ನೀಲಿ ಎಂಬ ನಿಗೂಢದ ಹಿಂದೆ

         

 ಕಲರ್ ಕಲರ್ ವಾಟ್ ಕಲರ್ ಡು ಯು ವಿಶ್? ನಾವೆಲ್ಲ ಚಿಕ್ಕವರಿದ್ದಾಗ ಆಡ್ತಾ ಇದ್ದ ಆಟ ಇದು. 'ಔಟ್' ಆದ ಒಬ್ಬ ಆಟಗಾರನಿಗೆ ಎಲ್ಲರೂ ಕೂಗಿ ಈ ಪ್ರಶ್ನೆ ಕೇಳೋದು, ಆತ ತನಗನ್ನಿಸಿದ ಬಣ್ಣ ಆಯ್ಕೆ ಮಾಡೋದು, ಬಾಕಿ ಆಟಗಾರರೆಲ್ಲ ಪಟ್ಟನೆ ಓಡಿ ಅದೇ ಬಣ್ಣದ ಯಾವುದಾದರೊಂದು ವಸ್ತುವನ್ನು ಮುಟ್ಟಿ ನಿಲ್ಲೋದು. ಬಣ್ಣದ ಹೆಸರು ಕೇಳಿದ್ದೇ ನಾನು ಓಡುತ್ತಿದ್ದದ್ದು ಅಮ್ಮನ ಹೂದೋಟಕ್ಕೆ; ಹಸಿರು, ಕೆಂಪು, ಹಳದಿ, ಕೇಸರಿ, ಗುಲಾಬಿ, ಬಿಳಿ ಹೀಗೆ ಬಹುತೇಕ ಬಣ್ಣಗಳು ಅಲ್ಲಿ ಸುಲಭವಾಗಿ ಸಿಕ್ಕಿ ಬಿಡುತ್ತಿದ್ದವು. ನೀಲಿ, ನೇರಳೆಯ ಸವಾಲು ಬಂದಾಗ ಈ ಪ್ಲಾನ್ ಫ್ಲಾಪ್!

ಈಗ ನಿಮ್ಮನ್ನೇ ಕೇಳಿಕೊಳ್ಳಿ; ನೀಲಿ ಬಣ್ಣದ ಹೂಗಳನ್ನು ಪಟ್ಟಿ ಮಾಡಿ ಎಂದರೆ ಶಂಖಪುಷ್ಪ, ಕುರಂಜಿ, ಹೈಡ್ರಾಂಜಿಯಾ, ಪ್ಯಾನ್ಸಿ, ಪೆಟುನಿಯಾ, ಎನ್ನುತ್ತಾ ಗರಿಷ್ಟ ಎಷ್ಟು ಸಸ್ಯಗಳನ್ನು ಹೆಸರಿಸಬಲ್ಲಿರಿ? ಹತ್ತು? ಹದಿನೈದು? ಕಷ್ಟ ಅಲ್ಲವೇ! ಅದೇ ಕೆಂಪು ಬಣ್ಣವಾದರೆ?

ಮುಖ ಮೇಲೆತ್ತಿ ನೋಡಿದರೆ ಆಕಾಶ ನೀಲಿ, ಕಂಡಷ್ಟೂ ಮುಗಿಯದ ಸಮುದ್ರ ನೀಲಿ, ರಾತ್ರಿ ಮಿನುಗುವ ನಕ್ಷತ್ರ ನೀಲಿ ಹೀಗೆ ಪರಿಸರದಲ್ಲಿ ನೀಲಿ ಸಾಮಾನ್ಯವೆನೋ ಅನ್ನಿಸಬಹುದು. ಆದರೆ ಸಸ್ಯ-ಪ್ರಾಣಿ ಸಂಕುಲ, ಜೈವಿಕ ವಸ್ತುಗಳನ್ನು ಗಮನಿಸಿದರೆ ನೀಲಿ ದುರ್ಲಭವೇ. ಬೆರಳೆಣಿಕೆಯಷ್ಟು ಪ್ರಾಣಿಗಳಲ್ಲಿ, ಹತ್ತರಲ್ಲೊಂದು ಸಸ್ಯದಲ್ಲಿ ನೀಲಿ ಬಣ್ಣ ಕಾಣಸಿಗಬಹುದು. ನಮ್ಮೆಲ್ಲರ 'ಫೆವರೆಟ್' ನೀಲಿ ನಿಸರ್ಗದಲ್ಲಿ ಇಷ್ಟೊಂದು ಅಪರೂಪವೇಕೆ!?

ಸ್ವಲ್ಪ ಫಿಸಿಕ್ಸ್

ಬೆಳಕು ಎಂದರೆ ತರಂಗಗಳ ಗುಚ್ಛ, ಈ ಗುಚ್ಛದ ಕೆಲವೇ ಭಾಗಗಳನ್ನು ನಾವು (ಮನುಷ್ಯರು) ಗುರುತಿಸಬಲ್ಲೆವು. ಅವುಗಳನ್ನೇ ನೇರಳೆಯಿಂದ ಶುರುವಾಗಿ ಕೆಂಪು ತರಂಗಗಳ ವರೆಗೆ ಕಾಮನಬಿಲ್ಲಿನ ಬಣ್ಣಗಳನ್ನಾಗಿ ವಿಂಗಡಿಸುತ್ತೇವೆ. ಇದರ ಆಚೇ ಈಚೆ ಇರುವುದೇ ನಾವು ಕಾಣಲಾಗದ ಅತಿನೇರಳೆ ಅವಗೆಂಪು ತರಂಗಗಳು. ಎಲ್ಲ ತರಂಗಗಳು ಸೇರಿ ಬಿಳಿ ಬಣ್ಣವಾಗಿ ಈ ಗುಚ್ಛ ಗೋಚರವಾಗುತ್ತದೆ.

ಬಿಳಿ ಬೆಳಕು ವಸ್ತುವೊಂದರ ಮೇಲೆ ಬಿದ್ದಾಗ ಕೆಲ ತರಂಗಗಳನ್ನು ಆ ವಸ್ತು ಹೀರಿಕೊಂಡು ಉಳಿದ ತರಂಗಗಳನನ್ನು ಬಿಟ್ಟುಕೊಡುತ್ತದೆ. ಹೀಗೆ ಪ್ರತಿಫಲಿತವಾದ ಬೆಳಕು ನಮಗೆ ಆ ವಸ್ತುವಿನ ಬಣ್ಣವಾಗಿ ಗೋಚರಿಸುತ್ತದೆ. ಉದಾಹರಣೆ ಹೂವೊಂದು ನೀಲಿಯಾಗಿ ಗೋಚರವಾಗುತ್ತಿದ್ದರೆ ಅದು ಬೇರೆಲ್ಲಾ ತರಂಗಗಳನ್ನು ಹೀರಿಕೊಂಡು ನೀಲಿ ತರಂಗಗಳನ್ನು ಬಿಟ್ಟುಕೊಡುತ್ತಿದೆಯೆಂದು ಅರ್ಥ.

ಪ್ರಾಣಿ ಪಕ್ಷಿ ಕೀಟಗಳು ಗುರುತಿಸಬಲ್ಲ ತರಂಗಗಳ ಗುಚ್ಙ ನಮಗಿಂತ ಭಿನ್ನವಾದದ್ದು. ನಮ್ಮ ಕೆಂಪು ಅವುಗಳಿಗೆ ಬೇರೇನೋ ಬಣ್ಣವಾಗಿ ಗೋಚರವಾಗಬಲ್ಲದು.

         ಸ್ವಲ್ಪ ಕೆಮೆಸ್ಟ್ರಿ

ನಿರ್ಜೀವ ವಸ್ತುಗಳು ತಮ್ಮ ಮೇಲ್ಮೈಯಿಂದ ಪ್ರತಿಫಲಿಸುವ ಬೆಳಕಿನಿಂದ ಬಣ್ಣ ಹೊಮ್ಮಿಸಬಹುದು. ಜೈವಿಕ ವಸ್ತುಗಳು ರಂಗಾಗಿ ಕಾಣಲು ಇದರ ಜೊತೆ ಇನ್ನೊಂದು ಪದ್ದತಿಯನ್ನು ರೂಢಿಸಿಕೊಂಡಿವೆ; ಅದೇ ಕೆಲವು ರಾಸಾಯನಿಕ ಸಂಯುಕ್ತಗಳ ಉತ್ಪಾದನೆ. ಉದಾಹರಣೆ: ಹಸಿರು ಬೆಳಕನ್ನು ಪ್ರತಿಫಲಿಸುವ ಪತ್ರಹರಿತ್ತು.

ನೀಲಿ ಬೆಳಕನ್ನು ಪ್ರತಿಫಲಿಸುವ ಸಸ್ಯಗಳಲ್ಲಿ 'ಡೆಲ್ಫಿನಿಡಿನ್' ಎಂಬ ಸಂಯುಕ್ತದ ಉಪಸ್ಥಿತಿಯನ್ನು ಹೇಳಲಾಗಿದೆ. ಆದರೆ ಈ ಸಂಯುಕ್ತದ ತಯಾರಿ ಸಸ್ಯಗಳಿಗೆ ಸುಲಭವಲ್ಲ. ತುಂಬಾ ತುಂಬಾ ಸಂಕೀರ್ಣವಾದದ್ದು ಮತ್ತು ಹೆಚ್ಚು ಶಕ್ತಿ ವ್ಯಯಿಸುವ ಕ್ರಿಯೆ. ಸಸ್ಯಗಳು ಈ ಹಾದಿಯನ್ನು ಆದಷ್ಟು ತಿರಸ್ಕರಿಸುತ್ತವೆ. ಹಾಗಾಗಿ ಜಗತ್ತಿನ ೩ ಲಕ್ಷ ಹೂಬಿಡುವ ಸಸ್ಯ ಜಾತಿಯಲ್ಲಿ ಕೇವಲ 10% ಸಸ್ಯಗಳು ಈ ದುರ್ಗಮ ಹಾದಿಯಲ್ಲಿ ತೊಡಗುತ್ತವೆ.

        ಸ್ವಲ್ಪ ಬಯಾಲಜಿ

ಇಷ್ಟೆಲ್ಲಾ ಕಷ್ಟವಾದರೂ ಕೆಲ ಸಸ್ಯಗಳು ನೀಲಿ ಹೂವನ್ನು ಹೊಂದಲು ಬಯಸುವುದೇಕೆ. ಕಾರಣ ಪರಾಗಸ್ಪರ್ಷದ ಅನುಕೂಲತೆ. ಜೇನುಹುಳುಗಳು ಮತ್ತು ಪರಾಗಸ್ಷರ್ಷ ಮಾಡುವ ಇತರೇ ಕೀಟಗಳಿಗೆ ನೀಲಿ ಬಣ್ಣ ಹೆಚ್ಚು ಆಕರ್ಷವಾಗಿ ಕಾಣುವುದನ್ನು ದಾಖಲಿಸಲಾಗಿದೆ.

ನಾವು ಬಣ್ಣವನ್ನು ಗುರುತಿಸಲು ಸಾಧ್ಯವಾಗಿರುವುದು ನಮ್ಮ ಕಣ್ಣುಗಳ ರೆಟಿನಾದಲ್ಲಿರುವ ವರ್ಣ ಸಂವೇದೀ 'ರಾಡ್ಸ್' ಮತ್ತು 'ಕೋನ್ಸ್' ಜೀವಕೋಶಗಳಿಂದ. ಕೆಂಪು, ನೀಲಿ, ಹಸಿರು ತರಂಗಗಳನ್ನು ಸ್ವೀಕರಿಸುವ ಈ ಜೀವಕೋಶಗಳು ಅದನ್ನು ಸಂಕೇತಗಳನ್ನಾಗಿಸಿ ಮೆದುಳಿಗೆ ತಲುಪಿಸಿದ ಮೇಲೆ ಬಣ್ಣಗಳು ಗೋಚರವಾಗುತ್ತವೆ. ಕೀಟಗಳು ಪಕ್ಷಿಗಳಿಗೆ ಈ ತರಂಗಗಳ ಜೊತೆ 'ಅತಿನೇರಳೆ' ಕಿರಣಗಳನ್ನು ಸಂವೇದಿಸುವ ಜೀವಕೋಶಗಳೂ ಇರುತ್ತವೆ. ಹಾಗಾಗಿ ನಮಗಿಂತ ಅವು ನೀಲಿ ಬಣ್ಣಗಳಿಗೆ ಹೆಚ್ಚು ಸಂವೇದಿಯಾಗಿರುತ್ತವೆ. ಇದೇ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೆಲ ಸಸ್ಯಗಳು ನೀಲಿ ಹೂವನ್ನು ಹೊಂದಲು ವಿಕಸನವಾಗಿವೆ.

        ಸ್ವಲ್ಪ ಆರ್ಟ್ಸ್

'ನೀಲಿ' ಎಂಬ ಪದ ನಿಘಂಟು ಸೇರಿದ್ದು ತುಂಬಾ ತಡವಾಗಿ; ಕಪ್ಪು, ಬಿಳಿ, ಕೆಂಪು ಇತರೆ ಮೂಲ ಬಣ್ಣಗಳು ಪರಿಚಯವಾದ ಆಮೇಲಷ್ಟೇ. ವಿಜ್ಞಾನಿಗಳ ಪ್ರಕಾರ ಇದಕ್ಕೆ ಕಾರಣ ಪ್ರಕೃತಿಯಲ್ಲಿ ನೀಲಿ ಬಣ್ಣದ ಕೊರತೆ. ಒಂದು ಸಿದ್ಧಾಂತದಂತೆ ನಮ್ಮ ಪೂರ್ವಜರು ಬಣ್ಣವನ್ನು ಬಣ್ಣಿಸಿದ್ದು ಅದನ್ನು ನೈಸರ್ಗಿಕವಾಗಿ ಪ್ರತ್ಯೇಕಿಸಿ ಬಟ್ಟೆಗಳಿಗೆ, ಕಾಗದಗಳಿಗೆ ರಂಗು ಹಾಕುವ ಯಶಸ್ವಿ ಪ್ರಯೋಗದ ನಂತರ. ಸಿಲಿಕಾ, ಕ್ಯಾಲ್ಶಿಯಂ ಆಕ್ಸೆöÊಡ್ ಮತ್ತು ಕಾಪರ್ ಆಕ್ಸೈಡ್ ಮಿಶ್ರಣ ಮಾಡಿ ಪ್ರತಿಮೆಗಳನ್ನು ಅಲಂಕರಿಸಲು ‘ಇರ್ತ್ಯು’ ಎನ್ನುವ ಪದಾರ್ಥವನ್ನು ಆರು ಸಾವಿರ ವರ್ಷಗಳ ಹಿಂದೆ ಕಂಡುಹಿಡಿದ ಶ್ರೇಯಸ್ಸು ಸಲ್ಲುವುದು ಈಜಿಪ್ಶಿಯನ್ನರಿಗೆ. ಕೃತಕ (ಸಿಂಥೆಟಿಕ್) ನೀಲಿ ವರ್ಣಗಳು ಸಂಶೋಧನೆಯಾಗಿದ್ದು ತೀರಾ ಇತ್ತೀಚೆಗೆ.

"ನೀಲಿ ಬಣ್ಣದ ವಿರಳತೆ ಅದನ್ನೊಂದು ವೈಭವಯುತ ಸ್ಥಾನಕ್ಕೇರಿಸಿ ಅಗತ್ಯಕ್ಕಿಂತ ಹೆಚ್ಚು ಮೋಡಿ ಮಾಡಿರಲೂ ಸಾಕು (ರಾಯಲ್ ಬ್ಲೂ ನೆನಪಿಸಿಕೊಳ್ಳಿ). ಕೃಷ್ಣನನ್ನು ನೀಲ ಮೇಘ ಶ್ಯಾಮನಾಗಿ ಕಾಣಲು ನೀಲಿಯ ಅಪೂರ್ವತೆಯೇ ಪ್ರೇರೇಪಿಸಿರಬಹುದು. ಜೊತೆಗೆ ಮೈಕಲೆಂಜಲೋ, ಪಿಕಾಸೊ, ವ್ಯಾನ್ ಗಾಗ್ ನಂತ ಪ್ರಸಿದ್ಧ ಕಲಾವಿದರ ವರ್ಣಚಿತ್ರಗಳಲ್ಲಿ ನೀಲಿ ಉದ್ದೇಶಿತವಾಗಿಯೇ ಇಣುಕಿರಬೇಕು” ಎಂದು ಅಧ್ಯಯನಗಳು ಹೇಳುತ್ತವೆ.

ಕೃಪೆ: ಲೈವ್ ಸೈನ್ಸ್



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ