮೇರಿಕಾದಲ್ಲಿ ಪ್ರಸಿದ್ಧಿಯಾದ ನಂತರ ಭಾರತಕ್ಕೆ ಪರಿಚಯವಾದ 'ಬೆನೆಟ್ ಆಫುಸ್' ಮಾವಿನ ತಳಿ ಇತ್ಯಾದಿ.
ಹಸಿರು ಕ್ರಾಂತಿಯ ರೂವಾರಿಯಾದ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಅವರು ಮೆಕ್ಸಿಕೋದ ಕುಬ್ಜ ಗೋಧಿ ತಳಿಗಳನ್ನು, ಭತ್ತದ 38 ಸುಧಾರಿತ ತಳಿಗಳನ್ನು (ಪ್ರಸಿದ್ಧ IR-8 ತಳಿ) 1960 ರಲ್ಲಿ ಭಾರತಕ್ಕೆ ಪರಿಚಯಿಸಿದ್ದರು. ಹೆಚ್ಚಿನ ಇಳುವರಿ ಪಡೆಯುವಲ್ಲಿ, ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾಲಂಬಿಯಾ ಗುವಲ್ಲಿ ಈ ಪರಿಚಿತ ತಳಿಗಳು ಬಹಳಷ್ಟು ಕೊಡುಗೆ ನೀಡಿವೆ.
2.
ಉತ್ತಮ ತಳಿಗಳ ಆಯ್ಕೆ,
ಸಂವರ್ಧನೆ (ಸೆಲೆಕ್ಷನ್)
ತಳಿ
ಸಂವರ್ಧನೆಯಲ್ಲಿ ಇದು ಅತ್ಯಂತ ಹಳೆಯ, ಸುಲಭ ವಿಧಾನ. ಈ ವಿಧಾನದಲ್ಲಿ ಬಿತ್ತಿದ ಬೆಳೆಯ ದೊಡ್ಡ ಬಳಗದಲ್ಲಿ ಉತ್ತಮವಾಗಿ ಬೆಳವಣಿಗೆ ಪ್ರದರ್ಶಿಸುತ್ತಿರುವ ಸಸ್ಯಗಳನ್ನು ಗುರುತಿಸಲಾಗುತ್ತದೆ. ಉಳಿದ ಸಸ್ಯಗಳನ್ನು ತೆಗೆದುಹಾಕಲಾಗುತ್ತದೆ. ಹೀಗೆ ಗುರುತಿಸಿದ ಸಸ್ಯದ ಬೀಜವನ್ನು ಮತ್ತೆ ಬಿತ್ತಿ ಏಳು ಪೀಳಿಗೆಗಳ ಕಾಲ ಆಯ್ಕೆ ಮಾಡುತ್ತಾ ತಳಿ ಸಂವರ್ಧನೆ ಮಾಡಲಾಗುತ್ತದೆ. ಹಲವಾರು ವರ್ಷಗಳ ಕಾಲ ತಮ್ಮಲ್ಲಿಯೇ ಸಂತಾನೋತ್ಪತ್ತಿ ನಡೆಸಿದ ಕಾರಣ ಅನುವಂಶೀಯಾವಾಗಿ ತಳಿಗಳು ಶುದ್ಧವಾಗಿರುತ್ತವೆ.
ಉದಾ: ಭಾರತದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿರುವ ‘ಲಕ್ನೋ 49/ಸರ್ದಾರ್’ ಪೇರಲೆ ತಳಿ ‘ಅಲಹಾಬಾದ್ ಸಫೇದಾ’ ಎನ್ನುವ ಬಳಗದಿಂದ ಆಯ್ಕೆ ಮಾಡಿದ್ದು. ಕಾಳು ಮೆಣಸಿನಲ್ಲಿ ಪ್ರಚಲಿತದಲ್ಲಿರುವ 'ತೇವಮ್' ತಳಿ (ಬಿಡುಗಡೆ- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೆöÊಸ್ ರಿಸರ್ಚ್) 'ತೇವಮುಂಡಿ' ಬಳಗದಿಂದ
ಆಯ್ಕೆ ಮಾಡಿದ್ದು.
ಈ ಸಾಂಪ್ರದಾಯಿಕ ವಿಧಾನಗಳಿಗೆ 'ಮಾರ್ಕರ್' (ನಿರ್ದಿಷ್ಟವಾದ ಜೀನ್ ಅನ್ನು ಗುರುತು ಮಾಡುವುದು) ಆಧರಿತ ಆಯ್ಕೆ ವೇಗ ನೀಡಬಲ್ಲದು.
3.
ಸಂಕರಣ ತಳಿ ಅಭಿವೃದ್ಧಿ (ಹೈಬ್ರಿಡೈಝೇಶನ್)
ಈ ವಿಧಾನದಲ್ಲಿ ಕೃತಕ ಪರಾಗಸ್ಪರ್ಷ ಕ್ರಿಯೆ ಅನುಸರಿಸಿ ತಳಿ ಅಭಿವೃದ್ಧಿ ಪಡಿಸಲಾಗುತ್ತದೆ. ನಿರ್ದಿಷ್ಟ ತಾಯಿ-ತಂದೆ ಹೊಂದಿರುವ ಈ ತಳಿಗಳನ್ನು ಸಂಕರಣ ತಳಿ/ಹೈಬ್ರೀಡ್ ಎಂದು ಕರೆಯಲಾಗುತ್ತದೆ. ಸುಧಾರಿತ ತಳಿಗಳಲ್ಲಿ ಅತ್ಯಂತ ಹೆಚ್ಚು ಪ್ರಚಲಿತ ಮತ್ತು ಹೆಚ್ಚು ಚರ್ಚಿತವಾಗುವ ಬಗೆ ಸಂಕರಣ ತಳಿಗಳದ್ದು. ಅಧಿಕ ಇಳುವರಿಗೆ ಪ್ರಖ್ಯಾತವಾದ ಸಂಕರಣ ತಳಿಗಳು ರೈತರ ಹೊಲದಲ್ಲಿಯೂ ಗರಿಷ್ಟ ಮಟ್ಟದಲ್ಲಿ ಬಳಕೆಯಲ್ಲಿವೆ.
ಉದಾ: ಸುಪ್ರಸಿದ್ಧ ಮಲ್ಲಿಕಾ ಮಾವು ನೀಲಂ ಮತ್ತು ದಶೇರಿ ತಳಿಗಳ ಸಂಕರಣ;
ಅರೇಬಿಕಾ ಕಾಫಿಯಲ್ಲಿ ಕಾವೇರಿ (ಕಟುರಾ ಮತ್ತು ಹಿಬ್ರಿಡೋ-ಡಿ ಟೆಮೋರ್) ಚಂದ್ರಗಿರಿ (ವಿಲ್ಲಾ ಸರ್ಚಿ ಮತ್ತು ಹಿಬ್ರಿಡೋ-ಡಿ ಟೆಮೋರ್) ಸಂಕರಣ ತಳಿಗಳು ಪ್ರಸಿದ್ಧವಾಗಿವೆ. ತೆಂಗಿನಲ್ಲಿ TXD, DXT ಹೈಬ್ರೀಡ್ ಗಳು ಪ್ರಚಲಿತದಲ್ಲಿವೆ.
ಬಾಳೆ, ನಿಂಬು, ಟೊಮೇಟೋ, ದ್ರಾಕ್ಷಿ ಮುಂತಾದ ಬೆಳೆಗಳು ನೈಸರ್ಗಿಕ ಸಂಕರಣಗಳೆಂದರೆ ಆಶ್ಚರ್ಯವೆನಿಸಬಹುದು.
ಸಂಕರಣ ತಳಿ ಅಭಿವೃದ್ಧಿ ಪಡಿಸುವ ಮೊದಲು ಅಪೇಕ್ಷಿತ ಗುಣಗಳುಳ್ಳ ಎರಡು ಶುದ್ಧ ತಳಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಂದು ಶುದ್ಧ ತಳಿಯನ್ನು ತಾಯಿ ಸಸ್ಯವಾಗಿ (ಉದಾ: ಮಲ್ಲಿಕಾ ಮಾವಿನಲ್ಲಿ ನೀಲಂ), ಮತ್ತೊಂದು ಶುದ್ಧ ತಳಿಯನ್ನು ಪರಾಗದ ಮೂಲ ತಂದೆ ಸಸ್ಯವಾಗಿ (ಉದಾ: ಮಲ್ಲಿಕಾ ಮಾವಿನಲ್ಲಿ ದಶೇರಿ) ಆಯ್ಕೆ ಮಾಡಲಾಗುತ್ತದೆ. ಹೂಬಿಡುವ ಸಂದರ್ಭದಲ್ಲಿ ತಾಯಿ ಸಸ್ಯದ ಹೂವಿನಲ್ಲಿ ಪರಾಗ ಬಿರಿಯುವ ಕೇಸರದ ಭಾಗವನ್ನು ಕತ್ತರಿಸಿ ತೆಗೆದು ಕೇವಲ ಶಲಾಕೆಯ ಭಾಗ, ಅಂಡಾಶಯವನ್ನು ಉಳಿಸಲಾಗುತ್ತದೆ (ಇಮಾಸ್ಕುಲೇಶನ್). ತಂದೆ ಸಸ್ಯದ ಪರಾಗವನ್ನು ಇವುಗಳಿಗೆ ಸವರಿ ಕೃತಕ ಪರಾಗಸ್ಪರ್ಷ ಮಾಡಲಾಗುತ್ತದೆ (ಪಾಲಿನೇಶನ್). ಇತರೆ ಪರಾಗಗಳು ಸ್ಪರ್ಷವಾಗದಂತೆ ಕವರ್ ಮಾಡಲಾಗುತ್ತದೆ (ಬ್ಯಾಗಿಂಗ್). ಮುಂದೆ ಇದೇ ಬೀಜಗಳನ್ನು ಬಳಸಿ ಮೊದಲನೇ ಪೀಳಿಗೆಯನ್ನು ಪಡೆಯಲಾಗುತ್ತದೆ. ಇದನ್ನೇ F1 ಹೈಬ್ರೀಡ್/ ಸಂಕರಣ ತಳಿ ಎಂದು ಕರೆಯಲಾಗುತ್ತದೆ.
ಎರಡು ವಿಭಿನ್ನ ಗುಣಗಳ ತಳಿಗಳು ಶ್ರೆಷ್ಠ ಪೀಳಿಗೆಯೊಂದನ್ನು ಹುಟ್ಟುಹಾಕುವುದನ್ನು ಈ ವಿಧಾನದಲ್ಲಿ ಕಾಣಬಹುದು. ಬೆಳವಣಿಗೆಯ ತೀವ್ರ ಹುರುಪು, ಪೋಷಕರಿಗಿಂತ ಹೆಚ್ಚಿನ ಇಳುವರಿ, ಫಲವತ್ತತೆ, ರಸಗೊಬ್ಬರಗಳಿಗೆ ಸ್ಪಂದನೆ ಸಂಕರಣ ತಳಿಗಳ ವಿಶೆಷತೆ. ರೋಗ-ಕೀಟ ನಿರೋಧಕತೆ ಉದ್ದೇಶದಿಂದಲೂ ಸಂಕರಣ ತಳಿಗಳನ್ನು ಪಡೆಯಬಹುದಾಗಿದೆ. ಇದೇ ಸಂಕರಣ ತಳಿಗಳ ಮುಂದಿನ ಪೀಳಿಗೆಯಲ್ಲಿ ಪೋಷಕರ ಗುಣಗಳು, ಸಂಕರಣದ ಗುಣಗಳು ಪ್ರತ್ಯೇಕವಾಗುತ್ತವೆ. ಹಾಗಾಗಿ ಸಂಕರಣ ತಳಿಗಳ ಮುಂದಿನ ಪೀಳಿಗೆಯಲ್ಲಿ ಈ ಹುರುಪು ಕುಂಠಿತವಾಗುತ್ತದೆ. ಇದು ಸಂಕರಣಗಳ ಬಳಕೆಯ ಮಿತಿ. ಹಾಗಾಗಿ ಸಂಕರಣ ತಳಿಗಳ ಬೀಜಗಳನ್ನು ಮತ್ತೆ ಮತ್ತೆ ಕೊಂಡು ಕೊಳ್ಳುವುದು ಅನಿವಾರ್ಯ.
|
|
|
|
|
|
|
|
|
|

4.
ರೂಪಾಂತರಿ ತಳಿಗಳು (ಮ್ಯುಟೇಶನ್
ವಿಧಾನ)
ಬೀಜೋತ್ಪತ್ತಿ ಮಾಡದ ಕೆಲ ಅಲಂಕಾರಿಕ ತಳಿಗಳಲ್ಲಿ ಎಲೆ, ಹೂಗಳ ಬಣ್ಣ ಗಾತ್ರದಲ್ಲಿ ವೈವಿಧ್ಯತೆ ಪರಿಚಯಿಸುವಾಗ ಈ ವಿಧಾನವನ್ನು ಅನುಸರಿಸಲಾಗುತ್ತದೆ. ಕ್ಷ-ಕಿರಣ, ಗಾಮಾ-ಕಿರಣ, ವಿವಿಧ ರಾಸಾಯನಿಕಗಳ ಉಪಚಾರದಿಂದ ಅನುವಂಶಿಕ ಧಾತುಗಳಲ್ಲಿ ಉಂಟಾಗುವ ಹಠಾತ್ ಬದಲಾವಣೆಗಳು ವಿಶಿಷ್ಟ ಪೀಳಿಗೆಗೆ ಜನ್ಮ ನೀಡಬಲ್ಲವು. ಅಂತಹ
ಆಕಸ್ಮಿಕ ಉತ್ತಮ ತಳಿಗಳ ಅಭಿವೃದ್ಧಿ ಈ ವಿಧಾನದ ಉದ್ದೇಶ.
5.
ರೂಪಾಂತರಿ
ತಳಿಗಳು (ಜೀನ್ ಎಡಿಟಿಂಗ್ ವಿಧಾನ)
ಈ
ವಿಧಾನದಲ್ಲಿ ವಿವಿಧ ಉಪಕರಣಗಳನ್ನು ಬಳಸಿ ಅನುವಂಶಿಕ ಧಾತುಗಳ ಸಣ್ಣ ತುಣುಕೊಂದನ್ನು ಕೂಡಿಸುವುದು,
ಕಳೆಯುವುದು, ತಿದ್ದುವಂತಹ ಪ್ರಯೋಗಗಳನ್ನು ನಡೆಸಲಾಗುತ್ತದೆ. ಇತ್ತೀಚೆಗೆ ಸುದ್ದಿಯಲ್ಲಿರುವ (೨೦೨೦ರ
ನೋಬೆಲ್ ಪ್ರಶಸ್ತಿ ವಿಜೇತ) 'ಕ್ರಿಸ್ಪರ್/ಕಾಸ್' ಜೀನ್ ಎಡಿಟಿಂಗ್ ತಂತ್ರಜ್ಞಾನ ಹಲವಾರು ಹೊಸ ತಳಿಯ
ಉಗಮಕ್ಕೆ ದಾರಿ ಮಾಡಿಕೊಟ್ಟಿದೆ (ತಳಿಗಳನ್ನು ಬಿಡುಗಡೆಗೊಳಿಸಲಾಗಿಲ್ಲ), ಸಾಂಪ್ರದಾಯಿಕ ವಿಧಾನಗಳಿಗಿಂತಲೂ ವೇಗವಾದ ಈ ತಂತ್ರಜ್ಞಾನ
ಭವಿಷ್ಯದ ಭರವಸೆಯಾಗಿದೆ.
6.
ಕುಲಾಂತರಿಗಳು (ಜೆನೆಟಿಕ್ ಮೋಡಿಫಿಕೇಶನ್)
ಈ
ವಿಧಾನದಲ್ಲಿ ಸಸ್ಯದ ಅನುವಂಶಿಕ ಧಾತುಗಳಿಗೆ ಬೇರೆ ಕುಲದ ಜೀವಿಯೊಂದರ ಧಾತುಗಳನ್ನು ಅಳವಡಿಸಲಾಗುತ್ತದೆ.
ಕೃತಕ ಮಾರ್ಪಾಡುಗಳು ಪ್ರಯೋಗಾಲಯಗಳಲ್ಲಿ ತೀವ್ರ ಕಾಳಜಿಯಲ್ಲಿ, ವಿಶೇಷ ಅನುಮತಿಯೊಂದಿಗೆ ನಡೆಯುತ್ತವೆ.
ಉದಾ: ಭಾರತದಲ್ಲಿ ಕುಲಾಂತರಿ ಬಿ.ಟಿ ಹತ್ತಿ ತಳಿಯೊಂದೇ ಲಭ್ಯವಿದ್ದೂ, ಸಾಸಿವೆಯಲ್ಲಿ 'ಧಾರಾ' ಎಂಬ ಹೊಸ ತಳಿಯನ್ನು ಪರಿಚಯಿಸುವ ಪ್ರಕ್ರಿಯೆ ಕಾನೂನಾತ್ಮಕ ಒಪ್ಪಿಗೆಯ ಹಂತದಲ್ಲಿದೆ.
ಸುಧಾರಿತ ತಳಿಗಳ ಉಪಯೋಗಗಳು
ಪ್ರತಿ ಬೆಳೆ, ಪ್ರತಿ ಪ್ರದೇಶಕ್ಕೂ ತಳಿ ಅಭಿವೃದ್ಧಿಯ ಉದ್ದೇಶಗಳು ಬದಲಾಗುತ್ತವೆ. ಆದರೂ ಹೆಚ್ಚಿನ ಇಳುವರಿ, ಹೆಚ್ಚಿನ ಗುಣಮಟ್ಟ, ಹೆಚ್ಚಿನ ಪೋಷಕಾಂಶ, ರೋಗ ನಿರೋಧಕತೆ, ಕೀಟ ನಿರೋಧಕತೆ, ಬರ ಸಹಿಷ್ಣುತೆ (ತಾಪಮಾನ, ಮಣ್ಣಿನ ಫಲವತ್ತತೆ, ಲವಣಾಂಶ, ಒಣ ಭೂಮಿ), ಕುಬ್ಜತೆ ಹೀಗೆ ಕೆಲವು ಸಾಮಾನ್ಯ ಉದ್ದೇಶಗಳು, ಉಪಯೋಗಗಳನ್ನು ಪಟ್ಟಿ ಮಾಡಬಹುದು.
ಸಾರ್ವಜನಿಕ-ಖಾಸಗಿ ಸಂಸ್ಥೆಗಳ ಕೊಡುಗೆ
ತಳಿ ಸಂವರ್ಧನೆ/ಅಭಿವೃದ್ಧಿಯಲ್ಲಿ ವಿವಿಧ ಸಂಶೋಧನಾ ಸಂಸ್ಥೆಗಳ ಕೊಡುಗೆ ಎಲ್ಲರಿಗೂ ತಿಳಿದಿರುವಂತದ್ದು. ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐ.ಸಿ.ಎ.ಆರ್) ಈ ಕ್ಷೇತ್ರದಲ್ಲಿ, ವಿಶೇಷವಾಗಿ ಬಹುವಾರ್ಷಿಕ ಬೆಳೆಗಳಲ್ಲಿ ಹೆಚ್ಚಿನ ಸಂಶೋಧನೆ ಕೈಗೊಂಡಿದೆ, ಹಲವಾರು ತಳಿಗಳನ್ನು ಅಭವೃದ್ಧಿ ಪಡಿಸಿ 'ಪೂಸಾ' ಎಂಬ ಪೂರ್ವ ನಾಮದೊಂದಿಗೆ ಬಿಡುಗಡೆ ಮಾಡಿದೆ. ಐ.ಸಿ.ಎ.ಆರ್ ನ ಶಾಖಾ ಸಂಸ್ಥೆಗಳಲ್ಲಿ, ಎಲ್ಲಾ ಕೃಷಿ-ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲಿ ಉದ್ದೇಶಿತ ಸಂಶೋಧನೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಸ್ಥಾಪಿತ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐ.ಐ.ಎಚ್.ಆರ್) 'ಅರ್ಕಾ' ಎಂಬ ಪೂರ್ವ ನಾಮದೊಂದಿಗೆ ಹಲವಾರು ತಳಿ ಬಿಡುಗಡೆ ಮಾಡಿದೆ.
ಖಾಸಗಿ ವಲಯವೂ ಈ ಕ್ಷೇತ್ರದಲ್ಲಿ ಹಿಂದಿಲ್ಲ. ರೈತರ ಹೊಲದಲ್ಲಿ ಸಿಂಜೆಂಟಾ, ಮಹಿಕೋ, ಇಂಡೋ-ಅಮೇರಿಕನ್, ನಾಮಧಾರಿ, ಕಾವೇರಿ, ಕಲಶ್, ರಾಶಿ ಸೀಡ್ಸ್ ಹೀಗೆ ಹಲವಾರು ಖಾಸಗಿ ಕಂಪನಿಗಳ ತಳಿಗಳನ್ನು ನೋಡಬಹುದಾಗಿದೆ. ಪ್ರಸಿದ್ಧ ಶುಗರ್ ಕ್ವೀನ್ ಕಲ್ಲಂಗಡಿ, ಟೆನಿಸ್ ಬಾಲ್ ಚೆಂಡು ಹೂವು, ಒರೊಬೆಲ್ಲೆ ಕ್ಯಾಪ್ಸಿಕಂ ತಳಿಗಳು ಖಾಸಗಿಯದೇ ಆಗಿವೆ. ಸರ್ಕಾರಿ ಸಂಶೋಧನಾ ಸಂಸ್ಥೆಗಳಂತೆ ಖಾಸಗಿ ಕಂಪೆನಿಗಳಲ್ಲೂ ಸಂಶೋಧನಾ ವಿಭಾಗಗಳಿರುತ್ತವೆ. ಕ್ಷೇತ್ರ ಬೆಳೆಗಳು, ತರಕಾರಿ-ಹೂ ಬೆಳೆಗಳಲ್ಲಿ ಹೊಸ ತಳಿಯ ಸಂಶೋಧನೆ, ಸಂವರ್ಧನೆ ಜೊತೆಗೆ ಬೀಜೋತ್ಪಾದನೆ ಇವುಗಳ ಪ್ರಮುಖ ಉದ್ದೇಶ. ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬೆಂಗಳೂರಿನ ಹೊರವಲಯದಲ್ಲಿ ಈ ಎಲ್ಲಾ ಬೀಜೋತ್ಪಾದಕ ಸಂಸ್ಥೆ ಸ್ಥಾಪಿತವಾಗಿರುವುದು ವಿಶೇಷ.
ಸುಧಾರಿಯ ತಳಿಯೊಂದರ ಅಭಿವೃದ್ಧಿಯ ಹಿಂದಿನ ಶ್ರಮ
ತಳಿಯೊಂದರ ಅಭಿವೃದ್ಧಿ ಸುಲಭವಲ್ಲ. ಪೀಳಿಗೆಯಿಂದ ಪೀಳಿಗೆಗೆ ಸಾಗುವ ಪ್ರಯೋಗಗಳು,
ಪರೀಕ್ಷೆಗಳು,
ದಶಕದ ಶ್ರಮ ಇದರಲ್ಲಡಗಿದೆ. ಹಲವು ವಿಜ್ಞಾನಿಗಳ (ಬ್ರೀಡರ‍್ಸ್)
ಸಂಶೋಧನಾ ವೃತ್ತಿ ಪೂರ್ತಿ ತಳಿ ಅಭಿವೃದ್ಧಿಗೆ ಮುಡಿಪಾಗಿದ್ದಿದೆ. ಹೊಸ ತಳಿಗಳು ಈಗಾಗಲೇ ಲಭ್ಯವಿರುವ ತಳಿಗಳಿಗಿಂತ ವಿಭಿನ್ನವಾಗಿರಬೇಕು; ಕನಿಷ್ಟ ೧೦% ಅಧಿಕ ಇಳುವರಿ ತೋರುತ್ತಿರಬೇಕು; ನಾವೀನ್ಯತೆ, ವಿಶಿಷ್ಟತೆ, ಏಕಪ್ರಕಾರತೆ, ಸ್ಥಿರತೆ ಎಂಬ ನಾಲ್ಕು ಮಾನದಂಡಗಳನ್ನು ತೃಪ್ತಿ ಪಡಿಸಬೇಕೆಂಬ
ನಿಯಮಗಳಿವೆ.
ನಂತರ
ಸಂಸ್ಥೆಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದ ತಳಿಯನ್ನು ಕ್ಷೇತ್ರ ಪ್ರಯೋಗಕ್ಕೆ ಒಡ್ಡಬೇಕು. ವಿವಿಧ ಪ್ರದೇಶಗಳಲ್ಲಿ,
ರೈತರ ಹೊಲದಲ್ಲಿ ಹೊಸ ತಳಿಗಳ ಗುಣಮಟ್ಟದ ಅವಲೋಕನ ನಡೆಯಬೇಕು. ನಂತರ ತಳಿಯ ನೋಂದಣಿ, ಬೀಜೋತ್ಪಾದನೆ,
ಬೀಜಗಳ ಪ್ರಮಾಣೀಕರಣ ನಡೆಸಬೇಕಾಗುತ್ತದೆ.
ಬಹುವಾರ್ಷಿಕ
ಬೆಳೆಗಳು ಹೂಬಿಡುವ ಹಂತ ತಲುಪುವುದು ನಿಧಾನ. ಏಕವಾರ್ಷಿಕ ಬೆಳೆಗಳಲ್ಲಿ ಈ ಅವಧಿ ಹೆಚ್ಚೆಂದರೆ ಐದಾರು
ತಿಂಗಳು. ಹಾಗಾಗಿ ಬಹುವಾರ್ಷಿಕ ಬೆಳೆಗಳಿಗಿಂತ ಏಕವಾರ್ಷಿಕ ಬೆಳೆಗಳಲ್ಲಿ ಈ ಎಲ್ಲಾ ಪ್ರಕ್ರಿಯೆಗೆ ತಗಲುವ
ಸಮಯ ಕಡಿಮೆ. ಏಕವಾರ್ಷಿಕ ಬೆಳೆಗಳಲ್ಲಿ (ಕ್ಷೇತ್ರ ಬೆಳೆ,ತರಕಾರಿ) ತಳಿ ಅಭಿವೃದ್ಧಿಗೆ ಸರಾಸರಿ ಏಳೆಂಟು
ವರ್ಷ, ಕ್ಷೇತ್ರ ಪ್ರಯೋಗಗಳಿಗೆ ಎರಡು ವರ್ಷ, ನೋಂದಣಿ, ಬೀಜೋತ್ಪಾದನೆಗೆ ಮೂರು ವರ್ಷ ಹೀಗೆ ಕನಿಷ್ಟ
ಹತ್ತು-ಹನ್ನೆರಡು ವರ್ಷಗಳ ಸಮಯ ಹಿಡಿಯಬಹುದು. ಬಹುವಾರ್ಷಿಕ ಬೆಳೆಗಳಲ್ಲಿ (ಹಣ್ಣು, ತೋಟಪಟ್ಟಿ, ಸಾಂಬಾರು)
ತಗಲುವ ಸಮಯ-ವೆಚ್ಚ ಇನ್ನೂ ಹೆಚ್ಚು.
ಈ ನಿಟ್ಟಿನಲ್ಲಿ ತೀವ್ರ ಸಮಯ ಬೇಡುವ ಸಾಂಪ್ರದಾಯಿಕ
ವಿಧಾನಗಳ ಪರ್ಯಾಯಗಳ ಅಭಿವೃದ್ಧಿಯತ್ತಲೂ ಹಲವಾರು ವಿಜ್ಞಾನಿಗಳು ಗಮನಾರ್ಹ ಸಂಶೋಧನೆ ನಡೆಸುತ್ತಿದ್ದಾರೆ. ನಿರ್ದಿಷ್ಟ ಜೀನ್ ಅನ್ನು ಗುರುತು
ಮಾಡುವ ‘ಮಾರ್ಕರ್’ ಆಧರಿತ ತಳಿ ಆಯ್ಕೆ, ಜೀನ್ ಎಡಿಟಿಂಗ್ ಮುಂತಾದ ಆಧುನಿಕ ವಿಧಾನಗಳು ಈ ಅವಧಿಯನ್ನು
ಕಡಿತಗೊಳಿಸಿವೆ. ಕುಲಾಂತರಿ ವಿಧಾನಲ್ಲಿ ತಳಿ ಅಭಿವೃದ್ಧಿ ಐದಾರು ವರ್ಷದಲ್ಲೇ ಮುಗಿದರೆ ಸಾರ್ವಜನಿಕ ವಿರೋಧಗಳ ನಡುವೆ ಬಿಡುಗಡೆಗೆ ಹತ್ತೆಂಟು ವರ್ಷಗಳೇ ಹಿಡಿಯಬಹುದು.
ರೈತರ ತಳಿಗಳು
ನಮ್ಮ ದೇಶದ ಕಾನೂನಿಲ್ಲಿ ರೈತರೂ ಕೂಡ ತಾವು ಅಭಿವೃದ್ಧಿ ಪಡಿಸಿದ ತಳಿಗಳ ಹಕ್ಕನ್ನು ಕಾಪಾಡಿಕೊಳ್ಳುವ
ವಿಶೇಷವಾದ ಕಾಯಿದೆಯಿದೆ. ಇದೇ 'ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಮತ್ತು ಫಾಮರ‍್ಸ್ ರೈಟ್ ಆಕ್ಟ್' (ಪಿ.ಪಿ.ವಿ.ಎಫ್.ಆರ್). ಈ ಕಾಯಿದೆ ಪ್ರಕಾರ ರೈತರು ತಮ್ಮ ತಳಿಗಳನ್ನು ನೋಂದಾಯಿಸಿಕೊಂಡು ಅವುಗಳ ಉತ್ಪಾದನೆ, ಮಾರಾಟ, ವಿತರಣೆ ಮೇಲೆ ಸಂಪೂರ್ಣ ಹಕ್ಕನ್ನು ಚಲಾಯಿಸಬಹುದು. ಈ ಕಾಯ್ದೆಯಡಿ ತಳಿ ಸಂರಕ್ಷಣೆಗೂ ಪ್ರಶಸ್ತಿ, ಉತ್ತೇಜನವಿದೆ.ಇತ್ತೀಚೆಗೆ ರೈತರೇ ಅಭಿವೃದ್ಧಿಸಿದ ಸಿದ್ದು ಹಲಸು, ಸಿಗಂದಿನಿ ಕಾಳುಮೆಣಸುಗಳು ಮುನ್ನಲೆಗೆ ಬಂದಿದ್ದನ್ನು ಇಲ್ಲಿ ಹೆಸರಿಸಬಹುದು.
Comments
Post a Comment