ಅಂಗಾಂಶ ಕೃಷಿ

 

ದಶಕದಿಂದ ಈಚೆಗೆ ತೋಟಗಾರರ ಗಮನ ಸೆಳೆದಿದ್ದುಟಿಶ್ಯು ಕಲ್ಚರ್’ ಅಥವಾಅಂಗಾಂಶ ಕೃಷಿ’ಯಿಂದ ಪಡೆದಂತಪ್ಲಾಂಟಿಂಗ್ ಮಟೀರಿಯಲ್’. ವಿಶೇಷವಾಗಿ ಬಾಳೆ ಬೆಳೆಗಾರರು ಅಂಗಾಂಶ ಕೃಷಿಯ ಸಸಿಗೆ ಹೆಚ್ಚಿನ ಆದ್ಯತೆ ಕೊಡುವುದನ್ನು ಗಮನಿಸಬಹುದು. ಇದರಿಂದಾಗುವ ಪ್ರಯೋಜನಗಳನ್ನು ಹಲವಾರು ತೋಟಗಾರರು ಅರಿತಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ. ನಿಜಕ್ಕೂ ಅಂಗಾಂಶ ಕೃಷಿ ಎಂದರೇನು, ವಿಧಾನದಲ್ಲಿ ಸಸಿಗಳನ್ನು ಪಡೆಯುವ ಪ್ರಕ್ರಿಯೆ, ತೋಟಗಾರಿಕಾ ಬೆಳೆಗಳಲ್ಲಿ ಇದರ ಅವಶ್ಯಕತೆ, ರೈತರಿಗಾಗುವ ಉಪಯೋಗಗಳ ಬಗ್ಗೆ ಚರ್ಚಿಸುವುದು ಲೇಖನದ ಉದ್ದೇಶ.

ವೈಜ್ಞಾನಿಕ ಹಿನ್ನೆಲೆ

ಸಸ್ಯದ ಜೀವಕೋಶಗಳಿಗೆ ಬೇಕಾದ ರೂಪ ತಾಳುವ, ಪುನರ್ಜನನದ ಸಾಮರ್ಥ್ಯವಿದೆ (ಆಂಗ್ಲ: ಟೋಟಿಪೊಟೆನ್ಸಿ); ನಿಯಂತ್ರಿತ ವಾತಾವರಣದಲ್ಲಿ ಸಣ್ಣ ಅಂಗಾಂಶದಿಂದ ಇಡೀ ಸಸ್ಯವನ್ನೇ ರೂಪಿಸಲು ಸಾಧ್ಯವಿದೆ ಎಂಬ ವೈಜ್ಞಾನಿಕ ಹಿನ್ನಲೆ ವಿವರಿಸಿದ್ದು ಜರ್ಮನ್ ವಿಜ್ಞಾನಿ 'ಹ್ಯಾಬರ್ಲಂಡ್' (1905). 20 ನೇ ಶತಮಾನದ ಮಧ್ಯ ಭಾಗದ ವರೆಗೂ ವಿಧಾನ ಕೇವಲ ಸಂಶೋಧನೆಗಷ್ಟೇ ಮೀಸಲಿತ್ತು.

ಕೃಷಿಯಲ್ಲಿ ಪ್ರಗತಿಯಾಗುತ್ತಿದ್ದಂತೆ ನರ್ಸರಿಗಳು ಶುರುವಾದವು. ಆದರೆ ಸಾಂಪ್ರದಾಯಿಕ ವಿಧಾನಗಳಿಂದ ಸಸ್ಯಾಭಿವೃದ್ಧಿ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಮಟ್ಟದಲ್ಲಿ ಸಸಿಗಳನ್ನು ಪೂರೈಸುವುದು ದುಸ್ತರವಾಗಿತ್ತು. ತೋಟಗಾರರ ಬೇಡಿಕೆ ಪೂರೈಸಲು ಕಷ್ಟವಾದಾಗ ಮುನ್ನೆಲೆಗೆ ಬಂದಿದ್ದು ಅಂಗಾಂಶ ಕೃಷಿ ವಿಧಾನ. 1950-60 ದಶಕದಲ್ಲಿ ತೀವ್ರ ಸಂಶೋಧನೆಯೊಂದಿಗೆ ವಿಧಾನ ಕೆಲವು ವಾಣಿಜ್ಯಿಕ ಬೆಳೆಗಳಲ್ಲಿ ರೂಢಿಗೆ ಬಂತು. 

ಅಂಗಾಂಶ ಕೃಷಿ ಎಂದರೇನು

ಅಂಗ ಎಂದರೆ ಎಲ್ಲರಿಗೂ ತಿಳಿದಿರುವಂತೆ ಹಲವಾರು ಜೀವಕೋಶಗಳಿಂದ ರೂಪಿತವಾದ, ನಿರ್ದಿಷ್ಟ ಕೆಲಸವನ್ನು ನಿರ್ವಹಿಸುವ ಶರೀರದ ಭಾಗ. ಸಸ್ಯದ ಶರೀರವನ್ನು ಪರಿಗಣಿಸಿದರೆ ಬೇರು, ಕಾಂಡ, ಎಲೆ, ಚಿಗುರು, ಹೂವು ಇತ್ಯಾದಿ ಅಂಗಗಳನ್ನು ಗುರುತಿಸಬಹುದು. ಅಂಗಗಳ ಸಣ್ಣದೊಂದು ತುಣುಕನ್ನು ಅಥವಾ ವೈಜ್ಞಾನಿಕವಾಗಿ 'ಅಂಗಾಂಶ'ವನ್ನು (ಆಂಗ್ಲ:ಟಿಶ್ಯು) ಬಳಸಿ ಪೂರ್ಣ ಪ್ರಬುದ್ಧ ಸಸ್ಯಗಳನ್ನು ಪಡೆಯುವ ಪ್ರಕ್ರಿಯೆಗೆ (ಆಂಗ್ಲ:ಕಲ್ಚರಿಂಗ್) ಅಂಗಾಂಶ ಕೃಷಿ (ಟಿಶ್ಯು ಕಲ್ಚರ್) ಎನ್ನಲಾಗುತ್ತದೆ. ಪೂರ್ತಿ ಪ್ರಕ್ರಿಯೆಯನ್ನು ಮಾಲಿನ್ಯ ರಹಿತ, ಸೂಕ್ಷ್ಮಾಣು ಜೀವಿ ಮುಕ್ತ, ಸ್ವಚ್ಚ (ಅಸೆಪ್ಟಿಕ್ ಕಂಡೀಷನ್) ವಾತಾವರಣದ ಪ್ರಯೋಗಾಲಯದಲ್ಲಿ ನಡೆಸಲಾಗುತ್ತದೆ.

ಅಂಗಾಂಶ ಕೃಷಿ ಮಾಡುವ ಪ್ರಯೋಗಾಲಯಗಳು ತಾಯಿ ಸಸ್ಯಗಳ ತೋಟವೊಂದನ್ನು (ಆಂಗ್ಲ:ಮದರ್ ಬ್ಲಾಕ್) ನಿರ್ಮಿಸಿಕೊಂಡಿರುತ್ತಾರೆ. ಪ್ರತಿ ಬಾರಿಯೂ ಇದೇ ಮದರ್ ಬ್ಲಾಕ್ ನಿಂದ ಅಂಗದ ತುಣುಕನ್ನು (ಆಂಗ್ಲ:ಎಕ್ಸ್ ಪ್ಲಾಂಟ್) ಸಂಗ್ರಹಿಸಲಾಗುತ್ತದೆ. ನಂತರ ಪ್ರಯೋಗಾಲಯದಲ್ಲಿ ಅವುಗಳನ್ನು ಘನ ರೂಪದ ಕೃತಕ ಪೋಷಕಾಂಶಗಳ ಮಾಧ್ಯಮದ (ಆಂಗ್ಲ: ಕಲ್ಚರ್ ಮೀಡಿಯಾ) ಮೇಲಿರಿಸಿ ಕಲ್ಚರ್ ಮಾಡಲಾಗುತ್ತದೆ. ಕಲ್ಚರ್ ಮಾಡಿದ ಅಂಗಾಂಶವನ್ನು ಬೆಳವಣಿಗೆ ಕೊಠಡಿಯಲ್ಲಿ (ಆಂಗ್ಲ: ಗ್ರೋತ್ ಚೆಂಬರ್) ಕೆಲ ಕಾಲವಿಟ್ಟು ಪೋಷಿಸಿ ನಂತರ ಹೊರಗಿನ ವಾತಾವರಣಕ್ಕೆ ಬಿಡಲಾಗುತ್ತದೆ (ಆಂಗ್ಲ:ಹಾರ್ಡನಿಂಗ್).

ಅಂಗಾಂಶ ಕೃಷಿಯಲ್ಲಿ ಹಲವಾರು ವಿಧಾನಗಳಿವೆ. ಕಲ್ಚರ್ ಮಾಡಲು ಬಳಸುವ 'ಎಕ್ಸ್ ಪ್ಲಾಂಟ್' ಆದರಿಸಿ ವಿವಿಧ ವಿಧಾನಗಳನ್ನು ಹೆಸರಿಸಬಹುದು.

·        ಮೆರಿಸ್ಟಮ್ ಕಲ್ಚರ್: ವಿಧಾನದಲ್ಲಿ ಸಸ್ಯದ ತುದಿ ಚಿಗುರನ್ನು ಅಥವಾ 'ಮೆರಿಸ್ಟಮ್' ಅನ್ನು ಎಕ್ಸ್ ಪ್ಲಾಂಟ್ ಆಗಿ ಬಳಸಿ ಕಲ್ಚರಿಂಗ್ ಮಾಡಲಾಗುತ್ತದೆ. ಬಾಳೆಯಲ್ಲಿ ವಿಧಾನ ಹೆಚ್ಚು ಪ್ರಚಲಿತ. ಬಾಳೆಯ ಗಡ್ಡೆಯ ಬುಡದಲ್ಲಿ ಹೊಸ ಎಲೆ ಹೊರಡುವ (ಇದು ದಿಂಡಿನಲ್ಲಿ ಹುದುಗಿಹೋಗಿರುತ್ತದೆ) ಮೆರಿಸ್ಟಮ್ ಭಾಗವನ್ನು ಪ್ರತ್ಯೇಕಿಸಿ ಕಲ್ಚರ್ ಮಾಡಲಾಗುತ್ತದೆ.

·        ನೋಡಲ್ ಕಲ್ಚರ್: ವಿಧಾನದಲ್ಲಿ ಸಸ್ಯದ ಚಿಗುರನ್ನು ಅನ್ನು ಎಕ್ಸ್ ಪ್ಲಾಂಟ್ ಆಗಿ ಬಳಸಿ ಎರಡು- ಮೂರು ಗೆಣ್ಣುಗಳು ಅಥವಾ ನೋಡ್ ಸಮೇತ ಕಲ್ಚರ್ ಮಾಡಲಾಗುತ್ತದೆ. ದಾಳಿಂಬೆಯಲ್ಲಿ ವಿಧಾನ ಹೆಚ್ಚು ಪ್ರಚಲಿತ.

·        ಕ್ಯಾಲಸ್ ಕಲ್ಚರ್ : ಈ ವಿಧಾನದಲ್ಲಿ ಎಲೆ, ಬೇರಿನ ತುಣುಕು ಇತ್ಯಾದಿ ಎಕ್ಸ್ ಪ್ಲಾಂಟ್ ಅನ್ನು ಮೊದಲು ಜೀವಕೋಶದ ಮುದ್ದೆಯನ್ನಾಗಿಸಿ (ಕ್ಯಾಲಸ್) ನಂತರ ಸಸ್ಯ ಪ್ರಚೋದಕಗಳ ಸಹಾಯದಿಂದ ವಿವಿಧ ಅಂಗಾಂಗಳನ್ನು (ಬೇರು-ಕಾಂಡ) ಪಡೆಯಲಾಗುತ್ತದೆ.

·        ಎಂಬ್ರಿಯೋ ಕಲ್ಚರ್ (ಸಸ್ಯದ ಭ್ರೂಣದಿಂದ), ಪೋಲನ್ ಕಲ್ಚರ್ (ಸಸ್ಯದ ಪರಾಗದಿಂದ), ಓವರಿ ಕಲ್ಚರ್ (ಸಸ್ಯದ ಅಂಡಾಂಶದಿಂದ), ಸೀಡ್ ಕಲ್ಚರ್ (ಬೀಜದಿಂದ) ಹೀಗೆ ಹತ್ತು ಹಲವು ವಿಧಾನಗಳಿದ್ದು ಇವೆಲ್ಲಾ ಸದ್ಯಕ್ಕೆ ಸಂಶೋಧನೆಗೆ ಉಪಯುಕ್ತವಾಗಿವೆ. ಮುಂದೊಂದು ದಿನ ವಾಣಿಜ್ಯಕವಾಗಿ ಬಳಕೆಗೆ ಬಂದರೂ ಆಶ್ಚರ್ಯವಿಲ್ಲ.

ಕೃತಕ ಮಾಧ್ಯಮ/ಮೀಡಿಯಾ

ಅಂಗಾಂಶ ಕೃಷಿಯಲ್ಲಿ ಬಳಕೆ ಮಾಡುವ ಮೀಡಿಯಾ ಬಹಳ ವಿಶೇಷವಾದದ್ದು. ಕಲ್ಚರ್ ಮಾಡುವ ಸಸ್ಯ ಬೆಳವಣಿಗೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಮೀಡಿಯಾ ತಯಾರಿಕೆ ಅಂಗಾಂಶ ಕೃಷಿಯ ಮೊದಲನೇ ನಿರ್ಣಾಯಕ ಹಂತ ವಾಗಿದೆ.

ಪ್ರಮುಖ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟಾಷ್; ಲಘು ಪೋಷಕಾಂಶಗಳಾದ ಕ್ಯಾಲ್ಶಿಯಂ, ಮಾಗ್ನೇಷಿಯಂ, ಸಲ್ಫರ್, ಕಬ್ಬಿಣ, ಸತು, ಬೋರಾನ್, ಅಯೋಡಿನ್, ಕ್ಲೋರಿನ್, ಕೋಬಾಲ್ಟ್, ತಾಮ್ರ, ಮೊಲಿಬ್ಡಿನಂ; ವಿಟಮಿನ್ ಬಿ, ಸಿ ಮುಂತಾದ ಜೀವಸತ್ವಗಳು; ಅಡಿನೈನ್, ಕೇಸಿನ್ ಮುಂತಾದ ಅಮೈನೋ ಆಮ್ಲಗಳು; ಗ್ಲುಕೋಸ್, ಸುಕ್ರೋಸ್ ನಂತ ಕಾರ್ಬೋಹೈಡ್ರೇಟ್ ಗಳು; ಆಕ್ಸಿನ್, ಸೈಟೋಕೈನಿನ್ ಮುಂತಾದ ಸಸ್ಯಪ್ರಚೋದಕಗಳು; ಒಟ್ಟಿನಲ್ಲಿ ಸಸ್ಯಗಳ ಬೆಳವಣಿಗೆಗೆ ಬೇಕಾದ ಎಲ್ಲ ಅಂಶಗಳನ್ನು ಈ ಮೀಡಿಯಾದಲ್ಲಿ ಸೇರಿಸಲಾಗುತ್ತದೆ. ಎಲ್ಲವನ್ನು ಪ್ರಮಾಣಬದ್ಧವಾಗಿ ತುಂಬಾ ಕಟ್ಟುನಿಟ್ಟಾಗಿ ಗ್ರಾಮ್-ಗ್ರಾಮ್ ಲೆಕ್ಕದಲ್ಲಿ ಅಳೆದು ತೂಗಿ ಡಿಸ್ಡಿಲ್ ನೀರಿನಲ್ಲಿ ಕರಗಿಸಿ ದ್ರವರೂಪದ ಮೀಡಿಯಾ ತಯಾರಿಸಲಾಗುತ್ತದೆ. ಇದರ ರಸಸಾರವನ್ನೂ ಸರಿದೂಗಿಸುವುದು ಕಡ್ಡಾಯ. ಮೀಡಿಯಾ ಘನ ರೂಪ ಹೊಂದಲು ಜೆಲ್ಲಿಂಗ್ ಏಜೆಂಟ್ (ಸಾಮಾನ್ಯವಾಗಿ ಅಗರ್) ಅನ್ನೂ ಸೇರಿಸಲಾಗುತದೆ. ಹೀಗೆ ತಯಾರಿಸಿದ ಮೀಡಿಯಾವನ್ನು ಸೋಂಕು ರಹಿತ ಗಾಜಿನ ಜಾಡಿ, ಟೆಸ್ಟ್ ಟ್ಯುಬ್ ಅಥವಾ ಗಾಜಿನ ತಟ್ಟೆ/ ಪೆಟ್ರಿ ಡಿಶ್ ನಲ್ಲಿ ಸುರಿಯಾಲಾಗುತ್ತದೆ. ಈ ಮಿಡೀಯಾ 'ಆಟೋಕ್ಲೇವ್' ನ ನಂತರ ಬಳಕೆಗೆ ಸಿದ್ಧವಾಗುತ್ತದೆ.  ಪ್ರತಿ ಬೆಳೆಗಳ ಕಲ್ಚರಿಂಗ್ ಗೂ ಈ ರಾಸಾಯನಿಕಗಳ ಪ್ರಮಾಣ ಬದಲಾಗುತ್ತದೆ.

ಮೆರಿಸ್ಟಮ್ ಕಲ್ಚರ್ ಪ್ರಕ್ರಿಯೆಯಲ್ಲಿನ ಹಂತಗಳು - ವಿವರವಾಗಿ

. 'ಎಕ್ಸ್ ಪ್ಲಾಂಟ್' ಆಯ್ಕೆ

ಕಲ್ಚರ್ ಗಾಗಿ ಬಳಸುವ ಸಸ್ಯದ ಅಂಗಾಂಶವನ್ನು 'ಎಕ್ಸ್ ಪ್ಲಾಂಟ್' ಎಂದು ಕರೆಯಲಾಗುತ್ತದೆ. ಸಸ್ಯದ ಯಾವುದೇ ಭಾಗ ಎಕ್ಸ್ ಪ್ಲಾಂಟ್ ಆಗಿ ಬಳಕೆಯಾಗಬಲ್ಲದು. ಸಾಮಾನ್ಯವಾಗಿ ಸಕ್ರಿಯ ಬೆಳವಣಿಗೆ ಹೊಂದುತ್ತಿರುವ, ಜೀವಕೋಶದ ವಿಭಜನೆ ತೀವ್ರವಾಗಿ ಸಾಗುತ್ತಿರುವ ಸಸ್ಯದ ಅಂಗವನ್ನು ಎಕ್ಸ್ ಪ್ಲಾಂಟ್ ಆಗಿ ಆಯ್ಕೆ ಮಾಡಲಾಗುತ್ತದೆ. ಉದಾಹರಣೆ ಕಾಂಡದ ಚಿಗುರು/ತುದಿ (ಆಂಗ್ಲ:ಮೆರಿಸ್ಟೆಮ್), ಗೆಣ್ಣು (ಆಂಗ್ಲ: ನೋಡ್) ಇತ್ಯಾದಿ.

ಪ್ರತಿ ಬೆಳೆಗೂ ಬಳಕೆ ಮಾಡುವ ಎಕ್ಸ್ ಪ್ಲಾಂಟ್, ಕಲ್ಚರ್ ಪ್ರಕ್ರಿಯೆ ಬೇರೆ ಬೇರೆಯಾಗಿರುತ್ತದೆ. ಸಂಶೋದಕರ ತುಂಬಾ ಸಮಯದ ಪ್ರಯೋಗ, ವ್ಯರ್ಥ ಪುನರ್ ಪ್ರಯತ್ನಗಳ ನಂತರ ಬೆಳೆ, ಪ್ರದೇಶ, ಇತ್ಯಾದಿ ಅಂಶಗಳನ್ನು ಪರಿಗಣಿಸಿ ಪ್ರಕ್ರಿಯೆ ಹಂತವನ್ನು, ಪ್ರತಿ ರಾಸಾಯನಿಕದ ಬಳಕೆ ಪ್ರಮಾಣವನ್ನು ನಿಗದಿಪಡಿಸುತ್ತಾರೆ (ಆಂಗ್ಲ:ಪ್ರೋಟೋಕಾಲ್). ಹೀಗೆ ಒಮ್ಮೆ ಅಭಿವೃದ್ಧಿ ಪಡಿಸಿದ ಪ್ರೋಟೋಕಾಲ್ ಪ್ರಕಾರ ಪ್ರತಿ ಸಲವೂ ಇದೇ ಪದ್ಧತಿಯಲ್ಲಿ ಕಲ್ಚರಿಂಗ್ ನಡೆಸಲಾಗುತ್ತದೆ.

ಅಂಗಾಂಶ ಕೃಷಿಯಲ್ಲಿ ರೋಗರಹಿತ ಎಕ್ಸ್ ಪ್ಲಾಂಟ್ ಸಂಗ್ರಹ ಎರಡನೇ ನಿರ್ಣಾಯಕ ಹಂತ. ಎಕ್ಸ್ ಪ್ಲಾಂಟ್ ಆಯ್ಕೆಯ ನಂತರದ ಹಂತಗಳು ಪ್ರಯೋಗಾಲಯದ ನಿರ್ಬಂಧಿತ ಮಲಿನ ರಹಿತ ಒಳಾಂಗಣದಲ್ಲಿ ನಡೆಯುತ್ತದೆ. ಅಂಗಾಂಶ ಕೃಷಿಯಲ್ಲಿ ತಯಾರಾಗುವ ನಾಜೂಕು ಸಸ್ಯಗಳಿಗೆ ಸೋಂಕು ತಾಗಬಾರದೆಂಬ ಕಾರಣಕ್ಕೆ ಕಟ್ಟೆಚ್ಚರ. ಇವಕ್ಕೆಲ್ಲಾ ನುರಿತ ಲ್ಯಾಬ್ ಸಹಾಯಕರ ಅಗತ್ಯವಿದ್ದು ಅವರೂ ತಮ್ಮ ವೈಯಕ್ತಿಕ ಸ್ವಚ್ಛತೆಯ ಕಡೆಗೂ ಕಾಳಜಿ ವಹಿಸಬೇಕಾಗುತ್ತದೆ. ನಮ್ಮ ದೇಹ, ಉಸಿರು, ಕೈಗಳಿಂದ ಹರಡುವ ಸೋಂಕನ್ನು ತಡೆಯುವುದು ಇದರ ಉದ್ದೇಶ.  ನೀರು ಕೂಡ ನಲ್ಲಿ ನೀರನ್ನು ಬಳಸುವಂತಿಲ್ಲ. ಎಲ್ಲ ಕೆಲಸಗಳಿಗೆ ಡಿಸ್ಟಿಲ್ಟ್ ನೀರನ್ನೇ ಬಳಸಬೇಕಾಗುತ್ತದೆ.

. ಕಲ್ಚರ್ ಆರಂಭ

ಇಲ್ಲಿಂದ ಮುಂದೆ ನಡೆವ ಎಲ್ಲಾ ಕ್ರಿಯೆ ಲ್ಯಾಬ್ ಒಳಗೆ ಸಾರ್ವಜನಿಕರಿಗೆ ನಿರ್ಬಂಧಿತ ಪ್ರದೇಶದಲ್ಲಿ ನಡೆಯುತ್ತದೆ. ಆಯ್ಕೆಯಾದ ಎಕ್ಸ್ ಪ್ಲಾಂಟ್ ಅನ್ನು ಕಲ್ಚರ್ ಮಾಡಬಲ್ಲ ಒಂದರಿಂದ-ಎರಡು ಇಂಚು ಗಾತ್ರಕ್ಕೆ ಕತ್ತರಿಸಲಾಗುತ್ತದೆ. ನಂತರ ಹೊರಮೈ ಅನ್ನು  ಮಣ್ಣು, ಧೂಳು, ಕ್ರಿಮಿ, ಸೂಕ್ಷ್ಮಾಣು, ಸೋಂಕು ಮುಕ್ತ ಗೊಳಿಸಲು ವಿವಿಧ ರಾಸಾಯನಿಕ (ಎಥೆನಾಲ್, ಹೈಡ್ರೋಜನ್ ಪೆರಾಕ್ಸೆಡ್, ಸೋಡಿಯಂ ಹೈಪೋಕ್ಲೋರೈಟ್) ಗಳಿಂದ, ಹಾಗೂ ಡಿಸ್ಟಿಲ್ಡ್ ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ. ಪ್ರಕ್ರಿಯೆಯನ್ನು 'ಸ್ಟೆರಿಲೈಜೇಶನ್' ಎಂದು ಕರೆಯಲಾಗುತ್ತದೆ. ಹೀಗೆ ಸ್ಟೆರಿಲೈಜ್ ಆದ ಎಕ್ಸ್ ಪ್ಲಾಂಟ್ ಅನ್ನು ಮೊದಲೇ ತಯಾರಿಸಿಕೊಂಡ ಕೃತಕ ಮೀಡಿಯಾದ ಮೇಲೆ ಇರಿಸಲಾಗುತ್ತದೆ. ಎಕ್ಸ್ ಪ್ಲಾಂಟ್ ಕಲ್ಚರಿಂಗ್ ಅಂಗಾಂಶ ಕೃಷಿಯ ಮೂರನೇ ನಿರ್ಣಾಯಕ ಹಂತ.

ಹೀಗೆ ಆರಂಭಿಸಿದ ಕಲ್ಚರ್ ಅನ್ನು ಕೆಲ ದಿನಗಳ ಕಾಲ ಬೆಳವಣಿಗೆಗಾಗಿ ‘ಗ್ರೋತ್ ಚೆಂಬರ್’ನಲ್ಲಿ ಇರಿಸಲಾಗುತ್ತದೆ. ಇದೊಂದು ವಾತಾವರಣ ನಿಯಂತ್ರಿತ ಕೊಠಡಿಯಾಗಿದ್ದು ಆರ್ದ್ರತೆ, ಉಷ್ಣತೆ, ಮತ್ತು ಬೆಳಕು ನಿಯಮಿತ ಪ್ರಮಾಣದಲ್ಲಿ ಗಾಜಿನ ಜಾಡಿಯ ಸಸ್ಯಗಳಿಗೆ ಪೂರೈಕೆಯಾಗುತ್ತಿರುತ್ತದೆ. ಎಷ್ಟು ದಿನಗಳ ಕಾಲ ಇಡಬೇಕೆಂಬುದು ಬೆಳೆಗಳ ಮೇಲೆ ಅವಲಂಬಿತ. ಬಾಳೆಯಲ್ಲಿ ಸಾಮಾನ್ಯ 21 ದಿನಗಳ ಕಾಲ ಹೀಗೆ ಇರಿಸಲಾಗುತ್ತದೆ.

ಈ ಸಮಯದಲ್ಲಿ ಸಸ್ಯ ಬೇರು ಬಿಟ್ಟು ನಿಧಾನಕ್ಕೆ ಹೊಸ ಎಲೆಯನ್ನು ಹೊಂದಲಾರಂಭಿಸುತ್ತದೆ.

೩. ಮಲ್ಟಿಪ್ಲಿಕೇಶನ್ ಹಂತ

ಕೆಲ ದಿನಗಳ ನಂತರ ಬೆಳವಣಿಗೆ ಹೊಂದಿದ ಸಸ್ಯವನ್ನು ಮತ್ತೊಂದು ಬಾರಿಯ ಕಲ್ಚರಿಂಗ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ಬಾರಿ ಮೊದಲು ಕಲ್ಚರ್ ಮಾಡಿದ, ಬೆಳವಣಿಗೆ ಹೊಂದಿದ ಎಕ್ಸ್ ಪ್ಲಾಂಟ್ ಅನ್ನೇ ವಿಭಜಿಸಿ ಮೀಡಿಯಾದಲ್ಲಿರಿಸಿ ಮತ್ತೊಂದು ಕಲ್ಚರ್ ಗೆ ಬಳಸಲಾಗುತ್ತದೆ. ಮತ್ತೊಮ್ಮೆ ಗ್ರೋತ್ ಚೇಂಬರ್ ನಲ್ಲಿ ಕೆಲ ದಿನಗಳ ಕಾಲ ಇರಿಸಲಾಗುತ್ತದೆ. ಹೀಗೆ ಒಂದು ಸಸ್ಯ ಮತ್ತೆರಡಕ್ಕೆ ಜನ್ಮ ಕೊಡುತ್ತದೆ.

ಈ ಮಲ್ಟಿಪ್ಲಿಕೇಶನ್ ಪ್ರಕ್ರಿಯೆಯನ್ನು ಹಲವಾರು ಬಾರಿ ಪುನರಾವರ್ತಿಸಲಾಗುತ್ತದೆ. ಉದಾಹರಣೆ ಜಿ9 ಬಾಳೆಯಲ್ಲಿ ಏಳೆಂಟು ಬಾರಿ. ಹೀಗೆ ಕೆಲವೇ ಸಮಯದಲ್ಲಿ ತ್ವರಿತಗತಿಯಲ್ಲಿ ಸಸ್ಯಾಭಿವೃದ್ಧಿ ನಡೆಯುತ್ತದೆ. ಹೆಚ್ಚಿನ ಸೈಕಲ್ ಜೀನ್ ರೂಪಾಂತರಕ್ಕೆ (ಮ್ಯುಟೇಶನ್) ಕಾರಣವಾಗುವುದರಿಂದ ಈ ಸೈಕಲ್ ಅನ್ನು ನಿರ್ದಿಷ್ಟ ಸಂಖ್ಯೆಗೆ ಮಿತಿಗೊಳಿಸಲಾಗುತ್ತದೆ.

ಜಿ9 ಬಾಳೆಯಲ್ಲಿ ಒಂದು ಗಡ್ಡೆಯಿಂದ (ಮೆರಿಸ್ಟಮ್) ಶುರುವಾಗುವ ಕಲ್ಚರ್ ಏಳು ಸೈಕಲ್ ಗಳ ನಂತರ (ಆಸುಪಾಸು ಆರು ತಿಂಗಳು) ಪ್ರತಿ ಸೈಕಲ್ ನಲ್ಲಿ ದ್ವಿಗುಣಗೊಳ್ಳುತ್ತಾ ಮಲ್ಟಿಪ್ಲಿಕೇಶನ್ ಹಂತದ ಕೊನೆಯಲ್ಲಿ ಸುಮಾರು 128 ಗಿಡಗಳಿಗೆ ಜನ್ಮ ನೀಡಬಹುದು.. ಪ್ರಾಯೋಗಿಕವಾಗಿ ಈ ಸಂಖ್ಯೆಯನ್ನು ತಲುಪುವುದು ಅಸಾಧ್ಯ. ಎಷ್ಟೇ ಎಚ್ಚರದಿಂದ ಮಾಡಿದರೂ ಏನೋ ಒಂದು ದೋಷದಿಂದಾಗಿ ಕಲ್ಚರ್ ಬ್ಯಾಕ್ಟೀರಿಯಾ ಶಿಲೀಂಧ್ರ ಸೋಂಕಿಗೆ ತುತ್ತಾಗಿ ವಿವಿಧ ಹಂತದಲ್ಲಿ ಹಾಳಾಗುವ ಸಾಧ್ಯತೆಯಿರುತ್ತದೆ.  ಆದಾಗ್ಯೂ ತ್ವರಿತಗತಿಯಲ್ಲಿ ಮಲ್ಟಿಪ್ಲಿಕೇಶನ್ ಆಗುವ ಕಾರಣ ಗಡ್ಡೆಯೊಂದರಿಂದ ನೂರು ಸಸ್ಯವಾದರೂ ಸಿಕ್ಕೇ ಸಿಕ್ಕುತ್ತದೆ .

೪. ರೂಟಿಂಗ್-ಶೂಟಿಂಗ್ ಹಂತ

ಕೊನೆಯ ಮಲ್ಟಿಪ್ಲಿಕೇಶನ್ ಹಂತದಲ್ಲಿ ಬೆಳೆದ ಸಸ್ಯವನ್ನು ವಿಭಜಿಸಿ ಬೇರು-ಕಾಂಡ ರೂಪುಗೊಳ್ಳಲು ಕಲ್ಚರಿಂಗ್ ಮಾಡಲಾಗುತ್ತದೆ. ಆಕ್ಸಿನ್-ಸೈಟೋಕೈನಿನ್ ಸಸ್ಯಪ್ರಚೋದಕಗಳು ಹದವಾಗಿರುವ ಮೀಡಿಯಾದಲ್ಲಿ ಈ ಕಲ್ಚರಿಂಗ್ ನಡೆಯುತ್ತದೆ. ಹೀಗೆ ಕಲ್ಚರ್ ಮಾಡಿದ ಸಸ್ಯವನ್ನು ಮತ್ತೆ ಗ್ರೋತ್ ಚೇಂಬರ್ ನಲ್ಲಿ ಕೆಲ ದಿನಗಳ ಕಾಲ ಇಡಲಾಗುತ್ತದೆ. ಈ ಸಮಯದಲ್ಲಿ ಸಸ್ಯ ಚೆನ್ನಾಗಿ ಬೇರು ಬಿಟ್ಟು ಹೊಸ ಎಲೆಗಳನ್ನು ಹೊಂದುತ್ತದೆ. ರೂಟಿಂಗ್-ಶೂಟಿಂಗ್ ಹಂತದ ಕೊನೆಯಲ್ಲಿ ಹೊಸದಾದ ಆರೋಗ್ಯಕರ ಸಸಿಯೊಂದು ಗಾಜಿನ ಜಾಡಿಯಲ್ಲಿ ರೂಪುಗೊಂಡಿರುತ್ತದೆ. 

೫. ಹಾರ್ಡನಿಂಗ್ ಹಂತ

ಅಂಗಾಂಶ ಕೃಷಿಯ ಈ ಕೊನೆಯ ಹಂತದಲ್ಲಿ ಬೇರು ಬಿಟ್ಟ ಹೊಸ ಚಿಗುರಿನ ಸಸ್ಯಗಳನ್ನ ಮೀಡಿಯಾದಿಂದ ತೆಗೆದು ಮಣ್ಣು / ಸ್ಟೆರಿಲೈಜಡ್ ಕೋಕೋಪೀಟ್ ಗೆ ವರ್ಗಾವಣೆ ಮಾಡಲಾಗುತ್ತದೆ. ಹೀಗೆ ಒಳಾಂಗಣದ ನಿಯಂತ್ರಿತ ವಾತಾವರಣದ ಲ್ಯಾಬ್ ನಲ್ಲಿ ಪಡೆದ ಸಸ್ಯಗಳು ಹೊರಾಂಗಣದ ವಾತಾವರಣಕ್ಕೆ ಸೂಕ್ಷ್ಮ ಸಂವೇದಿಯಾಗಿರುತ್ತವೆ. ಹಾಗಾಗಿ ನಿಧಾನವಾಗಿ ಅವುಗಳನ್ನು ಹೊರಾಂಗಣಕ್ಕೆ ಒಡ್ಡಲಾಗುತ್ತದೆ. ಹೀಗೆ ಹಾರ್ಡನಿಂಗ್ ಮೂಲಕ ನಿಧಾನಕ್ಕೆ ಗಟ್ಟಿ ಜೀವಿಯಾಗುವ ಅಂಗಾಂಶ ಕೃಷಿಯಿಂದ ಪಡೆದ ಸಸ್ಯ ನಾಟಿ ಮಾಡಲು ಸಿದ್ಧವಾಗುತ್ತವೆ.

ಅಂಗಾಂಶ ಕೃಷಿಯ ಅನಿವಾರ್ಯತೆ-ಅವಶ್ಯಕತೆ-ಪ್ರಯೋಜನಗಳು

ಟಿಶ್ಯು ಕಲ್ಚರ್ ಕೃಷಿ ಸಂಶೋಧನೆಯಲ್ಲಿ ಅತ್ಯಂತ ಮಹತ್ವ ಪಾತ್ರ ಪಡೆದಿದೆ. ರೈತರಿಗಂತೂ ಪ್ರತ್ಯಕ್ಷವಾಗಿ ನಾಟಿ ಮಾಡಲು ಪ್ಲಾಂಟಿಂಗ್ ಮಟೀರಿಯಲ್ ಬೇಡಿಕೆ ಪೂರೈಸುವುದರ ಜೊತೆ ಪರೋಕ್ಷವಾಗಿ ಸಂಶೋಧನೆಯ ಮೂಲಕವೂ ಅಂಗಾಂಶ ಕೃಷಿ ಅತ್ಯಂತ ಉಪಕಾರಿ.

·        ಅಂಗಾಂಶ ಕೃಷಿ ವಾಣಿಜ್ಯ ಬೆಳೆ ಉತ್ಪಾದನೆಗೆ ಅತ್ಯುತ್ತಮ ಗುಣಮಟ್ಟದ ಪ್ಲಾಂಟಿಂಗ್ ಮಟೀರಿಯಲ್ ಒದಗಿಸುತ್ತದೆ

·        ದೊಡ್ಡ ಪ್ರಮಾಣದಲ್ಲಿ ತ್ವರಿತಗತಿಯಲ್ಲಿ ಸಸ್ಯ ಉತ್ಪಾದನೆಯಾಗುವ ಕಾರಣ ಪ್ಲಾಂಟಿಂಗ್ ಮಟೀರಿಯಲ್ ಕೊರತೆ ಕುಗ್ಗುತ್ತದೆ

·        ನಿಯಂತ್ರಿತ ಅಸೆಪ್ಟಿಕ್ ವಾತಾವರಣದಲ್ಲಿ, ಪ್ರತಿ ಹಂತದಲ್ಲೂ ಸ್ಟೆರಿಲೈಜೆ಼ಶನ್ ಗೆ ಒಳಪಡುತ್ತಾ, ಅತ್ಯಂತ ಕಾಳಜಿಯಲ್ಲಿ ನಡೆಯುವ ಪ್ರಕ್ರಿಯೆ ರೋಗ ರಹಿತ, ಕ್ರಿಮಿ-ಕೀಟ ಮುಕ್ತ, ವಿಶೇಷವಾಗಿ 'ವೈರಾಣು ಮುಕ್ತ' ಸಸ್ಯಗಳ ಉತ್ಪಾದನೆಯನ್ನು ಸಾಧ್ಯವಾಗಿಸುತ್ತದೆ (ಉದಾಹರಣೆ ದಾಳಿಂಬೆಯಲ್ಲಿ ಬ್ಯಾಕ್ಟೀರಿಯಲ್ ಬ್ಲೆöÊಟ್ ಮುಕ್ತ ಸಸ್ಯಗಳ ಉತ್ಪಾದನೆ)

·        ಅಂಗಾಂಶ ಕೃಷಿ ಒಂದು ಥರದಲ್ಲಿ 'ಜೆ಼ರಾಕ್ಸ್ ಕಾಪಿ' ಮುದ್ರಣದಂತೆ. ತಾಯಿ ಸಸ್ಯವನ್ನೇ ಹೋಲುವ ಸಾವಿರಾರು ತದ್ರೂಪಿಗಳ ಜನನಕ್ಕೆ ಅಂಗಾಂಶ ಕೃಷಿ ಸಹಾಯಕ.

·        ಈ ವಿಧಾನದಲ್ಲಿ ಏಕರೂಪವಾಗಿರುವ ಸಸ್ಯಗಳು ಲಭ್ಯವಾಗುವುದರಿಂದ ಏಕಕಾಲಕ್ಕೆ ಜಾಗದಲ್ಲ ನಾಟಿ ಮಾಡಿದಲ್ಲಿ ಏಕಕಾಲಕ್ಕೆ ಕೊಯ್ಲಿಗೆ ಲಭ್ಯ

·        ಪ್ರತಿ ಹಂತದಲ್ಲೂ ಆಯ್ಕೆ ಪ್ರಕ್ರಿಯೆ ನಡೆಯುವುದರಿಂದ ಸಾಂಪ್ರದಾಯಿಕ ವಿಧಾನಗಳಿಂದ ಪಡೆದ ಸಸ್ಯಗಳಿಗಿಂತಲೂ ಅಧಿಕ ಗುಣಮಟ್ಟ, ಬೆಳವಣಿಗೆ, ಇಳುವರಿ

·        ಚಿಕ್ಕ ಜಾಗದಲ್ಲಿ ನಿಯಮಿತ ಸಮಯದಲ್ಲಿ ಹೆಚ್ಚಿನ ಸಸ್ಯಗಳ ಉತ್ಪಾದನೆ ಸಾಧ್ಯ

·        ಬೀಜ, ಕಟಿಂಗ್ಸ್ ಇತರೇ ಸಸ್ಯಾಭಿವೃದ್ಧಿ ವಿಧಾನದಲ್ಲಿ ಪಡೆಯಲು ಸಾಧ್ಯವಿಲ್ಲದ, ಹಾಗೂ ಈ ವಿಧಾನಗಳಲ್ಲಿ ನಿಧಾನವಾಗಿ ಬೆಳವಣಿಗೆ ಹೊಂದುವ ಬೆಳೆಗಳನ್ನು, ಹಲವಾರು ವಿಶೇಷ ಸಂದರ್ಭಗಳಲ್ಲಿ (ಉದಾಹರಣೆ ಹೆಣ್ಣು-ಗಂಡು ಬೇರೆ ಬೇರೆಯಾಗಿರುವ ಖರ್ಜೂರದಲ್ಲಿ ಲಿಂಗ ಪತ್ತೆಯ ಸಮಯ ಉಳಿತಾಯಕ್ಕಾಗಿ) ಈ ವಿಧಾನ ಅನುಕೂಲಕರ

·        ಅಂಗಾಂಶ ಕೃಷಿಯಿಂದ ಅಳಿವಿನಂಚಲ್ಲಿರುವ ಸಸ್ಯಗಳ ಸಂರಕ್ಷಣೆ ಸಾಧ್ಯ

·        ರೈತರಿಗೆ ಉಪಯುಕ್ತವಾಗುವ ಹೊಸ ತಳಿಗಳ ಅಭಿವೃದ್ಧಿಗೆ ಈ ಪ್ರಕ್ರಿಯೆ ವೇಗ ನೀಡುತ್ತದೆ

·        ಮ್ಯುಟೇಶನ್ ಮೂಲಕ ವಿಶೇಷ ಬಣ್ಣ-ವಿನ್ಯಾಸದ ವಿನೂತನ ಸಸ್ಯಗಳ ಅಭಿವೃದ್ಧಿ ಸಾಧ್ಯ (ಉದಾಹರಣೆ ವಿವಿಧ ಅಲಂಕಾರಿಕ ಸಸ್ಯಗಳು)

·        ಔಷಧಿಯಲ್ಲಿ ಬಳಕೆಯಾಗುವ ಕೆಲ ಸಸ್ಯಾಧಾರಿತ ರಾಸಾಯನಿಕಗಳನ್ನು (ಸೆಕೆಂಡರೀ ಮೆಟಬೊಲೈಟ್) ಪಡೆಯಲು ಈ ವಿಧಾನ ಉಪಯುಕ್ತ. (ಉದಾಹರಣೆ: ಅಶ್ವಗಂಧದ ಬೇರುಗಳನ್ನಷ್ಟೇ ಕಲ್ಚರ್ ಮಾಡಿ ಓಷಧಿ ಗುಣವುಳ್ಳ 'ಸಾಪೋನಿನ್'ಗಳನ್ನು ಪಡೆಯಲು ಸಾಧ್ಯ - ಇದಕ್ಕೆ ಸಸ್ಪೆನ್ಶನ್ ಕಲ್ಚರ್ ಎಂದು ಕರೆಯಲಾಗುತ್ತದೆ.)

ಭಾರತದಲ್ಲಿ ಅಂಗಾಂಶ ಕೃಷಿ ವ್ಯವಹಾರದ ಚಿತ್ರಣ

ಕೆ.ವಿ.ಥಾಮಸ್ ಕಂಪನಿ - ಭಾರತದ ಮೊದಲ ಅಂಗಾಂಶ ಕೃಷಿ ಪ್ರಯೋಗಾಲಯ 1987ರಲ್ಲಿ ಕೇರಳದಲ್ಲಿ ಸ್ಥಾಪಿತವಾಯಿತು. ಅಮೇರಿಕಾದ ಸಂಸ್ಥೆಯೊಂದರ ನೆರವಿನಿಂದ ಉನ್ನತ ಮಟ್ಟದ ಯಾಲಕ್ಕಿ ಸಸ್ಯೋತ್ಪಾದನೆಯಲ್ಲಿ ಲ್ಯಾಬ್ ತೊಡಗಿಸಿಕೊಂಡಿತ್ತು. ಕ್ಷೇತ್ರದಲ್ಲಿ ನಂತರದ ಸಾಹಸ ಅಲಂಕಾರಿಕ ಸಸ್ಯಗಳ ಉತ್ಪಾದನೆಯಲ್ಲಿ, ಇಂಡೋ-ಅಮೇರಿಕನ್ ಹೈಬ್ರೀಡ್ ಸೀಡ್ಸ್ ಸಂಸ್ಥೆಯದ್ದು. ಸದ್ಯಕ್ಕೆ ಭಾರತದಲ್ಲಿ (2022ರ ಮಾಹಿತಿ ಪ್ರಕಾರ) 73 ಟಿಶ್ಯು ಕಲ್ಚರ್ ಘಟಕಗಳಿವೆ (ವಾಣಿಜ್ಯಿಕ ಘಟಕಗಳು-ಸರ್ಕಾರಿ ಕೇಂದ್ರಗಳನ್ನು ಹೊರತುಪಡಿಸಿ), ಮಹಾರಾಷ್ಟ, ಕರ್ನಾಟಕದಲ್ಲೇ ಹೆಚ್ಚಿನ ಸಂಖೆಯಲ್ಲಿರುವುದು ನಮ್ಮ ಭಾಗ್ಯ. 9 ಘಟಕಗಳಿರುವ (ಎರಡನೇ ಗರಿಷ್ಟ) ನಮ್ಮ ರಾಜ್ಯದಲ್ಲಿ 31ಮಿಲಿಯನ್ ಸಸ್ಯಗಳು ಉತ್ಪಾದನೆಯಾಗುತ್ತಿವೆ. ಜೊತೆಗೆ ವಿವಿಧ ಸರ್ಕಾರಿ ಇಲಾಖೆ, ಕಾಲೇಜುಗಳು, ಸಂಶೋಧನಾ ಕೇಂದ್ರ, ಕೃಷಿ-ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲೂ ಪ್ರಯೋಗಾಲಯಗಳಿವೆ.

ಯಾವ ಯಾವ ಬೆಳೆಗಳಲ್ಲಿ

ಸದ್ಯಕ್ಕೆ ನಮ್ಮಲ್ಲಿ ಬಿದಿರು, ಕಬ್ಬು, ಶುಂಠಿ, ಅರಿಶಿಣ, ವೆನಿಲ್ಲಾ, ಯಾಲಕ್ಕಿ, ಬಾಳೆ, ಖರ್ಜೂರ, ಅನಾನಸ್, ದಾಳಿಂಬೆ, ಪಪ್ಪಾಯಿ, ಸೇಬು, ಸ್ಟಾçಬೆರಿ, ಆಲೂಗಡ್ಡೆ, ಜರ್ಬೆರಾ, ಲಿಲ್ಲಿ, ,ಆಂಥುರಿಯಮ್, ಆರ್ಕಿಡ್, ವಿವಿಧ ಅಲಂಕಾರಿಕ ಸಸ್ಯಗಳು , ತೇಗ, ವಿವಿಧ ಔಷಧಿ ಬೆಳೆಗಳಲ್ಲಿ ಅಂಗಾಂಶ ಕೃಷಿ ಸಸ್ಯಾಭಿವೃದ್ಧಿ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಇತರೆ ಬೆಳೆಗಳಲ್ಲಿಯೂ ಪ್ರೋಟೋಕಾಲ್ ಅಭಿವೃದ್ಧಿ ಪಡಿಸುವ ಪ್ರಯೋಗಗಳು ಜಾರಿಯಲ್ಲಿವೆ. ಭಾರತದಿಂದ ಅತ್ಯಧಿಕ ಸಂಖ್ಯೆಯಲ್ಲಿ ರಫ್ತಾಗುವ ಮಾವಿನ ಬೆಳೆಯಲ್ಲೂ ಸಾಕಷ್ಟು ಪ್ರಯೋಗಗಳು ನಡೆದಿವೆ. ಎಕ್ಸ್ ಪ್ಲಾಂಟ್ ನಿಂದ ಹೊರಸೂಸುವ ಒಗರು ವಸ್ತುಗಳ ಕಾರಣ ಮಾವಿನಲ್ಲಿ ಕಷ್ಟಸಾಧ್ಯವಾಗಿದ್ದ ಪ್ರಕ್ರಿಯೆ ಹಲವಾರು ಸುಧಾರಣೆಯೊಂದಿಗೆ ಇತ್ತೀಚೆಗೆ ಫಲ ಕಾಣುತ್ತಿದೆ. ಒಂದು ಕಾಲದಲ್ಲಿ ಅಸಾಧ್ಯವೆಂದು ಬದಿಗಿರಿಸಿದ ಬೆಳೆಗಳಲ್ಲೂ ಅನಿವಾರ್ಯ ದೃಷ್ಟಿಯಿಂದ ಪದ್ಧತಿ ಮಹತ್ವ ಪಡೆಯುತ್ತಿದೆ (ಉದಾ: ಅಡಿಕೆ).

ಅಂಗಾಂಶ ಕೃಷಿ ಸಸ್ಯಗಳನ್ನು ಕೊಳ್ಳುವ ಮೊದಲು

ಅಂಗಾಂಶ ಕೃಷಿ ನುರಿತ ಪರಿಣಿತರ ಹಾಜರಿಯಲ್ಲಿ ಲಕ್ಷ-ಕೋಟಿ ವೆಚ್ಚದಲ್ಲಿ ನಡೆಯುವ ವಾಣಿಜ್ಯಿಕ ವ್ಯವಹಾರ. ಈಗಾಗಲೇ ಹತ್ತು ಹಲವಾರು ಕಂಪನಿಗಳು ರಂಗಕ್ಕೆ ಪಾದಾರ್ಪಣೆ ಮಾಡಿವೆ. ಸಂಖ್ಯೆ ದಿನದಿಂದ ದಿನ ಹೆಚ್ಚುತ್ತಲೇ ಇದೆ. ಹಾಗಾಗಿ ಅಂಗಾಂಶ ಕೃಷಿ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟುಗಾರರಿಂದ ಕೊಳ್ಳುವ ಮೊದಲು ಕನಿಷ್ಟ ಎಚ್ಚರಿಕೆ ಅಗತ್ಯ. ವಿಶ್ವಾಸಾರ್ಹ ಮೂಲದಿಂದ ಈಗಾಗಲೇ ರೈತ ವಲಯದಲ್ಲಿ ಭರವಸೆ ಮೂಡಿಸಿದ ಕಂಪನಿಗಳಿಂದ ಸಸಿಗಳನ್ನು ಕೊಂಡರೆ ಒಳ್ಳೆಯದು. ಮೊದಲೇ ಪಟ್ಟಿ ಮಾಡಿದ ಕಲ್ಚರಿಂಗ್ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾದಲ್ಲಿ ಉತ್ಪಾದನೆಯಾದ ಸಸ್ಯ ಅಸಹಜ ಕುಂಠಿತ ಬೆಳವಣಿಗೆ ಪ್ರದರ್ಶಿಸುವ ಸಂದರ್ಭಗಳೂ ಇವೆ. ಹಲವಾರು ಬಾರಿ ರೈತರು ಮೋಸಹೋಗಿದ್ದೂ ಇದೆ. ಆದ್ದರಿಂದ ನಂಬಿಕಾರ್ಹ ಮೂಲಗಳಿಂದ ಸಸ್ಯಗಳನ್ನು ಕೊಳ್ಳುವುದು ಉಚಿತ. ಒಂದು ವೇಳೆ ಕೊಂಡ ಸಸಿಯಿಂದ ಬೆಳೆ ವಿಫಲವಾದಲ್ಲಿ (ಒಂದು ಎರಡಲ್ಲ-ದೊಡ್ಡ ಪ್ರಮಾಣದಲ್ಲಿ-ಏಕರೂಪದಲ್ಲಿ) ಪರಿಹಾರಕ್ಕೂ ಬೇಡಿಕೆ ಇರಿಸಬಹುದು. ಹಲವು ಹೆಸರಾಂತ ಕಂಪನಿಗಳಲ್ಲಿ ಇದಕ್ಕೆ ಅವಕಾಶವಿದೆ.

 

 

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ