ಹಸುರ ನಡುವೆ ಬಣ್ಣದ ಕೈತೋಟ

 

ವಿಶಾಲವಾದ ಅಂಗಳವಿರುವ ಹಳ್ಳಿಯ ಮನೆಯಲ್ಲಿ ತರಹೇವಾರಿ ತರಕಾರಿಗಳ ಪೌಷ್ಠಿಕ ಕೈತೋಟ ಮತ್ತು ಬಣ್ಣದ ಗಿಡಗಳ ಹೂದೋಟ ಕಂಡುಬರುವುದು ಸಾಮಾನ್ಯ. ಪಟ್ಟಣಿಗರೂ ಈ ವಿಷಯದಲ್ಲಿ ಹಿಂದಿಲ್ಲ. ತೋಟಗಾರಿಕೆಯತ್ತ ಪ್ರೀತಿಯಿರುವ ಬಹಳಷ್ಟು ಪೇಟೆ ಮಂದಿ ಮನೆ ಸುತ್ತಲ ಚಿಕ್ಕ ಜಾಗ, ಒಳಾಂಗಣ, ಟೆರೇಸ್‌ನಲ್ಲಿ ತೋಟ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಆದರೂ ಕೆಲವೊಮ್ಮೇ ಜಾಗದ ಕೊರತೆಯಿಂದ ಹೂತೋಟ-ಕೈತೋಟ ಇವೆರಡರಲ್ಲಿ ಯಾವುದೋ ಒಂದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿರುತ್ತಾರೆ. ಬಹುಶಃ ಆರೋಗ್ಯದ ದೃಷ್ಟಿಯಿಂದ ಕೈತೋಟವನ್ನೇ ಆಯ್ಕೆ ಮಾಡುವವರ ಸಂಖ್ಯೆ ಹೆಚ್ಚಿರಬಹುದು. ಒಂದು ವೇಳೆ ಇದೇ ಕೈತೋಟಕ್ಕೆ ಬಣ್ಣ ಭರಿಸಿ ಹೂದೋಟದಷ್ಟೇ ಸುಂದರವಾಗಿಸುವ ಅವಕಾಶವಾದಲ್ಲಿ!?.

ಅಲಂಕಾರಿಕ ತರಕಾರಿಗಳು

          ಕೆಂಪು ಟೊಮೇಟೋ ಹಸಿರು ಸೊಪ್ಪು ತರಕಾರಿಗಳ ಕೈತೋಟಕ್ಕೆ ಇತ್ತೀಚಿನ ಹೊಸ ಸೇರ್ಪಡೆ ಅಲಂಕಾರಿಕ ತರಕಾರಿ ಬೆಳೆಗಳು. ಹಳದಿ-ಕೇಸರಿ-ಕೆನ್ನೀಲಿ-ಚಾಕೋಲೇಟ್ ಬಣ್ಣದ ಟೋಮೇಟೋಗಳು, ಕಡುನೇರಳೆ-ಕೆಂಪು-ಹಳದಿ ಕ್ಯಾಪ್ಸಿಕಮ್, ಬಿಳಿ-ಚಿತ್ತಾರದ ಬದನೆ, ಕೆಂಪು ಬೆಂಡೆ, ನೇರಳೆ-ಹಳದಿ ಬೀನ್ಸ್, ರೆಡ್ ಕ್ಯಾಬೇಜ್, ಬಣ್ಣದ ಕಾಳಿನ ಜೋಳ, ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನೂ ಮೈಗೂಡಿಸಿಕೊಂಡ ಮೆಣಸು, ಹೀಗೆ ಹತ್ತು ಹಲವು ಛಾಯೆಯ ಅಲಂಕಾರಿಕ ತರಕಾರಿಗಳು ನಿಧಾನಕ್ಕೆ ನಮ್ಮ ದೇಸೀ ಕೈತೋಟ ಸೇರುತ್ತಿವೆ. ಒಂದೆರಡು ಸಸಿಯಾದರೂ ಸರಿ, ಹೊಸ ತರಕಾರಿ ಬೆಳೆದು ಪ್ರಯೋಗಿಸುವ ಆಸಕ್ತರೇ ಈ ಸಂಚಲನಕ್ಕೆ ಕಾರಣ. ಕೃತಕ ಪರಾಗಸ್ಪರ್ಷದಿಂದ ಅಪರೂಪದ ವರ್ಣ ಸಂಯೋಜನೆ ಮಾಡುವ ಪ್ರಯೋಗವನ್ನೂ ಕೆಲವರು ರೂಢಿಸಿಕೊಂಡಿದ್ದಾರೆ.

ಇದರ ಜೊತೆಗೆ ತರಕಾರಿ ಬೆಳೆಗಾರರನ್ನು ಗಮನ ಸೆಳೆಯುತ್ತಾ ಪ್ರಸಿದ್ಧ ಪಡೆಯುತ್ತಿರುವುದು ವಿಶಿಷ್ಟವಾದ ರೂಪವುಳ್ಳ ರಂಗು ರಂಗಿನ ವಿದೇಶೀ ತರಕಾರಿಗಳು. ಬಣ್ಣ ಬಣ್ಣದ ಕಾಲಿಫ್ಲವರ್, ಬ್ರಕೋಲಿ, ಲೆಟ್ಯುಸ್, ಕೇಲ್, ಚಾರ್ಡ್, ಸ್ಕ್ವಾಷ್, ಝುಕಿನಿ, ಹೀಗೆ ‘ಎಕ್ಸೋಟಿಕ್’ ಅಲಂಕಾರಿಕ ತರಕಾರಿಗಳ ದೊಡ್ಡ ಪಟ್ಟಿಯನ್ನೇ ಹೆಸರಿಸಬಹುದು. ತಮ್ಮ ಆಕರ್ಷಕ ಬಣ್ಣಗಳಿಂದ ಐಷಾರಾಮಿ ರೆಸ್ಟೋರಂಟ್‌ಗಳ ಅಡುಗೆಮನೆಯಲ್ಲೂ ಇವು ಖಾಯಂ ಜಾಗ ಪಡೆದಿವೆ.

ಮುಂಚೆಯೆಲ್ಲಾ ಯುರೋಪ್‌ನಂತ ಶೀತ ಪ್ರದೇಶಗಳಲ್ಲಷ್ಟೇ ಕಂಡುಬರುತ್ತಿದ್ದ ಈ ವಿದೇಶೀ ತರಕಾರಿಗಳನ್ನು ಈಗ ಎಲ್ಲೆಡೆ ಬೆಳೆಯಬಹುದಾಗಿದೆ. ನಮ್ಮ ಉಷ್ಣ ಪ್ರದೇಶಕ್ಕೂ ಒಗ್ಗಿಕೊಳ್ಳುವ ಹಲವಾರು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪಾಲಿಹೌಸ್ ನ ನಿಯಂತ್ರಿತ ವಾತಾವರಣದಲ್ಲಿ ಇವುಗಳನ್ನು ವಾಣಿಜ್ಯಿಕವಾಗಿಯೂ ವಿವಿಧ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಹೊರಾಂಗಣದಲ್ಲಿ ಬೆಳೆಯಲು ಚಳಿಗಾಲ ಸೂಕ್ತ ಸಮಯ. ನಾಜೂಕು ನಿರ್ವಹಣೆ, ಸಲ್ಪ ಹೆಚ್ಚಿನ ಕಾಳಜಿ ತೋರಿಸಿದಲ್ಲಿ ಇವುಗಳೂ ಸೊಂಪಾಗಿ ಬೆಳೆಯಬಲ್ಲವು.

ಪೌಷ್ಠಿಕತೆ: ಬಣ್ಣದ ತರಕಾರಿಗಳು ನೋಡಲಷ್ಟೇ ಚಂದವಲ್ಲ. ಆರೋಗ್ಯಕ್ಕೂ ಉತ್ತಮ. ಕೆರೋಟಿನ್, ಲೈಕೋಪೀನ್, ಲ್ಯುಟಿನ್, ಫ್ಲೇವನೋಲ್ಸ್, ಆಂಥೋಸೈಯನಿನ್ ಮುಂತಾದ ನೈಸರ್ಗಿಕ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳಿಂದ ಕೂಡಿದ ಬಣ್ಣದ ತರಕಾರಿಗಳು ಆಂಟಿಆಕ್ಸಿಡೆAಟ್ ಅಂಶಗಳನ್ನು ಒಳಗೊಂಡಿವೆ. ಹಾಗಾಗಿ ರೋಗನಿರೋಧಕತೆ ಹೆಚ್ಚಿಸುವಲ್ಲಿ ಮತ್ತು ಅಂಗಾAಗಳ ಸ್ವಾಸ್ಥ್ಯಕ್ಕೆ ಇವುಗಳ ಕೊಡುಗೆ ಅಪಾರ. 

ಇವೆಲ್ಲ ತರಕಾರಿಗಳ ಬೀಜ ಅಂತರ್ಜಾಲದ ವಿವಿಧ ತಾಣಗಳಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಿದೆ. ಅನುಕೂಲವಿದ್ದಲ್ಲಿ ವಿದೇಶೀ ಸ್ನೇಹಿತರಿಂದ ಸಂಬಂಧಿಕರಿಂದಲೂ ಬೀಜ ತರಿಸಿ ಬೆಳೆಸಬಹುದು. ಕೈತೋಟವೆಂದರೆ ಬರೀ ಹಸಿರು ತರಕಾರಿಗಳ ನೀರಸತೆ ಎಂದು ಅನ್ನಿಸಿದ್ದಲ್ಲಿ ಕಣ್ಣಿಗಲ್ಲದೆ ದೇಹಕ್ಕೂ ರುಚಿಸುವ ಅಲಂಕಾರಿಕ ತರಕಾರಿಗಳ ತೋಟವೊಂದನ್ನು ನಿರ್ಮಿಸಬಹುದು. ಅಥವಾ ಹೂದೋಟದ್ದೇ ಭಾಗವಾಗಿ ಇವುಗಳನ್ನು ಬೆಳೆಯಬಹುದಾಗಿದೆ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ