ಪ್ರಕೃತಿಗೂ ಕಾನೂನು ಹಕ್ಕಿರಲಿ

 


ಅದೊಂದು ನದೀ ಪಾತ್ರ; ‘ಮನು’ ಎಂದಿನಂತೆ ತನ್ನ ಧಾರ್ಮಿಕ ವಿಧಿಗಳನ್ನು ಆಚರಿಸುತ್ತಿದ್ದ ಸಮಯ; ಪುಟ್ಟ ಮೀನೊಂದು ಬಳಿ ಬಂದು ದೊಡ್ಡ ದೊಡ್ಡ ಮೀನುಗಳಿಂದ ತನಗೆದುರಾದ ಜೀವ ಭಯದ ಬಗ್ಗೆ ಮನವಿ ಮಾಡಲು ಮರುಗಿದ ಮನು ಅದನ್ನು ಪಾತ್ರೆಯಲ್ಲಿಟ್ಟು ಬೆಳೆಸುವ ಭರವಸೆಯಿತ್ತ. ದಿನದಿಂದ ದಿನಕ್ಕೆ ಬೃಹತ್ತಾಗಿ ಬೆಳೆದ ಮೀನು ನದಿ ಸೇರುವ ಮುನ್ನ ಪ್ರಳಯವೊಂದರ ಮುನ್ಸೂಚನೆ ನೀಡಿ ದೊಡ್ಡದೊಂದು ನೌಕೆ ಕಟ್ಟಿ ತಯಾರಿರುವಂತೆ ಮನುವಿಗೆ ಸೂಚನೆ ನೀಡಿತು. ಅದರಂತೆ ಇಡೀ ಭೂಮಿಯನ್ನೇ ನುಂಗಿದ ಬೃಹತ್ ಪ್ರಳಯದಲ್ಲಿ ಮನು ಸಪ್ತರ್ಷಿಗಳು, ಜೀವ ಜಂತುಗಳು, ಧಾನ್ಯ ಬೀಜ ತುಂಬಿದ ನೌಕೆಯನ್ನು ಮೀನಿನ ಮೂತಿಗೆ ಸಿಕ್ಕಿಸಿ ಸುರಕ್ಷಿತ ಸ್ಥಳವೊಂದಕ್ಕೆ ಪ್ರಯಾಣ ಬೆಳೆಸಿದ. ಇದೇ ವಿಷ್ಣುವಿನ ದಶಾವತಾರಗಳಲ್ಲಿ ಮೊದಲ ಮತ್ಸಾö್ಯವತಾರ; ಮನುವಿನ ಜನಾಂಗವೇ ಮಾನವರಾದ ನಾವು ಎಂದು ಅಜ್ಜಿ ಕಥೆ ಹೇಳುವಾಗ ಕಣ್ಣು ಬಾಯಿ ಬಿಟ್ಟು ಕೇಳುತ್ತಿದ್ದೆವು.

ಈಗ ಡೈನೋಸಾರ್‌ಗಳ ಅಳಿವಿನ ನಂತರದ ಆರನೇ ಸಾಮೂಹಿಕ ಪ್ರಕೃತಿಯ ಅಳಿವಿನ ಮಧ್ಯದಲ್ಲಿ ನಾವಿದ್ದೇವೆ. ಮಾನವ ಹಸ್ತಕ್ಷೇಪದಿಂದ ದಿನಕ್ಕೆ ಸರಾಸರಿ ನೂರು ಸ್ಪೀಶೀಸ್‌ಗಳು ಅಳಿಯುತ್ತಿವೆ. ಕಳೆದೆರಡು ಶತಮಾನದಲ್ಲಿ ನಮಗೆ ತಿಳಿದಿರುವ ಐವತ್ತೈದು ಕಶೇರುಕ ಜೀವಿ ಕುಲಗಳು(ಜೀನಸ್) ಆರು ನೂರು ಸಸ್ಯ ಜಾತಿಗಳು(ಸ್ಪೀಶಿಸ್) ಅಳಿದುಹೋಗಿವೆ. ಬರೀ ಇನ್ನೂರು ವರ್ಷಗಳಲ್ಲಿ ಇಷ್ಟೆಲ್ಲಾ ಜೀವವೈವಿಧ್ಯತೆಯ ನಷ್ಟ ಅಪಾಯಕಾರಿಯಾಗಿದೆ. ಕದನಗಳು ಅಣ್ವಸ್ತ್ರಗಳು ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ. ನೈಸರ್ಗಿಕ ಅಳಿವಿಗಿಂತಲೂ ಸಾವಿರಾರು ಪಟ್ಟು ವೇಗವಾಗಿ ನಡೆಯುತ್ತಿರುವ ಈ ಪ್ರಕ್ರಿಯೆ ಮತ್ತೊಂದು ಪ್ರಳಯದ ಮುನ್ಸೂಚನೆಯೇ ಆಗಿದೆ ಎಂದು ವಿಜ್ಞಾನಿಗಳು ಎಚ್ಚರಿಸುವಾಗ ಈ ಕಥೆಯೇ ಮತ್ತೆ ಕಣ್ಣಿಗೆ ಕಟ್ಟುತ್ತದೆ. ಭಗವಂತ ಯಾವುದೋ ರೂಪದಲ್ಲಿ ಎಚ್ಚರಿಕೆ ನೀಡುತ್ತಿರಬಹುದೇ, ನಮ್ಮಂತ ಇತರೇ ಜೀವಿಗಳನ್ನು ಸಲಹುವ ಅವಶ್ಯಕತೆ ನಿರ್ಮಾಣವಾಗಿದೆಯೇ, ಬೃಹತ್ ಪ್ರಳಯ ಸನಿಹವೇ ಇದೆಯೇ, ನಾವೂ ಮನುವಿನಂತೆ ಬಿಡಾರ ಕಟ್ಟುವ ಕಾಲ ಬರುವುದೇ ಎಂಬ ಹುಚ್ಚು ಯೋಚನೆಗಳು ಸುಳಿದಾಡುತ್ತವೆ.

ಮೀನೊಂದು ತನ್ನ ಬದುಕಿಗೆ ಅನುವು ಮಾಡಿ ಕೊಡಲು ಕೇಳುವಾಗ ಅವುಗಳಿಗೂ ಜೀವಿಸುವ ಹಕ್ಕಿದೆಯೆಂದು ಅನ್ನಿಸುವುದಿಲ್ಲವೇ; ಮುಂದೊಂದು ದಿನ ಮನು ಅದೇ ಮೀನಿನಿಂದ ರಕ್ಷಿಸಲ್ಪಟ್ಟಾಗ ಇತರೇ ಜೀವಿಗಳ ಮೇಲೆ ಮಾನವನ ಅವಲಂಬನೆ ಕಾಣಿಸುವುದಿಲ್ಲವೇ; ಹಾಗಾದರೆ ಎಲ್ಲ ಜೀವ ಕುಲಗಳು ಬದುಕುವ ಪ್ರಕೃತಿಯನ್ನು ಮನುವಿನಂತೆ ಕಾಪಾಡುವುದು ನಮ್ಮ ಜವಾಬ್ದಾರಿಯಲ್ಲವೇ!? ಇದೇ ಕಲ್ಪನೆ ಇಂದು ಜೀವ ಸಂಕುಲ, ಕಾಡು-ತೊರೆಗಳ ಹಕ್ಕು “ರೈಟ್ಸ್ ಆಫ್ ನೇಚರ್” ಎಂಬ ವಿಶಿಷ್ಟ ಅಭಿಯಾನವಾಗಿ ಪ್ರಚಲಿತದಲ್ಲಿದೆ.

ಗಮನಿಸಿ, ನಮ್ಮಲ್ಲಿರುವ ಕಾನೂನುಗಳೆಲ್ಲ ಎಷ್ಟೊಂದು ಮಾನವ ಕೇಂದ್ರಿತ. ಪ್ರಕೃತಿ ನಮ್ಮ ಆಸೆ ಅಗತ್ಯಗಳನ್ನು ಪೂರೈಸಲು ಇರುವ ಸರಕೆಂದೇ ನಾವು ಭಾವಿಸುತ್ತೇವೆ. ಪರಿಸರ ಸಂಬAಧಿಸಿದ ಕಾನೂನುಗಳೂ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಿಸಿದಂತವು. ಇಂದಿಗೂ ಜಾಗತಿಕ ಸಮಾವೇಶಗಳಲ್ಲಿ ಕೈಗೊಳ್ಳುವ ನಿರ್ಧಾರ ಮಾನವನನ್ನೇ ಮಧ್ಯದಲ್ಲಿರಿಸಿ ಅದರ ಸುತ್ತ ಹೆಣೆದಿರುವಂತವುಗಳು. ಹಾಗಾಗಿ ನಮ್ಮ ಪ್ರಕೃತಿಯನ್ನು ಯಾವ ಕಾನೂನೂ ರಕ್ಷಿಸಲಾಗದ ಸ್ಥಿತಿ ತಲುಪಿದ್ದೇವೆ. ನಮ್ಮಂತೆ ಅವುಗಳಿಗೂ ಸ್ವಚ್ಛ ಗಾಳಿ ನೀರು ಆಹಾರದ ಅವಶ್ಯಕತೆಯಿದೆ; ಇಲ್ಲವಾದಲ್ಲಿ ನಮ್ಮಂತೇ ಅವು ಸಾಯುತ್ತವೆ. ಹಾಗಾದಲ್ಲಿ ಮಾನವನ ಹಕ್ಕುಗಳಂತೆ ಪ್ರಕೃತಿಗೂ ಅದರ ಹಕ್ಕುಗಳನ್ನು ಕೊಡಮಾಡಿದರೆ!?

ಪ್ರಕೃತಿಗೊಂದು ವ್ಯಕ್ತಿಯ ಸ್ಥಾನ ನೀಡಿ ನ್ಯಾಯಾಲಯದಲ್ಲಿ ತನಗಾದ ಹಾನಿಯ ವಿರುದ್ಧ ವಾದಿಸುವ ಹಕ್ಕನ್ನು ರೈಟ್ಸ್ ಆಫ್ ನೇಚರ್ ಕಾನೂನು ನೀಡಬಲ್ಲದು. ಇಕ್ವೆಡರ್, ಬೊಲಿವಿಯಾ ಹೀಗೆ ಕನಿಷ್ಟ ನಲವತ್ತು ದೇಶಗಳ ಕಾನೂನಿನಲ್ಲಿ ಪ್ರಕೃತಿಯ ಹಕ್ಕುಗಳನ್ನು ಸೇರಿಸಲಾಗಿದೆ. ಭಾರತದಲ್ಲೂ ಅಲ್ಲಲ್ಲಿ ಈ ತರಹದ ಪ್ರಕರಣಗಳು ದಾಖಲಾಗುತ್ತಿವೆ. 2017ರಲ್ಲಿ ಉತ್ತರಾಖಂಡ ಹೈಕೋರ್ಟ್ ಗಂಗಾ-ಯಮುನಾ ನದಿಗಳಿಗೆ ಕಾನೂನುಬದ್ಧವಾಗಿ ವ್ಯಕ್ತಿಯ ಸ್ಥಾನಮಾನ ಘೋಷಿಸಿತ್ತು. 2022ರಲ್ಲಿ ಮದ್ರಾಸ್ ಹೈಕೋರ್ಟ್ ಪ್ರಕೃತಿ ಮಾತೆಯ ಹಕ್ಕುಗಳನ್ನು ಎತ್ತಿ ಹಿಡಿದಿತ್ತು. ನಮ್ಮ ಸುತ್ತಲ ನದಿ-ಕೆರೆ-ಕಾಡುಗಳನ್ನೂ ಕಾನೂನಾತ್ಮಕವಾಗಿ ಹೀಗೆ ರಕ್ಷಿಸುವಂತಿದ್ದರೆ ಎಷ್ಟೋ ಉಪಯುಕ್ತವಲ್ಲವೇ!?

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ